ಇಪ್ಪತ್ತನೆಯ ಶತಮಾನದ ಆರಂಭದ ಕಾಲ. ಯಕ್ಷಗಾನ ಕಲಾವಿದರ ಬದುಕು ಹೇಗಿದ್ದಿರಬಹುದು? ಹೀಗೆಯೇ ಇದ್ದಿರಬಹದು ಎಂದು ಹೇಳಲು ನಾವು ಶಕ್ಯರಲ್ಲ. ಆದರೂ ಕಲ್ಪಿಸಿಕೊಳ್ಳಬಹುದು. ಹಿರಿಯರಿಂದ ಕೇಳಿ ತಿಳಿದುಕೊಳ್ಳಲೂ ಬಹುದು. ಕಾಲ್ನಡಿಗೆಯಿಂದಲೇ ಸಾಗುತ್ತಿದ್ದ ಕಾಲ ಅದು.
ಸರಕುಗಳನ್ನು ತಲೆಯ ಮೇಲೆ ಹೊತ್ತೇ ಸಾಗಿಸಬೇಕಾಗುತ್ತಿತ್ತು. ಯಂತ್ರಯುಗವು ಇನ್ನೂ ಆರಂಭವಾಗಿರಲಿಲ್ಲ. ವಾಹನ, ಟೆಲಿಫೋನ್, ಟಿವಿ , ರೇಡಿಯೋ ಯಾವುದೂ ಇದ್ದಿರಲಿಲ್ಲ. ಸಂಪರ್ಕಕ್ಕೆ ಪತ್ರ ವ್ಯವಹಾರ ಎಂಬ ಒಂದೇ ಒಂದು ವ್ಯವಸ್ಥೆ ಇದ್ದುದು. ಇಲ್ಲವಾದರೆ ನಡೆದೇ ಸಾಗಿ ಮುಖತಃ ಭೇಟಿಯಾಗಬೇಕಿತ್ತು. ನಾಡಿಗರು ಕಾಡದಾರಿಯನ್ನು ಕ್ರಮಿಸಿಯೇ ಮತ್ತೊಂದು ಊರಿಗೆ ಸಾಗುತ್ತಿದ್ದರು.
ಕಲಾವಿದರು ಅದೆಷ್ಟು ಕಷ್ಟದ ದಿನಗಳನ್ನು ಕಳೆದು ಬದುಕಿರಬಹುದು? ಕಷ್ಟ ನಷ್ಟಗಳ ಕಡೆಗೆ ಅವರ ಗಮನವಿರಲಿಲ್ಲ. ಗುರಿಯತ್ತ ಮಾತ್ರ ಅವರು ಲಕ್ಷ್ಯವಿರಿಸಿದ್ದರು. ಕಲ್ಲು ಮಣ್ಣು, ಕೊಳೆಗಳನ್ನೆಲ್ಲಾ ಕೊರೆದು ಬಾವಿಯನ್ನು ತೋಡಿದಾಗ ಮಾತ್ರ ಸಿಹಿನೀರು ಸಿಗುತ್ತದೆ ಎಂಬ ವಿಚಾರವನ್ನು ಅವರು ತಿಳಿದಿದ್ದರು. ಹೌದು. ಕಷ್ಟ ನಷ್ಟಗಳಿಲ್ಲದೆ ಗೆದ್ದರೆ ಅದು ಕೇವಲ ಗೆಲುವು ಎನಿಸುತ್ತದೆ. ಕಷ್ಟ ನಷ್ಟಗಳನ್ನೂ ಸಮಸ್ಯೆಗಳನ್ನೂ ಎದುರಿಸಿ ಗೆದ್ದರೆ ಅದು ಇತಿಹಾಸ’ ಎನಿಸಲ್ಪಡುತ್ತದೆ.
ಬದುಕಿನಲ್ಲಿ ಬಾಯಿತೆರೆದ ಬವಣೆಗಳಿಂದ ಬೆಂದು ನೊಂದರೂ ವಿಚಲಿತರಾಗದೆ ಗುರಿಯನ್ನು ಸೇರಿದ ವ್ಯಕ್ತಿಗಳು ಇತಿಹಾಸ ಎಂಬ ಪುಸ್ತಕದ ಪುಟಗಳಲ್ಲಿ ಶಾಶ್ವತರಾಗಿ ಉಳಿಯುತ್ತಾರೆ. ಸಂಧರ್ಭಗಳು ಅನುಕೂಲವಾಗಿದ್ದಾಗ ವ್ಯವಹರಿಸುವುದು ಬಹು ಸುಲಭ. ಪ್ರತಿಕೂಲ ಸಂಧರ್ಭಗಳನ್ನು ಎದುರಿಸಿ ಗೆಲ್ಲುವುದೆಂದರೆ ಅದೊಂದು ಸಾಹಸ. ಅವಿರತ ಸಾಧನೆಯಿಂದ ಯಕ್ಷಗಾನಕ್ಕೆ ಅನನ್ಯ ಕೊಡುಗೆಗಳನ್ನು ನೀಡಿ ನಮ್ಮನ್ನಗಲಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡರೂ ಅವರು ಜನಮಾನಸದಲ್ಲಿ ಶಾಸ್ವತರಾಗಿ ಉಳಿಯುತ್ತಾರೆ.
ಅಳಿದರೂ ಕಾಯ ಉಳಿಯಿತು ಕೀರ್ತಿ ಎಂಬಂತೆ ಕಲಾಮಾತೆಯು ಅವರ ಕೀರ್ತಿಯನ್ನು ಬೆಳಗಿಸುತ್ತಾಳೆ. ಕಲಾಭಿಮಾನಿಗಳು ಅಂತಹ ಸಾಧಕರನ್ನು ಮರೆಯದೆ ಸದಾ ನೆನಪಿಸಿಕೊಳ್ಳುತ್ತಾರೆ. ಅವರ ತ್ಯಾಗ ಕೊಡುಗೆಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ. ಅನುಭವಿಸಬಹುದು. ಇದರಿಂದ ಅಲೌಕಿಕವಾಗಿರುವ ಆ ಚೇತನಗಳು ಸಂತೋಷಮಾನಸರಾಗಿ ನಮ್ಮನ್ನು ಅನುಗ್ರಹಿಸುತ್ತಾರೆ ಎಂಬುದು ಖರೆ.
20 ನೇ ಶತಮಾನದಲ್ಲಿ ಲೋಕದ ಬೆಳಕನ್ನು ಕಂಡು ಯಕ್ಷಗಾನವನ್ನೇ ತನ್ನ ಉಸಿರಾಗಿ ಸ್ವೀಕರಿಸಿ, ಅಪೂರ್ವ ಸಾಧಕನಾಗಿ, ಕಲಾವಿದನಾಗಿ, ಗುರುಶ್ರೇಷ್ಠನಾಗಿ, ಪ್ರಸಂಗಕರ್ತನಾಗಿ ಕಲೆಗೆ ಅನುಪಮವಾದ ಕೊಡುಗೆಗಳನ್ನು ನೀಡಿ ಕೀರ್ತಿಶೇಷರಾದವರು ಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು. ಅಳಿದರೂ ಇಂದು ಬದುಕಿಯೇ ನಮ್ಮ ಜತೆಗಿದ್ದಾರೆ. ಅವರ ಬದುಕು ಕಲಾವಿದರಿಗೆಲ್ಲಾ ಅನುಸರಣೀಯವಾದುದು.
ಯಕ್ಷಗಾನ ಗುರುಕುಲದ ರೂವಾರಿ ಎಂದೇ ಖ್ಯಾತರಾಗಿದ್ದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರನ್ನು ನಾನು ನೋಡಿದ್ದಿಲ್ಲ. ನನ್ನ ತೀರ್ಥರೂಪರು ವಳಕ್ಕುಂಜ ಸುಬ್ರಹ್ಮಣ್ಯ ಭಟ್ಟರಿಂದ ಅವರ ಬಗೆಗೆ ಕೇಳಿ ತಿಳಿದುಕೊಂಡಿದ್ದೆ. ನನ್ನ ತಂದೆಯವರು ಕೀರಿಕ್ಕಾಡು ಮಾಸ್ತರರ ಸಮಕಾಲೀನರಲ್ಲ. ಕಿರಿಯ ಒಡನಾಡಿಯೂ ಅರ್ಥಗಾರಿಕೆಯಲ್ಲಿ ಅವರ ಶಿಷ್ಯನೂ ಆಗಿದ್ದರು. ಮಾಸ್ತರರ ಅರ್ಥಗಾರಿಕೆಯನ್ನು ಕೇಳಿಯೇ ಬೆಳೆದವರು.
ಕೀರಿಕ್ಕಾಡು ವಿಷ್ಣು ಭಟ್ಟರು ಭಾಗವಹಿಸಿದ ತಾಳಮದ್ದಳೆಗಳಲ್ಲಿ ಅವರ ಸಂಭಾಷಣೆಗಳಲ್ಲಿ ಹುಟ್ಟಿದ ರೋಚಕ ಸನ್ನಿವೇಶಗಳನ್ನು ಮಕ್ಕಳಾದ ನಮಗೆ ತೀರ್ಥರೂಪರು ಹೇಳುತ್ತಿದ್ದರು. ಈಗಲೂ ನೆನಪಿದೆ. “ಅವರ ಸಂಭಾಷಣೆಗಳು ಸರಳ ಸುಂದರವಾಗಿ ಸಾಮಾನ್ಯರಿಗೂ ಅರ್ಥವಾಗುವಂತಿರುತ್ತಿತ್ತು . ಯಕ್ಷಗಾನ ಕಲಿಕಾಸಕ್ತರಿಗೆ ಅವಕಾಶಗಳನ್ನು ನೀಡಿ ಧೈರ್ಯ ತುಂಬಿ ಪ್ರೋತ್ಸಾಹಿಸುತ್ತಿದ್ದರು. ಕೆಣಕಿದರೆ ಎದುರಾಳಿ ಎಂತಹಾ ಬಲಿಷ್ಠನಾದರೂ ಗಣನೆಗೆ ತಾರದೆ ಕುಟುಕುತ್ತಿದ್ದರು.
ಕೋಪವೆಂದಿಗೂ ಬಾರದು. ಸಹನೆಗಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ ಎಂದು ತಿಳಿದು ವ್ಯವಹರಿಸುವವರು. ಸರಳವಾದ ಬದುಕು. ಯಕ್ಷಗಾನವನ್ನು ತನ್ನ ಪ್ರಾಣವೆಂದು ತಿಳಿದು ಪ್ರೀತಿಸುತ್ತಿದ್ದರು” ಇದು ಕೀರಿಕ್ಕಾಡು ಮಾಸ್ತರರ ಬಗ್ಗೆ ನನ್ನ ತೀರ್ಥರೂಪರು ಆಡುತ್ತಿದ್ದ ಮಾತುಗಳು. ಉತ್ತಮ ವಿಚಾರಗಳನ್ನು ಹಿರಿಯ ಕಿರಿಯರೆಂಬ ಭೇದವಿಲ್ಲದೆ ಮಾಸ್ತರರು ಕೊಟ್ಟು ಕೊಂಡುಕೊಳ್ಳುತ್ತಿದ್ದರೆಂದು ಹಿರಿಯರಿಂದ ನಾನು ಕೇಳಿ ತಿಳಿದಿರುವೆ.
ಸದ್ವಿಚಾರಗಳಲ್ಲಿರುವ ಚಮತ್ಕಾರವನ್ನು ನಾವು ಗಮನಿಸೋಣ. ಒಂದು ನಾಣ್ಯವನ್ನು ಇಬ್ಬರು ಪರಸ್ಪರ ಬದಲಿಸಿಕೊಂಡರೆ ಇಬ್ಬರ ಕೈಯಲ್ಲಿಯೂ ಒಂದೊಂದೇ ನಾಣ್ಯವು ಉಳಿಯುತ್ತದೆ. ಆದರೆ ಒಳ್ಳೆಯ ವಿಚಾರವನ್ನು ಇಬ್ಬರು ಕೊಟ್ಟುಕೊಂಡರೆ (ವಿನಿಮಯ ) ಇಬ್ಬರಲ್ಲೂ ಎರೆಡೆರಡು ಒಳ್ಳೆಯ ವಿಚಾರಗಳು ತುಂಬಿಕೊಳ್ಳುತ್ತವೆ! – (ಮುಂದುವರಿಯುವುದು)