Saturday, January 18, 2025
Homeಯಕ್ಷಗಾನನೆನಪಾಗಿ ಇರುವ ಯಕ್ಷಗಾನ ಕೃತಿಕಾರ ಪದ್ಯಾಣ ವೆಂಕಟೇಶ್ವರ ಭಟ್ಟ(1929-2009)

ನೆನಪಾಗಿ ಇರುವ ಯಕ್ಷಗಾನ ಕೃತಿಕಾರ ಪದ್ಯಾಣ ವೆಂಕಟೇಶ್ವರ ಭಟ್ಟ(1929-2009)

ಯಕ್ಷಗಾನದ, ತಾಳಮದ್ದಳೆಗಳ ಯಶಸ್ಸಿನ ಗಾಥೆಗಳಲ್ಲಿ ಭಾಗವತಿಕೆಯದು ಪ್ರಥಮ ಪಾತ್ರ, ಸುಶ್ರಾವ್ಯ ಭಾವ ಗಾಯನ, ಪಾತ್ರ ಸಂದರ್ಭೋಚಿತ ತಾಳಮೇಳ ಒಡಗೂಡಲು ಭಾಗವತರಿಗೆ ಉತ್ಕೃಷ್ಟವಾದ ಕಥಾಕಾವ್ಯ ಒದಗಿಬರಬೇಕು. ಯಕ್ಷಕಾವ್ಯರಚನೆ ಸರಳವಲ್ಲ.


ಕವಿಗೆ ಸಂಗೀತ, ತಾಳ, ನಾಟ್ಯ ಹಾಗೂ ಅಭಿನಯ ಪೂರಕ ಭಾವಗಳ ಸ್ಪಷ್ಟತೆ, ವೇದಿಕೆಯ ಹಾಗೂ ಕಥೆಯ ಪಾತ್ರವರ್ಗಗಳ ಸಂಪೂರ್ಣ ಪರಿಚಯವಿರಬೇಕು. ಈ ಸಕಲ ಕಲಾಜ್ಞಾನ ಸಮುಚ್ಛಯ ಕವಿಯ ಅಂತರಾಳದಲ್ಲಿ ಸಮಾಹಿತಗೊಂಡಾಗ ಯಕ್ಷಗಾನ ಕಾವ್ಯದ ಅನುರೂಪ ಕೃತಿ ಸಿದ್ಧಗೊಳುವುದು.


      ಪದ್ಯಾಣ ಈಶ್ವರ ಭಟ್ಟ ಲಕ್ಷ್ಮೀ ಅಮ್ಮನವರ ಮಗನಾಗಿ ಬಂಟ್ವಾಳದ ಕರೋಪಾಡಿಯಲ್ಲಿ 21-10-1929 ರಂದು ಪದ್ಯಾಣ ವೆಂಕಟೇಶ್ವರ ಭಟ್ಟರ ಜನನ. ಪ್ರಾರಂಭಿಕ ಸಂಸ್ಕೃತ ಪಾಠ ಶ್ರೀ ಮಾಂಬಾಡಿ ಈಶ್ವರ ಜೋಯಿಸರಲ್ಲಿ ಹಾಗೂ ಉಡುಪಿಯ ಸಂಸ್ಕೃತ ಪಾಠಶಾಲೆಯಲ್ಲಿ ಪಡೆದು 1945ರಲ್ಲಿ ರಾಷ್ಟ್ರಭಾಷಾ ವಿಶಾರದಾ 1951ರಲ್ಲಿ ಹಿಂದಿ ಪ್ರಚಾರಕ ಪದವಿಗಳನ್ನು ಗಳಿಸಿ ಮದ್ರಾಸ್ ವಿಶ್ವವಿದ್ಯಾಲಯದ ಸಂಸೃತ ಸಾಹಿತ್ಯ ಶಿರೋಮಣಿಯಾದರು. 1960ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಚಿನ್ನದ ಪದಕದೊಂದಿಗೆ ಕನ್ನಡ ಸಂಸ್ಕೃತ ವಿದ್ವಾನ್ ಪದವಿ ಪಡೆದು 1953ರಲ್ಲಿ ಕಮ್ಮಾಜೆಯ ಸಂಸ್ಕೃತ ಶಾಲೆಯಲ್ಲಿ ಅಧ್ಯಾಪನ ಪ್ರಾರಂಭಿಸಿ 1959ರಲ್ಲಿ ಕುರುಡಪದವು ಪ್ರಾಥಮಿಕ ಶಾಲಾ ಹಿಂದಿ ಅಧ್ಯಾಪಕರಾಗಿ ವೃತ್ತಿಜೀವನಕ್ಕೆ ತೊಡಗಿದರು.

26ವರ್ಷಗಳ ಅನನ್ಯ ಅಧ್ಯಾಪನ ವೃತ್ತಿ ನಡೆಸಿ 1985ರ ವಿಶ್ರಾಂತ ಜೀವನದಲ್ಲಿ ಕೃಷಿ, ತಾಳಮದ್ದಳೆ, ಬರವಣಿಗೆ, ಸಮಾಜಸೇವೆ, ನಾಟಕ, ಯಕ್ಷಗಾನ ಸಾಹಿತ್ಯ ರಚನೆಗಳಲ್ಲಿ ತಮ್ಮನ್ನು ತೊಡಗಿಸಿ ಅಮೋಘ ಸಾಧನೆಗಳಿಂದ ಹೆಸರುವಾಸಿಯಾದರು. ಅಭಿನಯ ಕಲೆಯಲ್ಲಿಯೂ ಇವರು ಸಾಕಷ್ಟು ಹೆಸರು ಮಾಡಿದ್ದರು.


      ಕೃತಿಗಳು
      1: ಸೌದಾಸ ಚರಿತೆ: ಕುಮಟಾದ ಯಕ್ಷಗಾನಕಾ ರ್ಯಾಲಯದಿಂದ ಪ್ರಕಟಿತ. ಈಗಲೂ ಈ ಪ್ರಸಂಗ ಚಾಲ್ತಿಯಲ್ಲಿದೆ.
      2: ಕೋಳ್ಯೂರು ಕ್ಷೇತ್ರ ಮಹಾತ್ಮೆ::ಕೋಳ್ಯೂರು ಶ್ರೀ ಶಂಕರನಾರಾಯಣ ಸೇವಾ ಸಮಿತಿಯಿಂದ ಪ್ರಕಟಿತ ಕೃತಿ
      3: ಶ್ರೀ ಧರ್ಮಸ್ಥಳ ಕ್ಷೇತ್ರಮಹಾತ್ಮೆ: ಕುರಿಯ ಶಾಸ್ತ್ರಿಯವರಿಂದ ಮಾಹಿತಿ ಪಡೆದು ಧರ್ಮದರ್ಶಿ ಶ್ರೀ ಮಂಜಯ್ಯ ಹೆಗಡೆಯವರ ಪ್ರೇರೇಪಣೆಯಿಂದ ರಚಿತ ಕೃತಿ ಮೂಂದೆ ರತ್ನವರ್ಮ ಹೆಗಡೆಯವರ ಮಾರ್ಗದರ್ಶನದಲ್ಲಿ ಬಯಲಾಟ ಪ್ರದರ್ಶಿಸ ತೊಡಗಿತು ಎಂದು ಹೇಳಲಾಗುತ್ತಿದೆ.
ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಬಯಲಾಟವು ಈ ಪ್ರಸಂಗವನ್ನು ನಿರಂತರವಾಗಿ ಪ್ರದರ್ಶಿಸಿ ಯಶಸ್ವೀಗೊಳಿಸಿದೆ


4: ಅಶ್ವಿನೀ ವಿಜಯ (ವೀರ ವಿಶ್ವಲೆ) (ಅಪ್ರಕಟಿತ)
ಆರೂರು ಲಕ್ಷ್ಮೀನಾರಾಯಣ ಸ್ಮಾರಕ ವೈದ್ಯಕೀಯ ಕಾಲೇಜು ಕೊಪ್ಪ ಇವರಿಂದ ಪ್ರೇರಣೆ ಹಾಗೂ ಪ್ರದರ್ಶನ
5: ಸತೀ ಸೀಮಂತಿನಿ (ಅಪ್ರಕಟಿತ) ವಿಧವಾದೋಷ ನಿವಾರಣಾ ವ್ರತನಿಷ್ಠೆ ವಸ್ತುವಿಶೇಷದ ಕೃತಿ.
ಇವಲ್ಲದೆ ಸತ್ಯಹರಿಶ್ಚಂದ್ರ, ಮಾಗಧವಧೆ, ಚಂದ್ರಹಾಸ (ಪೌರಾಣಿಕ) ಬಲಿ-ವಾಮನ, ಸತ್ಯವಾನ-ಸಾವಿತ್ರಿ(ಗೀತ)
ಭಾಗ್ಯಚಕ್ರ, (ಸಾಮಾಜಿಕ) ಗುರುಭಕ್ತಿ (ಏಕಾಂಕ)ನಾಟಕಗಳು ಹಾಗೂ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುಪ್ರಭಾತ ಕೀರ್ತನೆಗಳು ಇವರ ಪ್ರಸಿದ್ಧ ರಚನೆಗಳು.

ಕುರಿಯ ವಿಠಲ ಶಾಸ್ತ್ರಿಯವರಿಗೆ ಆತ್ಮೀಯರಾಗಿದ್ದ ಈ ಆಶುಕವಿಯ ಹಾಡುಗಳನ್ನು ವೇಗವಾಗಿ ದಾಖಲಿಸಿ ಬರೆಯಲು ಮೂರು ಜನರನ್ನು ವಿನಂತಿಸಿ ಅವರ ಮೂಲಕ ಬ್ರಹ್ಮಕಪಾಲದಂತಹ ಕೃತಿಗಳ ರಚನೆಯಾಯಿತೆಂದು ಹಳೆತಲೆಮಾರಿನ ಪ್ರಸಿದ್ಧ ಕಲಾವಿದರ ಅಂಬೋಣ.
ಸರಳಸಜ್ಜನ ಮೃದುಭಾಷಿಯೂ ಮಿತಭಾಷಿಯೂ ಆಗಿದ್ದ ಈ ಸಾಧಕರಿಗೆ ಹಲವು ಪುರಸ್ಕಾರ ಗೌರವಗಳು ಮುಡಿಗೇರಿದ್ದವು ಯಕ್ಷವಿಜಯ ಕಲಾಸಂಘ ಮಿತ್ತನಡ್ಕ, ಮಂಗಳೂರು ಹವ್ಯಕ ಸಭಾ, ದ ಕ ಸಾಹಿತ್ಯ ಪರಿಷತ್ತು ಮತ್ತು ನೀರ್ಪಾಜೆ ಭೀಮಭಟ್ಟ ಪ್ರತಿಷ್ಠಾನ, ಕನ್ಯಾನ, ಕುರಿಯ ವಿಠಲ ಶಾಸ್ರಿ ಸ್ಮಾರಕ ಪ್ರತಿಷ್ಠಾನಗಳು ಶ್ರೀಯುತರನ್ನು ಪ್ರಶಸ್ತಿಗಳೊಡನೆ ಗೌರವಿಸಿವೆ. ಬಹುಭಾಷಾ ಪಂಡಿತರಾದ ಈ ಶ್ವೇತವಸ್ತ್ರ ದಾರಿ ಕಲಾವಿದರ ಭಾಷಾಪ್ರೌಢಿಮೆ, ಛಂದೋಬದ್ಧತೆ, ತಜ್ಞ ಭಾವಸ್ಫುರತೆ, ವಿದ್ವತ್ಪೂರ್ಣ ರಚನಾ ಕುಶಲತೆಗಳು ರಚನೆಗಳನ್ನು ಅನನ್ಯವಾಗಿಸಿ ಉನ್ನತಿಗೇರಿಸಿವೆ.

ಡಾ ಪಾದೇಕಲ್ಲು ವಿಷ್ಣು ಭಟ್ಟ ಹಾಗೂ ಮುಳಿಯ ಶಂಕರ ಭಟ್ಟರ ಸಂಪಾದನೆಯ  ದ ಕ ಜಿಲ್ಲಾ ಪಂಡಿತ ಪರಂಪರೆ ಬಿಂಬಿತ ಪಂಜಜೆ ಶಂಕರ ಭಟ್ಟ ಜನ್ಮಶತಮಾನೋತ್ಸವ ಗೌರವ ಗ್ರಂಥ ಗುರುಗೌರವ ಎಂಬ ಬೃಹತ್ ಗ್ರಂಥದಲ್ಲಿ ಶ್ರೀಮತಿ ವೀಣಾ ಕಜೆಯವರು ಈ ಸಾಹಿತಿಯ ಸಮಗ್ರ ಚಿತ್ರಣ ನೀಡಿ ದಾಖಲಿಸಿದ್ದಾರೆ
ಶ್ರೀಪದ್ಯಾಣ ವೆಂಕಟೇಶ್ವರ ಭಟ್ಟರದು ಪತ್ನಿ ಮೂಕಾಂಬಿಕರವರೊಂದಿಗಿನ ಸುಖೀ ಜೀವನವಾಗಿತ್ತು
ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿಜೀವನ ನಡೆಸಿ ವಿಶ್ರಾಂತ ಕೃಷಿಬದುಕು ನಡೆಸುತ್ತಿರುವ ಶ್ರೀ ಸತೀಶ್ವರ ಭಟ್ಟರು  ಹಾಗೂ ಶ್ರೀಮತಿ ವಿಜಯಲಕ್ಷ್ಮಿಯವರು ಪದ್ಯಾಣ ವೆಂಕಟೇಶ್ವರ ಭಟ್ಟರ ಮಕ್ಕಳು.


ಶ್ರೀ ಸತೀಶ ಭಟ್ಟರ ಪತ್ನಿ ಜಯಲಕ್ಷ್ಮಿ ಎಸ್ ಭಟ್ಟರು ಸಾಹಿತ್ಯ ಬರಹಗಳೊಂದಿಗೆ ಯೋಗ ಶಿಕ್ಷಕಿಯಾಗಿ ವೃತ್ತಿಪರರಾಗಿರುವ ಕವಯಿತ್ರಿ ಡಾ ಶ್ರೀಲತಾ ಪದ್ಯಾಣ (ಸಾಹಿತ್ಯ ವಂಶವಾಹಿಯಾಗಿರುವುದು ಗಮನಾರ್ಹ) ಹಾಗೂ ಶ್ರೀನಿಧಿ ಪದ್ಯಾಣ ಇವರ ಮಕ್ಕಳು
ಪದ್ಯಾಣ ವೆಂಕಟೇಶ್ವರ ಭಟ್ಟರ ಪುತ್ರಿ, ಅಮೈ ಸುಬ್ರಹ್ಮಣ್ಯ ಭಟ್ಟರ ಪತ್ನಿಯಾಗಿ ಗೃಹ ನಿರ್ವಹಣೆ ಮಾಡುತ್ತಿರುವರು
ಸೌಮ್ಯಶ್ರೀ ಮತ್ತು ಪ್ರಸನ್ನ ನಾರಾಯಣ ಇವರ ಮಕ್ಕಳು. ಶ್ರೀಯುತ ಪದ್ಯಾಣ ವೆಂಕಟೇಶ್ವರ ಭಟ್ಟರ ಕಲಾಸೇವೆ
ಕಲಾಕೃತಿಗಳು ಚಿರಂತನವಾಗಿ ಬೆಳಗಿವೆ.

ಲೇಖಕರು: ಮಧುರಕಾನನ ಗಣಪತಿ ಭಟ್ಟ
ಅಂತರ್ಜಲ ಸಂಶೋಧಕ,ಪುತ್ತೂರು
[email protected]
9482998611 WhatsApp


RELATED ARTICLES

1 COMMENT

  1. ಪ್ರಕಟಣೆಗಾಗಿ ಧನ್ಯವಾದಗಳು,,,ಸರ್🌹🙏🏻

LEAVE A REPLY

Please enter your comment!
Please enter your name here

Most Popular

Recent Comments