Sunday, November 24, 2024
Homeಯಕ್ಷಗಾನಸಿನಿಮಾದಲ್ಲಿ ಇರುವಂತೆ ಅಲ್ಲದಿದ್ದರೂ ಯಕ್ಷಗಾನದಲ್ಲಿಯೂ ಅಶ್ಲೀಲತೆಯ ಚಿತ್ರಣ ಉಂಟು!

ಸಿನಿಮಾದಲ್ಲಿ ಇರುವಂತೆ ಅಲ್ಲದಿದ್ದರೂ ಯಕ್ಷಗಾನದಲ್ಲಿಯೂ ಅಶ್ಲೀಲತೆಯ ಚಿತ್ರಣ ಉಂಟು!

ನೀವು ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಟೀಕೆ ಮಾಡಬಹುದು.ರಾಜಕೀಯದವರನ್ನು, ಸಿನಿಮಾದವರನ್ನು, ಉದ್ಯಮಿಗಳನ್ನು ಟೀಕೆ, ವಿಮರ್ಶೆಗಳನ್ನೂ  ಮಾಡಬಹುದು. ಆದರೆ ಸ್ಥಳೀಯ ಜನರನ್ನು, ನಮ್ಮೊಂದಿಗೆ ಬೆರೆತು ಜೀವಿಸುತ್ತಿರುವವರನ್ನು, ಯಾವಾಗಲೂ ಮುಖ ನೋಡುತ್ತಿರುವವರನ್ನು ಟೀಕೆ ಮಾಡುವುದು ಅಷ್ಟು ಸುಲಭವಲ್ಲ.

ಯಾಕೆಂದರೆ, ಇಂದು ಟೀಕೆ,ವಿಮರ್ಶೆಗಳನ್ನು ಮಾಡುವುದು ಸುಲಭವಾದರೂ ನಾಳೆ ಮುಖ ನೋಡಿ ಮಾತನಾಡಬೇಕಾಗುವ ಸಂದರ್ಭ ಬಂದೆ ಬರುತ್ತದೆ. ದಾಕ್ಷಿಣ್ಯಕ್ಕೆ ಒಳಗಾಗಿಯೇ ಕೆಲವೊಮ್ಮೆ ಸುಮ್ಮನಿರಬೇಕಾಗುತ್ತದೆ. ಆದುದರಿಂದಲೇ ಸ್ಥಳೀಯ ಕಲೆಗಳಿಗೆ ಸಂಬಂಧಪಟ್ಟ ವ್ಯಕ್ತಿಗಳನ್ನೋ ಅಥವಾ ಪ್ರದರ್ಶನಗಳನ್ನೋ ವಿಮರ್ಶೆ ಮಾಡುವ ಮೊದಲು ಸ್ವಲ್ಪ ಯೋಚಿಸಬೇಕಾಗುತ್ತದೆ.

ಕೆಲವೊಂದು ಪತ್ರಿಕೆಗಳು ನಿಷ್ಪಕ್ಷಪಾತ ಎಂದು ಘೋಷಿಸಿಕೊಂಡರೂ ಅದಕ್ಕೆ ಹೇರಳವಾಗಿ ಜಾಹೀರಾತುಗಳನ್ನು ಒದಗಿಸುವ ಸಂಸ್ಥೆ ಅಥವಾ ವ್ಯಕ್ತಿಗಳ ಹುಳುಕುಗಳನ್ನು ಎತ್ತಿ ತೋರಿಸದೆ ಮೌನದ ಹಾದಿಯನ್ನು ಹಿಡಿಯುತ್ತವೆ. ಯಾಕೆಂದರೆ ಜಾಹೀರಾತುಗಳನ್ನು ಕಳೆದುಕೊಂಡರೆ ಆದಾಯ ಕುಸಿಯುವ ಭಯ! 

ಮೇಲೆ, ಮೊದಲೇ ಹೇಳಿದಂತೆ ಯಕ್ಷಗಾನವೂ ಒಂದು ಸ್ಥಳೀಯ ಕಲಾಪ್ರಕಾರ ಆದುದರಿಂದ, ಇದರಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನವರೂ ಪರಿಚಿತರೇ ಆದುದರಿಂದ ಕೆಲವೊಮ್ಮೆ ವಿಮರ್ಶೆಗಳನ್ನು ಮಾಡದೆ ಮೌನವಾಗಿರಬೇಕಾಗುತ್ತದೆ ಎಂದು ನನಗೆ ವಿಮರ್ಶಕರೊಬ್ಬರು ಹೇಳಿದ್ದರು. ಹಾಗೆ ದಾಕ್ಷಿಣ್ಯಕ್ಕೆ ಒಳಗಾಗಿ ಸುಮ್ಮನಿರುವವರು ಹಲವಾರು ಮಂದಿ ಇದ್ದಾರೆ. ಒಮ್ಮೆ ಪರಿಚಿತರೊಬ್ಬರು ಹೀಗೆ ಸುಮ್ಮನೆ ಮಾತನಾಡುತ್ತಿರುವಾಗ ನಾನು ಯಕ್ಷಗಾನ ಕಲೆಯು, ಕಲೆಗಳಲ್ಲಿ ಅತ್ಯುತ್ಕೃಷ್ಟ ಸ್ಥಾನವನ್ನು ಪಡೆಯುತ್ತಿರುವ ಬಗ್ಗೆ ಹೇಳಿಕೊಂಡೆ.

ಅದಕ್ಕೆ ಅವರು “ಯಕ್ಷಗಾನ ಕಲೆ ಜನಪ್ರಿಯ ಎಂಬುದನ್ನು ನಾನು ಒಪ್ಪುತ್ತೇನೆ, ಆದರೆ ಇತರ ಕಲೆಗಳಿಗಿಂತ ಶ್ರೇಷ್ಠ ಎಂದು ಹೋಲಿಕೆ ಮಾಡಬಾರದು. ಎಲ್ಲಾ ಕಲೆಗಳಿಗೂ ಅದರದ್ದೇ ಆದ ಮೌಲ್ಯವಿದೆ. ಕೆಲವರು ಸಿನಿಮಾದಲ್ಲಿ ಅಶ್ಲೀಲತೆಯಿದೆ. ಇನ್ನೂ ಕೆಲವು ಪೂರ್ವ,ಉತ್ತರದ ನೃತ್ಯಕಲೆಗಳಲ್ಲಿ ಅಶ್ಲೀಲ ಭಂಗಿಗಳಿವೆ ಎಂದು ಹೇಳುತ್ತಾರೆ. ಆದರೆ ಯಕ್ಷಗಾನದಲ್ಲಿಯೂ ಅಶ್ಲೀಲ ಎಂಬುದು ಬೇಕಾದಷ್ಟು ಇದೆ” ಎಂದು ಹೇಳಿದರು.

ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ಮಾಡುತ್ತಿರುವುದರಿಂದ, ಹಾಗೂ ಒಂದು ವೇಳೆ ಈಗ ಸ್ತ್ರೀಯರೂ ಯಕ್ಷಗಾನದಲ್ಲಿ ಭಾಗಿಯಾಗುತ್ತಿದ್ದರೂ ಈ ಕಲೆಯಲ್ಲಿ ಮೈಮುಚ್ಚುವ ವೇಷಭೂಷಣಗಳಿರುವುದರಿಂದ ಅಶ್ಲೀಲತೆಗೆ ಅವಕಾಶ ಇಲ್ಲ ಎಂದು ನಾನು ವಾದಿಸಿದೆ.

ಅದಕ್ಕೆ ಅವರು ಒಂದು ದೀರ್ಘವಾದ ಉಪಾನ್ಯಾಸವನ್ನೇ ಕೊಟ್ಟರು  ಉದಾಹರಣೆ ಸಹಿತ ವಾದವನ್ನು ಮುಂದಿಟ್ಟರು. ಅವರ ಮಾತುಗಳ ಸಾರಾಂಶ ಹೀಗಿತ್ತು. 

“ಅಶ್ಲೀಲ ಎಂಬುದು ಯಕ್ಷಗಾನದಲ್ಲಿ ಬೇರೆಯೇ ಆದ ರೀತಿಯಲ್ಲಿ ಇದೆ. ಯಕ್ಷಗಾನದಲ್ಲಿ ಹೆಚ್ಚಾಗಿ ಕಥಾ ಸನ್ನಿವೇಶ ಮತ್ತು ಚಿತ್ರಣಗಳನ್ನು ಮಾತಿನಲ್ಲಿಯೇ ಹೊಸೆಯುತ್ತಾರೆ. ಈ ಮಾತುಗಳಲ್ಲಿಯೇ ಬೇಕಾದಷ್ಟು ದ್ವಂದ್ವಾರ್ಥ ಪದಗಳನ್ನು ಹೊಸೆಯುತ್ತಾರೆ. ಕೆಲವೊಮ್ಮೆ ನೇರವಾಗಿಯೇ ಹೇಳಿಬಿಡುತ್ತಾರೆ. ಅದು ಎಷ್ಟು ಅಶ್ಲೀಲ ಎಂದರೆ ಎದುರು ಕುಳಿತ ಹೆಣ್ಣುಮಕ್ಕಳು ತಲೆತಗ್ಗಿಸುವಷ್ಟು ಹೇಸಿಗೆಯಾಗಿರುತ್ತದೆ.

ಆ ಸನ್ನಿವೇಶ  ಪ್ರಸಂಗ ಚಿತ್ರಿಸಿದ ಕವಿಯ ಭಾವನೆ ಇರಬಹುದು. ಆದರೆ ಇಂತಹಾ ಸನ್ನಿವೇಶ ಮತ್ತು ಮಾತುಗಳು ಅಗತ್ಯವೇ ಎಂದು ಯೋಚಿಸಬೇಕು. ಒಂದೆರಡು ಉದಾಹರಣೆಗಳನ್ನು ಹೇಳುತ್ತೇನೆ. ಪಂಚವಟಿ ಅಥವಾ ಶೂರ್ಪನಖಾ ಮಾನಭಂಗದ ಸನ್ನಿವೇಶದಲ್ಲಿ ಶೂರ್ಪನಖಿಯು ಲಕ್ಷ್ಮಣನಲ್ಲಿ ಹೇಳುವ ಮಾತು ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲಿ ಪದ್ಯದ ರೂಪದಲ್ಲಿ ಹೀಗೆ ಚಿತ್ರಣಗೊಂಡಿದೆ. 

ನೆರೆ ಮನಸೆನ್ನ ಮೇಲಿಟ್ಟು । ಇಕೋ ಈ ಗುರುಕುಚ ಎರಡ ನೀ ಮುಟ್ಟು । ತೆರೆದ ಚೆಂದುಟಿಗೆ ಬಾಯಿಟ್ಟು । ಚಪ್ಪರಿಸು ಸುರತ ಸುಖಗೊಟ್ಟು ।। 

ಇಲ್ಲಿ ಹೇಳಬೇಕಾದ್ದನ್ನು ಯಾವುದೇ ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳಲಾಗಿದೆ. ಈ ಪದ್ಯ ಈ ಸನ್ನಿವೇಶಕ್ಕೆ ಮತ್ತು ಶೂರ್ಪನಖಿಯ ವ್ಯಕ್ತಿತ್ವಕ್ಕೆ ಹೇಳಿ ಮಾಡಿಸಿದ ಹಾಗಿದೆ. ಶೂರ್ಪನಖಿಯಂತಹವಳು ಹೀಗೆ ಮಾತಾಡಲೇ ಬೇಕು. ಆದರೆ ಕೆಲವೊಮ್ಮೆ ಮಾಯಾ ಶೂರ್ಪನಖಿಯ ಪಾತ್ರ ನಿರ್ವಹಿಸಿದವರು ಈ ಪದ್ಯದಲ್ಲಿರುವುದಕ್ಕಿಂತಲೂ ಸ್ವಲ್ಪೇ ಹೆಚ್ಚೇ ಮಾತನಾಡಿದ್ದು ಉಂಟು ಎಂಬುದನ್ನು ಕೆಲವರು ಹೇಳುವುದನ್ನು ಕೇಳಿದ್ದೇನೆ.

ಆದರೆ ಈಗೀಗ ಈ ಪದ್ಯದಲ್ಲಿರುವ ಸಾಹಿತ್ಯವನ್ನು ಮನಗಂಡು ಭಾಗವತರು ಈ ಪದ್ಯವನ್ನು ಹೇಳದೆ ಬಿಡುವುದನ್ನು ನಾವು ಗಮನಿಸಬಹುದು. ಕೆಲವೊಮ್ಮೆ ಭಾಗವತರೇ ಈ ಪದ್ಯವನ್ನು ಹೇಳಲು ಮುಜುಗರಪಟ್ಟುಕೊಳ್ಳುತ್ತಾರೆ. ಇದೇ  ಪ್ರಸಂಗದ ಇದಕ್ಕಿಂತ ಮೊದಲಿನ ಸನ್ನಿವೇಶದಲ್ಲಿ ಮಾಯಾ ಶೂರ್ಪನಖಿಗೆ ಶ್ರೀರಾಮಚಂದ್ರನು ಹೇಳುವ ಮಾತುಗಳು ಇನ್ನೊಂದು ಪದ್ಯದಲ್ಲಿ ಹೀಗಿದೆ. 

ಒಂದು ಚೂರಿಗೆರಡು ಒರೆ। ಹೊಂದುವುದೆ ಪೇಳು| 

ಈ ಸಾಲು ಸ್ವಲ್ಪ ಇರುಸುಮುರುಸನ್ನು ಉಂಟುಮಾಡುವ ಸಾಹಿತ್ಯದಿಂದ ಕೂಡಿದೆ. ವೀರನ ಖಡ್ಗದ ಒರೆ ಯಾವಾಗಲೂ ಒಂದೇ ಇರುತ್ತದೆ. ಅಂದರೆ ಸೈನಿಕನಲ್ಲಿರುವ ಒಂದು ಖಡ್ಗಕ್ಕೆ ಅಥವಾ ಕತ್ತಿಗೆ ಎರಡು ಒರೆ ಯಾಕೆ ಎಂಬರ್ಥದಲ್ಲಿ ಕೇಳುವ ಪದ್ಯ. ಯಾರು ಏನೇ ಸಮರ್ಥನೆಯನ್ನು ಕೊಡಲಿ, ಈ ಪದ್ಯದ ಅರ್ಥ ಹೇಳುವಾಗ ಹಲವಾರು ಅರ್ಥಧಾರಿಗಳು ಸ್ವಲ್ಪ ಮೇರೆಯನ್ನು ಮೀರಿ ಸಾಗುತ್ತಾರೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪಾತ್ರಕ್ಕೆ ಇಂತಹಾ ಉದಾಹರಣೆಗಳನ್ನು ಕೊಡುವ ಪದ್ಯಗಳನ್ನು ಕೈಬಿಡಬೇಕು ಎಂದು ರಾಮನ ವ್ಯಕ್ತಿತ್ವವನ್ನು ಬಲ್ಲ ಹಲವರ ಅಂಬೋಣ.

ಆದರೂ ಪ್ರಸಂಗದಲ್ಲಿ ಉಂಟಲ್ಲ ಎಂದುಕೊಂಡು ಅರ್ಥ ಹೇಳಲೇ ಬೇಕಾಗುತ್ತದೆ ಎಂದು ಕಲಾವಿದರು ಹೇಳುತ್ತಾರೆ. ನಾವು ಎಷ್ಟೋ ಬಾರಿ ನಮಗೆ ಪ್ರಸಂಗವೇ ಆಧಾರ ಎಂದು ಮೂಲಕಥೆಗೆ ಅಪಚಾರ ಎಸಗಿದ ಉದಾಹರಣೆಗಳೂ ಉಂಟು. ಈ ಪದ್ಯಕ್ಕೆ ಕೆಲವೊಮ್ಮೆ ಒಂದೇ ಇರುವ ಕತ್ತಿಯನ್ನು ನೇತಾಡಿಸಲು ಎರಡು ಒರೆಯ ಅಗತ್ಯ ಇಲ್ಲ ಎಂದು ರಾಮನ ಪಾತ್ರಧಾರಿ ಹೇಳಿದಾಗ ಮಾಯಾ ಶೂರ್ಪನಖಿಯ ಪಾತ್ರಧಾರಿ “ಎರಡು ಒರೆಯು ಇದ್ದರೇನು? ಚೂರಿಯನ್ನು ಒಮ್ಮೆ ಆ ಒರೆಯಲ್ಲಿ, ಇನ್ನೊಮ್ಮೆ ಈ ಒರೆಯಲ್ಲಿ ಇಟ್ಟರಾಯಿತು” ಎಂದು ಅರ್ಥ ಹೇಳುವುದನ್ನೂ ಕೇಳಿದವರಿದ್ದಾರೆ.     

ಇನ್ನೊಂದು ಸನ್ನಿವೇಶ ವಿಶ್ವಾಮಿತ್ರ ಮೇನಕೆ ಪ್ರಸಂಗದಲ್ಲಿ. ಇಲ್ಲಿ ಮೇನಕೆಯನ್ನು ವಿಶ್ವಾಮಿತ್ರ ಮೊದಲು ಕಾಣುವ ಸನ್ನಿವೇಶ. 

ಕಂಡನಾಕೆಯ । ದುಂಡು ಕುಚಗಳನ್ನು । ಚಂಡಮುನಿ ಭ್ರಮೆ । ಗೊಂಡು ನುಡಿದನು । ಭಂಡರಂದದೊಳವಳಿಗೆ ।। 

ಈ ಪದ್ಯಕ್ಕೆ ವಿಶ್ವಾಮಿತ್ರ ಪಾತ್ರಧಾರಿಗಳಿಗೆ ಬಹಳಷ್ಟು ಮಾತನಾಡಿ ಪ್ರೇಕ್ಷಕರಿಗೆ ಮುಜುಗರವನ್ನು ತರಿಸುವ ಅವಕಾಶಗಳು ಉಂಟು. ಈ ಪದ್ಯದ ದುಂಡು ಎನ್ನುವ ಶಬ್ದಕ್ಕೆ ಎರಡು ಕೈಗಳಿಂದ ಅಭಿನಯವನ್ನೂ ಮಾಡುವವರೂ ಇದ್ದಾರೆ. 

ಇನ್ನು ‘ಚಂದ್ರಾವಳಿ ವಿಲಾಸ’ ಎನ್ನುವ ಪ್ರಸಂಗ ಸಮಾಜಕ್ಕೆ ಏನು ಸಂದೇಶ ಕೊಡುತ್ತದೆ ಎಂದು ಅರ್ಥವಾಗುವುದೇ ಇಲ್ಲ. ಈ ಕಥೆಯೂ ಮೂಲದಲ್ಲಿಲ್ಲ ಎಂದು ಕೆಲವರು ವಾದಿಸುವುದನ್ನು ಕೇಳಿದ್ದೇನೆ. ಅದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ, ಕ್ಷಮಿಸಿ. ಇಂತಹಾ ಪ್ರಸಂಗಗಳನ್ನು ಪ್ರದರ್ಶಿಸದೆ ಇದ್ದರೆ ಒಳ್ಳೆಯದು. 

ಯಕ್ಷಗಾನದಲ್ಲಿಯೂ ಅಶ್ಲೀಲತೆಗೆ ಎಡೆಕೊಡುವ ಇನ್ನೂ ಅನೇಕ ಸನ್ನಿವೇಶ, ಪ್ರಸಂಗಗಳಿವೆ. ಆದರೆ ಅದನ್ನು ಬಳಸಿಕೊಳ್ಳುವವರೂ ಇದ್ದಾರೆ. ಬಳಸಿಕೊಳ್ಳದ ಕಲಾವಿದರೂ ಇದ್ದಾರೆ. ಆದ್ದರಿಂದ ನಾವು ಸಿನಿಮಾ ಮತ್ತು ಇತರ ಕಲೆಗಳನ್ನು ಮಾತ್ರ ಆಕ್ಷೇಪಿಸದೆ ಟೀಕೆಟಿಪ್ಪಣಿಗಳನ್ನು ವಿಮರ್ಶಾತ್ಮಕವಾಗಿ ಮತ್ತು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವುದನ್ನು ಕಲಿಯಬೇಕು. ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನೂ ಪುರುಷರೇ ನಿರ್ವಹಿಸುತ್ತಿದ್ದರೂ ರಂಗದಲ್ಲಿ ಅವರ ಆಕ್ಷೇಪಾರ್ಹವಾದ ಅಭಿನಯ, ಸನ್ನಿವೇಶಗಳೂ ಹಿಂದೆ ನಡೆದಿವೆ.

ಯಕ್ಷಗಾನ ಹೆಚ್ಚು ಜನರಿಗೆ ಮುಟ್ಟುವ ಸರಳವಾದ ಕಲೆ. ಸಾಮಾನ್ಯ ಮನುಷ್ಯರನ್ನೂ ಬೇಗನೆ ತಲುಪುತ್ತದೆ ಮತ್ತು ಅರ್ಥವಾಗುತ್ತದೆ. ಇದರಲ್ಲಿ ಸ್ಪಷ್ಟತೆ ಇರುವುದರಿಂದ ಜನಸಾಮಾನ್ಯರನ್ನು ಬೇಗನೆ ಆಕರ್ಷಿಸಿತು. ಹಾಗೆಂದು ಯಕ್ಷಗಾನದಲ್ಲಿಯೂ ಕೂಡಾ ಅಗತ್ಯವಿಲ್ಲದ ಸಂದರ್ಭಗಳನ್ನು ಕತ್ತರಿಸಿ ಅದನ್ನು ಇನ್ನೂ ಹೆಚ್ಚು ಸುಂದರಗೊಳಿಸಬಹುದು ಎಂಬುದೇ ಈ ಬರಹದ ಮೂಲ ಆಶಯ.

ಒಟ್ಟಿನಲ್ಲಿ ಹೇಳುವುದಾದರೆ ಯಕ್ಷಗಾನ ಎಂಬುದು ಈ ನಾಡಿಗೆ ಹಿಂದಿನವರು ಕೊಟ್ಟ ಅಪೂರ್ವ ಕೊಡುಗೆ. ಅದನ್ನು ಉಳಿಸಿ ಬೆಳೆಸುವುದು ಪ್ರಜ್ಞಾವಂತರಾದ ಪ್ರೇಕ್ಷಕ ಮತ್ತು ಕಲಾವಿದರ ಕೈಯಲ್ಲಿದೆ. 

ಇವಿಷ್ಟನ್ನಲ್ಲದೆ ಅವರು ಇನ್ನಷ್ಟು ಉದಾಹರಣೆಗಳನ್ನು ಕೊಟ್ಟರು. ನಾನಿಷ್ಟನ್ನೇ ಬರೆದೆ. ಇದು ವಿಮರ್ಶೆ ಅಲ್ಲ, ಬರೀ ವಿಶ್ಲೇಷಣೆ ಅಷ್ಟೇ. 

ಬರಹ: ಯಕ್ಷಕಿಂಕರ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments