Saturday, January 18, 2025
Homeಯಕ್ಷಗಾನಪೆರ್ನಡ್ಕ ಶ್ಯಾಮ ಭಟ್ - ಯಕ್ಷಗಾನ ಕಲಾವಿದ, ವೇಷಭೂಷಣ ಮತ್ತು ಬಣ್ಣಗಾರಿಕೆಯ ಕುಶಲಿಗ

ಪೆರ್ನಡ್ಕ ಶ್ಯಾಮ ಭಟ್ – ಯಕ್ಷಗಾನ ಕಲಾವಿದ, ವೇಷಭೂಷಣ ಮತ್ತು ಬಣ್ಣಗಾರಿಕೆಯ ಕುಶಲಿಗ

ಯಕ್ಷಗಾನವೆಂಬುದು ಕರಾವಳಿ ಮತ್ತು ಮಲೆನಾಡಿನ ಎಷ್ಟೋ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಜನಪ್ರಿಯತೆಯನ್ನು ಹೊಂದಿದ್ದರೂ ಈ ಕಲೆಯಲ್ಲಿ ನೆಲೆ ಕಂಡು ಪ್ರಭುತ್ವವನ್ನು ಸಾಧಿಸಿದ ಹಾಗೂ ಪ್ರಚಾರವನ್ನು ಬಯಸದೆ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುವ ಅದೆಷ್ಟೋ ಕಲಾವಿದರೂ ಕಲಾಪೋಷಕರೂ ನಮ್ಮ ನಡುವೆ ಇದ್ದಾರೆ. ಇವರದು ಒಂದು ರೀತಿಯ ಮೌನ ತಪಸ್ಸು. ಪ್ರಚಾರ ಆಡಂಬರಗಳಿಲ್ಲದ ಕಲಾ ಕಾಯಕ. ಅಂತಹವರನ್ನು ಗುರುತಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.  

ಬಹುಶಃ ಪೆರ್ನಡ್ಕ ಶ್ರೀ ಶ್ಯಾಮ ಭಟ್ಟರ ಹೆಸರನ್ನು ತುಂಬಾ ಮಂದಿ ಕೇಳಿರಬಹುದು.  ಪೆರ್ನಡ್ಕ ಶ್ಯಾಮ ಭಟ್ ಅವರಿಗೆ ಕಲಾಸಕ್ತಿ ಮೊಳೆತುದು ಸಣ್ಣ ವಯಸ್ಸಿನಲ್ಲಿಯೇ ಆದರೂ ಅವರು ತಮ್ಮ ಮೂವತ್ತೈದರ ಹರೆಯವನ್ನು ದಾಟಿದ ಮೇಲೆಯೇ ಯಕ್ಷಗಾನದ ನಾಟ್ಯ ಕಲಿತವರು.  

ಶ್ರೀ ಭೀಮ ಭಟ್ ಮತ್ತು ಶ್ರೀಮತಿ ವೆಂಕಟೇಶ್ವರಿ ಅವರ ಪ್ರಥಮ ಪುತ್ರನಾಗಿ ಪೆರ್ನಡ್ಕದಲ್ಲಿ 1954 ಆಗಸ್ಟ್ 28ರಂದು ಜನಿಸಿದ ಪೆರ್ನಡ್ಕ ಶ್ಯಾಮ ಭಟ್ಟರು ನೀರ್ಪಾಜೆ, ಕನ್ಯಾನ ಮತ್ತು ಉಜಿರೆಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಶ್ಯಾಮ ಭಟ್ಟರ ಅಜ್ಜ (ತಾಯಿಯ ತಂದೆ) ಮಾದಕಟ್ಟೆ ಕೃಷ್ಣ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಭಾಗವತರಾಗಿದ್ದರು. ಒಟ್ಟು ಆರು ಮಂದಿ ಮಕ್ಕಳಲ್ಲಿ ಮೊದಲನೆಯವರಾದ ಶ್ಯಾಮ ಭಟ್ಟರಿಗೆ ನಾಲ್ಕು ಸಹೋದರಿಯರು. ಆಮೇಲೆ ಕೊನೆಯ ಸಹೋದರರಾದ ಶ್ರೀ ರಾಜಗೋಪಾಲ ಕನ್ಯಾನ ಅವರು ಯಕ್ಷಗಾನ ಕಲಾವಿದರೂ, ಸಾಹಿತಿಯೂ, ಯಕ್ಷಗಾನ ವಿಮರ್ಶಕರೂ, ಲೇಖಕರೂ, ಪ್ರಕಾಶಕರೂ, ಹಲವಾರು ಪುಸ್ತಕಗಳನ್ನು ಹೊರತಂದ ಸಂಪಾದಕರೂ ಆಗಿ ಗುರುತಿಸಲ್ಪಟ್ಟಿದ್ದಾರೆ.

ಪೆರ್ನಡ್ಕ ಶ್ಯಾಮ ಭಟ್ಟರಿಗೆ ಸಣ್ಣ ವಯಸ್ಸಿನಲ್ಲಿಯೇ ಆಟ ನೋಡುವ ಆಸಕ್ತಿಯಿತ್ತು. ಅತಿ ಸಣ್ಣ ವಯಸ್ಸಿನಲ್ಲಿಯೇ ಬಣ್ಣದ ಕುಟ್ಯಪ್ಪು ಅವರ ಬಣ್ಣದ ವೇಷಗಳನ್ನು ನೋಡಿ ಯಕ್ಷಗಾನ ಲೋಕದ ಅದ್ಭುತ ಮತ್ತು ಬೆಡಗನ್ನು ನೋಡಿ ಬೆರಗಾದರು. ಆಟ ನೋಡಿ ಆಸಕ್ತಿಯಿತ್ತೇ ವಿನಃ ಅದರಲ್ಲಿ ಭಾಗವಹಿಸುತ್ತೇನೆಂಬ ಕಲ್ಪನೆ ಅವರಿಗಿರಲಿಲ್ಲ. ಹೀಗೆ ಯಕ್ಷಗಾನದ ಆಸಕ್ತಿ ಬೆಳೆದು ಬಂತು. ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಶ್ಯಾಮ ಭಟ್ಟರು ಉದ್ಯೋಗ ನಿಮಿತ್ತ ಬೆಂಗಳೂರು ನಗರವನ್ನು ಸೇರಿದ್ದರು.

ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದರು. ಕಂಪೆನಿಯ ಕೆಲಸ ಮತ್ತು ಜೀವನ ನಿರ್ವಹಣೆಗಳ ನಡುವೆ ಯಕ್ಷಗಾನವು ಆ ಕಾಲದಲ್ಲಿ ಅಷ್ಟಾಗಿ ಶ್ಯಾಮ ಭಟ್ಟರ ಮನಸ್ಸಿನಲ್ಲಿ ಆಕ್ರಮಿಸಲಿಲ್ಲ. ಆದರೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬಡಗು ತಿಟ್ಟಿನ ಆಟಗಳನ್ನು ನೋಡಿ ಅದಕ್ಕೆ ಆಕರ್ಷಿತರಾದರು. ಚಿಟ್ಟಾಣಿ, ಕಾಳಿಂಗ ನಾವಡ ಮತ್ತು ಮಂಟಪ ಪ್ರಭಾಕರ ಉಪಾಧ್ಯಾಯರ ವೇಷಗಳಿಂದ ಆಕರ್ಷಿತರಾಗಿದ್ದರು. ಒಂದು ದಿನ ಬೆಂಗಳೂರಿನಲ್ಲಿ ನಡೆದ ತೆಂಕುತಿಟ್ಟಿನಲ್ಲಿ  ಪ್ರದರ್ಶನವೊಂದರಲ್ಲಿ ಬಣ್ಣದ ಮಹಾಲಿಂಗ ಅವರ ಭೀಮನ ವೇಷವನ್ನೂ ಬಣ್ಣಗಾರಿಕೆಯನ್ನೂ ಕಂಡು ಬೆರಗಾಗಿದ್ದರು.

ಬೆಂಗಳೂರಿನಲ್ಲಿ ಬಡಗು ಮತ್ತು ತೆಂಕು ತಿಟ್ಟುಗಳೆರಡರಲ್ಲೂ ಪರಂಪರೆ ಮತ್ತು ಆಧುನಿಕತೆಯ ಪ್ರದರ್ಶನಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಿದ್ದರು. ಕೆಲವು ವರ್ಷಗಳ ನಂತರ ಅಂದರೆ ತಮ್ಮ 35ನೆಯ ವಯಸ್ಸಿನಲ್ಲಿ ಶ್ಯಾಮ ಭಟ್ಟರು ಅನಿವಾರ್ಯವಾಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಊರಿನಲ್ಲಿ ಕೃಷಿ ಕಾರ್ಯಗಳನ್ನು ನೋಡಿಕೊಳ್ಳಲು ಬರಬೇಕಾಗಿ ಬಂತು. ಈ ನಂತರವೇ ಇವರ ನೈಜ ಯಕ್ಷಗಾನಾಸಕ್ತಿ ಅರಳತೊಡಗಿತು. ಕಲಾವಿದನಾಗಿ ತಮ್ಮ ಹೊಸ ಪಾತ್ರವನ್ನು ಪ್ರಕಟಪಡಿಸತೊಡಗಿದರು.

ನಾಟ್ಯ ಕಲಿಯಬೇಕೆಂಬ ಆಸಕ್ತಿ ಉತ್ಸಾಹಗಳು ಬಂದುವು. ಊರಿನ ನೀರ್ಪಾಜೆ ಶಾಲೆಯ ವಾರ್ಷಿಕೋತ್ಸವದ ಯಕ್ಷಗಾನ ಪ್ರದರ್ಶನಕ್ಕೋಸ್ಕರ ಪೊಳ್ಳಕಜೆ ಗೋಪಾಲಕೃಷ್ಣ ಭಟ್ ಅವರಿಂದ ಯಕ್ಷಗಾನದ ನಾಟ್ಯದ ಬಾಲಪಾಠ ಆರಂಭವಾಯಿತು. ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಥಮ ಬಾರಿ ದೇವಿ ಮಹಾತ್ಮೆಯಲ್ಲಿ ಸುಗ್ರೀವನಾಗಿ ರಂಗ ಪ್ರವೇಶ ಮಾಡಿದರು. ಆಮೇಲೆ ಕುಡಾನ ಗೋಪಾಲಕೃಷ್ಣ ಭಟ್ಟರಿಂದ ಬಣ್ಣಗಾರಿಕೆಯನ್ನೂ ಬಾಯಾರು ರಮೇಶ ಶೆಟ್ಟಿಯವರಿಂದ ಹೆಚ್ಚಿನ ನಾಟ್ಯಾಭ್ಯಾಸವನ್ನೂ ಮಾಡಿದರು.

ಆಮೇಲೆ ಪೈವಳಿಕೆ ಗಣೇಶ ಕಲಾ ವೃಂದದ ಶ್ರೀ ದೇವಕಾನ ಕೃಷ್ಣ ಭಟ್ಟರ ತಂಡದಲ್ಲಿ ಹೆಚ್ಚಿನ ಬಣ್ಣಗಾರಿಕೆಯನ್ನು ಕಲಿಯಲು ತಿರುಗಾಟ ನಡೆಸಿದರು. ಅಲ್ಲಿ ಬಣ್ಣಗಾರಿಕೆಯ ಸಂಪೂರ್ಣ ಅನುಭವ ಅವರಿಗಾಯಿತು. ಯಕ್ಷಗಾನ ಪ್ರದರ್ಶನಗಳಿಗೆ ವೇಷಭೂಷಣಗಳನ್ನು ಒದಗಿಸುವ ದೇವಕಾನದವರ ತಂಡದವರಿಗೆ ಕೆಲವೊಮ್ಮೆ ದಿನವೊಂದರಲ್ಲಿ ಒಂದಕ್ಕಿಂತ ಹೆಚ್ಚು ಆಟಗಳಿದ್ದಲ್ಲಿ ಪ್ರಸಾಧನ ತಂಡದ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಹೋಗುತ್ತಿದ್ದರು.

ಹೀಗೆ ದೇವಕಾನ ಕೃಷ್ಣ ಭಟ್ಟರ ವೇಷಭೂಶಣ ಮತ್ತು ಪ್ರಸಾಧನ ತಂಡದಲ್ಲಿ ಪ್ರಸಾಧನ ಕಲಾವಿದರಾಗಿಯೂ ವೇಷಧಾರಿಯಾಗಿಯೂ ಹಲವಾರು ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿದರು. ಪೆರ್ನಡ್ಕ ಶ್ಯಾಮ ಭಟ್ಟರು ಹೆಚ್ಚಾಗಿ ಸಾತ್ವಿಕ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು. ಹಂಸಧ್ವಜ, ಮಯೂರಧ್ವಜ, ಹಾಸ್ಯ, ದೇವೀಮಹಾತ್ಮೆಯ ದೇವಿ ಮೊದಲಾದ ಸ್ತ್ರೀ ಪಾತ್ರಗಳು, ಹಾಗೂ ಅನಿವಾರ್ಯ ಸಂದರ್ಭದಲ್ಲಿ ಯಾವುದೇ ವೇಷಗಳನ್ನು ಮಾಡಬಲ್ಲ ಕಲಾವಿದರು ಶ್ಯಾಮ ಭಟ್ಟರು.

ಹೆಚ್ಚಿನ ಕಿರೀಟ ವೇಷಗಳನ್ನು ನಿರ್ವಹಿಸಿದ ಅನುಭವ ಇರುವ ಇವರು ಎಷ್ಟೋ ಪ್ರದರ್ಶನಗಳಲ್ಲಿ ಕಲಾವಿದರ ಅನುಪಸ್ಥಿತಿಯಲ್ಲಿ ಅನಿವಾರ್ಯವಾಗಿ ಪ್ರಮುಖ ವೇಷಗಳನ್ನು ನಿರ್ವಹಿಸಿದ್ದಾರೆ. ವೇಷಧಾರಣೆಯಲ್ಲಿ ಹಾಗೂ ಬಣ್ಣಗಾರಿಕೆಯಲ್ಲಿರುವ ಹಲವಾರು ಸೂಕ್ಷ್ಮತೆಗಳನ್ನು ತಿಳಿಸುವ ಶ್ಯಾಮ ಭಟ್ಟರು ಆ ಕ್ಷೇತ್ರದಲ್ಲಿ ಕಲಾವಿದರು ಅನುಸರಿಸಬೇಕಾದ ಕ್ರಮಗಳನ್ನು ತಿಳಿ ಹೇಳುತ್ತಾರೆ. ವೇಷವು ಹಗುರವಾಗಬೇಕೆಂದು ಅನುಸರಿಸುವ ಕ್ರಮಗಳಿಂದ ಆಗಬಹುದಾದ ತೊಡಕುಗಳನ್ನೂ ವಿವರಿಸುತ್ತಾರೆ. ಅಲ್ಲದೆ ಕನ್ಯಾನದ ಶ್ರೀ ವೀರಾಂಜನೇಯ ಯಕ್ಷಗಾನ ಕಲಾಸಂಘ, ಶಿರಂಕಲ್ಲು ಇದರ ಸಂಚಾಲಕರಾಗಿ ಸುಮಾರು 10ರಿಂದ 12 ವರ್ಷಗಳ ಕಾಲ ಮುನ್ನಡೆಸಿ, ಮರೆತು ಹೋಗಿದ್ದ ಹಲವಾರು ಪ್ರಸಂಗಗಳನ್ನು ಪ್ರಯೋಗಿಸಿ, ತೆಂಕುತಿಟ್ಟಿನ ಪರಂಪರೆಯ ಆಟಗಳ ಪ್ರದರ್ಶನವನ್ನು ಏರ್ಪಡಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ.

ನೀರ್ಪಾಜೆ ಮತ್ತು ಕನ್ಯಾನದ ಶಾಲೆಗಳಲ್ಲಿ ನುರಿತ ಕಲಾವಿದರಿಂದ ಯಕ್ಷಗಾನದ ತರಗತಿಗಳನ್ನು ನಡೆಸಿ ಹಲವಾರು ಕಲಾವಿದರನ್ನು ತಯಾರು ಮಾಡಿದ್ದಾರೆ. ಇಲ್ಲಿ ಕಲಿತ ಕೆಲವು ಮಂದಿ ಕಲಾವಿದರು ಇಂದು ಮೇಳಗಳಲ್ಲಿ ತಿರುಗಾಟ ಮಾಡುತ್ತಿದ್ದಾರೆ. 

ಪತ್ನಿ ಶ್ರೀಮತಿ ಪಾರ್ವತಿ ಜೊತೆಯಲ್ಲಿ ಪೆರ್ನಡ್ಕದಲ್ಲಿ ವಾಸಿಸುತ್ತಿರುವ ಪೆರ್ನಡ್ಕ ಶ್ಯಾಮ ಭಟ್ಟರಿಗೆ ಇಬ್ಬರು ಪುತ್ರರು. ಮೊದಲ ಪುತ್ರ ಭೀಮ ಭಾರದ್ವಾಜ್ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕ. ವೇಷಧಾರಿಯಾಗಿ ಮತ್ತು ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದ. ಸೊಸೆ ಗಾಯತ್ರಿ.  ದ್ವಿತೀಯ ಪುತ್ರ ಹೃಷಿಕೇಷ ಯೋಗ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುದು ಮಾತ್ರವಲ್ಲದೆ ಯಕ್ಷಗಾನ ವೇಷಧಾರಿಯಾಗಿಯೂ ಮುನ್ನಡೆಯುತ್ತಿದ್ದಾರೆ. ಶ್ಯಾಮ ಭಟ್ಟರು ಉತ್ತಮ ಲೇಖಕರೂ ಹೌದು. ಅವರು ಬರೆದ ಹಲವಾರು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಪ್ರಸ್ತುತ ಯಕ್ಷಗಾನ ತಿರುಗಾಟಗಳಿಂದ ದೂರ ಉಳಿದಿರುವ ಪೆರ್ನಡ್ಕ ಶ್ಯಾಮ ಭಟ್ಟರು ಕೃಷಿ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments