Friday, September 20, 2024
Homeಯಕ್ಷಗಾನಮೇಳಗಳ ತಿರುಗಾಟ ಆರಂಭ - ಮುಂದಿರುವ ಸವಾಲುಗಳು

ಮೇಳಗಳ ತಿರುಗಾಟ ಆರಂಭ – ಮುಂದಿರುವ ಸವಾಲುಗಳು

ಯಕ್ಷಗಾನ ರಂಗಕ್ಕೆ ಒಳ್ಳೆಯ ಸುದ್ದಿ. ಕಲಾಸಕ್ತರಿಗೆ ಮಾತ್ರವಲ್ಲ. ಕಲಾವಿದರಿಗೂ ಕೂಡಾ. ಇಷ್ಟು ಸಮಯದಿಂದ ಕೆಲಸವಿಲ್ಲದೇ ಕಷ್ಟಪಡುತ್ತಿದ್ದ ಹಲವಾರು ಕಲಾವಿದರ ಮನೆಯಲ್ಲಿ, ಮನಸಿನಲ್ಲಿ ಸಂತೋಷ ಮನೆ ಮಾಡಬಹುದು. ನವೆಂಬರ್ ನಲ್ಲಿ ಯಕ್ಷಗಾನ ಆರಂಭ ಮಾಡಲು ಯಾವುದೇ ತೊಡಕುಗಳಿಲ್ಲ ಎಂಬ ಸುದ್ದಿ ಸರಕಾರದ ಕಡೆಯಿಂದ ಬಂದಿದೆ. ಜಿಲ್ಲಾ ಉಸ್ತುವಾರಿ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರೇ ಸ್ಪಷ್ಟಪಡಿಸಿದಂತೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿ ಯಕ್ಷಗಾನ ಪ್ರಾರಂಭವಾಗುವುದಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ ಎಂದು ತಿಳಿಸಲಾಗಿತ್ತು. 

ಆದರೆ ಅದರಂತೆ ಯಕ್ಷಗಾನ ಪ್ರದರ್ಶನಗಳನ್ನು ನೀಡುವ ನಿಟ್ಟಿನಲ್ಲಿ ಮೇಳಗಳು ತಿರುಗಾಟಕ್ಕೆ ಹೊರಟರೆ ಯಾವೆಲ್ಲಾ ಮಾನದಂಡಗಳ ಮೂಲಕ ಎಚ್ಚರಿಕೆ ವಹಿಸಬೇಕು? ಅಥವಾ ಪ್ರದರ್ಶನಗಳಿಂದ ಉಂಟಾಗುವ ಪರಿಣಾಮಗಳನ್ನು ಹೇಗೆ ಎದುರಿಸಬೇಕು? ಇವುಗಳೇ ಯಕ್ಷಗಾನ ಮೇಳಗಳ ಸಂಚಾಲಕರು ಮತ್ತು ಆಟ ಆಡಿಸುವವರ ಮುಂದಿರುವ ದೊಡ್ಡ ಸವಾಲು. 

1. ಕೋವಿದ್  19 ಮಾನದಂಡದ ಪ್ರಕಾರ ಸರಕಾರದ ಕೆಲವು ನಿರ್ದೇಶನಗಳನ್ನು ಅನುಸರಿಸಿ ಪ್ರದರ್ಶನ ಏರ್ಪಡಿಸಬೇಕಾಗುತ್ತದೆ. ಆಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯಮವನ್ನು ಪಾಲಿಸಬೇಕಾಗುತ್ತದೆ. ಪ್ರೇಕ್ಷಕರ ಆಸನಗಳನ್ನು ನಿಗದಿತ ಅಂತರದಲ್ಲಿ ದೂರ ದೂರ ಇರಿಸಬೇಕಾಗುತ್ತದೆ. ಒಂದು ಪ್ರದರ್ಶನಕ್ಕೆ 200 ಜನಕ್ಕಿಂತ ಹೆಚ್ಚು ಸೇರಬಾರದು ಎಂಬ ನಿಯಮವಿದ್ದರೆ ಒಂದು ವೇಳೆ ಕೆಲವು ಅಪರೂಪದ ಪ್ರಸಂಗಗಳಿಗೆ 200ಕ್ಕಿಂತ ಹೆಚ್ಚು ಜನ ಸೇರಿದರೆ ಆಗ ಏನು ಮಾಡುವುದು ಎಂಬ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಬಂದ ಜನರನ್ನು ವಾಪಾಸ್ ಕಳುಹಿಸುವುದೇ? ಹಾಗಾದರೆ ಯಕ್ಷಗಾನ ಪ್ರದರ್ಶನ ನಡೆಯುವಲ್ಲಿ ಪೊಲೀಸ್ ವ್ಯವಸ್ಥೆ ಮಾಡಬೇಕಾಗಿ ಬರಬಹುದೇ? ಎಂಬೆಲ್ಲ ಪ್ರಶ್ನೆಗಳು ಮೂಡುವುದು ಸಹಜ. 

2. ಮೇಲಿನ ವಿಷಯಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವೂ ಕೇಳಿ ಬರುತ್ತಿದೆ. ಅದೇನೆಂದರೆ ಜನರಲ್ಲಿಯೂ ಕೋವಿಡ್ ಸಂಬಂಧಿತ ಜಾಗೃತಿ, ಕಳಕಳಿಗಳು ಮೂಡುತ್ತಿರುವುದರಿಂದ ಖಂಡಿತಾ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಇರಲಾರರು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಾ ಉಂಟು. ಇದು ಧನಾತ್ಮಕವಾದ ವಿಚಾರ. ಪ್ರೇಕ್ಷಕರೇ ತಮ್ಮೊಳಗೆ ಮಿತಿಯನ್ನು ಹಾಕಿಕೊಂಡರೆ ಅದಕ್ಕಿಂತ ಮಿಗಿಲಾದ ವಿಚಾರವೇನಿದೆ? 

3. ಟಿಕೆಟ್ ಪ್ರದರ್ಶನಗಳ ಮೇಳಗಳಿಗೆ ಈ ಕಾಲ ಸಂತೋಷದಾಯಕವಲ್ಲ. ಟಿಕೆಟ್ ಆಟಗಳಲ್ಲಿ ಪ್ರೇಕ್ಷಕರ ಹಾಜರಾತಿ ಕಡಿಮೆ ಇರಬಹುದು. ಟಿಕೆಟ್ ಆಧಾರಿತ ಪ್ರದರ್ಶನಗಳು ಆರಂಭವಾಗುವುದು ಸಂಶಯ. 

4. ಚೌಕಿಯಲ್ಲಿಯೂ ಕಲಾವಿದರು ಮತ್ತು ನೇಪಥ್ಯ ಕಲಾವಿದರು ಬಹಳಷ್ಟು ಎಚ್ಚರದಿಂದಿರಬೇಕಾದದ್ದು ಅನಿವಾರ್ಯ. ಕಲಾವಿದರು ಕೂಡ ಸ್ವಯಂ ನಿರ್ಬಂಧ ಹೇರಬೇಕಾದ ಪರಿಸ್ಥಿತಿ ಇದೆ. ಯಾಕೆಂದರೆ ಕಲಾವಿದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇ ಬೇಕಾಗುತ್ತದೆ. ಈಗಾಗಲೇ ಸರಕಾರ ಸೂಚಿಸಿದಂತೆ ಮೇಳ ಹೊರಡುವ ಮೊದಲು ಮತ್ತು ತಿರುಗಾಟ ಆರಂಭವಾದ ನಂತರ ಪ್ರತಿ ವಾರಕ್ಕೊಮ್ಮೆ ಕೊರೋನಾ ಪರೀಕ್ಷೆ ಕಡ್ಡಾಯ ಎಂದು ತಿಳಿಸಲಾಗಿದೆ. ಪರೀಕ್ಷೆ ಉಚಿತವಾಗಿಯೇ ಇದ್ದರೂ ಕೊರೋನಾ ಭಾದಿಸದಂತೆ ಕಲಾವಿದರು ಅತೀವ ಎಚ್ಚರಿಕೆಯಿಂದ ಇರಬೇಕಾಗುತ್ತದೆ. 

5. ಕಲಾವಿದರಿಗೆ ಸಾಮಾಜಿಕ ಅಂತರದ ನಿಯಮವನ್ನು ಪಾಲಿಸಲು ಚೌಕಿಯಲ್ಲಿ ಕಷ್ಟಸಾಧ್ಯ. ಯಾಕೆಂದರೆ ವೇಷ ಧರಿಸಲು ಇನ್ನೊಬ್ಬರ ಅವಲಂಬನ ಅಗತ್ಯ. ಮಾತ್ರವಲ್ಲದೇ ಅಗತ್ಯ ವಿಚಾರಗಳನ್ನು, ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಒಟ್ಟಾಗಿ ಸೇರಲೇ ಬೇಕಾಗುತ್ತದೆ. ಅದೂ ಅಲ್ಲದೆ ಆಟ ಮುಗಿದ ನಂತರ ಮನೆಗೆ ಪ್ರಯಾಣಿಸುವ ವ್ಯವಸ್ಥೆಯ ಬಗ್ಗೆಯೂ ಅನುಮಾನಗಳು ಉದ್ಭವಿಸುತ್ತವೆ. ಸ್ವಂತ ವಾಹನಗಳಿರುವ ಕಲಾವಿದರಿಗೆ ಅಷ್ಟಾಗಿ ಸಮಸ್ಯೆ ಇಲ್ಲ. ಆದರೆ ಎಷ್ಟೋ ಕಲಾವಿದರು ಬಸ್ಸಿನಲ್ಲಿಯೇ ಪ್ರಯಾಣಿಸುವುದು ಕಾಣುತ್ತೇವೆ. ಈ ವಿಚಾರದ ಬಗ್ಗೆ ಮೇಳದ ಸಂಚಾಲಕರು ಮತ್ತು ಕಲಾವಿದರು ಒಟ್ಟಾಗಿ ಕುಳಿತು ಸಮಾಲೋಚಿಸಬೇಕು. ವಾಹನ ಇರುವ ಕಲಾವಿದರು ಮತ್ತೊಬ್ಬ ಸಹಕಲಾವಿದನನ್ನು ಡ್ರಾಪ್ ಮಾಡಬೇಕಾಗಬಹುದು.(ಈಗಾಗಲೇ ಹೀಗೆ ಡ್ರಾಪ್ ಮಾಡುವ ಕ್ರಮ ಚಾಲ್ತಿಯಲ್ಲಿದೆ) ಅಥವಾ 50 ವರ್ಷಗಳಷ್ಟು ಹಿಂದೆ ಇದ್ದ ಕ್ರಮದಂತೆ ಮೇಳದ ಬಿಡಾರಗಳಲ್ಲಿಯೇ ವಾರಗಳ ಕಾಲ ಉಳಿಯಬೇಕಾಗಿ ಬರಬಹುದು. 

5. ಪ್ರತಿ ವಾರದ ಕೊರೋನಾ ಪರೀಕ್ಷೆಯಲ್ಲಿ ಕಲಾವಿದರಿಗಾರಿಗೂ ಕೊರೋನಾ ಬಾಧಿಸುವುದು ಬೇಡ ಎಂದು ದೇವರಲ್ಲಿ ಕಳಕಳಿಯ ಪ್ರಾರ್ಥನೆ. ಆದರೆ ಪರಿಸ್ಥಿತಿ ಕೈಮೀರಿ ಕೋವಿಡ್ ಪರೀಕ್ಷೆಯಲ್ಲಿ ಪೊಸಿಟಿವ್ ಬಂತು ಎಂದಾದರೆ ಮುಂದಿನ ಕ್ರಮ ಏನು ಎಂಬ ಪ್ರಶ್ನೆಯೂ ಮೂಡುತ್ತದೆ. ಆಗ ಮೇಳದ ಪ್ರದರ್ಶನಗಳನ್ನೇ ಕೆಲವು ದಿನಗಳ ಮಟ್ಟಿಗೆ ನಿಲ್ಲಿಸಬೇಕೇ ಬೇಡವೇ ಎಂಬ ಪ್ರಶ್ನೆಯೂ ನಮ್ಮ ಮುಂದೆ ಬರುತ್ತದೆ.    

ಆದುದರಿಂದ ಮೇಳಗಳನ್ನು ಆರಂಭಿಸುವುದು ಎಷ್ಟು ಮುಖ್ಯವೋ ಕಲಾವಿದರ ಮೇಲಿನ ಕಾಳಜಿಯೂ ಅಷ್ಟೇ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಮೇಳದ ತಿರುಗಾಟ ಆರಂಭಿಸಿದ ಮುಖ್ಯ ಉದ್ದೇಶಗಳಿಗೇ ಕೊಡಲಿ ಏಟು ಬೀಳುತ್ತದೆ. ತಿರುಗಾಟ ಆರಂಭಿಸಿದ ಮೇಳಗಳು ಅರ್ಧದಲ್ಲಿ  ಆಗಾಗ ಕೆಲವು ದಿನಗಳ ಮಟ್ಟಿಗೆ ತಿರುಗಾಟ ನಿಲ್ಲಿಸುವ ಪರಿಸ್ಥಿತಿ ಬರಬಾರದು ಎನ್ನುವುದೇ ನಮ್ಮ ಸಧಭಿರುಚಿಯ ಆಶಯ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments