ಯಕ್ಷಗಾನವು ಒಂದು ಸಮಷ್ಠಿ ಕಲೆ. ಶ್ರೇಷ್ಠ ಕಲಾಪ್ರಕಾರ. ಕಲಿಯುತ್ತಾ ಬೆಳೆದು ಒಂದೊಂದು ವಿಭಾಗದಲ್ಲಿ ಮಿಂಚಿ, ಹೆಸರುವಾಸಿಯಾದ ಕಲಾವಿದರು ಅನೇಕರು. ಆದರೂ ತನಗೆ ಕೊಟ್ಟ ಯಾವ ಪಾತ್ರಗಳನ್ನೂ ನಿರ್ವಹಿಸಬಲ್ಲ ಕಲಾವಿದರುಗಳೂ ಇದ್ದಾರೆ. ಅನಿವಾರ್ಯವಾದರೆ ತಾನು ಯಾವಾಗಲೂ ನಿರ್ವಹಿಸುವ ಪಾತ್ರಗಳ ಹೊರತಾಗಿ, ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರದರ್ಶನಕ್ಕೆ ತೊಂದರೆಯಾಗದಂತೆ ಸಹಕರಿಸುವ ಕಲಾವಿದರೂ ಇದ್ದಾರೆ. ಇದು ಒಂದು ಕಲೆ. ಸಾಧನೆ.
ಪ್ರತಿಯೊಂದು ಮೇಳದಲ್ಲೂ ಒಬ್ಬರೋ ಇಬ್ಬರೋ ಇಂತಹ ಸಾಮರ್ಥ್ಯ ಉಳ್ಳ ಕಲಾವಿದರಿದ್ದರೆ ಒಳ್ಳೆಯದು. ಪ್ರದರ್ಶನಕ್ಕೆ ಕೊರತೆಯಾಗದು. ಅವರನ್ನು ಗುರುತಿಸಬೇಕಾದುದು ನಮ್ಮ ಕರ್ತವ್ಯ ಅಷ್ಟೆ. ಯಾಕೆಂದರೆ ಎಲ್ಲರೂ ಆ ಸಾಹಸಕ್ಕೆ ಮನ ಮಾಡಲಾರರು. ಸ್ಥಾನ ಖಚಿತತೆ ಎಂಬುದು ನಷ್ಟವಾಗುವ ಭಯ ಇದ್ದೇ ಇರುತ್ತದೆ. ಸಾಧಕ ಬಾಧಕಗಳೆರಡೂ ಇವೆ. ಅದರಿಂದ ಉಂಟಾಗುವ ಪರಿಣಾಮಗಳೇನು? ಎಂಬುದನ್ನು ವೃತ್ತಿಕಲಾವಿದನಾಗಿ ನಾನು ತಿಳಿಯಬಲ್ಲೆ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಆದರೂ ಇಂತಹ ಕಲಾವಿದರು ಮೇಳಕ್ಕೆ ಅನಿವಾರ್ಯ. ‘ಆಪತ್ಬಾಂಧವ’ ಎನಿಸಿ ಮೆರೆಯುತ್ತಾರೆ. ಇಂತಹ ಕಲಾವಿದರು ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರಲ್ಲೊಬ್ಬರು ಎಚ್. ಉಮಾಮಹೇಶ್ವರ ಶರ್ಮ ಬಳ್ಳಮಂಜ. ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದ. ಶ್ರೀ ಎಚ್. ಉಮಾಮಹೇಶ್ವರ ಶರ್ಮ ಮೇಳದಲ್ಲಿ ಕಲಾವಿದರಿಗೆಲ್ಲಾ ಪ್ರೀತಿಯ ‘ಉಮಣ್ಣ’. ಇವರ ಮೂಲಮನೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬೇಕಲ. ಖ್ಯಾತ ಪ್ರವಾಸೀ ಕೇಂದ್ರ ಬೇಕಲಕೋಟೆಯ ಸಮೀಪದ ಹಾರ್ನಾಡು.
‘ಉಮಣ್ಣ’ ಕಾಸರಗೋಡು ಜಿಲ್ಲೆ ಬೆಳ್ಳೂರು ಪಂಚಾಯತ್ ನಾಟೆಕಲ್ಲು ಸಮೀಪದ ಕೋಳಿಕಾಲುಮೂಲೆ ಎಂಬಲ್ಲಿ ಶ್ರೀ ಎಚ್. ಗಣಪತಿ ಭಟ್ ಮತ್ತು ಲಕ್ಷ್ಮೀ ಅಮ್ಮ ದಂಪತಿಗಳಿಗೆ ಮಗನಾಗಿ 2-4-1968ರಂದು ಜನಿಸಿದರು. ಗಣಪತಿ ಭಟ್ ದಂಪತಿಗಳ ಮೂವರು ಮಕ್ಕಳಲ್ಲಿ (ಎರಡು ಹೆಣ್ಣು ಮತ್ತು ಒಂದು ಗಂಡು) ಇವರು ಕಿರಿಯವರು. ಬೆಳ್ಳೂರು ಸರಕಾರೀ ಹೈಸ್ಕೂಲಿನಲ್ಲಿ 9ನೇ ತರಗತಿ ವರೇಗೆ ಓದಿದರು.

ತಾನು ಯಕ್ಷಗಾನ ಕಲಾವಿದನಾಗಬೇಕೆಂದು ನಿರ್ಧರಿಸಿ ನಾಟ್ಯಾಭ್ಯಾಸಕ್ಕೆಂದು 1984ರಲ್ಲಿ ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದರು. ಶ್ರೀ ಕೆ. ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತರು. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. 1985ನೇ ಇಸವಿ. ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಬಾಲ ಗೋಪಾಲರಾಗಿ ರಂಗಪ್ರವೇಶ. ‘ಪೂರ್ವರಂಗ’ದಲ್ಲಿ ಬರುವ ಎಲ್ಲಾ ವೇಷಗಳನ್ನು ಮಾಡಿ ಪ್ರಸಂಗದಲ್ಲೂ ತನಗೆ ಬಂದ ಪಾತ್ರಗಳನ್ನು ಮಾಡುತ್ತಿದ್ದರು. ಕೇಂದ್ರದಲ್ಲಿ ಕಲಿಯುತ್ತಿರುವಾಗ ಬಾಯಾರು ರಮೇಶ ಭಟ್, ಬಾಬು ಗೌಡ ಚಾರ್ಮಾಡಿ, ನಾರಾಯಣ ಸುವರ್ಣ, ಕಲ್ಲಗುಡ್ಡೆ ಲಕ್ಷ್ಮಣ, ದಾಮೋದರ ಪಾಟಾಳಿ ಮೊದಲಾದವರು ಇವರ ಸಹಪಾಠಿಗಳಾಗಿದ್ದರು.
ಸುಂಕದಕಟ್ಟೆ ಮೇಳದಲ್ಲಿ 7 ವರುಷಗಳ ತಿರುಗಾಟ. ಅಲ್ಲಿ ಭಾಗವತ ಪುತ್ತಿಗೆ ತಿಮ್ಮಪ್ಪ ರೈ, ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್, ತ್ರಿವಿಕ್ರಮ ಶೆಣೈ, ಕಟೀಲು ಶ್ರೀನಿವಾಸ ರಾವ್, ಬೇತ ಕುಂಞ ಕುಲಾಲ್, ವಾಟೆಪಡ್ಪು ವಿಷ್ಣುಶರ್ಮ, ಹಳುವಳ್ಳಿ ಗಣೇಶ ಭಟ್, ಚಿದಂಬರ ಬಾಬು ಮೊದಲಾದವರು ಸಹಕಲಾವಿದರಾಗಿದ್ದರು. ಹೀಗೆ ಶ್ರೇಷ್ಠ ಕಲಾವಿದರ ಒಡನಾಟದಿಂದ ನಿರಂತರ ಕಲಿಕೆಯಿಂದ ಉಮಾಮಹೇಶ್ವರ ಶರ್ಮ ಕಲಾವಿದನಾಗಿ ಬೆಳೆಯತೊಡಗಿದರು.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
1992ರಿಂದ ಕಟೀಲು ಮೇಳದಲ್ಲಿ ವ್ಯವಸಾಯ. ನಿರಂತರ 25 ವರುಷಗಳಿಗೂ ಮಿಕ್ಕಿ ಕಟೀಲು 4ನೇ ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ. ಬಹುಷಃ ದೇವೀಮಹಾತ್ಮ್ಯೆ ಪ್ರಸಂಗದಲ್ಲಿ ಹೆಚ್ಚಿನ ಎಲ್ಲಾ ವೇಷಗಳನ್ನೂ ನಿರ್ವಹಿಸಿರಬಹುದು. ಬ್ರಹ್ಮ, ವಿಷ್ಣು, ಮಧುಕೈಟಭ, ವಿದ್ಯುನ್ಮಾಲಿ, ಮಹಿಷಾಸುರ, ಸುಗ್ರೀವ, ಶ್ರೀದೇವಿ, ರಕ್ತಬೀಜ, ದೇವೇಂದ್ರ ಪಾತ್ರಗಳಲ್ಲಿ ಕಾಣಿಸಿಕೊಂಡದ್ದನ್ನು ಮೇಳದ ಸಹಕಲಾವಿದನಾಗಿ ನಾನು ನೋಡಿದ್ದೇನೆ. ಇವರು ಅನೇಕ ಸ್ತ್ರೀವೇಷಗಳಲ್ಲಿ ಅಭಿನಯಿಸಿದ್ದನ್ನು ಕಂಡಿದ್ದೇನೆ. ಬಣ್ಣದ, ನಾಟಕೀಯ ಕಿರೀಟ, ಪುಂಡುವೇಷಗಳ ನಿರ್ವಹಣೆಯನ್ನು ನೋಡಿದ್ದೇನೆ. ಗಿರಿಜಾ ಕಲ್ಯಾಣದ ತಾರಕನನ್ನು, ದೇವೇಂದ್ರನನ್ನೂ, ಮನ್ಮಥನನ್ನೂ ಹೀಗೆ ಎಲ್ಲಾ ಪ್ರಸಂಗಗಳಲ್ಲಿ ಯಾವ ಪಾತ್ರವನ್ನು ನೀಡಿದರೂ ಮಾಡಬಲ್ಲರು!
ಇಂತಹ ಕಲಾವಿದರು ಅಪರೂಪ. ಆದರೂ ಯಕ್ಷಗಾನಕ್ಕೆ ಅನಿವಾರ್ಯ. ಯಕ್ಷಗಾನ ವೇಷಭೂಷಣ ತಯಾರಿಕೆಯ ಜ್ಞಾನವೂ ಇವರಿಗಿದೆ. ಗಡ್ಡಮೀಸೆಗಳನ್ನು ಆಯಾ ವೇಷಕ್ಕೆ ತಕ್ಕಂತೆ ಸಿದ್ಧಗೊಳಿಸುತ್ತಾರೆ. ಇವರು ತಯಾರಿಸಿದ ಗಡ್ಡಮೀಸೆಗಳಿಗೆ ಉತ್ತಮ ಬೇಡಿಕೆಯಿದೆ. ಮೊದಲು ಎಂಪೆಕಟ್ಟೆ ರಾಮಯ್ಯ ರೈ, ಕಡಬ ಸಾಂತಪ್ಪನವರು ಈ ವಿಚಾರದಲ್ಲಿ ಪಳಗಿದ್ದರು. ಪ್ರಸ್ತುತ ವಸಂತ ಗೌಡರು, ವೇಣೂರು ಸದಾಶಿವ ಕುಲಾಲ್, ಸತೀಶ ನೈನಾಡು ಮೊದಲಾದವರೂ ಗಡ್ಡಮೀಸೆಗಳನ್ನು ತಯಾರಿಸುವ ವಿಚಾರ ನಮಗೆ ತಿಳಿದಿದೆ.

ಶ್ರೀ ಎಚ್. ಉಮಾಮಹೇಶ್ವರ ಶರ್ಮ ಅವರು ಕಳೆದ ಎರಡು ವರ್ಷಗಳಿಂದ, ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ ಸಂಚಾಲಕತ್ವದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.), ನಿಡ್ಲೆ ಈ ಸಂಸ್ಥೆಯ ಸದಸ್ಯರಾಗಿ ಹೊರರಾಜ್ಯದ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿದ್ದಾರೆ. ಕಲಾವಿದನಾಗಿಯೂ, ಸಾಂಸಾರಿಕವಾಗಿಯೂ ಇವರು ತೃಪ್ತರು. ತಂದೆ-ತಾಯಿಯರು, ಮಡದಿ, ಮಕ್ಕಳೊಂದಿಗೆ ಪ್ರಸ್ತುತ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಬಳ್ಳಮಂಜದಲ್ಲಿ ವಾಸಿಸುತ್ತಿದ್ದಾರೆ. ಉಮಾಮಹೇಶ್ವರರ ಪತ್ನಿ ಶ್ರೀಮತಿ ಮಂಜುಳಾ ಶರ್ಮ ಗೃಹಿಣಿ. ಪುತ್ರಿ ಮನಸ್ವೀ ಶರ್ಮ ಹಾಗೂ ಒಬ್ಬ ಪುತ್ರ ಮನನ್. ಇವರ ತಂದೆ ಗಣಪತಿ ಭಟ್ಟರು ಉತ್ತಮ ಪಾಕತಜ್ಞ (ಅಡುಗೆ ಪ್ರವೀಣ). ಉಮಾಮಹೇಶ್ವರರಿಗೂ ಈ ಕಲೆ ಸಿದ್ಧಿಸಿದೆ.
