ಬದುಕಿಗಾಗಿ ನೌಕರಿಯನ್ನು ಪಡೆದುಕೊಳ್ಳಬೇಕಾದರೆ ವಿದ್ಯಾರ್ಹತೆಯನ್ನು ಹೊಂದಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ನಡೆಯುವ ಸಹಜವಾದ ಕ್ರಿಯೆ ಇದು. ಆಮೇಲೆ ಪರೀಕ್ಷೆ, ಸಂದರ್ಶನಗಳು ಇದ್ದೇ ಇರುತ್ತವೆ. ಆದರೆ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯಲು ಈ ಅನಿವಾರ್ಯತೆಗಳು ಬೇಕಾಗಿಲ್ಲ. ಆಸಕ್ತಿಯಿದ್ದವರಿಗೆ ಪ್ರಯತ್ನಿಸಬಹುದು. ಪ್ರವೇಶಿಸಿದ ನಂತರ ಸದಾ ಅಧ್ಯಯನಶೀಲರಾಗಿ ಬೆಳೆಯುತ್ತಾ ಕಲಾವಿದನಾಗಿ ಕಾಣಿಸಿಕೊಳ್ಳಬೇಕಾದುದು ಕರ್ತವ್ಯವೂ ಹೌದು. ಹಿಂದಿನ ಕಾಲದಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿ ಯಕ್ಷಗಾನವನ್ನೇ ಬದುಕಿಗಾಗಿ ಆಯ್ಕೆ ಮಾಡಿದವರನೇಕರು. ವಿದ್ಯಾರ್ಜನೆಗೂ ಹೆಚ್ಚು ಅವಕಾಶವಿಲ್ಲದ ಕಾರಣ ಮೇಳಕ್ಕೆ ಸೇರಿ (ನೇಪಥ್ಯ ಕೆಲಸಕ್ಕೆ) ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಆಟಗಳನ್ನು ನೋಡುತ್ತಾ ಮತ್ತೆ ಕಲಾವಿದನಾಗಿ ಅಭಿನಯಿಸಿ ಸತತ ಪರಿಶ್ರಮದಿಂದ ಖ್ಯಾತರಾದರು.
ಉದ್ಯೋಗವಿಲ್ಲದೆ ಮನೆಯಲ್ಲೇ ಕುಳಿತವವನನ್ನು ಹಿರಿಯರು ಹೀಗೆ ಆಕ್ಷೇಪಿಸುವ ಕ್ರಮವೂ ಇತ್ತು. ‘ನೀನು ಆಟದ ಪೆಟ್ಟಿಗೆ ಹೊರಲು ಆದೀತು’ಎಂದು. ಇದು ತಾತ್ಸಾರದಿಂದ ಆಡಿದ ಮಾತುಗಳಂತೂ ಖಂಡಿತಾ ಅಲ್ಲ. ಮೊದಲಿನ ಕಾಲದಲ್ಲಿ ವಾಹನ, ರಸ್ತೆ ಸೌಕರ್ಯಗಳು ಇದ್ದಿರಲಿಲ್ಲ. ಪ್ರದರ್ಶನಗಳು ನಡೆಯುವ ಜಾಗಕ್ಕೆ ಸರಂಜಾಮುಗಳನ್ನು ಹೊತ್ತೇ ಸಾಗಬೇಕಾಗಿತ್ತು. ನಡೆಯುವ ದಾರಿಯೂ ದುರ್ಗಮವಾಗಿತ್ತು. ಉತ್ತಮ ಆರೋಗ್ಯವನ್ನು ಹೊಂದಿದ ತರುಣರಿಂದ ಮಾತ್ರ ಈ ಕೆಲಸ ಸಾಧ್ಯ. ಹೀಗೆ ಮೇಳದ ಕೆಲಸಕ್ಕೆ ಸೇರಿದ ಅನೇಕರು ತಿರುಗಾಟದ ಏನನ್ನು ಮನೆಗೆ ಕೊಂಡುಹೋದರು? ಎಷ್ಟು ಕೊಂಡು ಹೋದರು?ಎಂಬ ಪ್ರಶ್ನೆ ಹುಟ್ಟಿಕೊಂಡರೆ ಅದಕ್ಕೆ ಉತ್ತರವಿದೆ.
ಅವರು ಬೆಲೆಕಟ್ಟಲಾಗದ ವಿಚಾರವನ್ನು ತಮ್ಮ ಜತೆ ಮನೆಗೆ ಕೊಂಡೊಯ್ದಿದ್ದರು. ಅದುವೇ ಯಕ್ಷಗಾನದ ಹುಚ್ಚು. ಯಕ್ಷಗಾನ ಕಲೆಯ ಆಸಕ್ತಿ. ತಾನೂ ಕಲಾವಿದನಾಗಬೇಕೆಂಬ ಆಸೆ. ಆ ನಿಟ್ಟಿನಲ್ಲಿ ಪ್ರಯತ್ನಿಸಿಯೂ ಇದ್ದರು. ಹಿಂದಿನ ಕಾಲದಲ್ಲಿ ಹೆಚ್ಚಿನ ಕಲಾವಿದರೂ ಇದೇ ತೆರನಾಗಿಯೇ ಸಾಗಿ ಬಂದವರು. ನೇಪಥ್ಯದ ಕೆಲಸಕ್ಕೆಂದು ಮೇಳಕ್ಕೆ ಸೇರಿದ ಬಳಿಕ ಕಲಾವಿದರಾದ ಅನೇಕ ವ್ಯಕ್ತಿಗಳು ಇಂದೂ ನಮ್ಮ ಜತೆ ಇದ್ದಾರೆ. ಎಳವೆಯಲ್ಲೇ ಬದುಕಿಗಾಗಿ ಯಕ್ಷಗಾನವನ್ನೇ ಆಶ್ರಯಿಸಿ ಸತತ ಪರಿಶ್ರಮದಿಂದ ಖ್ಯಾತ ಕಲಾವಿದರಾಗಿ ಯಕ್ಷಗಾನ ರಂಗದಲ್ಲಿ ಮೆರೆದ ಅನೇಕ ಹಿರಿಯರನ್ನು ಗಮನಿಸಬಹುದು. ಬೆರಗು ಹುಟ್ಟಿಸುವಂತಹ ಸಾಧನೆಯಿದು. ಅಂತಹ ಕಲಾವಿದರಲ್ಲೊಬ್ಬರು ಶ್ರೀ ಕುಂಬಳೆ ಕುಟ್ಯಪ್ಪು (ಬಣ್ಣದ ಕುಟ್ಯಪ್ಪು).
1914ರಲ್ಲಿ ಕಣ್ಣನ್, ಚೋಯಿಚ್ಚಿ ದಂಪತಿಗಳಿಗೆ ಮಗನಾಗಿ ಕೂಡ್ಲಿನಲ್ಲಿ ಜನನ. (ಅಜ್ಜನ ಮನೆ). ಕುಟ್ಯಪ್ಪು ಅವರ ಮೂಲಮನೆ ಕುಂಬಳೆ ಸಮೀಪದ ಬಳ್ಳಂಬಾಡಿ. ಹಾಗಾಗಿ ಕುಂಬಳೆ ಕುಟ್ಯಪ್ಪು ಎಂದೇ ಕರೆಸಿಕೊಂಡಿದ್ದರು. ಮಹಿಷಾಸುರ ವೇಷದ ಖ್ಯಾತಿಯ ಬಣ್ಣದ ಕುಟ್ಯಪ್ಪು ಅವರ ಹುಟ್ಟೂರು ಕಾಸರಗೋಡಿನ ಕುಂಬಳೆ. ಬಣ್ಣದ ವೇಷಗಳನ್ನೂ ಮಾಡುತ್ತಾ ಖ್ಯಾತರಾದ ಕಾರಣ ಕುಂಬಳೆ ಕುಟ್ಯಪ್ಪು ಅವರನ್ನು ಬಣ್ಣದ ಕುಟ್ಯಪ್ಪು ಎಂದೇ ಕಲಾಭಿಮಾನಿಗಳು ಕರೆಯುತ್ತಿದ್ದರು. ಶ್ರೀಯುತರು ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು ಮೊದಲಾದವರ ಸಮಕಾಲೀನರಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡಿದವರು. ಇವರು ಓದಿದ್ದು 4ನೇ ತರಗತಿಯ ವರೆಗೆ ಮಾತ್ರ. ಎಳವೆಯಲ್ಲೇ ಯಕ್ಷಗಾನ ಬಯಲಾಟಗಳನ್ನು ನೋಡುತ್ತಾ ಬೆಳೆದವರು. ಬಣ್ಣದ ವೇಷಧಾರಿಗಳ ಅಭಿನಯವನ್ನು ನೋಡುತ್ತಾ ಆಕರ್ಷಿತರಾಗಿದ್ದರು.
ಇವರು ಮೊದಲು ಕಾಣಿಸಿಕೊಂಡದ್ದು ಪುಂಡುವೇಷಗಳಲ್ಲಿ. ಬಳಿಕ ಬಣ್ಣದ ವೇಷಗಳನ್ನು ಮಾಡಲು ತೊಡಗಿದ್ದರು. ಮಹಿಷಾಸುರನ ವೇಷವು ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ರುದ್ರಭೀಮ, ವೀರಭದ್ರ, ಕುಂಭಕರ್ಣ, ಅಜಮುಖಿ, ಪೂತನಿ, ರಾವಣ, ಶೂರಪದ್ಮ, ತಾರಕಾಸುರ ಮೊದಲಾದ ಪಾತ್ರಗಳಲ್ಲೂ ಮಿಂಚಿ ಹೆಸರನ್ನು ಗಳಿಸಿದರು. ವೀರರಸದ ಪದ್ಯಗಳಿಗೆ ಇವರದು ಅಮೋಘ ಅಭಿನಯವೆಂದು ಹಿರಿಯ ಕಲಾಭಿಮಾನಿಗಳು ಹೇಳುತ್ತಾರೆ. ಬಣ್ಣದ ಕುಟ್ಯಪ್ಪು ಅವರು ತೆಂಕುತಿಟ್ಟಿನ ಅಪ್ರತಿಮ ಬಣ್ಣದ ವೇಷಧಾರಿಯಾಗಿ ಮೆರೆದವರೆಂದು ಹಿರಿಯ ಕಲಾಭಿಮಾನಿಗಳೆಲ್ಲರೂ ಹೇಳುವುದನ್ನು ನಾವು ಕೇಳಿರುತ್ತೇವೆ. ತೆಂಕುತಿಟ್ಟಿನ ಹೆಚ್ಚಿನ ಎಲ್ಲಾ ಮೇಳಗಳಲ್ಲೂ ವ್ಯವಸಾಯ ಮಾಡಿದ್ದರು. ಕೊನೆಗೆ ಕಟೀಲು ಮೇಳದಲ್ಲಿ ಹಲವು ವರ್ಷಗಳ ತಿರುಗಾಟ ನಡೆಸಿ ನಿವೃತ್ತರಾಗಿದ್ದರು.
1982ರಲ್ಲಿ ದೆಹಲಿಯಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ನಿರ್ವಹಿಸಿದ ರಾವಣ ಮತ್ತು ತಾರಕಾಸುರ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚಿ ಪ್ರಶಂಸಿದ್ದರು. ಸುಮಾರು ಐವತ್ತು ವರ್ಷಗಳ ಕಲಾಸೇವೆ ಇವರದು. ಸುಮಾರು ನಲುವತ್ತು ವರ್ಷಗಳ ಕಾಲ ಕಾಸರಗೋಡಿನ ಕೋಟೆಕಣಿ ಎಂಬಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದರು. ಇವರ ಪತ್ನಿ ಶ್ರೀಮತಿ ಪಾಟೀ ಅಮ್ಮ. ಕುಟ್ಯಪ್ಪು ಪಾಟೀ ಅಮ್ಮ ದಂಪತಿಗಳಿಗೆ ಏಳು ಮಂದಿ ಮಕ್ಕಳು. (ಆರು ಗಂಡು ಮಕ್ಕಳು ಮತ್ತು ಒಬ್ಬಳು ಪುತ್ರಿ) ಪ್ರಥಮ ಪುತ್ರ ಶ್ರೀ ರಾಮಚಂದ್ರ. ಇವರು ದಿವಂಗತರು. ಕಾಸರಗೋಡು ನುಳ್ಳಿಪ್ಪಾಡಿಯ ಗಜಾನನ ಗ್ಯಾರೇಜ್ ಮಾಲೀಕರಾಗಿದ್ದರು. ದ್ವಿತೀಯ ಪುತ್ರ ಶ್ರೀ ಸುಂದರ. ಟೈಲರ್ ಉದ್ಯೋಗಿ. ಕಾಸರಗೋಡು ಎಂ.ಜಿ ರೋಡಿನ ಕೊಹಿನೂರ್ ಟೈಲರ್ಸ್ ನ ಮಾಲೀಕರು. ತೃತೀಯ ಪುತ್ರ ಶ್ರೀ ಮಾಧವ. ಇವರು ದಿವಂಗತರು. ಟ್ಯಾಕ್ಸಿ ಡ್ರೈವರ್ ಆಗಿದ್ದರು. ನಾಲ್ಕನೆಯ ಪುತ್ರ ಶ್ರೀ ಭಾಸ್ಕರ. ಕೆ.ಎಸ್.ಆರ್.ಟಿ.ಸಿ ಡ್ರೈವರ್ ಆಗಿ ನಿವೃತ್ತರು. ಐದನೆಯ ಪುತ್ರ ಶ್ರೀ ಪ್ರಭಾಕರ. ಉಪಜಿಲ್ಲಾಧಿಕಾರಿಯಾಗಿ ನಿವೃತ್ತರು. ಕೊನೆಯ ಪುತ್ರ ಶ್ರೀ ರವೀಂದ್ರ ಕೋಟೆಕಣಿ. ಮಂಜೇಶ್ವರ ಕುಂಜತ್ತೂರಿನ ಕೆನರಾ ಮೋಟರ್ಸ್ ಗ್ಯಾರೇಜಿನ ಮಾಲೀಕರು. ಇವರು ಹಲವು ಧಾರ್ಮಿಕ ಸಂಸ್ಥೆಗಳಲ್ಲಿ ಮುಂದಾಳುಗಳಾಗಿ ಸೇವೆ ಮಾಡುತ್ತಿದ್ದಾರೆ. ಇವರ ಪುತ್ರ ಅಕ್ಷಯ ಕುಮಾರ್ ಸಿಎ ಪರೀಕ್ಷೆಯಲ್ಲಿ ಕೇರಳ ರಾಜ್ಯಕ್ಕೆ ಪ್ರಥಮ ಮತ್ತು ದೇಶಕ್ಕೆ ಆರನೆಯ ರಾಂಕ್ ಗಳಿಸಿರುತ್ತಾರೆ. ಬಣ್ಣದ ಕುಟ್ಯಪ್ಪು ಅವರ ಪುತ್ರಿ ಶ್ರೀಮತಿ ಬೇಬಿ ದಾಮೋದರ್. ಇವರ ಪತಿ ಶ್ರೀ ದಾಮೋದರ್ ಕೇರಳ ಸರಕಾರೀ ಉದ್ಯೋಗಿಯಾಗಿ ನಿವೃತ್ತರು. (ನೀರಾವರಿ ಇಲಾಖೆ).
ಪ್ರಾಮಾಣಿಕ ಕಲಾಸೇವೆಯನ್ನು ಮಾಡಿದ ಕಾರಣ ಕಲಾಮಾತೆಯು ಪ್ರಸನ್ನಳಾಗಿ ಬಣ್ಣದ ಕುಟ್ಯಪ್ಪು ಅವರ ಮನೆಯವರನ್ನು ಅನುಗ್ರಹಿಸಿ ರಕ್ಷಿಸಿದ್ದಾಳೆ. ಮಕ್ಕೆಳೆಲ್ಲರೂ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಮೊಮ್ಮಕ್ಕಳೂ ವಿದ್ಯಾವಂತರಾಗಿ ಹಿರಿಯರಿಗೆ ಸಂತಸವನ್ನು ಉಣಿಸುತ್ತಿದ್ದಾರೆ. ಶ್ರೀ ಬಣ್ಣದ ಕುಟ್ಯಪ್ಪು ಅವರ ಬದುಕಿನ ಅವಧಿ 1914-1985. ಅನಾರೋಗ್ಯದ ನಿಮಿತ್ತ ಯಕ್ಷಗಾನದಿಂದ ದೂರವಾಗಿ ಮೂರು ವರ್ಷಗಳ ಕಾಲ ನಿವೃತ್ತ ಜೀವನವನ್ನು ನಡೆಸಿದ್ದರು. ಕಾಸರಗೋಡಿನ ಸಮೀಪ ಹಳಿ ದಾಟುವಾಗ ರೈಲು ಢಿಕ್ಕಿ ಹೊಡೆದು ಗಾಯಗೊಂಡಿದ್ದ ಪ್ರಸಿದ್ಧ ಬಣ್ಣದ ವೇಷಧಾರಿ ಶ್ರೀ ಕುಂಬಳೆ ಕುಟ್ಯಪ್ಪು ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದ ಬಣ್ಣದ ಕುಟ್ಯಪ್ಪು ಅವರು ಸರಳ, ಸಜ್ಜನ ಸಾತ್ವಿಕ ವ್ಯಕ್ತಿಯಾಗಿದ್ದರು. ನಿಜಬದುಕಿನಲ್ಲಿ ಸಜ್ಜನ, ಸಾತ್ವಿಕರಾದರೂ, ರಂಗದಲ್ಲಿ ರಾಕ್ಷಸರಾಗಿ ಕಲಾವಿದರು ಅಭಿನಯಿಸುವುದನ್ನು ಕಂಡಾಗ ಯೋಚಿಸಿದಾಗ ಬೆರಗು ಹುಟ್ಟದೆ ಇರದು. ಇದುವೇ ಯಕ್ಷಗಾನವೆಂಬ ಗಂಡು ಕಲೆಯ ವಿಶೇಷತೆಯು. ಇದುವೇ ಕಲಾವಿದರ ಸಾಮರ್ಥ್ಯ. ಇದುವೇ ಪಾತ್ರೋಚಿತವಾಗಿ ಅಭಿನಯಿಸುವ ಕಲೆ. ಇದುವೇ ಪರಕಾಯ ಪ್ರವೇಶ. ಪಾತ್ರವನ್ನು ತನಗೆ ಬೇಕಾದಂತೆ ಬಾಗಿಸದೆ ತಾನು ಪಾತ್ರಕ್ಕೆ ಬೇಕಾದಂತೆ ಬಾಗುವ ಕ್ರಿಯೆಯು.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು