ಶ್ರೀಮತಿ ರೋಹಿಣಿ ಉದಯ್ ಭರತನಾಟ್ಯ ಪ್ರಿಯರಿಗೆಲ್ಲಾ ಪರಿಚಿತ ಹೆಸರು. ತನ್ನ 14ನೇ ವಯಸ್ಸಿನಲ್ಲಿ ಭರತನಾಟ್ಯದ ನೃತ್ಯಾಭ್ಯಾಸಕ್ಕೆ ಆರಂಭಿಸಿದ ರೋಹಿಣಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರುಗಳಾದ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಅವರ ಸಮರ್ಥ ಮಾರ್ಗದರ್ಶನದಿಂದಲೂ ನಂತರ ವಿದುಷಿ ಡಾ. ಶ್ರೀಮತಿ ಶೋಭಿತಾ ಸತೀಶ್ ರಾವ್ ಹಾಗೂ ವಿದ್ವಾನ್ ದೀಪಕ್ ಕುಮಾರ್ ರವರಲ್ಲಿ ಹೆಚ್ಚಿನ ನೃತ್ಯಾಭ್ಯಾಸವನ್ನು ಪಡೆದುಕೊಂಡರು. ಆಮೇಲೆ ಬೆಂಗಳೂರಿನ ಸುಕೃತಿ ನಾಟ್ಯಾಲಯದ ನಿರ್ದೇಶಕಿ ಶ್ರೀಮತಿ ಹೇಮ ಪಂಚಮುಖಿಯವರಲ್ಲಿ ಇನ್ನೂಹೆಚ್ಚಿನ ವಿಶೇಷ ಅಭ್ಯಾಸಕ್ಕಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಶ್ರೀಮತಿ ರೋಹಿಣಿ ಉದಯ್ ಅವರು ಪುತ್ತೂರಿನಲ್ಲಿ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ , ಪುತ್ತೂರು ಇದರ ಸ್ಥಾಪಕಿ. ಈ ನೃತ್ಯ ಕೇಂದ್ರದ ಮುಖಾಂತರ ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಅಭ್ಯಾಸವನ್ನು ಮಾಡಿಸಿರುತ್ತಾರೆ.
ಈ ಕಲಾಕೇಂದ್ರವು ಹಲವಾರು ಭರತನಾಟ್ಯದ ಪ್ರತಿಭೆಗಳನ್ನು ಬೆಳಕಿಗೆ ತಂದಿದೆ. ಈ ದಿಸೆಯಲ್ಲಿ ಕಲಾ ಕೇಂದ್ರದ ನೃತ್ಯ ಗುರು ರೋಹಿಣಿ ಉದಯ್ ಅವರ ಪ್ರಯತ್ನ ಶ್ಲಾಘನೀಯವಾದುದು. ರೋಹಿಣಿ ಉದಯ್ ಭರತನಾಟ್ಯದ ಸಾಧನೆಗಾಗಿ ಎಚ್.ಆರ್.ಸಿ. ಯಿಂದ ಅಭಿನಂದಿತರಾಗಿದ್ದಾರೆ. 2015ನೇ ಸಾಲಿನ ಸುಮ ಸೌರಭ ಪ್ರಶಸ್ತಿಯೂ ಇವರಿಗೆ ದೊರಕಿದೆ. ಇವರೂ ಇವರ ಶಿಷ್ಯರೂ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ.
ನೃತ್ಯ ಪ್ರದರ್ಶನ ಮತ್ತು ನೃತ್ಯ ಶಿಕ್ಷಣ ನೀಡುತ್ತಿರುವುದರ ಜೊತೆಗೆ ರೋಹಿಣಿ ಉದಯ್ ಅವರ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರವು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ. ಶ್ರೀಮತಿ ರೋಹಿಣಿ ಉದಯ್ ಅವರು ಪ್ರಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದ ದಿ| ನಯನಕುಮಾರ್ ಅವರ ಪುತ್ರರಾದ ಶ್ರೀ ಉದಯ್ ಅವರ ಪತ್ನಿ.