Wednesday, January 22, 2025
Homeಕೃಷಿಮುಗಿಯದ ಪಯಣವಾಗಿದ್ದರೂ ಮತ್ತೆ ಆರಂಭ ಯಾವಾಗ?!!!

ಮುಗಿಯದ ಪಯಣವಾಗಿದ್ದರೂ ಮತ್ತೆ ಆರಂಭ ಯಾವಾಗ?!!!

ವರ್ತಮಾನದ ವಿಷಯ ಬೇರೆಯೇ ಇರಬಹುದು. ಅದು ಲೋಕಕ್ಕೆ ಎರಗಿದ ಕಂಟಕ. ಆದರೆ ಮೊದಲು ಹಾಗೆ ಹೇಳುವ ಹಾಗಿರಲಿಲ್ಲ. ಮೊದಲೆಲ್ಲಾ ಪತ್ತನಾಜೆ ಅಥವಾ ಹತ್ತನಾವಧಿಗೆ ಯಕ್ಷಗಾನದ ಪ್ರದರ್ಶನಗಳು ನಿಂತೇ ಬಿಡುತ್ತಿದ್ದುವು. ಈಗ ಒಂದೆರಡು ದಿನಗಳ ನಂತರ ಪುನಃ ತಿರುಗಾಟ, ಪ್ರದರ್ಶನಗಳು ಆರಂಭವಾಗುತ್ತವೆ. ಆದ್ದರಿಂದ ಈ ಹತ್ತನಾವಧಿ ಎನ್ನುವುದು ಈಗ ಕೇವಲ ತಿರುಗಾಟದ ಮೇಳಗಳು ಪ್ರದರ್ಶನ ನಿಲ್ಲಿಸುವ ಅಥವಾ ಗೆಜ್ಜೆ ಬಿಚ್ಚುವ ಒಂದು ಸಾಂಪ್ರದಾಯಿಕ ಪ್ರಕ್ರಿಯೆಯಾಗಿ ಉಳಿದುಬಿಟ್ಟಿದೆ. ಏಕೆಂದರೆ ಪುನಃ ಮಳೆಗಾಲದ ತಿರುಗಾಟಕ್ಕೆ ಹೊರಡಬೇಕಲ್ಲ.
ಹಿರಿಯರಿಂದ ನಾವು ಕೇಳಿ ತಿಳಿದ ಪ್ರಕಾರ ಮಳೆಗಾಲದ ಪ್ರದರ್ಶನಗಳು ಎಂಬುದು ಈ ರೀತಿಯಾಗಿ ಬೆಳವಣಿಗೆಯನ್ನು ಕಂಡುದು ಹತ್ತಾರು ವರ್ಷಗಳಿಂದೀಚೆಗೆ. ಸುಮಾರು ಕೆಲವು ದಶಕಗಳಷ್ಟು ಹಿಂದಕ್ಕೆ ಹೋದರೆ ಮಳೆಗಾಲದ ಪ್ರದರ್ಶನಗಳು ಬಹಳ ಅಪರೂಪವಾಗಿದ್ದುವು. ಅಥವಾ ಕೇವಲ ಕೆಲವೇ ಕೆಲವು ತಾಳಮದ್ದಳೆಗಳಿಗೆ ಮಳೆಗಾಲದ ಯಕ್ಷಗಾನ ಸೀಮಿತವಾಗಿತ್ತು. ಆಗೆಲ್ಲಾ ಹಾಲ್‍ಗಳು, ಕಲ್ಯಾಣ ಮಂಟಪಗಳು ಬಹಳ ವಿರಳ. ತಾಳಮದ್ದಳೆ ಕೂಟಗಳು ಶಾಲೆಗಳಲ್ಲಿ ರಜಾದಿನಗಳಲ್ಲಿ ನಡೆಯುತ್ತಿದ್ದುವು. ಹೆಚ್ಚಿನೆಲ್ಲಾ ಯಕ್ಷಗಾನ ಚಟುವಟಿಕೆಗಳಿಗೆ ಶಾಲೆಗಳೇ ಆಶ್ರಯತಾಣಗಳಾಗಿದ್ದುವು. ಅದೂ ರಜಾದಿನಗಳಲ್ಲಿ ಮಾತ್ರ. ಏಕೆಂದರೆ ಹಗಲು ಶಾಲೆಯನ್ನು ನಡೆಸಬೇಕಲ್ಲ…!
ಹತ್ತನಾವಧಿ ಮುಗಿದು ಮಳೆಗಾಲ ಬಂತೆಂದರೆ ಹೆಚ್ಚಿನೆಲ್ಲಾ ಕಲಾವಿದರು ಉದ್ಯೋಗವನ್ನಾಗಿ ವಿವಿಧ ವೃತ್ತಿಗಳನ್ನು ಅವಲಂಬಿಸುತ್ತಿದ್ದರು. ಕೃಷಿ ಚಟುವಟಿಕೆಗಳು, ಕೂಲಿ ಕೆಲಸ, ವಿವಿಧ ಬಗೆಯ ಕಾರ್ಮಿಕ ವೃತ್ತಿಗಳು ಹೀಗೆ ಕಲಾವಿದರು ಜೀವನೋಪಾಯಕ್ಕಾಗಿ ವಿವಿಧ ಬಗೆಯ ಕಾಯಕಗಳಲ್ಲಿ ತೊಡಗಿರುತ್ತಿದ್ದರು. ಹೆಚ್ಚಿನ ಕಲಾವಿದರು ಆರ್ಥಿಕವಾಗಿ ಸುದೃಢ ಸ್ಥಿತಿಯಲ್ಲಿ ಇಲ್ಲದಿದ್ದುದೇ ಇದಕ್ಕೆ ಕಾರಣವಿರಬಹುದು.
ಕಾಲ ಸರಿಯುತ್ತಾ ಬಂತು. ವರ್ಷಗಳು ಉರುಳುತ್ತಾ ಬಂದಂತೆ ಆದ ಬದಲಾವಣೆಗಳು ಕಲಾವಿದರಿಗೆ ಪೂರಕವೇ ಆಯಿತು. ಮಳೆಗಾಲದಲ್ಲಿ ಯಕ್ಷಗಾನ ಸಂಘಟಕರು ಅಲ್ಲಲ್ಲಿ ‘ಪುರಭವನ’ಗಳಲ್ಲಿ ಆಟವನ್ನು ಸಂಯೋಜಿಸ ತೊಡಗಿದರು. ತಾಳಮದ್ದಳೆಗಲ್ಲದೆ ಯಕ್ಷಗಾನ ಪ್ರದರ್ಶನಗಳೂ ನಡೆಯಲು ಆರಂಭವಾಯಿತು. ಜನರ ಜೀವನಕ್ರಮದಲ್ಲಿ ಆದ ಬದಲಾವಣೆಗಳಿಂದಾಗಿ ಅನೇಕ ಅನುಕೂಲತೆಗಳು ಉಂಟಾದುವು. ಎಲ್ಲವೂ ವ್ಯವಹಾರಮಯವಾದಾಗ ಕಲ್ಯಾಣ ಮಂಟಪಗಳು, ಹಾಲ್‍ಗಳು ಒಂದೊಂದಾಗಿ ತಲೆಯೆತ್ತಿಕೊಂಡುವು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಹ ಹಾಲ್‍ಗಳು, ಸಭಾಂಗಣಗಳು ಬಾಡಿಗೆಗೆ ಸಿಗಲು ಸುರುವಾಯಿತು. ಈ ನಿಟ್ಟಿನಲ್ಲಿ ಯಕ್ಷಗಾನದ ಮಳೆಗಾಲದ ಸಂಘಟಕ, ಸಂಯೋಜಕರಿಗೆ ಭಾರೀ ಅನುಕೂಲವಾಯಿತು. ಇದರಿಂದಾಗಿ ಮಳೆಗಾಲದಲ್ಲಿಯೂ ಶುಲ್ಕ ಸಹಿತ ಮತ್ತು ಶುಲ್ಕ ರಹಿತ ಯಕ್ಷಗಾನ ಪ್ರದರ್ಶನಗಳು ನಡೆಯಲು ಪ್ರಾರಂಭವಾಯಿತು.
ಈಗೀಗ ಯಕ್ಷಗಾನದ ಗೀಳು ಅಥವಾ ಕ್ರೇಜ್ ಎಲ್ಲಿಯವರೆಗೆ ಮುಟ್ಟಿದೆಯೆಂದರೆ ಯಾವುದೇ ಸಮಾರಂಭವಿರಲಿ ಅಲ್ಲೊಂದು ಆಟ ಅಥವಾ ಕೂಟವಿರಲೇಬೇಕೆಂಬ ಅಲಿಖಿತ ನಿಯಮಕ್ಕೆ ಜನರು ಕಟ್ಟುಬಿದ್ದಂತಹಾ ಪರಿಸ್ಥಿತಿಯಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಜಾತ್ರೆಯೋ, ಹೋಮ, ಹವನಗಳೋ, ಮದುವೆ, ಉಪನಯನ, ವಾರ್ಷಿಕೋತ್ಸವಗಳು ಆಟಕೂಟಗಳಿಲ್ಲದೆ ಅಪೂರ್ಣವೋ ಎಂಬಂತೆ ಅನಿಸತೊಡಗಿವೆ. ಅಷ್ಟರಮಟ್ಟಿಗೆ ಯಕ್ಷಗಾನವೆಂಬ ಚುಂಬಕ ಶಕ್ತಿಯ ಕಲೆಯ ಗೀಳು ನಮ್ಮಲ್ಲಿ ಅಂಟಿಕೊಂಡಿದೆ. ಇದರಿಂದ ಕಲೆಗೆ ಲಾಭವೇ ಆಗಲಿದೆ.
ಜೂನ್ ತಿಂಗಳ ವರ್ಷಧಾರೆಯ ಆರಂಭದ ದಿನಗಳೂ ಸೇರಿದಂತೆ ನಡೆಯುವ ಯಕ್ಷಗಾನ ಪ್ರದರ್ಶನಗಳು, ಆಮೇಲೆ ಬರುವ ವಿವಿಧ ಹಬ್ಬ ಹರಿದಿನಗಳಾದ ಚೌತಿ, ದೀಪಾವಳಿ, ನವರಾತ್ರಿಗಳೇ ಮೊದಲಾದ ದಿನಗಳಲ್ಲಿ ನಡೆಯುವ ಅಸಂಖ್ಯಾತ ಯಕ್ಷಗಾನ ಕಾರ್ಯಕ್ರಮಗಳು ಕಲಾವಿದರಿಗೆ ತಮ್ಮ ಭವಿಷ್ಯಗಳನ್ನು ರೂಪಿಸಿಕೊಳ್ಳಲು ಮತ್ತು ತಮ್ಮ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಸಹಕಾರಿಯಾಗಿವೆ.
ಕಲಾವಿದರೊಬ್ಬರು ಹೇಳುವ ಪ್ರಕಾರ ವಿಶೇಷ ದಿನಗಳಲ್ಲಿ ಅಂದರೆ ಚೌತಿ, ದೀಪಾವಳಿ, ನವರಾತ್ರಿಗಳಲ್ಲಿ ಅವರು ದಿನವೊಂದಕ್ಕೆ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅಪರೂಪದ ಘಟನೆಗಳೂ ಉಂಟಂತೆ. ಆದರೆ ಇಂತಹ ಸನ್ನಿವೇಶಗಳು ನಿರಂತರವಲ್ಲ. ಆದರೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅನೇಕ ಮಂದಿ ಕಲಾವಿದರಿದ್ದಾರೆ. ಇದರಿಂದಾಗಿ ಅವರ ಆರ್ಥಿಕ ಮಟ್ಟ ಸುಧಾರಿಸಿದೆ. ಆದರೆ ಅವರ ಆರೋಗ್ಯದ ಮಟ್ಟ ಹಾಗೂ ಪ್ರದರ್ಶನದ ಗುಣಮಟ್ಟವನ್ನು ಅವರು ಕಾಯ್ದುಕೊಳ್ಳುವ ಅವಶ್ಯಕತೆಯಿದೆ ಎಂದು ಆ ಕಲಾವಿದರು ಎಚ್ಚರಿಸುತ್ತಾರೆ. ಕೆಲವೊಂದು ಮೂಲಗಳ ಪ್ರಕಾರ ಕೆಲವು ಕಲಾವಿದರು ಮೇಳದ ತಿರುಗಾಟಕ್ಕಿಂತ ಮಳೆಗಾಲದ ತಿರುಗಾಟ ಹಾಗೂ ಕಾರ್ಯಕ್ರಮಗಳನ್ನು ಇಷ್ಟಪಡುತ್ತಾರೆ. ಮೇಳದ ಆರು ತಿಂಗಳ ತಿರುಗಾಟದ ಸಂಬಳ ಅಥವಾ ಸಂಪಾದನೆಗಿಂತ ಉಳಿದ ಆರು ತಿಂಗಳಿನ ಕಾರ್ಯಕ್ರಮಗಳಲ್ಲಿ ಕೆಲವು ಮಂದಿ ಕಲಾವಿದರು ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ. ಇದು ಮೆಚ್ಚತಕ್ಕ ಸಂಗತಿ. ಕಲಾವಿದರು ಆರ್ಥಿಕವಾಗಿ ಸದೃಢರಾಗಿರಬೇಕಾದುದು ಕೂಡಾ ಅಗತ್ಯ.
ಹಿಂದಿನ ಕಾಲದ ಮಳೆಗಾಲದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕಲಾವಿದರ ಸಂಪಾದನೆಯನ್ನೂ ಈಗಿನ ಕಲಾವಿದರ ಮಳೆಗಾಲದ ಸಂಪಾದನೆಯನ್ನು ತೂಗಿ ನೋಡಿದರೆ ಆದ ಬೆಳವಣಿಗೆಯು ನಮಗೆ ಅಚ್ಚರಿಯನ್ನು ಉಂಟುಮಾಡುತ್ತದೆ.
ಆದ್ದರಿಂದ ಮೊದಲೆಲ್ಲಾ ಪತ್ತನಾಜೆ ಎಂಬುದು ಕಲಾವಿದರ ಜೀವನಕ್ಕೆ ಒಂದು break ಆಗಿರುತ್ತಿತ್ತು. ಈಗ ಹಾಗಲ್ಲ. ಪತ್ತನಾಜೆ ಕಳೆದ ಕೂಡಲೇ ಕಲಾವಿದರು ತಮ್ಮ ಎರಡನೇ ಇನ್ನಿಂಗ್ಸ್‍ಗೆ accelerator ಕೊಡುವ ಸಮಯ.
ಆದರೆ ಸದ್ಯದ ಪರಿಸ್ಥಿತಿ ಭಿನ್ನವಾಗಿದೆ. ಕಲಾವಿದರು ಪ್ರದರ್ಶನಗಳಿಲ್ಲದೆ ನಿರಾಶರಾಗಿ ಕುಳಿತಿದ್ದಾರೆ. ಮಳೆಗಾಲದಲ್ಲಂತೂ ಕೊರೋನಾ ನಿಯಮಾವಳಿಗಳಿಂದಾಗಿ ಮತ್ತು ಜನರ ಹಿತ ಕಾಯುವ ಬದ್ಧತೆಯಿರಬೇಕಾದ ಕಾರಣದಿಂದ ಪ್ರದರ್ಶನಗಳಿಲ್ಲ ಎಂಬುದು ನಿಜ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ಬಾರಿಯ ಮೇಳಗಳ ತಿರುಗಾಟ ನಡೆಯುವುದು ಅಷ್ಟು ಸುಲಭದ ವಿಚಾರವಲ್ಲ. ಇದರಿಂದ ಕಲಾವಿದರಿಗೆ ಆರ್ಥಿಕ ಸಮಸ್ಯೆಯ ಜೊತೆಗೆ ಚಿಂತೆಯ ಕಾರ್ಮೋಡ ಕವಿಯಲಿದೆ.

ಇದು ಕೇವಲ ಯಕ್ಷಗಾನ ಕಲಾವಿದರಿಗೆ ಮಾತ್ರ ಸೀಮಿತವಾದ ವಿಚಾರವಲ್ಲ. ಸಂಗೀತ, ನಾಟಕ, ಸಿನಿಮಾ, ಭಾರತನಾಟ್ಯವೇ ಮೊದಲಾದ ಭಾರತದ ಎಲ್ಲಾ ರಂಗ ಕಲೆಗಳ ಎಲ್ಲ ಸಾಂಸ್ಕೃತಿಕ ಸಮಾರಂಭಗಳನ್ನೂ ನಡೆಸುವುದು ಸದ್ಯದ ಮಟ್ಟಿಗೆ ದುರ್ಲಭವೆಂದೇ ಹೇಳಬಹುದು. ಆದುದರಿಂದ ಭಾರತದ ಎಲ್ಲ ರಂಗೇಕಲೆಗಳ ಕಲಾವಿದರೂ ಒಂದೇ ರೀತಿಯಲ್ಲಿ ಇದರಿಂದ ಭಾದಿತರಾಗಿದ್ದಾರೆ . ಅವರ ಯೋಚನೆಯಲ್ಲಿ ಒಂದೇ ಒಂದು ಪ್ರಶ್ನೆ ಮೂಡುತ್ತಿರಬಹುದು. ನಮ್ಮದು ಮುಗಿಯದ ಪಯಣವಾಗಿದ್ದರೂ ಮತ್ತೆ ಆರಂಭ ಯಾವಾಗ?!!!

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments