ಯಕ್ಷಗಾನವು ಶ್ರೇಷ್ಠ ಕಲೆ ಎಂಬ ಅರ್ಥದಲ್ಲಿ ಗಂಡುಕಲೆ ಎಂದು ಪ್ರಸಿದ್ಧವಾಗಿದೆ. ಹೆಣ್ಣು ಮಕ್ಕಳೂ ಗಂಡು ಕಲೆಯಲ್ಲಿ ತೊಡಗಿಸಿಕೊಂಡು ಕಲಾಸೇವೆಯನ್ನು ಮಾಡುತ್ತಿದ್ದಾರೆ. ರಂಗವೇರಿ ಅಭಿನಯಿಸುತ್ತಿದ್ದಾರೆ. ಬಾಲಕಲಾವಿದ ಕಲಾವಿದೆಯರನ್ನು ವೃತ್ತಿಕಲಾವಿದರಿಗೆ ಹೋಲಿಸುವುದು ಸರಿಯಲ್ಲ. ಆದರೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದದ್ದು ಧರ್ಮ. ವಿದ್ಯಾರ್ಜನೆಯ ಜೊತೆ ಕಲಾಸೇವೆಯನ್ನು ಮಾಡುತ್ತಾ ಹೊಳೆದು ಕಾಣಿಸಿಕೊಳ್ಳುತ್ತಿರುವ ಬಾಲಕ ಬಾಲಕಿಯರನ್ನು ನಾವು ಪ್ರೋತ್ಸಾಹಿಸೋಣ. ನಮ್ಮೆಲ್ಲರ ಪ್ರೋತ್ಸಾಹ ಉತ್ತೇಜನವು ಇನ್ನಷ್ಟು ಕಲಾಸೇವೆಯನ್ನು ಮಾಡುವಲ್ಲಿ ಅವರಿಗೆ ಟಾನಿಕ್ ಆಗಿ ಪರಿಣಮಿಸಲಿ. ಮೊದಲೆಲ್ಲಾ ಬಾಲಕಿಯರ ಕಲಾಕಲಿಕೆ ಸಂಗೀತಕ್ಕೆ ಮಾತ್ರ ಸೀಮಿತವಾಗಿತ್ತು. ಇಂದು ಹಾಗಿಲ್ಲ. ನಮ್ಮ ಎಲ್ಲಾ ಕಲಾ ಪ್ರಾಕಾರ ಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಯಕ್ಷಗಾನದಲ್ಲೂ ಕೂಡಾ. ಅಂತಹ ಅನೇಕ ವಿದ್ಯಾರ್ಥಿನಿಯರ ಸಾಲಿನಲ್ಲಿ ಕು| ಹೇಮಸ್ವಾತಿ ಕುರಿಯಾಜೆ ಮತ್ತು ಈಕೆಯ ಸಹೋದರಿ ಕು| ದೇವಿಕಾ ಕುರಿಯಾಜೆ ಸೇರಿಕೊಳ್ಳುತ್ತಾರೆ.
ಕುರಿಯಾಜೆ ಸಹೋದರಿಯರು ಶ್ರೀ ಉದಯಶಂಕರ ಕುರಿಯಾಜೆ ಮತ್ತು ಶ್ರೀಮತಿ ವಸಂತಿಲಕ್ಷ್ಮಿ ದಂಪತಿಗಳ ಪುತ್ರಿಯರು. ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಕುರಿಯಾಜೆ ಮನೆ. ಹೇಮಸ್ವಾತಿಯ ಜನ್ಮ ದಿನಾಂಕ 15.05.2003. ಬೆಳ್ಳಾರೆ ಪದವಿಪೂರ್ವ ಕಾಲೇಜಿನಲ್ಲಿ ಮತ್ತು ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಳು. ಕು| ದೇವಿಕಾ ಜನಿಸಿದ್ದು 2004 ಡಿಸೆಂಬರ್ 11ರಂದು. ಬೆಳ್ಳಾರೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತ್ತು ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಳು. ಇಬ್ಬರೂ ಈಗ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಬ್ಬರೂ ಯಕ್ಷಗಾನ ನಾಟ್ಯ ಕಲಿತದ್ದು ಅಧ್ಯಾಪಕ, ಕಲಾವಿದ ಹಾಗು ಯಕ್ಷರಂಗ ಬೆಳ್ಳಾರೆಯ ಸಂಚಾಲಕ ಶ್ರೀ ವಾಸುದೇವ ರೈಗಳಿಂದ. ಸಂಗೀತ ಹೇಳಿಕೊಟ್ಟ ಗುರುಗಳು ಶ್ರೀಮತಿ ಸುಮತಿ ಬೆಳ್ಳಾರೆ, ಶ್ರೀಮತಿ ಮಾಲಿನಿ ಮತ್ತು ಶ್ರೀಮತಿ ವೀಣಾ ರಾಘವೇಂದ್ರ (ಗಾನಸರಸ್ವತಿ ಕಲಾಶಾಲೆ, ನೆಹರು ನಗರ, ಪುತ್ತೂರು) ಶ್ರೀಮತಿ ಯೋಗೀಶ್ವರೀ ಜಯಪ್ರಕಾಶ್ ಇವರಿಂದ ಭಾರತನಾಟ್ಯವನ್ನೂ ಕಲಿಯುತ್ತಿದ್ದಾರೆ.
ಕು| ಹೇಮಸ್ವಾತಿಯು ಮೊದಲು ರಂಗವೇರಿದ್ದು ಅಭಿಮನ್ಯು ಕಾಳಗದ ದ್ರೋಣನಾಗಿ. ಯಕ್ಷರಂಗ, ಬೆಳ್ಳಾರೆ ತಂಡದ ಸದಸ್ಯೆಯಾಗಿ ಸ್ಪರ್ಧೆ ಹಾಗೂ ಇನ್ನಿತರ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾಳೆ. ಜಾಂಬವತೀ ಕಲ್ಯಾಣ ಪ್ರಸಂಗದ ಶ್ರೀಕೃಷ್ಣನಾಗಿ 25ಕ್ಕೂ ಹೆಚ್ಚು ಬಾರಿ, ರಾಮಾಂಜನೇಯ ಪ್ರಸಂಗದ ಹನುಮಂತನಾಗಿ 13 ಬಾರಿ, ಕೃಷ್ಣಲೀಲೆ- ಕಂಸ ವಧೆಯ ಕೃಷ್ಣನಾಗಿ, ಕುಶಲವರ ಕಾಳಗದ ಕುಶನಾಗಿ ರಂಗವೇರಿದ್ದಾಳೆ. ಸಂಪಾಜೆ ಕಲ್ಲುಗುಂಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಯಕ್ಷರಂಗ ತಂಡದಲ್ಲಿದ್ದು ಇಂದ್ರಜಿತು ಕಾಳಗದ ಲಕ್ಷ್ಮಣನಾಗಿ ಅಲ್ಲದೆ ಕಲಾವಿದ, ಉದ್ಯಮಿ ಸಂಘಟಕ ಶ್ರೀ ಬೆಳ್ಳಾರೆ ರಾಮ ಜೋಯಿಸರ ಸಂಯೋಜನೆಯ ಮಡಿಕೇರಿ ಸಿದ್ಧಾಪುರದಲ್ಲಿ ನಡೆದ ಪ್ರದರ್ಶನದಲ್ಲೂ ಲಕ್ಷ್ಮಣನಾಗಿ ಅಭಿನಯಿ ಸಿದ್ದಳು.
ಅಂದು ರಂಗದ ರಾಜ ಶ್ರೀ ರಾಧಾಕೃಷ್ಣ ನಾವುಡರು ಇಂದ್ರಜಿತುವಾಗಿಯೂ ಕಟೀಲು ಮೇಳದ ಸ್ತ್ರೀಪಾತ್ರಧಾರಿ ಮಹೇಶ್ ಸಾಣೂರು ಅವರು ಶ್ರೀರಾಮನ ಪಾತ್ರವನ್ನೂ ನಿರ್ವಹಿಸಿದ್ದರು. ಬೆಳ್ಳಾರೆಯಲ್ಲಿ ಹಿರಣ್ಯಾಕ್ಷನ ಪಾತ್ರವನ್ನು ಮಾಡಿದಾಗ ಈಕೆಯ ತಂಗಿ ದೇವಿಕಾ ಕುರಿಯಾಜೆ ಭೂದೇವಿ ಪಾತ್ರ ವಹಿಸಿದ್ದಳು. ಖ್ಯಾತ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು ಇವರ ಬಂಧುಗಳು. ಉದಯಶಂಕರ ಕುರಿಯಾಜೆಯವರು ಬಾಯಾರು ಸೌದಿಮೂಲೆಯವರು. (ಪದ್ಯಾಣ ಮನೆತನ) ಪದ್ಯಾಣ ಗಣಪತಿ ಭಟ್ಟರ ಮನೆಗೆ ಹೋಗಿ ಹೇಮಸ್ವಾತಿಯು ಭಾಗವತಿಕೆಯನ್ನು ಕಲಿಯುತ್ತಿದ್ದಾಳೆ. ರಂಗದಲ್ಲಿ ಪೂರ್ವರಂಗದ ಪದ್ಯಗಳನ್ನು ಹಾಡಿರುತ್ತಾಳೆ.ಈಗ ತಾಳಮದ್ದಳೆ ಕೂಟಗಳಲ್ಲೂ, ಯಕ್ಷಗಾನ ಪ್ರದರ್ಶನಗಳಲ್ಲೂ ಹಾಡುತ್ತಾಳೆ. ಭರತನಾಟ್ಯ ಸೀನಿಯರ್ ಕಲಿಯುತ್ತಿದ್ದು ಗುರು ಶ್ರೀಮತಿ ಯೋಗೀಶ್ವರೀ ಜಯಪ್ರಕಾಶ್‍ರ ವೈಷ್ಣವಿ ನಾಟ್ಯಾಲಯ, ಪುತ್ತೂರು ತಂಡದಲ್ಲಿದ್ದು ಪುತ್ತೂರು ಜಾತ್ರೋತ್ಸವ, ಉಡುಪಿ ರಾಜಾಂಗಣ, ಬೆಳ್ಳಾರೆ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಪ್ರದರ್ಶನಗಳಲ್ಲಿ ಹಾಗೂ ಅನೇಕ ಕಡೆ ತ್ರಿಕಾಲ ಪೂಜೆಯ ಅಷ್ಟಾವಧಾನ ಕಾರ್ಯಕ್ರಮಗಳಲ್ಲೂ ನೃತ್ಯ ಪ್ರದರ್ಶನ ನೀಡಿರುತ್ತಾಳೆ.
ಕಿರಿಯವಳು ದೇವಿಕಾ ಕುರಿಯಾಜೆ ಜೂನಿಯರ್ ಗ್ರೇಡ್ ಸಂಗೀತ ಉತ್ತೀರ್ಣಳಾಗಿದ್ದು ಭರತನಾಟ್ಯದಲ್ಲೂ ಜೂನಿಯರ್ ಪೂರೈಸಿ ಸೀನಿಯರ್ ಕಲಿಯುತ್ತಿದ್ದಾಳೆ. ಅಕ್ಕನ ಜೊತೆಯಲ್ಲಿ ಪುತ್ತೂರು, ಉಡುಪಿ, ಬೆಳ್ಳಾರೆ ಈಶ್ವರಮಂಗಲ ಮೊದಲಾದೆಡೆ ಭಾಗವಹಿಸಿರುತ್ತಾಳೆ. ಯಕ್ಷಗಾನ ವೇಷ ಮೊದಲು ನಿರ್ವಹಿಸಿದ್ದು ಕೋಟೆ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ರಾಮಾಂಜನೇಯ ಪ್ರಸಂಗದ ಸೀತೆಯಾಗಿ. ಜಾಂಬವತಿ ಕಲ್ಯಾಣದ ಬಲರಾಮ, ಕುಶಲವರ ಕಾಳಗದ ಶ್ರೀರಾಮ, ಲಕ್ಷ್ಮಣ, ಹಿರಣ್ಯಾಕ್ಷ ವಧೆಯ ಭೂದೇವಿ (2 ಬಾರಿ), ಆರು ಬಾರಿ ಮಾಯಾ ಪೂತನಿಯ ಪಾತ್ರವನ್ನು ನಿರ್ವಹಿಸಿದ್ದಾಳೆ.
“ಭರತನಾಟ್ಯ ಕಲಿತದ್ದು ಯಕ್ಷಗಾನಕ್ಕೂ, ಯಕ್ಷಗಾನ ನಾಟ್ಯ ಕಲಿತದ್ದು ಭರತನಾಟ್ಯ ಕಲಿಕೆಗೂ ಅನುಕೂಲವಾಯಿತು. ನಾವಿನ್ನೂ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕಲಾಸೇವೆಯನ್ನೂ ಮಾಡುತ್ತಿದ್ದೇವೆ. ಮನೆಯವರ, ಶಾಲಾ ಶಿಕ್ಷಕರ, ಕಲಾವಿದ್ಯೆಗಳನ್ನು ಹೇಳಿಕೊಡುತ್ತಿರುವ ಗುರುಗಳ ಆಶೀರ್ವಾದದಿಂದ ಇದು ಸಾಧ್ಯವಾಯಿತು” ಎಂದು ಕುರಿಯಾಜೆ ಸಹೋದರಿಯರು ಹೇಳುತ್ತಾರೆ. ಹೇಮಸ್ವಾತಿಯು ವಿಜ್ಞಾನ ವಸ್ತುಪ್ರದರ್ಶನದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹಾಗೂ ದೇವಿಕಾ ಶಾಲಾ ತಂಡದ ರಾಜ್ಯಮಟ್ಟದ ನಾಟಕ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಕು| ಹೇಮಸ್ವಾತಿಯು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರತಿಭಾ ಕಾರಂಜಿ ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿರುತ್ತಾಳೆ. ಬಾಲ ಕಲಾವಿದೆಯರೀರ್ವರಿಗೂ ಶುಭಾಶಯಗಳು. ಉನ್ನತ ವ್ಯಾಸಂಗವು ಚೆನ್ನಾಗಿ ನಡೆಯಲಿ. ಉಜ್ವಲ ಭವಿಷ್ಯವು ದೊರಕಲಿ. ಬಾಳು ಹಸನಾಗಲಿ.
ಲೇಖಕ: ರವಿಶಂಕರ್ ವಳಕ್ಕುಂಜ