ಓದಿದ್ದು ಕನ್ನಡ ಎಂ. ಎ , ಸ್ನಾತಕೋತ್ತರ ಪದವಿ. ವೃತ್ತಿ ಆರಂಭಿಸಿದ್ದು ಪತ್ರಕರ್ತನಾಗಿ. ಆಮೇಲೆ ವೃತ್ತಿಯಲ್ಲಿ ಔನ್ನತ್ಯವನ್ನು ಕಂಡದ್ದು ಸರಕಾರೀ ಕಾಲೇಜಿನ ಉಪನ್ಯಾಸಕನಾಗಿ. ಆದರೆ ಇದು ಅಷ್ಟಕ್ಕೇ ನಿಲ್ಲುವುದಿಲ್ಲ. ಪ್ರಮುಖ ಪತ್ರಿಕೆಯ ಅಂಕಣಕಾರರಾಗಿ, ಸಾಹಿತಿಯಾಗಿ, ವಿಮರ್ಶಕನಾಗಿ , ಪ್ರವಚನ ಮತ್ತು ಭಾಷಣಕಾರರಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿವರು. ಆದರೆ ಇದೆಲ್ಲಕ್ಕಿಂತಲೂ ಹೆಚ್ಚು ಜನರಿಗೆ ಹತ್ತಿರವಾದದ್ದು ಯಕ್ಷಗಾನ ತಾಳಮದ್ದಳೆಯ ಪ್ರಮುಖ ಅರ್ಥಧಾರಿಯಾಗಿ. ಇಷ್ಟು ಹೇಳಿದ ಮೇಲೆ ಅವರ ಹೆಸರನ್ನು ಹೇಳುವ ಅಗತ್ಯವೇ ಇರುವುದಿಲ್ಲ. ಅವರು ಯಾರೆಂದು ಎಲ್ಲರೂ ಊಹಿಸಿರುತ್ತೀರಿ. ಹಲವು ರಂಗಗಳಲ್ಲಿ ಪ್ರಭುತ್ವ ಸಾಧಿಸಿ ಅದರಲ್ಲಿ ಪ್ರಖ್ಯಾತಿಯನ್ನು ಪಡೆಯುವ ವ್ಯಕ್ತಿಗಳು ವಿರಳ. ಅಂತಹ ಮಹಾನುಭಾವರಲ್ಲೊಬ್ಬರು ಶ್ರೀ ರಾಧಾಕೃಷ್ಣ ಕಲ್ಚಾರ್.
ಇವರನ್ನು ಪರಿಚಯ ಮಾಡಿಕೊಡುವ ಅಗತ್ಯ ಇಲ್ಲ . ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ Rank ನೊಂದಿಗೆ ಕನ್ನಡ ಎಂ.ಎ. ಪದವಿಯನ್ನು ಗಳಿಸಿದವರು. ಪತ್ರಿಕಾ ಸಂಪಾದಕರೂ ಆದರು. ಆಮೇಲೆ ಸರಕಾರಿ ಉದ್ಯೋಗ ಕೈಬೀಸಿ ಕರೆಯಿತು. ಜೊತೆಗೆ ಸಾಹಿತಿಯಾಗಿ ಹಲವಾರು ಲೇಖನ ಅಂಕಣಗಳನ್ನು ಬರೆದು ಅಲ್ಲಿಯೂ ತನ್ನ ಛಾಪನ್ನು ಮೂಡಿಸಿದರು. ‘ಕೂಡುಮನೆ’ ಎಂಬ ಕಾದಂಬರಿ, ‘ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ’ಯವರ ಬಗ್ಗೆ ಬರೆದ ಪರಿಚಯಾತ್ಮಕ ಗ್ರಂಥ, ‘ಅವರವರ ದಾರಿ’ ಎಂಬ ಕಥಾಸಂಕಲನ, ಪರಕಾಯ ಪ್ರವೇಶ, ಆಲೋಚನ ಇವುಗಳು ಇವರ ಪ್ರಕಟಿತ ಕೃತಿಗಳು.
ತಾಳಮದ್ದಳೆ ರಂಗ ಕೈ ಬೀಸಿ ಕರೆದಾಗ ತಾನೊಲ್ಲೆ ಎನ್ನಲಿಲ್ಲ. ತಾಳಮದ್ದಳೆ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ಭಾಗವಹಿಸಲು ಮನಮಾಡಿದರು. ಮುಂದಿನದ್ದು ಇತಿಹಾಸ. ತಮಗೆಲ್ಲರಿಗೂ ಗೊತ್ತೇ ಇದೆ. ಮಾತಿಗಿಳಿದಾಗ ಎಷ್ಟೂ ಮಾತನಾಡುವ ಕಲ್ಚಾರರು ಕೆಲವೊಮ್ಮೆ ವಾಚಾಳಿಯಾಗಿ ಕಂಡರೂ ಕೆಲವೊಂದು ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸುವುದೂ ಉಂಟು. ಕೆಲವೊಮ್ಮೆ ನಗುವೇ ಉತ್ತರವಾಗಿಬಿಡುತ್ತದೆ. ಉದ್ಯೋಗ ಅನಿವಾರ್ಯತೆ ಎದುರಾದಾಗ ಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕೆಲಸ ಮಾಡಿದೆ ಎಂದು ಅವರು ಒಪ್ಪಿಕೊಳ್ಳುತ್ತಾರೆ. ಒಂದೆರಡು ಪ್ರಸಿದ್ಧ ಪತ್ರಿಕೆಗಳಲ್ಲಿ ಉಪಸಂಪಾದಕನಾಗಿ ಕೆಲಸ ಮಾಡಿದ ನಂತರ ಅರ್ಹತೆಯ ಆಧಾರದ ಮೇಲೆ ಸರಕಾರೀ ಉಪನ್ಯಾಸಕ ಹುದ್ದೆ ಕೈ ಬೀಸಿ ಕರೆಯಿತು.
ಸುಮಾರು ೨೧ ವರ್ಷಗಳ ಕಾಲ ಉಪನ್ಯಾಸಕನಾಗಿ ಸೇವೆ ಸಲ್ಲಿಸಿ ಆಮೇಲೆ ಸ್ವಯಂ ನಿವೃತ್ತಿ ಪಡೆದುಕೊಂಡರು. ಯಕ್ಷಗಾನವನ್ನು ಹವ್ಯಾಸವಾಗಿಯೇ ತೆಗೆದುಕೊಂಡಿದ್ದೇನೆಯೇ ಹೊರತು ಅದನ್ನೊಂದು ವೃತ್ತಿಯಾಗಿ ಭಾವಿಸಿರಲಿಲ್ಲ. ತಾಳಮದ್ದಳೆಯ ಭಾಗವಹಿಸುವಿಕೆಯಿಂದ ನನ್ನ ಉಪನ್ಯಾಸಕ ವೃತ್ತಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೆ. ನಿವೃತ್ತಿಗೂ ತಾಳಮದ್ದಳೆಯ ಭಾಗವಹಿಸುವಿಕೆಗೂ ಸಂಬಂಧವಿಲ್ಲ. ಆದರೆ ನಿವೃತ್ತನಾದ ಮೇಲೆ ಹೆಚ್ಚು ಸ್ವತಂತ್ರನಾದುದರಿಂದ ತಾಳಮದ್ದಳೆಯ ಭಾಗವಹಿಸುವಿಕೆಗೆ ಅನುಕೂಲವಾದದ್ದು ಸತ್ಯ. ತಾಳಮದ್ದಳೆಯ ಅರ್ಥಗಾರಿಕೆ ತಾಳಮದ್ದಳೆಯ ತಿಳುವಳಿಕೆಗಳಿಂದ ಉಪನ್ಯಾಸಕ ವೃತ್ತಿಗೆ ತುಂಬಾ ಸಹಾಯವಾಯಿತು ಎಂದು ರಾಧಾಕೃಷ್ಣ ಕಲ್ಚಾರರು ಹೇಳುತ್ತಾರೆ.
ಪರಂಪರೆಯಿಂದ ಇವರ ಹಿರಿಯರಾರೂ ಕಲಾವಿದರಲ್ಲ. ಅದರೂ ಇವರಲ್ಲಿದ್ದ ಆಸಕ್ತಿ ಅವರೊನ್ನೊಬ್ಬ ತಾಳಮದ್ದಳೆಯ ಸಮರ್ಥ ಅರ್ಥಧಾರಿಯನ್ನಾಗಿ ರೂಪಿಸಿತು. ಒಂದೊಮ್ಮೆ ನಾನು ಅರ್ಥಧಾರಿ ಆಗದೆ ಇದ್ದಿದ್ದರೆ ಬಹುಶಃ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯನಾಗಿರುತ್ತಿದ್ದೆನೋ ಏನೋ? ಹಾಗೆಂದು ನಾನು ಬರವಣಿಗೆಯಿಂದ ವಿಮುಖನಾಗಿಲ್ಲ ಎಂದು ಹೇಳುವ ಕಲ್ಚಾರರು ತುಷಾರದಲ್ಲಿ ‘ವಿಲಿಯ ಉಯ್ಯಾಲೆ’ ಉತ್ಥಾನ ಮಾಸಪತ್ರಿಕೆಯಲ್ಲಿ ‘ಪರಕಾಯ ಪ್ರವೇಶ’ ತರಂಗದಲ್ಲಿ ‘ಬಿಂಬ-ಪ್ರತಿಬಿಂಬ’ ಎಂಬ ಅಂಕಣ ಬರೆಯುತ್ತಿದ್ದಾರೆ. ಸಾಂದರ್ಭಿಕವಾಗಿ ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಯಕ್ಷಗಾನ ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದಾರೆ. ಯಕ್ಷಗಾನಕ್ಕೆ ಪ್ರತ್ಯೇಕ ಪಠ್ಯಪುಸ್ತಕ ರಚನೆ ಆಗಬೇಕೆಂಬ ಉದ್ದೇಶದಿಂದ ರಚನೆಯಾದ ಸಮಿತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಹಂತದ ಎರಡು ಸಮಿತಿಗಳು. ಅದರಲ್ಲಿ ಕಲ್ಚಾರರು ಪ್ರೌಢ ಹಂತದ ಸಮಿತಿಯ ಸದಸ್ಯ.
” ನಾನು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡುವ ಸಮಯದಲ್ಲಿ ಯಕ್ಷಗಾನಕ್ಕೆ ದೊಡ್ಡ ಪಾಠಶಾಲೆಯ ಹಾಗೆ ಇದ್ದುದೇ ಈ ಯಕ್ಷಗಾನದ ಸಂಘಗಳು. ನಾನು ಯಕ್ಷಗಾನ ಕಲಾವಿದನಾಗಿ ರೂಪುಗೊಳ್ಳಲು ಸಂಘಗಳ ಕೊಡುಗೆ ತುಂಬ ದೊಡ್ಡದು. ಈಗಲೂ ಒಂದು ಸಂಘದ ಸದಸ್ಯನಾಗಿಯೇ ಇದ್ದೇನೆ” ಎಂದು ರಾಧಾಕೃಷ್ಣ ಕಲ್ಚಾರರು ಎಂದು ವಿನಯದಿಂದ ನುಡಿಯುತ್ತಾರೆ. ವೇದಿಕೆಗೆ ಒಪ್ಪುವ ಹಾಗೆ ಸಹಜವಾದ ಅಂಗಾಂಗ ಚಲನೆಗಳು, ಮುಖಭಾವಗಳು ಇತ್ಯಾದಿ ಅಭಿನಯಗಳು ಆಕರ್ಷಕವಾಗಿಯೇ ಇರುತ್ತವೆ. ಇಂತಹಾ ಅಭಿನಯಗಳು ವಿಪರೀತಕ್ಕೆ ಹೋಗದಂತೆ ತಾಳಮದ್ದಳೆ ಕಲಾವಿದರಲ್ಲಿ ಇರಬೇಕೆಂದು ಅವರ ಅಭಿಪ್ರಾಯ.
‘ಅಗತ್ಯವಿದ್ದಲ್ಲಿ ವಾದ ಮಾಡಬೇಕು. ವಾದಕ್ಕಾಗಿ ವಾದವಲ್ಲ. ವಾದವೇ ಮುಖ್ಯವಲ್ಲ. ಆದರೆ ವಾದವೂ ಮುಖ್ಯವೇ. ವಾದವು ಪಾತ್ರದ ಒಂದು ಅಂಗವಾಗಿದ್ದರೆ ಮಾತ್ರ. ಭಾವುಕ ಸನ್ನಿವೇಶಗಳಿಗೆ ವಾದ ಬರುವುದಿಲ್ಲ. ಬಂತು ಅಂತಾದರೆ ಪಾತ್ರಶಿಲ್ಪವನ್ನು ಒಡೆದ ಹಾಗೆ’ ಎಂಬುದು ಕಲ್ಚಾರರ ಪ್ರಾಮಾಣಿಕ ಅನಿಸಿಕೆ. ಸ್ವಯಂ ನಿವೃತ್ತ್ತಿ ಯಾಕೆ ಪಡೆದಿರಿ ಎಂಬ ಪ್ರಶ್ನೆಗೆ “ಸ್ವಯಂ ನಿವೃತ್ತಿ ಪಡೆಯಲು ಕಾರಣ ನನ್ನ ಸ್ವಾತಂತ್ರ್ಯ, ಸಮಯಗಳನ್ನು ಅನುಭವಿಸಲು. ಯಾಕೆಂದರೆ ನಿರ್ಬಂಧಗಳೊಳಗೆ ಬದುಕುವುದು ನನಗೆ ಪ್ರಿಯವಲ್ಲ.
ಆದರೆ ನಿವೃತ್ತಿ ಪಡೆದ ಮೇಲೆ ತಾಳಮದ್ದಳೆಗಳಲ್ಲಿ ಭಾಗವಹಿಸುವಿಕೆ ಹೆಚ್ಚಾಗಿದೆ. ಭವಿಷ್ಯದಲ್ಲಿ ತಾಳಮದ್ದಳೆಗಳ ಭಾಗವಹಿಸುವಿಕೆ ಇಲ್ಲದಿದ್ದರೂ ನನ್ನ ಸಮಯವನ್ನು ಉಪಯುಕ್ತವಾಗಿಯೇ ಕಳೆಯಬಲ್ಲೆ ಎಂಬ ವಿಶ್ವಾಸವಿದೆ. ನಾನು ಉಪನ್ಯಾಸಕನಾಗಿ ಮುಂದುವರಿದಿದ್ದರೆ ಪ್ರಾಂಶುಪಾಲನಾಗಿ ಕೆಲಸ ಮಾಡಬೇಕಾಗುತ್ತಿತ್ತು. ಬೋಧನಾ ವೃತ್ತಿಗಿಂತ ಆಡಳಿತಾತ್ಮಕ ಹುದ್ದೆ ಆಕರ್ಷಕ ಅಂತ ಅನ್ನಿಸಲಿಲ್ಲ. ಆ ಕಾರಣವೂ ಸ್ವಯಂ ನಿವೃತ್ತಿ ಪಡೆಯಲು ಒಂದು ಹಿನ್ನೆಲೆಯಾಯಿತು” ಎಂದು ರಾಧಾಕೃಷ್ಣ ಕಲ್ಚಾರರು ಹೇಳುತ್ತಿದ್ದರು.
ಶೇಣಿ ಗೋಪಾಲಕೃಷ್ಣ ಭಟ್ಟರಿಂದ ಪ್ರಭಾವಿತರಾಗಿದ್ದ ಕಲ್ಚಾರರು ತೆಕ್ಕಟ್ಟೆ ಆನಂದ ಮಾಸ್ತರ್ , ರಾಮದಾಸ ಸಾಮಗರನ್ನೂ ಮೆಚ್ಚಿಕೊಳ್ಳುತ್ತಾರೆ. ಅದಲ್ಲದೆ ನಾನೊಂದಿಗೆ ಒಡನಾಡಿದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪ್ರಭಾಕರ ಜೋಶಿಯವರು, ಕುಂಬಳೆಯವರು, ಶಂಭುಶರ್ಮರು ಮೊದಲಾದವರು ತುಂಬಾ ಪ್ರೋತ್ಸಾಹಿಸಿದವರು. ಎಲ್ಲ ಹಿಂದಿನ ಕಲಾವಿದರಿಗೆ, ಅರ್ಥಧಾರಿಗಳಿಗೆ ಯಾವಾಗಲೂ ಕೃತಜ್ಞರಾಗಿರಬೇಕು. ನಾವು ಮಾತನಾಡುವುದಕ್ಕೆ ಇಂತಹಾ ಒಂದು ವೇದಿಕೆಯನ್ನು ತುಂಬಾ ಸುಸಜ್ಜಿತವಾಗಿ ಪರಿಷ್ಕರಿಸಿಕೊಟ್ಟವರು ಅವರು.
ಈಗ ನನ್ನ ಜೊತೆ ಒಡನಾಡುವ ಎಲ್ಲ ಅರ್ಥಧಾರಿಗಳನ್ನೂ ಇಷ್ಟಪಡುತ್ತೇನೆ ಎಂದು ಅವರ ಅಭಿಪ್ರಾಯ. ಸ್ನಾತಕೋತ್ತರ ಪದವೀಧರರಾದ ಕಲ್ಚಾರರು ಕನ್ನಡ, ಸಾಹಿತ್ಯ, ಛಂದಸ್ಸುಗಳಲ್ಲಿ ತಮ್ಮ ಹಿಡಿತ, ಪ್ರಭುತ್ವವನ್ನು ಸಾಧಿಸಿದವರು. ಕೆಲವೇ ನಿಮಿಷಗಳಲ್ಲಿ ಭಾಮಿನಿ ಷಟ್ಪದಿಯಲ್ಲಿ ಪದ್ಯ ಹೊಸೆಯುವ ಸಾಮರ್ಥ್ಯ ಇವರ ಇನ್ನೊಂದು ವಿಶೇಷತೆ .
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions