ಯಕ್ಷಗಾನ ಪರಂಪರೆಯ ಪ್ರತಿನಿಧಿ ಎಂದೇ ನೆಗಳ್ತೆಯನ್ನು ಪಡೆದ ಖ್ಯಾತ ಯಕ್ಷಗಾನ ವೇಷಧಾರಿ ಸಂಪಾಜೆ ಶೀನಪ್ಪ ರೈ ನಿಧನ ಹೊಂದಿದ್ದಾರೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಕೋರುತ್ತಾ ‘ಯಕ್ಷದೀಪ ಪತ್ರಿಕೆಯಲ್ಲಿ 2018ರಲ್ಲಿ ಪ್ರಕಟವಾದ ಲೇಖನವನ್ನು ಯಥಾವತ್ತಾಗಿ ಕೆಳಗೆ ಕೊಡುತ್ತಿದ್ದೇವೆ.
ರಾಜ್ಯ ಪ್ರಶಸ್ತಿ ವಿಜೇತ ಸಂಪಾಜೆ ಶೀನಪ್ಪ ರೈಗಳು
2014, ನವಂಬರ್ ತಿಂಗಳ 1ನೇ ತಾರೀಕು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ವತಿಯಿಂದ ಕಲ್ಲುಗುಂಡಿಯಲ್ಲಿ ‘ಸಂಪಾಜೆ ಯಕ್ಷೋತ್ಸವ’ ನಡೆಯುತ್ತಿತ್ತು. ಸಂಪಾಜೆಯವರೇ ಆದ ಶ್ರೀ ಶೀನಪ್ಪ ರೈಗಳು ಅಂದು ಬೆಂಗಳೂರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಕಲ್ಲುಗುಂಡಿಗೆ ಪ್ರದರ್ಶನದಲ್ಲಿ ಪಾಲುಗೊಳ್ಳಲೇ ಬೇಕೆಂಬ ನಿರ್ಧಾರದಿಂದ ಬಂದಿದ್ದರು. ಕಾರ್ಯಕ್ರಮದ ಪ್ರಾಯೋಜಕರು ಎಡನೀರು ಶ್ರೀಗಳ ಉಪಸ್ಥಿತಿಯಲ್ಲಿ, ಕಲಾಭಿಮಾನಿಗಳೆಲ್ಲರ ಸಮ್ಮುಖದಲ್ಲಿ ಶೀನಪ್ಪ ರೈಗಳನ್ನು ಗೌರವಿಸಿದರು. ಪ್ರೇಕ್ಷಕರು ಕರತಾಡನದಿಂದ ರೈಗಳನ್ನು ಅಭಿನಂದಿಸಿದರು. ಆನಂದಭಾಷ್ಪವನ್ನು ಸುರಿಸುತ್ತಾ, ಧನ್ಯತಾಭಾವದಿಂದ ಪ್ರೇಕ್ಷಕರಿಗೆ ತಲೆಬಾಗಿ ಶೀನಪ್ಪ ರೈಗಳು ನಮಸ್ಕರಿಸಿದ ದೃಶ್ಯವನ್ನು ನಾವೆಲ್ಲರೂ ನೋಡಿ ಆನಂದಿಸಿದವರು. 62ನೇ ವರುಷದ ತಿರುಗಾಟದ ಸಿದ್ಧತೆಯಲ್ಲಿರುವ ಈ ದಣಿವರಿಯದ ಕಲಾವಿದ ಅಭಿನಂದನೀಯರು. ರಂಗದಲ್ಲಿ ಈಗಲೂ ತರುಣನಂತೆ ಮಿಂಚುತ್ತಿದ್ದಾರೆ. ತಾನು ಸಾಗಿ ಬಂದ ದಾರಿಯನ್ನೂ, ಸಹಕರಿಸಿ ಪ್ರೋತ್ಸಾಹಿಸಿದ ಮಹನೀಯರನ್ನೂ, ತನ್ನ ಏಳ್ಗೆಗೆ ಕಾರಣರಾದವರನ್ನೂ ಮರೆಯದೆ, ಕೃತಜ್ಞತಾಭಾವದಿಂದ ಸ್ಮರಿಸುವ ವಿನಯವಂತ ಕಲಾವಿದ ಇವರು.
1943ನೇ ಇಸವಿ, ಜೂನ್ 7ರಂದು (07-06-1943) ಸುಳ್ಯ ತಾಲೂಕು ಸಂಪಾಜೆ ಕೀಲಾರು ಸಮೀಪದ ಮಾದೇಪಾಲು ಎಂಬಲ್ಲಿ ರಾಮಣ್ಣ ರೈ ಕಾವೇರಿ ರೈ ದಂಪತಿಗಳಿಗೆ ಮಗನಾಗಿ ಶೀನಪ್ಪ ರೈಗಳು ಜನಿಸಿದರು. ಕಲ್ಲುಗುಂಡಿ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಓದಿದವರು. ಇವರ ತಂದೆಯವರು ಕಲಾವಿದರಾಗಿದ್ದರು. ಮಗನು ಯಕ್ಷಗಾನ ಕಲಾವಿದನಾಗಬೇಕೆಂದು ಬಯಸಿದರು. ನಾನು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಲು ಅವರೇ ಕಾರಣರು. ಇದಕ್ಕೆ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಿದವರು ಊರಿನ ಯಜಮಾನರಾದ ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ಎಂದು ಶೀನಪ್ಪ ರೈಗಳು ಸಂತೋಷದಿಂದ ಹೇಳುತ್ತಾರೆ. ರೈಗಳಿಗೆ ಅರ್ಥಗಾರಿಕೆಗೆ ಅವರ ತಂದೆಯವರೇ ಗುರುಗಳು. ನಾಟ್ಯಾಭ್ಯಾಸವನ್ನು ಮಾಡಿದ್ದು ಶ್ರೀ ಕುಂಬಳೆ ಕಣ್ಣನ್ ಅವರಿಂದ (ಕಾವು ಕಣ್ಣನ್). ನಾಟ್ಯಾಚಾರ್ಯ ಶ್ರೀ ಕೇಶವ ಮಾಸ್ತರರಿಂದ ಭರತನಾಟ್ಯದ ಹೆಜ್ಜೆಗಳನ್ನು ಶೀನಪ್ಪ ರೈಗಳು ಅಭ್ಯಸಿಸಿದ್ದರು. ಬಣ್ಣಗಾರಿಕೆ ಕಲಿತುದು ಶ್ರೀ ಬಣ್ಣದ ಕುಟ್ಯಪ್ಪು ಅವರಿಂದ. ಯಕ್ಷಗಾನಕ್ಕೆ ಪೂರಕವಾದ ವಿದ್ಯೆಗಳನ್ನು ಇವರೆಲ್ಲರಿಂದ ಕಲಿತು ಸಂಪಾಜೆ ಶೀನಪ್ಪ ರೈಗಳು ಹಂತ ಹಂತವಾಗಿ ಬೆಳೆಯುತ್ತಾ ಸಾಗಿಬಂದು ಶ್ರೇಷ್ಠ ಕಲಾವಿದರಾದವರು.
ಶ್ರೀ ಸಂಪಾಜೆ ಶೀನಪ್ಪ ರೈ
ತನ್ನ 13ನೇ ವಯಸ್ಸಿನಲ್ಲಿ ಇರಾ ಶ್ರೀ ಸೋಮ ನಾಥೇಶ್ವರ ಮೇಳದಲ್ಲಿ (ಕಲ್ಲಾಡಿ ಶ್ರೀ ಕೊರಗ ಶೆಟ್ಟರ ವ್ಯವಸ್ಥಾಪಕತ್ವ) ರಂಗಪ್ರವೇಶ ಮಾಡಿದ ರೈಗಳು ಸದ್ರಿ ಮೇಳದಲ್ಲಿ 4 ವರ್ಷ ತಿರುಗಾಟ ನಡೆಸಿದರು. ಆಗ ದಾಮೋದರ ಮಂಡೆಚ್ಚರು, ಕಾಸರಗೋಡು ವೆಂಕಟ್ರಮಣ, ಕಲ್ಲಡ್ಕ ಮಾಧವ ಶೆಟ್ರು, ಬಣ್ಣದ ಕುಟ್ಯಪ್ಪು ಮೊದಲಾದ ಪ್ರಸಿದ್ಧ ಕಲಾವಿದರ ಒಡನಾಟ ಸಿಕ್ಕಿತ್ತು. ನಂತರ 3 ವರ್ಷಗಳ ಕಾಲ ವೇಣೂರು ಮೇಳದಲ್ಲಿ ವ್ಯವಸಾಯ ಮಾಡಿದರು. ಅಲ್ಲಿ ಶ್ರೀ ಪುತ್ತಿಗೆ ತಿಮ್ಮಪ್ಪ ರೈಗಳು, ಕಾಂಚನ ಸಂಜೀವ ರೈ, ಪಾಂಡೇಶ್ವರ ಪದ್ಮನಾಭ ಕಾಮತ್, ಶ್ರೀಕಂಠ ಭಟ್ ಮೊದಲಾದವರೊಂದಿಗೆ ತಿರುಗಾಟ ನಡೆಸುವ ಭಾಗ್ಯ ರೈಗಳಿಗೆ ಸಿಕ್ಕಿತ್ತು. ಬಳಿಕ 2 ವರ್ಷಗಳ ತಿರುಗಾಟ ಇರುವೈಲು ಮೇಳದಲ್ಲಿ. ಮತ್ತೆ ತಿರುಗಾಟ ಸೌಕೂರು ಮೇಳದಲ್ಲಿ. ಆಗ ಸೌಕೂರು ಮೇಳ (ಬಡಗು) ಪುತ್ತಿಗೆ ತಿಮ್ಮಪ್ಪ ರೈಗಳ ವ್ಯವಸ್ಥಾಪಕತ್ವದಲ್ಲಿ ತಿರುಗಾಟ ನಡೆಸುತ್ತಿತ್ತು. ತೆಂಕಿನ ಪ್ರದರ್ಶನ. ಚೇವಾರು ಕಾಮತ್‍ರು, ಕಾಟುಕುಕ್ಕೆ ಕುಂಞರಾಮ ಮಣಿಯಾಣಿ, ತೊಕ್ಕೊಟ್ಟು ಲೋಕಯ್ಯ, ವಿಟ್ಲ ರಾಮಯ್ಯ ಶೆಟ್ರು ಮೊದಲಾದವರೊಂದಿಗೆ ರೈಗಳು ಕಲಾಮಾತೆಯ ಸೇವೆಯನ್ನು ಮಾಡಿದವರು. ನಂತರ ಚೌಡೇಶ್ವರೀ ಮೇಳದಲ್ಲಿ 2 ವರ್ಷ. ಅಲ್ಲಿ ದಾಸರಬೈಲು ಚನಿಯಪ್ಪ ನಾೈಕ, ಈಗ ಖ್ಯಾತ ಭಾಗವತರಾಗಿರುವ ಪದ್ಯಾಣ ಗಣಪತಿ ಭಟ್ಟರು ಜತೆಗಿದ್ದರು. ನಂತರ ನಿರಂತರ 33 ವರ್ಷಗಳ ತಿರುಗಾಟ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ. ಕೇದಗಡಿ ಗುಡ್ಡಪ್ಪ ಗೌಡರಿಂದ ರಂಗನಡೆಯನ್ನು ಅಭ್ಯಸಿಸಿ, ಕಲ್ಲಾಡಿ ವಿಠಲ ಶೆಟ್ಟರ ಸಹಕಾರ, ಪ್ರೋತ್ಸಾಹ ದಿಂದ, ಇರಾ ಗೋಪಾಲಕೃಷ್ಣ ಭಾಗವತರು, ಬಲಿಪರು, ಕುಬಣೂರು, ಪೂಂಜರಂತಹ ಶ್ರೇಷ್ಠ ಭಾಗವತರ ಜತೆ ಕಲಾವಿದನಾಗಿ ವ್ಯವಸಾಯ ನಡೆಸಿದವರು ಶ್ರೀ ಶೀನಪ್ಪ ರೈಗಳು. ಎಳವೆಯಿಂದಲೇ ಇವರಿಗೆ ಕಿರೀಟ ವೇಷದಲ್ಲೇ ಆಸಕ್ತಿ. ಹಾಗೆಂದು ಪುಂಡುವೇಷಗಳನ್ನು ಮಾಡದವರೇನೂ ಅಲ್ಲ. ಬ್ರಹ್ಮಕಪಾಲ ಪ್ರಸಂಗದಲ್ಲಿ ಬ್ರಹ್ಮನಾಗಿ (ಪಕಡಿ), ವಿರಾಟಪರ್ವದ ಕೀಚಕನಾಗಿಯೂ ಅಭಿನಯಿಸಿದ್ದನ್ನೂ ರೈಗಳು ನೆನಪಿಸುತ್ತಾರೆ. ಚೌಡೇಶ್ವರೀ ಮೇಳದಲ್ಲಿದ್ದಾಗ ಮೇನಕೆಯಾಗಿಯೂ ಅಭಿನಯಿಸಿದ್ದರಂತೆ. ಆದರೂ ರೈಗಳು ಕಲಾವಿದನಾಗಿ ಕಾಣಿಸಿಕೊಂಡದ್ದು ಕಟೀಲು ಮೇಳದಲ್ಲಿ ಎಂಬುದರಲ್ಲಿ ಎಲ್ಲರ ಸಹಮತವಿದೆ. ದೇವೇಂದ್ರ, ಅರ್ಜುನ, ಹಿರಣ್ಯಾಕ್ಷ, ಇಂದ್ರಜಿತು, ರಕ್ತಬೀಜ, ಭಾನುಕೋಪ, ಕಾರ್ತವೀರ್ಯ, ಕೌಂಡ್ಲಿಕ, ಶಿಶುಪಾಲ, ಮಕರಾಕ್ಷ, ಅರುಣಾಸುರ- ಮೊದಲಾದ ಪಾತ್ರಗಳಲ್ಲಿ ಸಂಪಾಜೆ ಶೀನಪ್ಪ ರೈಗಳು ವಿಜೃಂಭಿಸಿದರು.
ಪ್ರಸ್ತುತ 15 ವರ್ಷಗಳಿಂದ ಹೊಸನಗರ,ಎಡನೀರು,ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.
ಯಕ್ಷಗಾನ ಕಲಾವಿದನಾಗಿ ನೀವು ತೃಪ್ತರೇ? ಎಂಬ ಪ್ರಶ್ನೆಗೆ- ಕಲಾವಿದರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ಯಜಮಾನರುಗಳ ಕೈಕೆಳಗೆ, ಉತ್ತಮ ಕಲಾವಿದರ ಒಡನಾಟದಲ್ಲಿ ದುಡಿಯುವ ಕಲಾವಿದನಿಗೆ ಅತೃಪ್ತಿ ಎಂಬುದು ಮೂಡಲಾರದು. ನನಗೆ ಆ ಭಾಗ್ಯ ಸಿದ್ಧಿಸಿದೆ. ಹಾಗಾಗಿ ನಾನು ಅತ್ಯಂತ ತೃಪ್ತನು ಎಂದು ರೈಗಳು ಉತ್ತರಿಸುತ್ತಾರೆ.
ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಏನೆನಿಸಿತು? ಎಂಬ ಪ್ರಶ್ನೆಗೆ- ಇದು ಕಲಾಮಾತೆಯ ಅನುಗ್ರಹ. ಇಷ್ಟು ವರ್ಷಗಳ ಕಾಲ ಮಾಡಿದ ಸೇವೆಗೆ ಪ್ರತಿಫಲ ಸಿಕ್ಕಾಗ ಸಂತೋಷವಾಯಿತು. ನಾನು ಕಲಾಸೇವೆಯನ್ನು ಮಾಡುವಲ್ಲಿ ಸಹಕರಿಸಿ, ಪ್ರೋತ್ಸಾಹಿಸಿದವರೆಲ್ಲರೂ ಇದಕ್ಕೆ ಕಾರಣರು. ತಿರುಗಾಟದ ಆರಂಭಕ್ಕೆ ಮೊದಲು ಮತ್ತು ಕೊನೆಯಲ್ಲಿ ಈಗಲೂ ಕಟೀಲು ಕ್ಷೇತ್ರಕ್ಕೆ ಹೋಗುತ್ತೇನೆ. ನನ್ನ ಕಲಾಜೀವನದ 60ನೇ ವರ್ಷ ಕಟೀಲು ಮೇಳದ ಬಯಲಾಟವನ್ನು ನಡೆಸಿ (ಕಾಟಿಪಳ್ಳ ಮಹಾಗಣಪತಿ ದೇವಸ್ಥಾನದ ಬಳಿ) ಬಹು ಕಾಲದ ಕನಸನ್ನು ನನಸಾಗಿಸಿದ್ದೇನೆ.
ಹಿಂದಿನ ದಿನಗಳ ತಿರುಗಾಟಕ್ಕೂ, ಈಗಿನ ತಿರುಗಾಟಕ್ಕೂ ಅಂತರವೇನು? ಎಂಬ ಪ್ರಶ್ನೆಗೆ-
ಪರಿವರ್ತನೆ ಸಹಜ. ಮೊದಲು ನಡೆದೇ ತಿರುಗಾಟ. ಸರಂಜಾಮುಗಳನ್ನು ಎತ್ತಿನ ಗಾಡಿಯಲ್ಲಿ ಹೇರುತ್ತಿದ್ದರು. ವೇಣೂರು ಮೇಳದಲ್ಲಿ ಎರಡು ಎತ್ತಿನಗಾಡಿ ಇದ್ದ ನೆನಪು. ಅದರ ಹಿಂದೆಯೋ ಮುಂದೆಯೋ ಕಲಾವಿದರು ನಡೆದೇ ಸಾಗುತ್ತಿದ್ದರು. ಸರಿಯಾದ ಹೊತ್ತಿಗೆ ಸ್ನಾನ, ನಿದ್ರೆ, ಆಹಾರ ಸಿಗದೆ ಕಲಾವಿದರು ನಿಜವಾಗಿಯೂ ಬೇಕಾಗಿರುವ ಅವಶ್ಯಕತೆಗಳಿಂದ ವಂಚಿತರಾಗುತ್ತಿದ್ದರು. 1980ರ ಸುಮಾರಿಗೆ ಕಟೀಲು ಮೇಳಗಳಿಗೆ ಲಾರಿಯ ವ್ಯವಸ್ಥೆ ಬಂತು. ಈಗ ಹಾಗಲ್ಲ. ಪ್ರಾಯೋಜಕರು ಉತ್ತಮ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಕಲಾವಿದರು ವ್ಯಕ್ತಿತ್ವವನ್ನು ಉಳಿಸಿಕೊಂಡರೆ ಪ್ರತಿಫಲವೂ ಇದೆ. ಉತ್ತಮ ಜೀವನವೂ ಇದೆ.
ಕಿರಿಯ ಕಲಾವಿದರಿಗೆ ಸಂದೇಶವೇನು? : ಶಿಸ್ತಿನ ಜೀವನ ಅವಶ್ಯ. ಆರೋಗ್ಯವನ್ನು ನಿರಂತರ ಕಾಪಾಡಿಕೊಳ್ಳಬೇಕು. ಸತತ ಅಭ್ಯಾಸಿಯಾಗಿರಬೇಕು. ಮೊದಲು ಬಯಲಾಟ ಹಳ್ಳಿ ಪ್ರದೇಶದಲ್ಲಿ ಮಾತ್ರ ನಡೆಯುತ್ತಿತ್ತು. ಈಗ ಯಕ್ಷಗಾನದ ವ್ಯಾಪ್ತಿ ವಿಸ್ತರಣೆಯಾಗಿದೆ. ನಗರಗಳಲ್ಲೂ ಪ್ರದರ್ಶನಗಳು ನಡೆಯುತ್ತವೆ. ವಿದ್ಯಾವಂತ ಪ್ರೇಕ್ಷಕರು ಯಕ್ಷಗಾನದತ್ತ ಒಲವನ್ನು ಹರಿಸುತ್ತಿದ್ದಾರೆ. ಕಲಾವಿದನು ಕೇವಲ ಕುಣಿತ ಕಲಿತರೆ ಸಾಲದು. ವೇಷಕ್ಕೆ ಸರಿಯಾಗಿ ಮಾತುಗಾರಿಕೆ ಬೇಕು. ಪುರಾಣಜ್ಞಾನ, ಪ್ರಸಂಗದ ನಡೆಗಳನ್ನು ತಿಳಿಯಲೇಬೇಕು. ಆಲಸಿಯಾಗದೆ ಸತತ ಅಭ್ಯಾಸ ಮಾಡಿದರೆ ಮಾತ್ರ ಉತ್ತಮ ಕಲಾವಿದನಾಗಬಹುದು.
ಕಲಾಜೀವನದ ಯಶಸ್ಸಿಗೆ ಕಾರಣರಾದವರು ಹಲವರು. ಊರಿನ ಯಜಮಾನರಾದ ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ಮತ್ತು ಶ್ರೀ ಟಿ. ಶ್ಯಾಮ ಭಟ್ಟರು. ಕಲ್ಲಾಡಿ ಶ್ರೀ ವಿಠಲ ಶೆಟ್ಟರು, ಅಲ್ಲದೆ ಅಗರಿ ಶ್ರೀನಿವಾಸ ಭಾಗವತರು, ಇರಾ ಗೋಪಾಲಕೃಷ್ಣ ಭಾಗವತರು, ಬಲಿಪ ನಾರಾಯಣ ಭಾಗವತರು, ನಿಡ್ಲೆ ನರಸಿಂಹ ಭಟ್ಟರು, ಕಾಸರಗೋಡು ವೆಂಕಟ್ರಮಣರವರು, ಬಣ್ಣದ ಕುಟ್ಯಪ್ಪು, ಕೇದಗಡಿ ಗುಡ್ಡಪ್ಪ ಗೌಡರು, ಕೆ. ಗೋವಿಂದ ಭಟ್ಟರು, ಕಲ್ಲಡ್ಕ ಮಾಧವ ಶೆಟ್ಟಿಯವರು ಮೊದಲಾದವರ ಸಹಕಾರವನ್ನು ಒಪ್ಪುವ ಸಹಕಲಾವಿದರೆಲ್ಲರ ಸಹಕಾರವನ್ನು ನೆನಪಿಸುವ, ಸಂಪಾಜೆ ಶೀನಪ್ಪ ರೈಗಳ ಸಹೋದರರಲ್ಲಿ ಚಂದ್ರಶೇಖರ ರೈಗಳು ಹವ್ಯಾಸೀ ಉತ್ತಮ ಕಲಾವಿದರು. ಗಂಗಾಧರ ರೈಗಳು ಹವ್ಯಾಸೀ ಮದ್ದಳೆಗಾರರು. ಇವರ ಸಹಕಾರವನ್ನೂ ಶೀನಪ್ಪ ರೈಗಳು ನೆನಪಿಸುತ್ತಾರೆ.
ಕುಟುಂಬ : ಪತ್ನಿ : ಗಿರಿಜಾವತಿ ರೈ. ಮಕ್ಕಳು : ಜಯರಾಮ, ರೇವತಿ, ರಜನಿ. ಪುತ್ರ ಜಯರಾಮ ಉದ್ಯೋಗಿ, ಉತ್ತಮ ಹವ್ಯಾಸೀ ಕಲಾವಿದ. ಶೀನಪ್ಪ ರೈಗಳ ಹೆಜ್ಜೆಗಾರಿಕೆಯ ಛಾಪನ್ನು ಇವರ ಹೆಜ್ಜೆಗಾರಿಕೆಯಲ್ಲೂ ನಮಗೆ ಕಾಣಬಹುದು.ು
ಲೇಖನ: ರವಿಶಂಕರ್ ವಳಕ್ಕುಂಜ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು