Saturday, January 18, 2025
Homeಯಕ್ಷಗಾನಪ್ರಖ್ಯಾತ ಭಾಗವತ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಅಸ್ತಂಗತ

ಪ್ರಖ್ಯಾತ ಭಾಗವತ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಅಸ್ತಂಗತ

ಯಕ್ಷಗಾನ ರಂಗದ ಹಿರಿಯ ಕಲಾವಿದ ಭಾಗವತಿಕೆಯಲ್ಲಿ ತನ್ನದೇ ವಿಶಿಷ್ಟ ಶೈಲಿಯಿಂದ ಜನಮಾನಸದಲ್ಲಿ ಅದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದ್ದ ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಾದ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ನಿಧನ ಹೊಂದಿದ್ದಾರೆ. ಯಕ್ಷಗಾನದ ಹೆಚ್ಚಿನೆಲ್ಲಾ ಪದ್ಯಗಳನ್ನು ಕಂಠಪಾಠದಿಂದ ಪುಸ್ತಕ ನೋಡದೆ ಆಟ ಆಡಿಸಬಲ್ಲವರಾಗಿದ್ದ ಶಾಸ್ತ್ರಿಗಳು ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. 

ಅಗರಿ ಶೈಲಿಯಲ್ಲಿ ಸಮರ್ಥವಾಗಿ ಹಾಡಬಲ್ಲವರಲ್ಲಿ ಮೊದಲನೆಯ ಸಾಲಿನಲ್ಲಿದ್ದ ತೆಂಕಬೈಲು ಶಾಸ್ತ್ರಿಗಳು ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಕೆಲವು ಪ್ರಸಂಗಗಳು ವರ್ಷದಲ್ಲಿ ಒಂದು ಬಾರಿಯೂ ಪ್ರದರ್ಶನ ಕಾಣದೆ ಇರಬಹುದು. ಆದುದರಿಂದ ಪದ್ಯಗಳು ಭಾಗವತನೊಬ್ಬನಿಗೆ ಕಂಠಪಾಠವಾಗಿದೆ ಎಂದರೆ ಅದು ಅವರ ಅದ್ಭುತ ಸಾಧನೆಯೇ ಸರಿ. ಕೆಲವು ದಶಕಗಳ ಕಾಲ ಮೇಳದ ತಿರುಗಾಟ ಮಾಡಿದ ಭಾಗವತರಿಗೆ ಪದ್ಯ ಬಾಯಿಪಾಠ ಬರುವುದು ಕಷ್ಟಸಾಧ್ಯವಾದ ಈ ಕಾಲದಲ್ಲಿಯೂ ತನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿಯೂ ಪದ್ಯವನ್ನು ಕಂಠಪಾಠ ಮಾಡಿಯೇ ರಂಗವೇರುತ್ತಿದ್ದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಒಂದು ಅಚ್ಚರಿಯಾಗಿ ಕಾಣುತ್ತಾರೆ. ಹಾಗೆ ನೋಡಿದರೆ ಖ್ಯಾತ ಭಾಗವತ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಭಾಗವತಿಕೆಯ ಶೈಲಿಯಲ್ಲಿಯೂ ಇತರರಿಗಿಂತ ಭಿನ್ನವೇ. ಯಾರನ್ನೂ ಅನುಕರಿಸದೆ ತನ್ನತನವನ್ನು ರಂಗದಲ್ಲಿ ಮೆರೆದವರು. ಅಪೂರ್ವವಾದ ಶಾರೀರ, ಸ್ವರಗಳ ಏರಿಳಿತಗಳಿಂದ ಪ್ರೇಕ್ಷಕರನ್ನು ಆರಂಭದಲ್ಲಿಯೇ ಹಿಡಿದಿಟ್ಟುಕೊಳ್ಳುತ್ತಾರೆ. ಏನೋ ಒಂದು ವಿಶಿಷ್ಟ ಆಕರ್ಷಣೆಯಿದೆ ಆ ಸ್ವರಭಾರದಲ್ಲಿ.  ಮೊದಲ ಪದ್ಯದಿಂದಲೇ ಪ್ರೇಕ್ಷಕರ ಮನಸ್ಸನ್ನು ಆಕ್ರಮಿಸಿಬಿಡುತ್ತಾರೆ. ಮೊದಲ ಓವರಿನಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸುವ ಆಟಗಾರನ ಹಾಗೆ ನಮ್ಮ ಭಾಗವತರೂ ಕೂಡಾ. ಶಾಸ್ತ್ರಿಗಳದು ವಿಶಿಷ್ಟ ಶೈಲಿ. ಆದರದು ಜನಪ್ರಿಯ. ಜನಮಾನಸದಲ್ಲಿ ನಿಂದ ಸ್ವರಮಾಧುರ್ಯ. ಘಂಟೆಗೆ ಬಡಿದ ಶಬ್ದದ ಹಾಗೆ ಮನಸಿನ ಅಂಗಳದಲ್ಲಿ ಮಾರ್ದನಿಸುತ್ತದೆ. ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆನ್ನುವ ಮತ್ತೊಮ್ಮೆ ಕೇಳಿದರೆ ಮಗದೊಮ್ಮೆ ಆಲಿಸಬೇಕೆನ್ನುವ ಮಧುರ ನಿನಾದ. ಅವರ ಸ್ವರದ ಇಂಪಿಗೆ ಮಾರುಹೋದ ಯಕ್ಷಗಾನದ ಪ್ರಜ್ಞಾವಂತ ಪ್ರೇಕ್ಷಕರು ಹೀಗಂದುಕೊಂಡರೆ ಅದರಲ್ಲಿ ಉತ್ಪ್ರೇಕ್ಷೆಯೇನೂ ಇರಲಾರದು.

   ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ  ತಾಲೂಕಿನ ಕರೋಪಾಡಿಯಲ್ಲಿ, ತೆಂಕಬೈಲು ಕೃಷ್ಣ ಶಾಸ್ತ್ರಿ ಮತ್ತು ಸಾವಿತ್ರಿಯಮ್ಮ ದಂಪತಿಗೆ ಮಗನಾಗಿ  ಜನಿಸಿದ್ದು 1944ರಲ್ಲಿ . ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ್ದರಿಂದ ವೇದಾಧ್ಯಯನವನ್ನೂ ಕೈಗೊಂಡರು. ವಿದ್ಯಾಭ್ಯಾಸ 8ನೇ ತರಗತಿಗೆ ಅನಿವಾರ್ಯವಾಗಿ ಮೊಟಕುಗೊಂಡರೂ ಆಮೇಲೆ ವೇದ ಮತ್ತು ಕಲೆಯ ಕಲಿಕೆಯಲ್ಲಿ ತೊಡಗಿಸಿಕೊಂಡರು. ಕಲಾವಿದರಿದ್ದ ಹಾಗೂ ಕಲೆಯ ಹಿನ್ನೆಲೆ, ವಾಸನೆಗಳಿದ್ದ ಮನೆತನದಲ್ಲಿ ಹುಟ್ಟಿದುದು ಶಾಸ್ತ್ರಿಗಳಿಗೆ ಕಲಾವಿದನಾಗಿ ಬೆಳೆಯಲು ಧನಾತ್ಮಕ ವಾತಾವರಣವನ್ನು ನಿರ್ಮಿಸಿಕೊಟ್ಟಿತ್ತು. ಈ ಅನುಕೂಲತೆಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಅವರು ಯಕ್ಷಗಾನ ಕಲೆಯಲ್ಲಿ ಹಾಗೂ ಅದರ ಕಲಿಕೆಯಲ್ಲಿ  ತನ್ನನ್ನುತಾನು ಆಳವಾಗಿ ತೊಡಗಿಸಿಕೊಂಡರು. ಇವರಿಗೆ ಶಾಸ್ತ್ರೀಯ ಸಂಗೀತದ  ಪಾಠ  ಬಜಕ್ಕಳ ಗಣಪತಿ ಭಟ್ಟರಿಂದ ಆಗಿತ್ತು. ಆಮೇಲೆ ಮಾಂಬಾಡಿ ನಾರಾಯಣ ಭಾಗವತರಿಂದ ಭಾಗವತಿಕೆಯನ್ನು ಅಭ್ಯಾಸ ಮಾಡಿದ್ದರು. ಜೊತೆ ಜೊತೆಯಲ್ಲಿ ವೇದಾಧ್ಯಯನವನ್ನೂ ಮಾಡಿದ್ದರಿಂದ ಶಾಸ್ತ್ರಿಗಳು ಪೌರೋಹಿತ್ಯ ವೃತ್ತಿಯಲ್ಲಿಯೂ ಅರೆಕಾಲಿಕವಾಗಿ ತೊಡಗಿಸಿಕೊಂಡಿದ್ದರು. ಮೊದಲಿಗೆ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ಭಾಗವತಿಕೆಯ ಸ್ಥಾನಕ್ಕೇರಿದ ಶಾಸ್ತ್ರಿಗಳು ಹಂತ ಹಂತವಾಗಿ ಬೆಳೆದು ಆ ಸ್ಥಾನಕ್ಕೊಬ್ಬ ಸಮರ್ಥ ಸ್ಥಾನಾರ್ಥಿಯಾಗಿ ಬೆಳೆದರು. ವಿವಿಧ ಮೇಳಗಳಲ್ಲಿ ವೃತ್ತಿಪರನಾಗಿ ತಿರುಗಾಟವನ್ನು ಮಾಡುತ್ತಾ ಅದರ ಜೊತೆಯಲ್ಲಿಯೇ ಪೌರೋಹಿತ್ಯವನ್ನು ಮಾಡುತ್ತಿದ್ದವರು ಮೇಳ ಬಿಟ್ಟ ನಂತರದ  ದಿನಗಳಲ್ಲಿ ಹವ್ಯಾಸಿ ಭಾಗವತನಾಗಿದ್ದುದರ ಜೊತೆಗೆ ಪರೋಹಿತ ವೃತ್ತಿಯನ್ನೂ ಮುಂದುವರಿಸಿದ್ದರು. ಶಾಸ್ತ್ರಿಗಳು ತನ್ನ ಸೋದರ ಮಾವ ನಾರಾಯಣ ಭಟ್ಟರಿಂದ ಮೊದಲು ಮದ್ದಳೆಯ ಅಭ್ಯಾಸವನ್ನು ಮಾಡಿದ್ದರೂ ಆಮೇಲೆ ಭಾಗವತಿಕೆ ಕಲಿಯುವುದಕ್ಕೆ ಮನ ಮಾಡಿದರು. ಹಲವಾರು ಮೇಳಗಳ ತಿರುಗಾಟಗಳನ್ನು ಮಾಡಿದ ಶಾಸ್ತ್ರಿಯವರು ಪೌರಾಣಿಕ ಪ್ರಸಂಗಗಳನ್ನು ಆಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು.  ಇರಾ, ಮಲ್ಲ, ಕುಂಟಾರು, ಬಪ್ಪನಾಡು,  ಮಧೂರು,  ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು  ವೃತ್ತಿಪರ ಭಾಗವತರಾಗಿ ಸುಮಾರು 20 ವರ್ಷ ತಿರುಗಾಟ ನಡೆಸಿದ್ದರು. ಶಾಸ್ತ್ರಿಗಳು ಯಕ್ಷಗಾನ ಹಿಮ್ಮೇಳದ ಸರ್ವ ಅಂಗಗಳನ್ನೂ ಬಲ್ಲವರು. ಉತ್ತಮ ಚೆಂಡೆ ಮತ್ತು ಮದ್ದಳೆವಾದಕರೂ ಹೌದು. ಹಲವಾರು ಕಡೆ ಭಾಗವತಿಕೆಯ ತರಗತಿಗಳನ್ನು ಮಾಡಿ ಹಲವಾರು ಶಿಷ್ಯಂದಿರನ್ನು ಸಂಪಾದಿಸಿದ್ದಾರೆ. ಯಾವುದೇ ಪ್ರಸಂಗವನ್ನು ಆಡಿಸುವುದಾದರೂ ತಿರುಮಲೇಶ್ವರ ಶಾಸ್ತ್ರಿಗಳು ಪದ್ಯವನ್ನು ಕಂಠಪಾಠ ಮಾಡಿಯೇ ಭಾಗವತಿಕೆಗೆ ಸಿದ್ಧರಾಗುತ್ತಿದ್ದರು. ಇದು ಶಾಸ್ತ್ರಿಗಳ ವಿಶೇಷತೆ. ಹಾಗೂ ಎಲ್ಲಾ ಭಾಗವತರಲ್ಲಿಯೂ ಇರಬೇಕಾದ ಲಕ್ಷಣ. 76 ವರ್ಷ ಕಾಲ ಬದುಕಿದ ಶಾಸ್ತ್ರಿಗಳಿಗೆ 54 ವರ್ಷಗಳ ಯಕ್ಷಗಾನ ಕಲಾ ವ್ಯವಸಾಯ ಮಾಡಿದ ಅನುಭವವಿತ್ತು. ಮಾತ್ರವಲ್ಲದೆ ಮೇಳದಲ್ಲಿ ಸುಮಾರು 20ಕ್ಕೂ ಹೆಚ್ಚು ವರ್ಷಗಳ ಕಾಲ ತಿರುಗಾಟ ಮಾಡಿದ್ದರು. ಆಮೇಲೆ ಮೇಳದ ತಿರುಗಾಟದಿಂದ ವಿಮುಖರಾಗಿ ಹವ್ಯಾಸೀ ಕಲಾವಿದರಾಗಿ ತನ್ನ ತಿರುಗಾಟವನ್ನು ಮುಂದುವರಿಸಿದ್ದರು. ಜೊತೆಗೆ ಪೌರೋಹಿತ್ಯ ವೃತ್ತಿಯನ್ನೂ ಕಸುಬಾಗಿಸಿಕೊಂಡಿದ್ದರು. ಯಾವುದೇ ಪೌರಾಣಿಕ ಪ್ರಸಂಗಗಳನ್ನು ಸುಲಭವಾಗಿ ಪ್ರದರ್ಶನಕ್ಕೆ ಒಗ್ಗುವಂತೆ ಮಾಡಬಲ್ಲ ಶಾಸ್ತ್ರಿಗಳು ಯಕ್ಷಗಾನ ರಂಗಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದವರು. 

ಯಕ್ಷಗಾನ ಕಲಾರಂಗದ, ಪಡಾರು ನರಸಿಂಗ ಶಾಸ್ತ್ರಿ ಪ್ರಶಸ್ತಿ, ಗಡಿನಾಡ ಉತ್ಸವ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದಿವಾಣ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಶಸ್ತಿ, ಸೂಡ ಸುಬ್ರಹ್ಮಣ್ಯ ಯಕ್ಷ ಕಲಾಭಾರತಿಯ ತುಳುನಾಡ ಸಿರಿ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ಸನ್ಮಾನ ಹೀಗೆ ಹಲವಾರು ಸನ್ಮಾನ ಪ್ರಶಸ್ತಿಗಳು ಶಾಸ್ತ್ರಿಗಳನ್ನು ಅರಸಿ ಬಂದಿವೆ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ತಮ್ಮ ಪತ್ನಿ, ಪುತ್ರ ಯಕ್ಷಗಾನ ಭಾಗವತ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರೀ, ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಗ ಮುರಳಿಕೃಷ್ಣ ಶಾಸ್ತ್ರಿಯವರು ಉತ್ತಮ ಭಾಗವತರು ಹಾಗೂ ತಂದೆಯಂತೆ ಕಲಾಸಾಮರ್ಥ್ಯವಿರುವ ಭಾಗವತರು. ಅವರ ಕುಟುಂಬಕ್ಕೆ ಹಾಗೂ ಸಮಸ್ತ ಯಕ್ಷಗಾನ ಕಲಾಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತನು ದಯಪಾಲಿಸಲಿ. 

RELATED ARTICLES

1 COMMENT

  1. ತೆಂಕಬೈಲು ಶಾಸ್ತ್ರಿಗಳು ಕೆಲವು ಪ್ರಸಂಗಗಳನ್ನು ರಚಿಸಿದ್ದಾರಲ್ಲಾ?!

LEAVE A REPLY

Please enter your comment!
Please enter your name here

Most Popular

Recent Comments