Saturday, May 18, 2024
Homeಯಕ್ಷಗಾನಶ್ರೀ ತಾರಾನಾಥ ವರ್ಕಾಡಿ - ಬಹುಮುಖ ಪ್ರತಿಭೆಯ ಸಾಧಕ

ಶ್ರೀ ತಾರಾನಾಥ ವರ್ಕಾಡಿ – ಬಹುಮುಖ ಪ್ರತಿಭೆಯ ಸಾಧಕ

ಶ್ರೀ ತಾರಾನಾಥ ವರ್ಕಾಡಿ ಅವರು ಯಕ್ಷಗಾನ ರಂಗದ ಹಿರಿಯ ಕಲಾವಿದರಲ್ಲೊಬ್ಬರು. ತೆಂಕುತಿಟ್ಟಿನ ಶ್ರೇಷ್ಠ ಪುಂಡು ವೇಷಧಾರಿಗಳು.  ನಾಟ್ಯ ಮತ್ತು ಮಾತುಗಾರಿಕೆಗಳೆಂಬ ಎರಡು ವಿಭಾಗಗಳಲ್ಲೂ ಪರಿಣತಿಯನ್ನೂ ಪಕ್ವತೆಯನ್ನೂ ಹೊಂದಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಕಲಾವಿದರಿವರು. ಇವರದು ಬಹುಮುಖ ಪ್ರತಿಭೆ. ವೇಷಗಳನ್ನು ನಿರ್ವಹಿಸುವುದರ ಜೊತೆಗೆ ತಾಳಮದ್ದಳೆಗಳಲ್ಲಿ ಅರ್ಥಧಾರಿಯಾಗಿಯೂ ಕಾಣಿಸಿಕೊಳ್ಳುತ್ತಾರೆ. ಅತ್ಯುತ್ತಮ ಬರಹಗಾರರೂ ಹೌದು. ಪತ್ರಿಕೋದ್ಯಮಿಯಾಗಿಯೂ ನಮಗೆಲ್ಲಾ ಪರಿಚಿತರು. ಯಕ್ಷಗಾನ ಶಿಕ್ಷಕರಾಗಿಯೂ ಗುರುತಿಸುವಂತಹ ಸಾಧನೆ ಮಾಡಿದ್ದಾರೆ. ಪ್ರಸಂಗ ರಚನಾಕಾರರಾಗಿಯೂ ಯಶಸ್ವಿಯಾಗಿದ್ದಾರೆ. ಸಂಪಾದಕರಾಗಿ ಅನೇಕ ವರ್ಷಗಳಿಂದ ‘ಬಲ್ಲಿರೇನಯ್ಯ’ ಮಾಸಪತ್ರಿಕೆಯನ್ನೂ ನಡೆಸುತ್ತಿದ್ದಾರೆ. ಶ್ರೀ ತಾರಾನಾಥ ಅವರ ಹುಟ್ಟೂರು ವರ್ಕಾಡಿ. ಇದು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಹೊಸಂಗಡಿಗೆ ಸಮೀಪದ ಊರು. ಪಂಡಿತ್ ವಿ. ಎ. ಬಲ್ಯಾಯ ಮತ್ತು ಕಮಲಾಕ್ಷಿ ದಂಪತಿಗಳಿಗೆ ಮಗನಾಗಿ ೧೯೬೩ ಜೂನ್ ಒಂದರಂದು ಜನನ. ತಾರಾನಾಥರ ತೀರ್ಥರೂಪರು ಸಮಾಜಸೇವಕರಾಗಿ ಪ್ರಸಿದ್ದರು. ಮಗನು ಆಯುರ್ವೇದ ವೈದ್ಯನಾಗಬೇಕೆಂದು ಬಯಸಿದವರು. ಎಳವೆಯಲ್ಲಿಯೇ ಅವರನ್ನು ಕಳೆದುಕೊಂಡರೂ ತಾಯಿ ಕಮಲಾಕ್ಷಿ ಅಮ್ಮನವರು ಸ್ವಾಭಿಮಾನಕ್ಕೆ, ಮನೆತನದ ಗೌರವಕ್ಕೆ ಕೊರತೆಯಾಗದಂತೆ ಬಡತನದಲ್ಲೇ ಮಕ್ಕಳನ್ನು ಬೆಳೆಸಿದ್ದರು. ಆಗ ಹೆಚ್ಚಿನ ವಿದ್ಯಾರ್ಜನೆಗೂ ಅವಕಾಶವಿರಲಿಲ್ಲ. ಆದರೂ ತಾರಾನಾಥರು ಎಳವೆಯಲ್ಲಿಯೇ ಕಲಾಸಕ್ತರಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ ಮತ್ತು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತಿದ್ದರು. ತಾನು ಕಲಿತ ಸದ್ರಿ ಸಂಸ್ಥೆಯಲ್ಲಿಯೇ ಶಿಕ್ಷಕನಾಗಿ ಕಲಿಕಾಸಕ್ತರಿಗೆ ತರಬೇತಿ ನೀಡಲು ಅವಕಾಶ ದೊರೆತ ತಾರಾನಾಥರು ನಿಜಕ್ಕೂ ಭಾಗ್ಯವಂತರು. ಇವರಿಂದ ಹೆಜ್ಜೆಗಾರಿಕೆ ಕಲಿತ ಅನೇಕರು ಇಂದು ವಿವಿಧ ಮೇಳಗಳಲ್ಲಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಲಿತಕಲಾ ಕೇಂದ್ರದಲ್ಲಿ ತರಬೇತಿಯನ್ನು ಮುಗಿಸಿದ ಬಳಿಕ ಸುಂಕದಕಟ್ಟೆ, ಕದ್ರಿ, ನಂದಾವರ, ಅರುವ, ಬಪ್ಪನಾಡು ಮೇಳಗಳಲ್ಲಿ ತಿರುಗಾಟವನ್ನು ನಡೆಸಿದ್ದರು. ಬಳಿಕ ಅನೇಕ ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆಯನ್ನು ಮಾಡಿ ಕೆಲವು ವರ್ಷಗಳ ಹಿಂದೆ ತಿರುಗಾಟದಿಂದ ಸ್ವಯಂ ನಿವೃತ್ತಿಯನ್ನು ಹೊಂದಿದ್ದರು. ಮೇಳದ ತಿರುಗಾಟವನ್ನು ನಿಲ್ಲಿಸಿದರೂ ಕಲಾಸೇವೆಯನ್ನು ಮುಂದುವರಿಸಿ ಕಲಾಭಿಮಾನಿಗಳನ್ನು ರಂಜಿಸಿತ್ತಿದ್ದಾರೆ. ನಾನು ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಶ್ರೀ ತಾರಾನಾಥರ ವೇಷಗಳನ್ನು ನೋಡುತ್ತಿದ್ದೆ. ಅವರ ಹಿತ ಮಿತವಾದ ನಾಟ್ಯ ಮಾತುಗಾರಿಕೆಯು ಸಂತೋಷವನ್ನು ಕೊಡುತ್ತಿತ್ತು. ಮಾತುಗಾರಿಕೆಗೆ ಸಂಬಂಧಿಸಿದ ಸಾತ್ವಿಕ ಪಾತ್ರಗಳನ್ನು ನಿರ್ವಹಿಸುವ ಕಲೆಯು ಇವರಿಗೆ ಒಲಿದಿತ್ತು. ವಿಷ್ಣು,ಬ್ರಹ್ಮ, ಶ್ರೀರಾಮ,ಶ್ರೀಕೃಷ್ಣ, ಈಶ್ವರ ಮೊದಲಾದ ಪಾತ್ರಗಳಲ್ಲಿ ಅಭಿನಯಿಸಿದಾಗ ಪ್ರೇಕ್ಷಕರು ಇವರನ್ನು ಗುರುತಿಸಿ ಮೆಚ್ಚಿಕೊಂಡಿದ್ದರು. ಆರಂಭದ ತಿರುಗಾಟಗಳಲ್ಲಿ ತುಳು ಪ್ರಸಂಗಗಳಲ್ಲಿ ಅಭಿನಯಿಸಿದ್ದರು. ಬಳಿಕ ಸತತ ಅಧ್ಯಯನಶೀಲರಾಗಿ ಪುರಾಣ ಪ್ರಸಂಗಗಳ ನಡೆಯನ್ನು ಅಭ್ಯಸಿಸಿ ತಿಳಿದುಕೊಂಡಿದ್ದರು. 

ಶ್ರೀ ತಾರಾನಾಥರು ಕಲಾವಿದನಾಗಿ ಮೇಳದ ತಿರುಗಾಟವನ್ನು ಮಾಡುತ್ತಿರುವಾಗ ಸಾಹಿತ್ಯ ಕ್ಷೇತ್ರದತ್ತ ಒಲವನ್ನು ತೋರಿದ್ದರು. ಲೇಖಕರಾಗಿಯೂ ಕಾಣಿಸಿಕೊಂಡರು. ಪ್ರತಿಯೊಂದು ನದಿಗಳ ಬಗೆಗೆ ಇವರು ಬರೆದ ಲೇಖನಗಳನ್ನೂ ಉದಯವಾಣಿ ಪತ್ರಿಕೆಯ ಸಾಪ್ತಾಹಿಕ ಸಂಪದದಲ್ಲಿ ಸಂಪಾದಕ ಶ್ರೀ ಪೃಥ್ವಿರಾಜ್ ಕವತ್ತಾರ್ ಅವರು ಪ್ರಕಟಿಸಿದ್ದರು. ತಾರಾನಾಥರು ಬರೆದ ಕಲಾಸಂಬಂಧೀ ಲೇಖನಗಳು ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು ನಮಗೆ ಅವುಗಳನ್ನು ಓದಲು ಅವಕಾಶವಾಗುತ್ತಿತ್ತು. ಲೇಖನಗಳನ್ನು ಬರೆಯುತ್ತಾ ಪ್ರಸಂಗ ರಚನಾ ಮತ್ತು ಕೃತಿ ರಚನಾ ಕಾಯಕದಲ್ಲೂ ತೊಡಗಿಸಿಕೊಂಡಿದ್ದರು. ಪ್ರಸಂಗ ರಚನಾ ರೀತಿಯನ್ನು ಡಾ. ಶಿಮಂತೂರು ನಾರಾಯಣ ಶೆಟ್ಟಿಯವರಿಂದಲೂ ಅರ್ಥಗಾರಿಕೆಯನ್ನು ಶ್ರೀ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರಿಂದಲೂ ಅಭ್ಯಸಿಸಿದ್ದು ಅನುಕೂಲವೇ ಆಗಿತ್ತು. ಪತ್ರಿಕೆಗಳಲ್ಲಿ ವಿಮರ್ಶಾ ಲೇಖನಗಳು, ಕಥೆ, ಕವನಗಳನ್ನೂ ಬರೆದರು. ಪ್ರಬಂಧ ರಚನೆ, ಜ್ಯೋತಿಷ್ಯ, ಆಯುರ್ವೇದ, ವಾಸ್ತುಶಾಸ್ತ್ರ ಮೊದಲಾದ ವಿಚಾರಗಳು ಶ್ರೀ ತಾರಾನಾಥರ ಹವ್ಯಾಸಗಳು. ಯಕ್ಷಗಾನ ಛಂದಸ್ಸು ವಿದ್ವಾಂಸ  ಡಾ. ಶಿಮಂತೂರು ನಾರಾಯಣ ಶೆಟ್ಟಿಯವರ ಬದುಕು, ಬರಹದ ಬಗ್ಗೆ ತಾರಾನಾಥರು ಬರೆದ ಅಭಿನವ ನಾಗವರ್ಮ, ಪುರಾಣ ಲೋಕದ ಬಾಲರು, ಕಬ್ಬಿನ ಕೋಲು, ಒಂದೊಂದು ನದಿಗೂ ಒಂದೊಂದು ಕತೆ ಎಂಬ ಕೃತಿಗಳು ಪ್ರಕಟವಾಗಿವೆ. ಇವರು ರಚಿಸಿದ ಕನ್ನಡ ಪೌರಾಣಿಕ ಪ್ರಸಂಗಗಳು ಆಸ್ತೀಕ ಪರ್ವ, ಗೋಕರ್ಣ, ಶ್ರೀ ದೇವಶಿಲ್ಪಿ ವಿಶ್ವಕರ್ಮ (ಪ್ರಕಟಿತ), ಶಿಲ್ಪ ಕೌಶಲ (ಅರ್ಥ ಸಹಿತ ಪ್ರಕಟಿತ), ಶ್ರೀರಾಮ ಕಾರುಣ್ಯ, ಮಹಾಋಷಿ ಅಗಸ್ತ್ಯ, ಅಷ್ಟಲಕ್ಷ್ಮೀ, ಸಾರ್ವಭೌಮ ಸ್ವರೋಚಿ ಮೊದಲಾದುವುಗಳು. 

ಕನ್ನಡ ಕಾಲ್ಪನಿಕ ಪ್ರಸಂಗಗಳು – ಪುಷ್ಯ ಪೂರ್ಣಿಮಾ (ಪ್ರಕಟಿತ), ಶ್ವೇತ ಪಂಚಕ, ಶ್ವೇತಾಕ್ಷ ಮಾಲಾ ಮತ್ತು ರಚಿಸಿದ ತುಳು ಪೌರಾಣಿಕ ಪ್ರಸಂಗಗಳು ದೇವೆರೆಗ್ ಅರ್ಪಣೆ (ಪ್ರಕಟಿತ), ಗೋಕರ್ಣೆ. ತುಳು ಕಾಲ್ಪನಿಕ ಪ್ರಸಂಗಗಳು – ಪರಕೆದ ಪಿಂಗಾರ, ಪೂಜೆದ ತುಳಸಿ, ಮಸಣದ ತುಳಸಿ, ಕುಂಕುಮದ ಪರಕೆ. ತುಳು ಪಾಡ್ದನ ಆಧಾರಿತ ಪ್ರಸಂಗಗಳು – ಬ್ರಹ್ಮ ಬೈದ್ಯೆರ್, ಬ್ರಹ್ಮ ಮೊಗೇರೆರ್, ಜಾಗೆದ ಪಂಜುರ್ಲಿ, ರುದ್ರ ಗುಳಿಗೆ, ಅಗೋಳಿ ಮಂಜಣ್ಣೆ, ಮೈಮದ ಮೈಸಂದಾಯೆ, ಮಣ್ಣುದ ಮೋಕೆ. ಅಲ್ಲದೆ ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ ಮತ್ತು ಶ್ರೀ ಅಯ್ಯ ಜಗದ್ಗುರು ಮಹಾತ್ಮೆ ಎಂಬ ಕ್ಷೇತ್ರ ಪುರಾಣ ಪ್ರಸಂಗಗಳನ್ನೂ ಬರೆದಿರುತ್ತಾರೆ. ಅನೇಕ ಪ್ರಸಂಗಗಳ ಆಡಿಯೋ ಮತ್ತು ವೀಡಿಯೋ ಸಿಡಿಗಳ ನಿರ್ಮಾಣವನ್ನೂ ಮಾಡಿರುತ್ತಾರೆ. ರುರು (ಪೌರಾಣಿಕ ನಾಟಕ), ಮೊಗ್ಗಿನ ಜೇನು (ಕವನ ಸಂಕಲನ), ಎಂಬ ಪುಸ್ತಕಗಳನ್ನೂ ಬರೆದ ಶ್ರೀ ತಾರಾನಾಥರು ಕನ್ನಡ ಸಾಹಿತ್ಯ ಲೋಕಕ್ಕೆ ಗುರುತಿಸುವಂತಹಾ ಕೊಡುಗೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಪತ್ನಿ ಡಾ| ಪ್ರೇಮಲತಾ ಮತ್ತು ಪುತ್ರಿ ಕು| ಆಜ್ಞಾ ಸೋಹಮ್ ಜತೆ ಬೆಳ್ಮಣ್ಣು ಶ್ರೀ ದುರ್ಗಾ ನಿವಾಸದಲ್ಲಿ ವಾಸ. ಪತ್ನಿ ಶ್ರೀಮತಿ ಪ್ರೇಮಲತಾ ವೃತ್ತಿಯಲ್ಲಿ ವೈದ್ಯೆ. ಪತಿಯ ಸಾಧನೆಗೆ ಸಹಕಾರಿಯಾಗಿ ಉತ್ಸಾಹವನ್ನು ತುಂಬುತ್ತಾರೆ. ಪುತ್ರಿ  ಕು| ಆಜ್ಞಾ ಸೋಹಮ್ ಪ್ರತಿಭಾವಂತೆ ವಿದ್ಯಾರ್ಥಿನಿ. ಕಲಾವಿದೆಯೂ ಲೇಖಕಿಯೂ ಆಗಿ ಬೆಳೆಯುತ್ತಿದ್ದಾರೆ. ಛಲದ ಬದುಕನ್ನು ನಡೆಸಿ ಸಾಧಕರಾಗಿ ಕಾಣಿಸಿಕೊಂಡ ಶ್ರೀ ತಾರಾನಾಥ ವರ್ಕಾಡಿ ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments