Saturday, November 23, 2024
HomeUncategorizedಚೆಂಡೆಯಲ್ಲಿಯೂ ಮಧುರ ಸ್ವರ ಹೊಮ್ಮಿಸುವ ದೇಲಂತಮಜಲು ಸುಬ್ರಹ್ಮಣ್ಯ ಭಟ್

ಚೆಂಡೆಯಲ್ಲಿಯೂ ಮಧುರ ಸ್ವರ ಹೊಮ್ಮಿಸುವ ದೇಲಂತಮಜಲು ಸುಬ್ರಹ್ಮಣ್ಯ ಭಟ್

ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ದೇಲಂತಮಜಲು ಎಂಬಲ್ಲಿ ಶ್ರೀಕೃಷ್ಣ ಭಟ್, ಪಾರ್ವತಿ ಅಮ್ಮ ದಂಪತಿಗಳಿಗೆ ಮಗನಾಗಿ ಮೇ 2, 1965ರಂದು ಜನಿಸಿದರು. ಜನತಾ ಹೈಸ್ಕೂಲ್ ಅಡ್ಯನಡ್ಕ ಮತ್ತು ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಜನೆ. ಇವರ ಮನೆಯವರು, ಕುಟುಂಬದವರೆಲ್ಲಾ ಕಲಾಸಕ್ತರೇ ಆಗಿದ್ದರು.

ಮದ್ದಳೆಗಾರರಾಗಿದ್ದ ಶಿರಂಕಲ್ಲು ರಾಮಕೃಷ್ಣ ಭಟ್ ಮತ್ತು ಶಿರಂಕಲ್ಲು ನಾರಾಯಣ ಭಟ್ಟರು ಇವರ ಸೋದರಮಾವಂದಿರು. ಸಹಜವಾಗಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರಿಗೆ ಎಳವೆಯಲ್ಲೇ ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿತು. ಶಾಲಾ ವಿದ್ಯಾರ್ಥಿಯಾಗಿರುವಾಗ ಪರಿಸರದಲ್ಲಿ ನಡೆಯುತ್ತಿದ್ದ ಕೂಟ, ಆಟಗಳನ್ನು ಬಿಟ್ಟವರಲ್ಲ. ನೋಡುತ್ತಾ, ಅನುಭವಿಸುತ್ತಾ ಇವರಲ್ಲಿ  ತಾನೂ ಕಲಾವಿದನಾಗಬೇಕೆಂಬ ಬಯಕೆಯು ಚಿಗುರೊಡೆಯಿತು. ಈ ಚಿಗುರಿಗೆ ಆಸರೆಯಾಯಿತು ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರ.


                                 ಧರ್ಮಸ್ಥಳದಲ್ಲಿ ಶ್ರೀ ನಿಡ್ಲೆ ನರಸಿಂಹ ಭಟ್ಟರ ಗರಡಿಯಲ್ಲಿ ಪಳಗಿದ ಸುಬ್ರಹ್ಮಣ್ಯ ಭಟ್ಟರು ಸಂಗೀತ ಮೃದಂಗ ಕಲಿಕೆಯಲ್ಲಿ ವಿದ್ವಾನ್ ಕುಕ್ಕಿಲ ಶಂಕರ ಭಟ್ಟರ ಶಿಷ್ಯರಾದರು. ಶ್ರೇಷ್ಠ ಗುರುದ್ವಯರಿಂದ ಕಲಿತು ದೇಲಂತಮಜಲು ಅವರು ಚೆಂಡೆ ಮತ್ತು ಮದ್ದಳೆವಾದನ ಎರಡರಲ್ಲೂ ಹೊಳೆದು ಕಾಣಿಸಿಕೊಂಡರು. ಮೊದಲು ನಾಲ್ಕು ವರ್ಷ ಹವ್ಯಾಸೀ ಆಟ, ಕೂಟಗಳಲ್ಲಿ ಭಾಗವಹಿಸಿ, ಆಮೇಲೆ ಕರ್ನೂರು ಕೊರಗಪ್ಪ ರೈ ಸಂಚಾಲಕತ್ವದ ಕದ್ರಿ ಮೇಳದಲ್ಲಿ ಪ್ರಧಾನ ಮದ್ದಳೆಗಾರರಾಗಿ ಮೂರು ವರ್ಷ ತಿರುಗಾಟ ನಡೆಸಿದರು. ಆಗ ಕುಬಣೂರು ಶ್ರೀಧರ ರಾವ್ ಮತ್ತು ಪುತ್ತಿಗೆ ರಘುರಾಮ ಹೊಳ್ಳರ ಒಡನಾಟ ಇವರಿಗೆ ಸಿಕ್ಕಿತ್ತು. ನಂತರ 15 ವರ್ಷಗಳ ಕಾಲ ಕರ್ನಾಟಕ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು.

ಅಲ್ಲಿ ಹಿಮ್ಮೇಳ ಜತೆ ಮುಮ್ಮೇಳವೂ ಅತ್ಯಂತ ಪ್ರಬಲವಾಗಿತ್ತು. ದಿನೇಶ ಅಮ್ಮಣ್ಣಾಯ, ಪ್ರಭಾಕರ ಗೋರೆಯವರ ಒಡನಾಟದಿಂದ ದೇಲಂತಮಜಲು ಕಲಾವಿದರಾಗಿ ಪಕ್ವರಾದರು. ಹೆಚ್ಚಾಗಿ ತುಳುಪ್ರಸಂಗಗಳೇ ನಡೆಯುತ್ತಿದ್ದರೂ ಪುರಾಣ ಪ್ರಸಂಗಗಳ ಜ್ಞಾನವನ್ನು ಮಳೆಗಾಲದ ತಿರುಗಾಟ, ಆಟಗಳಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್ಟರು ಪಡೆದರು. ಶ್ರೀ ನಿಡ್ಲೆ ಗೋವಿಂದ ಭಟ್ಟರ ಸಂಚಾಲಕತ್ವದ  ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಈ ತಂಡದಲ್ಲಿದ್ದು ಶ್ರೀ ರಾಮಕೃಷ್ಣ ಮಯ್ಯ ಮತ್ತು ಅನೇಕ ಅನುಭವೀ ಕಲಾವಿದರ ಒಡನಾಟದಿಂದ ನಾನು ಪುರಾಣ ಪ್ರಸಂಗಗಳ ಬಗೆಗೆ ಅನುಭವವನ್ನು ಪಡೆದುಕೊಂಡೆ ಎಂದು ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ವಿನೀತರಾಗಿಯೇ ಹೇಳುತ್ತಾರೆ.
                    ಶ್ರೀ ದಿನೇಶ ಅಮ್ಮಣ್ಣಾಯ, ಶ್ರೀ ಪ್ರಭಾಕರ ಗೋರೆಯವರ ಮಾರ್ಗದರ್ಶನ ಹಿಮ್ಮೇಳದ ಹಿರಿಯ, ಶ್ರೇಷ್ಠ ಕಲಾವಿದರುಗಳೆಲ್ಲ ನನಗೆ ಮಾರ್ಗದರ್ಶನ, ಸಹಕಾರ ನೀಡಿದ್ದಾರೆ. ಹಾಗಾಗಿಯೇ ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಅನುಕೂಲವಾಯಿತು ಎನ್ನುವ ದೇಲಂತಮಜಲು ಅವರು 13 ವರುಷಗಳ ಕಾಲ ಎಡನೀರು ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಶ್ರೀ ದಿನೇಶ ಅಮ್ಮಣ್ಣಾಯರ ಹಾಡು, ದೇಲಂತಮಜಲು ಅವರ ಚೆಂಡೆವಾದನ, ಮದ್ದಳೆವಾದನ ಇದನ್ನು ಎಡನೀರು ಮೇಳದಲ್ಲಿ ಪ್ರೇಕ್ಷಕರು ಆಸ್ವಾದಿಸಿದ್ದಾರೆ, ಆನಂದಿಸಿದ್ದಾರೆ. ತನ್ನ ಸಾಧನೆಗೆ ಪ್ರೋತ್ಸಾಹವನ್ನು ನೀಡಿ ಆಶೀರ್ವದಿಸುತ್ತಿದ್ದ  ಎಡನೀರು ಶ್ರೀಗಳನ್ನು ದೇಲಂತಮಜಲು ಯಾವಾಗಲೂ ನೆನಪಿಸುತ್ತಾರೆ. ಪ್ರಸ್ತುತ ಒಂದು ವರ್ಷದಿಂದ ಹನುಮಗಿರಿ ಮೇಳದಲ್ಲಿ ಮದ್ದಳೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೌದ್ರ, ವೀರ ರಸದ ಪ್ರತೀಕವಾದ ಚೆಂಡೆಯಲ್ಲಿಯೂ ಮುಧುರ ಸ್ವರ ಹೊಮ್ಮಿಸುವ ಕೌಶಲ್ಯತೆ ಸುಬ್ರಹ್ಮಣ್ಯ ಭಟ್ಟರ ವಿಶೇಷತೆಗಳಲ್ಲೊಂದು. 

ಪತ್ನಿ ಚಂದ್ರಕಲಾ ಮತ್ತು ಮಕ್ಕಳಾದ ಕೃಷ್ಣರಾಜ ಮತ್ತು ಪುಣ್ಯ ಇವರೊಂದಿಗಿನ ಸಂತೃಪ್ತ ಜೀವನ ಸುಬ್ರಹ್ಮಣ್ಯ ಭಟ್ಟರದು. ಹಲವಾರು ಸನ್ಮಾನ ಪ್ರಶಸ್ತಿಗಳನ್ನು ಪಡೆದ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ಭಾರತದಾದ್ಯಂತ ಅಲ್ಲದೆ ಬಹರೈನ್, ಕುವೈಟ್, ದುಬಾಯಿ ಮೊದಲಾದ ಕಡೆಗಳಲ್ಲೂ ಪ್ರದರ್ಶನಗಳಲ್ಲಿ ಭಾಗವಹಿಸಿ ಖ್ಯಾತರಾಗಿದ್ದಾರೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಫೋಟೋ: ನವೀನ್ ಕೃಷ್ಣ ಭಟ್ ಮತ್ತು ಎಸ್. ಎನ್ ಶರ್ಮ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments