Saturday, January 18, 2025
Homeಯಕ್ಷಗಾನನಗುಮೊಗದ ಹಿರಿಯ ಮದ್ದಳೆಗಾರ - ಶ್ರೀ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ 

ನಗುಮೊಗದ ಹಿರಿಯ ಮದ್ದಳೆಗಾರ – ಶ್ರೀ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ 

ಫೋಟೋ: ಹರೀಶ್ ಕೊಳ್ತಿಗೆ

ನಮ್ಮ ಹೆಮ್ಮೆಯ ಭಾರತ ದೇಶದಲ್ಲಿರುವ ಎಲ್ಲಾ ಕಲೆಗಳ ಮೇಲೂ ನಮಗೆ ಗೌರವವಿದೆ. ಆ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಎಲ್ಲಾ ಕಲಾವಿದರನ್ನೂ ನಾವು ಪ್ರೀತಿಸುತ್ತೇವೆ. ಕಲಾವಿದರೆಲ್ಲಾ ಕಲಾಮಾತೆಯ ಸೇವಕರು. ಕಲೆಯು ನಮ್ಮದು, ಕಲಾವಿದರೂ ನಮ್ಮವರೆಂಬ ಸಂತೋಷ ಎಲ್ಲರಲ್ಲೂ ಇರುತ್ತದೆ.

ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರನ್ನು ಹೊಂದಿರುವ ಕಲಾಪ್ರಾಕಾರವೇ ಯಕ್ಷಗಾನ. ನಮ್ಮ ಮಣ್ಣಿನ ಕಲೆ, ಗಂಡುಕಲೆ. ಅದು ಹಿಮ್ಮೇಳ ಕಲಾವಿದರಿರಬಹುದು, ವೇಷಧಾರಿಗಳಿರಬಹುದು. ವೃತ್ತಿಕಲಾವಿದರೂ ಇದ್ದಾರೆ. ಯಕ್ಷಗಾನವನ್ನು ಹವ್ಯಾಸಿಯಾಗಿ ಸ್ವೀಕರಿಸಿದವರೂ ಇದ್ದಾರೆ. ಹವ್ಯಾಸಿಯಾಗಿದ್ದು ಮತ್ತೆ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದವರನ್ನೂ, ವೃತ್ತಿ ಕಲಾವಿದರಾಗಿದ್ದು ಮತ್ತೆ ಅದನ್ನು ಹವ್ಯಾಸವಾಗಿ ಇರಿಸಿಕೊಂಡವರನ್ನೂ ನಾವು ಕಾಣಬಹುದು.

ಆದರೆ ಒಂದಂತೂ ಸತ್ಯ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಪ್ರದೇಶಗಳ ಜನರಿಗೆ ಯಕ್ಷಗಾನವನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಆ ಬದುಕು ಅಪೂರ್ಣವೆಂದೇ ಭಾವಿಸುತ್ತಾರೆ. ಕಲಾವಿದನಾಗುವ ಭಾಗ್ಯ ದೊರಕದಿದ್ದರೂ ಪ್ರದರ್ಶನಗಳನ್ನು ನೋಡಿ ಆದರೂ ಸಂತೋಷಪಡುತ್ತಾರೆ. ಕಲಾವಿದನಾಗುವ ಅವಕಾಶ ಎಲ್ಲರಿಗೂ ದೊರಕದು. ಕೆಲವರು ಅವಕಾಶ ಸಿಕ್ಕಿದರೂ ಹೊಳೆದು ಕಾಣಿಸಿಕೊಳ್ಳಲಾರರು. ಸಿಕ್ಕಿದರೂ ದಕ್ಕಲಾರದು ಹೋಯಿತು ಎಂಬಂತೆ. 

ಶ್ರೀ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಅವರು ವೃತ್ತಿಕಲಾವಿದರಾಗಿದ್ದು ಪ್ರಸ್ತುತ ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದ್ದಾರೆ. ಹಾಗೆಂದು ಈಗಲೂ ಮೇಳಗಳ ರಂಗಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದು ಅನಿವಾರ್ಯಕ್ಕೆ. ಆಪದ್ಬಾಂಧವನಾಗಿ. ಇವರು ತೆಂಕುತಿಟ್ಟಿನ ಹಿರಿಯ ಮದ್ದಳೆಗಾರರು. ವಳಕ್ಕುಂಜ ಕುಮಾರಣ್ಣ ಅವರು ಯಕ್ಷಗಾನ ಕಲಾತಪಸ್ವಿ, ಯಕ್ಷಗಾನ ಗುರುಕುಲದ ರೂವಾರಿ ಕೀರಿಕ್ಕಾಡು ಮಾಸ್ತರ್ ಶ್ರೀ ವಿಷ್ಣು ಭಟ್ಟರ ಮೊಮ್ಮಗ (ಮಗಳ ಮಗ) ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ವಳಕ್ಕುಂಜ ಅವರು 1960 ಮೇ 13ರಂದು ಪುತ್ತೂರು ತಾಲೂಕಿನ ಪೆರ್ಲಂಪಾಡಿಯಲ್ಲಿ ಜನಿಸಿದರು.

1943ರಲ್ಲಿ ಕುಮಾರಣ್ಣ ಅವರ ತಂದೆ ಶ್ರೀ ನಾರಾಯಣ ಭಟ್ಟರು ವಳಕ್ಕುಂಜದಿಂದ ಪೆರ್ಲಂಪಾಡಿಗೆ ಬಂದು ನೆಲೆಸಿದ್ದರು.  ತಾಯಿ ಶ್ರೀಮತಿ ಭುವನಮಾತಾ (ಕೀರಿಕ್ಕಾಡು ಮಾಸ್ತರರ ಹಿರಿಯ ಪುತ್ರಿ). ಕುಮಾರಣ್ಣನ ದೊಡ್ಡಪ್ಪ ವಳಕ್ಕುಂಜ ವೆಂಕಟ್ರಮಣ ಭಟ್ ಅರ್ಥಧಾರಿಯೂ, ಮದ್ದಳೆವಾದಕರೂ ಆಗಿದ್ದರು. ಅಲ್ಲದೆ ಚೆಂಡೆ ಮದ್ದಳೆ ತಯಾರಿಕೆಯಲ್ಲೂ ಪಳಗಿದ್ದರು. ಇವರು ಕೀರಿಕ್ಕಾಡು ಮಾಸ್ತರರ ಒಡನಾಡಿಯಾಗಿದ್ದರು. ಹಾಗಾಗಿ ಯಕ್ಷಗಾನವು ರಕ್ತವಾಗಿ ತಂದೆಯ ಕಡೆಯಿಂದಲೂ ತಾಯಿಯ ಕಡೆಯಿಂದಲೂ ಬಂದಿತ್ತು. ಪೆರ್ಲಂಪಾಡಿ ಶಾಲೆಯಲ್ಲಿ ಮೂರನೇ ತರಗತಿ ವರೆಗೆ ಓದಿ ಹೈಸ್ಕೂಲ್ ವಿಧ್ಯಾಭ್ಯಾಸವನ್ನು ಪೆರ್ನಾಜೆ ಸೀತಾರಾಘವ ಪ್ರೌಢ ಶಾಲೆಯಲ್ಲಿ ಪೂರೈಸಿದ್ದರು.

ಅಜ್ಜನ ಮನೆಯಲ್ಲಿದ್ದು ಅವರ ಆಶ್ರಯದಲ್ಲೇ ಶಾಲೆಗೆ ಹೋಗಿದ್ದರು. ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯಿತ್ತು. ವೇಷ ಮಾಡಬೇಕೆಂಬ ಆಸೆಯೇ ಬಲವಾಗಿತ್ತು. ಆ ಕಾಲದ ಒಳ್ಳೆಯ ಕಲಾವಿದರಾಗಿದ್ದ ಟಪ್ಪಾಲುಕಟ್ಟೆ ಕೃಷ್ಣ ಭಟ್ ಅವರಿಂದ ನಾಟ್ಯ ಕಲಿತು 7ನೇ ತರಗತಿಯಲ್ಲಿರುವಾಗ ಪೆರ್ನಾಜೆ ಶಾಲಾ ವಾರ್ಷಿಕೋತ್ಸವದ ಪ್ರದರ್ಶನ, ಪಂಚವಟಿ ಪ್ರಸಂಗದಲ್ಲಿ ಕೇಶಾವರೀ ಕಿರೀಟ ಧರಿಸಿ ಖರಾಸುರನಾಗಿ ರಂಗವೇರಿದ್ದರು. ಇವರಿಗೆ ಜತೆಯಾಗಿದ್ದವರು ಸಣ್ಣ ಸೋದರ ಮಾವ ಕೃಷ್ಣ ಮುರಾರಿ ಮತ್ತು ದೊಡ್ಡ ಮಾವನ ಮಗ ವಿಷ್ಣು ಕೀರ್ತಿ. ಇವರೆಲ್ಲಾ ಸಮಾನವಯಸ್ಕರಾಗಿದ್ದರು. ಒಡನಾಡಿಗಳಾಗಿದ್ದು ಯಕ್ಷಗಾನ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.

ಶಾಲೆಯಲ್ಲಿ ಮಕ್ಕಳ ತಂಡವೂ ಸಿದ್ಧವಾಗಿತ್ತು. ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಈ ತಂಡವು ಪ್ರದರ್ಶನಗಳನ್ನೂ ನೀಡಿತ್ತು. ಶೂರಪದ್ಮ, ತಾರಕ, ಮಕರಾಕ್ಷ, ಕಾರ್ತವೀರ್ಯ, ಇಂದ್ರಜಿತು ಮೊದಲಾದ ವೇಷಗಳನ್ನು ಮಾಡುವ ಅವಕಾಶ ಸಿಕ್ಕಿತ್ತು. ಹಲವು ಶಾಲೆಗಳಲ್ಲಿ ಈ ತಂಡದ ತಾಳಮದ್ದಲೆಯೂ ನಡೆದಿತ್ತು. ಅಜ್ಜ ಕೀರಿಕ್ಕಾಡು ಮಾಸ್ತರರು ಹರಿಕತೆ ಮಾಡುವ ಕ್ರಮವನ್ನೂ ಇವರಿಗೆ ಕಲಿಸಿದ್ದರು. ಎಳವೆಯಲ್ಲೇ ಇವರಿಗೆ ತಾಂತ್ರಿಕ ವಿಚಾರಗಳಲ್ಲಿ ತುಂಬಾ ಆಸಕ್ತಿ. ರೇಡಿಯೋ, ಪಂಪ್, ಸೈಕಲ್ ಮೊದಲಾದ ತಾಂತ್ರಿಕ ಉಪಕರಣಗಳ ದುರಸ್ತಿ ಕಾರ್ಯವನ್ನು ಚೆನ್ನಾಗಿ ಮಾಡುತ್ತಿದ್ದರು. ಹಾಗಾಗಿ ಹಿರಿಯರು ಇವರನ್ನು ಐಟಿಐ ತರಬೇತಿಗೆ ಕಳುಹಿಸುವ ಯೋಚನೆ ಮಾಡಿದ್ದರು. ಚೆಂಡೆ ಮದ್ದಳೆ ಕಲಿಯಬೇಕೆಂಬ ಆಸೆಯೂ ಇತ್ತು.

ಅದೇ ಕಾಲಕ್ಕೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಬನಾರಿಯಲ್ಲಿ ಹಿಮ್ಮೇಳ ತರಗತಿ ಆರಂಭಿಸಿದ್ದರು.  ಮಾಂಬಾಡಿಯವರು ಮೊತ್ತ ಮೊದಲು ಕ್ಲಾಸ್ ಆರಂಭಿಸಿದ್ದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ. ಐಟಿಐ ಗೆ ಸೇರುವ ಯೋಚನೆಯನ್ನು ಬಿಟ್ಟು ಕುಮಾರ ಸುಬ್ರಹ್ಮಣ್ಯ ಕಲಾ ಬದುಕನ್ನೇ ಆಯ್ಕೆ ಮಾಡಿಕೊಂಡಿದ್ದರು. ಇದು ಇವರ ಜೀವನದ ಮುಖ್ಯ ತಿರುವು. ತಂದೆ ವಳಕ್ಕುಂಜ ನಾರಾಯಣ ಭಟ್ಟರು ಮದ್ದಳೆವಾದಕರೂ, ಅರ್ಥಧಾರಿಯೂ ಆಗಿದ್ದು ಬನಾರಿ ತಂಡದ ಮಂಗಳೂರು ಆಕಾಶವಾಣಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಆದರೆ ಯಕ್ಷಗಾನವನ್ನು ಮುಂದುವರಿಸಲಾಗಲಿಲ್ಲ ಎಂಬ ನೋವನ್ನು ಹೊಂದಿದ್ದರು. ಮಗನನ್ನು ಯಕ್ಷಗಾನಕ್ಕೆ ಕಳುಹಿಸಿವ ಮೂಲಕ ಆ ನೋವನ್ನು ಮರೆತಿದ್ದರು.

ಸೋದರ ಮಾವಂದಿರ ಆಶೀರ್ವಾದ, ಪ್ರೋತ್ಸಾಹವೂ ಸಿಕ್ಕಿತ್ತು. ಅಜ್ಜನ ಮನೆಯಿಂದಲೇ ಶಾಲೆಗೆ ಹೋದದ್ದು. ಯಕ್ಷಗಾನ ಕಲಿಕೆಗೂ ಅಜ್ಜನ ಮನೆಯಿಂದಲೇ ಅನುಕೂಲವಾಗಿತ್ತು. ವಿಶ್ವವಿನೋದ ಬನಾರಿಯವರಂತೂ ಅಳಿಯನ ಜತೆಗೇ ಇದ್ದು ಹಿಮ್ಮೇಳ ಕಲಿಕೆಗೆ ಸಹಕರಿಸಿದ್ದರು. ಮುಂದಿನ ವರ್ಷ ಪೆರ್ಲಂಪಾಡಿಯಲ್ಲಿ ಮಾಂಬಾಡಿಯವರು ತರಬೇತಿ ಆರಂಭಿಸಿದ್ದರು. ಅಲ್ಲಿಯೂ ಕಲಿಕೆ. ಪೆರ್ಲಂಪಾಡಿಯಿಂದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಜತೆ ಮಾತನಾಡುತ್ತಾ, ನಡೆಯುತ್ತಾ ಗುಡ್ಡಡ್ಕ ಮನೆಗೆ (ಮಾಸ್ತರರು ವಾಸವಿದ್ದ ಮನೆ). ಅಲ್ಲಿ ಬಾಯಾರಿಕೆ ಕುಡಿದು ಮತ್ತೆ ತರಬೇತಿ. ಹೀಗೆ ಸಾಗಿತ್ತು ಗುರುಶಿಷ್ಯರ ಒಡನಾಟ.

ನೆಚ್ಚಿನ ಗುರು ಮಾಂಬಾಡಿಯವರೊಂದಿಗೆ

ಮಾವ ಮತ್ತು ಅಳಿಯ ಇಬ್ಬರೂ ಮಾಂಬಾಡಿಯಯವರ ಮೊದಲ ಶಿಷ್ಯಂದಿರು ಎಂದು ಹೇಳಿದರೂ ತಪ್ಪಾಗಲಾರದು (ವಿಶ್ವವಿನೋದ ಬನಾರಿ ಮತ್ತು ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ). ವೇಷ ಮಾಡುವುದನ್ನು ಬಿಟ್ಟು ಹಿಮ್ಮೇಳದತ್ತ ಗಮನ. ಪ್ರದರ್ಶನಗಳಲ್ಲಿ ಚೆಂಡೆ ಮದ್ದಳೆ ನುಡಿಸಲಾರಂಭಿಸಿ ಬೆಳೆಯುತ್ತಾ ಸಾಗಿದ್ದರು. ಮೇಳದ ತಿರುಗಾಟ ಬೇಕೆಂದಿಲ್ಲ. ನೀನು ಕ್ಲಾಸ್ ಮಾಡು ಎಂದು ಗುರುಗಳಾದ ಮಾಂಬಾಡಿಯವರು ಸಲಹೆ ನೀಡಿದ್ದರಂತೆ. ಕುಮಾರಣ್ಣನ ಮೊದಲ ತಿರುಗಾಟ ಕೂಡ್ಲು ಮೇಳದಲ್ಲಿ. ಕುಬಣೂರು ಶ್ರೀಧರ ರಾಯರ ನೇತೃತ್ವ, ಅಗರಿ ಶ್ರೀನಿವಾಸ ಭಾಗವತರು, ಗುರುಗಳಾದ ಮಾಂಬಾಡಿ, ತಲೆಂಗಳ ಗೋಪಾಲಕೃಷ್ಣ ಭಟ್ಟರು ಜತೆಗಿದ್ದರು.

ಮುಂದಿನ ವರ್ಷ ಕಟೀಲು 2ನೇ ಮೇಳ ಆರಂಭವಾದ ವರ್ಷ. ಪೆರುವಾಯಿ ನಾರಾಯಣ ಭಟ್ ಮತ್ತು ವೆಂಕಟರಾಮ ಭಟ್ ಸುಳ್ಯ ಇವರ ಹೇಳಿಕೆಯಂತೆ ಕಟೀಲು ಮೇಳಕ್ಕೆ. ಆಗ ಪೆರುವಾಯಿ ನಾರಾಯಣ ಭಟ್ಟರು ಮತ್ತು ಇವರು ಮಾತ್ರ ಹಿಮ್ಮೇಳಕ್ಕೆ. ಬಲಿಪರ ಜತೆ ತಿರುಗಾಟ. ಬೆಳಗಿನ ವರೆಗೆ ಇವರಿಬ್ಬರೇ ಬಾರಿಸಬೇಕಾಗಿತ್ತು. ಮುಂದಿನ ವರ್ಷ ಶೇಣಿ ಸುಬ್ರಹ್ಮಣ್ಯ ಭಟ್ಟರೂ ಬಂದಿದ್ದರು. ಯಜಮಾನರ ಅಪ್ಪಣೆ ಮೇರೆಗೆ ಅಪರೂಪಕ್ಕೆ ಒಂದನೇ ಮೇಳದಲ್ಲೂ ಕಲಾಸೇವೆ. ಇರಾ ಭಾಗವತರೊಂದಿಗೆ ಕಸುಬಿಗೂ ಅವಕಾಶವಾಗಿತ್ತು.

ಕರ್ನಾಟಕ ಮೇಳವು ಮೇ ತಿಂಗಳ ಆರಂಭಕ್ಕೆ ವರ್ಷದ ತಿರುಗಾಟ ನಿಲ್ಲಿಸಿದ ಮೇಲೆ ಶ್ರೀ ದಾಮೋದರ ಮಂಡೆಚ್ಚರು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುವುದಕ್ಕೆ ಬರುತ್ತಿದ್ದರು. ನೀನು ಕೀರಿಕ್ಕಾಡು ಅಜ್ಜನ ಪುಳ್ಳಿ (ಮೊಮ್ಮಗ). ಬಾ ಎಂದು ಕರೆದು ಅವರ ಭಾಗವತಿಕೆಗೆ ಮದ್ದಳೆ ಬಾರಿಸಲು ಅವಕಾಶವಿತ್ತಿದ್ದರು. ಬಲಿಪರು, ಪೆರುವಾಯಿ ನಾರಾಯಣ ಭಟ್, ಅಳಿಕೆ ರಾಮಯ್ಯ ರೈ, ಬಣ್ಣದ ಮಾಲಿಂಗ, ಪಡ್ರೆ ಚಂದು, ಅಜೆಕಾರು ರಾಜೇವ ಶೆಟ್ಟಿ, ಕೊಳ್ಯೂರು ನಾರಾಯಣ ಭಟ್ಟ, ನೆಡ್ಲೆ ಗುರಿಕಾರ ನಾರಾಯಣ ಭಟ್ ಮೊದಲಾದವರ ಒಡನಾಟ ಕಟೀಲು ಮೇಳದಲ್ಲಿ ದೊರಕಿತ್ತು. ಮನೆ ಸಮಸ್ಯೆಯಿಂದಾಗಿ 1984ರಲ್ಲಿ ಮೇಳದ ತಿರುಗಾಟವನ್ನು ನಿಲ್ಲಿಸಬೇಕಾಗಿ ಬಂದಿತ್ತು.

ಪತ್ನಿ, ಮಗನೊಂದಿಗೆ ಕುಮಾರ ಸುಬ್ರಹ್ಮಣ್ಯ

ಮೇಳದ ತಿರುಗಾಟ ನಿಲ್ಲಿಸಿ ಮನೆವಾರ್ತೆಯನ್ನು ನೋಡಿಕೊಳ್ಳುತ್ತಿದ್ದಾಗ ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟರಿಗೆ ಗುರುಗಳಾದ ಮಾಂಬಾಡಿಯವರ ಸಲಹೆಯು ನೆನಪಾಗಿತ್ತು. ಮೇಳದ ತಿರುಗಾಟವೇ ಆಗಬೇಕೆಂದಿಲ್ಲ. ಕಲಾಸಕ್ತರಿಗೆ ತರಬೇತಿ ನೀಡು. ಕಲಾವಿದರನ್ನು ಸಿದ್ಧಗೊಳಿಸುವುದೂ ಕಲಾಮಾತೆಯ ಸೇವೆ ಎಂಬ ಮಾತನ್ನು ಮಾಂಬಾಡಿಯವರು ಆಗಾಗ ಹೇಳುತ್ತಿದ್ದರಂತೆ. ಕಾಯರತ್ತೋಡಿ ಭುವನೇಶ್ವರೀ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಕೋಡ್ಲ ಗಣಪತಿ ಭಟ್ಟರ ನೇತೃತ್ವದಲ್ಲಿ ತರಬೇತಿ ನಡೆಯುತ್ತಿತ್ತು. ಮೊದಲು ಅಲ್ಲಿ ಮಾಂಬಾಡಿಯವರು ಮತ್ತು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಹಿಮ್ಮೇಳ ತರಗತಿಗಳನ್ನು ನಡೆಸುತ್ತಿದ್ದರು. ಮಾಂಬಾಡಿಯವರ ಸಲಹೆಯಂತೆ ವಳಕ್ಕುಂಜ ಕುಮಾರಣ್ಣ ಅಲ್ಲಿ ಕಲಿಕಾಸಕ್ತರಿಗೆ ಹಿಮ್ಮೇಳ ತರಬೇತಿಯನ್ನು ಮೊತ್ತಮೊದಲು ಆರಂಭಿಸಿದ್ದರು.

ಜಾಹೀರಾತು

ಬಳಿಕ ಸುಳ್ಯ ಮತ್ತು ಪುತ್ತೂರಿನ ಹಲವೆಡೆ ತರಗತಿಗಳನ್ನು ಆರಂಭಿಸಿದ್ದರು. ಈ ಸಂದರ್ಭಗಳಲ್ಲಿ ಯಕ್ಷಗಾನ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿದ್ದರು. ಈ ಸಮಯದಲ್ಲಿ ತೆಂಕಬೈಲು ಶಾಸ್ತ್ರಿಗಳ ಮತ್ತು ದಾಸರಬೈಲು ಚನಿಯ ನಾಯ್ಕರ ಭಾಗವತಿಕೆಗೆ ಚೆಂಡೆ ಮದ್ದಳೆ ಬಾರಿಸುವ ಅವಕಾಶಗಳು ಸಿಕ್ಕಿತ್ತು. 1985ರಲ್ಲಿ ಪೆರ್ಲಂಪಾಡಿಯ ಸ್ಥಳವನ್ನು ವಿಕ್ರಯಿಸಿ ಮಡಿಕೇರಿಯ ಮದೆನಾಡು ಎಂಬಲ್ಲಿ ವಾಸ್ತವ್ಯ. ಮಡಿಕೇರಿ, ಕಲ್ಲುಗುಂಡಿ ಮೊದಲಾದೆಡೆ ತರಬೇತಿಯನ್ನು ನೀಡಿದರು. ಕಲ್ಲುಗುಂಡಿಯಲ್ಲಿ ಪ್ರತಿವಾರವೂ ತಾಳಮದ್ದಳೆ ನಡೆಯುತ್ತಿತ್ತು. ಸುಬ್ರಾಯ ಸಂಪಾಜೆ, ರಾಧಾಕೃಷ್ಣ ಕಲ್ಚಾರ್, ಜಬ್ಬಾರ್ ಸಮೋ, ಪುತ್ತೂರು ರಮೇಶ ಭಟ್, ಗೋಪಾಲಕೃಷ್ಣ ಮಡಿಕೇರಿ, ಹಮೀದ್ ಕೊಯನಾಡು ಮೊದಲಾದವರ ಒಡನಾಟ, ಗೆಳೆತನವೂ ಒದಗಿತ್ತು.

ತಾಳಮದ್ದಳೆ ಮುಗಿದ ಮೇಲೆ ವಿಮರ್ಶೆಯೂ ನಡೆಯುತ್ತಿತ್ತು. ಶ್ರುತಿಬದ್ಧವಾಗಿ ಮಾತನಾಡುವ ಕಲಿಕೆಗೆ ಕುಮಾರಣ್ಣ ಅವರು ಕಲಾವಿದರಿಗೆ ಸಹಕಾರಿಯಾಗಿದ್ದರು. ಶ್ರೀಯುತರು ಸಾಹಸೀ ಮನೋವೃತ್ತಿ ಉಳ್ಳವರು. ಮದೆನಾಡಿನಲ್ಲಿ ಅತಿವೃಷ್ಟಿಯಾಗಿ ಪ್ರವಾಹಕ್ಕೆ ಸಿಲುಕಿದ ಮಗುವನ್ನು ನೀರಿಗೆ ಹಾರಿ ರಕ್ಷಿಸಿದ್ದು ಮಾತ್ರವಲ್ಲ ಪ್ರಥಮ ಚಿಕಿತ್ಸೆಯನ್ನೂ ನೀಡಿ ಬದುಕಿಸಿದ್ದರು. ಅಂದು ಬೆಳಿಗ್ಗೆ ಅವರು ಬನಾರಿಗೆ ಹೋಗುವವರಿದ್ದರೂ ಮಳೆಯ ಕಾರಣದಿಂದ ಪತ್ನಿಯ ಬೇಡಿಕೆಯಂತೆ ಮನೆಯಲ್ಲಿಯೇ ಉಳಿದಿದ್ದರು. ಊಟ ಮಾಡುತ್ತಿದ್ದಾಗ ಎಲ್ಲರೂ ಬೊಬ್ಬಿಡುವುದನ್ನು ಕೇಳಿದ್ದರು. ಪತ್ನಿಯಿಂದ ವಿಚಾರ ತಿಳಿದ ಕುಮಾರಣ್ಣ ನೀರಿಗೆ ಧುಮುಕಿ ಬಾಲೆಯನ್ನು ರಕ್ಷಿಸಿದ್ದರು. ‘ಗಂಡಸು ಸಾಧನೆಯನ್ನು ಮಾಡುವಲ್ಲಿ ಹೆಣ್ಣು ಪ್ರೇರಕ ಶಕ್ತಿಯಾಗಿ ಇರುತ್ತಾಳೆ ಎಂಬಂತೆ ಕುಮಾರಣ್ಣನ ಈ ಸಾಹಸಕ್ಕೆ ಅವರ ಪತ್ನಿಯೂ ಕಾರಣರಾಗಿದ್ದರು.

ಈ ವಿಚಾರವಾಗಿ ತುಂಬಾ ಕಡೆ ಸನ್ಮಾನವೂ ಆಗಿತ್ತು. ಕೊಡಗು ಆಡಳಿತವು ‘ಶೌರ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತ್ತು. ಈ ಸಾಹಸದ ಬಗ್ಗೆ ಖ್ಯಾತ ತಾಳಮದ್ದಳೆ ಅರ್ಥಧಾರಿ ಜಬ್ಬಾರ್ ಸಮೋ ಅವರು ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು. ಕಲ್ಲುಗುಂಡಿ ಕೊಯನಾಡು ಎಂಬಲ್ಲಿ ತರಬೇತಿ ನೀಡುವ ಸಂದರ್ಭ, ವ್ಯಕ್ತಿಯೊಬ್ಬರು ತರಬೇತಿ ಆರಂಭದಿಂದ ತೊಡಗಿ ಕೊನೆಯ ತನಕವೂ ನೋಡಿ ಹೋಗುತ್ತಿದ್ದರು. ಯಾಕೆಂದು ಕುಮಾರಣ್ಣನಿಗೆ ಗೊತ್ತಿರಲಿಲ್ಲ. ಆದರೆ ಅವರಲ್ಲಿದ್ದ ಯಕ್ಷಗಾನಾಸಕ್ತಿಯನ್ನು ಗಮನಿಸಿದ್ದರು. ನಾಲ್ಕು ದಿನ ಕಳೆದು ಕರೆದು ಮಾತನಾಡಿಸಿದ್ದರು. ಆ ವ್ಯಕ್ತಿ ಬೇರಾರೂ ಅಲ್ಲ. ಅವರೇ ಶ್ರೀ ಜಬ್ಬಾರ್ ಸಮೊ.

ಮಗಳೊಂದಿಗೆ

ಮಾತನಾಡುತ್ತಾ ಇದ್ದಂತೆ ರಾಮಾಯಣ, ಮಹಾಭಾರತ, ಶಿವಪುರಾಣದ ವಿಚಾರಧಾರೆಗಳನ್ನು ಜಬ್ಬಾರ್ ಅವರು ಅರಗಿಸಿಕೊಂಡಿದ್ದರೆಂಬುದನ್ನು ತಿಳಿದಿದ್ದರು. ಹಿಮ್ಮೇಳ ಕಲಿಯುತ್ತೀರಾ ಎಂದು ಕೇಳಿದಾಗ ‘ನನಗೆ ಅರ್ಥಗಾರಿಕೆಯಲ್ಲಿ ಒಲವು’ ಎಂದಿದ್ದರಂತೆ. ಪ್ರೋತ್ಸಾಹಿಸಿ ಸಣ್ಣ ಮಟ್ಟಿಗೆ ನಾಟ್ಯವನ್ನೂ ಹೇಳಿಕೊಟ್ಟರಂತೆ. ಜಬ್ಬಾರ್ ಸಮೊ ಅವರು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಕುಮಾರಣ್ಣ ಕಾರಣರಾದರು. ‘ನಾನು ನಿಮಿತ್ತ ಮಾತ್ರ, ಜಬ್ಬಾರ್ ಅವರು ಸ್ವಯಂ ಪ್ರತಿಭಾವಂತರು’ ಇದು ಕುಮಾರಣ್ಣನ ಅಭಿಪ್ರಾಯ.

1995ರಲ್ಲಿ ಮದೆನಾಡಿನಿಂದ ಬಂದು ಪಂಜ ಸಮೀಪ ವಾಸ್ತವ್ಯ. ಸುಳ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಬನಾರಿ ಮೊದಲಾದ ಕಡೆಗಳಲ್ಲಿ ತರಬೇತಿ ನೋಡುವುದರ ಜತೆ ಕೃಷಿ ನಿರ್ವಹಣೆ ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಬಂದರು. ಅನಿವಾರ್ಯ ಸಂದರ್ಭಗಳಲ್ಲಿ ಕಟೀಲು ಮೇಳದ ಪ್ರದರ್ಶನಗಳಲ್ಲಿ ಈಗಲೂ ಭಾಗವಹಿಸುತ್ತಾರೆ. ಅವರ ಅನೇಕ ಶಿಷ್ಯರು ಇಂದು ಹಿಮ್ಮೇಳ ಕಲಾವಿದರಾಗಿ ಬೆಳೆಯುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ಭಾಗವತ ಶ್ರೀ ಕಡಬ ರಾಮಚಂದ್ರ ರೈಗಳ ಜತೆ ಬಾಚಕೆರೆ ಮೇಳದ ಖಾಯಂ ಕಲಾವಿದರಾಗಿದ್ದಾರೆ. ಕೊಲ್ಲಂಗಾನ ಕ್ಷೇತ್ರದ ಪ್ರದರ್ಶನಗಳಿಗೂ ಖಾಯಂ ಕಲಾವಿದ. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಗಣಧಿರಾಜ ಉಪಾಧ್ಯಾಯರಿಗೆ ಇವರಲ್ಲಿ ವಿಶೇಷ ಪ್ರೀತಿ.

ಕಡತೋಕ ಮಂಜುನಾಥ ಭಾಗವತರನ್ನುಳಿದು ಎಲ್ಲಾ ಹಿರಿಯ ಕಿರಿಯ ಭಾಗವತರುಗಳೊಂದಿಗೆ ಕಲಾ ಸೇವೆ. ಕಡತೋಕರ ಹಾಡಿಗೆ ಚೆಂಡೆ ಮದ್ದಳೆ ನುಡಿಸಲು ಅವಕಾಶ ಸಿಕ್ಕಿರಲಿಲ್ಲ ಎಂಬ ಒಂದು ನೋವಿದೆ ಕುಮಾರಣ್ಣನಿಗೆ. ಪುರಾಣ ಮತ್ತು ತುಳು ಪ್ರಸಂಗಗಳ ಹಾಡಿಗೆ ನುಡಿಸಾಣಿಕೆಯ ವೈವಿಧ್ಯವನ್ನು ಕಂಡುಕೊಂಡು ಮೆರೆದವರು ಕುಮಾರಣ್ಣ. ಕಟೀಲು ಮೇಳದ ತಿರುಗಾಟವನ್ನು ಬಿಟ್ಟ ಮೇಲೆ (1984ರಲ್ಲಿ) ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಆದಿ ಸುಬ್ರಹ್ಮಣ್ಯ ಮೇಳದಲ್ಲೂ ವ್ಯವಸಾಯ ಮಾಡಿದ್ದರು. ದೆಹಲಿಯ ಮಕ್ಕಳ ತಂಡದ ಸದಸ್ಯರು ಹಿಂದಿ ಭಾಷೆಯಲ್ಲಿ ‘ಚಿತ್ರ ಪಟಲ ರಾಮಾಯಣ’ ಎಂಬ ಪ್ರದರ್ಶನಗಳನ್ನು ಅನೇಕ ಕಡೆ ಸಂಯೋಜಿಸಿದ್ದರು.(ದೆಹಲಿ, ಮುಂಬೈ) ಇದು ತೆಂಕು ಬಡಗಿನ ಕೂಡಾಟವಾಗಿತ್ತು. ಈ ತಂಡದ ಸದಸ್ಯರಾಗಿಯೂ ಪಾಲುಗೊಂಡಿದ್ದರು.

ನೆಹರೂ ಯುವ ಕೇಂದ್ರ ಮಂಗಳೂರು ತಂಡದ ಮದ್ದಳೆಗಾರರಾಗಿ ಮಿಜೋರಾಂ, ಗೌಹಾಟಿ, ಬೆಂಗಳೂರು, ಕೇರಳದ ವಿವಿದೆಡೆಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ಸಕ್ರಿಯರಾಗಿದ್ದರು. 1991 ಜೂ 2ರಂದು ಸುಲೋಚನಾ ಅವರ ಜತೆ ವಿವಾಹ.(ಅಡೂರು ಮಣಿಯೂರು ಶ್ರೀ ಗಣಪತಿ ಭಟ್ ಮತ್ತು ದೇವಕೀ ದಂಪತಿಗಳ ಪುತ್ರಿ) ಕಲಾ ಬದುಕಿಗೆ ಸಹೋದರರಾದ ಶ್ರೀ ಗೋಪಾಲಕೃಷ್ಣ, ಶ್ರೀ ಶ್ರೀಪತಿ, ಶ್ರೀ ವಿಘ್ನೇಶ್, ಸಹೋದರಿಯರಾದ ಸುಮಂಗಲಾ ಮತ್ತು ಯಶೋದಾ ಇವರ ಸಹಕಾರವೂ ಸಿಕ್ಕಿತ್ತು. ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟರಿಗೆ ಅಜ್ಜ ಕೀರಿಕ್ಕಾಡು ಮಾಸ್ತರರ ಮತ್ತು ಸೋದರ ಮಾವಂದಿರ ಪ್ರೋತ್ಸಾಹ ಸದಾ ಸಿಕ್ಕಿತ್ತು. ‘ಅಜ್ಜನ ಮನೆಯಲ್ಲಿ ಅನ್ನವುಂಡು ಬೆಳೆದೆ. ಯಕ್ಷಗಾನ ಕಲಾವಿದನಾಗಲು ಅನುಕೂಲಗಳನ್ನು ನೀಡಿ ಹುರಿದುಂಬಿಸಿದ್ದರು’. ಎಂದು ಕುಮಾರಣ್ಣ ಸದಾ ಹೇಳುತ್ತಾರೆ.

ಮಕ್ಕಳ ತಂಡದ ಮೇಲೆ ಇವರಿಗೆ ವಿಶೇಷ ಪ್ರೀತಿ. ಭವಿಷ್ಯದ ಕಲಾವಿದರೆಂಬ ಕಾಳಜಿಯಿಂದ ಮಕ್ಕಳ ತಂಡವನ್ನು ಪ್ರೋತ್ಸಾಹಿಸುತ್ತಾರೆ. ಕಟೀಲು ಮೇಳದ ತಿರುಗಾಟ ನಿಲ್ಲಿಸಿದ ನಂತರ ಕಾಂಚನ ರಾಮ ಭಟ್ಟರಿಂದ ಶಾಸ್ತ್ರೀಯ ಸಂಗೀತದ ಮೃದಂಗವನ್ನೂ ಅಭ್ಯಸಿಸಿದ್ದರು. ಮದೆನಾಡಿನಲ್ಲಿರುವಾಗ ಶಶಿಧರ ಕೋಟೆ ಅವರ ಹಾಡು ಮತ್ತು ಸೀತಾ ಹೆಬ್ಬಾರ್ ಅವರ ಭರತನಾಟ್ಯಕ್ಕೆ ಮೃದಂಗವಾದಕರಾಗಿಯೂ ಒದಗಿದ್ದರು. ಹಿರಿಯ ಮದ್ದಳೆಗಾರ ಶ್ರೀ ಪದ್ಯಾಣ ಪರಮೇಶ್ವರ ಭಟ್ಟರ ಒಡನಾಟವೂ ಸಿಕ್ಕಿತ್ತು. ಪದ್ಯಾಣ ಗಣಪತಿ ಭಟ್ಟರು ಮಳೆಗಾಲದ ಕಾರ್ಯಕ್ರಮಗಳಲ್ಲಿ ಅವಕಾಶವಿತ್ತು ಪ್ರೋತ್ಸಾಹಿಸಿದ್ದರು.

ಉಡುಪುಮೂಲೆ ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲಿ ಪುತ್ತಿಗೆ ರಘುರಾಮ ಹೊಳ್ಳರೂ ಶ್ರೀ ದಿನೇಶ ಅಮ್ಮಣ್ಣಾಯರೂ ಅವಕಾಶವಿತ್ತು ಸಹಕರಿಸಿದ್ದರು. ಸತ್ಯಮೂರ್ತಿ ದೇರಾಜೆ ಮತ್ತು ಮನೆಯವರ ನೇತೃತ್ವದ ಕಾರ್ಯಕ್ರಮಗಳಲ್ಲೂ ಇವರು ಸಕ್ರಿಯರು. ಹಳೇ ಕ್ರಮದ ವಾದನವೇ ಇವರಿಗೆ ಇಷ್ಟ. “ಈಗ ವೇಗದ ಲಯದಲ್ಲೇ ಪ್ರಸಂಗ ಆರಂಭವಾಗುವುದನ್ನು ನಾವು ಕಾಣಬಹುದು. ಹಾಗಾದಾಗ ಪ್ರಸಂಗವು ಗೆಲ್ಲದೇ ಸೋಲುತ್ತದೆ. ಕಾಲನಿರ್ಣಯದಂತೆ, ಅದಕ್ಕೊಪ್ಪುವ ಲಯದಲ್ಲಿ ಸಾಗಿದರೆ ಮಾತ್ರ ಪ್ರದರ್ಶನವು ರಂಜಿಸುತ್ತದೆ. ಆ ವಿಚಾರದಲ್ಲಿ ಯಾರೂ ರಾಜಿ ಮಾಡಿಕೊಳ್ಳಬಾರದು. ವೇಷಧಾರಿಗೆ ಬೇಕಾದಂತೆ ಇಲ್ಲದಿದ್ದರೆ, ಹೊಸತನಕ್ಕೆ ಹೊಂದಿಕೊಳ್ಳದಿದ್ದರೆ ಕಾರ್ಯಕ್ರಮಕ್ಕೆ ಹೇಳಿಕೆ ಇಲ್ಲ ಅನ್ನೋದು ಅಷ್ಟೇ ಸತ್ಯ” ಕುಮಾರಣ್ಣನವರ ಈ ಮಾತುಗಳಲ್ಲಿ ನೋವಿದೆ, ಅಸಮಾಧಾನವಿದೆ. 

ಕುಮಾರ ಸುಬ್ರಹ್ಮಣ್ಯ ಅವರ ಸಹೋದರಿ ಶ್ರೀಮತಿ ಸುಮಂಗಲಾ ಅವರ ಪುತ್ರ ಗಿರೀಶ್ವರನೂ ವೇಷಧಾರಿ. ಸಹೋದರಿ ಶ್ರೀಮತಿ ಯಶೋದಾ ಅವರ ಪುತ್ರ ಚೈತನ್ಯ ಇವರಿಂದಲೇ ಯಕ್ಷಗಾನ ಹಿಮ್ಮೇಳ ಕಲಿತಿದ್ದಾನೆ. ಉಳಿದ ಕಲಾ ಪ್ರಕಾರಗಳ ವಾದನ ಕ್ರಮವನ್ನು ಅಭ್ಯಸಿಸಿ, ಅದನ್ನು ವೃತ್ತಿಯಾಗಿ ಸ್ವೀಕರಿಸಿ ತೊಡಗಿಸಿಕೊಂಡಿದ್ದಾರೆ. ಸುಮಾರು 25ಕ್ಕೂ ಮಿಕ್ಕಿ ಸನ್ಮಾನಗಳನ್ನೂ ಸ್ವೀಕರಿಸಿರುವ ಕುಮಾರಣ್ಣ ವೃತ್ತಿಯಲ್ಲಿಯೂ ಸಾಂಸಾರಿಕವಾಗಿಯೂ ತೃಪ್ತರು. ಕುಮಾರಣ್ಣ, ಸುಲೋಚನಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಭುವನಜ್ಯೋತಿ ಸ್ನಾತಕೋತ್ತರ ಪದವೀಧರೆ. (ಎಂ.ಕಾಮ್) ವಿವಾಹಿತೆ. ಅಳಿಯ ಶ್ರೀ ಕೀರ್ತಿಶಂಕರ್ ಉದ್ಯೋಗಿ. ಪುತ್ರ ಶ್ರೀಶ ಮಂಗಳೂರು ಅಡ್ಯಾರಿನ ಶ್ರೀನಿವಾಸ ಕಾಲೇಜಿನಲ್ಲಿ ಎಂ.ಬಿ.ಎ ಓದುತ್ತಿದ್ದಾರೆ. ಇವರು ಹಿಮ್ಮೇಳ ಕಲಿತು ಆಟಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ. 

ನಗುಮೊಗದ ಹಿರಿಯ ಮದ್ದಳೆಗಾರ ಶ್ರೀ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಸರಳ, ಸಜ್ಜನ, ವಿನಯವಂತರು. ಇವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ನಿರಂತರ ಹಿಮ್ಮೇಳ ತರಬೇತಿಯನ್ನು ನೀಡುತ್ತಾ ಅನೇಕ ಕಲಾವಿದರನ್ನು ಕಲಾಮಾತೆಯ ಮಡಿಲಿಗಿಕ್ಕುವ ಭಾಗ್ಯವು ಒದಗಲಿ, ಶ್ರೀ ದೇವರು ಸಕಲ ಭಾಗ್ಯಗಳನ್ನೂ ಕರುಣಿಸಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ

RELATED ARTICLES

4 COMMENTS

  1. ಕುಮಾರಣ್ಣನ ಪತ್ನಿಯ ಹೆಸರು ಸುಲೋಚನ ಆಗಬೇಕು. ನನ್ನ ದೊಡ್ಡಪ್ಪನ ಮಗಳು ( ಅಕ್ಕ)
    ಉತ್ತಮ ಲೇಖನ ಧನ್ಯವಾದಗಳು ಸರ್.

  2. ನಿಜವಾಗಿಯೂ ನಾನು ಇವರ ಶಿಷ್ಯ ಎನ್ನಲು ಹೆಮ್ಮೆಪಡುತ್ತೇನೆ. ಅದ್ಭುತ ಕಲಾವಿದರುˌ ಕಲಾ ವಿಮರ್ಷಕರುˌ ಗುರುಗಳೂ ಆದ ಇವರಲ್ಲಿ ವಾದನ ಮಾತ್ರವಲ್ಲದೇ ವಾದಕ ವಸ್ತುಗಳ ತಯಾರಿಯಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡಿದ್ದಾರೆ. ಇವರ ಅನುಭವ ಜ್ಞಾನಗಳು ಈಜಲಾಗದ ಸಮುದ್ರಕ್ಕೆ ಸಮ ಎಂದರೆ ತಪ್ಪಾಗಲಾರದು.

  3. ಪ್ರಸಿದ್ಧ ಕಲಾವಿದ ಕುಮಾರಸುಬ್ರಹ್ಮಣ್ಯರವರ ಬಗೆಗೆ
    ವಿವರವಾದ ಲೇಖನ ,,ಅಭಿನಂದನೆಗಳು,,,ಚೆನಾಗಿದೆ

  4. ನಮ್ಮ ಹೆಮ್ಮೆಯ ಕುಮಾರ ಸುಬ್ರಹ್ಮಣ್ಯ ಭಟ್ ಇವರಿಗೆ ಅಭಿನಂದನೆಗಳು🙏

LEAVE A REPLY

Please enter your comment!
Please enter your name here

Most Popular

Recent Comments