ಮನ ಮುಟ್ಟಿದ “ಕರ್ಣ ಭೇದನ” ಕಣ್ಣಿಗೆ ಕಟ್ಟುವ ಹಾಗೂ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಪ್ರಸ್ತುತ ಗೊಂಡಿದ್ದು ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರಾದ ದೇವರಾಜ ಕರಬರ ಸಂಯೋಜನೆಯಲ್ಲಿ ಡಾ. ರಾಧಾಕೃಷ್ಣ ಉರಾಳರ ನಿರ್ದೇಕಶಕತ್ವದ ಕಲಾಕದಂಬ ಆರ್ಟ್ ಸೆಂಟರ್ ನಿನ್ನೆ (ದಿನಾಂಕ 10-04-2021) ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆಯ 4 ನೇ ವಿಭಾಗದ ಕಲಾಗುಡಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ “ಗುಡಿ ನಡೆ” ಶೀರ್ಷಿಕೆಯ ವಿಶಿಷ್ಟ ಪರಿಕಲ್ಪನೆಯ ಶ್ರೀ ದೇವಿದಾಸ ವಿರಚಿತ ‘ಕರ್ಣ ಭೇದನ’ ತಾಳಮದ್ದಲೆಯಲ್ಲಿ.
ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಹಿರಿಯ ಪತ್ರಕರ್ತರಾದ ರವೀಂದ್ರ ಜಿ ಭಟ್ ಯಕ್ಷಗಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಶಿವರಾಮ ಕಾರಂತರ ಕಾಲದಿಂದಲೂ ನಡೆಯುತ್ತಿದೆ. ಇದಕ್ಕೆ ಹಲಾವಾರು ವಿರೋಧಗಳು ವ್ಯಕ್ತವಾದರೂ ಯಕ್ಷಗಾನ ಚೌಕಟ್ಟಿನಲ್ಲಿ ಅದನ್ನು ಅಳವಡಿಸಿದರೆ ತಪ್ಪಿಲ್ಲ . ಅಲ್ಲದೇ ನಮ್ಮ ನಾಡಿನ ಹಲವಾರು ಕವಿಗಳ ಕವಿತೆಗಳನ್ನೂ ಕೂಡ ಯಕ್ಷಗಾನ ಸಂಗೀತಕ್ಕೆ ಅಳವಡಿಸುವ ಪ್ರಯತ್ನವೂ ಆಗಲಿ ಎಂದು ಹಾರೈಸಿದರು.
ಮತ್ತೊಬ್ಬ ಅತಿಥಿ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ಮುಖ್ಯಸ್ಥರೂ ಗೋಪಾಲ ಕೃಷ್ಣ ಅಡಿಗರ ಸಹೋದರರು ಆದ ಜಯರಾಮ ಅಡಿಗರು ಮಾತನಾಡಿ ಕವಿ ಗೋಪಾಲ ಕೃಷ್ಣ ಅಡಿಗರು ಯಕ್ಷಗಾನದ ಸೊಗಡಿನ ಛಾಯೆಯ ಹಲವಾರು ಕವನಗಳನ್ನು ರಚಿಸಿದರು. ಆ ಮೂಲಕ ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸಿದರು. ಹಾಗಾಗಿ ಯಕ್ಷಗಾನದ ಮೂಲಕ ಸಮಾಜದ ಜಾಗೃತಿ ಕೂಡ ಸಾಧ್ಯ ಎಂದು ಅಭಿಪ್ರಾಯಪಟ್ಟದಲ್ಲದೆ ಕಲಾಕದಂಬ ಆರ್ಟ್ ಸೆಂಟರ್ ನ ಈ ಒಂದು ವಿಶಿಷ್ಟ ಪ್ರಯತ್ನ ಯಶಸ್ವೀಯಾಗಲಿ ಎಂದು ಹಾರೈಸಿದರು.
ಮತ್ತೊಬ್ಬ ಅತಿಥಿ ಹಿರಿಯ ಕಲಾವಿದರಾದ ಶ್ರೀ ಸೂರ್ಯನಾರಾಯಣರವರು ರಂಗಭೂಮಿಗೂ ಯಕ್ಷಗಾನಕ್ಕೂ ವಿಶಿಷ್ಟ ನಂಟಿದೆ, ಪ್ರಾಕಾರಗಳು ಬೇರೆಯಾದರು ಜನರ ಮನಮುಟ್ಟುವಲ್ಲಿ ಒಂದು ಯಶಸ್ವೀ ಕಲಾಮಾಧ್ಯಮ ಎಂದರಲ್ಲದೇ ಈ ಬಡಾವಣೆಯಲ್ಲಿ ಕಲಾಕದಂಬ ಆರ್ಟ್ ಸೆಂಟರ್ ಸಾಂಸ್ಕೃತಿಕ ಲೋಕವನ್ನು ತೆರೆಯುವಲ್ಲಿ ಯಶಸ್ವೀಯಾಗಲಿ ಈ ಗುಡಿ ನಡೆ ಪ್ರತಿ ಮನೆ ಮನಗಳನ್ನು ಬೆಳಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಯಕ್ಷಗಾನ ಕಲಾವಿದರಾದ ವಿದ್ವಾನೆ ಎ.ಪಿ.ಪಾಟಕ್ ಹಾಗು ಈ ಕಾರ್ಯಕ್ರಮದ ಸಂಯೋಜಕರಾದ ದೇವರಾಜ ಕರಬರು ಉಪಸ್ಥಿತರಿದ್ದರು.
ಕೃಷ್ಣನಾಗಿ ಹಾಗೂ ಮದ್ದಲೆಯ ವಾದಕರಾಗಿ ಡಾ.ಪ್ರದೀಪ್ ಸಾಮಗ ತಮ್ಮ ತಂದೆಯವರಾದ ಯಕ್ಷಗಾನದ ಪ್ರಸಿದ್ದ ಕಲಾವಿದರಾದ ದಿವಂಗತ ವಾಸುದೇವ ಸಾಮಗರ ನೆನಪಿಸುವ ರೀತಿಯಲ್ಲಿ ತಮ್ಮ ಮಾತಿನ ಮೂಲಕ ಮೋಡಿ ಮಾಡಿದರು ಅಲ್ಲದೇ ತಮ್ಮ ಮಾತಿನೊಂದಿಗೆ ಮದ್ದಲೆಯ ನಿನಾದವನ್ನು ಹರಿಸಿ ತಮ್ಮ ವಿಶಿಷ್ಟ ಪ್ರತಿಭೆಯನ್ನು ಮೆರೆದರು.
ಕರ್ಣನ ಅಸಹಾಯಕತೆ ಆತನ ಮಿತ್ರತ್ವದ ಮಹತ್ವವನ್ನು ವ್ಯಕ್ತಪಡಿಸಿದವರು ಪತ್ರಕರ್ತರು ಹಾಗೂ ಯಕ್ಷಗಾನ ಕಲಾವಿದರೂ ಆದ ಅಂಬರೀಷ್ ಭಟ್. ತಮ್ಮ ಸುಲಲಿತ ತೂಕಭರಿತ ಮಾತುಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸಿದಲ್ಲದೆ ಪ್ರೇಕ್ಷಕರ ಕಣ್ಣಂಚಿನಲ್ಲಿ ಕಣ್ಣೀರು ಜಿನುಗುವಂತೆ ಮಾಡಿದ್ದು ಕರ್ಣನು ಜನಮಾನಸದಲ್ಲಿ ಎಷ್ಟು ಪ್ರಭಾವ ಬೀರಿದ್ದಾನೆಂಬುದು ಸಾಕ್ಷೀಕರಿಸಿತು.
ಸೂರ್ಯ ಪಾತ್ರಧಾರಿಯಾಗಿ ವಿದ್ವಾನ್ ಎ.ಪಿ.ಪಾಠಕ್ ಚಂಡೆಯನ್ನು ನುಡಿಸುತ್ತಲೇ ಆ ಪಾತ್ರದಲ್ಲಿ ತಮ್ಮನ್ನು ಲೀನವಾಗಿಸಿಕೊಂಡು ಯಕ್ಷಗಾನ ರಂಗದ ಎಲ್ಲಾ ವಿಭಾಗಗಳಲ್ಲಿಯೂ ಸೈ ಎಂಬುದನ್ನು ಎತ್ತಿ ತೋರಿಸಿದರು. ಭಾಗವತಿಕೆಯಲ್ಲಿ ಹಾಗೂ ಕುಂತಿ ಪಾತ್ರಧಾರಿಯಾಗಿ ಸುಬ್ರಾಯ ಹೆಬ್ಬಾರ್ ತಮ್ಮ ಗಾಯನ ಹಾಗೂ ತಾಯಿಯ ಮಮತೆಯ ಮಾತುಗಳಿಂದ ನೆರೆದ ಪ್ರೇಕ್ಷಕರ ಮನಸೂರೆಗೊಂಡರು. ಈ ಎಲ್ಲಾ ಕಲಾವಿದರು ತಮ್ಮ ಪಾತ್ರದೊಂದಿಗೆ ಹಿಮ್ಮೇಳದ ವಾದ್ಯ ಪರಿಕರಗಳನ್ನು ನುಡಿಸಿಕೊಂಡು ಈ ಒಂದು ಹೊಸ ಪ್ರಯೋಗದ ಯಶಸ್ಸಿಗೆ ಕಾರಣೀಭೂತರಾದರು
ಕಾರ್ಯಕ್ರಮದ ನಿರೂಪಣೆಯನ್ನು ಮುರಳೀಧರ ನಾವಡ ನಿರ್ವಹಿಸಿದರು, ನೇಪಥ್ಯದಲ್ಲಿ ವಿಶ್ವನಾಥ ಉರಾಳ, ಅದಿತಿ ಉರಾಳ, ಮಧುಮಿತ, ಜಿ.ಟಿ.ಗೌಡ, ಸುಹಾಸ್, ರಜತ್, ಮಮತ ಉರಾಳ ಸಹಕರಿಸಿದರು.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು