ಶೀರ್ಷಿಕೆಯೇ ಸೂಚಿಸುವಂತೆ ಈ ಹೊತ್ತಗೆಯು ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಹಾಸ್ಯಗಾರರಾಗಿ ಮೆರೆದ ದಿ| ವಿಟ್ಲ ಗೋಪಾಲಕೃಷ್ಣ ಜೋಷಿ ಅವರ ಸಂಸ್ಮರಣ ಗ್ರಂಥವು. ಶ್ರೀಯುತರ ಜೀವಿತಾವಧಿ 1916-1991. ಈ ಸಂಸ್ಮರಣ ಗ್ರಂಥದ ಪ್ರಕಾಶಕರು ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ (ರಿ) ಪರ್ಕಳ. ಸಂಪಾದಕರು ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ಟ. 2013ರಲ್ಲಿ ಈ ಸಂಸ್ಮರಣ ಗ್ರಂಥವು ಪ್ರಕಟವಾಗಿತ್ತು. ಇನ್ನೂರ ಎಂಬತ್ತಮೂರು ಪುಟಗಳಿಂದ ಕೂಡಿದ ಗ್ರಂಥವಿದು. ಮೊದಲಾಗಿ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಶ್ರೀಮದ್ ರಾಘವೇಶ್ವರ ಭಾರತಿ ಸ್ವಾಮಿಗಳು, ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಶ್ರೀ ರಾಜರ್ಷಿ ವೀರೇಂದ್ರ ಹೆಗಡೆಯವರು, ಪ್ರೊ ಎಂ.ಎಲ್.ಸಾಮಗ, ಶ್ರೀ ಟಿ. ಶ್ಯಾಮ್ ಭಟ್ ಇವರುಗಳ ಸಂದೇಶಗಳನ್ನು ನೀಡಲಾಗಿದೆ. ಸಂಪಾದಕ ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ಟ ಅವರು ‘ಸಂಪಾದಕ ನುಡಿ’ ಎಂಬ ಲೇಖನದಡಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.

ಈ ಪುಸ್ತಕವು ನಾಲ್ಕು ವಿಭಾಗಗಳಲ್ಲಿ ಕಾಣಿಸಿಕೊಂಡಿದೆ. ಮೊದಲ ಭಾಗ ‘ಸಂಸಾರದಲ್ಲಿ ಜೋಯಿಸರು’ . ಇಲ್ಲಿ ಜೋಷಿ ಅವರ ಬಂಧುಗಳ ಹನ್ನೊಂದು ಲೇಖನಗಳಿವೆ. ಭಾಗ ಎರಡು ‘ಒಡನಾಡಿಗಳ, ಅಭಿಮಾನಿಗಳ ರತ್ನ’. ಇಲ್ಲಿ ಒಟ್ಟು ನಲುತ್ತಮೂರು ಮಂದಿ ಮಹನೀಯರು ರಸಿಕರತ್ನ ಜೋಷಿಯವರ ಬಗ್ಗೆ ಬರೆದ ಲೇಖನಗಳನ್ನು ನೀಡಲಾಗಿದೆ. ಭಾಗ ಮೂರು ‘ಜೋಯಿಸರು ನಾವು ಕಂಡಂತೆ’. ಇಲ್ಲಿ ಮೂರು ಪ್ರಕಟಿತ ಲೇಖನಗಳನ್ನು ನೀಡಲಾಗಿದೆ. ಭಾಗ ನಾಲ್ಕು ‘ಯಕ್ಷ ಹಾಸ್ಯ ರಂಗ’. ಇಲ್ಲಿ ಹತ್ತು ಮಂದಿ ಮಹನೀಯರುಗಳು ಬರೆದ ಲೇಖನಗಳಿವೆ. ಬಳಿಕ ಲೇಖನಗಳನ್ನು ಬರೆದ ಮಹನೀಯರುಗಳ ವಿಳಾಸಗಳನ್ನು ನೀಡಲಾಗಿದೆ. ಮೂವತ್ತಕ್ಕೂ ಮಿಕ್ಕಿದ ಬಣ್ಣದ ಚಿತ್ರಗಳನ್ನೂ ನೀಡಲಾಗಿದ್ದು ಪುಸ್ತಕದ ಹೊರ ಆವರಣದಲ್ಲಿ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು, ಪೇಜಾವರ ಮಠ, ಉಡುಪಿ ಇವರ ಸಂದೇಶವನ್ನು ನೀಡಲಾಗಿದೆ.
ಲೇಖಕ: ರವಿಶಂಕರ್ ವಳಕ್ಕುಂಜ
