Saturday, November 23, 2024
Homeಯಕ್ಷಗಾನಮರೆಯಾದ ಅಪೂರ್ವ ಕಲಾವಿದ,ಸಂಘಟಕ, ಸಾಮಾಜಿಕ ಮುಂದಾಳು ಕಜೆ ಈಶ್ವರ ಭಟ್

ಮರೆಯಾದ ಅಪೂರ್ವ ಕಲಾವಿದ,ಸಂಘಟಕ, ಸಾಮಾಜಿಕ ಮುಂದಾಳು ಕಜೆ ಈಶ್ವರ ಭಟ್

ಕಲಾವಿದನಾಗಿ, ಸಂಘಟಕನಾಗಿ ಯಕ್ಷಗಾನದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಕೃಷಿ, ಶಿಕ್ಷಣ, ಸಹಕಾರ, ಸಾಹಿತ್ಯ ಮತ್ತು ಸಾಂಸ್ಕೃತಿಕ  ಕ್ಷೇತ್ರದಲ್ಲಿ ಚಿರಪರಿಚಿತರಾದವರು ಕಜೆ ಈಶ್ವರ ಭಟ್ಟರು. ಅವರು 2019ರಲ್ಲಿ ತಮ್ಮ 89ರ ಹರೆಯದಲ್ಲಿ ನಮ್ಮನ್ನು ಅಗಲಿದ್ದಾರೆ. ಬೆಳ್ತಂಗಡಿ, ಪುತ್ತೂರು-ಉಪ್ಪಿನಂಗಡಿ ಪರಿಸರದ ಯಕ್ಷಗಾನ ಸಾಹಿತ್ಯ, ಸಹಕಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಗಳಲ್ಲಿ ಕಜೆ ಈಶ್ವರ ಭಟ್ಟರು ಸಕ್ರಿಯರಾಗಿದ್ದವರು. ಸದಾ ಶ್ವೇತವಸ್ತ್ರ ಧಾರಿಯಾಗಿ ಹಸನ್ಮುಖಿಯಾಗಿ ಜನರ ಮಧ್ಯೆ ಬೆರೆಯುವ ಭಟ್ಟರು ತಾಲೂಕು, ಜಿಲ್ಲಾಮಟ್ಟದ ಸಂಘಗಳಲ್ಲಿ-ಸಂಸ್ಥೆಗಳಲ್ಲಿ ನಿರ್ದೇಶಕ, ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ ದುಡಿದಿದ್ದಾರೆ.


ಉಪ್ಪಿನಂಗಡಿ ಸಿ.ಎ. ಬ್ಯಾಂಕಿನ ಅಧ್ಯಕ್ಷರಾಗಿ 10 ವರ್ಷ, ಪುತ್ತೂರು ಜೇನು ಸಹಕಾರಿ ಸಂಘದ ಅಧ್ಯಕ್ಷ, ಮಂಗಳೂರು ಜನತಾ ಬಜಾರ್‍ನ ಉಪಾಧ್ಯಕ್ಷ, ಸ್ಕ್ಯಾಡ್ಸ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಭಟ್ಟರು ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿ ಸಮಿತಿಯ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಉಪ್ಪಿನಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಭಟ್ಟರ ಸಾಧನೆಯು ಗಣನೀಯವಾದದ್ದು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಮೊಕ್ತೇಸರ, ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ರಜತೋತ್ಸವ ಮತ್ತು ಸಾರ್ವಜನಿಕ ಗಣೇಶೋತ್ಸವದ ರಜತ ವರ್ಷದ ಸಮಿತಿಯ ಗೌರವ ಅಧ್ಯಕ್ಷರಾಗಿ ಪರಿಸರದ ಸಾಮಾಜಿಕ ಸಂಘಟನೆಯಲ್ಲಿಯೂ ಸಕ್ರಿಯರು. ತನ್ನ ಸಂಘಟನಾ ಸಾಮರ್ಥ್ಯದಿಂದ ಬೆಂಗಳೂರಿನ ಅಖಿಲ ಭಾರತ ಹವ್ಯಕ ಮಹಾಸಭಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಕಜೆ ಗೋವಿಂದ ಭಟ್ಟ-ಸರಸ್ವತಿ ಅಮ್ಮ ದಂಪತಿಯ ಪುತ್ರನಾಗಿ 30.11.1930ರಲ್ಲಿ ಜನಿಸಿದ ಈಶ್ವರ ಭಟ್ಟರು ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಮೆಟ್ರಿಕ್ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. ಖ್ಯಾತ ಅರ್ಥಧಾರಿ ದೇರಾಜೆ ಸೀತಾರಾಮಯ್ಯರ ಸಂಪರ್ಕದಿಂದ ಯಕ್ಷಗಾನ ತಾಳಮದ್ದಳೆ ಕ್ಷೇತ್ರವನ್ನು ಪ್ರವೇಶಿಸಿದ ಇವರು ಕೆದಿಲದ ಯಕ್ಷಗಾನ ಕಲಾವರ್ಧಿನಿ ಸಭಾದ ಪ್ರಧಾನ ಕಾರ್ಯದರ್ಶಿಯಾಗಿ ತಾಳಮದ್ದಳೆಯ ಅರ್ಥಧಾರಿಯಾಗಿ ಸಂಘವನ್ನು ಮುನ್ನಡೆಸಿದ್ದಾರೆ.


ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಶೇಣಿ, ದೊಡ್ಡ ಸಾಮಗ, ದೇರಾಜೆ, ಮೂಡಂಬೈಲು, ಉಡುವೆಕೋಡಿ ಸುಬ್ಬಪ್ಪಯ್ಯರಂತಹ ಕಲಾವಿದರಿಂದ ನಿರಂತರ ತಾಳಮದ್ದಳೆಗಳ ಸಂಘಟನೆ. ವಿಧಾನ ಪರಿಷತ್ತು ಸದಸ್ಯರಾಗಿದ್ದ ಖ್ಯಾತ ವಕೀಲ ಕುಬಣೂರು ಬಾಲಕೃಷ್ಣ ರಾವ್ ನೇತೃತ್ವದಲ್ಲಿ ಮಂಡೆಚ್ಚ, ಶೇಣಿ, ದೇರಾಜೆ, ಪೆರ್ಲ, ಮಹಾಬಲ ನೋಂಡ, ಈಶ್ವರಪ್ಪಯ್ಯ ಮೊದಲಾದ ಕಲಾವಿದರೊಂದಿಗೆ ತಮಿಳುನಾಡಿನ ಮಧುರೈ, ಕಂಚಿಕಾಮಕೋಟಿಪೀಠ, ಬೆಂಗಳೂರಿನ ವಿಧಾನ ಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ಜರಗಿದ ಅಪೂರ್ವ ತಾಳಮದ್ದಳೆಗಳಲ್ಲಿ ಕಜೆ ಈಶ್ವರ ಭಟ್ಟರು ಭಾಗಿಯಾಗಿದ್ದಾರೆ. ಧರ್ಮರಾಯ, ವಿದುರ, ತಾರೆ, ಹನುಮಂತ ಮುಂತಾದ ಪಾತ್ರಗಳ ನಿರ್ವಹಣೆಯಲ್ಲಿ ಭಟ್ಟರು ಸಿದ್ಧಹಸ್ತರಾಗಿದ್ದರು.


ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ವಾರ್ಷಿಕೋತ್ಸವ, ರಜತ ಮಹೋತ್ಸವ ಸಮಾರಂಭಗಳಲ್ಲಿ ಶೇಣಿ, ರಾಮದಾಸ ಸಾಮಗ, ಪೆರ್ಲ, ಜೋಷಿ, ತೆಕ್ಕಟ್ಟೆ, ಕುಂಬ್ಳೆ ಸುಂದರ ರಾವ್, ಮೂಡಂಬೈಲು, ಪದ್ಯಾಣ, ಪುತ್ತಿಗೆ, ಅಮ್ಮಣ್ಣಾಯ, ಚಿಪ್ಪಾರು, ಕಡಬ ಮೊದಲಾದವರನ್ನು ಒಗ್ಗೂಡಿಸಿ ಉತ್ತಮ ತಾಳಮದ್ದಳೆಗಳನ್ನು ಸಂಘಟಿಸಿದ್ದಾರೆ.


ಉಪ್ಪಿನಂಗಡಿಯಲ್ಲಿ ಜರಗಿದ ಪುತ್ತೂರು ತಾಲೂಕಿನ 2ನೇ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ “ಕನ್ನಡ ಸಂಗಮ”ವನ್ನು ಸ್ಥಾಪಿಸಿ ಪ್ರತಿ ವರ್ಷವು ಪ್ರಸಿದ್ಧ ಸಾಹಿತಿಗಳನ್ನು ಆಹ್ವಾನಿಸಿ ಸಾಹಿತ್ಯದ ಕಂಪನ್ನು ಹರಡಿದ್ದಾರೆ. ಇಳಂತಿಲದ ಅಂಡೆತಡ್ಕದಲ್ಲಿ ಜರಗಿದ ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳನದ ಸ್ಮರಣೆಗಾಗಿ ಕನ್ನಡ ಬಳಗವನ್ನು ಸ್ಥಾಪಿಸಿ ಗ್ರಾಮೀಣ ಪರಿಸರದಲ್ಲಿ ಶಾಲಾ ಮಕ್ಕಳಿಗಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ವಾರ್ಷಿಕವಾಗಿ ನಡೆಸುವಲ್ಲಿ ಪ್ರೇರಕರಾಗಿದ್ದಾರೆ.


ಕೈಬರಹದ ಸಾಹಿತ್ಯ ಪುರವಣಿಯನ್ನು ಬಹಳ ವರ್ಷಗಳ ಹಿಂದೆ ಪ್ರಕಟಿಸುವ ಮೂಲಕ ತನ್ನ ಸಾಹಿತ್ಯ ಪ್ರೀತಿಯನ್ನು ವ್ಯಕ್ತಪಡಿಸಿದ ಭಟ್ಟರು ಹಲವು ಸ್ಮರಣ ಸಂಚಿಕೆ, ಅಭಿನಂದನಾ ಗ್ರಂಥಗಳಲ್ಲಿ ಮೌಲಿಕ ಲೇಖನಗಳನ್ನು ಬರೆದಿದ್ದಾರೆ. ತನ್ನ ಹುಟ್ಟೂರು ಕಜೆಯನ್ನು ಬಿಟ್ಟು ಉಪ್ಪಿನಂಗಡಿ ನೇತ್ರಾವತಿ ನದಿ ತೀರದ ಎತ್ತರದ “ಕೇದಾರ”ದಲ್ಲಿ ವಾಸ್ತವ್ಯವಿದ್ದ ಈಶ್ವರ ಭಟ್ಟರು ಆದರ್ಶ ಕೃಷಿಕರಾಗಿಯೂ ಗಮನ ಸೆಳೆದಿದ್ದಾರೆ. ಹೈನುಗಾರಿಕೆ, ಅಡಿಕೆ, ಬಾಳೆ, ರಬ್ಬರ್, ವಿವಿಧ ಹೂವು ಹಣ್ಣುಗಳ ಕೃಷಿಯ ಮೂಲಕ ಸಾಧನೆ ಮಾಡಿದ್ದಾರೆ. ಇವರ ಕೃಷಿ ಕ್ಷೇತ್ರಕ್ಕೆ ವಿದ್ಯಾರ್ಥಿಗಳು, ರೈತರು ಭೇಟಿ ನೀಡಿ ಪ್ರಾತ್ಯಕ್ಷಿಕೆಯನ್ನು ಪಡೆದಿದ್ದಾರೆ.


ಪ್ರತಿ ವರ್ಷ ಡಿಸೆಂಬರ್ ಪ್ರಥಮ ಶನಿವಾರ ಕೇದಾರದಲ್ಲಿ ನಡೆಯುತ್ತಿದ್ದ ಸಾಯಿ ಭಜನೆ ಸರ್ವಧರ್ಮೀಯರು ಪಾಲ್ಗೊಳ್ಳುವಂತಹ ಒಂದು ಅಪೂರ್ವ ಕಾರ್ಯಕ್ರಮವಾಗಿತ್ತು. ಯಾವುದೇ ಕಾರ್ಯಕ್ರಮವಿರಲಿ ರುಚಿ-ಶುಚಿಯಾದ ಆತಿಥ್ಯಕ್ಕೆ ಕಜೆಯವರ ಮನೆ ಮಾದರಿ.
ಮಡದಿ ಶ್ರೀಮತಿ ಇಂದಿರಾ ಪುತ್ರರಾದ ಡಾ| ಗೋವಿಂದ ಪ್ರಸಾದ್, ವಕೀಲ ಮಹೇಶ, ಮಗಳು ವೀಣಾ ಶಾಸ್ತ್ರಿ ಮತ್ತು ಅಪಾರ ಬಂಧು ಮತ್ತು ಸ್ನೇಹಿತರ ವಲಯದಲ್ಲಿ 89 ವರ್ಷಗಳ ಸಾರ್ಥಕ ಬದುಕು ಈಶ್ವರ ಭಟ್ಟರದು. ವಿವಿಧ ಆಯಾಮಗಳಲ್ಲಿ ಕ್ರಿಯಾಶೀಲರಾಗಿದ್ದ ಈಶ್ವರ ಭಟ್ಟರಿಗೆ ಹಲವಾರು ಸನ್ಮಾನ ಪುರಸ್ಕಾರಗಳು ಸಂದಿವೆ. 2017ರಲ್ಲಿ ಉಪ್ಪಿನಂಗಡಿಯಲ್ಲಿ ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘ ಆಯೋಜಿಸಿದ ಶೇಣಿ ಶತಮಾನೋತ್ಸವ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಶೇಣಿ ಗೋಪಾಲ ಕೃಷ್ಣ ಚಾರಿಟೇಬಲ್ ಟ್ರಸ್ಟ್ “ಶೇಣಿ ಶತಮಾನೋತ್ಸವ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದ್ದು ಇವರಿಗೆ ಸಂತಸವನ್ನು ನೀಡಿತ್ತು.ು


ಲೇಖಕ: ದಿವಾಕರ ಆಚಾರ್ಯ, ಗೇರುಕಟ್ಟೆ
9449076275

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments