Friday, September 20, 2024
Homeಯಕ್ಷಗಾನಅನುಭವಿ ಪುಂಡುವೇಷಧಾರಿ ಪುಷ್ಪರಾಜ್ ಜೋಗಿ ನೆಲ್ಯಾಡಿ 

ಅನುಭವಿ ಪುಂಡುವೇಷಧಾರಿ ಪುಷ್ಪರಾಜ್ ಜೋಗಿ ನೆಲ್ಯಾಡಿ 

ಯಕ್ಷಗಾನವೆಂಬ ಸರ್ವಾಂಗ ಸುಂದರ, ಶ್ರೇಷ್ಠ ಕಲೆಯಲ್ಲಿ ಕಲಾವಿದರಾಗಿ ವ್ಯವಸಾಯ ಮಾಡುವವರನೇಕರು. ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದವರು ಇದ್ದಾರೆ. ಹವ್ಯಾಸವಾಗಿ ಸ್ವೀಕರಿಸಿದವರೂ ಇದ್ದಾರೆ. ಕಲಾಮಾತೆಗೆ ಇವರೆಲ್ಲರೂ ಮಕ್ಕಳು. ತಮಗೆ ಈ ಶ್ರೇಷ್ಠ ಕಲಾಪ್ರಾಕಾರದ ಒಂದು ಅಂಗವಾಗುವ ಅವಕಾಶ ಸಿಕ್ಕಿದೆ. ಕಲಾಮಾತೆಯ ಸೇವೆಯನ್ನು ಮಾಡುವ ಭಾಗ್ಯವು ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಸಂತೋಷಪಡಬಹುದು.

ತೆಂಕುತಿಟ್ಟಿಗೆ ಸಂಬಂಧಿಸಿದಂತೆ ಯಕ್ಷಗಾನದಲ್ಲಿ ಹಾಸ್ಯ, ಪೀಠಿಕೆವೇಷ, ಎದುರುವೇಷ, ಪುಂಡುವೇಷ, ಸ್ತ್ರೀವೇಷ ಹೀಗೆ ವಿಭಾಗಗಳು. ಇಂದು ಪುಂಡುವೇಷಧಾರಿಗಳಾಗಿ, ವೃತ್ತಿ ಕಲಾವಿದರಾಗಿ ಮೇಳದ ತಿರುಗಾಟ ನಡೆಸುತ್ತಿರುವವರಲ್ಲೊಬ್ಬರು ಶ್ರೀ ಪುಷ್ಪರಾಜ್ ಜೋಗಿ ನೆಲ್ಯಾಡಿ. ಇವರು ಪ್ರಸ್ತುತ ಕಟೀಲು ಮೇಳದ ಕಲಾವಿದ. ಶ್ರೀ ಪುಷ್ಪರಾಜ್ ಜೋಗಿ ಅವರು ಪ್ರಸ್ತುತ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರೂ ಅನೇಕ ಮೇಳಗಳಲ್ಲಿ ತಿರುಗಾಟ ನಡೆಸಿ ಅನುಭವವನ್ನು ಹೊಂದಿದವರು.

ಇವರು ಪುತ್ತೂರು ತಾಲೂಕಿನ ನೆಲ್ಯಾಡಿಯಲ್ಲಿ 1964ನೇ ಇಸವಿ ಜೂನ್ 7ರಂದು ಶ್ರೀ ಶಿವಪ್ಪ ಜೋಗಿ ಮತ್ತು ಶ್ರೀಮತಿ ರುಕ್ಮಿಣಿ ಅಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ನೆಲ್ಯಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಓದಿದ್ದರು. ಓದು ಮುಂದುವರಿಸಲು ಅವಕಾಶವಿರಲಿಲ್ಲ. ಇವರ ತಂದೆ ಶಿವಪ್ಪ ಜೋಗಿ ಕೃಷಿಕರು. ತೆಂಕಿನ ಖ್ಯಾತ ಕಲಾವಿದ ಶ್ರೀ ಶಿವರಾಮ ಜೋಗಿ, ಪುಷ್ಪರಾಜ್ ಜೋಗಿ ಅವರ ದೊಡ್ಡಪ್ಪನ ಮಗ ಅಣ್ಣ. ಪುಷ್ಪರಾಜ್ ಅವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ನೆಲ್ಯಾಡಿ ಪರಿಸರದಲ್ಲಿ ನಡೆಯುತ್ತಿರುವ ಪ್ರದರ್ಶನಗಳನ್ನು ನೋಡುತ್ತಿದ್ದರು.

ಕೊಕ್ಕಡ ಕೋರಿಜಾತ್ರೆಯಂದು ಸುರತ್ಕಲ್ ಮೇಳದ ಆಟ ವರ್ಷವೂ ನಡೆಯುತ್ತಿತ್ತು. ನೆಲ್ಯಾಡಿಯಿಂದ ಕೊಕ್ಕಡ ವರೆಗೆ ನಡೆದೇ ಹೋಗಿ ಆಟ ನೋಡುತ್ತಿದ್ದರು. ಹೀಗೆ ಆಟ ನೋಡಿಯೇ ಕಲಾವಿದನಾಗಬೇಕೆಂಬ ಆಸೆಯಾಗಿತ್ತು. ಸುರತ್ಕಲ್ ಮೇಳ ಶ್ರೇಷ್ಠ ಕಲಾವಿದರಿಂದ ಕೂಡಿದ ತಂಡವಾಗಿತ್ತು. ಕೊಕ್ಕಡ ಈಶ್ವರ ಭಟ್, ವೇಣೂರು ಸುಂದರ ಆಚಾರ್ಯ, ಎಂ.ಕೆ ರಮೇಶ ಆಚಾರ್ಯ, ಶಿವರಾಮ ಜೋಗಿ, ಪ್ರಕಾಶ್ ಚಂದ್ರ ರಾವ್ ಬಾಯಾರು, ಇವರ ಪಾತ್ರಗಳು ಪುಷ್ಪರಾಜರನ್ನು ಆಕರ್ಷಿಸಿದ್ದುವು. ಅಂದಿನ ದಿನ ಈ ಐವರು ಕಲಾವಿದರೂ ಪುಷ್ಪರಾಜರ ಪಾಲಿಗೆ ‘ಹೀರೋ’ಗಳಾಗಿದ್ದರು.

7ನೇ ತರಗತಿಯ ಓದಿನ ಬಳಿಕ ಪುಷ್ಪರಾಜರು ಮಂಗಳೂರಿನಲ್ಲಿ ಎರಡು ವರ್ಷ ಕಳೆದಿದ್ದರು. ಆಗಿನ್ನೂ ನಾಟ್ಯವೇ ಕಲಿತಿರದ ಇವರು ಮೇಳ ಸೇರುವ ಆಸೆಯಿಂದ ಶ್ರೀ ಕ್ಷೇತ್ರ ಕಟೀಲಿಗೆ ಹೋಗಿದ್ದರು. ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣರು ಇವರನ್ನು ಖ್ಯಾತ ಕಲಾವಿದ ಕಟೀಲು ಶ್ರೀನಿವಾಸ ರಾಯರ ಕೈಗೊಪ್ಪಿಸಿದ್ದರು. ಶ್ರೀನಿವಾಸರ ಜತೆ ಪುಷ್ಪರಾಜರು ಸುಂಕದಕಟ್ಟೆ ಮೇಳಕ್ಕೆ ಸೇರಿದರು. ನಾಟ್ಯದ ಕಲಿಯದ ಇವರಿಗೆ ತಿರುಗಾಟವಿಡೀ ಕೋಡಂಗಿ ಮತ್ತು ಸಣ್ಣಪುಟ್ಟ ಪಾತ್ರಗಳನ್ನು ಮಾಡುವ ಅವಕಾಶ ಸಿಕ್ಕಿತ್ತು.

ಪುಷ್ಪರಾಜ್ ಜೋಗಿಯವರು ಸಹ ಕಲಾವಿದರ ಸಲಹೆಯಂತೆ ನಾಟ್ಯ ಕಲಿಯಲು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ತೆರಳಿದರು. ಗುರು, ಪ್ರಸಿದ್ಧ ವೇಷಧಾರಿ, ಶ್ರೀ ಪಡ್ರೆ ಚಂದು ಅವರ ಶಿಷ್ಯನಾಗಿ ನಾಟ್ಯ ಕಲಿತರು. ಲಲಿತ ಕಲಾ ಕೇಂದ್ರದಲ್ಲಿ ಸಂಘಟರಾಗಿ, ಕಲಾವಿದರಾಗಿ, ಭಾಷಣಕಾರರಾಗಿ ಈಗ ಪ್ರಸಿದ್ಧರಾದ ಸರಪಾಡಿ ಶ್ರೀ ಅಶೋಕ ಶೆಟ್ರು, ಕಟೀಲು ಮೇಳದ ಹಿರಿಯ ಕಲಾವಿದ ಶ್ರೀ ಅಪ್ಪಕುಂಞಿ ಮಣಿಯಾಣಿ ಇವರ ಸಹಪಾಠಿಗಳಾಗಿದ್ದರು. ನಾಟ್ಯ ಕಲಿತು ಅದೇ ವರ್ಷ ಸುಂಕದಕಟ್ಟೆ ಮೇಲಕ್ಕೆ. 3 ವರ್ಷ ತಿರುಗಾಟ. ಸಂಚಾಲಕರಾದ ಪಡ್ಡೋಡಿಗುತ್ತು ಸುಂದರ ಶೆಟ್ರಿಗೆ ಬಾಲಕಲಾವಿದನಾದ ಪುಷ್ಪರಾಜರ ವೇಷಗಳೆಂದರೆ ಬಲು ಇಷ್ಟವಾಗಿತ್ತು. ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದರು. ಸಹಕಲಾವಿದರುಗಳೆಲ್ಲರೂ ಸಹಕರಿಸಿದ್ದರು.

ಬಾಲಗೋಪಾಲರಿಂದ ತೊಡಗಿ ಬಾಲ ಅಯ್ಯಪ್ಪ, ಬಾಲಕೃಷ್ಣ, ಧ್ರುವ, ಮಾರ್ಕಂಡೇಯ, ಲಕ್ಷ್ಮಣ ಮೊದಲಾದ ವೇಷಗಳಲ್ಲಿ ಮಿಂಚಿದರು. ಪುಷ್ಪರಾಜ್ ಅವರ ಧ್ರುವನ ವೇಷವನ್ನು ನೋಡಿ ಸಂತೋಷಗೊಂಡ ಮಹನೀಯರೊಬ್ಬರು ವಾಚು (ಕೈಗಡಿಯಾರ) ಉಡುಗೊರೆ ನೀಡಿದ್ದರು. ಬೆಳೆಯುತ್ತಾ ವೃಷಸೇನ, ಬಬ್ರುವಾಹನ, ಅಭಿಮನ್ಯು ಮೊದಲಾದ ವೇಷಗಳನ್ನೂ ಮಾಡಿದ್ದರು. ಸ್ತ್ರೀ ವೇಷಗಳನ್ನೂ ನಿರ್ವಹಿಸಿದರು.(ಮೊದಲ ಸ್ತ್ರೀ ವೇಷ ತಿರುಪತಿ ಕ್ಷೇತ್ರ ಮಹಾತ್ಮೆ ಪ್ರಸಂಗದ ಲಕ್ಷ್ಮಿ). ಬಳಿಕ 4 ವರ್ಷಗಳ ಕಾಲ ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ಪುಂಡುವೇಷ, ಸ್ತ್ರೀ ವೇಷಧಾರಿಯಾಗಿ ತಿರುಗಾಟ. ಬಾಲೆ ನಾಗಮ್ಮ ಪ್ರಸಂಗದ ಕಸೆ ಸ್ತ್ರೀ ವೇಷವಾದ ದೇವಮ್ಮ ಎಂಬ ಪಾತ್ರ ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು.

ಬಳಿಕ 4 ವರ್ಷ ಅರುವ ನಾರಾಯಣ ಶೆಟ್ರ ಸಂಚಾಲಕತ್ವದ ಅರುವ ಮೇಳದಲ್ಲಿ ಕಲಾಸೇವೆ. ಅಭಿಮನ್ಯು, ಬಬ್ರುವಾಹನ, ಚಂದ್ರಮತಿ, ಗುಣಸುಂದರಿ, ದಮಯಂತಿ ಅಲ್ಲದೆ ತುಳು ಪ್ರಸಂಗಗಳಲ್ಲಿ ಅನೇಕ ಪಾತ್ರಗಳನ್ನೂ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ಸುಂಕದಕಟ್ಟೆ ಮೇಳದಲ್ಲಿ ಮುಳಿಯಾಲ ಭೀಮ ಭಟ್ಟರೂ ಪುತ್ತೂರು ಮೇಳದಲ್ಲಿ ಮೂಡಬಿದಿರೆ ಮಾಧವ ಶೆಟ್ರೂ ಮಾತುಗಾರಿಕೆಯನ್ನು ಇವರಿಗೆ ಹೇಳಿಕೊಡುತ್ತಿದ್ದರು. ತದನಂತರ ಶ್ರೀ ದಾಸಪ್ಪ ರೈಗಳ ನೇತೃತ್ವದ ಕುಂಬಳೆ ಮೇಳದಲ್ಲಿ ಕಥಾನಾಯಕನ ಪಾತ್ರಗಳನ್ನೂ ಮಾಡುತ್ತಾ ವ್ಯವಸಾಯ. ಆಗ ಖ್ಯಾತ ಕಲಾವಿದ ಶ್ರೀ ಡಿ. ಮನೋಹರ ಕುಮಾರ್ ‘ಖಳನಾಯಕ’ ಪಾತ್ರಗಳನ್ನು ಮಾಡುತ್ತಿದ್ದರಂತೆ. ನಂತರ 1 ವರ್ಷ ಕುಬಣೂರು ಶ್ರೀಧರ ರಾಯರು ನಡೆಸುತ್ತಿದ್ದ ಪೇಜಾವರ ಮೇಳದಲ್ಲಿ 1 ತಿರುಗಾಟ. ಬಳಿಕ ಬಪ್ಪನಾಡು ಮತ್ತು ಕೂಡ್ಲು ಮೇಳದಲ್ಲಿ ತಲಾ 1 ವರ್ಷದ ವ್ಯವಸಾಯ.

ಮುಂದಿನ ವರ್ಷ ಕಟೀಲು 1ನೇ ಮೇಳಕ್ಕೆ 2ನೇ ಪುಂಡುವೇಷಧಾರಿಯಾಗಿ ಆಯ್ಕೆ. 4 ವರ್ಷಗಳ ಕಾಲ ವ್ಯವಸಾಯ. ಈ ಸಂದರ್ಭ ಕುಬಣೂರು ಶ್ರೀಧರ ರಾಯರು ಭಾಗವತರಾಗಿದ್ದರು. ಮದ್ದಳೆಗಾರ ಮಿಜಾರು ಮೋಹನ ಶೆಟ್ಟಿಗಾರ್, ಪುತ್ತೂರು ಕೃಷ್ಣ ಭಟ್, ಮುಂಗಿಲ ಕೃಷ್ಣ ಭಟ್, ಸಂಪಾಜೆ ಶೀನಪ್ಪ ರೈ, ಸುಣ್ಣಂಬಳ ವಿಶ್ವೇಶ್ವರ ಭಟ್, ಅಜಾರು ಉಮೇಶ ಶೆಟ್ಟಿ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಮೊದಲಾದವರ ಒಡನಾಟದಲ್ಲಿ ತಿರುಗಾಟ ಮಾಡಿದ್ದರು. 1987ರಲ್ಲಿ ವಿವಾಹ. ವಿವಾಹದ ಬಳಿಕ ಮೇಳ ಬಿಟ್ಟು 9 ವರ್ಷ ಹುಟ್ಟೂರು ನೆಲ್ಯಾಡಿಯಲ್ಲಿ ದಿನಸಿ ವ್ಯಾಪಾರ ನಡೆಸಿದ್ದರು. ಬಳಿಕ ಮಂಗಳೂರಿಗೆ ಬಂದು ನೆಲೆಸಿದರು.(ವಾಮಂಜೂರು) ಪುಷ್ಪರಾಜ ಜೋಗಿಯವರ ಭಾವ (ಪತ್ನಿಯ ಅಣ್ಣ) ಮಂಗಳೂರಲ್ಲಿ ಉದ್ಯಮಿಯಾಗಿದ್ದು ಅವರಿಗೆ ಸಹಕಾರಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಬಳಿಕ ಮತ್ತೆ ಕಟೀಲು ಮೇಳಕ್ಕೆ. 1ನೇ ಮೇಳದಲ್ಲಿ 5 ವರ್ಷ, 6ನೇ ಮೇಳದಲ್ಲಿ 2 ವರ್ಷ, ಪ್ರಸ್ತುತ 2 ವರ್ಷಗಳಿಂದ 4ನೇ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ನೆಲ್ಯಾಡಿ ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿಯನ್ನು ನೀಡಿದ್ದಾರೆ. ಅಧ್ಯಾಪಕ, ಹವ್ಯಾಸೀ ಕಲಾವಿದ ಶ್ರೀ ಗುಡ್ಡಪ್ಪ ಬಲ್ಯರು ಸಹಕರಿಸಿದ್ದರು. ಕೊಕ್ಕಡ ಸಮೀಪದ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಳದಲ್ಲೂ ತರಬೇತಿ ನೀಡಿದ್ದರು. ಅಲ್ಲದೆ ಈ ಎರಡೂ ಕಡೆ ತನ್ನಿಂದ ಕಲಿತ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗಳನ್ನೂ ಏರ್ಪಡಿಸಿದ್ದರು. ಪುಷ್ಪರಾಜ್ ಜೋಗಿಯವರು ನೆಲ್ಯಾಡಿಯಲ್ಲಿರುವಾಗ ತಾಳಮದ್ದಲೆಗಳಲ್ಲೂ ಭಾಗವಹಿಸಿದ್ದರು. ಬಲ್ಯ ಪಡುಬೆಟ್ಟು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಗೋಪಾಲಕೃಷ್ಣ ಶಗ್ರಿತ್ತಾಯ ಇವರ ಸಹಕಾರವೂ ಸಿಕ್ಕಿತ್ತು.(ಇವರು ತಾಳಮದ್ದಳೆ ಅರ್ಥಧಾರಿಯಾಗಿದ್ದರು.) 

ಶ್ರೀ ಪುಷ್ಪರಾಜ್ ಜೋಗಿಯವರು ವೃತ್ತಿ ಬದುಕಿನಲ್ಲಿಯೂ ಸಂಸಾರಿಕವಾಗಿಯೂ ತೃಪ್ತರು. ಪತ್ನಿ ಸಾವಿತ್ರಿ. ಪುಷ್ಪರಾಜ್, ಸಾವಿತ್ರಿ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಸಾಗರ್ MSW ಮಾಡಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಕಿರಿಯ ಪುತ್ರ ಸಂದೇಶ್ ಪದವಿ ಅಂತಿಮ ವರ್ಷದ ವಿದ್ಯಾರ್ಥಿ. ಅವನಿಗೆ ಉಜ್ವಲ ಭವಿಷ್ಯವಿರಲಿ. ಶ್ರೀ ಪುಷ್ಪರಾಜ್ ಶೆಟ್ಟಿಗಾರರಿಂದ ಇನ್ನಷ್ಟು ಕಲಾಸೇವೆ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ.

ಲೇಖಕ: ರವಿಶಂಕರ್ ವಳಕ್ಕುಂಜ 

ಫೋಟೋ: ರಾಧಾಕೃಷ್ಣ ಭಟ್,ಕೋಂಗೋಟ್ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments