Friday, September 20, 2024
Homeಯಕ್ಷಗಾನಶಶಿಕಾಂತ ಶೆಟ್ಟಿ ಕಾರ್ಕಳ - ಪ್ರತಿಭಾವಂತ ಸ್ತ್ರೀಪಾತ್ರಧಾರಿ

ಶಶಿಕಾಂತ ಶೆಟ್ಟಿ ಕಾರ್ಕಳ – ಪ್ರತಿಭಾವಂತ ಸ್ತ್ರೀಪಾತ್ರಧಾರಿ

ಯಕ್ಷಗಾನ ಕ್ಷೇತ್ರದಲ್ಲಿ ಸ್ತ್ರೀಪಾತ್ರಗಳನ್ನು ನಿರ್ವಹಿಸುವ ಕಲಾವಿದರಿಗೆ ರೂಪವು (ಆಂಗಿಕ ಸೌಂದರ್ಯ) ಪ್ರಾಥಮಿಕ ಅವಶ್ಯಕತೆಗಳಲ್ಲೊಂದು. ಇದು ದೈವದತ್ತವಾಗಿ ದೊರೆಯುವಂತಹ ವಿಚಾರ. ಈ ಬಗೆಗೆ ಕಲಾವಿದನನ್ನು ಆಕ್ಷೇಪಿಸುವಂತಿಲ್ಲ. ಆಕರ್ಷಕ ರೂಪವನ್ನು ಹೊಂದಿರದಿದ್ದರೂ, ತನ್ನ ಪ್ರತಿಭಾ ವ್ಯಾಪಾರದಿಂದಲೇ ಸ್ತ್ರೀಪಾತ್ರಗಳಲ್ಲಿ ಅಭಿನಯಿಸಿ, ಯಕ್ಷನಾಯಿಕೆಯಾಗಿ ಖ್ಯಾತರಾದವರಿದ್ದಾರೆ.

ದೈಹಿಕ ಸೌಂದರ್ಯದ ಜತೆ ಪ್ರತಿಭಾಸೌಂದರ್ಯವೂ ಸೇರಿದರೆ ಕಲಾವಿದನಿಗೆ ಸ್ತ್ರೀಪಾತ್ರಧಾರಿಯಾಗಿ ಮೆರೆಯಲು ಬೇರಿನ್ನೇನು ಬೇಕು? ಯಕ್ಷಗಾನವು ದೃಶ್ಯಮಾಧ್ಯಮವೂ ಹೌದು. ಆದುದರಿಂದ ಸ್ತ್ರೀ ಸಹಜತೆಗೆ ಒಪ್ಪುವ ದೇಹ ಸೌಂದರ್ಯವೂ ಬೇಕೆಂಬುದನ್ನು ಎಲ್ಲಾ ಕಲಾವಿದರೂ ತಿಳಿದಿರುತ್ತಾರೆ. ಆದುದರಿಂದ ನಲುವತ್ತು-ನಲುವತ್ತೈದು ವರ್ಷಗಳು ಕಳೆದಾಗ, ಅಥವಾ ವೃದ್ಧಿಯ ಪರಿಣಾಮದಿಂದ ತನುವಿನೊಳಗಿರುವ ತಾರುಣ್ಯವು ಮರೆಯಾಗುತ್ತಿದೆ ಎಂಬ ಅರಿವಾದಾಗ ಸಹಜವಾಗಿ ಸ್ತ್ರೀಪಾತ್ರಧಾರಿಗಳು ಪುರುಷ ಪಾತ್ರಗಳತ್ತ ಗಮನಹರಿಸುವುದನ್ನು ನಾವು ಕಾಣಬಹುದು.

ಇವರು ಚತುರಮತಿಗಳು. ಗಳಿಸಿದ ಹೆಸರನ್ನು ಉಳಿಸಬೇಕು. ವೃತ್ತಿರಂಗದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲೇಬೇಕು ಎಂಬ ಕಾರಣಕ್ಕಾಗಿಯೇ ಈ ನಿರ್ಣಯವನ್ನು ಕೈಗೊಳ್ಳುತ್ತಾರೆ. ಈ ವಿಚಾರದ ಬಗ್ಗೆ ಗಮನಹರಿಸಿದರೆ ತೆಂಕಿನಲ್ಲಿ ಕುಂಬಳೆ ಶ್ರೀಧರ ರಾಯರು ಮತ್ತು ಬಾಯಾರು ರಮೇಶ ಭಟ್ಟರನ್ನೂ, ಬಡಗಿನಲ್ಲಿ ನೀಲ್ಕೋಡು ಶಂಕರ ಹೆಗಡೆಯವರನ್ನೂ ನಮಗೆ ನೆನಪಾಗದೆ ಇರದು. ಪ್ರಸ್ತುತ ಆಕರ್ಷಕ ರೂಪ ಮತ್ತು ಪ್ರತಿಭೆಯನ್ನು ಹೊಂದಿರುವ ಉದಯೋನ್ಮುಖ ಸ್ತ್ರೀಪಾತ್ರಧಾರಿಗಳಲ್ಲಿ ಕಾರ್ಕಳ ಶಶಿಕಾಂತ ಶೆಟ್ಟರೂ ಒಬ್ಬರು. ಇವರು ಉಭಯತಿಟ್ಟುಗಳಲ್ಲಿ ಪ್ರವೀಣರು. ವರ್ತಮಾನದಲ್ಲಿ ಬಹು ಬೇಡಿಕೆಯ ಸ್ತ್ರೀಪಾತ್ರಧಾರಿಯಾಗಿ ಮಿಂಚುತ್ತಿದ್ದಾರೆ. ಜತೆಗೆ ಪುರುಷವೇಷಗಳನ್ನೂ ಅಷ್ಟೇ ಸಮರ್ಥವಾಗಿ ನಿರ್ವಹಿಸುತ್ತಾರೆ. ತಾಳಮದ್ದಳೆಗಳಲ್ಲೂ ಕಾಣಿಸಿಕೊಳ್ಳುತ್ತಾರೆ.

ಆದುದರಿಂದ ನಿಜಾರ್ಥದಲ್ಲಿ ಇವರೊಬ್ಬ ಯಕ್ಷಗಾನದ ಸವ್ಯಸಾಚಿ. 2003-2004ರಿಂದ ತೊಡಗಿ ಕಳೆದ ಹದಿನೆಂಟು ವರ್ಷಗಳಿಂದ ಸಾಲಿಗ್ರಾಮ ಮೇಳದ ಸ್ತ್ರೀವೇಷಧಾರಿಯಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಶ್ರೀ ಶಶಿಕಾಂತ ಶೆಟ್ಟರ ಹುಟ್ಟೂರು ಕಾರ್ಕಳದ ಸಮೀಪದ ಆನೇಕೆರೆ. ಶ್ರೀ ದರ್ಣಪ್ಪ ಶೆಟ್ಟಿ ಮತ್ತು ಶ್ರೀಮತಿ ಲಲಿತಾ ದಂಪತಿಗಳ ಪುತ್ರನಾಗಿ 1980ನೇ ಇಸವಿ ಜನವರಿ 8ರಂದು ಜನನ. ಪ್ರಸ್ತುತ ವಾಸ ಕುಂದಾಪುರ ತಾಲೂಕಿನ ಸಿದ್ಧಾಪುರದಲ್ಲಿ. ಇವರದು ಕುರುಹಿನ ಶೆಟ್ಟಿ ಸಮಾಜ. ಬಾಲ್ಯದಲ್ಲಿ ಬಡತನವಿದ್ದರೂ ಮನೆಯವರಿಗೆ ಹೃದಯ ಶ್ರೀಮಂತಿಗೆಯಿತ್ತು. ಅಜ್ಜಿ (ತಂದೆಯ ತಾಯಿ) ಯಕ್ಷಗಾನಾಸಕ್ತರಾಗಿದ್ದರು. ಅವರ ಜತೆ ಸಾಗಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಹಾಗೆಂದು ಬಾಲ್ಯದಲ್ಲಿ ತಾನು ಯಕ್ಷಗಾನ ಕಲಾವಿದನಾಗಬೇಕೆಂಬ ಕನಸನ್ನು ಶಶಿಕಾಂತ ಶೆಟ್ಟಿ ಅವರು ಕಟ್ಟಿಕೊಂಡಿರಲಿಲ್ಲ.


ಕಾರ್ಕಳದ ಶ್ರೀ ರಾಮಪ್ಪ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಸ್.ಎನ್.ವಿ. ಪ್ರೌಢಶಾಲೆಯಲ್ಲಿ 9ನೇ ತರಗತಿಯ ವರೇಗೆ ಓದಿದ್ದರು. ಅನಾರೋಗ್ಯದಿಂದಾಗಿ ಶಾಲಾ ಕಲಿಕೆಯನ್ನು ತೊರೆಯಬೇಕಾಗಿ ಬಂದಿತ್ತು. ಬಡತನವೂ ಮತ್ತೊಂದು ಕಾರಣ. ಯಕ್ಷಗಾನದತ್ತ ಆಕರ್ಷಿತರಾಗುವ ಮೊದಲೇ ಇವರು ನಾಟಕ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ನಿರ್ದೇಶಕ ಮತ್ತು ಕಲಾವಿದರಾದ ಶ್ರೀ ರಮೇಶ್ ದೇವಾಡಿಗ ಅವರು ಇದಕ್ಕೆ ಕಾರಣರು. ಅವರ ಪ್ರೇರಣೆಯಿಂದ ಕಾರ್ಕಳದ ಜ್ಯೋತಿ ಯುವಕ ಮಂಡಲದ ಮಕ್ಕಳ ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಲಾರಂಭಿಸಿದರು.

ಭೂಕೈಲಾಸ ನಾಟಕದ ರಾವಣನಾಗಿ ರಂಗಪ್ರವೇಶ. ಬಳಿಕ ಕೋಟಿ-ಚೆನ್ನಯ ನಾಟಕದ ಪೆರ್ಮಣ್ಣ ಬಲ್ಲಾಳನಾಗಿ. ನಂತರ ‘ಆಲಿಬಾಬಾ ಮತ್ತು ನಲುವತ್ತು ಕಳ್ಳರು’ ನಾಟಕದಲ್ಲಿ ಮೊತ್ತಮೊದಲ ಬಾರಿಗೆ ಸ್ತ್ರೀಪಾತ್ರ. ಆಕರ್ಷಕ ರೂಪವನ್ನು ಹೊಂದಿದ್ದ ಶಶಿಕಾಂತ ಶೆಟ್ಟರು ಅತ್ಯುತ್ತಮ ರೀತಿಯಲ್ಲಿ ಎಲ್ಲರೂ ಮೆಚ್ಚುವಂತೆ ಅಭಿನಯಿಸಿದ್ದರು. ಇದು ಇವರ ಕಲಾ ಬದುಕಿನ ಮೊದಲ ತಿರುವು. ಭದ್ರಬುನಾದಿಯೂ ಆಗಿತ್ತು. ಸ್ತ್ರೀಪಾತ್ರಧಾರಿಯಾಗಿ ಮುಂದುವರಿಯಬೇಕೆಂದು ಎಲ್ಲರೂ ಸಲಹೆಗಳನ್ನಿತ್ತು ಉತ್ಸಾಹವನ್ನು ತುಂಬಿದ್ದರು. ಕಲಾಸಕ್ತಿಯು ಬೆಳೆಯುತ್ತಾ ಹೋಯಿತು. ಅನೇಕ ಕಡೆ ಛದ್ಮವೇಷ ಸ್ಪರ್ಧೆಗಳಲ್ಲೂ ಭಾಗವಹಿಸಿ ಬಹುಮಾನಗಳನ್ನು ಪಡೆದರು. ತಾನು ನಿರ್ವಹಿಸುವ ಪಾತ್ರಗಳಿಗೆ ಬೇಕಾದ ವೇಷಭೂಷಣಗಳನ್ನು ಶಶಿಕಾಂತ ಶೆಟ್ಟರೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಆ ಕಲೆಯೂ ಎಳವೆಯಲ್ಲೇ ಕರಗತವಾಗಿತ್ತು.

ಜೀವನೋಪಾಯಕ್ಕಾಗಿ ಟೈಲರಿಂಗ್ ಕಲಿತು ಶ್ರೀ ದಯಾನಂದ ರಾವ್ ಅವರ ಮಾಲಕತ್ವದ ‘ಶಿವಾಜಿ ಟೈಲರ್ಸ್’ನಲ್ಲಿ ಉದ್ಯೋಗ. ಕಲಾಚಟುವಟಿಕೆಗಳಿಗೆ ದಯಾನಂದ ರಾವ್ ಅವರ ಪ್ರೋತ್ಸಾಹವೂ ಇತ್ತು. ಇದೇ ಸಂದರ್ಭದಲ್ಲಿ ಕಲಾವಿದ ಶ್ರೀ ಸತೀಶ ಮಡಿವಾಳರ ಪರಿಚಯವಾಗಿತ್ತು. ಕಾರ್ಕಳ ಮಾರಿಗುಡಿಯಲ್ಲಿ ಶ್ರೀ ಮಹಮ್ಮಾಯಿ ಮುಖ್ಯಪ್ರಾಣ ಯಕ್ಷಗಾನ ಮಂಡಳಿಯ ವತಿಯಿಂದ ನಡೆಯುತ್ತಿದ್ದ ತರಬೇತಿ ಕೇಂದ್ರದಲ್ಲಿ ಸತೀಶ ಮಡಿವಾಳರಿಂದ ತೆಂಕುತಿಟ್ಟಿನ ಹೆಜ್ಜೆಗಾರಿಕೆ ಕಲಿಕೆ. ಅವರ ಮೂಲಕವೇ ಸುರತ್ಕಲ್ಲಿನ ಶ್ರೀ ಸದಾಶಿವ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಕಲಾವಿದನಾಗಿ ಸೇರ್ಪಡೆ. ಶ್ರೀ ದಿಲೀಪ ಸುವರ್ಣರ ಸಂಚಾಲಕತ್ವ. ಪೂರ್ವರಂಗದಲ್ಲಿ ಬಾಲಗೋಪಾಲ, ಮುಖ್ಯ ಸ್ತ್ರೀವೇಷಗಳಲ್ಲಿ ಅಭಿನಯ. ವರ್ಷಕ್ಕೆ ಈ ತಂಡದ ನಲುವತ್ತಕ್ಕಿಂತ ಹೆಚ್ಚು ಪ್ರದರ್ಶನಗಳು ನಡೆಯುತ್ತಿದ್ದವು.

ಈ ತಂಡದಲ್ಲಿ 3 ವರ್ಷ ವೇಷಗಾರಿಕೆ. ಜತೆಗೆ ಟೈಲರಿಂಗ್ ಕೆಲಸವನ್ನೂ ಮಾಡುತ್ತಿದ್ದರು. ಬಳಿಕ ಬಪ್ಪನಾಡು ಮೇಳದಲ್ಲಿ ಒಂದು ವರ್ಷ ತಿರುಗಾಟ. ಸ್ತ್ರೀವೇಷದ ಜತೆ ಪುರುಷ ಪಾತ್ರಗಳನ್ನೂ ಮಾಡುತ್ತಿದ್ದರು. ಶಶಿಪ್ರಭಾ ಪರಿಣಯದ ಮಾರ್ತಂಡತೇಜನ ಪಾತ್ರವನ್ನೂ ಮಾಡಿದ್ದರು. ಸಸಿಹಿತ್ಲು ಮೇಳ ಆರಂಭವಾದ ಸದ್ರಿ ಮೇಳದಲ್ಲಿ ಒಂದು ವರ್ಷ ತಿರುಗಾಟ. ಶ್ರೀ ರಮೇಶ ಕುಲಶೇಖರ ಅವರ ಜತೆ ವೇಷಗಾರಿಕೆ. ಈ ಸಂದರ್ಭದಲ್ಲಿ ಟೈಲರಿಂಗ್ ಕೆಲಸದಿಂದ ದೂರ ಉಳಿದು ಬದುಕಿಗಾಗಿ ಯಕ್ಷಗಾನವನ್ನೇ ಆಯ್ಕೆ ಮಾಡಿಕೊಂಡಿದ್ದರು.

ವರ್ಷಕ್ಕೆ 60ಕ್ಕಿಂತಲೂ ಹೆಚ್ಚು ಆಟಗಳು ನಡೆಯುತ್ತಿತ್ತು. ಮಳೆಗಾಲದಲ್ಲಿ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಚಿಕ್ಕಮೇಳದಲ್ಲಿ ತಿರುಗಾಟ. ‘‘ಇದು ನಟನೆ ಮತ್ತು ಮಾತುಗಾರಿಕೆಯಲ್ಲಿ ಪಕ್ವತೆಯನ್ನು ಸಾಧಿಸಲು ಅನುಕೂಲವಾಗಿತ್ತು’’ ಎಂದು ಹೇಳುವ ಮೂಲಕ ಚಿಕ್ಕಮೇಳಗಳನ್ನು ಆಕ್ಷೇಪಿಸುವವರಿಗೆ ಪರೋಕ್ಷವಾಗಿ ಶಶಿಕಾಂತರು ಉತ್ತರ ನೀಡುತ್ತಾರೆ. ಜತೆಗೆ ಈ ಅವಕಾಶವನ್ನು ಸಮಯ ಕಳೆಯಲು, ಸಂಪಾದನೆಯ ದೃಷ್ಠಿಯಿಂದ ನೋಡದೆ, ಕಲಿಕೆಗಾಗಿಯೇ ಬಳಸಿಕೊಳ್ಳಿರಿ ಎಂಬ ಎಚ್ಚರಿಕೆಯನ್ನೂ ಚಿಕ್ಕಮೇಳದ ಕಲಾವಿದರಿಗೂ ನೀಡುತ್ತಾರೆ.

1999-2000ನೇ ಸಾಲಿನಲ್ಲಿ ಮಂದರ್ತಿಯ ಮೂರನೇ ಮೇಳ ಆರಂಭವಾದಾಗ ಹೆಚ್ಚುವರಿ ಸ್ತ್ರೀವೇಷಧಾರಿಯಾಗಿ ಶಶಿಕಾಂತರು ಸೇರಿಕೊಂಡರು. ಬಡಗಿನ ತಿರುಗಾಟ, ಕುಣಿತದ ಮಾಹಿತಿಯೇ ಆಗ ಇದ್ದಿರಲಿಲ್ಲ. ಕೇವಲ ಆಕರ್ಷಣೆಯಿಂದಲೇ ಬಡಗಿನ ಮೇಳದಲ್ಲಿ ಕಲಾಸೇವೆಯನ್ನು ಮಾಡುವ ಮನ ಮಾಡಿದ್ದರು. ಶಿರಳಗಿ ಭಾಸ್ಕರ ಜೋಷಿ ಮತ್ತು ರಾಮ ನಾೈರಿ ಅವರ ವೇಷಗಳನ್ನು ನೋಡಿ ಆಕರ್ಷಿತರಾದುದೇ ಇದಕ್ಕೆ ಕಾರಣ. ಅವರ ಅಭಿನಯ ಸಾಮರ್ಥ್ಯಕ್ಕೆ  ಮಾರುಹೋಗಿದ್ದರು.

ಮಂದರ್ತಿ ಮೇಳದ ಸಂದರ್ಶನಕ್ಕೆ ಹೋದಾಗ ನಡೆದ ಆಟ. ಸುಧನ್ವ ಮೋಕ್ಷ ಪ್ರಸಂಗದ ಕುವಲೆಯಾಗಿ ಅಭಿನಯಿಸಿದ್ದರು. ಈ ಪಾತ್ರವನ್ನು ನಿರ್ವಹಿಸುವ ರೀತಿ, ಸಂಭಾಷಣೆಗಳನ್ನು ಕಲಾವಿದ ಶ್ರೀ ಸಂತೋಷ ಕುಮಾರ ಹಿಲಿಯಾಣ ಅವರು ಹೇಳಿಯೂ ಕೊಟ್ಟಿದ್ದರು. ಪ್ರದರ್ಶನ ಮುಗಿದ ಬಳಿಕ ಪ್ರೇಕ್ಷಕರು ಕುವಲೆ ಪಾತ್ರವನ್ನು ಮಾಡಿದವನಿಂದಲೇ ಪ್ರಭಾವತಿ ಪಾತ್ರವನ್ನು ಮಾಡಿಸಬಹುದು ಎಂದಿದ್ದರಂತೆ. ಕೆಲ ವರ್ಷಗಳ ನಂತರ ಶಿವಮೊಗ್ಗದಲ್ಲಿ ನಡೆದ 24 ಗಂಟೆಯ ನಿರಂತರ ಯಕ್ಷಗಾನ ಪ್ರದರ್ಶನ ‘ಕಾಳಗೋತ್ಸವ’ದಲ್ಲಿ ಮತ್ತೆ ಕುವಲೆ ಪಾತ್ರವನ್ನು ಮಾಡಿದ್ದರು. ಅಂದು ಬಳ್ಕೂರು ಕೃಷ್ಣ ಯಾಜಿ ಅವರು ಸುಧನ್ವನಾಗಿ ಅಭಿನಯಿಸಿದ್ದರು. ಚಿಟ್ಟಾಣಿಯವರ ಅರ್ಜುನ. ಅದನ್ನು ನೋಡಿ ಮೆಚ್ಚಿದ ಕೆರೆಮನೆ ಶ್ರೀ ಶಂಭು ಹೆಗಡೆಯವರು ಮತ್ತೆ ಕಂಡಾಗಲೆಲ್ಲಾ ಶಶಿಕಾಂತರನ್ನು ಕುವಲೆ ಎಂದೇ ಕರೆಯುತ್ತಿದ್ದರಂತೆ.

ಹೊಸ್ತೋಟ ಮಂಜುನಾಥ ಭಾಗವತರೂ, ನೆಬ್ಬೂರು ನಾರಾಯಣ ಭಾಗವತರೂ ಹಾಗೆಯೇ ಕರೆಯುತ್ತಿದ್ದರಂತೆ. ಮಂದಾರ್ತಿ ಮೇಳದಲ್ಲಿ ಸ್ತ್ರೀಪಾತ್ರಧಾರಿಯಾಗಿದ್ದ ಬೇಳಿಂಜೆ ಶ್ರೀ ಸುಂದರ ನಾಯ್ಕರು ಪ್ರೋತ್ಸಾಹವನ್ನು ನೀಡಿದ್ದರು. ಯಕ್ಷಗಾನ ಕುಟುಂಬದ ಹಿನ್ನೆಲೆಯುಳ್ಳ ಬೇಳಿಂಜೆ ಅವರದು ಅತ್ಯುತ್ತಮ ಹೆಜ್ಜೆಗಾರಿಕೆಯೆಂದೂ, ಅವರ ಮಾರ್ಗದರ್ಶನ ಸಿಕ್ಕಿದ್ದು ಅನುಕೂಲವಾಗಿತ್ತೆಂದೂ ಶಶಿಕಾಂತರ ಅಭಿಪ್ರಾಯ. ಹೆಚ್ಚುವರಿ ಸ್ತ್ರೀವೇಷಧಾರಿಯಾದರೂ ಸ್ವಯಂಪ್ರತಿಭೆ ಮತ್ತು ಕಲಾಮಾತೆಯ ಅನುಗ್ರಹದಿಂದ ಒಳ್ಳೊಳ್ಳೆಯ ಪಾತ್ರಗಳು ಸಿಕ್ಕಿದ್ದವು. ಸದಾ ಅಧ್ಯಯನಶೀಲರಾದ ಇವರು ಸಿಕ್ಕ ಅವಕಾಶಗಳನ್ನು ಸರಿಯಾಗಿಯೇ ಉಪಯೋಗಿಸಿಕೊಂಡಿದ್ದರು. ಕಲಿಕಾಸಕ್ತಿ, ಸದಾ ಓದು, ಹಿರಿಯ ಕಲಾವಿದರ ನಿರ್ವಹಣೆಯನ್ನು ನೋಡುತ್ತಾ ಬೆಳೆದರು.

ಅನಿವಾರ್ಯ ಸಂದರ್ಭದಲ್ಲಿ ಮಂದರ್ತಿಯ ಮತ್ತೊಂದು ಮೇಳಕ್ಕೂ ಆಡಳಿತದ ಅಪ್ಪಣೆಯಂತೆ ಹೋಗಬೇಕಾಗಿತ್ತು. ಆಗ ಖ್ಯಾತ ಸ್ತ್ರೀಪಾತ್ರಧಾರಿ, ಗರತಿವೇಷಗಳ ಸರದಾರ ಎಂದು ಪ್ರಸಿದ್ಧರಾದ ಶ್ರೀ ಎಂ. ಎ. ನಾಯ್ಕರ ಮಾರ್ಗದರ್ಶನವೂ ಸಿಕ್ಕಿತ್ತು. 3ನೇ ಮೇಳದಲ್ಲಿ 1 ವರ್ಷ ತಿರುಗಾಟ. ಮುಂದಿನ ವರ್ಷ, 2000-2001ರಲ್ಲಿ ಮಂದಾರ್ತಿ 4ನೇ ಮೇಳ ಆರಂಭವಾಗಿತ್ತು. ಶಶಿಕಾಂತ ಶೆಟ್ಟರಿಗೆ 2ನೇ ಸ್ತ್ರೀವೇಷಧಾರಿಯಾಗಿ ಭಡ್ತಿಯೂ ದೊರಕಿತ್ತು. 4ನೇ ಮೇಳದಲ್ಲಿ 3 ವರ್ಷ ತಿರುಗಾಟ. ಮಂದಾರ್ತಿ ಮಹಾತಾಯಿಯ ಅನುಗ್ರಹದಿಂದ ಸದರಿ ಮೇಳದಲ್ಲಿ ಒಟ್ಟು 4 ವರ್ಷಗಳ ತಿರುಗಾಟ.

ಸತತ ಪರಿಶ್ರಮದಿಂದ ಕ್ಷಿಪ್ರಾತಿಕ್ಷಿಪ್ರ ಬೆಳೆದು ಕಾಣಿಸಿಕೊಂಡ ಕಲಾವಿದರಿವರು. ಕೇಕಯ ನಂದಿನಿ ಪ್ರಸಂಗದ ಕಲಹ ಮತ್ತು ಕೈಕೇಯಿ ಪಾತ್ರಗಳು ಹೆಸರು ತಂದುಕೊಟ್ಟಿತ್ತು. ಬಡಗಿನ ಹೆಜ್ಜೆಗಾರಿಕೆ ಕಲಿಯದೆ ಮೇಳಕ್ಕೆ ಹೋಗಿದ್ದರೂ ಇಂತಹ ಪಾತ್ರಗಳನ್ನು ಮಾಡುವಷ್ಟು ಕ್ಷಿಪ್ರ ಬೆಳವಣಿಗೆ ಇವರದು. ಕಲಾವಿದರಾದ ಇಟಗಿ ಮಹಾಬಲೇಶ್ವರ ಭಟ್ಟರು ಸನ್ಮಿತ್ರರಾಗಿ, ಒಡನಾಡಿಯಾಗಿ ಸಹಕರಿಸಿದ್ದರು. ಇಬ್ಬರೂ ಭಾಗವತರಿಂದ ಪ್ರಸಂಗ ಪುಸ್ತಕಗಳನ್ನು ಕೇಳಿ ಮಧ್ಯಾಹ್ನದ ವರೇಗೆ ಅಧ್ಯಯನ ಮಾಡುತ್ತಿದ್ದರು. ನಂತರವೇ ನಿದ್ರಾಂಗನೆಯ ವಶವಾಗುತ್ತಿದ್ದರು.

ಮಂದಾರ್ತಿ ಮೇಳದಲ್ಲಿ ಭಾಗವತರಾಗಿದ್ದ ಹೆರಂಜಾಲು ಶ್ರೀ ಗೋಪಾಲ ಗಾಣಿಗರು ಶಶಿಕಾಂತರ ಪ್ರತಿಭೆಯನ್ನು ಗುರುತಿಸಿದ್ದರು. ಅವರು ಸಾಲಿಗ್ರಾಮ ಮೇಳಕ್ಕೆ ಸೇರಿದ ಮೇಲೆ ಅವರ ಮೂಲಕವೇ ಶಶಿಕಾಂತರು ಸದ್ರಿ ಮೇಳಕ್ಕೆ ಸೇರಿದ್ದರು. ಆಗ ಎರಡೇ ಟೆಂಟ್ ಮೇಳ ಇದ್ದುದು. ಪೆರ್ಡೂರು ಮತ್ತು ಸಾಲಿಗ್ರಾಮ. ಹೊಸ ಸ್ತ್ರೀಪಾತ್ರಧಾರಿಗಳನೇಕರು ಮೇಳಕ್ಕೆ ಸೇರಿದ ಪರ್ವಕಾಲ ಅದು. ಹೆರಂಜಾಲು ಭಾಗವತರ ಸೂಚನೆಯಂತೆ 2003-2004ರಲ್ಲಿ ಸಾಲಿಗ್ರಾಮಕ್ಕೆ ಮೇಳಕ್ಕೆ ಸೇರಿದ ಶಶಿಕಾಂತ ಶೆಟ್ಟರು ಕಳೆದ ಹದಿನೆಂಟು ವರ್ಷಗಳಿಂದ ಶ್ರೀ ಕಿಶನ್ ಕುಮಾರ್ ಹೆಗಡೆ ಅವರ ಸಂಚಾಲಕತ್ವದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರ ಜತೆ ತಿರುಗಾಟ. ಡಾ. ವೈ. ಚಂದ್ರಶೇಖರ ಶೆಟ್ಟಿ ವಿರಚಿತ ಪ್ರಸಂಗ ‘‘ಈಶ್ವರಿ ಪರಮೇಶ್ವರಿ’’ ಪ್ರಸಂಗದ ಈಶ್ವರಿ ಎಂಬ ಅತ್ತೆಯ ಪಾತ್ರ ಖ್ಯಾತಿಯನ್ನು ತಂದುಕೊಟ್ಟಿತ್ತು. ಪರಮೇಶ್ವರಿಯಾಗಿ ಯಲಗುಪ್ಪರ ಅಭಿನಯ. ಯಲಗುಪ್ಪ- ಕಾರ್ಕಳ ಜೋಡಿಯು ಖ್ಯಾತವಾಗಿ ಅವರಿಗೆ ತಾರಾಮೌಲ್ಯವನ್ನು ತಂದುಕೊಟ್ಟಿತ್ತು. ಗರತಿ, ಗಯ್ಯಾಳಿ ಪಾತ್ರದಲ್ಲಿ ಇಬ್ಬರೂ ರಂಜಿಸಿದ್ದರು.

ಈ ಜೋಡಿಯು ಅದೇ ಖ್ಯಾತಿ, ಬೇಡಿಕೆಯನ್ನು ಈಗಲೂ ಉಳಿಸಿಕೊಂಡಿದೆ. ಮೂರೇ ವರ್ಷಗಳಲ್ಲಿ ಸಾಲಿಗ್ರಾಮ ಮೇಳದ ಮುಖ್ಯ ಸ್ತ್ರೀಪಾತ್ರಧಾರಿಯಾಗಿ ಭಡ್ತಿ. ಮಳೆಗಾಲದ ಪ್ರದರ್ಶನಗಳಲ್ಲೂ ಬಡಗುತಿಟ್ಟಿನ ಹಿರಿಯ ಕಲಾವಿದರ ಜತೆ ಅಭಿನಯ. ಕೀಚಕವಧೆ ಪ್ರಸಂಗದಲ್ಲಿ ಚಿಟ್ಟಾಣಿಯವರ ಕೀಚಕನಿಗೆ ಸೈರಂಧ್ರಿಯಾಗಿ ಅಭಿನಯಿಸಿದ್ದರು. ಅಂದು ಜಲವಳ್ಳಿ ವೆಂಕಟೇಶ ರಾಯರು ವಲಲ ಪಾತ್ರವನ್ನು ಮಾಡಿದ್ದರು. ಗೋಡೆ ನಾರಾಯಣ ಹೆಗಡೆಯವರ ಬ್ರಹ್ಮನಿಗೆ ಶಾರದೆಯಾಗಿ ಅಭಿನಯಿಸುವ ಅವಕಾಶವೂ ಸಿಕ್ಕಿತ್ತು. ಅಲ್ಲದೆ ಅನೇಕ ವರ್ಷಗಳಿಂದ ಬಡಗು ತೆಂಕಿನ ಹೆಚ್ಚಿನ ಕಲಾವಿದರ ಜತೆ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಶಿಕಾಂತರು ಪ್ರತಿಯೊಂದು ಪಾತ್ರವನ್ನೂ ತನ್ನ ಕಲ್ಪನೆಯಿಂದ ಕೆತ್ತಿ ಚಿತ್ರಿಸಲು ಪ್ರಯತ್ನಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಸಾಲಿಗ್ರಾಮ ಮೇಳದಲ್ಲಿ ಹೆರಂಜಾಲು, ರಾಘವೇಂದ್ರ ಮಯ್ಯ, ಶಬರಾಯರು, ಹಿಲ್ಲೂರು, ಕರ್ಕಿ ಪರಮೇಶ್ವರ ಭಂಡಾರಿ, ಕೋಟ ಶಿವಾನಂದ, ಬಳ್ಕೂರು, ಯಲಗುಪ್ಪ, ಕಣ್ಣಿಮನೆ, ಹುಡುಗೋಡು, ಮಂಕಿ ಈಶ್ವರ ನಾಯ್ಕ ಮೊದಲಾದ ಹಿರಿಯ ಕಲಾವಿದರ ಒಡನಾಟ ಸಿಕ್ಕಿತ್ತು. ಶಶಿಕಾಂತ ಶೆಟ್ಟರು ದ್ವಿಪಾತ್ರದಲ್ಲಿ ಅಭಿನಯಿಸಿದ ಪ್ರಸಂಗ ಪ್ರತಿಜ್ಞಾಪಲ್ಲವಿ. ರಾಜಕುಮಾರಿ ಮತ್ತು ಬೇಡರ ಹುಡುಗಿಯ ಪಾತ್ರಗಳಲ್ಲಿ ಸ್ವಭಾವಕ್ಕನುಗುಣವಾಗಿ ಅಭಿನಯಿಸಿ ಪ್ರಸಂಗದ ಗೆಲುವಿಗೆ ಕಾರಣರಾಗಿದ್ದರು. ಶಶಿಪ್ರಭೆ, ದ್ರೌಪದಿ ಮೊದಲಾದ ಕಸೆ ಸ್ತ್ರೀವೇಷಗಳಲ್ಲೂ ಹೆಸರನ್ನು ಗಳಿಸಿದರು.

ಎಲ್ಲಾ ಸ್ತ್ರೀಪಾತ್ರಗಳ ವೇಷಭೂಷಣಗಳ ಮತ್ತು ಕುಣಿತಗಳ ಬಗೆಗೆ ಪಾತಾಳ ವೆಂಕಟ್ರಮಣ ಭಟ್ಟರಿಂದಲೂ, ಸ್ವಭಾವ ಮತ್ತು ಮಾತುಗಾರಿಕೆಯ ಬಗೆಗೆ ಕೋಳ್ಯೂರು ರಾಮಚಂದ್ರ ರಾಯರಿಂದಲೂ ಮಾರ್ಗದರ್ಶನವನ್ನು ಪಡೆದುಕೊಂಡ ಕಲಾವಿದರಿವರು. ನಾಟಕ ರಂಗದ ಜೀವನ್‍ರಾಂ ಸುಳ್ಯ, ಕೃಷ್ಣಮೂರ್ತಿ ಕವತ್ತಾರು, ಪ್ರಶಾಂತ್ ಉದ್ಯಾವರ ಇವರುಗಳಿಂದ ಯಕ್ಷಗಾನದಲ್ಲಿ ನಾಟಕೀಯತೆಯ ಸಾಧ್ಯತೆಯನ್ನು ಹೇಗೆ ಬಳಸಿಕೊಳ್ಳಬಹುದೆಂಬ ಮಾಹಿತಿಯನ್ನು ಪಡೆದಿದ್ದರು.

ಭಾವನಾತ್ಮಕ ಪಾತ್ರಗಳಾದ ಅಂಬೆ, ದಾಕ್ಷಾಯಿಣಿ, ಚಂದ್ರಮತಿ ಮೊದಲಾದ ಪಾತ್ರಗಳನ್ನು ನಿರ್ವಹಿಸುವಲ್ಲಿ ಶಶಿಕಾಂತರಿಗೆ ಎಲ್ಲಿಲ್ಲದ ಉತ್ಸಾಹ. ಬಹುತೇಕ ಭೀಷ್ಮನ ಪಾತ್ರವನ್ನು ಮಾಡುವ ಎಲ್ಲಾ ಕಲಾವಿದರ ಜತೆ ಅಂಬೆಯಾಗಿ ಅಭಿನಯಿಸಿದ್ದಾರೆ. ಹಲವಾರು ಹಿರಿಯ ಕಲಾವಿದರು, ವಿದ್ವಾಂಸರು ನೀಡಿದ ಉತ್ತಮ ವಿಚಾರಗಳನ್ನು ಅಂಬೆಯ ಪಾತ್ರನಿರ್ವಹಣೆಗೆ ಬಳಸಿಕೊಂಡಿದ್ದಾರೆ. ಒಂದು ಹಾರವಾಗಬೇಕಾದರೆ ಹಲವು ಮುತ್ತುಗಳನ್ನು ಪೋಣಿಸಬೇಕಾಗುತ್ತದೆ. ಹಾಗೆಯೇ ಎಲ್ಲರೂ ನೀಡಿದ ಒಳ್ಳೆಯ ವಾಕ್ಯಗಳೆಂಬ ಮುತ್ತುಗಳನ್ನು
ಪೋಣಿಸಿ ಶಶಿಕಾಂತರು ಅಂಬೆ ಎಂಬ ಪಾತ್ರರೂಪದ ಹಾರವನ್ನು ನಿರ್ಮಿಸಿ ನಿರ್ವಹಿಸುತ್ತಾರೆ. ಕೊರ್ಗಿ ಶ್ರೀ ವೆಂಕಟೇಶ ಉಪಾಧ್ಯಾಯರಂತವರೂ ಪೂರ್ತಿ ಆಟವನ್ನು ನೋಡಿ ಮೆಚ್ಚಿ ಆಶೀರ್ವದಿಸಿದ್ದಾರೆ.

ಅಂಬೆ ಅಗ್ನಿಪ್ರವೇಶ ಮಾಡುವ ಸಂದರ್ಭದ ಇವರ ಅಭಿನಯವು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ವಿಚಾರದ ಬಗ್ಗೆ ಜನರು ಈಗಲೂ ವಿಮರ್ಶೆ ಮಾಡುತ್ತಾರೆ. ಪ್ರಶಂಸೆಯಾಗಲೀ ಟೀಕೆಯಾಗಲೀ, ಕಲಾವಿದನ ಅಭಿನಯವು ಜೀವಂತವಾಗಿರುವುದಕ್ಕೆ ಸಾಕ್ಷಿಯೇ ಆಗಿದೆ. ನಾಟಕೀಯ ಶೈಲಿಯನ್ನು ಸಂದರ್ಭಾನುಸಾರವಾಗಿ ಬಳಸಿಕೊಂಡರೆ ಪ್ರಭಾವಶಾಲಿಯಾಗಿ ಪಾತ್ರಗಳನ್ನು ಪರಂಪರೆಗೆ ಧಕ್ಕೆ ಬಾರದಂತೆ ನಿರ್ವಹಿಸಬಹುದು. ಸತತ ಅಭ್ಯಾಸಿಯಾಗಿ ಕಲಾವಿದರು ತಮ್ಮ ಗರಿಷ್ಠ ಪ್ರಯತ್ನವನ್ನು ಮಾಡಲೇಬೇಕು. ನಾವು ಚಿತ್ರಿಸುವ ಪಾತ್ರವು ಜೀವಂತವಾಗಿದ್ದರೆ ಮಾತ್ರ ಕಲಾವಿದರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ. ಕಲಾವಿದರೇ ಕಾಣಿಸಲು ಹೊರಟರೆ ಪಾತ್ರವು ಸಾಯುತ್ತದೆ. ಪ್ರದರ್ಶನವೂ ಸೋಲುತ್ತದೆ. ಪಾತ್ರದ ಜೀವನಾಡಿಯನ್ನು ತಿಳಿದು ಅಭಿನಯಿಸಬೇಕು. ಎಲ್ಲಿ, ಯಾವ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಬೇಕು, ಯಾವ ಪದ್ಯಕ್ಕೆ ಕೆಲಸ ಮಾಡಬೇಕುಎಂಬ ಪ್ರಜ್ಞೆಯೂ ಬೇಕಾಗುತ್ತದೆ ಎಂಬ ವಿಚಾರಗಳನ್ನು ಶಶಿಕಾಂತರು ಹೇಳುತ್ತಾರೆ.

ಪ್ರಸ್ತುತ ಬಹು ಬೇಡಿಕೆ ಸ್ತ್ರೀಪಾತ್ರಧಾರಿಯಾದ ಇವರನ್ನು ಅನೇಕ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಬೆಂಗಳೂರಿನ ಕೆಂಪೇಗೌಡ ಪ್ರಶಸ್ತಿ (ವೃತ್ತಿ ಕಲಾವಿದರಿಗೆ ಮೊತ್ತ ಸಿಕ್ಕಿದ ಮೊತ್ತಮೊದಲ ಪ್ರಶಸ್ತಿ), ಡಾ| ಶಾಂತಾರಾಮ್ ಪುರಸ್ಕಾರ, ಶ್ರೀರಾಮ ವಿಠಲ ಪ್ರಶಸ್ತಿ, ಶ್ರೀ ಕುಂದೇಶ್ವರ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಸುಧನ್ವ ಮೋಕ್ಷ ಪ್ರಸಂಗದಲ್ಲಿ ಪ್ರಭಾವತಿಯಾಗಿಯೂ, ಸುಧನ್ವನಾಗಿಯೂ, ಕರ್ಣಪರ್ವ ಶಲ್ಯನಾಗಿಯೂ ಪಾತ್ರಗಳನ್ನು ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ತೆಂಕುಬಡಗಿನ ಕೂಡಾಟ. ಗೋವಿಂದ ಭಟ್ಟರ ಇಂದ್ರಜಿತುವಿಗೆ ಲಕ್ಷ್ಮಣನಾಗಿ ಇವರು ಅಭಿನಯಿಸಿದ್ದನ್ನು ನೋಡಿದ ನೆನಪು ನನಗೆ. ಶ್ರೀ ಶಶಿಕಾಂತ್ ಶೆಟ್ಟಿ ಅವರು ಕಳೆದ ಕೆಲವು ವರ್ಷಗಳಿಂದ ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. 

ಟೈಲರಿಂಗ್ ಕಲಿತುದು ಇವರ ವ್ಯವಹಾರಕ್ಕೂ ಅನುಕೂಲವಾಗಿತ್ತು. ಯಕ್ಷಗಾನ ಉಡುಗೆಗಳನ್ನು ಸಿದ್ಧಗೊಳಿಸಿ ಕೆಲವು ಮೇಳಗಳಿಗೆ ಒದಗಿಸಿಕೊಟ್ಟಿದ್ದಾರೆ. ಶ್ರೀಮತಿ ದೇವಿಕಾ ಅವರು ಪತಿಯ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. 2008ರಲ್ಲಿ ದೇವಿಕಾ ಅವರ ಜತೆ ವಿವಾಹ. ಶ್ರೀ ಶಶಿಕಾಂತ ಶೆಟ್ಟಿ ದೇವಿಕಾ ದಂಪತಿಗಳಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ಮಾ| ಶಿವರಂಜನ್ 6ನೇ ತರಗತಿ ವಿದ್ಯಾರ್ಥಿ. ನಾಟ್ಯ ಕಲಿತು ವೇಷ ಮಾಡುತ್ತಾನೆ. ಕಿರಿಯ ಪುತ್ರ ಮಾ| ಪ್ರಿಯದರ್ಶನ್ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ. ಶ್ರೀ ಶಶಿಕಾಂತ ಶೆಟ್ಟರು ದುಬಾೈ, ಮಸ್ಕತ್, ಕುವೈಟ್‍ಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಇವರಿಂದ ಬಹಳಷ್ಟು ಕಲಾಸೇವೆಯು ನಡೆಯಲಿ. ಪ್ರತಿಭಾವಂತ ಸ್ತ್ರೀಪಾತ್ರಧಾರಿಯಾದ ಕಾರ್ಕಳ ಶ್ರೀ ಶಶಿಕಾಂತ ಶೆಟ್ಟರಿಗೆ ಕಲಾಭಿಮಾನಿಗಳೆಲ್ಲರ ಪರವಾಗಿ ಶುಭಾಶಯಗಳು.

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments