ಅಜ್ಜನಗದ್ದೆ ಗಣಪಯ್ಯ ಭಾಗವತರ ಹೆಸರು ಪ್ರಸ್ತುತ ಯಕ್ಷಗಾನದ ಯುವ ಪ್ರೇಕ್ಷಕರಲ್ಲಿ ಹೆಚ್ಚಿನವರಿಗೆ ತಿಳಿದಿರಲಾರದು. ಕೇವಲ ಹಿರಿಯ ಪ್ರೇಕ್ಷಕರಿಗೆ ಮಾತ್ರ ಪರಿಚಿತವಾದ ಮತ್ತು ಕೇಳಿ ತಿಳಿದ ಹೆಸರಾಗಿರಬಹುದು ಎಂದು ಭಾವಿಸುತ್ತೇನೆ. ಆದರೂ ಅಜ್ಜನಗದ್ದೆ ಗಣಪಯ್ಯ ಭಾಗವತರ ಕುರಿತು ತಿಳಿಯದಿದ್ದ ಸಮಯದಿಂದಲೂ ‘ಅಜ್ಜನಗದ್ದೆ’ ಎಂಬುದು ಯಕ್ಷಗಾನ ರಂಗಕ್ಕೆ ತುಂಬಾ ಹತ್ತಿರವಾದ ಹೆಸರು ಎಂದು ಯಾಕೋ ನನ್ನ ಮನಸ್ಸು ಅಕಾರಣವಾಗಿ ಯೋಚಿಸುತ್ತಿತ್ತು!
ಅಜ್ಜನಗದ್ದೆ ಎಂಬುದು ಸುಳ್ಯ ತಾಲೂಕಿನ ಚೊಕ್ಕಾಡಿಯ ಸಮೀಪದ ಊರು. ಇಲ್ಲಿಗೆ ಅಜ್ಜನಗದ್ದೆ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ರೋಚಕವಾದ ಒಂದು ಕಥೆಯಿದೆ. ಈ ಲೇಖನದ ನಾಯಕ ಅಜ್ಜನಗದ್ದೆ ಗಣಪಯ್ಯ ಭಾಗವತರ ಅಜ್ಜನ ಹೆಸರೂ ಕೂಡಾ ಗಣಪಯ್ಯ ಎಂಬುದಾಗಿ ಆಗಿತ್ತು. ಅವರೂ ಕೂಡಾ ಯಕ್ಷಗಾನ ಭಾಗವತರೇ ಆಗಿದ್ದರು! ಅಜ್ಜನಗದ್ದೆ ಗಣಪಯ್ಯ ಭಾಗವತರ ಅಜ್ಜ ಅಂದರೆ ಹಿರಿಯ ಗಣಪಯ್ಯ ಭಾಗವತರು ಆ ಕಾಲದಲ್ಲಿ, ಅಂದರೆ ಸುಮಾರು ಒಂದೂವರೆ ಶತಮಾನಗಳ ಹಿಂದೆ ತಾವೊಬ್ಬರೇ ಗುಡ್ಡವನ್ನು ಕಡಿದು ಗದ್ದೆಯನ್ನಾಗಿ ಪರಿವರ್ತಿಸಿದ ಸಾಹಸಿ. ಆದುದರಿಂದ ಆ ಜಾಗಕ್ಕೆ ‘ಅಜ್ಜನಗದ್ದೆ’ (ಅಜ್ಜ ನಿರ್ಮಿಸಿದ ಗದ್ದೆ) ಎಂಬ ಹೆಸರು ಶಾಶ್ವತವಾಯಿತು.
ಹಿರಿಯ ಅಜ್ಜನಗದ್ದೆ ಗಣಪಯ್ಯ ಭಾಗವತರ ಹೆಸರು ಮೊಮ್ಮಗ ಕಿರಿಯ ಅಜ್ಜನಗದ್ದೆ ಗಣಪಯ್ಯ ಭಾಗವತರಿಗೆ ಹೇಗೆ ಬಂತೋ ಹಾಗೆಯೇ ಯಕ್ಷಗಾನ ಭಾಗವತಿಕೆ ಎಂಬ ಅಮೂಲ್ಯ ಕಲಾಸಂಪತ್ತು ಕೂಡಾ ಅಜ್ಜನಿಂದ ಮೊಮ್ಮಗನಿಗೆ ಹರಿದುಬಂತು. ಅಜ್ಜನಗದ್ದೆ ಗಣಪಯ್ಯ ಭಾಗವತರ ಕಲಾಯಾನ ಬಹಳಷ್ಟು ಎಡರುತೊಡರುಗಳ ನಡುವೆ ಎಗ್ಗಿಲ್ಲದೆ ಮುಂದುವರಿದ ಕಲಾತಪಸ್ಸು. ಬಡತನದ ಬೇಗೆಯಲ್ಲಿ ಮಿಂದು ಬೆಂದು ಪರಿಪಕ್ವವಾದರೂ ಕಲಾಶ್ರೀಮಂತಿಕೆ ಮತ್ತು ಹೃದಯಶ್ರೀಮಂತಿಕೆಗಳಿಗೆ ಅಜ್ಜನಗದ್ದೆ ಭಾಗವತರು ಹೆಸರುವಾಸಿ.
ಅತ್ಯುತ್ತಮ ಭಾಗವತರಾಗಿದ್ದುದು ಮಾತ್ರವಲ್ಲದೆ ಆ ಕಾಲದಲ್ಲಿ ಅಜ್ಜನಗದ್ದೆಯ ಆ ಮನೆ ಅತಿಥಿಸತ್ಕಾರಕ್ಕೆ ಹೆಸರಾಗಿತ್ತು. ತಾನುಣ್ಣದಿದ್ದರೂ ಪರರುಂಡಲ್ಲಿ ತೃಪ್ತಿಯನ್ನನುಭವಿಸುವ ಭಾಗವತರು ತಾನೆಂದಿಗೂ ಒಬ್ಬನೇ ಉಣ್ಣಲು ಚಡಪಡಿಸುವವರು. ಇಂತಹಾ ಮಹಾನ್ ಹೃದಯವಂತ ಅಜ್ಜನಗದ್ದೆ ಗಣಪಯ್ಯ ಭಾಗವತರು ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಅಜ್ಜನಗದ್ದೆ ಎಂಬಲ್ಲಿ ಅಜ್ಜನಗದ್ದೆ ಸುಬ್ರಾಯ ಮತ್ತು ಸುಬ್ಬಮ್ಮ ದಂಪತಿಗಳಿಗೆ ಮಗನಾಗಿ 7.10.1916ರಂದು ಜನಿಸಿದರು. ತಂದೆ ಅಜ್ಜನಗದ್ದೆ ಸುಬ್ರಾಯರು ಮದ್ದಳೆವಾದನದಲ್ಲಿ ಸಿದ್ಧಹಸ್ತರಾಗಿದ್ದರು. ಹೀಗೆ ಗಣಪಯ್ಯ ಭಾಗವತರ ತಂದೆ, ಅಜ್ಜ, ದೊಡ್ಡಜ್ಜ ಸಹಿತ ಕುಟುಂಬದ ಹೆಚ್ಚಿನೆಲ್ಲಾ ಸದಸ್ಯರು ಯಕ್ಷಗಾನ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಆದ ಕಾರಣ ಸಹಜವಾಗಿ ಬಾಲಕ ಗಣಪಯ್ಯನವರು ಯಕ್ಷಗಾನದಿಂದ ಆಕರ್ಷಿತರಾಗಿದ್ದರು.
ಗಣಪಯ್ಯನವರು ಕಲಿತದ್ದು ಎಂಟನೆಯ ತರಗತಿಯವರೆಗೆ. ಆದರೂ ಆ ಕಾಲದ ಮಟ್ಟಿಗೆ ಎಂಟನೆಯ ತರಗತಿಯ ವಿದ್ಯಾಭ್ಯಾಸ ಎನ್ನುವುದು ಕಡಿಮೆಯೇನೂ ಆಗಿರಲಿಲ್ಲ. ಗಣಪಯ್ಯನವರು ಸ್ವಂತ ಪರಿಶ್ರಮದಿಂದ ನೋಡಿ, ಕೇಳಿ ಕಲಿತದ್ದೇ ಹೆಚ್ಚು. ಜೊತೆಗೆ ತಂದೆ ಅಜ್ಜಂದಿರ ಪ್ರಭಾವವೂ ಸ್ವಲ್ಪ ಮಟ್ಟಿಗೆ ಆಗಿರಬಹುದಾದ ಸಾಧ್ಯತೆಯನ್ನೂ ಅಲ್ಲಗೆಳೆಯುವ ಹಾಗಿರಲಿಲ್ಲ. ರಾಗಗಳ, ಸ್ವರಸಂಚಾರದ ಅನುಭವಕ್ಕಾಗಿ ಹಾಗೂ ಸಂಗೀತಾಭ್ಯಾಸಕ್ಕಾಗಿ ಕಾಂಚನದಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗಳಿಗೆ ತಪ್ಪದೆ ಹಾಜರಾಗುತ್ತಿದ್ದರು. ಸಂಗೀತ ಸಂಬಂಧೀ ಪುಸ್ತಕಗಳನ್ನು ಓದಿಯೂ ಹಾಡುಗಾರಿಕೆಯನ್ನು ಅಭ್ಯಾಸ ಮಾಡಿದ್ದರು.
ಅಜ್ಜನಗದ್ದೆ ಗಣಪಯ್ಯನವರು ತನಗೆ ಸಂಬಂಧದಲ್ಲಿ ಚಿಕ್ಕಪ್ಪನಾಗಬೇಕಾಗಿದ್ದ ಯಕ್ಷಗಾನ ವಿದ್ವಾಂಸ, ಸಾಹಿತಿ, ಕಲಾವಿದ ದೇರಾಜೆ ಸೀತಾರಾಮಯ್ಯನವರ ಜೊತೆಯಲ್ಲಿ ಚೊಕ್ಕಾಡಿ ಮೇಳವನ್ನು ಸ್ಥಾಪಿಸಿದ್ದರು. ಈ ಮೇಳದ ಪ್ರದರ್ಶನಕ್ಕೆ ಅಜ್ಜನಗದ್ದೆ ಭಾಗವತರು ಖಾಯಂ ಭಾಗವತರಾಗಿದ್ದರು. ಚೊಕ್ಕಾಡಿ ಮೇಳದ ಹಾಗೂ ಸುಳ್ಯ ತಾಲೂಕಿನ ಪರಿಸರದಲ್ಲಿ ಭಾಗವತನಾಗಿ ಜನಪ್ರಿಯರಾಗಿದ್ದ ಗಣಪಯ್ಯ ಭಾಗವತರಿಗೆ ದೂರದೂರುಗಳಿಂದಲೂ ಕರೆ ಬರುತ್ತಿತ್ತು. ಅಷ್ಟೇ ಪ್ರಸಿದ್ಧಿ ಹೊಂದಿದರೂ ಬೇಡಿಕೆಯಿದ್ದರೂ ಆ ಕಾಲದಲ್ಲಿ ಯಕ್ಷಗಾನ ಕಲಾವಿದರಿಗಿದ್ದ ಸಂಬಳ ಬಹಳ ಕಡಿಮೆಯಾಗಿತ್ತು. ಇಡೀ ರಾತ್ರಿ ಭಾಗವತಿಕೆ ಮಾಡಿದ್ದಕ್ಕಾಗಿ ಅಜ್ಜನಗದ್ದೆ ಗಣಪಯ್ಯ ಭಾಗವತರಿಗೆ ಐದು ರೂಪಾಯಿ ಸಿಗುತ್ತಿತ್ತು. ಇಂತಹಾ ಸಂಕಷ್ಟದ ಸಮಯದಲ್ಲಿ ಭಾಗವತರಿಗೆ ಜೀವನ ನಿರ್ವಹಣೆ ಬಹಳ ಕಷ್ಟವಾಗಿದ್ದರೂ ಹೇಗೋ ಸುಧಾರಿಸಿಕೊಂಡು ಹೋಗುತ್ತಿದ್ದರು.
ತನ್ನಜ್ಜನ ಕಾಲಕ್ಕೆ ದೊಡ್ಡ ಜಮೀನುದಾರರಾಗಿದ್ದ ಅಜ್ಜನಗದ್ದೆಯ ಭೂಮಿ ಹಾಗೂ ಗೇಣಿಗೆ ಕೊಟ್ಟ ಆಸ್ತಿಯನ್ನೆಲ್ಲಾ ನಿಧಾನವಾಗಿ ಕಳೆದುಕೊಳ್ಳಬೇಕಾಗಿ ಬಂದಿತ್ತು. ಹಾಗೂ ಹೀಗೂ ಸ್ವಲ್ಪ ಆಸ್ತಿಯನ್ನು ಉಳಿಸಿಕೊಂಡಿದ್ದರು. ಹೀಗೆ ಒಂದೆಡೆಯಲ್ಲಿ ಕಷ್ಟಕರ ಜೀವನ ಸಾಗಿಸುತ್ತಿದ್ದರೂ ಗಣಪಯ್ಯ ಭಾಗವತರು ತಮ್ಮ ಅಪ್ರತಿಮ ಕಲಾಪ್ರೇಮ, ಕಲಾಸೇವೆಗಳನ್ನು ಬಿಡಲಿಲ್ಲ. ಚೊಕ್ಕಾಡಿ ಮೇಳದ ಪ್ರದರ್ಶನ, ತಾಳಮದ್ದಲೆಗಳ ನಂತರ ಅಜ್ಜನಗದ್ದೆ ಭಾಗವತರು ಕೂಡ್ಲು ಹಾಗೂ ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಕಟೀಲು ಮೇಳದಲ್ಲಿ ಹಿರಿಯ ಬಲಿಪ ನಾರಾಯಣ ಭಾಗವತರ ಜೊತೆ ಸಹಕಲಾವಿದರಾಗಿದ್ದರು.
ಅಜ್ಜನಗದ್ದೆಯ ಕುಟುಂಬದ ಅಪ್ರತಿಮ ಕಲಾಪ್ರೇಮವೂ ಕಲಾಸೇವೆಯೂ ಚೊಕ್ಕಾಡಿ, ಕಲ್ಮಡ್ಕದ ಪರಿಸರವು ಒಂದು ಯಕ್ಷಗಾನದ ಸಾಂಸ್ಕೃತಿಕ ಕೇಂದ್ರವಾಗಲು ಸಹಾಯ ಮಾಡಿತು ಎಂದರೆ ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಅಂದಿನ ಆ ಪರಿಸರದಲ್ಲಿ ಗಣಪಯ್ಯ ಭಾಗವತರ ಭಾವಪೂರ್ಣ ಹಾಡುಗಾರಿಕೆಗೆ ಮನಸೋಲದ ಯಕ್ಷಪ್ರೇಮಿಗಳಿರಲಿಲ್ಲ ಎನ್ನುವುದೂ ಕೂಡಾ ಅಷ್ಟೇ ಸತ್ಯ. ಗಣಪಯ್ಯ ಭಾಗವತರಿಗೆ ಮೂವರು ಶಿಷ್ಯಂದಿರಿದ್ದರು. ಅವರಲ್ಲಿ ಒಬ್ಬರು ಪ್ರಸಿದ್ಧ ಭಾಗವತರಾಗಿದ್ದ ದಾಸರಬೈಲು ಚನಿಯ ನಾಯ್ಕ. ಇನ್ನಿಬ್ಬರೆಂದರೆ ಕುಂಟಿಕಾನ ಪರಮೇಶ್ವರ ಆಚಾರ್ಯ ಮತ್ತು ಪಡ್ಪು ಕೂಸಪ್ಪ ಗೌಡ. ಆಗ ಅಜ್ಜನಗದ್ದೆ ಭಾಗವತರ ಭಾಗವತಿಕೆಯ ಶೈಲಿ ಪ್ರಖ್ಯಾತವಾಗಿತ್ತು. ಹಾಗೂ ಯಕ್ಷಗಾನ ಪ್ರೇಕ್ಷಕರು ಆ ಶೈಲಿಗೆ ಮನಸೋತಿದ್ದರು. ದಿವಂಗತ ದಾಸರಬೈಲು ಚನಿಯ ನಾಯ್ಕರು ಈ ಶೈಲಿಯಲ್ಲಿಯೇ ಹಾಡುತ್ತಿದ್ದರು. ಈಗಿನ ಪ್ರಖ್ಯಾತ ಭಾಗವತರಾದ ಪದ್ಯಾಣ ಗಣಪತಿ ಭಟ್ಟರೂ ಇದೆ ಶೈಲಿಯಲ್ಲಿಯೇ ಹಾಡುತ್ತಿದ್ದರು.
ಅಜ್ಜನಗದ್ದೆ ಭಾಗವತರು ಕೆಲವು ಪ್ರಸಂಗಗಳನ್ನೂ ರಚಿಸಿದ್ದಾರೆ. ಅದರಲ್ಲಿ ಮನ್ಮಥ ವಿಜಯ(ಅಪ್ರಕಟಿತ), ಮೋಹಿನೀ ಚರಿತ್ರೆ(ಅಪ್ರಕಟಿತ), ಖಾಂಡವ ವನ ದಹನ (ಪ್ರಕಟಿತ) ಮೊದಲಾದುವುಗಳು ಸೇರಿವೆ. ಗಣಪಯ್ಯ ಭಾಗವತರಿಗೆ 1942ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಮಂಜಯ್ಯ ಹೆಗ್ಗಡೆಯವರಿಂದ ಸನ್ಮಾನದ ಗೌರವ ಲಭಿಸಿತ್ತು. 1972ರಲ್ಲಿ ಕಲ್ಮಡ್ಕದಲ್ಲಿ ಸನ್ಮಾನ ಮತ್ತು 1973ರಲ್ಲಿ ಕಳಂಜ ಗ್ರಾಮದ ಕೋಟೆಮುಂಡುಗಾರು ಎಂಬಲ್ಲಿ ಸನ್ಮಾನಿಶಿ ಗೌರವಿಸಿದ್ದರು.
ಭಾಗವತರಿಗೆ ಪುಸ್ತಕಗಳೆಂದರೆ ಬಲು ಪ್ರೀತಿ. ಬಹಳಷ್ಟು ಪುಸ್ತಕಗಳನ್ನು ಸಂಗ್ರಹಿಸಿದರು. ಮಾತ್ರವಲ್ಲದೆ ಜೀವನ ನಿರ್ವಹಣೆಗಾಗಿ ಪ್ರಸಿದ್ಧ ಸಾಹಿತಿಗಳ ಕೃತಿಗಳು, ಕಾದಂಬರಿಗಳು, ಪೌರಾಣಿಕ ಪುಸ್ತಗಳು, ದೇವರ ಭಜನೆ, ಹಾಗೂ ಇನ್ನಿತರ ಪುಸ್ತಕಗಳನ್ನು ಮನೆ ಮನೆಗೆ ಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಇದರಿಂದ ಊರಿನ ಜನರಿಗೂ ಉಪಕಾರ ಆಗುತ್ತಿತ್ತು. ಭಾಗವತರಿಗೂ ಮಾರಾಟದಿಂದ ಕಮಿಷನ್ ಸಿಗುತ್ತಿತ್ತು. ಭಾಗವತರಲ್ಲಿ ಸಾವಿರಾರು ಪುಸ್ತಕಗಳ ಸಂಗ್ರಹ ಇತ್ತು. ಅವರು ಸಂಗ್ರಹಿಸಿಟ್ಟ ಪುಸ್ತಕಗಳಲ್ಲಿ ಹೆಚ್ಚಿವನವನ್ನು ಅವರ ಸುಪುತ್ರರೂ ಖ್ಯಾತ ಸಾಹಿತಿಗಳೂ ಆದ ಸುಬ್ರಾಯ ಚೊಕ್ಕಾಡಿ ಮತ್ತು ಲಕ್ಷ್ಮೀಶ ಚೊಕ್ಕಾಡಿಯವರು ಸಂಗ್ರಹಿಸಿ ಜತನದಿಂದ ಇರಿಸಿದ್ದಾರೆ.
ಅಜ್ಜನಗದ್ದೆ ಗಣಪಯ್ಯ ಭಾಗವತರ ಪತ್ನಿ ಶ್ರೀಮತಿ ಸುಬ್ಬಮ್ಮ (ಕಾಂಚೋಡು ಮನೆತನ). ಸುಬ್ಬಮ್ಮನವರು ಅನ್ನಪೂರ್ಣೆ. ಅದೆಷ್ಟೋ ಜನ ಹಸಿದು ಬಂದಾಗ ಅಡುಗೆ ಮಾಡಿ ಅನ್ನವಿಕ್ಕಿದ ಕೈ. ಅವರ ಕೈಯಡುಗೆ ಉಂಡವರು ಲೆಕ್ಕವಿಲ್ಲದಷ್ಟು ಮಂದಿ. ಅಜ್ಜನಗದ್ದೆ ದಂಪತಿಗೆ ಮೂವರು ಗಂಡುಮಕ್ಕಳು. ಮೂವರು ಮಕ್ಕಳೂ ಪ್ರಸಿದ್ದ ಸಾಹಿತಿಗಳೇ. ಹೆಸರು ಅರಿಯದವರು ವಿರಳ. ಸುಬ್ರಾಯ ಚೊಕ್ಕಾಡಿ, ಲಕ್ಷ್ಮೀಶ ಚೊಕ್ಕಾಡಿ ಮತ್ತು ಸಂತೋಷ ಚೊಕ್ಕಾಡಿ. ಮೂವರು ಮಕ್ಕಳಿಗೆ ಪುಸ್ತಗಳನ್ನು ಓದಲು ಕೊಟ್ಟು ಸಾಹಿತ್ಯದ ರುಚಿ ಹತ್ತಿಸಿದವರೇ ಅಜ್ಜನಗದ್ದೆ ಗಣಪಯ್ಯ ಭಾಗವತರು. ಆದುದರಿಂದ ಶ್ರೀ ಸುಬ್ರಾಯ ಚೊಕ್ಕಾಡಿ, ಶ್ರೀ ಲಕ್ಷ್ಮೀಶ ಚೊಕ್ಕಾಡಿ ಮತ್ತು ಶ್ರೀ ಸಂತೋಷ ಚೊಕ್ಕಾಡಿಯವರು, ಇಂದು ತಾವು ಪಡೆದ ಪ್ರಸಿದ್ಧಿಗೆ ಮತ್ತು ತಮ್ಮ ಸಾಧನೆಗೆ ಮೂಲ ಕಾರಣ ತಂದೆಯವರಾದ ಅಜ್ಜನಗದ್ದೆ ಗಣಪಯ್ಯ ಭಾಗವತರೇ ಎಂಬುದನ್ನು ಗೌರವಪೂರ್ವಕ ಸ್ಮರಿಸಿಕೊಳ್ಳುತ್ತಾರೆ. ಬಡತನದಲ್ಲಿ ಬೆಳೆದು ಆಸ್ತಿಪಾಸ್ತಿಯನ್ನು ಮಕ್ಕಳಿಗೆ ಉಳಿಸಿಹೋಗದಿದ್ದರೇನಾಯಿತು? ಅದ್ಭುತವಾದ ವಿದ್ಯೆಯನ್ನು, ಸಾಹಿತ್ಯವನ್ನು ತನ್ನ ಮಕ್ಕಳ ರಕ್ತದ ಕಣ ಕಣದಲ್ಲಿಯೂ ಸಂಚರಿಸುವಂತೆ ಮಾಡಿದ್ದರಲ್ಲವೇ? ಇದಕ್ಕಿಂದ ದೊಡ್ಡ ಸಂಪತ್ತು ಇನ್ನೇನಿದೆ? ಯಾರೂ ಕದಿಯಲಾರದ ಸಂಪತ್ತನ್ನು ಅಜ್ಜನಗದ್ದೆ ಗಣಪಯ್ಯ ಭಾಗವತರು ಬಿಟ್ಟು ಹೋಗಿದ್ದಾರೆ. ಆ ಸಂಪತ್ತು ಅವರ ಮೂವರು ಗಂಡುಮಕ್ಕಳಲ್ಲಿ ನಿಕ್ಷೇಪಿಸಲ್ಪಟ್ಟಿದೆ.
ಬರಹ: ಮನಮೋಹನ್ ವಿ. ಎಸ್ (ಪೂರಕ ಮಾಹಿತಿ: ಜಿ. ಎಸ್. ಉಬರಡ್ಕ ಬರೆದ “ಗಾನಯೋಗಿ ಅಜ್ಜನಗದ್ದೆ ಗಣಪಯ್ಯ ಭಾಗವತ”)