Saturday, May 18, 2024
Homeಪುಸ್ತಕ ಮಳಿಗೆಯಕ್ಷ ಕಲಾ ತಪಸ್ವಿ ಕೀರಿಕ್ಕಾಡು ಮಾಸ್ತರ್ - ಲೇಖಕ ಗಣರಾಜ ಕುಂಬ್ಳೆ 

ಯಕ್ಷ ಕಲಾ ತಪಸ್ವಿ ಕೀರಿಕ್ಕಾಡು ಮಾಸ್ತರ್ – ಲೇಖಕ ಗಣರಾಜ ಕುಂಬ್ಳೆ 

‘ಯಕ್ಷ ಕಲಾ ತಪಸ್ವಿ ಕೀರಿಕ್ಕಾಡು ಮಾಸ್ತರ್’ ಎಂಬುದು ಖ್ಯಾತ ಕಲಾವಿದರೂ ಪ್ರಸಂಗಕರ್ತರೂ ಆದ ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಕುರಿತಾಗಿ ಬರೆದ ಪುಸ್ತಕ. ಈ ಹೊತ್ತಗೆಯ ಲೇಖಕರು ಕಲಾವಿದರೂ ಪ್ರಾಧ್ಯಾಪಕರೂ, ಉತ್ತಮ ಬರಹಗಾರರೂ ಆಗಿರುವ ಶ್ರೀ ಗಣರಾಜ ಕುಂಬ್ಳೆ. ಇದು 2018ನೇ ಇಸವಿಯಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು.  ‘ಕೀರಿಕ್ಕಾಡು ದಿ| ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು’ ಎಂಬ ಲೇಖನವನ್ನು ಈ ಹಿಂದೆ ಬರೆಯುವ ಅವಕಾಶವಾಗಿತ್ತು. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಕುರಿತಾದ ಪುಸ್ತಕದ ಬಗ್ಗೆಯೂ ಬರೆಯುವುದು ಭಾಗ್ಯವೆಂದು ಭಾವಿಸುತ್ತೇನೆ.

‘ಯಕ್ಷಕಲಾ ತಪಸ್ವಿ ಕೀರಿಕ್ಕಾಡು ಮಾಸ್ತರ್’ ಎಂಬ ಕೃತಿಯ ಪ್ರಕಾಶಕರು ಹವ್ಯಕ ಅಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರು. ಈ ಸಂಸ್ಥೆಯ ಅಮೃತ ಮಹೋತ್ಸವ ಗ್ರಂಥ ಮಾಲಿಕೆಯಡಿ ಇದು ಪ್ರಕಟವಾಗಿತ್ತು. ಅರುವತ್ತೊಂಬತ್ತು ಪುಟಗಳುಳ್ಳ ಪುಸ್ತಕವಿದು. ಶ್ರೀ ಅಖಿಲ ಹವ್ಯಕ ಮಹಾಸಭಾ ಸಂಸ್ಥೆಯ ಅಧ್ಯಕ್ಷ ಶ್ರೀ ಡಾ. ಗಿರಿಧರ ಕಜೆ ಅವರು ‘ಅಧ್ಯಕ್ಷರ ನುಡಿ’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ಬರಹರೂಪಕ್ಕಿಳಿಸಿದ್ದಾರೆ. ಶ್ರೀ ಗಣರಾಜ ಕುಂಬ್ಳೆ ಅವರು ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಹವ್ಯಕ ಅಧ್ಯಯನ ಕೇಂದ್ರದ ಸಂಚಾಲಕರೂ ತಮ್ಮ ಅನಿಸಿಕೆಗಳನ್ನು ನೀಡಿರುತ್ತಾರೆ. ಶ್ರೀ ಗಣರಾಜ ಕುಂಬ್ಳೆ ಅವರು ಕೀರಿಕ್ಕಾಡು ಮಾಸ್ತರರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ತನ್ನ ಪ್ರಬುದ್ಧ ಬರಹಗಾರಿಕೆಯಿಂದ ಈ ಪುಸ್ತಕವನ್ನು ಕಟ್ಟಿ ಕೊಟ್ಟಿರುತ್ತಾರೆ. ಅರ್ಥಪೂರ್ಣ ಬದುಕು, ಮಾಸ್ತರರ ತಾಳಮದ್ದಳೆಯ ರಸನಿಮಿಷಗಳು, ಪ್ರಕೃತಿ ಚಿಕಿತ್ಸೆಯ ಪರಿಣತಿ, ಮಾಸ್ತರರ ಆಶಯ, ಸ್ವರಭಾರ ನೋಡಿ ಪಾತ್ರ ನೀಡಿಕೆ ಉಚಿತ, ಮಾಸ್ತರರ ಮಾಹಿತಿ-ವಿದ್ವಾಂಸರ ಮಾತಿನಲ್ಲಿ, ಕೀರಿಕ್ಕಾಡು ವಿಷ್ಣು ಭಟ್ಟರ ಸಂಸಾರ, ಮಾಸ್ತರರ ಕೆಲವು ಯಕ್ಷಗಾನ ಕೃತಿಗಳ ಪರಿಚಯ, ಮಾಸ್ತರರ ಕಾವ್ಯ, ಮಾಸ್ತರರ ಕಾದಂಬರಿಗಳು ಎಂಬ ವಿಭಾಗಗಳಡಿಯಲ್ಲಿ ಶ್ರೀ ಗಣರಾಜ ಕುಂಬ್ಳೆ ಅವರ ಬರಹಗಳಿವೆ. ಬಳಿಕ  ಡಾ. ರಮಾನಂದ ಬನಾರಿ ಅವರು ಬರೆದ ‘ತಂದೆಯವರ ವ್ಯಕ್ತಿತ್ವ ನಾನು ಕಂಡಂತೆ’ ಎಂಬ ಲೇಖನವನ್ನು ನೀಡಲಾಗಿದೆ. ತ್ರಿಭಾಷಾ ವಿದ್ವಾಂಸರಾಗಿರುವ ಶ್ರೀ ಗಣರಾಜ ಕುಂಬ್ಳೆ ಅವರು ಯಕ್ಷಗಾನ ಕಲಾ ಸಾಹಿತ್ಯ ತಪಸ್ವಿ ಶ್ರೀ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಕುರಿತಾಗಿ ಬರೆದ ಉತ್ತಮ ಪುಸ್ತಕವಿದು. 

ಲೇಖಕ: ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments