Friday, November 22, 2024
Homeಯಕ್ಷಗಾನತಿರುಗಾಟದ ಸುವರ್ಣ ಸಂಭ್ರಮದಲ್ಲಿ ಶ್ರೀ ಸದಾಶಿವ ಕುಲಾಲ್ ವೇಣೂರು 

ತಿರುಗಾಟದ ಸುವರ್ಣ ಸಂಭ್ರಮದಲ್ಲಿ ಶ್ರೀ ಸದಾಶಿವ ಕುಲಾಲ್ ವೇಣೂರು 

ಹೌದು. ಶ್ರೀ ಹನುಮಗಿರಿ ಮೇಳದ ಕಲಾವಿದ, ತೆಂಕುತಿಟ್ಟಿನ ಅನುಭವೀ ಪುಂಡುವೇಷಧಾರಿ  ಶ್ರೀ ಸದಾಶಿವ ಕುಲಾಲ್ ವೇಣೂರು ಅವರು ತಿರುಗಾಟದ ಸುವರ್ಣ ಸಂಭ್ರಮದಲ್ಲಿದ್ದಾರೆ. ವೃತ್ತಿ ಕಲಾವಿದನಾಗಿ ಕಳೆದ ಐವತ್ತು ವರ್ಷಗಳಿಂದ ಯಕ್ಷಗಾನ ಕಲಾ ವ್ಯವಸಾಯವನ್ನು ಮಾಡುತ್ತಿದ್ದಾರೆ. 2022-23ನೇ  ಸಾಲು ಇವರ ಐವತ್ತೊಂದನೇ ತಿರುಗಾಟವು.

ಈ ತಿರುಗಾಟದ ಸಮಯದಲ್ಲಿ ‘ಸುವರ್ಣ ಸಂಭ್ರಮ’ ಆಚರಿಸುವ ಸಿದ್ಧತೆಯಲ್ಲಿ  ಶ್ರೀ ಸದಾಶಿವ ಕುಲಾಲ್ ವೇಣೂರು ಅವರು ತೊಡಗಿಸಿಕೊಂಡಿದ್ದಾರೆ. ಆಕರ್ಷಕ ರೂಪ ಮತ್ತು ಆಳಂಗವನ್ನು ಹೊಂದಿದ ಇವರು ಸ್ತ್ರೀ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಕಿರೀಟವೇಷಗಳನ್ನೂ ನಿರ್ವಹಿಸುತ್ತಿದ್ದಾರೆ. ರೂಪವು ದೇವರ ಕೊಡುಗೆ. ಅದರ ಜತೆಗೆ ತನ್ನ ಪ್ರತಿಭಾವ್ಯಾಪಾರದಿಂದ ಆಕರ್ಷಕವಾದ ಪ್ರವೇಶ, ಗಿರಕಿ, ಕುಣಿತಗಳಿಂದ ರಂಗದಲ್ಲಿ ಮೆರೆದ ಕಲಾವಿದರಿವರು.

ದೊಡ್ಡ ಸಾಮಗರು ( ಶ್ರೀ ಮಲ್ಪೆ ಶಂಕರನಾರಾಯಣ ಸಾಮಗರು) ಮತ್ತು ಶೇಣಿ ಗೋಪಾಲಕೃಷ್ಣ ಭಟ್ ಅವರೊಂದಿಗೂ ತಿರುಗಾಟ ನಡೆಸುವ ಭಾಗ್ಯವು ಇವರಿಗೆ ಸಿಕ್ಕಿತ್ತು. ಯಕ್ಷಗಾನ ವೇಷಭೂಷಣ ತಯಾರಿಕೆಯನ್ನೂ ಇವರು ಬಲ್ಲವರು. ಅದರಲ್ಲೂ ವಿಶೇಷವಾಗಿ ಬೇರೆ ಬೇರೆ ವೇಷಗಳಿಗೆ ಬೇಕಾದಂತೆ ಗಡ್ಡ ಮತ್ತು ಮೀಸೆಗಳನ್ನು ತಯಾರಿಸುವ ಕಲೆಯು ಇವರಿಗೆ ಕರಗತವಾಗಿದೆ. ಬಹಳಷ್ಟು ಕಲಾವಿದರು ವೇಣೂರು  ಶ್ರೀ ಸದಾಶಿವ ಕುಲಾಲರು ತಯಾರಿಸಿ ಕೊಟ್ಟ ಮೀಸೆ ಗಡ್ಡಗಳನ್ನು ಉಪಯೋಗಿಸುತ್ತಿರುವುದನ್ನು ನಾವು ಕಾಣಬಹುದು. ಶ್ರೀ ಜನಾರ್ದನ ಗುಡಿಗಾರರೂ ಶ್ರೀ ವಸಂತ ಗೌಡರೂ ಈ ವಿದ್ಯೆಯಲ್ಲಿ ನಿಪುಣರೆಂಬುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬಹುದು. 

ವೇಣೂರು ಶ್ರೀ ಸದಾಶಿವ ಕುಲಾಲರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಕರಿಮಣೇಲು ಎಂಬಲ್ಲಿ. (ಶ್ರೀ ದೇವಿಕೃಪಾ ಮನೆ) 1961ನೇ  ನವೆಂಬರ್ 9ರಂದು ಶ್ರೀ ಕೃಷ್ಣಪ್ಪ ಮೂಲ್ಯ ಮತ್ತು ಶ್ರೀಮತಿ ಅಪ್ಪಿ ದಂಪತಿಗಳಿಗೆ ಪುತ್ರನಾಗಿ ಜನನ. ಶ್ರೀ ಕೃಷ್ಣಪ್ಪ ಮೂಲ್ಯರು ಸಣ್ಣ ಮಟ್ಟಿನ ಕೃಷಿಕರು. ಸದಾಶಿವ ಕುಲಾಲರು ಓದಿದ್ದು 3ನೇ ತರಗತಿ ವರೆಗೆ. ವೇಣೂರು ವಿದ್ಯಾದಾಯಿನಿ ಶಾಲೆಯಲ್ಲಿ. ಮನೆಯಲ್ಲಿ ಬಡತನವಿತ್ತು. ಹೆಚ್ಚಿನ ವಿದ್ಯಾರ್ಜನೆಗೆ ಅವಕಾಶವಿರಲಿಲ್ಲ. ಎಳವೆಯಲ್ಲೇ  ಯಕ್ಷಗಾನಾಸಕ್ತಿ ಇತ್ತು. ಎಲ್ಲಾ ಮೇಳಗಳ ಪ್ರದರ್ಶನಗಳನ್ನು ನೋಡುತ್ತಿದ್ದರು. ಕಲಿತು ಕಲಾವಿದನಾಗಬೇಕೆಂಬ ಆಸೆಯೂ ಆಗಿತ್ತು.

ಸುರತ್ಕಲ್ ಮೇಳವು ವೇಣೂರಿಗೆ ಬಂದಾಗ ಪ್ರದರ್ಶನ ನಡೆಯುವ ಸ್ಥಳಕ್ಕೆ ಬೇಗನೇ ತಲುಪುತ್ತಿದ್ದರು. ಆಸನಗಳನ್ನು ಜೋಡಿಸಿ ಇರಿಸುವುದು, ಆರಾಮ ಕುರ್ಚಿಯ ಬಟ್ಟೆಗೆ ರೋಲ್ ತುಂಬಿಸುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದರು. ಸುರತ್ಕಲ್ ಮೇಳದ ಹಾಸ್ಯಗಾರರಾದ ವೇಣೂರು ಶ್ರೀ ಸುಂದರ ಆಚಾರ್ಯರು ಮೇಳಕ್ಕೆ ಬರುತ್ತೀಯಾ ಎಂದು ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡಿದ್ದರು. ಎರಡು ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ. ಆ ಸಂದರ್ಭದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೂ ಮಾಡಲು ಅವಕಾಶ ಸಿಕ್ಕಿತ್ತು. ಆದುದರಿಂದ ರಂಗಭಯವು ದೂರವಾಗಿತ್ತು.

ದೊಡ್ಡ ಸಾಮಗರಿಗೆ ಸದಾಶಿವ ಕುಲಾಲರಲ್ಲಿ ತುಂಬಾ ಪ್ರೀತಿ. ಅವರು ಕಾರ್ಯಕ್ರಮಗಳಿಗೆ ಹೋಗುವಾಗ ಜತೆಗೆ ಕರೆದೊಯ್ಯುತ್ತಿದ್ದರು. ಬಳಿಕ ನಾಟ್ಯ ಕಲಿತು ವೇಷಧಾರಿಯಾಗಲು ಸದಾಶಿವ ಕುಲಾಲರು ನಿರ್ಧರಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ತೆರಳಿ ಶ್ರೀ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ. ತರಬೇತಿ ಕೇಂದ್ರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್, ಬಂಟ್ವಾಳ ಜಯರಾಮ ಆಚಾರ್ಯ, ಹಳುವಳ್ಳಿ ಗಣೇಶ ಭಟ್,ಜನಾರ್ದನ ಗುಡಿಗಾರ, ವಸಂತ ಗೌಡ ಕಾಯರ್ತಡ್ಕ, ಸಬ್ಬಣಕೋಡಿ ರಾಮ ಭಟ್, ಸಬ್ಬಣಕೋಡಿ ಕೃಷ್ಣ ಭಟ್ ಮೊದಲಾದವರು ಸಹಪಾಠಿಗಳಾಗಿದ್ದರು. ಕೇಂದ್ರದ ವಿದ್ಯಾರ್ಥಿಗಳಿಂದ ನಡೆದ ಪ್ರದರ್ಶನ ರತಿಕಲ್ಯಾಣ ಪ್ರಸಂಗದಲ್ಲಿ ರತಿಯಾಗಿ ರಂಗವೇರುವ ಅವಕಾಶವಾಗಿತ್ತು. 

ವೇಣೂರು ಶ್ರೀ ಸದಾಶಿವ ಕುಲಾಲರು ಯಕ್ಷಗಾನ ತಿರುಗಾಟ ಆರಂಭಿಸಿದ್ದು ಸುರತ್ಕಲ್ ಮೇಳದಲ್ಲಿ. ಖ್ಯಾತ ಕಲಾವಿದ ಶ್ರೀ ಡಿ. ಮನೋಹರ ಕುಮಾರರ ಜತೆ ಬಾಲಗೋಪಾಲನಾಗಿ ರಂಗಪ್ರವೇಶ. ಐದು ವರ್ಷಗಳ ಕಾಲ ಇವರಿಬ್ಬರು ಬಾಲಗೋಪಾಲರಾಗಿ ಅಲ್ಲದೆ ಇತರ ಸಣ್ಣ ಪುಟ್ಟ ವೇಷಗಳಲ್ಲಿ ರಂಜಿಸಿದ್ದರು, ಪರಸ್ಪರ ಒಡನಾಡಿಗಳಾದ ಇವರೊಳಗೆ ವೇಷದ ವಿಚಾರದಲ್ಲಿ ಆರೋಗ್ಯಕರ ಸ್ಪರ್ಧೆಯೂ ಏರ್ಪಡುತ್ತಿತ್ತು. ಚೌಕಿಯಲ್ಲಿ ಬಣ್ಣ ಹಾಕುವುದರಿಂದ ಹಿಡಿದು ವೇಷಭೂಷಣ ತೊಡುವುದು ಅಲ್ಲದೆ ಕುಣಿತ, ಗಿರಕಿ ಹಾರುವ ವಿಷಯದಲ್ಲೂ ಆತ್ಮೀಯ ಸ್ಪರ್ಧೆಯು ಇವರೊಳಗೆ ದಿನಾ ನಡೆಯುತ್ತಿತ್ತು.

ಶ್ರೀಕೃಷ್ಣ ಲೀಲೆ, ಕಂಸವಧೆ ಪ್ರಸಂಗದ ಬಾಲಕೃಷ್ಣ, ಕೃಷ್ಣಾರ್ಜುನ ಕಾಳಗದ ಅಭಿಮನ್ಯು ಮೊದಲಾದ ವೇಷಗಳಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ರೊಟೇಷನ್ ಪ್ರಕಾರ ಇವರಿಬ್ಬರೂ ಈ ವೇಷಗಳನ್ನು ನಿರ್ವಹಿಸುತ್ತಿದ್ದರು. ಶ್ರೀ ಶಿವರಾಮ ಜೋಗಿಯವರ ಪುಂಡು ವೇಷಗಳನ್ನು ನೋಡುತ್ತಾ ಸದಾಶಿವ ಕುಲಾಲರು ಅಭ್ಯಾಸ ಮಾಡುತ್ತಿದ್ದರು. ಶ್ರೀ ಸದಾಶಿವ ಕುಲಾಲರು ಶ್ರೀ ಶಿವರಾಮ ಜೋಗಿ ಅವರ ಅಭಿಮಾನಿಯಾಗಿ ಬೆಳೆದವರು. ಹೆಸರಾಂತ ಕಲಾವಿದರ ತಂಡವಾಗಿತ್ತು.

ಸುರತ್ಕಲ್ ಮೇಳ. ಹಿಮ್ಮೇಳದಲ್ಲಿ ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣ ಆಚಾರ್ಯ, ಶಿರಂಕಲ್ಲು ನಾರಾಯಣ ಭಟ್ಟರ ಒಡನಾಟವು ದೊರಕಿತ್ತು. ಮುಮ್ಮೇಳದಲ್ಲಿ ದೊಡ್ಡ ಸಾಮಗರು, ಶೇಣಿ, ತೆಕ್ಕಟ್ಟೆ, ಕೊಕ್ಕಡ ಈಶ್ವರ ಭಟ್, ಪೆರುವೋಡಿ ನಾರಾಯಣ ಭಟ್, ಮಧೂರು ಗಣಪತಿ ರಾವ್, ಮಿಜಾರು ದಡ್ಡಿ ನಾರಾಯಣ ಶೆಟ್ಟಿಗಾರ್, ಎಂ.ಕೆ ರಮೇಶಾಚಾರ್ಯ, ಶಿವರಾಮ ಜೋಗಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಬಾಯಾರು ಪ್ರಕಾಶ್ಚಂದ್ರ ರಾವ್, ವೇಣೂರು ಸುಂದರ ಆಚಾರ್ಯ, ಜನಾರ್ದನ ಗುಡಿಗಾರ, ಉಜಿರೆ ರಾಜ, ವೇಣೂರು ಭಾಸ್ಕರ ಆಚಾರ್ಯ, ವೇಣೂರು ಸದಾಶಿವ ಆಚಾರ್ಯ, ಅಂಬಾಪ್ರಸಾದ ಪಾತಾಳ, ವೇಣೂರು ಅಶೋಕ ಆಚಾರ್ಯ, ಮೊದಲಾದವರ ಒಡನಾಟವು ಸಿಕ್ಕಿತ್ತು.

ಐದು ವರ್ಷಗಳ ಬಳಿಕ ಪುಂಡುವೇಷಗಳನ್ನು ನಿರ್ವಹಿಸುವ ಅವಕಾಶವೂ ಸಿಕ್ಕಿತ್ತು. ಶ್ರೀಕೃಷ್ಣ, ಜಯಂತ, ಷಣ್ಮುಖ, ಅಭಿಮನ್ಯು, ಸಿತಕೇತ, ಲಕ್ಷ್ಮಣ, ಬಬ್ರುವಾಹನ ಮೊದಲಾದ ವೇಷಗಳನ್ನು ಮಾಡುತ್ತಿದ್ದರು. ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಹಿರಣ್ಯಕಶ್ಯಪ ಪಾತ್ರಕ್ಕೆ ಪ್ರಹ್ಲಾದನಾಗಿ ಹರಿಶ್ಚಂದ್ರನಿಗೆ ಲೋಹಿತಾಶ್ವನಾಗಿ ಅಭಿನಯಿಸುವ ಅವಕಾಶವಾಗಿತ್ತು. ಸೀತಾ ಕಲ್ಯಾಣ ಪ್ರಸಂಗದಲ್ಲಿ ಅವರು ವಿಶ್ವಾಮಿತ್ರನಾದಾಗ ರಾಮ ಲಕ್ಷ್ಮಣರಾಗಿ ಅಭಿನಯಿಸಲು ಅವಕಾಶ ಸಿಕ್ಕಿತ್ತು. ಶ್ರೀ ಸದಾಶಿವ ಕುಲಾಲರು ಸುರತ್ಕಲ್ ಮೇಳದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಶೇಣಿಯವರ ಹೇಳಿಕೆಯಂತೆ ಎಂ.ಕೆ ರಮೇಶಾಚಾರ್ಯ ಮತ್ತು ಶಿವರಾಮ ಜೋಗಿ ಅವರಿಂದ ನಿರ್ದೇಶನವೂ ಸಿಕ್ಕಿತ್ತು. ಶೀ೦ತ್ರಿದ ಚೆನ್ನಕ್ಕೆ ಪ್ರಸಂಗದಲ್ಲಿ ಚೆನ್ನಕ್ಕೆಯ ಮಕ್ಕಳಾಗಿ, ಕೋಟಿ ಚೆನ್ನಯ ಪ್ರಸಂಗದಲ್ಲಿ ಬಾಲ ಕೋಟಿ ಚೆನ್ನಯರಾಗಿ ಇವರು ಮತ್ತು ಡಿ.ಮನೋಹರ ಕುಮಾರರು ರಂಜಿಸಿದ್ದರು. ಬಳಿಕ ಸದಾಶಿವ ಕುಲಾಲ್ ಅವರು ಬೆಳೆಯುತ್ತಾ ಅಶ್ವತ್ಥಾಮ ಬಬ್ರುವಾಹನ, ಅಭಿಮನ್ಯು, ಗುಳಿಗ, (ಬಪ್ಪನಾಡು ಕ್ಷೇತ್ರ ಮಹಾತ್ಮೆ) ಮೊದಲಾದ ಪಾತ್ರಗಳನ್ನೂ ಮಾಡಿದರು. ಶ್ರೀ ಶಿವರಾಮ ಜೋಗಿಯವರು ಈ ಪಾತ್ರಗಳನ್ನು ಸದಾಶಿವ ಕುಲಾಲರಿಗೆ ಬಿಟ್ಟುಕೊಟ್ಟಿದ್ದರು. ಕಿರಿಯ ಕಲಾವಿದನಿಗೆ ಹಿರಿಯ ಕಲಾವಿದನ ಕೊಡುಗೆ ಇದು.

ಸುರತ್ಕಲ್ ಮೇಳದಲ್ಲಿ ಶ್ರೀ ಜನಾರ್ದನ ಆಚಾರ್ಯ, ಬಾಬು ಕುಡ್ತಡ್ಕ, ಕುಮಾರ ಗೌಡ ಪುತ್ತಿಗೆ, ಎಂ.ಟಿ.ಎಸ್ ಕುಲಾಲ್ ಮೊದಲಾದವರ ಒಡನಾಟವೂ ದೊರೆತಿತ್ತು. ಸುರತ್ಕಲ್ ಮೇಳದಲ್ಲಿ 26 ವರ್ಷಗಳ ವ್ಯವಸಾಯ. ಬಳಿಕ 8 ವರ್ಷ ಶ್ರೀ ಕಿಶನ್ ಕುಮಾರ್ ಹೆಗ್ಡೆಯವರ ಮಂಗಳಾದೇವಿ ಮೇಳದಲ್ಲಿ ವ್ಯವಸಾಯ. ಗರತಿ ಗಂಗ ಪ್ರಸಂಗದಲ್ಲಿ ಸುಪ್ರತಾಪ, ಕೌಡೂರ ಬೊಮ್ಮೆ ಪ್ರಸಂಗದಲ್ಲಿ ಸಂಕಣ್ಣ (ಖಳನಾಯಕ) ಮಹಾಕಾಳಿ ಅಪ್ಪೆ ಪ್ರಸಂಗದಲ್ಲಿ ದೇವಣ್ಣ (ಕಥಾನಾಯಕ)ನ ಪಾತ್ರಗಳಲ್ಲಿ ರಂಜಿಸಿದ್ದರು. ಮಂಗಳಾದೇವಿ ಮೇಳದ ತಿರುಗಾಟದ ಬಳಿಕ ಕಳೆದ ಹದಿನಾರು ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಪುಂಡು ವೇಷಕ್ಕೆ ಸಂಬಂಧಿಸಿದ ಎಲ್ಲಾ ವೇಷಗಳನ್ನು ನಿರ್ವಹಿಸಿದ ಶ್ರೀ ಸದಾಶಿವ ಕುಲಾಲರು ಪ್ರಸ್ತುತ ಕಿರೀಟ ವೇಷಗಳನ್ನೂ ನಿರ್ವಹಿಸುತ್ತಿದ್ದಾರೆ. ಕಲಾಪೋಷಕರೂ ಸಂಪಾಜೆ ಯಕ್ಷೋತ್ಸವದ ರೂವಾರಿಗಳೂ ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷರೂ ಆದ ಶ್ರೀ ಟಿ. ಶ್ಯಾಮ ಭಟ್ಟರ ಸಹಕಾರ, ಪ್ರೋತ್ಸಾಹದಿಂದ ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಕಲೆಯನ್ನೂ ಕಲಾವಿದರನ್ನೂ ಪ್ರೀತಿಸುವ  ಶ್ರೀ ಟಿ. ಶ್ಯಾಮ ಭಟ್ಟರನ್ನು ಧನಿಗಳೆಂದೇ ಇವರು ಗೌರವಿಸುತ್ತಾರೆ. 

ವೇಣೂರು ಶ್ರೀ ಸದಾಶಿವ ಕುಲಾಲರು ಶ್ರೀ ದಿನಕರ ಭಟ್ ಮಾವೆ ಅವರ ಹೇಳಿಕೆಯಂತೆ ಎರಡು ಬಾರಿ ವಿದೇಶ ಯಾತ್ರೆ ಕೈಗೊಂಡು ಮಸ್ಕತ್ ನಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಮುಂಬಯಿ ಪ್ರದರ್ಶನಗಳಲ್ಲೂ ಕಾಣಿಸಿಕೊಂಡಿದ್ದಾರೆ. ಶ್ರೀ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಪ್ರದರ್ಶನಗಳಲ್ಲಿ 25 ವರ್ಷ ಭಾಗವಹಿಸಿರುತ್ತಾರೆ. ಪುತ್ತೂರು ಶ್ರೀಧರ ಭಂಡಾರಿಗಳ ಶ್ರೀ ಮಹಾಲಿಂಗೇಶ್ವರ ಸಂಚಾರಿ ಯಕ್ಷಗಾನ ಮಂಡಳಿಯಲ್ಲಿ ಎರಡು ವರ್ಷ ಭಾಗವಹಿಸಿರುತ್ತಾರೆ. ಶ್ರೀ ವೇಣೂರು ಸದಾಶಿವ ಕುಲಾಲರು ತಿರುಗಾಟ ಆರಂಭಿಸಿ 50 ವರ್ಷಗಳು ಕಳೆದುವು. ೫೧ನೇ ವರ್ಷದ ವ್ಯವಸಾಯಕ್ಕೆ ಸಿದ್ಧರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ಸಂಭ್ರಮಾಚರಣೆಯನ್ನು ನಡೆಸುವ ಯೋಜನೆಯೂ ಇವರಿಗಿದೆ. ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳಾದ ನಾವೆಲ್ಲರೂ ಶುಭ ಹಾರೈಸಿ ನೆರವಾಗೋಣ.

ಶ್ರೀ ಸದಾಶಿವ ಕುಲಾಲರು ಸಂಸಾರಿಕವಾಗಿಯೂ ತೃಪ್ತರು. ಇವರ ಪತ್ನಿ ಶ್ರೀಮತಿ ಸುಜಯಾ. ಇವರು ಗೃಹಣಿ. ಇವರಿಗೆ ಮೂವರು ಮಕ್ಕಳು. ಹಿರಿಯ ಪುತ್ರಿ ನಾಗಶ್ರೀ ವಿವಾಹಿತೆ. ಪುತ್ರ ಷಣ್ಮುಖ ಪಿಯುಸಿ ಪೂರೈಸಿ ಡಿಪ್ಲೋಮ ಓದುತ್ತಿದ್ದಾರೆ. ಕಿರಿಯ ಪುತ್ರಿ ಕುಮಾರಿ ನಾಗಲಕ್ಷ್ಮಿ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಮಕ್ಕಳಿಗೆ ಉಜ್ವಲ ಭವಿಷ್ಯವು ಸಿದ್ಧಿಸಲಿ. ಶ್ರೀ ವೇಣೂರು ಸದಾಶಿವ ಕುಲಾಲರಿಗೆ ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ. ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಸದಾಶಿವ ಕುಲಾಲ್ ವೇಣೂರು, ಮೊಬೈಲ್: 9480144978

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments