ಇಂದು ಯಕ್ಷಗಾನ ರಂಗದ ಧ್ರುವತಾರೆ ಎಂದು ಕಲಾರಸಿಕರ ಮನದಲ್ಲಿ ಸ್ಥಾಯಿಯಾಗಿ ನೆಲೆಯೂರಿರುವ ರಸ ರಾಗ ಚಕ್ರವರ್ತಿ ಜಿ.ಆರ್.ಕಾಳಿಂಗ ನಾವುಡರು ಜನ್ಮ ತಳೆದ ದಿನ .ನಾವುಡರ ಬಗ್ಗೆ ಹಲವು ವಿದ್ವಾಂಸರು ವಿಭಿನ್ನ ದೃಷ್ಟಿಕೋನದಲ್ಲಿ ಬರೆದಿದ್ದಾರೆ ಎಂಬುದು ಸತ್ಯ. ತುಂಬಿದ ಶರಧಿಯಿಂದ ಎಷ್ಟು ಜಲವನ್ನು ನಮಗೆ ದಕ್ಕಿಸಿಕೊಳ್ಳಬಹುದೋ ಅದು ನಮ್ಮ ಪ್ರಾಪ್ತಿ. ಹಾಗೆಯೇ ಅವರ ಅಪ್ಪಟ ಅಭಿಮಾನಿಯಾಗಿ ನಾನು ಸಹ ನನ್ನ ಬೊಗಸೆಗೆ ದಕ್ಕುವಷ್ಟನ್ನು ಪಡೆಯುವ ಪ್ರಾಮಾಣಿಕ ಯತ್ನಕ್ಕೆ ಕೈ ಇಕ್ಕುತ್ತೇನೆ ಎಂಬ ನಿಲುವಿನೊಂದಿಗೆ ನಾವುಡರೆಂಬ ತೇಜೋಪುಂಜ ವ್ಯಕ್ತಿತ್ವವನ್ನು ಬಿಂಬಿಸಲು ಯತ್ನಿಸುತ್ತೇನೆ.
ಇತಿಹಾಸವನ್ನು ಎಲ್ಲರಿಂದಲೂ ಸೃಜಿಸಲು ಸಾಧ್ಯವಿಲ್ಲ, ಅದು ತನ್ನಷ್ಟಕ್ಕೆ ಪ್ರಕಾಶಕ್ಕೆ ಬರುತ್ತದೆಯಾದರೂ , ಕೆಲವೊಂದು ಅಸಾಮಾನ್ಯ ಸಾಧಕರು ಸಾಧನೆಯ ಬಲುಮೆಯಿಂದ ಇತಿಹಾಸವನ್ನು ಸೃಷ್ಟಿ ಮಾಡಬಲ್ಲರು.ಅದು ಕ್ರೀಡೆ, ಸಾಹಿತ್ಯ , ಕಲೆ ಎಂಬೀ ವಿಭಿನ್ನ ಪ್ರಕಾರವನ್ನು ಹೊಂದಿರಬಹುದು. ಮನುಷ್ಯರ ಗುಣಸ್ವಭಾವಗಳು ಸರ್ವೇ ಸಾಧಾರಣವಾಗಿ ಸಾಮ್ಯತೆಯನ್ನು ಹೊಂದಿರುತ್ತದೆ ಎಂಬುದು ಶತಸಿದ್ಧ. ಕೆಲವರು ಮಾತ್ರ ನಮ್ಮ ಊಹೆಗೂ ಮೀರಿದ ಅಸಾಮಾನ್ಯ ಸಾಧನೆಯನ್ನು ಈ ನೆಲದಲ್ಲಿ ಸ್ಥಾಯಿಯಾಗಿ ಸ್ಥಾಪಿಸಿ ಬಿಡುತ್ತಾರೆ. ಸಾಧಕರು ಮತ್ತು ನೋಟಕರು ಇವೆರಡರ ನಡುವೆ ತೀರಾ ಕಿರಿದಾದ ಅಂತರವಿರಬಹುದು, ಆದರೆ ಸಾಧಕರ ಬಲುಮೆ ಎಂಬುದು ಅನೂಹ್ಯ ಅನುಭೂತಿಯನ್ನು ನೀಡುತ್ತದೆ . ಗಮನಿಸಬೇಕಾದ ವಿಚಾರವಿರುವುದು ಈ ನೆಲದಲ್ಲಿ ಅಳಿಸಲಾಗದ ಅಸದೃಶ ಪ್ರಭಾವವನ್ನು ಬೀರಿ ಇತಿಹಾಸ ನಿರ್ಮಿಸಿದ ಮಹಾನ್ ಸಾಧಕರ ಸಾಧನೆಯ ಕುರಿತಾಗಿ.
ಸಂವತ್ಸರಗಳು ಉರುಳಿದಂತೆ ಮತ್ತಷ್ಟು ಪ್ರಖರತೆಯನ್ನು ಪಡೆದು ಜನಮಾನಸಕ್ಕೆ ಆಪ್ತವಾಗುವ ಒಂದು ವಿಶಿಷ್ಟ ಸಂದರ್ಭ ಇಲ್ಲಿರುವ ಧನಾತ್ಮಕ ಅಂಶ. ಈ ದಿಸೆಯಲ್ಲಿ ನನ್ನ ಯೋಚನಾಲಹರಿಯನ್ನು ಹರಿಯಬಿಟ್ಟಾಗ ನನಗೆ ದೃಗ್ಗೋಚರವಾಗುವುದು ಒಂದು ವಿಶಿಷ್ಟ, ಅಸಾಮಾನ್ಯ , ಅನುಪಮ ವ್ಯಕ್ತಿತ್ವ. ವ್ಯಕ್ತಿತ್ವ ಎಂಬುದಕ್ಕಿಂತಲೂ ಒಂದು Phenomenon ಆಗಿ ದಟ್ಟ ಪ್ರಭಾವವನ್ನು ಬೀರಿದ ಮಹಾನ್ ಚೇತನ ರಸ ರಾಗ ಚಕ್ರವರ್ತಿ ಯಕ್ಷರಂಗದ ಧ್ರುವತಾರೆ ಭಾಗವತ ಗುಂಡ್ಮಿ ಕಾಳಿಂಗ ನಾವುಡರು. ಕಾಳಿಂಗ ನಾವುಡರ ಬಗ್ಗೆ ಹಲವು ವಿದ್ವಾಂಸರು ವಿವಿಧ ಮಾಧ್ಯಮಗಳಲ್ಲಿ ತಮ್ಮ ಗ್ರಹಿಕೆಯ ಆಳಕ್ಕಿಳಿದು ವಿಚಾರವನ್ನು ಮಂಡಿಸಿದ್ದಾರೆ ಎಂಬುದು ದಿಟವೇ. ಮತ್ತನೇಕರ ಅಭಿಪ್ರಾಯದಲ್ಲಿ ನಾವುಡರ ವಿಷಯವನ್ನು ಹೊರತುಪಡಿಸಿ ಬೇರೆ ಏನಾದರೂ ಬರೆಯಬಹುದು ಎಂಬುದು. ಇದೂ ಒಂದು ವಾದವೇ. ಆದರೆ ನಾವು ಮನಗಾಣಬೇಕಾದ ವಿಷಯವೆಂದರೆ, ಕೆಲವೊಂದು ಘಟನೆ, ವಿದ್ಯಮಾನಗಳು ಚಿರಂತನವಾದ ಪ್ರಭಾವವನ್ನು ಜನಮಾನಸದಲ್ಲಿ ಬೀರುತ್ತವೆ. ಈ ಕಡೆಗೆ ಗಮನ ಹರಿಸಿದರೆ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ , ಪಾಪ್ ತಾರೆ ಮೈಕಲ್ ಜಾಕ್ಸನ್, ಡಿಗೋ ಮರಡೋನಾ , ವೀರಯೋಧ ನೆಪೋಲಿಯನ್ ಬೋನಪಾರ್ಟೆ . ಈ ಎಲ್ಲರೂ ಇತಿಹಾಸ ಪುರುಷರು. ಇತಿಹಾಸಕ್ಕೊಂದು ವ್ಯಾಖ್ಯಾನ ನೀಡಿದವರು . ಭಾಗವತ ಕಾಳಿಂಗ ನಾವುಡರನ್ನು ಅಭಿಮಾನದ ನೆಲೆಯಲ್ಲಿ ಇದೇ ರೀತಿಯಾಗಿ ಬಿಂಬಿಸುವುದು ಸೂಕ್ತವೆನಿಸುತ್ತದೆ . ಹಾಗಾಗಿ ಅವರು ಎಂದಿಗೂ ಪ್ರಸ್ತುತ.

ನಾವೆಲ್ಲ ತಿಳಿದಂತೆ ಯಕ್ಷಗಾನದಲ್ಲಿ ರಂಗದ ಸೂತ್ರಧಾರ (ನಿರ್ದೇಶಕ ) ನೆಂದರೆ ಭಾಗವತ. ಅದನ್ನವರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂಬುದು ಸರ್ವವಿದಿತ . ಸಾಧಾರಣ 13 -14 ಈ ವಯೋಮಾನದ ಬಾಲಕನಾಗಿರುವಾಗಲೇ ಭಾಗವತಿಕೆಯಲ್ಲಿ ಅಸಾಧಾರಣ ಪ್ರೌಢಿಮೆ ಕರಗತ ಮಾಡಿದ್ದರು ಎಂಬುದು ಆಶ್ಚರ್ಯಕರ ವಿಚಾರ. ಅತ್ಯಂತ ಉನ್ನತ ಕಂಠಶ್ರೀಯ ಭಾಗವತಿಕೆ, ಕರ್ಣಾನಂದಕರವಾಗಿ ಹೃದ್ಯವಾಗಿರುತ್ತಿತ್ತು. ಸಾಧಾರಣವಾಗಿ ಉನ್ನತ ಸ್ಥಾಯಿಯಲ್ಲಿ ಹಾಡುವ ಗಾಯಕನ ಗಾಯನ ಮಾಧುರ್ಯದಲ್ಲಿ ನಿರಂತರತೆ ಹೊಂದಿರುತ್ತದೆ ಎನ್ನಲು ಬರುವುದಿಲ್ಲ . ಆದರೆ ನಾವುಡರ ವಿಚಾರದಲ್ಲಿ ಹಾಗಲ್ಲ . ಅದೊಂದು ರಸಲೋಕದ ಸೃಷ್ಠಿ. ಗುಂಯ್ಗುಡುವ ಸ್ವರದ ಸಂಚಾರ . ಯಾವುದೇ ರಾಗವಿರಲಿ, ಅದರ ರಸಸ್ಯಂದಿಯಾದ ಸಂಚಾರ ನಾವುಡರ ವಿಶಿಷ್ಟತೆ . ಸಾಹಿತ್ಯ ಸ್ಪಷ್ಟತೆ , ಅಸಾಧಾರಣ ತಾಳಲಯಗಳ ಸಮ್ಮಿಲನ. ಎತ್ತರದ ಪೀಠದಲ್ಲಿ ಕುಳಿತು ತಲೆತಗ್ಗಿಸಿ ಹಾಡಿದರೆ ಯಕ್ಷಲೋಕದ ಅನಾವರಣ. ಬಹುಶಃ ಯಾವ ಭಾಗವತನಿಗೂ ಸಿದ್ಧಿಸದ ಅಸಾಧಾರಣ ವಿಶಿಷ್ಟ ಪ್ರಾಪ್ತಿ . ಏನದು ಕರ್ಣ ಮಧುರ ಘಂಟಾರವ ಅಹಹ ಅಲ್ಲಲ್ಲ ಇನಿದನಿಯ ಕಲರವ ಎನ್ನಬಹುದಾದ, ವಿಮರ್ಶೆಯ ಮಜಲನ್ನು ಮೀರಿನಿಂತ ಮಹಾನ್ ಚೇತನ ಕಾಳಿಂಗ ನಾವುಡರು. ನಾನು ಎಲ್ಲಾ ಯಕ್ಷಗಾನ ಭಾಗವತಿಕೆಗಳನ್ನು ಆಲಿಸುತ್ತೇನೆ. ಆದರೆ ಕಾಳಿಂಗ ನಾವಡರ ವಿಚಾರದಲ್ಲಿ ಹಾಗಲ್ಲ , ಪ್ರತಿಸಲ ಅವರ ಹಾಡುಗಳನ್ನು ಆಲಿಸುವಾಗಲೂ ಹೊಸದಾದ ಅನುಭವ . ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯನ್ನು ಆಲಿಸಿದಂತೆ . ಅವರೆಂತಹ ದೈತ್ಯಪ್ರತಿಭೆ ಯೆಂದರೆ ಕಲಾರಸಿಕರು ನಾವುಡರನ್ನು , ಅವರ ಕಂಠಸಿರಿಯನ್ನು ಒಪ್ಪಿಕೊಳ್ಳುವಲ್ಲಿ ತೆಂಕು-ಬಡಗು ಎಂಬ ತಿಟ್ಟುಗಳನ್ನೇ ಮರೆತರು .ಇದು ಒಂದು ಚರಿತ್ರಾರ್ಹ ಸಂಗತಿ. ಕಾಳಿಂಗ ನಾವುಡರ ಮಹತ್ವ ಅರಿಯಲು ನನ್ನದೇ ನಿದರ್ಶನವೊಂದಿದೆ.
ನಾವುಡರು ಸಾವಿರದ ಒಂಬೈನೂರ ತೊಂಬತ್ತನೇ ವರ್ಷದ ಮೇ ತಿಂಗಳ 27 ನೇ ತಾರೀಖಿನಂದು ಉಡುಪಿಯ ಸಮೀಪ ನಡೆದ ವಾಹನ ಅಪಘಾತದಲ್ಲಿ ಅಕಾಲ ಮರಣವನ್ನೆಯ್ದಿದರು. ಆಗೆಲ್ಲ ದಿನಪತ್ರಿಕೆಗಳನ್ನು ಬಿಟ್ಟರೆ ಈಗಿನಂತೆ ಮಾಧ್ಯಮಲೋಕ ಉಛ್ರಾಯ ಸ್ಥಿತಿಯಲ್ಲಿರಲಿಲ್ಲ .
ಉದಯವಾಣಿ ದಿನಪತ್ರಿಕೆ ಮುಖಪುಟವನ್ನು ನಾನು ನೋಡುತ್ತೇನೆ , ನಾನು ಸ್ತಂಭೀಭೂತನಾಗಿ ಹೋದೆ . ನನ್ನ ಆರಾಧ್ಯ ದೇವರು ಎಂದು ನಿತ್ಯವೂ ಗುನುಗುನಿಸುತ್ತಿದ್ದ ಕಾಳಿಂಗ ನಾವುಡರು ಇನ್ನಿಲ್ಲ ಎಂಬ ವಾರ್ತೆ ಅಲ್ಲಿ ಕಂಡಿತು . ನನಗೆ ಏನು ಮಾಡಲೂ ತೋಚಲಿಲ್ಲ ಅಳುವುದನ್ನು ಬಿಟ್ಟು . ನನ್ನಲ್ಲಿ ಪರ್ಯಾಯ ವ್ಯವಸ್ಥೆ ಇರಲಿಲ್ಲ, ನಿರಂತರವಾಗಿ ದುಃಖಿಸುತ್ತಿದ್ದ ನನ್ನನ್ನು ಕಂಡು ನನ್ನ ಅಮ್ಮ ಹೇಳಿದರು ‘ಅಳಬೇಡ ಸಮಾಧಾನ ಮಾಡಿಕೋ ನಿನ್ನ ತಂದೆ ತೀರಿಹೋದಾಗಲೂ ನೀನು ಇಷ್ಟು ಅತ್ತಿರಲಿಲ್ಲ’. ಆ ಮಾತು ಇಂದು ಕೂಡ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದೆ. ನಾವುಡರು ರಂಗದಲ್ಲಿ ತಾನೇ ವೇಷದಾರಿಯಾಗಿಯೂ ಕಾಣಿಸುತ್ತಿದ್ದರು ಎಂಬುದು ಗಮನಾರ್ಹ . ಉತ್ಕೃಷ್ಟ ಕಲಾವಿದನ ನೈಪುಣ್ಯವನ್ನು ರಂಗದಲ್ಲಿ ಎತ್ತಿ ತೋರಿಸುವಲ್ಲಿ ಅವರು ಹಾಡನ್ನು ಹಲವು ಬಾರಿ ಹಾಡಿ ಪಾತ್ರಧಾರಿಯ ಅಭಿನಯವನ್ನು ಮೇಲ್ಮೈಗೆ ತರುತ್ತಿದ್ದರು . ಇಂತಹ ವಿಶೇಷಣ ಹೊಂದಿದ ನಾವುಡರು ಇಂದು ಜನ್ಮತಳೆದ ದಿನ. ಇಂದು ಅವರು ಬದುಕಿರುತ್ತಿದ್ದರೆ ಅವರಿಗೆ 62 ವರ್ಷ ತುಂಬಿರುತ್ತಿತ್ತು. ಇಂದಿಗೂ ಮುಂದೆಯೂ ಅವರೊಬ್ಬ ಅಸಾಧಾರಣ ಕಲಾವಿದರಾಗಿ ಕಂಡುಬರುತ್ತಿದ್ದರು ಎಂಬುದನ್ನು ನೆನೆಯುವಾಗ ಕೈ ನಡುಗಿ ಮಾತು ಮೂಕವಾಗುತ್ತದೆ. ಭಾಗವತಿಕೆಗೆ ತಾರಾಮೌಲ್ಯ (Star value)ತಂದುಕೊಟ್ಟ ಕಾಳಿಂಗ ನಾವುಡರಂತಹ ಕಲಾವಿದ ಯಕ್ಷಲೋಕಕ್ಕೆ ಬಹುಕಾಲ ದುರ್ಲಭ.

- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
