Thursday, November 21, 2024
Homeಪುಸ್ತಕ ಮಳಿಗೆ'ಅಗರಿ ಮಾರ್ಗ' ಗಾನ ಸುಧೆಯಲ್ಲಿ ಮಿಂದೆದ್ದು - ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ 

‘ಅಗರಿ ಮಾರ್ಗ’ ಗಾನ ಸುಧೆಯಲ್ಲಿ ಮಿಂದೆದ್ದು – ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ 

ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ಯಕ್ಷಗಾನ ಕಲೆಯ ಯುವ ಪ್ರತಿಭಾವಂತ ಮದ್ದಳೆಗಾರರಾಗಿ, ಬ್ಯಾಂಕ್ ಉದ್ಯೋಗಿಯಾಗಿ, ಲೇಖಕರಾಗಿ ನಮಗೆಲ್ಲಾ ಪರಿಚಿತರು. ಯಕ್ಷಗಾನ ಕಲೆ ಮತ್ತು ಕಲಾವಿದರ ಬಗೆಗೆ ಆಳವಾದ ಅಧ್ಯಯನವನ್ನು ಮಾಡಿಯೇ ತಾವು ಸಂಗ್ರಹಿಸಿದ ವಿಚಾರಗಳನ್ನು ಅಕ್ಷರ ರೂಪಕ್ಕೆ ಇಳಿಸುವ ಲೇಖಕರಿವರು. ಅವರು ಬರೆದ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಓದುವಾಗ ನಾವು ಈ ವಿಚಾರವನ್ನು ತಿಳಿಯಬಹುದು.

“ಅಗರಿ ಮಾರ್ಗ, ಗಾನ ಸುಧೆಯಲ್ಲಿ ಮಿಂದೆದ್ದು”  ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರಿಂದ ರಚಿಸಲ್ಪಟ್ಟ ಕೃತಿಯಿದು. ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ರಾಯರ ಬಗೆಗೆ ಕಲಾಭಿಮಾನಿಗಳಿಗೆಲ್ಲರಿಗೂ ತಿಳಿದಿದೆ. ಭಾಗವತರಾಗಿ ಯಶಸ್ವೀ ಪ್ರದರ್ಶನಗಳಿಗೆ ಕಾರಣರಾಗಿ ಕಲಾಭಿಮಾನಿಗಳನ್ನು ರಂಜಿಸಿದ ಅಗರಿ ಶ್ರೀನಿವಾಸ ರಾಯರು ಶ್ರೇಷ್ಠ ನಿರ್ದೇಶಕರಾಗಿ ಕಲಾವಿದರನ್ನು ಸಿದ್ಧಗೊಳಿಸಿದ ಸಾಧಕರು. ಪ್ರಸಂಗಕರ್ತರಾಗಿಯೂ ಯಕ್ಷಗಾನಕ್ಕೆ ಶ್ರೀಯುತರ ಕೊಡುಗೆಯು ಅಪಾರವಾದುದು.

ಇವರ ಬಗೆಗೆ  ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ಬರೆದ ಲೇಖನಗಳು ‘ಅಗರಿ ಮಾರ್ಗ’ ಎಂಬ ಈ ಕೃತಿಯ ರೂಪದಲ್ಲಿ ಓದುಗರ ಕೈ ಸೇರಿದುದು ತುಂಬಾ ಸಂತಸದ ವಿಚಾರ. ಈ ಹೊತ್ತಗೆಯೊಳಗೆ ಒಟ್ಟು ಇಪ್ಪತ್ತೊಂಭತ್ತು ಲೇಖನಗಳಿವೆ. ಇದು ಎರಡನೆಯ ಮುದ್ರಣವು. (2020 ನವೆಂಬರ್) 2019 ನವೆಂಬರಿನಲ್ಲಿ ಮೊದಲ ಮುದ್ರಣವು ನಡೆದಿತ್ತು. ಒಂದೇ ವರುಷದೊಳಗೆ ಮರು ಮುದ್ರಿತವಾದುದು ಈ ಪುಸ್ತಕದ ಮೌಲ್ಯವನ್ನು ತಿಳಿಸುತ್ತದೆ.

ಈ ಕೃತಿಯ ಪ್ರಕಾಶಕರು ‘ಈಶಾವಾಸ್ಯಮ್ ಕಲಾ ಪ್ರಕಾಶನ’, ಪೆರ್ಮಂಕಿ ಮಂಗಳೂರು. ಇದು ಒಟ್ಟು ನೂರಾ ಹದಿನಾರು ಪುಟಗಳುಳ್ಳ ಹೊತ್ತಗೆ. ಬೆಲೆ ರೂಪಾಯಿ ನೂರಾ ಇಪ್ಪತ್ತು. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಚಿಂತಕರೂ ವಿದ್ವಾಂಸರೂ ಆದ ಶ್ರೀ ಲಕ್ಷ್ಮೀಶ ತೋಳ್ಪಾಡಿ. ಲೇಖಕ  ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ‘ಮೊದಲ ಮಾತು’ ಎಂಬ ಶೀರ್ಷಿಕೆಯಡಿ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಮಹನೀಯರಿಗೆಲ್ಲಾ ಕೃತಜ್ಞತೆಗಳನ್ನು ಅರ್ಪಿಸಿರುತ್ತಾರೆ,

ಕಲಾವಿದ ಶ್ರೀ ವಾಸುದೇವ ರಂಗಾ ಭಟ್ ಅವರು ಈ ಕೃತಿಗೆ ಬೆನ್ನುಡಿಯನ್ನು ಬರೆದಿರುತ್ತಾರೆ.  ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ಅಗರಿ ಶ್ರೀನಿವಾಸ ರಾಯರ ಬಗೆಗೆ ಬರೆದ ಇಪ್ಪತ್ತೊಂಭತ್ತು ಲೇಖನಗಳನ್ನು ತನ್ನ ಬಸಿರೊಳಗೆ ಈ ಕೃತಿಯು ತುಂಬಿಕೊಂಡಿದೆ.

ಆ ಲೇಖನಗಳೆಂದರೆ, ಅಗರಿ ಮಾರ್ಗ, ಪ್ರತಿಭೆಯುಮಭ್ಯಾಸಮುಂ ಕವಿಗೆ ಕಾರಣಂ, ಹೊರಗಣ ತೋರಣಕ್ಕಿಂತಲೂ ಒಳಗಣ ಹೂರಣಕ್ಕೆ ಪ್ರಾಧಾನ್ಯತೆ, ಅಗರಿ ಬ್ರಾಂಡ್, ಅಗರಿ ಧ್ವನಿ, ಅಗರಿ ಮಾರ್ಗ ಮತ್ತು ಭಜನಾ ಹಾಡುಗಳು, ಅಗರಿಯವರ ನಿಧಾನ ಜಂಪೆ ತಾಳದ ಬಗೆ, ಅಗರಿ-ಶೇಣಿ, ಅಗರಿ ಭಾಗವತರ ನೆವನದಲ್ಲಿ ನಾದನಾಮ ಕ್ರಿಯೆ, ಅಗರಿ ಪರಂಪರೆ ‘ವಿಶಿಷ್ಟ ವಿಭಿನ್ನ’, ಅಗರಿ ಶೈಲಿಯ ಉಳಿವಿನ ಬಗೆಗೆ, ಯಕ್ಷಗಾನ ಹಾಡುಗಳ ಧಾತು ಮತ್ತು ಮಾತುಗಳ ನಡುವಿನ ಭಾಂಧವ್ಯ, ಅಗರಿ ಶ್ರೀನಿವಾಸ ಭಾಗವತರ ಭರತೇಶ ದಿಗ್ವಿಜಯ ಪ್ರಸಂಗ,

ಅಗರಿ ಶ್ರೀನಿವಾಸ ಭಾಗವತರ ‘ಧನಗುಪ್ತ ಮಹಾಬಲ’ ಯಕ್ಷಗಾನ ಪ್ರಸಂಗ, ಅಗರಿ ಶ್ರೀನಿವಾಸ ಭಾಗವತರ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ಯ ಓದು, ಅಗರಿ ಶ್ರೀನಿವಾಸ ಭಾಗವತ ವಿರಚಿತ ‘ಶಿವಲೀಲಾರ್ಣವ’, ಅಗರಿ ಶ್ರೀನಿವಾಸ ಭಾಗವತ ವಿರಚಿತ ‘ಪ್ರಭಾವತಿ ಪರಿಣಯ’, ಅಗರಿ ಶ್ರೀನಿವಾಸ ಭಾಗವತ ವಿರಚಿತ ಶ್ರೀ ದೇವಿ ಭ್ರಮರಾಂಬಿಕಾ ವಿಲಾಸ,

ದಿವಂಗತ ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು ನೆನೆಯುತ್ತಾ, ರಘುರಾಮ ಭಾಗವತರನ್ನು ನೆನೆಯುತ್ತಾ, ಅಗರಿಯವರ ಒಡನಾಡಿ ಶ್ರೀ ಬರ್ಗುಳ ಗೋಪಾಲಕೃಷ್ಣ ಕುರುಪ್, ದಿನೇಶ ಅಮ್ಮಣ್ಣಾಯರು ಹೇಳಿದ ನೆನಪು, ಪದ್ಯಾಣ ಶಂಕರನಾರಾಯಣ ಭಟ್ ಕಂಡಂತೆ, ಅಗರಿ ಶಿಷ್ಯನ ಕಣ್ಣಲ್ಲಿ, ಅಗರಿ ಮಾರ್ಗದ ಉಸಿರಾಟ, ಅಗರಿ ಶ್ರೀನಿವಾಸ ಭಾಗವತರ ಕವಿ ಮನಸ್ಸಿನ ಪಲ್ಲವ ಅಗರಿ ಭಾಸ್ಕರ ರಾವ್, ಅಗರಿ ಶ್ರೀನಿವಾಸ ಭಾಗವತರ ಭಜನಾ ಪರಂಪರೆಯ ಪಲ್ಲವ, ಮೊಮ್ಮಗನ ನೆನಪು, ಅಗರಿ ಶ್ರೀನಿವಾಸ ಭಾಗವತರ ಪರಮ ಅಭಿಮಾನಿ.

ಹೀಗೆ ಒಟ್ಟು ಇಪ್ಪತ್ತೊಂಭತ್ತು ಲೇಖನಗಳಿವೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ ಪುರಸ್ಕೃತ ಕೃತಿ ಇದು. (2019ರಲ್ಲಿ) ಅಭಿನಂದನೆಗಳು, ಶುಭಾಶಯಗಳು. 

ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ, ಈಶಾವಾಸ್ಯಮ್ ಕಲಾ ಪ್ರಕಾಶನ, ಪೆರ್ಮಂಕಿ, ಉಲಾಯಿಬೆಟ್ಟು ಅಂಚೆ,  ಮಂಗಳೂರು 574145

ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ 

ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ 9164487083

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments