ಹೌದು. ಹೀಗೊಂದು ಪ್ರಶ್ನೆ ಇತ್ತೀಚೆಗಿನ ವರ್ಷಗಳಲ್ಲಿ ಕೇಳಿ ಬರುತ್ತಾ ಉಂಟು. ಇದೇನಿದು ಹೀಗೆ? ಎಂದು ಕೆಲವರು ಹುಬ್ಬೇರಿಸಬಹುದು. ಯಕ್ಷಗಾನ ನೋಡುವುದರಲ್ಲಿ ಶಿಫ್ಟ್ ಅಥವಾ ಪಾಳಿ ಎಂದರೆ ಏನರ್ಥ? ಹಾಗಿರಲು ಸಾಧ್ಯವೇ? ಎಂದೆಲ್ಲ ಪ್ರಶ್ನಿಸಬಹುದು. ಆದರಿದು ಸತ್ಯ. ಒಗಟಾಗಿ ಮಾತನಾಡುವ ಬದಲು ವಿವರವಾಗಿ ಬರೆಯಲು ತೊಡಗಬೇಕಾದರೆ ನಾವು ಸ್ವಲ್ಪ ಹಿಂದಕ್ಕೆ ಹೋಗಬೇಕು. ಮೊದಲಿನ ಕಾಲದಲ್ಲಿ ಅಂದರೆ ಕೆಲವಾರು ದಶಕಗಳಷ್ಟು ಹಿಂದಕ್ಕೆ ಹೋದರೆ ಯಕ್ಷಗಾನ ಪ್ರದರ್ಶನ ನೋಡಲು ಹೊರಟ ಪ್ರೇಕ್ಷಕ ಕಲಾಭಿಮಾನಿಗಳು ತಮ್ಮ ಜೊತೆಗೆ ಎಲ್ಲವನ್ನೂ ಅಂದರೆ ಅಗತ್ಯವಿರುವ ಸಾಮಗ್ರಿಗಳನ್ನು ತೆಗೆದುಕೊಂಡೇ ಹೋಗುತ್ತಿದ್ದರು. ಅದರಲ್ಲಿ ಚಾಪೆ, ವಸ್ತ್ರಗಳೂ ಸೇರಿದ್ದುವು. ಆಗೆಲ್ಲಾ ನೆಲದಲ್ಲೇ ಕುಳಿತು ಆಟ ನೋಡಬೇಕು. ಛಳಿಯಾದರೆ ಹೊದ್ದುಕೊಳ್ಳಲು ಕಂಬಳಿಯೂ ಬೇಕು. ಒಮ್ಮೆ ಆಟ ನೋಡಲು ಕುಳಿತವರು ಮನೆಗೆ ಹೊರಡುವುದು ಮಂಗಳ ಪದ ಹಾಡಿದ ಮೇಲೆಯೇ. ಅಷ್ಟೊಂದು ತನ್ಮಯತೆ, ತಲ್ಲೀನತೆಗಳು ಅಂದಿನ ಜನರಲ್ಲಿ ಇತ್ತು. ಅದೂ ಒಂದು ತರಹದ ಭಕ್ತಿಯೇ. ಕಲೆಯ ಮೇಲಿನ ಶ್ರದ್ಧೆ. ನಮ್ಮ ಪುರಾಣ ಪುಣ್ಯ ಪುರುಷರ ಮತ್ತು ದೇವತಾ ಸ್ತ್ರೀಯರ ಮೇಲಿನ ಭಕ್ತಿ. ಆದುದರಿಂದ ಅಂದಿನ ಯಕ್ಷಗಾನದ ಆಟ ಕೂಟಗಳಲ್ಲಿ ಪ್ರೇಕ್ಷಕರು ಅರ್ಧದಿಂದ ಎದ್ದು ನಿರ್ಗಮಿಸಿವುದು ಎಂದರೆ ಅದು ಬಹಳ ಅಪರೂಪದ ಘಟನೆ. ಬರಿಯ ಪ್ರೇಕ್ಷಕರನ್ನು ಹೇಳಿದರೆ ಸಾಕೆ? ಕಲಾವಿದರೂ ಹಾಗೆಯೇ. ಪೂರ್ಣ ಪ್ರದರ್ಶನ ಮುಗಿಯುವ ವರೆಗೆ ಚೌಕಿಯಲ್ಲಿಯೇ ಅಥವಾ ಹತ್ತಿರದ ಸ್ಥಳಗಳಲ್ಲಿಯೋ ಮಲಗಿ ವಿಶ್ರಾಂತಿ ಪಡೆದೋ ಅಥವಾ ತನ್ನದಲ್ಲದ ಪ್ರದರ್ಶನದ ಉಳಿದ ಅವಧಿಯನ್ನು ತನ್ನದೇ ಪ್ರದರ್ಶನವೆಂದು ಭಾವಿಸಿ, ವೀಕ್ಷಿಸಿ ಆಮೇಲೆ ಮಂಗಳ ಪದ ಹಾಡಿದ ನಂತರ ಚೌಕಿಯಿಂದ ನಿರ್ಗಮಿಸುವುದು ವಾಡಿಕೆಯಾಗಿತ್ತು. ಅಂದಿನ ಕಲಾವಿದರಿಗೆ ಹಾಗೂ ಪ್ರೇಕ್ಷಕರಿಗೆ ಮಧ್ಯರಾತ್ರಿಯ ಹೊತ್ತಿನಲ್ಲಿ ಆ ರೀತಿ ನಿರ್ಗಮಿಸುವ ಅನುಕೂಲತೆಗಳು ಇಲ್ಲದಿರುವುದು ಅವರ ಪೂರ್ಣ ಪ್ರಮಾಣದ ಉಪಸ್ಥಿತಿಗೆ ಕಾರಣವಾಗಿದ್ದಿರಬಹುದು.
ಆದರೆ ಈಗ ಹಾಗಲ್ಲ. ಹೆಚ್ಚಿನ ಕಲಾವಿದರಿಗೆ ಬಹಳಷ್ಟು ಅನುಕೂಲತೆಗಳಿವೆ. ಕಲಾಭಿಮಾನಿಗಳಾದ ಪ್ರೇಕ್ಷಕರಿಗೆ ಕೂಡಾ. ತನ್ನದೇ ವಾಹನ. ಸ್ವಂತ ದ್ವಿಚಕ್ರ, ಚತುಶ್ಚಕ್ರ ವಾಹನಗಳಲ್ಲಿ ಬರುತ್ತಾರೆ. ಹೋಗಲೇ ಬೇಕಾದ ಸಂದರ್ಭ ಬಂದರೆ ಸ್ವಲ್ಪ ಹೊತ್ತು ಆಟ ನೋಡಿ ಆಮೇಲೆ ತಮ್ಮದೇ ವಾಹನಗಳನ್ನು ಏರಿ ಮನೆಯ ದಾರಿ ಹಿಡಿಯುತ್ತಾರೆ. ಕಲಾವಿದರೂ ಹಾಗೆಯೇ. ಕೆಲವು ಕಲಾವಿದರು ತಮ್ಮ ವೇಷ ಮುಗಿಸಿ ಮನೆಯ ದಾರಿ ಹಿಡಿಯಲೋಸುಗ ತಮ್ಮದೇ ವಾಹನದಲ್ಲಿ ಬಂದಿರುತ್ತಾರೆ. ಮನೆಯಲ್ಲಿ ಆರಾಮವಾಗಿ ಪ್ರಶಾಂತ ವಾತಾವರಣದಲ್ಲಿ ನಿದ್ರಿಸುವ ಆಲೋಚನೆಯೂ ಆರೋಗ್ಯಕ್ಕೆ ಒಳ್ಳೆಯದೇ. ಕೆಲವೊಮ್ಮೆ ಆ ವಿಮರ್ಶೆ ಈ ವಿಮರ್ಶೆ ಎಂದು ಕಲಾವಿದರನ್ನು ಟೀಕೆ ಮಾಡುವುದನ್ನು ಕಾಣುತ್ತೇವೆ. ಕಲಾವಿದನ ಕಲಾ ಜೀವನ ಎಂದರೆ ಅದು ಕತ್ತಿಯ ಅಲುಗಿನ ಮೇಲೆ ನಡೆದ ಹಾಗೆ. ಆತ ಕೆಲವೊಮ್ಮೆ ಒತ್ತಡದಲ್ಲಿಯೇ ಉತ್ತಮ ಪ್ರದರ್ಶನ ನೀಡಲು ಯತ್ನಿಸಬೇಕಾಗುತ್ತದೆ. ಕಲಾವಿದರೂ ಮನುಷ್ಯರೇ. ಅವರಿಗೂ ಕುಟುಂಬ, ಸಂಸಾರಗಳಿರುತ್ತವೆ. ಆದುದರಿಂದ ತಮ್ಮ ಪ್ರದರ್ಶನದ ಅವಧಿ ಮುಗಿದರೂ ಕಲಿಕಾ ದೃಷ್ಟಿಯಿಂದ ಚೌಕಿಯಲ್ಲಿಯೇ ಬೆಳಗಿನ ವರೆಗೆ ಉಳಿಯಬೇಕೆಂಬುದು ಪ್ರಸ್ತುತ ಸನ್ನಿವೇಶದಲ್ಲಿ ಹಾಸ್ಯಾಸ್ಪದ. ಯಾಕೆಂದರೆ ಕಲಿಯುವ ಆಕಾಂಕ್ಷೆಯಿರುವ ಕಿರಿಯ ಕಲಾವಿದರಿಗೆ ಈಗ ಕಲಿಕೆಗೆ ನೂರೆಂಟು ದಾರಿಗಳಿವೆ. ಚೌಕಿಯಲ್ಲಿಯೇ ಬೆಳಗಿನ ವರೆಗೆ ಉಳಿಯಲೇ ಬೇಕಾದ ಅನಿವಾರ್ಯತೆಯಿಲ್ಲ. ಹಾಗೆಂದು ಕಿರಿಯ ಕಲಾವಿದರಿಗೆ ಕೆಲವೊಮ್ಮೆ ಬೆಳಗಿನ ವರೆಗೆ ವೇಷಗಳಿರುವುದರಿಂದ ಅರ್ಧದಲ್ಲೇ ನಿರ್ಗಮಿಸುವ ಅವಕಾಶಗಳಿರುವುದಿಲ್ಲ. ಆದುದರಿಂದ ಈಗಿನ ಕಲಾವಿದರಿಗೆ ವಾಹನದ ಅನುಕೂಲತೆಗಳಿರುವುದರಿಂದ ಅವರ ಪಾಳಿಯನ್ನು ಮುಗಿಸಿ ಅವರು ಮನೆಗೆ ಹೋಗಿ ವಿಶ್ರಾಂತಿ ಪಡೆಯುವಲ್ಲಿ ಯಾವುದೇ ಅನಾನುಕೂಲತೆಗಳು ಉಂಟಾಗುವುದಿಲ್ಲ. ನಾವು ಕಲಾವಿದರನ್ನು ಮಾತ್ರವೇ ಯಾಕೆ ಹೇಳಬೇಕು. ಕಲೆಯನ್ನು ಬೆಳಗಿಸುವುದರಲ್ಲಿ ಪ್ರೇಕ್ಷಕರ ಪಾಲೂ ಕಲಾಭಿಮಾನಿಗಳಾದ ನಮ್ಮ ಪಾಲೂ ಬೇಕಾದಷ್ಟಿವೆ. ಈಗ ಆಟದ ಪ್ರಾರಂಭದಿಂದ ಬೆಳಗ್ಗಿನ ಮಂಗಳ ಪದ್ಯದ ವರೆಗೆ ಪ್ರದರ್ಶನ ನೋಡುವವರು ಎಷ್ಟು ಮಂದಿ ಇದ್ದಾರೆ ಎಂದರೆ ಉತ್ತರಿಸಲು ಕಷ್ಟದ ಮತ್ತು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಯಾಕೆಂದರೆ ಕಲಾವಿದರಂತೆ ಪ್ರೇಕ್ಷಕರಿಗೂ ಕೂಡಾ ವಿಶ್ರಾಂತಿಯ ಅವಶ್ಯಕತೆಯಿದೆ. ಮರುದಿನದ ಕರ್ತವ್ಯಕ್ಕೆ ಹಾಜರಾಗಬೇಕು. ಅಥವಾ ತನ್ನದೇ ಸ್ವಂತ ಕೆಲಸ ಕಾರ್ಯಗಳನ್ನು ಮಾಡಬೇಕು. ಈಗ ಮೊದಲಿನ ಹಾಗೆ ನಿದ್ರೆಗೆಟ್ಟು ಮರುದಿನವಿಡೀ ನಿದ್ರೆಗೆ ವಶವಾಗಲು ಯಾರಿಗೂ ಅನುಕೂಲವಿಲ್ಲ. ಆದುದರಿಂದ ಇಡೀ ರಾತ್ರಿಯ ಆಟ ನೋಡುವ ಬದಲು ಆ ದಿನದ ಪ್ರಸಂಗದ ತನಗೆ ಇಷ್ಟವಾದ ಭಾಗವನ್ನು ವೀಕ್ಷಿಸಿ ಮನೆಗೆ ತೆರಳಬಹುದಲ್ಲ ಎಂಬ ಆಲೋಚನೆ ಅವರಿಗೆ ಬರುತ್ತದೆ. ಈ ಆಲೋಚನೆಗಳು ಹಲವಾರು ಪ್ರೇಕ್ಷಕರಿಗೆ ಬರುತ್ತದೆ. ಪ್ರೇಕ್ಷಕರಲ್ಲಿಯೂ ಕಲಾವಿದರಂತೆ ವಿಭಿನ್ನ ಅಭಿರುಚಿಯುಳ್ಳವರು ಇದ್ದೇ ಇರುತ್ತಾರೆ. ಈಗ ದೇವಿ ಮಹಾತ್ಮೆ ಪ್ರಸಂಗವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಕೆಲವು ಪ್ರೇಕ್ಷಕರಿಗೆ ಬ್ರಹ್ಮ ವಿಷ್ಣು ಸಂವಾದದ ಭಾಗ ಇಷ್ಟ. ಆ ಭಾಗವನ್ನು ಮಾತ್ರ ನೋಡಿ ಅವರು ಹೋಗುತ್ತಾರೆ. ಇನ್ನು ಕೆಲವರಿಗೆ ಮಧು ಕೈಟಭರ ವೇಷವನ್ನು ನೋಡಲೆಂದೇ ಬರುವ ಆಕಾಂಕ್ಷೆ. ಅವರು ಆಮೇಲೆ ನಾಪತ್ತೆ. ಕೆಲವರಿಗೆ ವಿದ್ಯುನ್ಮಾಲಿಯ ಮದುವೆ ಮತ್ತು ಯಕ್ಷನ ಜೊತೆ ಯುದ್ಧ ಇಷ್ಟ. ಅವರುಗಳು ಅಷ್ಟನ್ನು ನೋಡಿ ಹೋಗುತ್ತಾರೆ.
ಇನ್ನು ಹೆಚ್ಚಿನವರಿಗೆ ಮಹಿಷಾಸುರ ಎಂದರೆ ಪ್ರಾಣ. ಮಹಿಷಾಸುರನ ಪ್ರವೇಶದೊಂದಿಗೆ ಸಭೆಯಲ್ಲಿ ಕೆಲವು ಪ್ರೇಕ್ಷಕರ ಪ್ರವೇಶವೂ ಅದೇ ಸಮಯಕ್ಕೆ ಆಗುತ್ತದೆ. ಮಹಿಷಾಸುರ ನೋಡಿದ ನಂತರ ಉಳಿದ ಆಟ ನೋಡುವ ಆಸಕ್ತಿ ಅವರಲ್ಲಿ ಉಳಿದಿರುವುದಿಲ್ಲ. ಇನ್ನು ಕೆಲವರು ದೇವಿಯ ಮೇಲಿನ ಭಕ್ತಿಯಿಂದ ಹೆಚ್ಚಿನ ಹೊತ್ತು ನೋಡುತ್ತಾರೆ. ಕೆಲವರು ಚಂಡ ಮುಂಡರನ್ನು ನೋಡಲೆಂದೇ ಎಲ್ಲೆಲ್ಲಿಂದಲೋ ವಾಹನದಲ್ಲಿ ಅದೇ ಸಮಯಕ್ಕೆ ಬರುತ್ತಾರೆ. ಇನ್ನು ಕೆಲವರು ರಕ್ತಬೀಜನ ಪ್ರಬುದ್ಧ ಪಾತ್ರವನ್ನು ಇಷ್ಟಪಡುವವರು ಮನೆಯಲ್ಲಿ ಒಂದು ನಿದ್ದೆ ಮಗಿಸಿ ಆಟಕ್ಕೆ ಬರುತ್ತಾರೆ. ಹೀಗೆ ಪ್ರೇಕ್ಷಕರ ಉಪಸ್ಥಿತಿಯು ಒಂದು ಯಕ್ಷಗಾನ ಪ್ರದರ್ಶನದಲ್ಲಿ ಬದಲಾಗುತ್ತಲೇ ಇರುತ್ತದೆ. ಇದೇನೂ ಕಾಲ್ಪನಿಕವಾಗಿ ಬರೆದ ಸಂಗತಿಯೇನಲ್ಲ. ಹಲವಾರು ಕಲಾವಿದರಂತೆ ಪ್ರೇಕ್ಷಕರೂ ಕೂಡ ಪ್ರದರ್ಶನ ನಡೆಯುತ್ತಿದ್ದಂತೆ ಅನಿವಾರ್ಯವಾಗಿ ಅರ್ಧದಿಂದ ನಿರ್ಗಮಿಸುತ್ತಾರೆ. ಯಕ್ಷಗಾನ ಕಾಲಮಿತಿಗೆ ಒಳಪಟ್ಟದ್ದು ಕೂಡ ಇದೆ ಕಾರಣದಿಂದಲೇ ಇರಬಹುದೇನೋ ಎಂದು ತರ್ಕಿಸಲಾಗುತ್ತಿದೆ. ಇದು ಕೇವಲ ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಾತ್ರವಲ್ಲ. ಎಲ್ಲಾ ಪ್ರಸಂಗದ ಪ್ರದರ್ಶನಗಳಲ್ಲಿಯೂ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಆದರೆ ಈ ಬದಲಾದ ಪರಿಸ್ಥಿತಿ ಮತ್ತು ಜೀವನಕ್ರಮದಲ್ಲಿ ಕಲಾವಿದರಿಗೂ ಪ್ರೇಕ್ಷಕರಿಗೂ ಇದು ಅನಿವಾರ್ಯವಾಗಿದೆ. ಆದುದರಿಂದ ಕೆಲವು ಪ್ರೇಕ್ಷಕರೂ ಕೂಡ ಒಂದು ಪ್ರದರ್ಶನದಲ್ಲಿ ಪಾಳಿಯ (ಶಿಫ್ಟ್) ಮೇಲೆ ಬದಲಾಗುತ್ತಲೇ ಇರುತ್ತಾರೆ. ಇನ್ನು ಕೆಲವೊಂದು ವಿಚಾರಗಳು ಅಭಿಮಾನದ ಮೇಲೆ ನಡೆಯುಂತಹದು. ತಾನು ಅಭಿಮಾನಿಸುವ ಕಲಾವಿದನ ವೇಷವನ್ನು ಮಾತ್ರ ನೋಡಿ ಆಮೇಲೆ ಮನೆಗೆ ಹೋಗುವ ಪ್ರೇಕ್ಷಕರೂ ಇದ್ದಾರೆ. ಒಬ್ಬ ಪ್ರಸಿದ್ಧಿ ಪಡೆದ ಕಲಾವಿದನಿಗೆ ಅಭಿಮಾನಿಗಳಿರುವುದು ತಪ್ಪೇನೂ ಅಲ್ಲ. ಆದರೆ ಅವರ ವೇಷವನ್ನು ಮಾತ್ರ ನೋಡುತ್ತೇನೆ ಎನ್ನುವುದು ಒಂದು ತಪ್ಪು ನಿರ್ಧಾರದ ಹಾಗೆ ಕಾಣುತ್ತದೆ. ಮಧುರವಾದ ಗಾಯನದಲ್ಲಿ ಒಂದು ಅಪಶ್ರುತಿ ಮೂಡಿದ ಹಾಗೆ. ಕೆಲವೊಂದು ಸಂದರ್ಭದಲ್ಲಿ ಕಲಾವಿದನಿಗೆ ಅಭಿಮಾನಿಗಳು ಕರೆ ಮಾಡಿ ಅವರ ಪಾತ್ರದ ರಂಗಪ್ರವೇಶದ ಸಮಯವನ್ನೂ ಕೇಳಿಕೊಂಡು ಆಮೇಲೆ ಯಕ್ಷಗಾನ ನೋಡಲು ಬರುತ್ತಾರೆ. ರಂಗದಲ್ಲಿ ಕಲೆಯನ್ನು ಅಭಿನಯಿಸುವ ಕಲಾವಿದನಿಗೆ ಪ್ರೇಕ್ಷಕರ ಗಡಣದಲ್ಲಿ ಬದಲಾವಣೆಯಾಗುತ್ತಿರುವುದು ಗಮನಕ್ಕೆ ಬಾರದ ವಿಚಾರವೇನಲ್ಲ. ಆದುದರಿಂದ ಇಡೀ ರಾತ್ರಿಯ ಯಕ್ಷಗಾನ ಪ್ರದರ್ಶನವೊಂದರಲ್ಲಿ ಪ್ರೇಕ್ಷಕರೂ ಕೂಡ ಪಾಳಿಯಂತೆ (ಶಿಫ್ಟ್) ಬದಲಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾದ ವಿಚಾರ!
ಉತ್ತಮ ಬರಹ ಈಗಿನ ಕಾಲಸ್ತಿತಿಗೆ ಸರಿಯಾಗಿ ಅವಲೋಕನ ಬರಹವಾಗಿದೆ