ಎಂದಿನಂತೆಯೇ ಅಂದೂ ಕೂಡ ರಾಜಾ ವಿಕ್ರಮಾದಿತ್ಯನು ವೇಗವಾಗಿ ನಡೆಯುತ್ತಾ ತನ್ನ ಗಮ್ಯ ಸ್ಥಳವಾದ ನಿಬಿಡಾರಣ್ಯ ಪ್ರದೇಶವನ್ನು ತಲುಪಿದನು. ತಾನು ಬರಬೇಕಾದ ಜಾಗ ಇದೇ ಇರಬಹುದೇ ಎಂದು ಸಂಶಯ ದೃಷ್ಟಿಯಿಂದ ಅತ್ತಿತ್ತ ನೋಡುತ್ತಾ ಸ್ಥಂಭೀಭೂತನಾಗಿ ಒಂದೆಡೆಯಲ್ಲಿ ನಿಂತನು.
‘ಅರೇ .. ಯಾವಾಗಲೂ ಬರುತ್ತಿದ್ದ ಜಾಗವಿದು ಅಲ್ಲವೇ’ ಎಂದು ವಿಸ್ಮಯಭರಿತ ಕಣ್ಣುಗಳನ್ನು ಸುತ್ತಲೂ ತಿರುಗಿಸುತ್ತಾ ದೃಷ್ಟಿ ಹಾಯಿಸಿದವನಿಗೆ ದೂರದಲ್ಲಿದ್ದ ಬೃಹದಾಕಾರದಲ್ಲಿದ್ದ ಮರವೊಂದು ಕಾಣಿಸಿತು. ತಲೆಗೆ ತಾಗುವಂತೆ ದೊಡ್ಡದಾದ ರಣಹದ್ದೊಂದು ಹಾರುತ್ತ ಹೋದಾಗ ವಿಕ್ರಮಾದಿತ್ಯ ಬೆಚ್ಚಿದರೂ ವಿಚಲಿತನಾಗಲಿಲ್ಲ. ಆಕ್ರಮಣಕ್ಕೆ ಬರುತ್ತಿದ್ದ ಅವುಗಳನ್ನು ತನ್ನ ಹರಿತವಾದ ಕತ್ತಿಯಿಂದ ನಿವಾರಿಸುತ್ತಾ ಭೂತದಂತೆ ನಿಂತಿದ್ದ ಆ ದೊಡ್ಡ ಮರದ ಸಮೀಪ ಬಂದವನೇ ಕತ್ತೆತ್ತಿ ಮೇಲಕ್ಕೆ ನೋಡಿದ.
ಎತ್ತರವಾದ ಕೊಂಬೆಯಲ್ಲಿ ಆ ಶವವು ನೇತಾಡುತ್ತಿತ್ತು. ಅವನು ನಿರೀಕ್ಷಿಸುತ್ತಿದ್ದ ಶವ ಅದೇ ಆಗಿತ್ತು. ಅತೀ ಕುಶಲಿಗನಂತೆ ಸರಾಗವಾಗಿ ಚಕಚಕನೆ ಮರವನ್ನೇರುತ್ತಾ ಆ ಶವವನ್ನು ಕೆಳಗಿಳಿಸಿದ. ಭಾರವಾಗಿದ್ದ ಆ ಶವವನ್ನು ತನ್ನ ಹೆಗಲಿಗೇರಿಸಿ ಕಾಡಿನಿಂದ ನಾಡಿನ ದಾರಿಯಾಗಿ ಮೌನವಾಗಿ ನಡೆಯತೊಡಗಿದ. ಶವವನ್ನು ಹೊತ್ತುಕೊಂಡು ರಾಜಾ ವಿಕ್ರಮಾದಿತ್ಯನು ಸ್ವಲ್ಪ ದೂರ ಬಂದಿರಬಹುದು. ಅಷ್ಟರಲ್ಲಿ ಆ ಶವದೊಳಗಿದ್ದ ಬೇತಾಳವು ಮಾತಾಡತೊಡಗಿತು.
“ಎಲೈ ರಾಜಾ ವಿಕ್ರಮಾದಿತ್ಯನೇ, ಎಷ್ಟು ಬಾರಿ ನಿನ್ನ ಪ್ರಯತ್ನದಲ್ಲಿ ಸೋತು ಹೋದರೂ ಮತ್ತೆ ಮತ್ತೆ ಬಂದು ನನ್ನನ್ನು ಹೆಗಲಿಗೇರಿಸಿ ನಡೆಯುವ ನಿನ್ನ ಕರ್ತೃತ್ವ ಶಕ್ತಿ, ಬದ್ಧತೆಗಳನ್ನು ಮೆಚ್ಚಲೇ ಬೇಕು. ಒಂದು ದೇಶದ ರಾಜನಾಗಿದ್ದೂ ಶವವೊಂದನ್ನು ಹೊತ್ತುಕೊಂಡು ನೀನು ಮಾಡುತ್ತಿರುವ ಈ ಕೆಲಸವನ್ನು ಕಂಡು ನನಗೆ ನಗೆಯೂ ಬರುತ್ತದೆ, ಮರುಕವೂ ಉಂಟಾಗುತ್ತಿದೆ. ನಿನ್ನ ಕೆಲಸ ಸಾಧಿಸುವಲ್ಲಿ ನೀನು ಮಾಡುತ್ತಿರುವ ಬಗೆ ಬಗೆಯ ಪಟ್ಟುಗಳನ್ನು ಹಾಗೂ ಕಸರತ್ತುಗಳನ್ನು ಕಂಡು ನನಗೆ ಯಕ್ಷಗಾನದ ಚಾಲು ಕುಣಿತಗಳ ನೆನಪು ಬರುತ್ತಿದೆ. ದಾರಿಯುದ್ದಕ್ಕೂ ನನ್ನನ್ನು ಹೊತ್ತುಕೊಂಡು ಹೋಗುತ್ತಿರುವ ಶ್ರಮ ನಿನ್ನ ಅರಿವಿಗೆ ಬಾರದಂತೆ ಅಂತಹಾ ಸ್ವಾರಸ್ಯಕರವಾದ ಕಥೆಯೊಂದನ್ನು ಹೇಳುತ್ತೇನೆ. ಕೇಳು.
“ಪರಶುರಾಮ ಸೃಷ್ಟಿ ಎಂದು ಕರೆಯಲ್ಪಡುತ್ತಿದ್ದ ನಾಡಿನಲ್ಲಿ ಹಾಗೂ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಬಹಳ ಪ್ರಸಿದ್ಧಿಪಡೆದ ಕಲೆಯೊಂದಿತ್ತು. ಯಕ್ಷಗಾನ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಕಲೆಯು ಗಾಯನ, ವಾದನ, ನರ್ತನ, ಅಭಿನಯಗಳೇ ಮೊದಲಾದ ವಿಭಿನ್ನ ರೀತಿಯ ವಿಭಾಗಗಳಿಂದ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿತ್ತು. ಹೆಚ್ಚಿನ ವಿಭಾಗಗಳನ್ನು ಗುರುತಿಸಬಹುದಾಗಿದ್ದರೂ ಸಾಧಾರಣವಾಗಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎಂಬ ಎರಡು ವಿಭಾಗಗಳೇ ಇದರಲ್ಲಿ ಪ್ರಮುಖವಾದುವು. ಈ ಕಲೆಯ ತೆಂಕು ಮತ್ತು ಬಡಗು ತಿಟ್ಟಿನಲ್ಲಿ ಸಮಾನಾಸಕ್ತಿಯನ್ನು ಬೆಳೆಸಿಕೊಂಡ ಹುಡುಗನೊಬ್ಬ ಎರಡೂ ವಿಭಾಗಗಳ ನಾಟ್ಯವನ್ನು ಕರಗತ ಮಾಡಿಕೊಳ್ಳುವೆಂದು ಹೊರಟ.
ತೆಂಕು ಮತ್ತು ಬಡಗು ಎಂಬ ಈ ತಾರತಮ್ಯ ಯಾಕೆ? ಎರಡನ್ನೂ ಕಲಿತು ಅವೆರಡನ್ನೂ ಸಮನ್ವಯಗೊಳಿಸಬಾರದೇಕೆ ಎಂಬ ಆಲೋಚನೆಯೂ ಆ ಹುಡುಗನಿಗೆ ಬಂತು. ಮೊದಲೇ ಹುಡುಗಾಟಿಕೆಯ ಬಿಸಿರಕ್ತ. ಅವೆರಡೂ ಯಕ್ಷಗಾನವೇ ಆದರೂ ಒಂದೊಕ್ಕೊಂದು ವಿಭಿನ್ನವಾದ ರಂಗಕ್ರಮಗಳು ಎಂಬ ಸಾಮಾನ್ಯ ವಿಷಯವನ್ನೂ ಅರ್ಥ ಮಾಡಿಕೊಳ್ಳಲಾರದೆ ಹೋದ ಹುಡುಗನ ತಲೆಯಲ್ಲಿ ಚಿತ್ರ ವಿಚಿತ್ರವಾದ ಆಲೋಚನೆಗಳು ಮನೆಮಾಡಿತ್ತು. ಯಕ್ಷಗಾನದ ಎರಡೂ ಪ್ರಾಕಾರಗಳನ್ನು ಒಂದು ಮಾಡಿದ ಕೀರ್ತಿ ಯಶಸ್ಸುಗಳು ಮುಂದಕ್ಕೆ ನನಗೆ ಬರಬಹುದು. ಯಕ್ಷಗಾನದ ಚರಿತ್ರೆಯಲ್ಲಿ ನನ್ನ ಹೆಸರು ಮುಂದಿನ ಪೀಳಿಗೆಯವರಿಗೆ ಆದರ್ಶವಾಗಿ ನಿಲ್ಲಬಹುದು ಎಂಬಂತಹಾ ಹುಚ್ಚು ಹುಚ್ಚಾದ ಆಲೋಚನೆಗಳು.
ಎರಡೂ ವಿಭಾಗಕ್ಕೂ ಬೇರೆ ಬೇರೆ ಗುರುಗಳಂತೂ ಸಿಕ್ಕಿದರು. “ಮೊದಲು ಯಾವುದಾದರೊಂದನ್ನು ಕಲಿಯುವಿಯಂತೆ, ಎರಡನ್ನೂ ಒಟ್ಟಿಗೆ ಬೇಡ, ಆಮೇಲೆ ಮತ್ತೊಂದನ್ನು ಕಲಿತರಾಯಿತು” ಎಂದು ತೆಂಕು ಹಾಗೂ ಬಡಗಿನ ಗುರುಗಳಿಬ್ಬರೂ ಅವನಿಗೆ ಸಲಹೆ ನೀಡಿದರು. ಆದರೆ ಹುಡುಗನಿಗೆ ಎರಡನ್ನೂ ಕಲಿಯುವೆನೆಂಬ ಹಠ. ಸರಿ. ಪಾಠ ಆರಂಭವಾಯಿತು. ಹುಡುಗ ಬಹಳ ಚುರುಕಾಗಿದ್ದ. ಆಸಕ್ತಿಯೂ ಅತೀವವಾಗಿದ್ದುದರಿಂದ ಬಹಳ ಬೇಗನೆ ಕಲಿತ. ಗುರುಗಳಿಬ್ಬರಿಗೂ ಹುಡುಗನ ಪ್ರತಿಭೆ ಮತ್ತು ಕಲಿಕಾ ಸಾಮರ್ಥ್ಯವನ್ನು ಕಂಡು ಆಶ್ಚರ್ಯವಾಯಿತು. ಅದರಲ್ಲೂ ವಿಶೇಷವಾಗಿ ಬಡಗು ತಿಟ್ಟಿನ ಚಾಲು ಕುಣಿತದಲ್ಲಿ ಅವನ ಪ್ರತಿಭೆಯನ್ನು ಕಂಡು ಗುರುಗಳು ದಂಗಾಗಿದ್ದರು. ನೂರಕ್ಕಿಂತಲೂ ಹೆಚ್ಚು ಸುತ್ತು ಹಾರುವ ಆತನ ಶಕ್ತಿಯನ್ನು ಕಂಡು ತೆಂಕುತಿಟ್ಟಿನ ಗುರುಗಳೂ ಮೂಗಿನ ಮೇಲೆ ಬೆರಳಿಟ್ಟಿದ್ದರು.
ಆದರೆ ಇಷ್ಟೆಲ್ಲಾ ಸಾಧಿಸಲು ಆ ಹುಡುಗ ಬಹಳಷ್ಟು ಸಾಧನೆಯ ಶ್ರಮ ವಹಿಸಿದ್ದ. ಕ್ರಮೇಣ ವೇಷಧಾರಿಯಾಗಿ ರಂಗಪ್ರವೇಶ ಮಾಡಿದ ಆತ ಅತ್ಯಲ್ಪ ಸಮಯದಲ್ಲೇ ಎರಡೂ ತಿಟ್ಟುಗಳಲ್ಲಿಯೂ ಹೆಸರು ಮಾಡಿದ್ದ. ಎರಡೂ ತಿಟ್ಟುಗಳ ಗುರುಗಳು ಸಾರಿ ಸಾರಿ ಹೇಳಿದ ಕಾರಣದಿಂದ ಪ್ರಾರಂಭದಲ್ಲಿ ಆತ ಸಮನ್ವಯತೆಯ ಹೆಸರಿನಲ್ಲಿ ಒಂದಕ್ಕೊಂದು ಬೆರಕೆ ಮಾಡಲು ಹೋಗಲಿಲ್ಲ. ಹುಡುಗನು ಯುವಕನಾದ. ಒಳ್ಳೆಯ ಹೆಸರು ಬಂತು. ಪ್ರಸಿದ್ಧಿಗೆ ಬರುತ್ತಿದ್ದಂತೆ ಆ ಯುವ ಕಲಾವಿದ ಎರಡೂ ತಿಟ್ಟುಗಳಲ್ಲಿ ಬಗೆ ಬಗೆಯ ಪ್ರಯೋಗಗಳನ್ನು ರಂಗದಲ್ಲಿ ಮಾಡುವುದಕ್ಕೆ ಮುಂದಾದ.
ತೆಂಕು ತಿಟ್ಟಿನ ಪ್ರದರ್ಶನಗಳಲ್ಲಿ ಬಗೆ ಬಗೆಯ ಚಾಲು ಕುಣಿತಗಳನ್ನು ಪ್ರದರ್ಶನ ಮಾಡುವುದು ಮಾತ್ರವಲ್ಲದೆ ನೆಲದಲ್ಲಿ ಮಂಡಿಯೂರಿ ಸುತ್ತು ತಿರುಗುವ ರೀತಿಯನ್ನೂ ಪ್ರದರ್ಶಿಸುತ್ತಿದ್ದ. ಬಡಗುತಿಟ್ಟಿನ ಪ್ರದರ್ಶನದಲ್ಲಿ ನೂರಕ್ಕೂ ಹೆಚ್ಚು ಧಿಗಿಣಗಳನ್ನು ಹಾರಲು ಪ್ರಾರಂಭಿಸಿದ. ಪ್ರಾರಂಭದಲ್ಲಿ ಸೀಟಿ, ಚಪ್ಪಾಳೆಗಳು ಬಿದ್ದುವು. ಕೆಲವೊಂದು ವರ್ಗದ ಜನರು ಹೊಗಳಲು ಪ್ರಾರಂಭಿಸಿದರು. ಇದರಿಂದ ಉತ್ಸಾಹಗೊಂಡ ಆ ಯುವ ಕಲಾವಿದ ಇದನ್ನೇ ಎಲ್ಲಾ ಪ್ರದರ್ಶನಗಳಲ್ಲೂ ಮುಂದುವರಿಸತೊಡಗಿದ. ಆದರೆ ಕ್ರಮೇಣ ಇದರಿಂದ ವ್ಯತಿರಿಕ್ತ ಪರಿಣಾಮವೇ ಆಯಿತು.
ಎರಡೂ ತಿಟ್ಟಿನ ಹಿಮ್ಮೇಳದವರು ತಮ್ಮದಲ್ಲದ ಈ ಶೈಲಿಗೆ ಒಗ್ಗಿಕೊಳ್ಳಲಾರದೆ ಮುಜುಗರವನ್ನು ಅನುಭವಿಸಿದರು. ವಿದ್ವಾಂಸರ ಕಣ್ಣು ಕೆಂಪಗಾಯಿತು. ಪಜ್ಞಾವಂತ ಪ್ರೇಕ್ಷಕರು ಆಕ್ಷೇಪಿಸಿದರು. ಎಲ್ಲರೂ ಸಂಘಟಕರಿಗೆ ಒತ್ತಡ ತಂದರು. ಕ್ರಮೇಣ ಆತನನ್ನು ಪ್ರದರ್ಶನದಲ್ಲಿ ಭಾಗವಹಿಸುವುದನ್ನು ವಿರೋಧಿಸತೊಡಗಿದರು. ಎರಡೂ ತಿಟ್ಟುಗಳಲ್ಲಿ ಪ್ರವೀಣನಾಗಿದ್ದ ಆತನಿಗೆ ಈಗ ಕಲಾವಿದನಾಗಿ ಅವಕಾಶಗಳು ಕಡಿಮೆಯಾಗತೊಡಗಿದುವು. ಒಂದೆರಡು ವರ್ಷಗಳ ನಂತರ ಆತನ ಹೆಸರು ಕಲಾಭಿಮಾನಿಗಳ ಮನಸ್ಸಿನಿಂದ ಮರೆಯಾಗಿ ಹೋಯಿತು”.
ಇಷ್ಟು ಹೇಳಿ ಬೇತಾಳವು ಕಥೆಯನ್ನು ನಿಲ್ಲಿಸಿತು. ಆಮೇಲೆ ಮುಂದುವರಿಸುತ್ತಾ “ಎಲೈ ರಾಜನೇ, ಈ ಕಲಾವಿದನ ಕಥೆಯೂ ನಿನ್ನಂತೆಯೇ ಇರಬಹುದೇನೋ ಎಂದು ಅನಿಸುತ್ತದೆ. ನಿನಗೂ ರಾಜ್ಯಭಾರದ ಹಾಗೂ ಪ್ರಜಾಜನರನ್ನು ಪಾಲಿಸುವ ಹೊಣೆಗಾರಿಕೆಯಿದೆ. ಈಗ ಎಷ್ಟೋ ದಿನಗಳಿಂದ ನನ್ನ ಹಿಂದೆ ಬಿದ್ದು ರಾಜ್ಯ ಪರಿಪಾಲನೆಯ ಕರ್ತವ್ಯವನ್ನು ಮರೆತುಬಿಡುವೆಯೋ ಎಂಬ ಶಂಕೆ ನನ್ನನ್ನು ಕಾಡುತ್ತಿದೆ. ಅದಿರಲಿ. ಯಕ್ಷಗಾನದ ಎರಡೂ ತಿಟ್ಟುಗಳಲ್ಲಿ ಪ್ರಭುತ್ವ ಸಾಧಿಸಿದ್ದು ಆ ಹುಡಗನ ತಪ್ಪೇ? ಹುಡುಗನ ಕಲಾಸಕ್ತಿಗೆ ನೀರೆರೆದು ಪೋಷಿಸಿದ ಗುರುಗಳು ಮಾಡಿದ್ದು ಸರಿಯೇ? ಎರಡನ್ನೂ ಸಮನ್ವಯಗೊಳಿಸುವೆನೆಂಬ ಆಕಾಂಕ್ಷೆಯನ್ನು ಹೊಂದಿದ್ದ ಆ ಯುವ ಕಲಾವಿದನು ಎಡವಿದ್ದು ಎಲ್ಲಿ? ಪ್ರಾರಂಭದಲ್ಲಿ ಪ್ರೋತ್ಸಾಹಿಸಿದ ಪ್ರೇಕ್ಷಕರು ಆಮೇಲೆ ಕೈ ಬಿಡಲು ಕಾರಣವೇನು? ಈ ಎಲ್ಲಾ ಪ್ರಶ್ನೆಗಳಗೆ ಗೊತ್ತಿದ್ದೂ ಉತ್ತರ ಹೇಳದಿದ್ದರೆ ನಿನ್ನ ತಲೆಯು ಯಕ್ಷಗಾನ ಪ್ರದರ್ಶನ ನಡೆಯುವಾಗ ಸಿಡಿಯುವ ಸುಡುಮದ್ದುಗಳಂತೆ ಸಾವಿರ ಹೋಳಾದೀತು! ಹುಷಾರ್ ” ಎಂದಿತು.
ರಾಜಾ ವಿಕ್ರಮಾದಿತ್ಯನು ನಗುತ್ತಾ “ಎಲೈ ಬೇತಾಳನೇ, ಹುಡುಗನ ಉಭಯ ತಿಟ್ಟುಗಳ ಪ್ರಾವೀಣ್ಯತೆಯನ್ನು ಮೆಚ್ಚಬೇಕಾದ್ದೇ. ಪ್ರತಿಭೆ ಇದ್ದರೇನೂ ಪ್ರಯೋಜನವಿಲ್ಲ. ಅದನ್ನು ಪ್ರಯೋಗಿಸುವ ರೀತಿ ತಿಳಿದಿರಬೇಕು. ಅದನ್ನೇ ಮಾಡದೇ ಇದ್ದದ್ದು ಹುಡುಗನ ತಪ್ಪು. ಉಭಯ ತಿಟ್ಟುಗಳ ಗುರುಗಳೂ ಪ್ರಾಂಭದಲ್ಲಿಯೇ ಎಚ್ಚರಿಸಿದ್ದಾರೆ ಎಂದ ಮೇಲೆ ಗುರುಗಳದೇನೂ ತಪ್ಪಿಲ್ಲ ಎಂದೇ ತೋರುತ್ತದೆ. ಮತ್ತೊಂದುಂಟು. ಪಾತ್ರಾಪಾತ್ರದ ವಿವೇಚನೆಯೂ ಗುರುಗಳಾದವರಿಗೆ ತಿಳಿದಿರಬೇಕು ಎಂಬ ಮಾತಿದೆ. ಆದ್ದರಿಂದ ಅಪಾತ್ರರಿಗೆ ವಿದ್ಯಾದಾನ ಮಾಡಿದರು ಎಂಬ ನೆಲೆಯಲ್ಲಿ ಅವರನ್ನು ಆರೋಪಿಗಳನ್ನಾಗಿ ಮಾಡಬಹುದೇ ಹೊರತು ತಪ್ಪಿತಸ್ಥರನ್ನಾಗಿ ಅಲ್ಲ.
ಹುಡುಗ ಈ ಕಥೆಯ ಪ್ರಾರಂಭದಿಂದ ಕೊನೆಯ ವರೆಗೂ ಎಡವಿದ್ದಾನೆ. ಅವನ ಆಲೋಚನೆಗಳು, ನಿರ್ಧಾರ, ಕಲಿಕೆ ಮತ್ತು ಪ್ರಯೋಗ ಹೀಗೆ ಹೆಜ್ಜೆ ಹೆಜ್ಜೆಗೂ ಎಡವಿದ ಆತ ಎರಡೂ ತಿಟ್ಟುಗಳು ಯಕ್ಷಗಾನದ್ದೇ ಆದರೂ ಎರಡೂ ವಿಭಿನ್ನವಾದ ರಂಗ ಪ್ರಯೋಗಗಳನ್ನು ಹೊಂದಿದೆ ಎಂಬುದನ್ನು ತಿಳಿದುಕೊಳ್ಳಲಾರದೆ ಹೋದ. ನಾಟ್ಯಗಾರಿಕೆ, ವೇಷಭೂಷಣ, ಹಿಮ್ಮೇಳ ವಾದ್ಯಗಳು ಎಲ್ಲವೂ ಪ್ರತ್ಯೇಕವಾಗಿ ಎದ್ದು ಕಾಣುವಂತೆ ಇರುವಾಗ ಸಮನ್ವಯತೆ ಸಾಧ್ಯವೇ ಇಲ್ಲ. ಎರಡೂ ವೇಷಗಳು ಒಂದೇ ವೇದಿಕೆಯಲ್ಲಿ ಕಂಡರೆ ಅದೊಂದು ಅಭಾಸವೇ ಹೊರತು ಮತ್ತೇನಲ್ಲ.
ಇನ್ನು ಪ್ರೇಕ್ಷಕರ ಮನಸ್ಥಿತಿಯೂ ಭಾಷೆ ಅಥವಾ ಪ್ರದೇಶಗಳಿಗನುಗುಣವಾಗಿ ಇರುತ್ತದೆ. ತೆಂಕಿನ ಪ್ರೇಕ್ಷಕರು ಅದನ್ನೇ ಬಯಸಿ ಬಂದಿರುತ್ತಾರೆ. ಬಡಗಿನವರು ಅದನ್ನೇ ಇಷ್ಟಪಡುತ್ತಾರೆ. ಆದ್ದರಿಂದ ಪ್ರಾರಂಭದಲ್ಲಿ ಕೆಲವರು ಪ್ರೋತ್ಸಾಹಿಸಿದಂತೆ ಕಂಡರೂ ಪ್ರಜ್ಞಾವಂತರಾದ ಪ್ರೇಕ್ಷಕರು ಅವನನ್ನು ತಿರಸ್ಕರಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ”. ರಾಜಾ ವಿಕ್ರಮಾದಿತ್ಯನ ಉತ್ತರದಿಂದ ತೃಪ್ತಿಗೊಂಡ ಬೇತಾಳವು ಆತನು ಮೌನವನ್ನು ಮುರಿದನೆಂದು ತಿಳಿದ ಕೂಡಲೇ ಮತ್ತೆ ಶವವಾಗಿ ಆ ಬೃಹತ್ ಮರದ ಕೊಂಬೆಯಲ್ಲಿ ನೇತಾಡತೊಡಗಿತು.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು