Friday, September 20, 2024
Homeಯಕ್ಷಗಾನಜಬ್ಬಾರ್ ಸಮೋ - ಹುಡುಕಿ ತೆಗೆದ ಹನಿ ಹನಿಗಳು (Jabbar Samo)

ಜಬ್ಬಾರ್ ಸಮೋ – ಹುಡುಕಿ ತೆಗೆದ ಹನಿ ಹನಿಗಳು (Jabbar Samo)

ಯಾವುದೇ ಒಂದು ವಿಷಯದ ಬಗ್ಗೆ ಬರೆಯುವಾಗ ಅಥವಾ ಮಾತನಾಡುವಾಗ ಆ ವಿಚಾರದ ಬಗ್ಗೆ ಗೊತ್ತಿಲ್ಲವೆಂದೋ ಅಥವಾ ಬೇಕಾದಷ್ಟು ಮಾಹಿತಿ ಇಲ್ಲವೆಂದೋ ಆ ವಿಚಾರವನ್ನು ಅಲ್ಲಿಗೆ ಬಿಟ್ಟು ಬಿಡುತ್ತೇವೆ. ಅದರ ಬಗ್ಗೆ ತಿಳಿದಿರುವ ವಿಚಾರಗಳನ್ನು ಮರೆತುಬಿಡುತ್ತೇವೆ. ವ್ಯಕ್ತಿಯೇ ಇರಲಿ ಅಥವಾ ವಸ್ತುವೇ ಇರಲಿ ಪೂರ್ಣವಾಗಿ ಅರಿತಿರುವುದು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ. ಆದುದರಿಂದ ಮಾನವನ ದುರ್ಬಲತೆಯ ಒಂದು ಅಂಗವೆಂಬಂತೆ ನಾವು ತಿಳಿದಿರುವ ವಿಚಾರಗಳಿಗಿಂತ ತಿಳಿಯದಿರುವ ಸಂಗತಿಗಳಿಗೇ ಹೆಚ್ಚು ಚಿಂತಿಸುತ್ತೇವೆ. ತಿಳಿಯಲು ಪ್ರಯತ್ನವನ್ನು ಮಾಡದೇ ಇರುವುದೂ ನಮ್ಮ ಅಜ್ಞಾನಕ್ಕೆ ಮೂಲವೇ ಆಗಿರುವುದರಿಂದ ಜ್ಞಾನದ ಹಂಬಲಕ್ಕಾಗಿ ವಿವಿಧ ಮೂಲಗಳನ್ನು ಎಡತಾಕುವುದು ತಪ್ಪು ಎಂದು ಭಾವಿಸಬಾರದು.  

ಕಲಾವಿದರಾಗಿ, ಪಾಂಡಿತ್ಯಪೂರ್ಣ ಅರ್ಥಧಾರಿಯಾಗಿ ನನಗೆ ಜಬ್ಬಾರ್ ಸಮೋ ಗೊತ್ತು. ಅವರ ನಿರರ್ಗಳ ಮಾತುಗಾರಿಕೆ, ಅರ್ಥ ಹೇಳಲು ಕುಳಿತರೆ ಪುರಾಣ ಪಾತ್ರಗಳ ಆಳಕ್ಕೆ ಇಳಿದು ತಾನೂ ಪಾತ್ರವೇ ಆಗಿಬಿಡುವ ಅವರ ಜ್ಞಾನದ ಆಳವೂ ಎಷ್ಟಿದೆಯೆಂದು ಗೊತ್ತಿದೆ. ಆದರೆ ತಾಳಮದ್ದಳೆ ರಂಗದಿಂದ ಹೊರಗೆ ಒಬ್ಬ ವ್ಯಕ್ತಿಯಾಗಿ ಜಬ್ಬಾರ್ ಸಮೋ ಬಗ್ಗೆ ಅಷ್ಟಾಗಿ ತಿಳಿಯದಿದ್ದರೂ ತಿಳಿಯುವ ಪ್ರಯತ್ನ ಮಾಡಿದರೆ ಅದರಲ್ಲಿ ಆಶ್ಚರ್ಯಪಡುವ ವಿಚಾರಗಳೇನೂ ಇರಲಾರದು ಎಂದು ಭಾವಿಸುತ್ತೇನೆ. ಆದುದರಿಂದ ಅವರ ಬಗ್ಗೆ ಹುಡುಕಿ ತೆಗೆದ ಹನಿ ಹನಿಗಳನ್ನು ಈಗ ಒಟ್ಟು ಮಾಡುವ ಸಣ್ಣ ಪ್ರಯತ್ನ ಮಾಡುವೆ.  

ಸಾಂಸ್ಕೃತಿಕ ರಂಗವು ನಾಟ್ಯವಾಡುವ ನವಿಲಿನಂತೆ ತನ್ನ ಇರವನ್ನು ಪ್ರದರ್ಶಿಸುತ್ತಿದ್ದ ಹಾಗೂ ಕಲಾ ಶ್ರೀಮಂತಿಕೆಯಿಂದ ಕೂಡಿದ ಸಂಪಾಜೆ ಎಂಬ ಊರಿನ ಜೊತೆಗೆ ಅದೆಷ್ಟೋ ಕಲಾವಿದರ, ಕಲಾಭಿಮಾನಿಗಳ ಮತ್ತು ಕಲಾಪೋಷಕರ ಹೆಸರು ಥಳಕು ಹಾಕಿಕೊಂಡಿದೆ. ಸಂಪಾಜೆಯ ಮಣ್ಣಿನ ಕಣ ಕಣದಲ್ಲೂ ಕಲೆಯ ವಾಸನೆಯಿರುವುದರಿಂದ, ಪ್ರತಿಯೊಬ್ಬರ ರಕ್ತದಲ್ಲಿಯೂ ಯಕ್ಷಗಾನವೆಂಬ ಪ್ಲಾಸ್ಮಾ ಇರುವುದರಿಂದ, ಉಸಿರಾಡುವ ಬಿಸಿಯುಸಿರಲ್ಲಿಯೂ ಯಕ್ಷಗಾನದ ಲಯ ವಿನ್ಯಾಸಗಳಿರುವುದರಿಂದ ಜಬ್ಬಾರ್ ಸಮೋ ಎಂಬ ಹುಡುಗ ಈ ರೀತಿ ನೋಡಿದವರು ಮೂಗಿಗೆ ಬೆರಳಿಟ್ಟು ನೋಡುವ ಪರಿಯಲ್ಲಿ ಬೆಳೆದು ನಿಂತದ್ದರಲ್ಲಿ ಈಗೀಗ ಅಚ್ಚರಿಯೇನೂ ಕಾಣಿಸುವುದಿಲ್ಲ. 

ಕಲ್ಲುಗುಂಡಿಯ ರಾಮಕೃಷ್ಣ ಭಜನಾ ಮಂದಿರದಲ್ಲಿ ಮೊಳೆತು, ಚಿಗುರಿ, ಬೆಳೆದ ಕಲೆಯ ತರು, ಕುಸುಮಗಳು  ಈಗ ಕರುನಾಡಿನ ಎಲ್ಲೆಡೆಯಲ್ಲಿ ರುಚಿಯಾದ ಫಲಗಳನ್ನು ಕೊಡುತ್ತಿವೆ. ಅಂತಹಾ ಪ್ರತಿಭೆಗಳೆಲ್ಲಾ ತಮ್ಮ ಹೆಸರಿನ ಜೊತೆಗೆ ಸಂಪಾಜೆ ಎಂಬ ಆ ಪುಣ್ಯ ಭೂಮಿಯ ನಾಮಧೇಯವನ್ನು ಜೋಡಿಸಿ ಇರಿಸಿಕೊಂಡದ್ದು ಮನಸ್ಸಿನಲ್ಲಿ, ತನುವಿನಲ್ಲಿ ಪುಳಕಗಳ ಅಲೆಯನ್ನೆಬ್ಬಿಸುತ್ತದೆ. ತಾವು ಎಲ್ಲಿಯೇ ಹೋದರೂ, ಜೀವನದ ಪ್ರವಾಹದ ಅಲೆಯಲ್ಲಿ ಜೊತೆ ಜೊತೆಗೆ ಈಜಿ ಯಾವುದೇ ದಡವನ್ನು ಸೇರಿದ್ದರೂ ಹುಟ್ಟಿದ ಭೂಮಿಯ ಜೊತೆ ತನ್ನನ್ನು ಗುರುತಿಸಿಕೊಳ್ಳಲು ಇಷ್ಟಪಡುವ “ಜನನಿ ಜನ್ಮಭೂಮಿಶ್ಚ..” ಎಂಬ ಮನಸುಗಳು ತುಂಬಾ ಇಷ್ಟವಾಗುತ್ತವೆ. ಆದುದರಿಂದ ಜಬ್ಬಾರ್ ಎಂಬ ಸಂಪಾಜೆಯ ಕುಡಿ ಕೂಡಾ ತನ್ನ ಊರನ್ನು ಮರೆಯಲಿಲ್ಲ. ತನಗೆ ಸಾಂಸ್ಕೃತಿಕ ರುಚಿಯನ್ನು ಹತ್ತಿಸಿದ, ಮನಸ್ಸಿನ ನಾಲಗೆಗೆ ಕಲೆಯ ಸವಿಯನ್ನು ಉಣಿಸಿದ ಊರಿಗೆ ಸದಾ ಕೃತಜ್ಞನಾಗಿರುತ್ತಾ ‘ಜಬ್ಬಾರ್ ಸಮೋ ಸಂಪಾಜೆ’ ಎಂದೇ ಪ್ರಸಿದ್ಧನಾದ. 

ಹಾಗೆ ನೋಡಿದರೆ ಶ್ರೀ ಜಬ್ಬಾರ್ ಸಮೋ ಅವರ ಕಲಾ ಪ್ರೌಢಿಮೆಗೆ ಸಾಕ್ಷಿಯಾದದ್ದು ಕೂಡಾ ಕಲ್ಲುಗುಂಡಿಯ ರಾಮಕೃಷ್ಣ ಭಜನಾ ಮಂದಿರವೇ. ಅಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಆಟ ಕೂಟಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದ ಜಬ್ಬಾರರು ಮುಂದೊಂದು ದಿನ ಯಾರೂ ನಿರೀಕ್ಷಿಸದೆ ಇದ್ದ ಎತ್ತರಕ್ಕೆ ಬೆಳೆದರು. ಜಬ್ಬಾರ್ ಎಷ್ಟೋ ಎತ್ತರಕ್ಕೆ ಬೆಳೆದರು. ಎಷ್ಟು ಎತ್ತರಕ್ಕೆ ಎಂದರೆ ಅವರ ಅರ್ಥಗಾರಿಕೆಯನ್ನು ಕೇಳಲೆಂದೇ ದೂರದೂರಿಂದ ಕಾರಿನಲ್ಲಿ ಬರುವ ಆಸಕ್ತಿಯುಳ್ಳ ಜನರ ಪ್ರಭಾವಲಯವನ್ನು ನಿರ್ಮಿಸುವಷ್ಟು. ಜಬ್ಬಾರ್ ಸಮೋ ಅವರ ಅರ್ಥಗಾರಿಕೆಯ ಶೈಲಿ ಮತ್ತು ಪಾಂಡಿತ್ಯ ಇಂದು ಜನಜನಿತವಾಗಿದೆ. ಯಾವುದೇ ಪಾತ್ರಗಳನ್ನೂ ಅವರು ನಿರ್ವಹಿಸುವ ರೀತಿ, ಕನ್ನಡ ಭಾಷೆಯ ಮೇಲೆ ಅವರಿಗಿರುವ ಪ್ರಭುತ್ವ, ಶಬ್ದ ಪ್ರಯೋಗಗಳಲ್ಲಿ ತೋರುವ ವೈವಿಧ್ಯತೆ ಇದೆಲ್ಲಾ ಅವರಲ್ಲಿ ಇರುವ ಮತ್ತು ನಾನು ಅರ್ಥ ಮಾಡಿಕೊಂಡ ವಿಶೇಷತೆಗಳು. ಪುರಾಣ ಪಾತ್ರಗಳ ಜೊತೆ ಸರ್ಕಸ್ ಮಾಡುವ, ಪಾತ್ರಸ್ವಭಾವ ಮತ್ತು ಪುರಾಣ ಕಥೆಗಳನ್ನು ಅರೆದು ಕುಡಿದು ಕರಗತ ಮಾಡಿಕೊಂಡ ಶ್ರೀ ಜಬ್ಬಾರ್ ಸಮೋ ಅವರು ಇಂದು ತಾಳಮದ್ದಳೆ ಲೋಕ ಕಂಡ ಓರ್ವ ಸಮರ್ಥ, ಜನಪ್ರಿಯ ಪ್ರಬುದ್ಧ ಅರ್ಥಧಾರಿ. ಅರ್ಥಧಾರಿಯಾಗಿ ಅವರು ಹೇಗೆ ಎಂಬುದನ್ನು ಅವರ ರಂಗದ ನಿರ್ವಹಣೆಯನ್ನು ಆಸ್ವಾದಿಸಿದ ಎಲ್ಲರಿಗೂ ಅರ್ಥವಾಗಿರಬಹುದಾದ ವಿಚಾರ.

ಆದರೆ ರಂಗದ ಹೊರಗೆಯೂ ಜಬ್ಬಾರ್ ಸಮೋ ಅವರನ್ನು ಇಷ್ಟಪಡುವ ಅಸಂಖ್ಯಾತ ಮನಸುಗಳಿವೆ. ಜಬ್ಬಾರ್ ಬಹಳ ಬೇಗ ಆತ್ಮೀಯರಾಗಿಬಿಡುವ ಸ್ವಭಾವದವರು ಎಂದು ನಾನು ಕೇಳಿ ಬಲ್ಲೆ. ಹಾಗೆಂದು ನಾನು ಅವರಲ್ಲಿ ಅಷ್ಟಾಗಿ ಮಾತನಾಡಿದವನೇ ಅಲ್ಲ. ಫೋನ್ ನಲ್ಲಿ ಒಮ್ಮೆ ಮಾತನಾಡಿದ್ದೆ. ನಿಮ್ಮದೊಂದು ಸಂದರ್ಶನ ಮಾಡಬೇಕಿತ್ತು ಎಂದು ಹೇಳಿದ್ದೆ. ಅವರು ನಯವಾಗಿ ತಿರಸ್ಕರಿಸಿದ್ದರು. ಅದಕ್ಕೆ ಅವರದೇ ಆದ ಕಾರಣಗಳು ಇರಬಹುದು.  ಜಬ್ಬಾರ್ ಅವರು ಜನಪ್ರಿಯತೆಯನ್ನು ಪಡೆದ ಕಲಾವಿದರಾಗಿದ್ದರೂ ಅಷ್ಟೇ ಸರಳ ಮತ್ತು ವಿನಯವಂತ ವ್ಯಕ್ತಿಯಾಗಿದ್ದರು. ಭಾಗವತರಾದ ಸುಬ್ರಾಯ ಸಂಪಾಜೆ ಅವರು ತನ್ನ ಫೇಸ್ಬುಕ್ ಖಾತೆನಲ್ಲಿ ಜಬ್ಬಾರ್ ಅವರ ಒಂದು ಮಾನವೀಯತೆಗೆ ಉದಾಹರಣೆಯಾಗಿ ನಡೆದ ಘಟನೆಯೊಂದನ್ನು ಬರೆದಿದ್ದರು. ಅದನ್ನು ಓದಿದ ನನಗೆ ಕಣ್ಣು ಹನಿಗೂಡಿದ್ದು ನಿಜ. ಜಬ್ಬಾರ್ ಅವರಲ್ಲಿ ಒಮ್ಮೆ ಫೋನ್ ಮುಖಾಂತರ ಮಾತನಾಡಿದ್ದು ಬಿಟ್ಟರೆ ನನಗೆ ಅವರಲ್ಲಿ ಮಾತನಾಡಿದ್ದು ನೆನಪಿಲ್ಲ.

ಅವರು ನಮ್ಮ ಮನೆಗೆ ಬಂದಿದ್ದಾಗಲೂ ಅವರ ಜೊತೆ ಮಾತನಾಡಿದ ಹಾಗೆ ಅನಿಸುತ್ತಾ ಇಲ್ಲ. ಆದರೆ ಅವರೊಮ್ಮೆ ನಮ್ಮ ಮನೆಗೆ ಬಂದಿದ್ದ ನೆನಪು ಈಗಲೂ ಹಸಿರಾಗಿದೆ. ತಾಳಮದ್ದಲೆಯೊಂದನ್ನು ಮುಗಿಸಿ ತಡರಾತ್ರಿ ಹಿಂತಿರುಗಿ ಹೋಗುವ ದಾರಿಯಾಗಿ ಮಾಡಾವಿನಲ್ಲಿರುವ ನಮ್ಮ ಮನೆಗೆ ಭೇಟಿ ಕೊಟ್ಟಿದ್ದರು. ತಂಡದಲ್ಲಿ ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಜಬ್ಬಾರ್ ಸಮೋ ಮತ್ತಿತರರು ಇದ್ದರು. ಕೊನೆಯ ಕ್ಷಣದಲ್ಲಿ ಅವರು ಬರುವ ಸುದ್ದಿ ತಿಳಿದಿತ್ತು. ಅವರಿಗೆ ರಾತ್ರಿಯ ಊಟ ಆಗಿಲ್ಲ ಎಂದು ಅರಿತ ನಾವು ಅವರು ಹೇಳದಿದ್ದರೂ ಅದರ ತಯಾರಿಯಲ್ಲಿ ತೊಡಗಿದೆವು. ದಿಢೀರ್ ತಯಾರಿ. ಮನೆಯಲ್ಲಿ ಅಮ್ಮ ಬಿಟ್ಟರೆ ನಾವು ಗಂಡು ಮಕ್ಕಳು ಮಾತ್ರ. ಆಗ ನಮಗ್ಯಾರಿಗೂ ಮದುವೆ ಆಗಿರಲಿಲ್ಲ. ಅಮ್ಮನಿಗೂ ಸ್ವಲ್ಪ ವಯಸ್ಸಾಗಿತ್ತು. ಬೆಳ್ತಿಗೆ ಅನ್ನ, ಕುಚ್ಚಿಲಕ್ಕಿ ಗಂಜಿ, ಸಾರು, ಪಲ್ಯ, ಮಜ್ಜಿಗೆ, ಉಪ್ಪಿನಕಾಯಿ ಅಷ್ಟೇ. ಊಟ ಮಾಡುತ್ತಿರುವಾಗ ಎಲ್ಲರಿಗೂ ಹಸಿವೆಯಾಗಿದ್ದ ಹಾಗೆ ಕಂಡಿತ್ತು. ಆದರೆ ‘ನಮಗೆ ತೊದರೆ ಕೊಟ್ಟೆವೋ’ ಎಂಬ ಭಾವ ಅವರ ಮುಖದಲ್ಲಿತ್ತು. ಬಹುಶಃ ಮಾಡಿದ ಅಡುಗೆಯ ಪ್ರಮಾಣದಲ್ಲಿ ಕಡಿಮೆಯಾಗಿರಬಹುದೇನೋ ಎಂಬ ಸಂಶಯ ಜಬ್ಬಾರ್ ಸಮೋ ಅವರಿಗೆ ಆಗಿತ್ತೋ ಏನೋ. ಅವರು ಎರಡೆರಡು ಬಾರಿ ಕೇವಲ ಗಂಜಿಯನ್ನಷ್ಟೇ ಹಾಕಿಸಿಕೊಂಡರು. ನಮಗೆಲ್ಲಾ ಏನೂ ತೊಂದರೆಯಾಗಿಲ್ಲ ಎಂದು ನಾವು ಸ್ಪಷ್ಟಪಡಿಸಿದ ನಂತರವೇ ಅವರೆಲ್ಲಾ ನೆಮ್ಮದಿಯಾಗಿ ಊಟ ಮಾಡಿದ ಹಾಗೆ ಕಂಡಿತು. ಉಜಿರೆ ಅಶೋಕ ಭಟ್ಟರು ಯಾವಾಗಲಾದರೂ ಕಾಣಲು ಸಿಕ್ಕಿದಾಗ ಈ ಘಟನೆಯನ್ನು ನೆನಪಿಸಿಕೊಂಡು ಮುಗುಳು ನಗುತ್ತಾರೆ. ಹೀಗೆ ಅಂದು ಜಬ್ಬಾರ್ ಸಮೋ ಅವರಿಗೆ ಗಂಜಿ ಬಡಿಸಿದ ನೆನಪು ಬಿಟ್ಟರೆ ಮತ್ತೆ ಅವರೊಡನೆ ಮುಕ್ತವಾಗಿ ಮಾತನಾಡುವ ಅವಕಾಶ ಸಿಕ್ಕಿಲ್ಲ. ಆದರೆ ಆ ದಿನ ಜಬ್ಬಾರ್ ಸಮೋ ಅವರ ಸರಳ ವರ್ತನೆ, ಮನೆಯವರಂತೆಯೇ ಅವರು ನಡೆದುಕೊಂಡ ರೀತಿ ಮತ್ತು ಅವರ ಮುಗ್ಧ ಮನಸ್ಸು ಮರೆಯಲಾಗುವುದಿಲ್ಲ. 

ಲೇಖನ: ಮನಮೋಹನ್ ವಿ.ಎಸ್.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments