Friday, November 22, 2024
HomeUncategorized'ಶ್ರೀ ಕೃಷ್ಣ ದೇವರೆ ಲೀಲೆ' ಯಕ್ಷಗಾನ ಬಯಲಾಟ - ಕಲಾವಿದ ಡಿ. ಮನೋಹರ್ ಕುಮಾರ್ ಅವರಿಗೆ...

‘ಶ್ರೀ ಕೃಷ್ಣ ದೇವರೆ ಲೀಲೆ’ ಯಕ್ಷಗಾನ ಬಯಲಾಟ – ಕಲಾವಿದ ಡಿ. ಮನೋಹರ್ ಕುಮಾರ್ ಅವರಿಗೆ ಸನ್ಮಾನ

ಮಂಗಳೂರು: ‘ಸಮಾಜದ ವಿವಿಧ ಬಗೆಯ ಸೇವಾ ಸಂಸ್ಥೆಗಳು ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಎಲ್ಲರೂ ಹೆಮ್ಮೆಪಡುವ ಸಂಗತಿ. ಇದರೊಂದಿಗೆ ನೃತ್ಯ,ನಾಟಕ, ಯಕ್ಷಗಾನ ಮುಂತಾದ ರಂಗಕಲೆಗಳಿಗೂ ಅವು ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ಯರ್ಹ. ಏಕೆಂದರೆ ಕಲೆ ಮತ್ತು ಕಲಾವಿದರ ಪೋಷಣೆ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವೇ ಆಗಿದೆ’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. 

        ಪದವು ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಶಕ್ತಿನಗರ ಸರಕಾರಿ ಶಾಲಾ ಮೈದಾನದಲ್ಲಿ ಜರಗಿದ ಕಳವಾರು ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರ ಯಕ್ಷಗಾನ ಬಯಲಾಟ ಸಂದರ್ಭ ಏರ್ಪಡಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ಇಂದು ಯಕ್ಷಗಾನ ಈ ಮಟ್ಟಕ್ಕೆ ಬೆಳೆಯಲು ಅನೇಕ ಹಿರಿಯ ಕಲಾವಿದರ ಕೊಡುಗೆ ಕಾರಣ. ಅಂಥವರನ್ನು ಕರೆದು ಪುರಸ್ಕರಿಸುವುದು ಕಲಾ ಸೇವೆಯ ಶೇಷ್ಠ ಮಾದರಿ’ ಎಂದವರು ನುಡಿದರು.

ಡಿ.ಮನೋಹರ್ ಅವರಿಗೆ ಸನ್ಮಾನ:

      ಕಾರ್ಯಕ್ರಮದಲ್ಲಿ ಬಯಲಾಟ ಮೇಳದ ಹಿರಿಯ ಕಲಾವಿದ ತುಳು ಕನ್ನಡ ಪ್ರಸಂಗಗಳ ಪ್ರಬುದ್ಧ ವೇಷಧಾರಿ ಡಿ.ಮನೋಹರ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಅವರು ‘ಯಕ್ಷಗಾನ ಸೇವೆಯೊಂದಿಗೆ ಎಲೆಮರೆಯ ಕಲಾವಿದರ ಬದುಕಿಗೆ ಆಸರೆಯಾಗಿರುವ ಕೆಲವು ಬಯಲಾಟದ ಮೇಳಗಳು ಹಣವಂತರ ಬೆಂಬಲವಿಲ್ಲದೆ ತುಂಬಾ ಪ್ರಯಾಸದಿಂದ ತಿರುಗಾಟ ನಡೆಸುತ್ತಿವೆ. ಸೇವಾದಾರರು ಮತ್ತು ಸಂಘ ಸಂಸ್ಥೆಗಳು ಅವುಗಳನ್ನು ವಿಶೇಷವಾಗಿ ಪ್ರೋತ್ಸಾಹಿಸಬೇಕು’ ಎಂದರು.

         ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಲ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ಕೆ.ಶಕ್ತಿನಗರ ಉಪಸ್ಥಿತರಿದ್ದರು. ಸದಸ್ಯರಾದ ರವೀಂದ್ರ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಹರೀಶ್ ಜೋಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಳಿಕ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ, ಕಳವಾರು ಇವರಿಂದ ಗುರುಪುರ ಸುರೇಂದ್ರ ಮಲ್ಲಿ ನೇತೃತ್ವದಲ್ಲಿ ‘ಶ್ರೀ ಕೃಷ್ಣ ದೇವರೆ ಲೀಲೆ’ ತುಳು ಪೌರಾಣಿಕ ಯಕ್ಷಗಾನ ಬಯಲಾಟ ಜರಗಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments