Friday, September 20, 2024
Homeಯಕ್ಷಗಾನನಿಷ್ಠಾವಂತ ಬಣ್ಣದ ವೇಷಧಾರಿ - ಪಕಳಕುಂಜ ಕೃಷ್ಣ ನಾಯ್ಕ 

ನಿಷ್ಠಾವಂತ ಬಣ್ಣದ ವೇಷಧಾರಿ – ಪಕಳಕುಂಜ ಕೃಷ್ಣ ನಾಯ್ಕ 

ತೆಂಕುತಿಟ್ಟಿನ ಯಕ್ಷಗಾನದ ಬಣ್ಣದ ವೇಷಧಾರಿಗಳಿಗೆ ನೇಪಥ್ಯದಲ್ಲಿ ಮುಖವರ್ಣಿಕೆ, ವೇಷಭೂಷಣಗಳನ್ನು ಧರಿಸಿ ಸಿದ್ಧವಾಗಲು ಹೆಚ್ಚಿನ ಸಮಯವು ಬೇಕಾಗುತ್ತದೆ. ರಂಗಸ್ಥಳದಲ್ಲಿ ಇವರಿಗೆ ಕಡಿಮೆ ಅವಕಾಶಗಳು ಎಂದು ಇದರ ಅರ್ಥವಲ್ಲ. ಬಣ್ಣದ ವೇಷಗಳ ಕ್ರಮವೇ ಹಾಗೆ. ಕಡಿಮೆ ಅವಧಿಯಲ್ಲಿ ರಂಗದಲ್ಲಿ ವಿಜೃಂಭಿಸುವ ಅವಕಾಶಗಳು ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳಿಗೂ ಇವೆ.

ಪರಂಪರೆಯ, ಸಂಪ್ರದಾಯ ಬದ್ಧತೆಯ ಮುಖವರ್ಣಿಕೆಯೊಂದಿಗೆ ಸಿದ್ಧವಾಗಲು ಕಲಾವಿದನಿಗೆ ಹೆಚ್ಚಿನ ಸಮಯವು ಬೇಕಾಗುತ್ತದೆ. ಬೆಳಗಿನ ಹೊತ್ತು ರಂಗವನ್ನು ಪ್ರವೇಶಿಸುವ ಪಾತ್ರಗಳಾದರೂ, ಕಲಾವಿದರು ಪ್ರಸಂಗದ ಆರಂಭಕ್ಕೇ ಮುಖವರ್ಣಿಕೆಗೆ ತೊಡಗುವುದನ್ನು ನಾವು ಕಾಣುತ್ತೇವೆ. ನಿಷ್ಠೆ ಮತ್ತು ಅರ್ಪಣಾ ಭಾವವುಳ್ಳ ಕಲಾವಿದರು ಈ ತೆರನಾಗಿಯೇ ಸಾಗಿ ಪ್ರಸಿದ್ಧರಾಗುತ್ತಾರೆ.

ಈಗೀಗ ಬಣ್ಣದ ವೇಷಗಳಿಗೆ ರಂಗದಲ್ಲಿ ಸರಿಯಾದ ಅವಕಾಶಗಳು ಸಿಗುತ್ತಿಲ್ಲವೆಂಬ ಕೂಗೂ ಇದೆ. ಇದಕ್ಕೆ ಕಾರಣಗಳು ಹಲವಿರಬಹುದು. ಇದು ವೇಗದ ಯುಗ. ಕಾಲಮಿತಿಯ ಪ್ರದರ್ಶನ ಎಂಬ ಒಂದು ಕಾರಣವೂ ಇರಬಹುದು. ಏನೇ ಇರಲಿ. ಯಕ್ಷಗಾನದಲ್ಲಿ ಬಣ್ಣದ ವೇಷಗಳಿಗೆ, ಪಾತ್ರಧಾರಿಗಳಿಗೆ ಸಿಗಬೇಕಾದ ಅವಕಾಶಗಳು ಸಿಗಲೇ ಬೇಕು. ಆ ವೇಷಗಳಿಗೆ ತನ್ನದೇ ಆದ ನಡೆ, ಗಾಂಭೀರ್ಯ, ರೀತಿಗಳಿವೆ. ಹಾಗಿದ್ದಲ್ಲಿ ಮಾತ್ರ ಬಣ್ಣದ ವೇಷಗಳ ನಿರ್ವಹಣೆಯನ್ನು ಪ್ರೇಕ್ಷಕರಿಗೆ ಸರಿಯಾಗಿ ಆಸ್ವಾದಿಸಲು ಸಾಧ್ಯ.

ಇಲ್ಲವಾದರೆ ಇದು ಚಂಡಮುಂಡರೋ? ಅಭಿಮನ್ಯುವೊ? ಎಂದು ಕಲಾಭಿಮಾನಿಗಳು ಪ್ರಶ್ನಿಸುವಂತಾದೀತು. ಹಾಗಾಗಬಾರದು. ಹಾಗಾಗಲಾರದು ಎಂದು ವಿಶ್ವಾಸವಿರಿಸೋಣ. ನಿಷ್ಠೆಯಿಂದ, ಸಂಪ್ರದಾಯಬದ್ಧವಾಗಿ ಸಿದ್ಧರಾಗಿ ರಂಗವೇರಿ ಅಭಿನಯಿಸಿ ಬಣ್ಣದ ವೇಷ ಎಂಬ ವಿಭಾಗವನ್ನು ಶ್ರೀಮಂತಗೊಳಿಸಿದ ಕಲಾವಿದರನೇಕರಿದ್ದಾರೆ. ಅಂತವರಲ್ಲಿ ಪಕಳಕುಂಜ ಶ್ರೀ ಕೃಷ್ಣ ನಾಯ್ಕರೂ ಒಬ್ಬರಾಗಿದ್ದರು. ಅನೇಕ ವರ್ಷಗಳ ಕಾಲ ತೆಂಕುತಿಟ್ಟು ಯಕ್ಷರಂಗದಲ್ಲಿ ಮೆರೆದು ಪ್ರಸ್ತುತ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದಾರೆ. 

ಬಣ್ಣದ ವೇಷಧಾರಿ ಶ್ರೀ ಪಕಳಕುಂಜ ಕೃಷ್ಣ ನಾಯ್ಕರ ಹುಟ್ಟೂರು ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಪಕಳಕುಂಜ.1935ರಲ್ಲಿ ಪಕಳಕುಂಜ ಶ್ರೀ ಚೋಮ ನಾಯ್ಕ ಮತ್ತು ಕಾವೇರಿ ದಂಪತಿಗಳ ಮಗನಾಗಿ ಜನನ. ಓದಿದ್ದು ಏಳನೇ ತರಗತಿ ವರೆಗೆ. ಅಡ್ಯನಡ್ಕ ಶಾಲೆಯಲ್ಲಿ. ಹೆಚ್ಚಿನ ವಿದ್ಯಾರ್ಜನೆಗೆ ಅವಕಾಶವಿರಲಿಲ್ಲ. ಬಡತನದ ಜತೆ ಬಹಳ ದೂರ ನಡೆದೇ ಶಾಲೆಗೆ ತೆರಳಬೇಕಿದ್ದ ಕಾಲವದು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು.

ಪರಿಸರದಲ್ಲಿ ನಡೆಯುತ್ತಿದ್ದ ತಾಳಮದ್ದಲೆಗಳಿಗೆ ಇವರು ಖಾಯಂ ಪ್ರೇಕ್ಷಕ. ಇದರಿಂದ ಕೃಷ್ಣ ನಾಯ್ಕರಿಗೆ ಅನುಕೂಲವೇ ಆಗಿತ್ತು. ಶಾಲೆ ಬಿಟ್ಟ ನಂತರ ತಾನೂ ಯಕ್ಷಗಾನ ಕಲಾವಿದನಾಗಬೇಕೆಂದು ಆಸೆಯಾಗಿತ್ತು. ಇವರ ಆಸೆಗೆ ಆಸರೆಯಾದವರು ತಲೆಂಗಳ ಶ್ರೀ ಶಂಭಟ್ಟರು. ಅವರ ಸೂಚನೆಯಂತೆ ಶ್ರೀ ಶೀನಪ್ಪ ಭಂಡಾರಿಗಳ ಸಂಚಾಲಕತ್ವದ ಬಳ್ಳಂಬೆಟ್ಟು ಮೇಳದಲ್ಲಿ ತಿರುಗಾಟ  ಆರಂಭಿಸಿದ್ದರು. ಕೋಡಂಗಿ, ಬಾಲಗೋಪಾಲರಾಗಿ ಅಭಿನಯ. ಕಲಿಯದೇ ಮೇಳ ಸೇರಿದ ಕೃಷ್ಣ ನಾಯ್ಕರು ಕಲಿತರು. ಕಲಿತು ಬೆಳೆಯುತ್ತಾ ಸಾಗಿದರು.

ಖ್ಯಾತ ಕಲಾವಿದರಾದ ಅಳಿಕೆ ಮೋನು ಶೆಟ್ಟರು ಮತ್ತು ಅಳಿಕೆ ರಾಮಯ್ಯ ರೈಗಳಿಂದ ಹೆಜ್ಜೆಗಾರಿಕೆಯನ್ನು ಕಲಿತಿದ್ದರು. ಒಂದು ತಿಂಗಳು ಕೂಡ್ಲು ಮೇಳದಲ್ಲಿ ಕಲಾಸೇವೆ. ಬಳಿಕ ಕಟೀಲು ಮೇಳದಲ್ಲಿ ಕಲಾಸೇವೆ. ನಾಲ್ಕೈದು ವರ್ಷಗಳಲ್ಲಿ ಪೂರ್ವರಂಗ, ಪುಂಡುವೇಷ, ಹಂತಗಳನ್ನು ದಾಟಿ ಕಿರೀಟ ವೇಷಗಳನ್ನು ನಿರ್ವಹಿಸುವಷ್ಟು ಬೆಳೆದಿದ್ದರು. ಮೇಳದಲ್ಲಿ ಚಂದ್ರಗಿರಿ ಅಂಬು ಅವರ ಒಡನಾಟವು ಸಿಕ್ಕಿದ್ದು ಬಣ್ಣದ ವೇಷಗಳತ್ತ ಒಲವು ಮೂಡಲು ಕಾರಣವಾಗಿತ್ತು.

ಬಳಿಕ ಕೂಡ್ಲು ಮೇಳದಲ್ಲಿ ತಿರುಗಾಟ. ಈ ಸಂದರ್ಭದಲ್ಲಿ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಸಲಹೆ, ಪ್ರೋತ್ಸಾಹದಂತೆ ಬಣ್ಣದ ವೇಷಗಳತ್ತ ಗಮನ ಹರಿಸಿ ನಿರ್ವಹಿಸಲಾರಂಭಿಸಿದ್ದರು. ಮುಲ್ಕಿ ಮೇಳದಲ್ಲಿ ತಿರುಗಾಟ ನಡೆಸಿ ಬಳಿಕ ಶ್ರೀ ಧರ್ಮಸ್ಥಳ ಮೇಳಕ್ಕೆ ಎರಡನೇ ಬಣ್ಣದ ವೇಷಧಾರಿಯಾಗಿ ಸೇರ್ಪಡೆ. ಅಲ್ಲಿ ಒಂದನೇ ಬಣ್ಣದ ವೇಷಧಾರಿಯಾಗಿದ್ದ ಬಣ್ಣದ ಮಾಲಿಂಗನವರ ಒಡನಾಟವೂ ಸಿಕ್ಕಿತ್ತು. ಬಳಿಕ ಧರ್ಮಸ್ಥಳ ಮೇಳದಲ್ಲಿ ಒಂದನೇ ಬಣ್ಣದ ವೇಷಧಾರಿಯಾಗಿ ವ್ಯವಸಾಯ ಮಾಡಿದ್ದರು. ಬಣ್ಣದ ಕುಟ್ಯಪ್ಪು ಅವರಿಂದಲೂ ತರಬೇತಿಯನ್ನು ಪಡೆದಿದ್ದರು.

ತನ್ನ ಕಲಾ ಬದುಕಿನುದ್ದಕ್ಕೂ ತಾನು ಧರಿಸಿದ ಪಾತ್ರಕ್ಕೆ ಕುಂದುಂಟಾಗದಂತೆ ಪಾತ್ರೋಚಿತವಾಗಿಯೇ ಅಭಿನಯಿಸಿದ್ದರು. ಮಳೆಗಾಲದಲ್ಲಿ ಮುಂಬಯಿ ಪ್ರದರ್ಶನಗಳಲ್ಲೂ ಭಾಗವಹಿಸಿದ್ದರು. ಗಲ್ಫ್ ರಾಜ್ಯ ಬಹರೈನ್ ನಲ್ಲಿ ನಡೆದ ಪ್ರದರ್ಶನಗಳಲ್ಲೂ ಅಭಿನಯಿಸಲು ಅವಕಾಶವಾಗಿತ್ತು.  ಶ್ರೀ ಧರ್ಮಸ್ಥಳ ಮೇಳದಲ್ಲಿ ಹಲವು ವರ್ಷ ತಿರುಗಾಟ ನಡೆಸಿದ ಪಕಳಕುಂಜ ಕೃಷ್ಣ ನಾಯ್ಕರು ಹೃದಯ ಸಂಬಂಧೀ ಖಾಯಿಲೆಯಿಂದಾಗಿ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಚೇತರಿಸಿಕೊಂಡ ಬಳಿಕ ಅನುಕೂಲವಾದಾಗ ಮತ್ತೆ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಕಲಾ ಬದುಕಿನುದ್ದಕ್ಕೂ ತಾರಕಾಸುರ, ಶೂರಪದ್ಮ, ಶುಂಭಾಸುರ, ರಾವಣ, ಎಲ್ಲ ಹೆಣ್ಣು ಬಣ್ಣಗಳು ಅಲ್ಲದೆ ಹಲವು ಪ್ರಸಂಗಗಳಲ್ಲಿ ಬರುವ ಕಿರಾತನ ವೇಷಗಳನ್ನೂ ನಿರ್ವಹಿಸಿ ಖ್ಯಾತಿಯನ್ನು ಗಳಿಸಿದರು. ಅನಿವಾರ್ಯವಾದರೆ ಮಾತುಗಾರಿಕೆಗೆ ಸಂಬಂಧಪಟ್ಟ ಕಿರೀಟ ವೇಷಗಳನ್ನು ಧರಿಸಲೂ ಕೃಷ್ಣ ನಾಯ್ಕರು ಹಿಂದೇಟು ಹಾಕಿದವರಲ್ಲ. ತೆಂಕುತಿಟ್ಟಿನ ಹೆಸರಾಂತ ಬಣ್ಣದ ವೇಷಧಾರಿಗಳಾದ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಡೋಗ್ರ ಪೂಜಾರಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಶೇಣಿ ಪ್ರಶಸ್ತಿಗಳನ್ನು ಪಡೆದುದರ ಜೊತೆಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುತ್ತಾರೆ.

ಶ್ರೀಯುತರ ಪತ್ನಿ ಶ್ರೀಮತಿ ಯಮುನಾ. ಪಕಳಕುಂಜ ಕೃಷ್ಣ ನಾಯ್ಕ ದಂಪತಿಗಳಿಗೆ ಎಂಟು ಮಂದಿ ಮಕ್ಕಳು. (ಮೂರು ಗಂಡು, ಐದು ಹೆಣ್ಣು) ಉಡುಪಿಯಲ್ಲಿ ನಡೆದ ಯಕ್ಷಗಾನ ಕಮ್ಮಟದಲ್ಲಿ ಇವರ ಬಣ್ಣದ ವೇಷಗಳನ್ನು ದಾಖಲಿಸಿ ಸಂಗ್ರಹಿಸಿಡಲಾಗಿದೆ.  ಒಟ್ಟು 48 ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿದ ಪಕಳಕುಂಜ ಕೃಷ್ಣ ನಾಯ್ಕರು ಸೆಪ್ಟೆಂಬರ್ 12, 2013ರಂದು ಇಹಲೋಕವನ್ನು ತ್ಯಜಿಸಿದ್ದರು.

ಲೇಖಕ: ರವಿಶಂಕರ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments