‘ಚೌಕಿ’ ಎಂದರೆ ಯಕ್ಷಗಾನದ ಬಣ್ಣದ ಮನೆ. ಗ್ರೀನ್ ರೂಮ್ ಎಂದು ಹೇಳಿದರೆ ಕೆಲವರಿಗೆ ಬೇಗ ಅರ್ಥವಾದೀತು! ಯಕ್ಷಗಾನದ ರಂಗಸ್ಥಳದ ಬಣ್ಣ ಬಣ್ಣದ ವೇಷಗಳ ಪಾತ್ರಧಾರಿಗಳನ್ನು ನೋಡಿ ಪುರಾಣ ಲೋಕದ ಅದ್ಭುತ ಪಾತ್ರಗಳನ್ನು ನೋಡಿ ಭ್ರಮಾಧೀನರಾದವರಿಗೆ ಆ ಪಾತ್ರಧಾರಿಗಳ ನೈಜ ಬದುಕು ರಂಗದ ಹೊರಗೆ ಹೇಗಿರಬಹುದು ಎಂದು ತಿಳಿದಿರಬೇಕೆಂದೇನೂ ಇಲ್ಲ. ಕಲಾವಿದರ ಬದುಕೂ ಆ ಪಾತ್ರಗಳಂತೆ ವರ್ಣಮಯವಾಗಿರಬಹುದೆ ಎಂದು ಯೋಚಿಸುವವರು ರಾಜಶ್ರೀ ಟಿ. ರೈಯವರ ತುಳು ಕಾದಂಬರಿ ‘ಚೌಕಿ’ಯನ್ನೊಮ್ಮೆ ಓದಿ ನೋಡಬೇಕು.
ತುಳು ಭಾಷೆಯಲ್ಲಿ ಯಕ್ಷಗಾನ ಸಂಬಂಧಿತ ಕಾದಂಬರಿಯೊಂದು ಪ್ರಕಟವಾದುದು ಇದೇ ಮೊದಲು ಎಂದು ಕಾಣುತ್ತದೆ. ಕನ್ನಡದಲ್ಲಿ ಯಕ್ಷಗಾನದ ಕೆಲವು ಕಾದಂಬರಿಗಳು ಈ ಹಿಂದೆ ಪ್ರಕಟವಾಗಿವೆ. ಆದರೆ ತುಳು ಭಾಷೆಯಲ್ಲಿ ಇದೇ ಮೊದಲ ಬಾರಿಗೆ ರಾಜಶ್ರೀ ಟಿ. ರೈಯವರು ಯಕ್ಷಗಾನದ ಕಾದಂಬರಿ ರಚಿಸುವ ಸಾಹಸಕ್ಕೆ ಮುಂದಾಗಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಕಾದಂಬರಿಯುದ್ದಕ್ಕೂ ಯಕ್ಷಗಾನದ ಹಿಂದಿನ ಸ್ಥಿತಿಗತಿಗಳ ಬಗ್ಗೆ ಲೇಖಕಿ ಬೆಳಕು ಚೆಲ್ಲುವುದರ ಜೊತೆಗೆ ಕಲಾವಿದರ ನಿಜ ಬದುಕಿನ ಬವಣೆಗಳು, ಕಷ್ಟದ ಜೀವನ ಮೊದಲಾದುವುಗಳ ಬಗ್ಗೆ ಮನೋಜ್ಞವಾಗಿ ಚಿತ್ರಿಸಿದ್ದಾರೆ. ತುಳು ಭಾಷೆಯ ಸೌಂದರ್ಯ, ಸೊಬಗುಗಳು ಈ ಕೃತಿಯಲ್ಲಿ ಎದ್ದು ಕಾಣುವ ಇನ್ನೊಂದು ಅಂಶ. ರಂಗದ ಪ್ರದರ್ಶನ ಹಿಂದೆ ಚೌಕಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅದರಂತೆಯೇ ಕಲಾವಿದನ ಕಲಾಜೀವನದ ಹಿಂದಿನ ನಿಜಜೀವನದ ಕತೆಗೆ ‘ಚೌಕಿ’ ಎಂಬ ಹೆಸರು ನಿಜವಾಗಿಯೂ ಒಪ್ಪುತ್ತದೆ. ಇವರ ಈ ‘ಚೌಕಿ’ ಕಾದಂಬರಿಗೆ ಈ ಬಾರಿಯ ಪಣಿಯಾಡಿ ಪ್ರಶಸ್ತಿಯ ಪುರಸ್ಕಾರ ದೊರಕಿದೆ. ಬಜಿಲಜ್ಜೆ, ಕೊಂಬು ಮತ್ತು ಪನಿಯಾರ ಇವುಗಳು ರಾಜಶ್ರೀಯವರ ಇತರ ಕೃತಿಗಳು. ಇವರ ಕೊಂಬು ಕೃತಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.