ಶ್ರೀ ಅಳಿಕೆ ರಾಮಯ್ಯ ರೈಗಳು 1915ನೇ ಇಸವಿ ಮಾರ್ಚ್ 17ರಂದು ಅಳಿಕೆ ಮೋನಪ್ಪ ರೈ ಮತ್ತು ಮಂಜಕ್ಕೆ ದಂಪತಿಗಳ ಹಿರಿಯ ಮಗನಾಗಿ ಈ ಲೋಕದ ಬೆಳಕನ್ನು ಕಂಡರು. ಅಳಿಕೆ ರಾಮಯ್ಯ ರೈಗಳ ಅಜ್ಜ ಅಟ್ಟೆಪ್ಪಿಲ ರಾಮಣ್ಣ ರೈಗಳು ಆ ಕಾಲದ ಉತ್ತಮ ಭಾಗವತರಾಗಿದ್ದರು. ಮೋನಪ್ಪ ರೈಗಳೂ ಯಕ್ಷಗಾನ ಕಲಾವಿದರಾಗಿದ್ದರು. ಚಿಕ್ಕಪ್ಪ ದೂಮಣ್ಣ ರೈಗಳೂ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಹೀಗೆ ಯಕ್ಷಗಾನ ಕಲೆಯು ಅಳಿಕೆ ರಾಮಯ್ಯ ರೈಗಳಿಗೆ ರಕ್ತಗತವಾಗಿ ಹರಿದು ಬಂದಿತ್ತು.
ಮನೆಯೇ ಮೊದಲ ಪಾಠಶಾಲೆಯಾಯಿತು. ಮನೆಯ ಹಿರಿಯರೇ ಗುರುಗಳಾಗಿ ಕಲಿಸಿದರು. ಅಳಿಕೆ ರಾಮಯ್ಯ ರೈಗಳು ಶಾಲೆಯಲ್ಲಿ 4ನೇ ತರಗತಿ ವರೇಗೆ ಓದಿದ್ದರು. 1927ನೇ ಇಸವಿ ಜನವರಿಯಲ್ಲಿ ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಮಾಂಬಾಡಿ ನಾರಾಯಣ ಭಾಗವತರಿಂದ ಗೆಜ್ಜೆ ಪಡೆದು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯದಲ್ಲಿ ಅತಿಕಾಯ, ಇಂದ್ರಜಿತು, ಮೈರಾವಣ ಕಾಳಗದ ಮರಿವಾನರನಾಗಿ ರಂಗಪ್ರವೇಶ ಮಾಡಿದರು. ಶ್ರೀ ಕೋಟ್ಯಣ್ಣ ಆಳ್ವರ ಇಚ್ಲಂಪಾಡಿ ಮೇಳದಲ್ಲಿ ತಿರುಗಾಟ ಆರಂಭ.
ತಂದೆಯವರೇ ನಾಟ್ಯ, ಮಾತುಗಾರಿಕೆಗೆ ಮೊದಲ ಗುರುಗಳು. ಪುತ್ರನಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಅವರು ಗುರುತಿಸಿದ್ದರು. 1895ರಿಂದ ತೊಡಗಿ 1952ರ ವರೇಗೆ ಇಚ್ಲಂಪಾಡಿ, ಕದ್ರಿ ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿ ಹೆಸರನ್ನು ಗಳಿಸಿದ್ದರು. ಮಳೆಗಾಲದಲ್ಲಿ ನಾಟ್ಯ ಮತ್ತು ಮಾತುಗಾರಿಕೆಯನ್ನು ಅಭ್ಯಾಸಿಗಳಿಗೆ ಹೇಳಿಕೊಡುತ್ತಿದ್ದರು. ಶಿಸ್ತಿನ ಸಿಪಾಯಿಯಾಗಿದ್ದ ತಂದೆಯ ಗರಡಿಯಲ್ಲೇ ಅಳಿಕೆ ರಾಮಯ್ಯ ರೈಗಳು ಪಳಗಿದರು. ಅಲ್ಲದೆ ಹಿರಿಯ ಬಲಿಪರು, ಖ್ಯಾತ ಸ್ತ್ರೀವೇಷಧಾರಿ ಐತಪ್ಪ ಶೆಟ್ಟರು, ಅಪ್ಪು ಹಾಸ್ಯಗಾರ, ಕೋಲುಳಿ ಸುಬ್ಬ (ಬಣ್ಣದ ವೇಷಧಾರಿ) ಶ್ರೇಷ್ಠ ಕಲಾವಿದ ಕುಂಬಳೆ ಗುಂಡಣ್ಣ ಮೊದಲಾದವರ ಒಡನಾಟವೂ ಸಿಕ್ಕಿತ್ತು.
ತೀರ್ಥರೂಪರ ಜತೆ ಮುಂದೆ ಕೊಡಿಯಾಲಗುತ್ತು ಶಂಭು ಹೆಗ್ಗಡೆ ಸಂಚಾಲಕತ್ವದ ಕದ್ರಿ ಮೇಳದಲ್ಲಿ ತಿರುಗಾಟ. ಪೂರ್ವರಂಗ ಅಲ್ಲದೆ ಪ್ರಹ್ಲಾದ, ಧ್ರುವ, ಶ್ರೀಕೃಷ್ಣ, ಷಣ್ಮುಖ ಮೊದಲಾದ ವೇಷಗಳನ್ನು ಮಾಡುತ್ತಾ ಬೆಳೆಯತೊಡಗಿದರು. ಅಳಿಕೆ ಮೋನಪ್ಪ ಶೆಟ್ರಿಗೆ ಮಗನು ಯಕ್ಷಗಾನ ಕಲೆಯ ಸರ್ವಾಂಗಗಳನ್ನೂ ಅಭ್ಯಸಿಸಿ ಪರಿಪೂರ್ಣನಾಗಬೇಕೆಂಬ ಬಯಕೆ. ಭಾಗವತಿಕೆ ಕಲಿಯಲು ಮವ್ವಾರು ಕಿಟ್ಟಣ್ಣ ಭಾಗವತರ ಬಳಿಗೆ ಕರೆದೊಯ್ದರು. ಅವರು ಕಟೀಲು ಸಮೀಪದ ಕೈಯ್ಯೂರು ಶ್ಯಾಮರಾಯರೆಂಬವರ ಮನೆಯಲ್ಲಿ ವಾಸ್ತವ್ಯವಿದ್ದು ಹಾಡುಗಾರಿಕೆ, ಚೆಂಡೆಮದ್ದಳೆ ಕಲಿಸಿ ಕೊಡುತ್ತಿದ್ದರು. ರಾಮಯ್ಯ ರೈಗಳು ಅಲ್ಲೇ ಉಳಿದು ಹಿಮ್ಮೇಳ ಅಭ್ಯಸಿಸಿದರು.
ಕಲಾಪ್ರೇಮಿಗಳಾಗಿದ್ದರು ಶ್ಯಾಮರಾಯ ದಂಪತಿಗಳು. ಶ್ಯಾಮರಾಯರ ಪತ್ನಿಯಂತೂ, ತುಂಬು ಸಂಸಾರ, ಮಕ್ಕಳು, ಮರಿಗಳಿಂದ ಕೂಡಿದ ಮನೆಯಲ್ಲಿ ಪ್ರತ್ಯಕ್ಷ ಅನ್ನಪೂರ್ಣೆಯೇ ಆಗಿದ್ದರು. ಅಳಿಕೆ ರಾಮಯ್ಯ ರೈಗಳು ಮನೆಯ ಮಗನಂತೆಯೇ ಅಲ್ಲಿದ್ದು ಕಲಿತರು. ‘‘ಶ್ಯಾಮರಾಯರ ಪತ್ನಿ ರಾಜಮ್ಮನವರು ಮಗನೆಂದೇ ನನ್ನನ್ನು ಕಂಡರು. ನರಕ ಚತುರ್ದಶಿಯ ದಿನದಂದು ನನ್ನ ಮೈಗೆ ಎಣ್ಣೆ ಪೂಸಿ ಸ್ನಾನ ಮಾಡಿಸಿದರು. ಅನ್ನವಿಕ್ಕಿ ಸಲಹಿದರು. ಮನೆಯ ಸದಸ್ಯರಲ್ಲಿ ನಾನೂ ಒಬ್ಬನಾಗಿ ಹಿಮ್ಮೇಳ ಕಲಿತೆ’’- ಅಳಿಕೆ ರಾಮಯ್ಯ ರೈಗಳು ತನ್ನ ಆತ್ಮಕಥನದಲ್ಲಿ ಈ ಘಟನೆಯನ್ನು ವಿವರವಾಗಿ ಹೇಳಿರುತ್ತಾರೆ.
ಮುಂದಿನ ದಿನಗಳಲ್ಲಿ ಎಲ್ಲರೂ ಮೂಗಿನ ಮೇಲೆ ಬೆರಳಿರಿಸುವ ಘಟನೆಯೊಂದು ನಡೆದಿತ್ತು. ಜೋಕಟ್ಟೆಯಲ್ಲಿ ದ್ರೌಪದಿ ಪ್ರತಾಪ ಆಟ. ಭಾಗವತರ ಅನುಪಸ್ಥಿತಿಯಲ್ಲಿ ಅಳಿಕೆ ರಾಮಯ್ಯ ರೈಗಳು. ಭಾಗವತಿಕೆ ಮಾಡಿ ಪ್ರಸಂಗವನ್ನು ಪ್ರೇಕ್ಷಕರು ಮೆಚ್ಚುವಂತೆ ಮುನ್ನಡೆಸಿದ್ದರು! ಮವ್ವಾರು ಕಿಟ್ಟಣ್ಣ ಭಾಗವತರಿಂದ ಕಲಿತುದು ಸಾರ್ಥಕವಾಗಿತ್ತು. ಕದ್ರಿ ಮೇಳದ ನಂತರ ರಾಮಯ್ಯ ರೈಗಳ ತಿರುಗಾಟ ಕಟೀಲು ಮೇಳದಲ್ಲಿ. ಕಲ್ಲಾಡಿ ಕೊರಗ ಶೆಟ್ರ ಯಜಮಾನಿಕೆಯಲ್ಲಿ. ನಂತರ ಕರ್ನಾಟಕ ಮೇಳದಲ್ಲಂತೂ ಅಳಿಕೆ ರಾಮಯ್ಯ ರೈಗಳು ವಿಜೃಂಭಿಸಿದರು.
ಶ್ರೀ ಅಳಿಕೆ ರಾಮಯ್ಯ ರೈಗಳ ಹೆಚ್ಚಿನ ತಿರುಗಾಟಗಳೂ ಕಲ್ಲಾಡಿ ಕೊರಗ ಶೆಟ್ಟರು ಮತ್ತು ಕಲ್ಲಾಡಿ ವಿಠಲ ಶೆಟ್ಟರ ಯಜಮಾನಿಕೆಯಡಿಯಲ್ಲೇ ನಡೆದಿತ್ತು. ‘‘ಬಣ್ಣಗಾರಿಕೆಯ ಯಕ್ಷಗಾನ ಕ್ಷೇತ್ರದಲ್ಲಿ ಸರ್ವಾಂಗ ಸುಂದರ, ಪರಿಪೂರ್ಣತೆ ಪಡೆದ ವೇಷ’’ ಎಂದು ಕವಿಭೂಷಣ ವೆಂಕಪ್ಪ ಶೆಟ್ಟರು ಅಳಿಕೆ ಮೋನಪ್ಪ ಶೆಟ್ಟರಿಗೆ ಆ ಕಾಲದಲ್ಲಿ ನೀಡಿದ ಮಾತಿನ ಪ್ರಶಸ್ತಿ. ತಂದೆಯ ಜತೆಗೇ ಸಹಕಲಾವಿದನಾಗಿ ತಿರುಗಾಟ. ತೀರ್ಥರೂಪರ ಪುರುಷಪಾತ್ರಗಳಿಗೆ ಅಳಿಕೆ ರಾಮಯ್ಯ ರೈಗಳು ಸ್ತ್ರೀಪಾತ್ರಧಾರಿಯಾಗಿ ಜೀವ ತುಂಬುತ್ತಿದ್ದರು. ನಳ-ದಮಯಂತಿ, ಹರಿಶ್ಚಂದ್ರ-ಚಂದ್ರಮತಿ, ದುಶ್ಯಂತ-ಶಕುಂತಲಾ, ದಶರಥ-ಕೈಕೇಯಿ ಪಾತ್ರಗಳಲ್ಲಿ ತಂದೆ ಮಗನ ಜೋಡಿಯು ರಂಜಿಸಿತ್ತು.
ಕುಮಾರವಿಜಯ ಪ್ರಸಂಗದ ಮಾಯಾ ಅಜಮುಖಿ ಪಾತ್ರವನ್ನು ನೋಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜಯ್ಯ ಹೆಗ್ಗಡೆಯವರು- ‘‘ನಿನಗೆ ಯಕ್ಷಗಾನದಲ್ಲಿ ಉಜ್ವಲ ಭವಿಷ್ಯವಿದೆ. ಮುಂದುವರಿಸು’’- ಎಂದು ಆಶೀರ್ವದಿಸಿದ್ದರು. ಅಳಿಕೆಯವರು ಯಾವ ವೇಷಗಳನ್ನೂ ಮಾಡ ಬಲ್ಲರು. ಮಾತ್ರವಲ್ಲ, ಮಾಡಿ ಮಿಂಚಿದವರು. ಪಾತ್ರದ ಸ್ವಭಾವವನ್ನರಿತು ಕೊರತೆಯಾಗದಂತೆ ಅಭಿನಯಿಸಬಲ್ಲ ಕಲೆ ಇವರಿಗೆ ಸಿದ್ಧಿಯಾಗಿತ್ತು. ಕಲಿಕೆಯ ಆಸಕ್ತಿ ಮತ್ತು ಎಳವೆಯಿಂದಲೇ ಯಕ್ಷಗಾನದ ಆವರಣದೊಳಗೇ ಬೆಳೆದುದು ಇದಕ್ಕೆ ಕಾರಣವಿರಬಹುದು.
ಹಿರಿಯ ಬಲಿಪ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ಶ್ರೀ ದಾಮೋದರ ಮಂಡೆಚ್ಚ ಇವರುಗಳ ಭಾಗವತಿಕೆಯಲ್ಲಿ ಅಳಿಕೆಯವರ ವೇಷಗಳು ರಂಜಿಸಿದವು. ಮಂಡೆಚ್ಚರ ಭಾಗವತಿಕೆಯಲ್ಲಿ ಇವರ ಋತುಪರ್ಣ, ಹರಿಶ್ಚಂದ್ರ, ಕರ್ಣ, ಸುಧನ್ವ ಮೊದಲಾದ ಪಾತ್ರಗಳು ಮೆರೆದವು. ಕರ್ನಾಟಕ ಮೇಳದಲ್ಲಿ ಮಂಡೆಚ್ಚರು, ಹರಿದಾಸ ರಾಮದಾಸ ಸಾಮಗರು, ಬೋಳಾರ ನಾರಾಯಣ ಶೆಟ್ಟಿ, ಮಾಧವ ಶೆಟ್ಟಿ, ಮೂಡುಬಿದಿರೆ ಕಿಟ್ಟಣ್ಣ, ಕ್ರಿಶ್ಚನ್ ಬಾಬು, ಮಿಜಾರು ಅಣ್ಣಪ್ಪ, ನಾರಂಪಾಡಿ ಸುಬ್ಬಯ್ಯ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾಯರು, ಮಂಕುಡೆ ಸಂಜೀವ ಶೆಟ್ಟಿ, ಅರುವ ಕೊರಗಪ್ಪ ಶೆಟ್ಟಿ ಮೊದಲಾದವರು ಸಹಕಲಾವಿದರಾಗಿದ್ದವರು.
ಕರ್ನಾಟಕ ಮೇಳವು ತಿರುಗಾಟವನ್ನು ನಿಲ್ಲಿಸಿದಾಗ ಮತ್ತೆ ಕಟೀಲು ಮೇಳದಲ್ಲಿ ವ್ಯವಸಾಯ ಮಾಡಿ ಅಳಿಕೆ ರಾಮಯ್ಯ ರೈಗಳು ಸ್ವಯಂ ನಿವೃತ್ತಿಯನ್ನು ಹೊಂದಿದವರು. ಪುಂಡುವೇಷ, ಸ್ತ್ರೀವೇಷ, ಕಿರೀಟ ವೇಷ- ಹೀಗೆ ಎಲ್ಲಾ ವಿಭಾಗಗಳಲ್ಲೂ ಹೊಳೆದು ಕಾಣಿಸಿಕೊಂಡರು. ಎಲ್ಲಾ ಪಾತ್ರಗಳಲ್ಲೂ ಸಲೀಸಾಗಿ ಅಭಿನಯಿಸುತ್ತಿದ್ದ ಕಾರಣವೇ ಯಕ್ಷಗಾನದ ನವರಸ ನಾಯಕನೆಂದು ಪ್ರಸಿದ್ಧರಾದರು. ದುಷ್ಯಂತ, ನಳ, ಅತಿಕಾಯ, ಹಿರಣ್ಯಾಕ್ಷ, ಇಂದ್ರಜಿತು, ಋತುಪರ್ಣ, ಕರ್ಣ, ಹನೂಮಂತ, ಕೌರವ, ರಕ್ತಬೀಜ, ಅರ್ಜುನ, ಕೀಚಕ, ಅಭಿಮನ್ಯು, ಬಭ್ರುವಾಹನ, ಶ್ವೇತಕುಮಾರ, ಚಂದ್ರಮತಿ, ದಮಯಂತಿ, ಶಕುಂತಲೆ, ಅಂಬೆ, ಮಂಡೋದರಿ ಅಲ್ಲದೆ ಇನ್ನೂ ಅನೇಕ ಪಾತ್ರಗಳು ಅಳಕೆಯವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು.
ರಾಜ್ಯಪ್ರಶಸ್ತಿ ಪಡೆದ ಮೊದಲ ತೆಂಕಿನ ಕಲಾವಿದನೆಂಬ ಗೌರವಕ್ಕೂ ಪಾತ್ರರಾದರು. ಅಳಿಕೆಯವರ ಸಾಧನೆಗೆ ಅನೇಕ ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿವೆ. 1926ರಿಂದ ತೊಡಗಿ 1984ರ ವರೇಗೆ ಕಲಾಸೇವೆಯನ್ನು ಮಾಡಿ ಪುರಾಣ ಅಲ್ಲದೆ ಅನೇಕ ತುಳು ಪ್ರಸಂಗಗಳಲ್ಲಿ ಕಾಣಿಸಿಕೊಂಡರು. ಜೋಡಾಟಗಳಲ್ಲಿ ರಂಜಿಸಿದವರು. ಸ್ಪರ್ಧಾತ್ಮಕವಾದ ಜೋಡಾಟಗಳಲ್ಲಿ ಇವರನ್ನು ಸೋಲಿಸಲೆಂದೇ ವ್ಯೂಹವನ್ನು ಬಲಿದರೂ ಅಳಿಕೆ ರಾಮಯ್ಯ ರೈಗಳು ಗೆಲುವಿನ ನಗೆಯನ್ನು ಬೀರಿದ ಸಾಧಕ. ದೊಡ್ಡ ಸಾಮಗರು, ಶೇಣಿ, ರಾಮದಾಸ ಸಾಮಗರೊಂದಿಗೆ ಇವರು ಹಲವಾರು ವೇಷಗಳನ್ನು ಮಾಡಿ ಸೈ ಎನಿಸಿಕೊಂಡರು. ದೊಡ್ಡ ಸಾಮಗರ ಭೀಷ್ಮನಿಗೆ ಅಂಬೆಯಾಗಿ, ಶೇಣಿಯವರ ವೀರಮಣಿಗೆ ಹನೂಮಂತನಾಗಿ ಅವರ ಅಭಿನಯವನ್ನು ಹಿರಿಯರು ಇಂದಿಗೂ ನೆನಪಿಸುತ್ತಾರೆ.
2012ರಲ್ಲಿ ಡಾ. ನಿತ್ಯಾನಂದ ಬಿ. ಶೆಟ್ಟಿಯವರ ಸಂಪಾದಕತ್ವದಲ್ಲಿ ‘ಅಳಿಕೆ’- ಯಕ್ಷಗಾನದ ಮೇರುಕಲಾವಿದ ಅಳಿಕೆ ರಾಮಯ್ಯ ರೈ, ಸ್ಮೃತಿ-ಕೃತಿ ಎಂಬ ಪುಸ್ತಕವು ಹೊರಬಂದಿತ್ತು. ಇದರ ಪ್ರಕಾಶಕರು ‘ದೆಹಲಿ ಮಿತ್ರ’ ಸಂಸ್ಥೆ. ಇವರಲ್ಲಿ ಅಳಿಕೆಯವರ ಆತ್ಮಕಥನವು ಮನೋಜ್ಞವಾಗಿ ಅಕ್ಷರ ರೂಪದಲ್ಲಿದೆ. ಆ ಕಾಲದ ಯಕ್ಷಗಾನದ ಸ್ವರೂಪ, ಬೆಳೆದು ಬಂದ ದಾರಿ, ಯಕ್ಷಗಾನಕ್ಕೆ ಪೂರಕ ಮಾರಕವಾಗಬಲ್ಲ ವಿಚಾರಗಳು, ನಿಜವಾದ ಭಾಗವತನು ಹೇಗಿರಬೇಕು? ಕಲಾವಿದರು ಹೇಗಿರಬೇಕು? ಕಲಿಕಾಸಕ್ತ ಕಲಾವಿದರು ಹೇಗಿರಬೇಕು? ಎಂಬ ಬಗೆಗೆ ಅಳಿಕೆಯವರು ತನ್ನ ಆತ್ಮಕಥನದಲ್ಲಿ ತಿಳಿಸಿದ್ದಾರೆ. ತನ್ನ ಬದುಕನ್ನು ಯಕ್ಷಗಾನಕ್ಕಾಗಿಯೇ ಸವೆಸಿ 1989ರಲ್ಲಿ ಅಳಿಕೆ ರಾಮಯ್ಯ ರೈಗಳು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡರು. ಬಹಳಷ್ಟನ್ನು ಯಕ್ಷಗಾನಕ್ಕಾಗಿ ನೀಡಿ ಕಣ್ಮರೆಯಾದ ಅವರಿಗೆ ಕಲಾಭಿಮಾನಿ ಗಳೆಲ್ಲರ ಪರವಾಗಿ ನಮನಗಳು.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು