ಪ್ರಾಮಾಣಿಕವಾಗಿ ಹೇಳುವುದಾದರೆ ರಂಗದ ಬಣ್ಣದ ಮಾತುಗಾರಿಕೆಯೇ ಬೇರೆ. ವಾಸ್ತವದ ಬದುಕೇ ಬೇರೆ. ಎರಡೂ ಕೆಲವೊಮ್ಮೆ ವಿರುದ್ಧ ಧ್ರುವಗಳು. ಎರಡರಲ್ಲೂ ವೈರುಧ್ಯವನ್ನು ಕಾಣಬಹುದು. ಬದುಕು ಎನ್ನುವದು ಹಾಗೆಯೇ. ಕೆಲವೊಮ್ಮೆ ನಾವು ನಮ್ಮ ಕರ್ತವ್ಯ ಪಾಲನೆಯಲ್ಲಿಯೋ ಅಥವಾ ಮಾಡುವ ಕೆಲಸದ ಶ್ರದ್ಧೆಯಲ್ಲಿಯೋ ನಮ್ಮತನವನ್ನು ಮರೆಮಾಚಿ ಬೇರೊಂದು ಮುಖವಾಡವನ್ನು ಹಾಕಬೇಕಾಗುತ್ತದೆ. ಅದು ಕೆಲಸದ ಮೇಲಿನ ಶ್ರದ್ಧೆ ಎಂದೇ ಪರಗಣಿಸಲ್ಪಡುತ್ತದೆ. ಮಾರಾಟಗಾರನೊಬ್ಬ ತನ್ನ ಕೌಶಲವನ್ನು ತೋರ್ಪಡಿಸುತ್ತಾ ಮಾರುವ ವಸ್ತುವಿನಲ್ಲಿ ಉತ್ಪ್ರೇಕ್ಷೆಯ ಗುಣಗಳನ್ನು ಎತ್ತಿ ತೋರಿಸುತ್ತಾ ಗ್ರಾಹಕನ ಮನಸ್ಸನ್ನು ವಶೀಕರಿಸಬೇಕಾಗುತ್ತದೆ. ಇದು ಮಾರಾಟದ ಕೌಶಲ ಅಥವಾ Salesmanship ಎಂದೇ ಕರೆಯಲ್ಪಡುತ್ತದೆ ಮತ್ತು ಆತನ ಪ್ರಶಂಸೆ ಮತ್ತು ಉನ್ನತಿಗೂ ಕಾರಣವಾಗುತ್ತದೆ.
ಆದುದರಿಂದ ಎಷ್ಟೋ ಜನರು ಎಷ್ಟೋ ಬಾರಿ ಸಾಮಾಜಿಕ ಬದುಕಿನಲ್ಲಿ ವ್ಯವಹರಿಸುವಾಗ ಇರುವ ಅವರ ಸ್ವಭಾವಕ್ಕೂ ವೈಯುಕ್ತಿಕ ಬದುಕಿನ ನಿಜಸ್ಥಿತಿಗೂ ಗಾವುದಗಳ ಅಂತರವಿರುತ್ತದೆ. ಹೆಚ್ಚಿನ ಕಲಾವಿದರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಭರತನಾಟ್ಯ ಕಲಾವಿದೆಯ ಶೃಂಗಾರ ಮನೆಯಲ್ಲಿ ಮನಮೆಚ್ಚಿದವನ ಜೊತೆ ಕಾಣಸಿಗಬೇಕೆಂಬ ನಿಯಮವೇನೂ ಇಲ್ಲ. ರೌದ್ರ ರಸದಲ್ಲಿ ಪರಿಣತಮತಿಗಳಾದ ಪುರುಷರು ಮನೆಯಲ್ಲಿ ಶಾಂತರಸದಲ್ಲಿ ಇರಬಹುದು. ಕರುಣಾರಸದಲ್ಲಿ ಉತ್ತಮ ಅಭಿನಯ ನೀಡುವವರು ಇತರರ ಮುಂದೆ ಮಂದಹಾಸದಲ್ಲಿ ವರ್ತಿಸುತ್ತಿರಬಹುದು. ಎಷ್ಟೋ ರೌದ್ರರಸದ ಖಳನಾಯಕರು ಮೃದು ಮನಸ್ಸಿನ ಸಂಭಾವಿತರು ಎಂದು ನಮಗೆ ಹಲವು ನಟರ ಉದಾಹರಣೆಗಳಿಂದ ತಿಳಿದುಬರುತ್ತದೆ.
(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )
ಇನ್ನು ಸುತ್ತು ಬಳಸಿ ಮಾತು ಬೇಡ. ನಾನೀಗ ಯಕ್ಷಗಾನದ ವಿಷಯದತ್ತಲೇ ಬರಬೇಕು. ಯಕ್ಷಗಾನ ರಂಗದಲ್ಲಿ ವಾಗ್ವೈಭವದಿಂದ ರಂಜಿಸುವ ಎಷ್ಟೋ ನಟರು ನಿಜ ಜೀವನದಲ್ಲಿ ಮೃದು ಹಾಗೂ ಮಿತಭಾಷಿಗಳಾಗಿರುತ್ತಾರೆ ಎಂಬುದು ಆಶ್ಚರ್ಯವಾದರೂ ಸತ್ಯ. ಇದಕ್ಕೆ ಕೆಲವು ಮಂದಿ ಕಲಾವಿದರು ನಮ್ಮ ಎದುರಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ. ನಾವೇನೂ ತುಂಬಾ ಹಿಂದಕ್ಕೆ ಹೋಗುವುದು ಬೇಡ. ವರ್ತಮಾನ ಕಾಲದಲ್ಲೇ ಒಂದು ಸುತ್ತು ಹಾಕಿದರೆ ನಮಗೆ ಮೊದಲು ಕಾಣಸಿಕ್ಕುವುದು ಕೆ.ಗೋವಿಂದ ಭಟ್. ರಂಗದಿಂದ ಹೊರಗೆ ಅವರಿಂದ ಅತಿಯಾದ ಮಾತನ್ನು ನಿರೀಕ್ಷಿಸುವುದೇ ಬೇಡ. ಗುರುವಿನಂತೆ ಶಿಷ್ಯ ಎಂಬ ಮಾತು ಈ ವಿಷಯದಲ್ಲಿ ಕೂಡಾ ನಿಜ. ಅವರಷ್ಟಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಅದೇ ಸಾಲಿನಲ್ಲಿ ನಿಲ್ಲುವವರು ಸುಣ್ಣಂಬಳ ವಿಶ್ವೇಶ್ವರ ಭಟ್.
(ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)
ಹೌದು ನಾನೀಗ ಬರೆಯ ಹೊರಟದ್ದು ಅವರ ಕುರಿತೇ. ಆದರೆ ಅವರ ವೈಯುಕ್ತಿಕ ಸ್ವಭಾವದ ಕುರಿತು ಬರೆಯುವುದು ನನ್ನ ಉದ್ದೇಶವಲ್ಲ. ಆದರೆ ಅವರ ಸ್ವಭಾವದಲ್ಲಿರುವ ಧನಾತ್ಮಕ ಅಂಶಗಳನ್ನು ನಾನು ಕಂಡ ಹಾಗೆ ಹೇಳಿದರೆ ಅದರಲ್ಲಿ ಅವರು ಅನ್ಯಥಾ ಭಾವಿಸಲಾರರು ಎಂದೇ ಭಾವಿಸುತ್ತೇನೆ. ಸುಣ್ಣಂಬಳ ವಿಶ್ವೇಶ್ವರ ಭಟ್ ರಂಗದಲ್ಲಿ ಮಾತುಗಾರ. ಹಾಗೆಂದು ಅವರಿಗೆ ಒಂದು ಪದ್ಯಕ್ಕೆ ಇಷ್ಟೇ ಮಾತನಾಡಲೇ ಬೇಕೆಂಬ ಚಟವೂ ಇಲ್ಲ. ಆದರೆ ತಾಳಮದ್ದಳೆಯ ವೇದಿಕೆಯಲ್ಲಿ ಅವರು ಹರಿಸುವ ವಿದ್ವತ್ಪೂರ್ಣ ಮಾತಿನ ಹರಿವಿನ ಒಂದು ಪಾಲೂ ನಿಜಜೀವನದಲ್ಲಿ ನಮಗೆ ಕಾಣಲು ಸಿಗುವುದು ದುರ್ಲಭ. ಅಗತ್ಯಕ್ಕೆ ಬೇಕಾದಷ್ಟೇ ಮಾತು.
ಮಿತಭಾಷಿಯೇ ಇರಬಹುದೇನೋ ಎಂದು ಯಾರಿಗಾದರೂ ಅನಿಸುವಷ್ಟೇ ಅವರು ಮಾತನಾಡುತ್ತಾರೆ. ಆದರೆ ಇದು ಅವರ ಒಳ್ಳೆಯ ಸ್ವಭಾವ ಎಂದೇ ನಾನು ಭಾವಿಸುತ್ತೇನೆ. ರಂಗದ ಹೊರಗೆ ಮಿತಭಾಷಿಯಾದರೂ ಅವರು ತೂಕದ ಮಾತುಗಳನ್ನೇ ಆಡುತ್ತಾರೆ. ನನಗೆ ಸುಣ್ಣಂಬಳ ವಿಶ್ವೇಶ್ವರ ಭಟ್ ಆತ್ಮೀಯರು ಹೌದಾದರೂ ನಿರರ್ಗಳವಾಗಿ ವಿಷಯಗಳನ್ನು ಹಂಚಿಕೊಳ್ಳುವಷ್ಟೇನಲ್ಲ. ಆದರೂ ಅವರ ವಿಷಯಗಳನ್ನು ನಾನು ಕೇಳಿ ಬಲ್ಲೆ. ವೇಷಧಾರಿಯಾಗಿ ವೃತ್ತಿ ಬದುಕು ಆರಂಭಿಸಿದ ಸುಣ್ಣಂಬಳರು ವೃತ್ತಿ ಬದುಕಿನಲ್ಲಿ ಸ್ವಪ್ರಯತ್ನದಿಂದ ಕಂಡ ಉನ್ನತಿಯ ಕತೆ ಬಹಳ ರೋಚಕ. ತಾನೆಂದೂ ಪ್ರಸಿದ್ಧಿಗೆ ಬೀಗದೆ ಬಾಗುವ ಗುಣವನ್ನು ಹೊಂದಿದ ಅವರು ತನ್ನ ಈ ಗುಣದಿಂದಲೇ ಸರ್ವರ ಮೆಚ್ಚುಗೆಗೂ ಮಾತ್ರವಲ್ಲದೆ ತನ್ನದೇ ಏಳಿಗೆಗೂ ಕಾರಣವಾದರು
.
ಯಕ್ಷಗಾನ ವೇಷಧಾರಿಯಾಗಿಯೂ ತಾಳಮದ್ದಳೆ ಅರ್ಥಧಾರಿಯಾಗಿಯೂ ಎರಡೂ ವಿಭಾಗದಲ್ಲಿ ಈ ರೀತಿಯ ಸಾಧನೆ ಮಾಡಿದ ಕಲಾವಿದರು ಅಪರೂಪ. ನಾಟ್ಯದಲ್ಲಿ, ನಟನೆಯಲ್ಲಿ ಪರಿಪಕ್ವತೆಯನ್ನು ಹೊಂದಿದ ಯಕ್ಷಗಾನ ಕಲಾವಿದನೊಬ್ಬ ತಾಳಮದ್ದಳೆ ಕ್ಷೇತ್ರದಲ್ಲಿಯೂ ಪ್ರಸಿದ್ಧಿಯನ್ನು ಪಡೆದದ್ದು ಮುಂದಕ್ಕೆ ಇತಿಹಾಸವನ್ನು ಸೃಷ್ಟಿಸಿದರೆ ಅಚ್ಚರಿಯಿಲ್ಲ. ಕೆ. ಗೋವಿಂದ ಭಟ್, ವಾಸುದೇವ ಸಾಮಗ ಮೊದಲಾದವರು ಈ ಸಾಲಿನಲ್ಲಿ ಮೊದಲು ಗುರುತಿಸಲ್ಪಡುತ್ತಾರಾದರೂ ಸುಣ್ಣಂಬಳರು ಇನ್ನೂ ಹಲವು ವರ್ಷಗಳ ಕಾಲ ಕಲಾವ್ಯವಸಾಯವನ್ನು ಮಾಡುವ ಅವಕಾಶವನ್ನು ಹೊಂದಿರುವುದು ಅವರಿಗೆ ಒಂದು ಪ್ಲಸ್ ಪಾಯಿಂಟ್.
ವಿಶ್ವೇಶ್ವರ ಭಟ್ ಸಾಧಾರಣವಾಗಿ ಸನ್ಮಾನ ಪ್ರಶಸ್ತಿಗಳನ್ನು ಸ್ವೀಕರಿಸಲು ಹಿಂದೇಟು ಹಾಕುವ ಸ್ವಭಾವದವರು. ಕೆಲವೊಮ್ಮೆ ಆತ್ಮೀಯರ ಒತ್ತಡಕ್ಕೆ, ಒತ್ತಾಯಕ್ಕೆ ಮಣಿದು ಸ್ವೀಕರಿಸಿದ್ದನ್ನು ಬಿಟ್ಟರೆ ಅವರು ಅದರಲ್ಲಿ ಆಸಕ್ತರಲ್ಲ. ಸ್ವ ಪ್ರತಿಷ್ಠೆಗಾಗಿ ಕೆಲವರು ಸನ್ಮಾನ ಮಾಡಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ ನಮಗೆ ಇಷ್ಟವಾಗುವುದು ಇದೇ ಕಾರಣಕ್ಕೆ. ತಾನು ವೇಷಧಾರಿಯಾಗಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿ ವೇದಿಕೆಯೇರಬೇಕೆಂಬ ಹಂಬಲ ಬಿಟ್ಟರೆ ಅವರಲ್ಲಿ ಬೇರೇನೂ ಇಲ್ಲ. ವೇದಿಕೆಯಲ್ಲಿ ತನಗೂ ಒಂದು ಕುರ್ಚಿ ಹಾಕುವುದನ್ನು ವಿಶ್ವಣ್ಣ ನಯವಾಗಿ ತಿರಸ್ಕರಿಸುತ್ತಾರೆ.
ಇದನ್ನೂ ಓದಿ: ಆರ್.ಕೆ.ಭಟ್ ಕೊಂಗೋಟ್ ಮತ್ತು ಉಮಾ ಆರ್.ಕೆ.ಭಟ್ ದಂಪತಿಗಳ ನಿಸ್ವಾರ್ಥ ಕಲಾಸೇವೆ (ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಷ್ – ಭಾಗ 1)
ನಾನೊಮ್ಮೆ ಅವರ ಬಗ್ಗೆ ಲೇಖನ ಬರೆಯುವ ಉದ್ದೇಶದಿಂದ ಸಂಪರ್ಕಿಸಿದ್ದೆ. ಆಗಲೂ ಅವರು ನಯವಾಗಿ ತಿರಸ್ಕರಿಸಿದ್ದರು. ನನಗಿಂತ ಹೆಚ್ಚಿನ ಸಾಧನೆ ಮಾಡಿದವರು ಈ ರಂಗದಲ್ಲಿದ್ದಾರೆ. ಅವರ ಬಗ್ಗೆ ಮೊದಲು ಬರೆಯುವುದು ಉತ್ತಮ ಎಂದು ನನಗೆ ಸಲಹೆಯನ್ನೂ ಕೊಟ್ಟಿದ್ದರು. ಅವರ ಸಲಹೆ ಸರಿ ಎಂದು ಕಂಡಿತ್ತು. ಆದರೂ ನಾನೀಗ ಅವರ ಒಪ್ಪಿಗೆ ಇಲ್ಲದಿದ್ದರೂ ಲೇಖಕನ ಹಕ್ಕಿನ ನೆಲೆಯಲ್ಲಿ ಅವರ ಬಗ್ಗೆ ಬರೆಯುತ್ತಿದ್ದೇನೆ. ಸುಣ್ಣಂಬಳರು ತಮ್ಮ ಪ್ರಾಮಾಣಿಕತೆಗೂ ಹೆಸರುವಾಸಿ. ಇಲ್ಲದಿದ್ದರೆ 6ರ ಸಂಖ್ಯೆಯಲ್ಲಿರುವ ಕಟೀಲು ಮೇಳಗಳ ಜವಾಬ್ದಾರಿಯುತ ಸ್ಥಾನದಲ್ಲಿ ಇಂದು ದೀರ್ಘ ಸಮಯದಿಂದ ಕಾರ್ಯನಿರ್ವಹಿಸುತ್ತಿರಲು ಸಾಧ್ಯವಾಗುತ್ತಿರಲಿಲ್ಲ. ಯಾವತ್ತೂ ತನ್ನ ಸ್ಥಾನವನ್ನು ಅವರು ದುರುಪಯೋಗ ಮಾಡಿಕೊಂಡದ್ದಿಲ್ಲ ಎಂಬ ಮಾತನ್ನು ತಿಳಿದಿದ್ದೇನೆ. ತನ್ನ ಪ್ರಭಾವವನ್ನು ಉಪಯೋಗಿಸಿ ಅವರು ಯಾವುದೇ ಸ್ವಜನಪಕ್ಷಪಾತದಂತಹಾ ಕಾರ್ಯಗಳಿಗೆ ಮನಮಾಡಿದ್ದಿಲ್ಲ. ಅಧಿಕಾರದ ದುರುಪಯೋಗ ಮಾಡದೆ ತನ್ನ ಹುದ್ದೆಗೆ ಗೌರವ ಘನತೆಯನ್ನು ತಂದುಕೊಟ್ಟಿದ್ದಾರೆ.
ಎಷ್ಟೇ ಪ್ರಾಮಾಣಿಕರಾಗಿದ್ದರೂ ಉನ್ನತ ಸ್ಥಾನದಲ್ಲಿದ್ದವರಿಗೆ ವಿವಾದ ಸುತ್ತಿಕೊಳ್ಳುವುದು ಮತ್ತು ಕಾಲೆಳೆಯುವವರು ಹೆಚ್ಚು. ಆದರೆ ಸುಣ್ಣಂಬಳ ವಿಶ್ವೇಶ್ವರ ಭಟ್ ವಿವಾದಗಳಿಂದ ದೂರ ಇರಲು ಪ್ರಯತ್ನಿಸುವುದೇ ಅವರ ಮೃದು ಮತ್ತು ಮಿತಭಾಷಿತ್ವಕ್ಕೆ ಕಾರಣವಾಗಿರಬಹುದು. ಇಂದು ತಾಳಮದ್ದಳೆ ರಂಗದಲ್ಲಿಯೂ, ವೇಷಧಾರಿಯಾಗಿಯೂ ಅಪ್ರತಿಮ ಸಾಧನೆಯನ್ನು ಮಾಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳನ್ನು ಹುಟ್ಟುಹಾಕುವ ಮಂದಿಯ ನಡುವೆ ಅವರದೇ ಅಭಿಮಾನೀ ವರ್ಗ ತನ್ನಿಂತಾನೇ ಹುಟ್ಟಿಕೊಂಡಿದೆ. ಅವರ ಈ ಯಕ್ಷಲೋಕದ ಪಯಣ ಇನ್ನೂ ನಿರಂತರವಾಗಿ ಮುಂದುವರಿಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಚೆಗೆ ನಾನು ಹೆಚ್ಚು ಇಷ್ಟಪಡುವ ಶೇಣಿ ಗೋಪಾಲಕೃಷ್ಣ ಭಟ್ಟರ ಭೀಮನ ಪಾತ್ರಧಾರಿಯ ಎದುರು ಹಿಡಿಂಬೆಯಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಅರ್ಥ ಹೇಳಿದ ವೀಡಿಯೋ ಒಂದು ಯು ಟ್ಯೂಬ್ ಚಾನೆಲ್ ನಲ್ಲಿ ನೋಡಲು ಸಿಕ್ಕಿತು. ಯಕ್ಷಗಾನದ ದಂತಕತೆಯ ಎದುರು ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥಧಾರಿ. ಬಹಳ ಸೊಗಸಾಗಿದೆ. ಸುಕೇಶ್ ಭಟ್ ಎನ್ನುವವರ ಯು ಟ್ಯೂಬ್ ಚಾನೆಲ್ ಅದು. ಅದರ ಲಿಂಕ್ ಕೆಳಗಡೆ ಇದೆ. ಆಸಕ್ತರು ನೋಡಿ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions