Sunday, November 24, 2024
Homeಯಕ್ಷಗಾನದ್ರುಪದ ಪುರೋಹಿತರಾರು?

ದ್ರುಪದ ಪುರೋಹಿತರಾರು?

ಪಾಂಡವರು ವನವಾಸ; ಅಜ್ಞಾತವಾಸಗಳನ್ನು (ವಿರಾಟನಗರಿ) ಪೂರೈಸಿದ ಮೇಲೆ ಸ್ವಲ್ಪ ಕಾಲ ಮತ್ಸ್ಯದೇಶದ ಹೊರವಲಯದ ಉತ್ತರ ದಿಕ್ಕಿನಲ್ಲಿ ಹೊಸತಾಗಿ ನಿರ್ಮಾಣಗೊಂಡ ಉಪಪ್ಲವ್ಯ ನಗರದಲ್ಲಿರುತ್ತಾರೆ. ಅಲ್ಲಿಂದಲೇ ಓರ್ವನನ್ನು ‘ನಾಡಬೇಡಲು’ ಹಸ್ತಿನಾವತಿಗೆ ಕಳುಹಿಸುವುದೆಂದು ಅಲ್ಲಿ ಸೇರಿದವರು ನಿರ್ಣಯಿಸುತ್ತಾರೆ. ಅಲ್ಲಿ ಯಾರನ್ನು ಕಳುಹಿಸಿದ್ದು? ದೇವಿದಾಸನು (ಕಾಲ ಸು. ಕ್ರಿ. ಶ. 1800) ಬರೆದ ‘ಕೃಷ್ಣ ಸಂಧಾನ’ ಪ್ರಸಂಗದಲ್ಲಿ-
ವಾರ್ಧಕ : ಪರಿಣಯದ ನೆವದಿ ಬಂದಸುರಾರಿ ಪಾಂಡವರ
ಪಿರಿದು ಸಂತಯಿಸುತ ವಿವೇಕಿಯೋರ್ವನನಟ್ಟಿ
ಕುರುರಾಯನೊಳ ಕ್ಷಿತಿಯ ಕೇಳಿಸುವುದಾತನನುವಾಗದಿರಲೆಯ್ದ ರಣಕೆ
ಕರೆಸಲಾ ಕ್ಷಣ ತಾನು ಬರುವೆನೆಂದಚ್ಯುತಂ
ತೆರಳಲಿತ್ತಲು ಭೀಮಪಾರ್ಥಮಾದ್ರೇಯರೊಡ
ವೆರಸಿ ದ್ರುಪದ ವಿರಾಟ ಮುಖ್ಯರಿಂ ಯಮಜನೋಲಗವಿತ್ತನುತ್ಸವದೊಳು || 14 ||


ಕ್ಷಿತಿಪ ದ್ರುಪದನ ಪುರೋಹಿತನ ಕರೆದು ಕೃತಾಂತ | ಸುತನೆಂದ ನೀನು ಕುರು | ಪತಿಯ ಬಳಿಗಯ್ದ || 15 || ಅವನಿಯೊಳಗರ್ಧ ರಾ | ಜ್ಯವನು ಕೊಡುವುದೆನುತ್ತ | ಸುವಿವೇಕದಿಂ ಕೇಳಿ | ಜವದಿ ಬಹುದೆಂದು || 16 || ಮಹಿಷನಾಜ್ಞೆಯೊಳಾತ | ವಿರತದಿಂ ಬರಲಿತ್ತ | ಲಹಿತರುಗಳಿರದೆ ಗೋ | ಗ್ರಹಣ ಮುಖದಿಂದ || 17 || ಪೆÇರಗೈದರಿನ್ನು ಸಂ | ಗರ ಮುಖದೊಳಲ್ಲದಡೆ | ಧರೆಯ ನಾ ಕೊಡೆನೆಂದು | ಕುರುರಾಯನಿರಲು || 18 || ಆ ಸಮಯ ದೊಳನೀತ | ಆ ಸಭೆಯ ಪೆÇಗಲು ಕಂ | ಡಾ ಸುಯೋಧನನವನ | ತೋಷಗೊಳಿಸುತಲಿ || 19 || ಬಂದ ಕಾರ್ಯವ ಬೆಸಸಿ | ರೆಂದಡರುಹಿದ ಯಮನ | ಕಂದ ನಿನ್ನೆಡೆಗೆನ್ನ ಸಂಧಿಗಟ್ಟಿದನು || 20 || ಇನ್ನಾದರರ್ಧರಸೆ | ಯನ್ನಿತ್ತು ಕರುಣದಲಿ | ಮನ್ನಿಸುವುದೆಂದೆನಲು | ಅನ್ನೆಗವ ನುಡಿದ || 21 ||


ವಾರ್ಧಕ : ಧರಣಿಯಂ ಪಾರ್ಥಿವರ್ ಸೋತಮೇಲರಿಗಳಂ
ಧುರದೊಳಂ ಜೈಸಿಕೊಂಬುದು ಧರ್ಮಮೆಂದಾತ
ಗರುಹೆನುತಲಾಪ್ತರೊಡನಾಲೋಚಿಸುತ ಹರಿಯ ತನ್ನೊಳಗೆ ಮಾಳ್ಪಮನದಿ | (22ರ ಪೂರ್ವಾರ್ಧ)
ಪ್ರಸಂಗ ಪದ್ಯಗಳ ಆಧಾರದಿಂದ; ಧರ್ಮರಾಯನು ದ್ರುಪದ ಪುರೋಹಿತನನ್ನು ಹಸ್ತಿನಾವತಿಗೆ ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣನು ‘ವಿವೇಕಿಯೋರ್ವನನಟ್ಟಿ’ ಎಂದಷ್ಟೇ ಹೇಳಿದ್ದಾನೆ. ಹಸ್ತಿನಾವತಿಗೆ ಹೋದಂತಹ ದ್ರುಪದ ಪುರೋಹಿತರಿಗೆ ದುರ್ಯೋಧನನು ‘‘ಅರಿಗಳಂ ಧುರದೊಳಂ ಜೈಸಿಕೊಂಬುದು ಧರ್ಮವೆಂದಾತಗರುಹು’’ ಎಂದು ಹೇಳಿದ್ದಾನೆ. ದ್ರುಪದ ಪುರೋಹಿತನು ಹಿಂದಿರುಗಿ ಬಂದು ಧರ್ಮರಾಯನಲ್ಲಿ ದುರ್ಯೋಧನನ ಮಾತುಗಳನ್ನು ತಿಳಿಸಿದನೇ? ‘ಅರುಹು’ ಎಂಬುದಾಗಿ ವಾಚಕವಿರುವುದರಿಂದ ತಿಳಿಸಿರಬಹುದೆಂದು ಊಹಿಸಬಹುದು; ಆದರೆ ಪ್ರಸಂಗದಲ್ಲಿ ದ್ರುಪದ ಪುರೋಹಿತ ಹಿಂದಿರುಗಿ ಬಂದನೆಂದೂ; ತಿಳಿಸಿದನೆಂಬುದಕ್ಕೆ ಆಧಾರ ಸಾಲದು.


ನಮ್ಮ ಕೆಲವು ಯಕ್ಷಗಾನ ಕಲಾವಿದರು ಪ್ರಸಂಗಕ್ಕೆ ಅರ್ಥೈಸುವಾಗ ದ್ರುಪದ ಪುರೋಹಿತರೆಂದರೆ ‘ಶತಾನಂದ’ರೆಂದು ಹೇಳುತ್ತಲೇ ಬಂದಿದ್ದಾರೆ. ಇದಕ್ಕೆ ಎಲ್ಲಿದೆ ಆಧಾರ?
ದೇರಾಜೆ ಸೀತಾರಾಮಯ್ಯನವರ ‘‘ಶ್ರೀಮನ್ಮಹಾಭಾರತ ಕಥಾಮೃತಂ’’ ಗದ್ಯಕಾವ್ಯದಲ್ಲಿ ‘ದ್ರುಪದ ರಾಜನು ಒಳ್ಳೆಯ ಮುಹೂರ್ತ ನೋಡಿ ತನ್ನ ಪುರೋಹಿತರಾದ ಶತಾನಂದರನ್ನು ಏಕಾಂತವಾಗಿ ಕರೆಸಿಕೊಂಡು ಧೃತರಾಷ್ಟ್ರನಲ್ಲಿಗೆ ಹೋಗಿ ಧರ್ಮಯುಕ್ತವಾದ ಹಿತವಾದಗಳನ್ನು ಹೇಳಿ, ಅವರ ಎಲ್ಲ ಪ್ರಮುಖ ವೀರರನ್ನು ದುರ್ಯೋಧನನ ಮಾರ್ಗದಿಂದ ತಿರುಗಿಸಬೇಕು ಎಂದು ಬರೆದಿದ್ದಾರೆ. (ಪುಟ 441-442) ದೇರಾಜೆಯವರು ಮತ್ತು ಮುಂದೆ ಹೋಗಿ ಶತಾನಂದರಲ್ಲಿ; ಅಲ್ಲಿದ್ದು ಬೇಹುಗಾರಿಕೆ ಮಾಡುವಂತೆ ಸೂಚಿಸಿದ್ದಾರೆ. (ಪ್ರಸಂಗದಲ್ಲಿ ದ್ರುಪದ ಪುರೋಹಿತರು ಹಿಂದಿರುಗಿ ಬಂದ ಸೂಚನೆ ಲಭಿಸದಿರುವುದಕ್ಕೆ ದೇರಾಜೆಯವರ ಸಮಾಧಾನ) ದೇರಾಜೆಯವರು ಬರೆದಿರುವ ಕೆಲವು ಅಂಶಗಳಿಗೆ ವ್ಯಾಸಭಾರತದ ಉದ್ಯೋಗಪರ್ವದ ಆರನೆಯ ಅಧ್ಯಾಯ ಆಧಾರ.


ಶಿಷ್ಯೆ : ಪರಿವೃತೋ ವಿದ್ವಾನ್ ನೀತಿಶಾಸ್ತ್ರಾರ್ಥ ಕೋವಿದಃ
ಪಾಂಡವನಾಂ ಹಿತಾರ್ಥಾಯ ಕೌರವಾನ್ ಪ್ರತಿಜನ್ಮಿವಾನ್ (6-19)
ವ್ಯಾಸಭಾರತದಲ್ಲಿ ಮುಂದುವರಿದು ಇಪ್ಪತ್ತನೆಯ ಅಧ್ಯಾಯದಲ್ಲಿ ‘‘ದ್ರುಪದ ಪುರೋಹಿತಸ್ಯ ಕೌರವ ಸಭಾಯಾಂ ಭಾಷಣಮ್’’ ಎಂಬುದಾಗಿ ಇಪ್ಪತ್ತೊಂದು ಶ್ಲೋಕ ಛಂದಸ್ಸಿನಲ್ಲಿ ಅವನ ಮಾತುಗಳಿವೆ. ಅನಂತರ ಇಪ್ಪತ್ತೊಂದನೆಯ ಅಧ್ಯಾಯದಲ್ಲಿ ದ್ರುಪದ ಪುರೋಹಿತನ ಮಾತುಗಳನ್ನೊಪ್ಪಿದ ಭೀಷ್ಮರ ಮಾತುಗಳಿವೆ. ವ್ಯಾಸರಲ್ಲಿ ‘ದ್ರುಪದ ಪುರೋಹಿತ’ ಎಂಬ ವಾಚಕವಿದೆಯೇ ವಿನಾ ನಾಮನಿರ್ದೇಶವಿಲ್ಲ.
ಮಹಾಭಾರತದ ಕತೆಗೆ ಸಂಬಂಧಿಸಿದ ಯಕ್ಷಗಾನದ ಹೆಚ್ಚಿನ ಪ್ರಸಂಗಗಳಿಗೆ ಕುಮಾರವ್ಯಾಸನ (ಕಾಲ ಸು. 1430) ‘ಕರ್ಣಾಟ ಭಾರತ ಕಥಾಮಂಜರಿ’ಯೇ ಮೂಲ ಆಕರ. ದ್ರುಪದ ಪುರೋಹಿತನ ನಾಮನಿರ್ದೇಶ ಕುಮಾರವ್ಯಾಸನಲ್ಲಿ ಇದೆಯೇ? ಹಸ್ತಿನಾವತಿಗೆ ರಾಯಭಾರಿಯಾಗಿ ಯಾರು ಯಾರನ್ನು ಕಳುಹಿಸಿದರು?


ಬಳಿಕ ಸುಮುಹೂರ್ತದಲಿ ಮತ್ಸ್ಯನ
ಹೊಳಲ ಹೊರವಂಟುತ್ತರ ದಿಶಾ
ವಳಯದಲಿ ರಚಿಸಿದರುಪಪ್ಲವ್ಯಾಖ್ಯಪುರವರವ
ನೆಲನಗಲದಲಿ ಕಟ್ಟಿಕೇರಿಯ
ನಳವಡಿಸಿದರು ನಿಖಿಳ ನೃಪರಿಗೆ
ಬಳಿಯನಟ್ಟಿದನುತ್ತರೋತ್ತರವಾದುದಿವರುದಯ (ವಿ. ಪ. 10-44)
ಅಭಿಮನ್ಯು-ಉತ್ತರೆಯರ ವಿವಾಹ ಕಾರ್ಯ ಇಲ್ಲಿ ನಡೆಯಿತು.
ಮದುವೆಗೋಸುಗ ಬಂದೆವಾವಿ
ನ್ನದರ ಮೇಲಣ ರಾಜಕಾರ್ಯದ
ಹದನವಟ್ಟುವುದರುಹುವುದು ಬಹೆವಾವುಕರೆಸಿದಡೆ (ವಿ. ಪ. 10-12ರ ಪೂರ್ವಾರ್ಧ)


ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ (ಉ. ಪ. 1-5)
ಕೂತುಕೊಂಡಿಹುದಿವದ ಮಕ್ಕಳ
ನೋಡಲಾಗದು ಹೆಚ್ಚು ಕುಂದನು
ನಾಡಬೇಡಲು ಬುದ್ಧಿವಂತರನಲ್ಲಿಗಟ್ಟುವುದು
ಕೂಡೆ ಶೋಧಿಸಿ ಸೆಜ್ಜೆಯಲಿ ಮೈ
ಗೂಡಿಯಾರೋಗಣೆಗಳಲಿ ಕೈ
ಮಾಡಿ, ಬೆರಸಿಹುದೆಂದು ದ್ರುಪದ ವಿರಾಟರಿಗೆ ನುಡಿದ (ಉ. ಪ. 1-13)


ಹಸ್ತಿನಾವತಿಗೆ ‘ಕಳುಹುವುದು ಶಿಷ್ಟರನು’ ಅಥವಾ ‘‘ನಾಡಬೇಡಲು ಬುದ್ಧುವಂತರನಲ್ಲಿಗಟ್ಟುವುದು’’ ಎಂದು ಕೃಷ್ಣನ ಮಾತು; ದ್ರುಪದ ಪುರೋಹಿತನನ್ನು ಕಳುಹಿಸಬೇಕೆಂದು ಸ್ಪಷ್ಟವಾಗಿ ಹೇಳಿಲ್ಲ.
ಎಂದು ಕಳುಹಿಸಿಕೊಂಡು ನಾರೀ
ವೃಂದ ಯದುಕುಲಸಹಿತ ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ
ಒಂದು ದಿನದಾ ಲೋಚನೆಯ ನೆಲೆ
ಯಿಂದ ಕರೆದು ಪುರೋಹಿತನ ನಲ
ವಿಂದ ಕಳುಹಿದ ದ್ರುಪದನಾ ಕೌರವನ ಪಟ್ಟಣಕೆ (ಉ. ಪ. 1-14)
ಕುಮಾರವ್ಯಾಸನ ಪ್ರಕಾರ ದ್ರುಪದನೇ ತನ್ನ ಪುರೋಹಿತನನ್ನು ಕೌರವನ ಪಟ್ಟಣಕ್ಕೆ ಕಳುಹಿಸಿದ್ದು; ಯಕ್ಷಗಾನ ಪ್ರಸಂಗದಂತೆ ಧರ್ಮರಾಯನು ದ್ರುಪದ ಪುರೋಹಿತನನ್ನು ಹಸ್ತಿನಾವತಿಗೆ ಹೋಗುವಂತೆ ಹೇಳಿದುದು. ಯಾರೇ ಕಳುಹಿಸಿದರೂ; ಕಳುಹಿಸಿದವನ ಹೆಸರನ್ನು ಸೂಚಿಸಿಲ್ಲ. ಹಸ್ತಿನಾವತಿಗೆ ಬಂದ ಪುರೋಹಿತನು-


ದ್ರುಪದ ರಾಜಪುರೋಹಿತನು ಕುರು
ನೃಪನವಿತ್ತಲು ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜ ರಾಜಕಾರಿಯವ
ಕೃಪಣತನದಲಿ ಕೌರವನು ಗುರು
ಕೃಪನ ಭೀಷ್ಮನ ಮತವನೊಲ್ಲದೆ
ಚೌಪಳ ಕರ್ಣನ ಕೂಡೆ ನಿಶ್ಚೈಸಿದನು ಕಾಳಗವ (ಉ. ಪ. 2-31)
ಕುಮಾರವ್ಯಾಸನ ಈ ಮಾತುಗಳಿಂದ ಕೌರವನ ಯುದ್ಧವನ್ನು ನಿಶ್ಚಯಿಸಿ ದ್ರುಪದ ಪುರೋಹಿತನಲ್ಲಿ ಹೇಳಿದನೆಂದು ತಿಳಿಯಬಹುದು. ಪುರೋಹಿತನು ಉಪಪ್ಲವ್ಯಕ್ಕೆ ಹಿಂದಿರುಗಿದನೆಂದು ಊಹಿಸಬಹುದು; ಆಧಾರ ಸಾಲದು.


ದ್ರುಪದ ಪುರೋಹಿತನ ಹೆಸರೇನು? ಗದುಗು ಭಾರತದ ಪ್ರಕಾರ; ಪಾಂಚಾಲೆಯ ವಿವಾಹದ ಅನಂತರ ಪಾಂಡವರು ವಧೂಸಮೇತರಾಗಿ ತಾವು ವಾಸ್ತವ್ಯವಿದ್ದ ಕುಂಭಕಾರನ ಮಂದಿರಕ್ಕೆ ಬಂದು ತಾಯಿ; ಕುಂತಿಯನ್ನು ಕಾಣುತ್ತಾರೆ. ಅಂದು ರಾತ್ರಿ ಅವರು ಪರಸ್ಪರ ವಿವಾಹ-ಯುದ್ಧದ ಕುರಿತು ಮಾತನಾಡುತ್ತಿರುತ್ತಾರೆ. ಇತ್ತ ದ್ರುಪದ ನಂದಿನಿಯ ಸಹೋದರನಾದ ಧೃಷ್ಟದ್ಯುಮ್ನನಿಗೆ ತನ್ನ ಸಹೋದರಿಯನ್ನು ಮದುವೆಯಾದವನು ಕ್ಷತ್ರಿಯನೋ; ವಿಪ್ರನೋ ಎಂಬ ಸಂದೇಹ ಬರುತ್ತದೆ. ಅದನ್ನು ಪರೀಕ್ಷಿಸುವುದಕ್ಕಾಗಿ ಆ ದಿನ ರಾತ್ರಿ ಅವನು ಪುರೋಹಿತನೊಡಗೂಡಿ ಕುಲಾಲ ಭವನದ ಹೊರಭಾಗದಲ್ಲಿದ್ದು ಅವರ ಮಾತುಗಳನ್ನು ಕೇಳುತ್ತಿರುತ್ತಾನೆ-


ಮುನಿವಳೀ ಸತಿಯೆಂದು ನಿದ್ರಾಂ
ಗನೆಯ ನೂಕಿದರವನಿಪರು ಭಾ
ಮಿನಿ ಸಹಿತಲಿರಲಿತ್ತಲೀ ಪಾಂಚಾಲ ಭೂಪತಿಯ
ತನುಜನಿವರ ಪರೀಕ್ಷೆಗೋಸುಗ
ಮುನಿಪ ಕಾಶ್ಯಪಗೂಡಿ ಕೇಳಿದ
ನನಿತು ಮಾತೆಲ್ಲವನು ಮರೆಯಲಿ ನಿಂದು ರಜನಿಯಲಿ (ಆ. ಪ. 16-21)


ಧರಣಿಪತಿ ಕೇಳ್ ವಿಪ್ರರಾದರೆ
ಸರಸ ನವಭೋಜನದ ಕಥೆ ಮೇಣ್
ನಿರತಿಶಯ ವೇದಾಂಗ ವೇದ ತದರ್ಥ ತರ್ಕಗಳು
ಅರಸುಗಳಿಗಾಯುಧದ ಗಜ ರಥ
ತುರಗ ದೇರಾಟದ ಮಹಾಸ್ತ್ರದ
ವಿರಚನೆಗಳಿವು ಜಾತಿ ವಿದ್ಯೆಗಳೆಂದನಾ ಮುನಿಪ (ಆ. ಪ. 16-23)
ಭೂರಿ ಧನವರ್ಧನ ಸದಾ ವ್ಯವ
ಹಾರ ಲಾಭಾಲಾಭ ಚಿಂತೆಗ
ಳೂರು ಜನಿತರಿಗಂತ್ಯವರ್ಣಕೆ ಕೃಷಿಯ ಮಾತುಗಳು
ಆರನಾದರು ಜಾತಿ ಧರ್ಮದ
ಸೇರುವೆಗಳೇ ಹೇಳುವುವು ನ
ಮ್ಮಾರಯಿಕೆನಿವರಿಂದು ಕ್ಷತ್ರಿಯರೆಂದು ಮುನಿ ನುಡಿದ (ಆ. ಪ. 16-24)


ಇವರು ಪಾರ್ಥಿವರೊಳಗೆ ಕೇಳ್ ಪಾಂ
ಡವರು ನಿಸ್ಸಂದೇಹವೆಂದೇ
ನಿವಗೆ ನಾವೆನ್ನಲೆ ವಿವಾಹದಪರ್ವಕಾಲದಲಿ
ಅವರನುಪಚಾರಿಸೇಳು ರಚಿಸು
ತ್ಸವವನಾಯ್ತಿದೆ ಪೂರ್ವಗಿರಿಯಲಿ
ರವಿಯುದಯವೆಂದು ಪುರೋಹಿತ ತಿಳುಹಿದನು ನೃಪನ (ಆ. ಪ. 16-25)
ಈ ಪದ್ಯಗಳಿಗೆ ವಿವರಣೆ ಅಗತ್ಯವಿಲ್ಲ. ಈ ಮೇಲಿನ ವಿಚಾರಗಳಿಂದ ದ್ರುಪದ ಪುರೋಹಿತರು ಕಾಶ್ಯಪರೆಂದು ಸಿದ್ಧವಾಗುವುದೇ ಹೊರತು, ಶತಾನಂದರಲ್ಲವೆಂದಾಗುವುದಿಲ್ಲವೇ? ು

ಲೇಖಕರು :
ಡಾ| ಉಪ್ಪಂಗಳ ಶಂಕರನಾರಾಯಣ ಭಟ್
ಚಿನ್ಮಯ ಮಿಶನ್ ಕಾಲನಿ
ಅಂಚೆ : ವಿದ್ಯಾನಗರ – 671 123, ಕಾಸರಗೋಡು


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments