Saturday, January 18, 2025
Homeಪುಸ್ತಕ ಮಳಿಗೆಪುಳಿಂಚ - ಪುಳಿಂಚ ರಾಮಯ್ಯ ಶೆಟ್ಟಿ ಸ್ಮೃತಿ - ಕೃತಿ 

ಪುಳಿಂಚ – ಪುಳಿಂಚ ರಾಮಯ್ಯ ಶೆಟ್ಟಿ ಸ್ಮೃತಿ – ಕೃತಿ 

ಪುಳಿಂಚ ರಾಮಯ್ಯ ಶೆಟ್ಟಿ ಸ್ಮೃತಿ – ಕೃತಿಯು ಪ್ರಕಟವಾಗಿ ಓದುಗರ ಕೈ ಸೇರಿದ್ದು 2016ರಲ್ಲಿ. ಶೀರ್ಷಿಕೆಯೇ ಸೂಚಿಸುವಂತೆ ಈ ಕೃತಿಯು ಖ್ಯಾತ ಯಕ್ಷಗಾನ ಕಲಾವಿದರಾಗಿ ರಂಗದಲ್ಲಿ ಮೆರೆದ ಶ್ರೀ ಪುಳಿಂಚ ರಾಮಯ್ಯ ಶೆಟ್ಟರ ಸಂಸ್ಮರಣ ಗ್ರಂಥವಾಗಿ ಲೋಕಾರ್ಪಣೆಗೊಂಡಿತ್ತು. ಈ ಹೊತ್ತಗೆಯ ಪ್ರಕಾಶಕರು ಪುಳಿಂಚ ಶ್ರೀಧರ ಶೆಟ್ಟಿಯವರು, ಪುಳಿಂಚ ಸೇವಾ ಪ್ರತಿಷ್ಠಾನ, ಮಂಗಳೂರು ಅವರು. ಲೇಖಕರು ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು. ಶ್ರೀ ಪುಳಿಂಚ ರಾಮಯ್ಯ ಶೆಟ್ಟಿಯವರ ಜೀವಿತಾವಧಿ 1939 – 2002. ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಯಕ್ಷಪಯಣವನ್ನು ಆರಂಭಿಸಿದ ಶ್ರೀಯುತರು ನಲುವತ್ತೇಳು ವರ್ಷಗಳ ಯಕ್ಷ ಕಲಾಮಾತೆಯ ನಿಷ್ಠಾವಂತ ಸೇವಕನಾಗಿ ಪ್ರಸಿದ್ಧರಾದರು. ತೆಂಕುತಿಟ್ಟು ಯಕ್ಷಗಾನದ ಹಳೆಯ ಪದ್ಧತಿಯಂತೆ ಪೂರ್ವರಂಗದ ವೇಷಗಳಿಂದ ತೊಡಗಿ, ಬಳಿಕ ಸ್ತ್ರೀವೇಷ, ಪುಂಡುವೇಷ, ಪೀಠಿಕೆ ವೇಷ, ಎದುರು ವೇಷ, ಬಣ್ಣದ ವೇಷ ಹೀಗೆ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ದಾಟಿ ಬಂದವನೇ ಹಾಸ್ಯಗಾರನಾಗಬೇಕು. ಹಾಸ್ಯಗಾರ ಎನಿಸಿಕೊಳ್ಳಲು ಬೇಕಾದ ಅರ್ಹತೆಗಳೇನು ಎಂಬುದನ್ನು ಇದರಿಂದ ನಮಗೆ ತಿಳಿದುಕೊಳ್ಳಬಹುದು. ಆತ ಎಲ್ಲವನ್ನೂ ತಿಳಿದಿರಬೇಕು ಎಂಬ ಕಾರಣದಿಂದಲೇ ಈ ವ್ಯವಸ್ಥೆಯನ್ನು ಹೇಳಿರಬಹುದು. ಈ ರೀತಿಯಾಗಿಯೇ ಸಾಗಿ ಬಂದು ಹಾಸ್ಯಗಾರ ಎಂಬ ಘನ ಸ್ಥಾನಕ್ಕೆ ಅರ್ಹರಾದವರು ಶ್ರೀ ಪುಳಿಂಚ ರಾಮಯ್ಯ ಶೆಟ್ಟಿಯವರು. ಶ್ರೀಯುತರ ಕುರಿತಾದ ಪುಸ್ತಕದ ಬಗೆಗೆ ಬರೆಯಲು ಅವಕಾಶ ಸಿಕ್ಕಿದುದಕ್ಕಾಗಿ ಸಂತೋಷಪಡುತ್ತೇನೆ. ಅದು ಭಾಗ್ಯವೆಂದೂ ಭಾವಿಸುತ್ತೇನೆ. ಇದು ಒಟ್ಟು ಇನ್ನೂರ ಮೂವತ್ತೆಂಟು ಪುಟಗಳುಳ್ಳ ಪುಸ್ತಕ. 2016 ಫೆಬ್ರವರಿ 20 ಶನಿವಾರದಂದು ಪುಳಿಂಚ ಸೇವಾ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಪುಳಿಂಚ ಪ್ರಶಸ್ತಿ ಪ್ರಧಾನ, ಪುಳಿಂಚ ಸೇವಾ ರತ್ನ ಪುರಸ್ಕಾರದ ಜತೆಯಲ್ಲಿ ಈ ಕೃತಿಯೂ ಬಿಡುಗಡೆಗೊಂಡಿತ್ತು. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಪ್ರೊ| ಬಿ.ಎ. ವಿವೇಕ ರೈ ಅವರು. ಶ್ರೀಯುತರು ಪುಳಿಂಚ ರಾಮಯ್ಯ ಶೆಟ್ಟಿಯವರನ್ನು ಎಳವೆಯಿಂದಲೇ ಬಲ್ಲವರು. ಪುಳಿಂಚ ರಾಮಯ್ಯ ಶೆಟ್ಟಿಯವರ ವ್ಯಕ್ತಿತ್ವ, ಕಲಾವಿದರಾಗಿ ಅವರ ಸಾಧನೆ, ಈ ಕೃತಿಯ ಸ್ವರೂಪಗಳ ಬಗೆಗೆ ತಮ್ಮ ಮುನ್ನುಡಿ ಬರಹದಲ್ಲಿ ವಿವರಿಸಿದ್ದಾರೆ. ”ಪುಳಿಂಚ ರಾಮಯ್ಯ ಶೆಟ್ಟಿಯವರ ಮಗ ಶ್ರೀಧರ ಶೆಟ್ಟಿಯವರು ಹೊರತಂದಿರುವ ಈ ಸ್ಮರಣ ಗ್ರಂಥ ಪಿತೃಋಣವನ್ನು ಸಲ್ಲಿಸಿದ ಮಹತ್ವದ ನೆನಪಿನ ಸಂಪುಟ. ತಂದೆಯ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಲು ಶ್ರೀಧರ ಶೆಟ್ಟಿಯವರು  ತಾವು ಜನಿಸದ, ತಾವು ಬದುಕದ ‘ಪುಳಿಂಚ’ ಊರನ್ನು ತನ್ನ ಹೆಸರಿನ ಜೊತೆಗೆ ಪ್ರೀತಿಯಿಂದ ಸೇರಿಸಿಕೊಂಡಿದ್ದಾರೆ. ತಮ್ಮ ತಂದೆಯ ಕಾಲದ ಯಕ್ಷಗಾನ ಕಲಾವಿದರ ಬಡತನವನ್ನು ಮನಗಂಡು ಕಲಾವಿದರಿಗೆ ನೆರವು ನೀಡುವ, ಹಿರಿಯ ಕಲಾವಿದರನ್ನು ಗೌರವಿಸುವ ಕಾಯಕವನ್ನು ಪ್ರಾಂಜಲವಾಗಿ ಮಾಡುತ್ತಿದ್ದಾರೆ. ಅದಕ್ಕೆ ಮುಕುಟಪ್ರಾಯವಾಗಿ ಈ ನೆನಪಿನ ಸಂಪುಟ ಮೂಡಿಬಂದಿದೆ”.  ಪ್ರೊ| ಬಿ.ಎ. ವಿವೇಕ ರೈಗಳು ಪುಳಿಂಚ ಶ್ರೀಧರ ಶೆಟ್ಟಿಯವರ ಸತ್ಕಾರ್ಯವನ್ನು ಮೆಚ್ಚಿ ಆಡಿದ ನುಡಿಗಳಿವು. ಬಳಿಕ ಸಂಪಾದಕರಾದ  ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು ‘ಪುಳಿಂಚರ ನೆನಪಿಗೊಂದು ತಳಿರ ಬಿಂದು’ ಎಂಬ ಲೇಖನದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಶ್ರೀ ಪುಳಿಂಚ ರಾಮಯ್ಯ ಶೆಟ್ಟರ ಪುತ್ರರೂ ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶ್ರೀ ಪುಳಿಂಚ ಶ್ರೀಧರ ಶೆಟ್ಟರು ‘ಪ್ರಕಾಶಕರ ಮಾತು’ ಎಂಬ ಶೀರ್ಷಿಕೆಯಡಿ ತಮ್ಮ ಮನದ ಮಾತುಗಳನ್ನು ಅಕ್ಷರ ರೂಪಕ್ಕಿಳಿಸಿ, ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಈ ಕೃತಿಯು ನುಡಿಸೇಸೆ, ಪುಳಿಂಚರೆಂದರೆ,  ಕಲಾವಿದರು ಕಂಡ ಪುಳಿಂಚ, ತನ್ನವರ ಕಣ್ಣಲ್ಲಿ, ಅನುಬಂಧ ಐದು ವಿಭಾಗಗಳಿಂದ ಕೂಡಿದೆ. ಮೊದಲ ವಿಭಾಗ ನುಡಿಸೇಸೆ. ಇಲ್ಲಿ ಇಪ್ಪತ್ತಾರು ಮಂದಿ ಮಹನೀಯರುಗಳ ಲೇಖನಗಳನ್ನು ನೀಡಲಾಗಿದೆ. ಎರಡನೇ ವಿಭಾಗ ‘ಪುಳಿಂಚರೆಂದರೆ’. ಇಲ್ಲಿಯೂ ಇಪ್ಪತ್ತಾರು ಮಂದಿ ಮಹನೀಯರುಗಳು ಪುಳಿಂಚ ರಾಮಯ್ಯ ಶೆಟ್ಟರ ಕುರಿತಾಗಿ ಬರೆದ ಲೇಖನಗಳಿವೆ. ಮೂರನೇ ವಿಭಾಗ ‘ಕಲಾವಿದರು ಕಂಡ ಪುಳಿಂಚ’. ಇಲ್ಲಿ ಮೂವತ್ತೆಂಟು ಮಂದಿ ಕಲಾವಿದರುಗಳ ಬರಹಗಳನ್ನು ನೀಡಿರುತ್ತಾರೆ. ನಾಲ್ಕನೆಯ ವಿಭಾಗ ‘ತನ್ನವರ ಕಣ್ಣಲ್ಲಿ’. ಇಲ್ಲಿ ಪುಳಿಂಚ ರಾಮಯ್ಯ ಶೆಟ್ಟರ ಆತ್ಮೀಯರು ಮತ್ತು ಬಂಧುಗಳ ಇಪ್ಪತ್ತಾರು ಬರಹಗಳಿವೆ. ಕೊನೆಯ ವಿಭಾಗ ‘ಅನುಬಂಧ’. ಇಲ್ಲಿ ಪುಳಿಂಚ ಸ್ಮೃತಿ ಚಿತ್ರ, ಪುಳಿಂಚ ಪ್ರಶಸ್ತಿಗೆ ಅಷ್ಟದಿಗ್ಗಜರು, ಪುಳಿಂಚ ಹಸ್ತಾಕ್ಷರ, ಪುಳಿಂಚ ಯಕ್ಷಗಾನ ಪ್ರಸಂಗ, ಪುಳಿಂಚ ಪ್ರಕಟಿತ ಕೃತಿಗಳು, ಸುದ್ದಿ ಗದ್ದಿಗೆಯಲ್ಲಿ ಪುಳಿಂಚರು, ಮಾನಪತ್ರಗಳು ಎಂಬ ವಿಚಾರಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ. ಪುಳಿಂಚ ಎಂಬ ಕೃತಿಯನ್ನು ಕರ್ನಾಟಕ ಮತ್ತು ಕಟೀಲು ಮೇಳಗಳನ್ನು ಸಂಚಾಲಕರಾಗಿ ಮುನ್ನಡೆಸಿದ್ದ ಕೀರ್ತಿಶೇಷ ಕಲ್ಲಾಡಿ ಕೊರಗ ಶೆಟ್ಟರಿಗೂ ಕೀರ್ತಿಶೇಷ ದೇವಶ್ಯ ಬೊಳ್ನಾಡುಗುತ್ತು ಮಹಾಲಿಂಗ ಶೆಟ್ಟರಿಗೂ ಅರ್ಪಿಸಲಾಗಿದೆ. ಅನುಬಂಧ ವಿಭಾಗದಲ್ಲಿ ಸುಮಾರು ನೂರಕ್ಕೂ ಮಿಕ್ಕಿದ ಬಣ್ಣದ ಮತ್ತು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ. ಅವ್ಯಕ್ತ ಪ್ರಪಂಚದಲ್ಲಿರುವ ಹಿರಿಯ ಖ್ಯಾತ ಕಲಾವಿದರಾದ ಪುಳಿಂಚ ಶ್ರೀ ರಾಮಯ್ಯ ಶೆಟ್ಟರಿಗೆ ನುಡಿನಮನಗಳು. ಪುಳಿಂಚ ಸೇವಾ ಪ್ರತಿಷ್ಠಾನ (ರಿ) ಮಂಗಳೂರು ಇವರಿಗೆ ಶುಭಾಶಯಗಳು. 

RELATED ARTICLES

1 COMMENT

  1. ಮುಂಬಯಿ ಮಹಾನಗರದಲ್ಹಿ ತುಳು ಕನ್ನಡಿಗರಿಗೆ ಮುದತಂದುಕೊಟ್ಹ ಒಬ್ಬ ಮಹಾನ್ ಕಲಾವಿದರು ಕರ್ನಾಟಕ ಯಕ್ಷಗಾನ ದಲ್ಲಿ ಇವರು ಹಾಗೂ ಮಿಜಾರು ಅಣ್ಣ ಪ ಕೊರಗಪ್ಹ ಶೇಟ್ರು ಇವರೆಲ್ಲ ಇದ್ದ ರೆ ಅಂತ ತಿಳಿದಾಗಲೆ ಮುಂಬಾಯಿಯ ಹೋಟೆಲು ಕ್ಯಾನ್ಟಿನ್ ನ ತುಳು ಕನ್ನಡಿಗರ ಗುಂಪು ಗುಂಪಾಗಿ ನಡೆಯಲಿದೆ ಮಟುಂಗದ ಕರ್ನಾಟಕ ಸಂಘಕ್ಹೆ ಅಷ್ಟೇ ಕುಸಿ ಇದು ಸತ್ಯ.

LEAVE A REPLY

Please enter your comment!
Please enter your name here

Most Popular

Recent Comments