Thursday, November 21, 2024
Homeಯಕ್ಷಗಾನಕರ್ಣ ಪರ್ವ - ಒಂದು ಜಿಜ್ಞಾಸೆ

ಕರ್ಣ ಪರ್ವ – ಒಂದು ಜಿಜ್ಞಾಸೆ

ಪ್ರಾತಿನಿಧಿಕ ಫೋಟೋ (ಸಾಂದರ್ಭಿಕ )

      ಕವಿ ರಚಿಸಿದ ಪ್ರತೀ ಪ್ರಸಂಗದಲ್ಲೂ ಪಾತ್ರ ಚಿತ್ರಣ ಸ್ಪಷ್ಟ  ಇದೆ. ಇಡೀ ಪ್ರಸಂಗದ ನಡೆಯಲ್ಲಿ ಒಂದು ಸಮತೋಲನ ಇದೆ. ಉದಾ. ತಾಳಮದ್ದಲೆಯಲ್ಲಿ ಜನಪ್ರಿಯವಾದ ಕರ್ಣಪರ್ವ.

 ಹಿಂದಿನ ಕಾಲದ ತಾಳಮದ್ದಳೆಯಲ್ಲಿ,  “ಈ ನೆರೆದ ಪರಿಭವವ ಕಾಣುತ” ಅಲ್ಲಿಂದ ಆರಂಭಿಸಿದ್ದು ನೋಡಿದ್ದೇವೆ. ಈಗ ಅದನ್ನು ಕಡಿತ ಗೊಳಿಸಿ “ಇತ್ತಲು ಹತ್ತಿತು ಕರ್ಣಾರ್ಜುನರಿಗೆ ” ಇಲ್ಲಿಂದಲೇ ಆರಂಭ.  ಆಗಲಿ ಸ್ವಾಗತಿಸೋಣ. ನಾಲ್ಕು ಗಂಟೆಯ ಅವಧಿಯ ತಾಳಮದ್ದಲೆಯಲ್ಲಿ ಕರ್ಣ- ಅರ್ಜುನ ಎರಡೇ ಪಾತ್ರಗಳು ಪ್ರಸಂಗದ ಹೆಚ್ಚಿನ ಸಮಯವನ್ನು ಅಂದಾಜು 1-30 ಗಂಟೆ, (ಕೆಲವೆಡೆ 2-30 ದಾಟಿದ್ದಿದೆ) ಸಮಯದಲ್ಲಿ ಕೇವಲ ನಾಲ್ಕು ಪದ್ಯಕ್ಕೆ ಮಾತಿನ ಚಕಮಕಿಯಲ್ಲಿ ಕಳೆಯುತ್ತವೆ. ತದನಂತರ ಕೃಷ್ಣ- ಅರ್ಜುನ  ಸಂಭಾಷಣೆ ಮುಗಿದು ಯುದ್ದದ ಭಾಗ “ಎಲವೊ ರಾಧೇಯ ಕೇಳು “” ಭಾಗ ಕಡಿತಗೊಳಿಸಿ, ನೇರ “ಅಂಧನೃಪ ಕೇಳಿಂತು ” ಅಲ್ಲಿಂದ ಮಂದುವರಿದು ಶಲ್ಯ- ಕರ್ಣ- ಸರ್ಪಾಸ್ತ್ರ ಸಂಭಾಷಣೆಗೆ ( ಶಲ್ಯ ಬಿಟ್ಟು ಹೋದಲ್ಲಿಗೆ) ಪ್ರಸಂಗ ಕೆಲವೆಡೆ ಕೊನೆ. 

ಅಲ್ಲಿಯೂ ರಂಗದಲ್ಲಿ ಅಳವಡಿಸಬೇಕಾದ ಕೆಲವು ಕ್ರಮ ಮಾತಿನ ಭರದಲ್ಲಿ ನೆನಪಿರುವುದಿಲ್ಲ. 

ಅಂಬರ ಕುಸಿದರು ತೊಟ್ಟ ಶರವ ತೊಡೆ|ನೆಂಬಬಿರುದು  ತನಗೆ || ಹಂಬಲಿಸುವುದೇಕೆನುತಲೆ ಗರ್ಜಿಸು| ತಂಬನು ನೂಕಿಸಿದ (ನೂಕಿದನು) ||

 ಕರ್ಣ- ಶಲ್ಯರ ವಾದಗಳ ಮದ್ಯೆ, ಈ ಪದ್ಯ ಬರುತ್ತದೆ. ಇದನ್ನು ಅನುಸರಿಸಿ ಕರ್ಣನು  ‘ನಡಿ’ ಎಂದಾಗ, ಒಂದು ದಿತ್ತವು ಬಯಲಾಟವಾಗಲಿ, ತಾಳಮದ್ದಳೆಯಾಗಲಿ ಅಲ್ಲಿ ಅಗತ್ಯ.  ಕೆಲವು ಕಡೆ ಇದನ್ನು ಜಾಗಟೆಯಲ್ಲಿ ಸೂಚಿಸಿದರೂ ಗಮನಿಸದ ಕರ್ಣ.  ಕೊನೆಗೆ ರಂಗದಲ್ಲಿದ್ದ ಇತರ ಅರ್ಥಧಾರಿಗಳೇ  ಸರ್ಪಾಸ್ತ್ರ ನಿರ್ಗಮನಕ್ಕೆ ಸೂಚನೆ ನೀಡಬೇಕಾದ ಪರಿಸ್ಥಿತಿ ಬಂದಿದೆ. ಇಂತಹುದನ್ನೆಲ್ಲ ಭಾಗವತನಾಗಿ ರಂಗಸ್ಥಳದಲ್ಲಿರುವಾಗಲೇ ಖಂಡಿಸಿದರೆ ಸಂಘಟಕರಿಗೆ, ಪ್ರೇಕ್ಷಕರಿಗೆ ಮುಜುಗರವಾಗುತ್ತದೆ. ಹಾಗಾಗಿ ಸಹಿಸಿಕೊಂಡು ಸುಮ್ಮನಿರಬೇಕಾಗುತ್ತದೆ. 

ದಿತ್ತ, ನಿರ್ಗಮನಕ್ಕೆ ತೈತತಕತ, ಪ್ರವೇಶ ಇತ್ಯಾದಿ ತಾಳಮದ್ಲೆಯಲ್ಲಿ ಅಗತ್ಯ ಇಲ್ಲ ಅಂದಾದರೆ ತಾಳಮದ್ದಲೆಯಲ್ಲಿ  ಹಿಮ್ಮೇಳದ ಅದರಲ್ಲೂ ಚೆಂಡೆಯ ಅಗತ್ಯ ಇರುವುದಿಲ್ಲ. ಅಂದರೆ ಹಿಮ್ಮೇಳದ‌ ಪಾಲ್ಗೊಳ್ಳುವಿಕೆ ಅಗತ್ಯವಿರುವಲ್ಲಿಯೂ ನಿರ್ಲಕ್ಷ್ಯ ಕಾಣುತ್ತದೆ. ಇಂತಹ ವಿದ್ಯಮಾನಗಳಿಂದ ಯಕ್ಷಗಾನ ತಾಳಮದ್ದಲೆಯ ಮುಂದಿನ ದಿನಗಳಲ್ಲಿ ಪ್ರಸಂಗವೊಂದರ ಆಶಯ, ಚೌಕಟ್ಟು, ಸೂಕ್ಷ್ಮಗಳು ಇತ್ಯಾದಿ ಹಲವಾರು ವಿಷಯಗಳು ಮರೆಯಾಗಬಹುದು. 

ಹಿಂದೆ ಒಂದು ತಾಳಮದ್ಲೆಯಲ್ಲಿ ತಾಳಮದ್ಲೆ ಹಿಡಿತ ತಪ್ಪಿದಾಗ  ಒಬ್ಬರು ಹಿರಿಯ  ಭಾಗವತರು, 

“ಹಲವಿದೇತಕೆ………………… ಕೌರವ ತಿಲಕ ಮೂವರ ನಂಬಿ ಕೆಟ್ಟನೆನುತ ಖತಿ ತಳೆದು ರಥವಿಳಿದು ನಡೆದ” ಎಂದು ಜಾಗಟೆ ಇರಿಸಿ ನಡೆದರಂತೆ. (ಕೇಳಿದ ವಿಚಾರ) ಅಷ್ಟೇ ಪ್ರಬಲವಾಗಿ  ವಿರೋಧಿಸುವವರು ಇಲ್ಲದ ಕಾರಣ ಈ ರೀತಿ ಅಪಸವ್ಯಗಳು ನಡೆಯುತ್ತವೆ.

ಇನ್ನೊಂದು ಸಂದರ್ಭ. ಶಲ್ಯನ ನಿರ್ಗಮನದ  ಅನಂತರದ ಇನ್ನೊಂದು ಪ್ರಧಾನ ಭಾಗ ಕೃಷ್ಣ-ಅರ್ಜುನ ಸಂಭಾಷಣೆ.  “ಮನಸಿಜ ಪಿತ ನೀನು”, “ಸಾಯಕಗಳಿಲ್ಲವಗೆ “” ಮುಂತಾದ ಪದ್ಯಗಳಿಗೆ ಈಗ ಅವಕಾಶ ಕಡಿತ. ಅಂತೂ ಇಷ್ಟೇ ಭಾಗಗಳಿಗೆ ಅಂದಾಜು 6 ಗಂಟೆ ವಿನಿಯೋಗಿಸಿ ಕರ್ಣಾವಸಾನ( ಪ್ರಸಂಗ) ಅಗುತ್ತದೆ.  

ಇದನ್ನು ಪ್ರಸಂಗದ, ಪಾತ್ರದ ವ್ಯಾಪ್ತಿಯಲ್ಲಿ, ಎಲ್ಲಾ ಭಾಗಗಳಲ್ಲೂ ಪಾತ್ರಗಳು ವ್ಯಕ್ತಿ ಆಗದೇ ಪಾತ್ರವಾಗಿಸಿ ಸುಂದರಗೊಳಿಸಬಹುದಲ್ಲವೇ?

      – ಸಿರಿಬಾಗಿಲು ರಾಮಕೃಷ್ಣ ಮಯ್ಯ

– ಸಿರಿಬಾಗಿಲು ರಾಮಕೃಷ್ಣ ಮಯ್ಯ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments