Friday, September 20, 2024
Homeಯಕ್ಷಗಾನಯಕ್ಷಾಗಸದ ಚಂದಿರ, ಯಕ್ಷರಂಗದ ಅಭಿಮನ್ಯು ಡಾ. ಪುತ್ತೂರು ಶ್ರೀಧರ ಭಂಡಾರಿ ಇನ್ನಿಲ್ಲ (Puttur Sridhara Bhandari no...

ಯಕ್ಷಾಗಸದ ಚಂದಿರ, ಯಕ್ಷರಂಗದ ಅಭಿಮನ್ಯು ಡಾ. ಪುತ್ತೂರು ಶ್ರೀಧರ ಭಂಡಾರಿ ಇನ್ನಿಲ್ಲ (Puttur Sridhara Bhandari no more)

ಈ ವರ್ಷ ಯಕ್ಷರಂಗಕ್ಕೆ ಅನಿರೀಕ್ಷಿತಗಳ ಮೇಲೆ ಅನಿರೀಕ್ಷಿತಗಳೇ ಸಂಭವಿಸುತ್ತಿವೆ. ಇದೀಗ ಮತ್ತೊಂದು ರಾತ್ರಿ ಆಘಾತದ ಸುದ್ದಿ ಬಂದಿದೆ. ಯಕ್ಷರಂಗದ ಅಭಿಮನ್ಯು, ಯಕ್ಷಾಗಸದಲ್ಲಿ ಚಂದಿರನಂತೆ ಬೆಳಗಿದ ಪ್ರಸಿದ್ಧ ತೆಂಕು ತಿಟ್ಟಿನ ಪ್ರಸಿದ್ಧ ಪುಂಡುವೇಷಧಾರಿಯಾಗಿದ್ದ ಡಾ. ಪುತ್ತೂರು ಶ್ರೀಧರ ಭಂಡಾರಿಯವರು ನಿನ್ನೆ  ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಯಕ್ಷಗಾನ ಕ್ಷೇತ್ರದಲ್ಲಿ ಶ್ರೀಧರ ಭಂಡಾರಿಯವರ ಹೆಸರು ಕೇಳದವರಿಲ್ಲ.  ಓದಿದ್ದು ಕೇವಲ 5ನೇ ತರಗತಿ. ಆದರೆ ಯಾರೂ ಊಹಿಸದೆ ಇದ್ದ ಎತ್ತರಕ್ಕೆ ಏರಿ ಗೌರವ ಡಾಕ್ಟರೇಟ್ ಪದವಿಯನ್ನು ತನ್ನದಾಗಿಸಿಕೊಂಡ ಸಾಧಕ. 

ಯಕ್ಷಗಾನದ ಅಗ್ರಪಂಕ್ತಿಯ ಕಲಾವಿದರಲ್ಲೊಬ್ಬರಾದ ಶ್ರೀ ಬಳ್ಳಂಬೆಟ್ಟು ಶೀನಪ್ಪ ಭಂಡಾರಿ, ಶ್ರೀಮತಿ ಸುಂದರಿ ದಂಪತಿಗಳ ಪುತ್ರನಾಗಿ 1945ರಲ್ಲಿ ಜನನ. ಮನೆಯ ಪರಿಸರ ತುಂಬೆಲ್ಲಾ ಯಕ್ಷಗಾನ ಪರಂಪರೆಯ ಸುವಾಸನೆ ಘಮಘಮಿಸುತ್ತಿತ್ತು. ಈ ಕಲಾ ಸುಗಂಧದಿಂದ ಪ್ರೇರಿತನಾದ ಬಾಲಕ ಶ್ರೀಧರ ಭಂಡಾರಿ ಇಷ್ಟು ಎತ್ತರಕ್ಕೆ ಏರಿದ್ದು ಈಗ ಇತಿಹಾಸ.   ಶ್ರೀಧರ ಭಂಡಾರಿಯವರ ಪರಂಪರೆಯೇ ಯಕ್ಷಗಾನದ್ದು. ಅಜ್ಜ ಅಂದರೆ ತಂದೆಯವರ ಮಾವ ಬಳ್ಳಂಬಟ್ಟಿನ ಸಮೀಪದ ಜತ್ತಪ್ಪ ರೈಗಳು ಆ ಕಾಲದಲ್ಲಿ ದೊಡ್ಡ ಭಾಗವತರು.

ಭಾಗವತರಾದ ಮೈಂದಪ್ಪ ರೈಗಳು ಶ್ರೀಧರ ಭಂಡಾರಿಯವರ ತಂದೆಯವರಾದ ಶೀನಪ್ಪ ಭಂಡಾರಿಗಳ  ಭಾವ,  ಹೀಗೆ ಯಕ್ಷಗಾನದ ದೊಡ್ಡ ಸಂಬಂಧವೇ ಇತ್ತು. ತಂದೆಯವರಾದ ದಿ| ಶೀನಪ್ಪ ಭಂಡಾರಿಗಳು ಪುತ್ತೂರಿಗೆ ಬಂದು ನೆಲಸಿದರು. ಪುತ್ತೂರಿನಲ್ಲಿ ಮೊದಲಿಗೆ ಬಳ್ಳಂಬೆಟ್ಟು ಮೇಳ ಎಂಬ ಹೆಸರಿನಲ್ಲಿ ಮೇಳ ಮಾಡಿದ್ದರು. ಆ ನಂತರ ಆದಿ ಸುಬ್ರಹ್ಮಣ್ಯ ಮೇಳ ಎಂದು ಪ್ರಾರಂಭಿಸಿದರು.

ತುಂಬಾ ಕಲಾವಿದರು, ಶಿಷ್ಯಂದಿರು ಶೀನಪ್ಪ ಭಂಡಾರಿಯವರ ಗರಡಿಯಲ್ಲಿ ಕಲಿತು ಪಳಗಿದವರು. ಇವರ ಅಣ್ಣನನ್ನು ತಂದೆಯವರೇ ನಾಟ್ಯ ಕಲಿಸಿ ತಯಾರಿ ಮಾಡಿ ಯಕ್ಷಗಾನದಲ್ಲೇ ತೊಡಗುವಂತೆ ಮಾಡಿದ್ದರು. ಆದರೆ ಶ್ರೀಧರ ಭಂಡಾರಿಯವರನ್ನುಮಾತ್ರ ಯಕ್ಷಗಾನ ಬೇಡವೆಂದು ಶಾಲೆಗೆ ಕಳಿಸಿ ವಿದ್ಯಾವಂತನನ್ನಾಗಿ ಮಾಡಬೇಕೆಂಬ ಅಭಿಲಾಷೆ ಶೀನಪ್ಪ ಭಂಡಾರಿಯವರಿಗಿತ್ತು. ಆದರೆ ಆಟದ ವ್ಯಾಮೋಹ, ಯಕ್ಷಗಾನದ ಆಸಕ್ತಿಯಿಂದಾಗಿ ಬಾಲ್ಯದಲ್ಲಿರುವಾಗಲೇ ಯಕ್ಷಗಾನದ ಪ್ರಸಂಗ ಪುಸ್ತಕದ ಪದ್ಯಗಳನ್ನು ಬಾಯಿಪಾಠ ಮಾಡಿ ಹೇಳುತ್ತಿದ್ದ ಬಾಲಕ ಶ್ರೀಧರನಿಗೆ ಶಾಲೆಗೆ ಹೋಗುವಾಗಲೇ ಅಭಿಮನ್ಯು, ಕರ್ಣಪರ್ವ, ಗದಾಪರ್ವ, ಶೂರ್ಪನಖಾ ಮಾನಭಂಗ, ಇಂದ್ರಜಿತು ಕಾಳಗವೇ ಮೊದಲಾದ ಪ್ರಸಂಗದ ಪದ್ಯಗಳು ಬಾಯಿಪಾಠ ಬರುತ್ತಿತ್ತು.

ಆಟಕ್ಕೆ ಬರದಂತೆ ನಿರ್ಬಂಧಿಸಿದರೂ ಆಗಾಗ ಕದ್ದುಮುಚ್ಚಿ ಆಟ ನೋಡಲು ಹೋಗುತ್ತಿದ್ದರು. ಮುಚ್ಚೂರು ಮೇಳ ಎಂಬ ಮೇಳವಿತ್ತು. ಶೀನಪ್ಪ ಭಂಡಾರಿಯವರ ಬಳ್ಳಂಬೆಟ್ಟು ಮೇಳಕ್ಕೂ ಮುಚ್ಚೂರು ಮೇಳಕ್ಕೂ ಪುತ್ತೂರಿನಲ್ಲಿ ಒಂದು ಜೋಡಾಟ ನಡೆಯಿತು. ಆ ಸಮಯದಲ್ಲಿ ಮುಚ್ಚೂರು ಮೇಳದಲ್ಲಿ ಕ್ರಿಶ್ಚಿಯನ್ ಬಾಬು ಎಂಬ ಕಲಾವಿದರಿದ್ದರು. ಪಾಂಡವಾಶ್ವಮೇಧ ಪ್ರಸಂಗದಲ್ಲಿ ಬಭ್ರುವಾಹನ ಪಾತ್ರವನ್ನು ಕ್ರಿಶ್ಚಿಯನ್ ಬಾಬು ಮಾಡಿದ್ದರು. ಕ್ರಿಶ್ಚಿಯನ್ ಬಾಬು ಅವರ ಅದ್ಭುತ ನಾಟ್ಯವನ್ನು ನೋಡಿ ಜನರು ಬೆರಗಾಗಿ ‘ಏನು ನಾಟ್ಯ’ ಎಂದು ಉದ್ಘರಿಸಿದಾಗ ಬಾಲಕ ಶ್ರೀಧರ ಭಂಡಾರಿಯವರಿಗೆ ‘ನನಗೇಕೆ ಈ ಸಾಧನೆ ಸಿದ್ಧಿಸಲಾರದು, ಅವರಂತೆ  ನನಗೇಕೆ ಸಾಧ್ಯವಿಲ್ಲ’ ಎಂಬ ಹಠ ಮೂಡಿತು.

ಆದಕಾರಣ ಮನಸ್ಸಿನಲ್ಲೇ ಕಲ್ಪಿಸಿಕೊಂಡರೂ ತಂದೆಯವರೊಡನೆ ಹೇಳುವ ಧೈರ್ಯವಿರಲಿಲ್ಲ. ಆದರೆ ಮಗನ ಯಕ್ಷಗಾನದ ಆಸಕ್ತಿ, ಚರ್ಯೆಗಳನ್ನು ಗಮನಿಸಿದ ತಂದೆಯವರಾದ ಶೀನಪ್ಪ ಭಂಡಾರಿಯವರು, ‘ಏನು ಮಾಡುವುದು’ ಎಂದು ಆಲೋಚಿಸಿ ಪುತ್ತೂರಿನ ಭರತನಾಟ್ಯದ ಕಲಾವಿದ, ಗುರುಗಳಾಗಿದ್ದ ಕುದ್ಕಾಡಿ ವಿಶ್ವನಾಥ ರೈ ಅವರಲ್ಲಿ ಪ್ರಸ್ತಾಪಿಸಿದಾಗ ಅವರು ತಮ್ಮ ಮನೆಗೆ ಕಳುಹಿಸಿ ಕೊಡುವಂತೆ ಹೇಳಿದ್ದರು. 1960ರ ಸುಮಾರಿಗೆ ಆಗ ಪರ್ಲಡ್ಕದಲ್ಲಿದ್ದ ಕುದ್ಕಾಡಿ ವಿಶ್ವನಾಥ ರೈಗಳ ಮನೆಗೆ ಪ್ರತಿದಿನ ಬೆಳಿಗ್ಗೆ ಭರತನಾಟ್ಯ ಕಲಿಯಲು ಹೋಗುತ್ತಿದ್ದರು.

ಪ್ರತಿನಿತ್ಯವೂ ಪಾಠ ಆಗುತ್ತಿತ್ತು. ಭರತನಾಟ್ಯದ ತರಗತಿಗಳು ಮುಗಿದ ನಂತರ ಗುರುಗಳ ಜೊತೆಗೆ ಭರತನಾಟ್ಯ ಪ್ರದರ್ಶನ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಕಾಳಿಂಗಮರ್ದನದ ಕೃಷ್ಣನೇ ಮೊದಲಾದ ಹಲವಾರು ಪಾತ್ರಗಳ ಭರತನಾಟ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಒಮ್ಮೆ ಕೇರಳದ ಎರ್ನಾಕುಲಂನಲ್ಲಿ ಒಂದು ಯಕ್ಷಗಾನ ಕಾರ್ಯಕ್ರಮ ನಿಗದಿಯಾಗಿತ್ತು. ಆ ದಿನ ಭಂಡಾರಿಯವರು ತಮ್ಮ ತಂದೆಯವರ ಜೊತೆ ಎರ್ನಾಕುಲಂಗೆ ಹೋಗಿದ್ದರು. ಪ್ರಥಮವಾಗಿ ಅಲ್ಲಿ ಕೃಷ್ಣನ ಪಾತ್ರಮಾಡಿದರು. ಗೆಜ್ಜೆ ಕಟ್ಟಿದ ದಿನ ಎರ್ನಾಕುಲಂನಲ್ಲಿ ಆಗಿತ್ತು.

ಸುಮಾರು ಒಂದೆರಡು ವರ್ಷಗಳ ವರೆಗೆ ತಂದೆಯವರ ಜೊತೆಯೇ ವೇಷಗಳನ್ನು ಮಾಡುತ್ತಿದ್ದರು . ಹೀಗೆ ಯಕ್ಷಗಾನ ವೇಷಗಳನ್ನು ಮಾಡಿ ಅನುಭವವಾಗಿತ್ತು. ತುಂಬಾ ತಿಳುವಳಿಕೆ ಬೇಕಾದ ಪಾತ್ರಗಳಲ್ಲದಿದ್ದರೂ ಬಾಲ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ‘ತ್ರಿಜನ್ಮ ಮೋಕ್ಷ’ ಪ್ರಸಂಗದಲ್ಲಿ ಪ್ರಹ್ಲಾದನ ಪಾತ್ರಕ್ಕೆ ಸೂಕ್ತ ಹುಡುಕಾಟದಲ್ಲಿದ್ದ ಧರ್ಮಸ್ಥಳ ಮೇಳದ ಶೇಣಿ ಗೋಪಾಲಕೃಷ್ಣ ಭಟ್ಟರು, ವಿಟ್ಲ ಗೋಪಾಲಕೃಷ್ಣ ಜೋಷಿ, ಪಾತಾಳ ವೆಂಕಟ್ರಮಣ ಭಟ್ಟರೇ ಮೊದಲಾದವರು ಇವರ  ತಂದೆಯವರನ್ನು ಸಂಪರ್ಕಿಸಿ ಧರ್ಮಸ್ಥಳ ಮೇಳದ ಸುಳ್ಯದ ಜಾತ್ರೆಯ ಆಟಕ್ಕೆ ಶ್ರೀಧರ ಭಂಡಾರಿಯವರು ಆ ಮೇಳವನ್ನು ಸೇರಿಕೊಳ್ಳುವಂತೆ ಮಾಡಿದರು.

ಹೀಗೆ 1963ರಲ್ಲಿ ಧರ್ಮಸ್ಥಳ ಮೇಳ ಸೇರಿದರು. ಅಲ್ಲಿಂದ ಮೊದಲ್ಗೊಂಡು ದಿಗ್ಗಜರ ಜೊತೆ ಶ್ರೀಧರ ಭಂಡಾರಿಯವರ ತಿರುಗಾಟ ಪ್ರಾರಂಭವಾಯಿತು. ಶೇಣಿ, ಪಾತಾಳ, ವಿಟ್ಲ ಜೋಷಿ, ಹೊಸಹಿತ್ಲು ಮಹಾಲಿಂಗ ಭಟ್, ಕುಡಾನ ಗೋಪಾಲಕೃಷ್ಣ ಭಟ್ ಮೊದಲಾದವರ ಮಾರ್ಗದರ್ಶನದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಹೋದರು.  ಅದೇ ಸಮಯದಲ್ಲಿ ಭಂಡಾರಿಯವರ ತಂದೆಯವರ ಗುರುಗಳೂ ಆದ ಕುರಿಯ ವಿಠಲ ಶಾಸ್ತ್ರಿಗಳಲ್ಲಿಗೆ ಹೋಗಿ ಸುಮಾರು ಆರು ತಿಂಗಳುಗಳ ಕಾಲ ಅಲ್ಲಿದ್ದು ಅವರಿಂದ ಯಕ್ಷಗಾನದ ಹೆಚ್ಚಿನ ತರಬೇತಿಯನ್ನು ಪಡೆದರು.

ಭರತನಾಟ್ಯವನ್ನು ಕಲಿತವನಾಗಿದ್ದರೂ ಅದನ್ನು ಪ್ರದರ್ಶಿಸುವ ಹಾಗೂ ಪ್ರಯೋಗ ಮಾಡುವ ಅವಕಾಶ ಅಷ್ಟಾಗಿ ಆಗದಿದ್ದರೂ ಭರತನಾಟ್ಯದ ಕಲಿಕೆಯಿಂದ ಅನುಕೂಲ ತುಂಬಾ ಆಗಿತ್ತು. ಅಭಿನಯಕ್ಕೆ ಹಾಗೂ ಸಣ್ಣ ಸಣ್ಣ ಹೆಜ್ಜೆಗಾರಿಕೆಯನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಭಾರತನಾಟ್ಯದ ಕಲಿಕೆ ಶ್ರೀಧರ ಭಂಡಾರಿಯವರಿಗೆ ಸಹಾಯವಾಯಿತು.

ಶ್ರೀಧರ ಭಂಡಾರಿಯವರ ಮಳೆಗಾಲದ ತಿರುಗಾಟದ ಮೇಳವಾದ  ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯು  ಕರ್ನಾಟಕದಾದ್ಯಂತ ಹೆಚ್ಚಿನ ಎಲ್ಲಾ ಕಡೆಗಳಿಗೆ ಮಳೆಗಾಲದ ತಿರುಗಾಟವನ್ನು ವಿಸ್ತರಿಸಿ ತಿರುಗಾಟದ ತನ್ನ 29 ವರ್ಷವನ್ನು ಪೂರೈಸಿತ್ತು.  

1980ರಲ್ಲಿ ಪುತ್ತೂರು ಮೇಳ ಮಾಡಿದ್ದರು. ಮೊದಲ ಎರಡು ಮೂರು ವರ್ಷಗಳು ಆರ್ಥಿಕವಾಗಿ ಮೇಳ ಮುನ್ನಡೆಯ ಹಾದಿಯಲ್ಲಿತ್ತು. ಆದರೆ ಕ್ರಮೇಣ ಕಲೆಕ್ಷನ್ ಕಡಿಮೆಯಾಗಿ ಆರ್ಥಿಕವಾಗಿ ಕೈಸುಟ್ಟುಕೊಂಡರು. ಕಲಾವಿದರ ಸಂಘಟನೆ ಒಳ್ಳೆಯದಿತ್ತು. ಒಳ್ಳೆಯ ಹೆಸರೂ ಇತ್ತು. ಆದರೆ ನಿರ್ವಹಣೆಗೆ ಆರ್ಥಿಕ ಬಲ ಇರಲಿಲ್ಲ. ಆಮೇಲೆ 1987ರಲ್ಲಿ ಕಾಂತಾವರ ಮೇಳ ಮಾಡಿದರು.

1990ರಲ್ಲಿ ಮೇಳದ ನಿರ್ವಹಣೆಯಿಂದ ನಷ್ಟವನ್ನನುಭವಿಸಿ ಬೇಸತ್ತು ಸ್ವಂತ ಮೇಳವನ್ನು ಕೈಬಿಟ್ಟು ಪುನಃ ಧರ್ಮಸ್ಥಳ ಮೇಳಕ್ಕೆ ಸೇರಿದರು. ಅಲ್ಲಲ್ಲಿ ನಾಟ್ಯ ತರಗತಿಗಳು, ಮಳೆಗಾಲದ ಪ್ರದರ್ಶನಗಳು ಮೊದಲಾದುವುಗಳು ಭಂಡಾರಿಯವರಿಗೆ ಹೆಸರು ತಂದುಕೊಟ್ಟಿತು. ಆರ್ಥಿಕವಾಗಿಯೂ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಂಡರು. ಈಗಂತೂ ಮಳೆಗಾಲದಲ್ಲಿ ಇವರ ಯಕ್ಷಗಾನ ತಂಡವನ್ನು ನೋಡಿಯೇ ಅನೇಕ ಕಾರ್ಯಕ್ರಮಗಳು ಸಿಗುತ್ತವೆ. ಸಮಯಾವಕಾಶವಿಲ್ಲದಷ್ಟು ಆಟಗಳು ಸಿಗುತ್ತವೆ. ಸಮಯ, ದಿನಗಳ ಹೊಂದಿಸುವಿಕೆ ಕಷ್ಟಸಾಧ್ಯವಾಗಿ ಕೆಲವನ್ನು ಬಿಟ್ಟದ್ದೂ ಉಂಟು ಎಂದು ಶ್ರೀಧರ ಭಂಡಾರಿಯವರು ಹೇಳುತ್ತಿದ್ದರು. 

“ನನ್ನನ್ನು  ರಂಗದಲ್ಲಿ ಬೆಳೆಸಿದ್ದು ಹೊಸಹಿತ್ಲು ಮಹಾಲಿಂಗ ಭಟ್ಟರು” ಎಂದು ಅವರನ್ನು ನೆನಪಿಸಿಕೊಳ್ಳುತ್ತಿದ್ದ  ಶ್ರೀಧರ ಭಂಡಾರಿಯವರು ಪುತ್ತೂರಿನಲ್ಲಿ ಎರಡು ಮೂರು ಕಡೆ ನಾಟ್ಯ ತರಗತಿಗಳನ್ನು ನಡೆಸುತ್ತಿದ್ದರು. ಮುಂಬಯಿಯಲ್ಲಿ ಹಲವಾರು ಕಡೆ ನಾಟ್ಯ ನಿರ್ದೇಶನ, ತರಗತಿಗಳನ್ನು ಮಾಡಿದ್ದಾರೆ. 

ಯಕ್ಷಗಾನದಲ್ಲಿ ಒಬ್ಬ ವ್ಯಕ್ತಿಯಾಗಿ ಏನೆಲ್ಲಾ ಸಾಧನೆಗಳನ್ನು ಮಾಡಬಹುದೆಂದು ಇತರ ಕಲಾವಿದರಿಗೆ ತೋರಿಸಿಕೊಟ್ಟ ಒಬ್ಬ ಮಹಾನ್ ಕಲಾವಿದ ಶ್ರೀಧರ ಭಂಡಾರಿಯವರು ಈಗ ನಮ್ಮೊಂದಿಗಿಲ್ಲ ಎನ್ನುವುದು ಎಂಬುದು ಅತೀವ ದುಃಖವನ್ನು ನೀಡುವ ವಿಚಾರ. ಅವರಂತಹ ಅನರ್ಘ್ಯ ರತ್ನವನ್ನು ಕಳೆದುಕೊಂಡು ಯಕ್ಷರಂಗ ಬಡವಾಗಿದೆ. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ನೀಡಲೆಂದು ಸಮಸ್ತ ಯಕ್ಷಾಭಿಮಾನಿಗಳ ಪರವಾಗಿ ಪ್ರಾರ್ಥನೆ.  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments