‘ನಾದಶಂಕರ’ ಎಂಬ ಈ ಕೃತಿಯು ತೆಂಕುತಿಟ್ಟಿನ ಹಿರಿಯ ಖ್ಯಾತ ಮದ್ದಳೆಗಾರರಾದ ಪದ್ಯಾಣ ಶ್ರೀ ಶಂಕರನಾರಾಯಣ ಭಟ್ ಅವರ ಅಭಿನಂದನ ಗ್ರಂಥವು. ಇದು ಪ್ರಕಟವಾಗಿ ಓದುಗರ ಕೈ ಸೇರಿದ್ದು 2012ರಲ್ಲಿ. ಈ ಅಭಿನಂದನ ಗ್ರಂಥದ ಸಂಪಾದಕರು ಖ್ಯಾತ ಅರ್ಥಧಾರಿ, ಸಂಘಟಕರಾದ ಉಜಿರೆ ಎನ್. ಅಶೋಕ ಭಟ್ ಅವರು. ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಎಂಬ ಸಂಸ್ಥೆಯು ಈ ಪುಸ್ತಕದ ಪ್ರಕಾಶಕರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ. ಡಿ. ವೀರೇಂದ್ರ ಹೆಗಡೆಯವರು ಅನುಗ್ರಹ ಸಂದೇಶವನ್ನು ನೀಡಿ ಶುಭ ಹಾರೈಸಿರುತ್ತಾರೆ. ಸಂಪಾಜೆ ಯಕ್ಷೋತ್ಸವದ ರೂವಾರಿ, ಕಲಾಪೋಷಕ ಡಾ. ಟಿ. ಶ್ಯಾಮ್ ಭಟ್ ಅವರು ‘ರಂಗದ ಗೌರವ’ ಎಂಬ ಶೀರ್ಷಿಕೆಯಡಿ ಮುನ್ನುಡಿ ಲೇಖನವನ್ನು ಬರೆದು ಶುಭಾಶಯಗಳನ್ನು ತಿಳಿಸಿರುತ್ತಾರೆ. ಸಂಪಾದಕರಾದ ಉಜಿರೆ ಎನ್. ಅಶೋಕ ಭಟ್ಟರು ‘ಪ್ರತಿಷ್ಠಾನದ ಕುರಿತು’ ಎಂಬ ಬರಹದಲ್ಲಿ ಸಹಕರಿಸಿದವರಿಗೆಲ್ಲಾ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಬಳಿಕ ವಿದ್ವಾಂಸರು, ಕಲಾಭಿಮಾನಿಗಳು, ಕಲಾವಿದರುಗಳು ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರ ಬಗೆಗೆ ಬರೆದ ನೂರಾ ಇಪ್ಪತ್ತ ಮೂರು ಲೇಖನಗಳನ್ನು ನೀಡಲಾಗಿದೆ. ವಿದ್ವಾಂಸರೂ, ವಿಮರ್ಶಕರೂ ಆಗಿರುವ ಡಾ. ಎಂ. ಪ್ರಭಾಕರ ಜೋಶಿಯವರು ಬರೆದ ಸಂದರ್ಶನ ಲೇಖನವನ್ನು ನೀಡಿರುತ್ತಾರೆ.

ಬಳಿಕ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರು ಪಡೆದ ಪ್ರಮುಖ ಪ್ರಶಸ್ತಿಗಳು ಮತ್ತು ಸನ್ಮಾನಗಳ ವಿವರಗಳನ್ನು ನೀಡಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಡಾ. ಟಿ. ಶ್ಯಾಮ್ ಭಟ್, ಶೇಣಿ ಗೋಪಾಲಕೃಷ್ಣ ಭಟ್, ನೆಡ್ಲೆ ನರಸಿಂಹ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಡಾ. ಎಂ. ಪ್ರಭಾಕರ ಜೋಶಿ ಅವರುಗಳ ನಲ್ನುಡಿಗಳನ್ನು ನೀಡಲಾಗಿದ್ದು, ಈ ಅಭಿನಂದನಾ ಗ್ರಂಥದಲ್ಲಿ ಸುಮಾರು ಇಪ್ಪತ್ತೈದರಷ್ಟು ಬಣ್ಣದ ಮತ್ತು ಕಪ್ಪು ಬಿಳುಪಿನ ಛಾಯಾಚಿತ್ರಗಳಿವೆ. ತೆಂಕುತಿಟ್ಟಿನ ಹಿರಿಯ ಖ್ಯಾತ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಶ್ರೀಯುತರಿಂದ ಇನ್ನಷ್ಟು ಕಲಾಸೇವೆಯು ನಿರಂತರವಾಗಿ ನಡೆಯಲಿ ಎಂಬ ಆಶಯಗಳು.
ಲೇಖಕ: ರವಿಶಂಕರ್ ವಳಕ್ಕುಂಜ
