ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಇವರನ್ನು ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಬಲ್ಲರು. ಇವರು ಬಡಗುತಿಟ್ಟಿನ ಶ್ರೇಷ್ಠ ಭಾಗವತರುಗಳಲ್ಲಿ ಒಬ್ಬರು. ಸಂಸ್ಕೃತ ಭಾಷೆಯ ಸಾಹಿತ್ಯ ಮತ್ತು ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿಯನ್ನು ಪಡೆದುದು ಮಾತ್ರವಲ್ಲ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ವರೆಗೂ ಅಭ್ಯಸಿಸಿದವರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತುದು ಶ್ರೀ ಗಂಗಾರಾಂ ಭಟ್, ಶ್ರೀ ಪರಮೇಶ್ವರ ಭಟ್ ಮತ್ತು ಪ್ರೊ| ರಾಜಗೋಪಾಲಾಚಾರ್ಯ ಅವರುಗಳಿಂದ.
ಸುಮಾರು ನೂರಕ್ಕೂ ಮಿಕ್ಕಿ ರಾಗಗಳನ್ನು ತಮ್ಮ ಯಕ್ಷಗಾನ ಹಾಡುಗಾರಿಕೆಗೆ ಬಳಸಿಕೊಂಡ ಸಾಧಕರಿವರು. ಬಡಗುತಿಟ್ಟಿನ ಹಾಡುಗಾರಿಕೆಗೆ ಪ್ರಪ್ರಥಮವಾಗಿ ದರ್ಬಾರ್ ಕಾನಡ, ಬಹುಧಾರೀ, ಕಲ್ಯಾಣ ವಸಂತ, ಬಿಲಹರಿ, ಷಹನಾ, ರೀತಿಗೌಳ, ಕದನ ಕುತೂಹಲ, ಕೇದಾರ, ಭಾಗ್ಯಶ್ರೀ, ನಾಟಿಕುರುಂಜಿ, ಸಿಂಹೇಂದ್ರ ಮಧ್ಯಮ, ಸಾರಂಗ, ಧರ್ಮಾವತಿ, ನೀಲಾಂಬರಿ ಮೊದಲಾದ ರಾಗಗಳನ್ನು ಬಳಸಿಕೊಂಡ ಗಾಯಕರಿವರು. ಯಕ್ಷಗಾನ ಭಾಗವತಿಕೆಯನ್ನು ಕಲಿತು ತಮ್ಮ ಹಾಡುಗಾರಿಕೆಯಿಂದ ಕಲಾಭಿಮಾನಿಗಳನ್ನು ರಂಜಿಸುವ ಇವರು ಕಲಿಕಾಸಕ್ತರಿಗೆ ಗುರುವಾಗಿ ತರಬೇತಿಯನ್ನು ನೀಡಿದ್ದಾರೆ, ನೀಡುತ್ತಿದ್ದಾರೆ.
ಲೇಖಕರಾಗಿಯೂ ವಿದ್ವಾನ್ ಶ್ರೀ ಗಣಪತಿ ಭಟ್ಟರು ಪ್ರಸಿದ್ಧರು. ಯಕ್ಷಗಾನ ಹಿಮ್ಮೇಳದ ಬಗೆಗೆ “ಯಕ್ಷಗಾನ ಗಾನಸಂಹಿತೆ” ಎಂಬ ಗ್ರಂಥವನ್ನೂ ರಚಿಸಿರುತ್ತಾರೆ. ಇದು ಯಕ್ಷಗಾನಕ್ಕೆ, ಹಿಮ್ಮೇಳದ ಅಭ್ಯಾಸಿಗಳಿಗೆ ಅವರ ಕೊಡುಗೆ. ಖ್ಯಾತ ತಾಳಮದ್ದಳೆ ಅರ್ಥಧಾರಿ, ವಿದ್ವಾಂಸರಾದ ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ಅವರ ಅಭಿಪ್ರಾಯದಂತೆ ‘ಯಕ್ಷಗಾನ ಗಾನಸಂಹಿತೆ’ ಎಂಬ ಪುಸ್ತಕವು ‘ಯಕ್ಷಗಾನ ಗಾನಪದ್ಧತಿ ಮತ್ತು ಹಿಮ್ಮೇಳದ ಬಗ್ಗೆ ರಚಿಸಲಾದ ಲಕ್ಷಣಗ್ರಂಥ, ಆಚಾರ್ಯಕೃತಿ. ಈ ಗ್ರಂಥವು ಪರೋಕ್ಷವಾದ ಯಕ್ಷಗಾನ ಶಾಲೆ. ಇದು ಪ್ರತ್ಯಕ್ಷವಾದ ಶಾಲೆಗಿಂತ ಪ್ರಬಲ’. ವಿದ್ವಾನ್ ಉಮಾಕಾಂತ ಭಟ್ಟರ ಮಾತುಗಳಿಂದ ಈ ಗ್ರಂಥದ ಮೌಲ್ಯವನ್ನು ನಾವು ತಿಳಿಯಬಹುದು.
ಬಡಗುತಿಟ್ಟಿನ ಖ್ಯಾತ ಭಾಗವತ ಶ್ರೀ ವಿದ್ವಾನ್ ಗಣಪತಿ ಭಟ್ಟರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದ ಮೊಟ್ಟೆಗದ್ದೆ. 1961ನೇ ಇಸವಿ ಏಪ್ರಿಲ್ 20ರಂದು ಶ್ರೀ ವೆಂಕಟ್ರಮಣ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಭಟ್ ದಂಪತಿಗಳ ಪುತ್ರನಾಗಿ ಜನನ. ಇವರದ್ದು ಪೌರೋಹಿತ್ಯ ಮನೆತನ. ತಂದೆ ವೆಂಕಟ್ರಮಣ ಭಟ್ಟರು ಕೃಷಿ ಮತ್ತು ಪುರೋಹಿತ ವೃತ್ತಿಯ ಜತೆ ತಾಳಮದ್ದಳೆಯ ಹವ್ಯಾಸೀ ಅರ್ಥಧಾರಿಯೂ ಆಗಿದ್ದರು. ತಾಯಿಯ ತಂದೆ ಶ್ರೀ ರಾಮಚಂದ್ರ ಭಟ್ಟರು (ಅಜ್ಜ) ಹವ್ಯಾಸಿ ಭಾಗವತರು. ವಿದ್ವಾನ್ ಗಣಪತಿ ಭಟ್ಟರ ಹಿರಿಯ ಅಣ್ಣ ನಾರಾಯಣ ಭಟ್ ತಾಳಮದ್ದಳೆ ಹವ್ಯಾಸಿ ಅರ್ಥಧಾರಿ. ಮನೆಯ ಸದಸ್ಯರೆಲ್ಲರೂ ಯಕ್ಷಗಾನಾಸಕ್ತರು. ಇದು ಗಣಪತಿ ಭಟ್ಟರಿಗಿದ್ದ ಯಕ್ಷಗಾನ ಹಿನ್ನೆಲೆ.
ಶ್ರೀ ಗಣಪತಿ ಭಟ್ಟರು ಓದಿದ್ದು ಎಸ್ಸೆಸ್ಸೆಲ್ಸಿ ವರೆಗೆ. ಬಳಿಕ 5 ವರ್ಷ ಸಂಸ್ಕೃತ ವೇದ ಮಂತ್ರಗಳ ಅಭ್ಯಾಸ. ಬಳಿಕ ಸಂಸ್ಕೃತ ಸಾಹಿತ್ಯ ಮತ್ತು ಅಲಂಕಾರ ಶಾಸ್ತ್ರದಲ್ಲಿ ವಿದ್ವತ್ ಪದವಿ. ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೆ ಓದಿದ್ದು ಮಾಗೋಡು, ನಂದೊಳ್ಳಿ ಮತ್ತು ನಾಯ್ಕನಕೆರೆ ಶಾಲೆಗಳಲ್ಲಿ. ಎಸ್ಸೆಸ್ಸೆಲ್ಸಿ ಖಾಸಗಿಯಾಗಿ ಉತ್ತೀರ್ಣರಾಗಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ. ಮನೆಯವರ ಜತೆ ಆಟ, ತಾಳಮದ್ದಳೆಗಳಿಗೆ ಹೋಗುತ್ತಿದ್ದರು. ಹಿರಿಯ ಭಾಗವತರುಗಳ ಹಾಡುಗಾರಿಕೆಯನ್ನು ಕೇಳುತ್ತಾ ತಾನೂ ಭಾಗವತನಾಗಬೇಕೆಂಬ ಆಸೆ ಉಂಟಾಗಿತ್ತು.
ಕವ್ವಾಳೆ ರಾಮಚಂದ್ರ ಭಾಗವತ, ಕಡತೋಕಾ ಮಂಜುನಾಥ ಭಾಗವತ, ನಾರ್ಣಪ್ಪ ಉಪ್ಪೂರ, ನೆಬ್ಬೂರು ನಾರಾಯಣ ಭಾಗವತ, ಜಿ.ಆರ್ ಕಾಳಿಂಗ ನಾವಡರ ಹಾಡುಗಾರಿಕೆಗೆ ಇವರು ಆಕರ್ಷಿತರಾಗಿದ್ದರು. 7ನೇ ತರಗತಿ ವರೆಗೆ ಓದಿದ ಬಳಿಕ ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಪಾಠಶಾಲೆಯಲ್ಲಿ 5 ವರ್ಷಗಳ ಕಾಲ ಸಂಸ್ಕೃತ ಭಾಷೆ ಮತ್ತು ವೇದ ಮಂತ್ರ ಅಭ್ಯಾಸ ಮಾಡಿದ್ದರು. ಹೆಚ್ಚಿನ ವ್ಯಾಸಂಗಕ್ಕಾಗಿ 1979ರಲ್ಲಿ ಉಡುಪಿ ಸಂಸ್ಕೃತ ಕಾಲೇಜಿಗೆ. ಉಡುಪಿಗೆ ತೆರಳಿದರೆ ಯಕ್ಷಗಾನ ಭಾಗವತಿಕೆ ಕಲಿಯಬಹುದೆಂಬ ನಿರ್ಣಯವೂ ಇತ್ತು. ಉಡುಪಿ ಸಂಸ್ಕೃತ ಕಾಲೇಜಿನಲ್ಲಿ 1979ರಿಂದ 1986ರ ವರೆಗೆ ಕಲಿತು ಸಂಸ್ಕೃತ ಸಾಹಿತ್ಯ ಮತ್ತು ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿಯನ್ನು ಪಡೆದರು.
ಉಡುಪಿ ಸಂಸ್ಕೃತ ಕಾಲೇಜಿಗೆ ಸೇರಿದ ಪ್ರಥಮ ವರ್ಷ ಕಾಲೇಜು ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶನ ನಡೆಸುವ ನಿರ್ಣಯವಾಗಿತ್ತು. ಗಣಪತಿ ಭಟ್ಟರ ಹಾಡುವ ಹವ್ಯಾಸವನ್ನು ತಿಳಿದಿದ್ದ ಎಲ್ಲರೂ ತಂಡದ ಭಾಗವತನಾಗಲು ಒತ್ತಾಯಿಸಿದರು. ನಾಟ್ಯ ತರಬೇತಿಗಾಗಿ ಬಂದಿದ್ದ ಬನ್ನಂಜೆ ಶ್ರೀ ಸಂಜೀವ ಸುವರ್ಣರು ತಾಳವನ್ನು ಕಲಿಸಿ ತರಬೇತಿ ನೀಡಿದ್ದರು. ಕ್ಷಿಪ್ರ ಕಲಿಕೆಯ ಗುಣವನ್ನೂ ವಿದ್ವಾನ್ ಗಣಪತಿ ಭಟ್ಟರೊಳಗೆ ಅವ್ಯಕ್ತವಾಗಿ ನೆಲೆಸಿದ್ದ ಶ್ರೇಷ್ಠ ಭಾಗವತನನ್ನು ಶ್ರೀ ಸಂಜೀವ ಸುವರ್ಣರು ಅಂದೇ ಗುರುತಿಸಿದ್ದರು. ಪ್ರದರ್ಶನಕ್ಕೆ ‘ಗದಾಯುದ್ಧ’ ಪ್ರಸಂಗ. ಶ್ರೀ ಬನ್ನಂಜೆ ಸಂಜೀವ ಸುವರ್ಣರು ಗದಾಯುದ್ಧ ಪ್ರಸಂಗದ ಹಾಡುಗಳನ್ನು ಶ್ರೀ ಕಾಳಿಂಗ ನಾವಡರು ಹಾಡುತ್ತಿದ್ದ ರೀತಿಯನ್ನೂ ಆಡಿಯೋ ಕ್ಯಾಸೆಟ್ ಮೂಲಕ ಗಣಪತಿ ಭಟ್ಟರಿಗೆ ಕೇಳುವ ವ್ಯವಸ್ಥೆ ಮಾಡಿದ್ದರು. ಜತೆಗೆ ಅವರಿಂದ ತರಬೇತಿಯೂ ಸಿಕ್ಕಿತ್ತು.
ಪ್ರದರ್ಶನದಲ್ಲಿ ಭಾಗವತನಾಗಿ ರಂಗವೇರಿದ ಗಣಪತಿ ಭಟ್ಟರು ಯಶಸ್ವಿಯಾಗಿದ್ದರು. ಹಾಗಾಗಿ ಬನ್ನಂಜೆ ಶ್ರೀ ಸಂಜೀವ ಸುವರ್ಣರೇ ನನ್ನ ಮೊದಲ ಗುರುಗಳು ಎಂದು ಗಣಪತಿ ಭಟ್ಟರು ಕೃತಜ್ಞತೆಯಿಂದ ಹೇಳುತ್ತಾರೆ. ಶ್ರೀ ಸಂಜೀವ ಸುವರ್ಣರು ಶಾಸ್ತ್ರೀಯವಾಗಿ ಭಾಗವತಿಕೆ ಕಲಿಯಲು ಸಲಹೆ ನೀಡಿದ್ದರು. ಗಣಪತಿ ಭಟ್ಟರ ಕಲಿಯುವ ಆಸೆಗೆ ಇದು ಪೂರಕವಾಗಿತ್ತು. ಶ್ರೀ ಬನ್ನಂಜೆ ಸಂಜೀವ ಸುವರ್ಣರೇ ಗಣಪತಿ ಭಟ್ಟರನ್ನು ಉಡುಪಿ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು.
ನೀಲಾವರ ಶ್ರೀ ರಾಮಕೃಷ್ಣಯ್ಯ ಅವರಿಂದ ಭಾಗವತಿಕೆಯ ಪರಿಪೂರ್ಣ ಪಾಠ. ಆಗ ಶ್ರೀ ಮಹಾಬಲ ಕಾರಂತ ಅವರು ಮೃದಂಗ ಗುರುಗಳಾಗಿದ್ದರು. ಹಗಲು ಸಂಸ್ಕೃತ ಕಾಲೇಜು, ರಾತ್ರಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆ ಅಭ್ಯಾಸ. ಸಭಾಲಕ್ಷಣದ ಪಾಠವು ಮನದಲ್ಲಿ ಗಟ್ಟಿಯಾಗಿತ್ತು. ಈ ಸಂದರ್ಭದಲ್ಲಿ ಗುರುಗಳಾದ ಶ್ರೀ ನೀಲಾವರ ರಾಮಕೃಷ್ಣಯ್ಯನವರ ಅಪ್ಪಣೆಯಂತೆ ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲಿ ಭಾಗವತರಾಗಿ ಪ್ರಸಂಗಗಳನ್ನು ಮುನ್ನಡೆಸಲು ಅವಕಾಶಗಳು ಸಿಕ್ಕಿತ್ತು. ಮೃದಂಗ ಗುರುಗಳಾದ ಶ್ರೀ ಮಹಾಬಲ ಕಾರಂತರೂ ಅವಕಾಶ ನೀಡಿ ಪ್ರೋತ್ಸಾಹಿಸಿದ್ದರು.
ಕೋಟ ಶ್ರೀ ಶಿವರಾಮ ಕಾರಂತರ ‘ಯಕ್ಷರಂಗ’ ಎಂಬ ತಂಡದ ಪ್ರದರ್ಶನಗಳಲ್ಲಿ ಆಗ ಭಾಗವತರಾಗಿ ನೀಲಾವರ ಶ್ರೀ ರಾಮಕೃಷ್ಣಯ್ಯ ಮತ್ತು ಮೃದಂಗವಾದಕರಾಗಿ ಶ್ರೀ ಮಹಾಬಲ ಕಾರಂತರು ಸಕ್ರಿಯರಾಗಿದ್ದರು. (ಬ್ಯಾಲೆ ಪ್ರದರ್ಶನ) ನೀಲಾವರ ಶ್ರೀ ರಾಮಕೃಷ್ಣಯ್ಯನವರ ಸೂಚನೆಯಂತೆ ಶಿವರಾಮ ಕಾರಂತರು ತಮ್ಮ ತಂಡಕ್ಕೆ ಭಾಗವತರಾಗಿ ಶ್ರೀ ಗಣಪತಿ ಭಟ್ಟರನ್ನು ಆಯ್ಕೆ ಮಾಡಿದ್ದರು. ಈ ತಂಡದ ಪ್ರದರ್ಶನಗಳಲ್ಲಿ ಹಾಡಬೇಕಾದರೆ ವಿಶೇಷ ತರಬೇತಿಯನ್ನು ಹೊಂದುವ ಅನಿವಾರ್ಯತೆಯಿದ್ದು ಶಿವರಾಮ ಕಾರಂತರೇ ಗಣಪತಿ ಭಟ್ಟರಿಗೆ ತರಬೇತಿ ನೀಡಿದ್ದರು. (20 ದಿನಗಳ ತರಬೇತಿ) ‘ಯಕ್ಷರಂಗ’ ತಂಡದ ಸುಮಾರು ಇನ್ನೂರಕ್ಕೂ ಮಿಕ್ಕಿದ ಪ್ರದರ್ಶನಗಳಲ್ಲಿ ವಿದ್ವಾನ್ ಗಣಪತಿ ಭಟ್ಟರು ಭಾಗವಹಿಸಿದರು. ಶ್ರೀ ನೀಲಾವರ ರಾಮಕೃಷ್ಣಯ್ಯ ಮತ್ತು ಶ್ರೀ ಮಹಾಬಲ ಕಾರಂತರ ಸೂಚನೆಯಂತೆ ಉಡುಪಿ ಯಕ್ಷಗಾನ ಕೇಂದ್ರದ ಗುರುವಾಗಿ 2 ವರ್ಷಗಳ ಕಾಲ ಕಲಿಕಾಸಕ್ತರಿಗೆ ತರಬೇತಿ ನೀಡುವ ಅವಕಾಶವೂ ಸಿಕ್ಕಿತ್ತು.
ವಿದ್ವಾನ್ ಶ್ರೀ ಗಣಪತಿ ಭಟ್ಟರು ಮೇಳದ ತಿರುಗಾಟ ಆರಂಭಿಸಿದ್ದು 1989-90ರಲ್ಲಿ. ಶಿರಸಿ ಶ್ರೀ ಪಂಚಲಿಂಗೇಶ್ವರ ಮೇಳದಲ್ಲಿ ಒಂದು ವರ್ಷ. ನೆಬ್ಬೂರು ಶ್ರೀ ನಾರಾಯಣ ಭಾಗವತ ಮತ್ತು ಶ್ರೀ ಕೆ.ಪಿ. ಹೆಗಡೆ ಅವರೊಂದಿಗೆ ವ್ಯವಸಾಯ. ಈ ಸಂದರ್ಭದಲ್ಲಿ ಕೆರೆಮನೆ ಶಂಭು ಹೆಗಡೆ, ಗೋಡೆ ನಾರಾಯಣ ಹೆಗಡೆ, ಕುಂಜಾಲು ರಾಮಕೃಷ್ಣ, ಎಂ.ಎ ನಾಯ್ಕ, ಕೊಂಡದಕುಳಿ ರಾಮಚಂದ್ರ ಹೆಗಡೆ ಮೊದಲಾದವರ ಒಡನಾಟವು ದೊರೆತಿತ್ತು. ಬಳಿಕ 5 ವರ್ಷ ಶ್ರೀ ಕಿಶನ್ ಕುಮಾರ್ ಹೆಗ್ಡೆಯವರ ಸಾಲಿಗ್ರಾಮ ಮೇಳದಲ್ಲಿ. ಶ್ರೀ ನಾರಾಯಣ ಶಬರಾಯರ ಜೊತೆ ವ್ಯವಸಾಯ. ಬಳ್ಕೂರು ಕೃಷ್ಣಯಾಜಿ, ಅರಾಟೆ ಮಂಜುನಾಥ, ಕೊಂಡದಕುಳಿ ರಾಮಚಂದ್ರ ಹೆಗಡೆ, ಬಿಳಿಯೂರು ಕೃಷ್ಣಮೂರ್ತಿ, ಹಳ್ಳಾಡಿ ಜಯರಾಮ ಶೆಟ್ಟಿ, ದಯಾನಂದ ನಾಗೂರು ಮೊದಲಾದವರ ಒಡನಾಟವು ದೊರೆತಿತ್ತು.
ಸಾಲಿಗ್ರಾಮ ಮೇಳದಲ್ಲಿ 5 ವರ್ಷಗಳ ವ್ಯವಸಾಯದ ಬಳಿಕ ತಿರುಗಾಟ ನಿಲ್ಲಿಸಿ ಮನೆಯಲ್ಲಿದ್ದರೂ ಅತಿಥಿ ಕಲಾವಿದರಾಗಿ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಶ್ರೀ ಶಂಭು ಹೆಗಡೆ ಅವರ ನೇತೃತ್ವದ ಇಡಗುಂಜಿ ಶ್ರೀಮಯ ಕಲಾಕೇಂದ್ರದ ಗುರುವಾಗಿ 6 ವರ್ಷ ಭಾಗವತಿಕೆ ಕಲಿಕಾಸಕ್ತರಿಗೆ ತರಬೇತಿ ನೀಡಿದ್ದರು. ಮಳೆಗಾಲದ ಪ್ರದರ್ಶನಗಳಲ್ಲೂ ವಿದ್ವಾನ್ ಶ್ರೀ ಗಣಪತಿ ಭಟ್ಟರು ಭಾಗವತರಾಗಿ ಪ್ರೇಕ್ಷಕರನ್ನು ತಮ್ಮ ಗಾನಸುಧೆಯಿಂದ ಸಂತೋಷಪಡಿಸಿದ್ದಾರೆ. ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಅವರ ಶ್ರೀ ವೀರಾಂಜನೇಯ ಯಕ್ಷಗಾನ ಮಂಡಳಿ ಬಂಗಾರಮಕ್ಕಿ ಮತ್ತು ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಅವರ ಪೂರ್ಣಚಂದ್ರ ಯಕ್ಷ ಕಲಾ ಪ್ರತಿಷ್ಠಾನ (ರಿ) ಕುಂಭಾಶಿ ತಂಡಗಳ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
ಶತಾವಧಾನಿ ಡಾ. ಆರ್. ಗಣೇಶ್ ಅವರ ಪರಿಕಲ್ಪನೆಯ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಮಂಟಪ ಶ್ರೀ ಪ್ರಭಾಕರ ಉಪಾಧ್ಯರ ಯುಗಳ ಯಕ್ಷಗಾನ ‘ವಿಜಯ ವಿಲಾಸ’ದಲ್ಲಿ ಭಾಗವಹಿಸಿರುತ್ತಾರೆ. (45 ಪ್ರದರ್ಶನ) ಮಂಟಪ ಶ್ರೀ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನಗಳಲ್ಲಿ ಹತ್ತು ವರ್ಷಗಳ ಕಾಲ ಭಾಗವಹಿಸಿದವರು ವಿದ್ವಾನ್ ಶ್ರೀ ಗಣಪತಿ ಭಟ್ಟರು. ವಿದೇಶಗಳ ಅನೇಕ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ಹಾಡುವ ಅವಕಾಶವು ಇವರಿಗೆ ಸಿಕ್ಕಿದೆ. ಕೋಟ ಶಿವರಾಮ ಕಾರಂತರ ಯಕ್ಷ ತಂಡದ (ಬ್ಯಾಲೆ ಪ್ರದರ್ಶನ) ಭಾಗವತನಾಗಿ ರಷ್ಯಾ, ದುಬೈ, ಅಬುದಾಭಿಗಳಲ್ಲಿ ಭಾಗವಹಿಸಿರುತ್ತಾರೆ.
ಉಪ್ಪಿನಕುದ್ರು ಶ್ರೀ ಕೊಗ್ಗ ಕಾಮತ್ ಅವರ ಬೊಂಬೆಯಾಟದ ತಂಡವು ರಷ್ಯಾ, ಬೆಲ್ಜಿಯಂ, ಪ್ಯಾರಿಸ್ ನಗರಗಳಲ್ಲಿ ನಡೆಸಿದ ಪ್ರದರ್ಶನಗಳಲ್ಲಿ ಹಾಡುವ ಅವಕಾಶವೂ ಸಿಕ್ಕಿತ್ತು. ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಕಾರ್ಯಕ್ರಮ ಅಮೆರಿಕಾದಲ್ಲಿ ನಡೆದಾಗ ಶ್ರೀ ಎ.ಪಿ. ಪಾಠಕರ ಜತೆ ಅಲ್ಲೂ ಭಾಗವಹಿಸಿದ್ದರು. ಪ್ರಸ್ತುತ ಅತಿಥಿ ಕಲಾವಿದರಾಗಿ ಪ್ರದರ್ಶನಗಳಲ್ಲಿ ಭಾಗವಹಿಸುವ ವಿದ್ವಾನ್ ಶ್ರೀ ಗಣಪತಿ ಭಟ್ಟರು ಕಲಿಕಾಸಕ್ತರಿಗೆ ತಮ್ಮ ಮನೆಯಲ್ಲಿ ತರಬೇತಿಯನ್ನು ನೀಡುತ್ತಾರೆ( ಪ್ರತಿಫಲಾಪೇಕ್ಷೆ ಇಲ್ಲದೆ ತರಬೇತಿ).
ವಿದ್ವಾನ್ ಶ್ರೀ ಗಣಪತಿ ಭಟ್ಟ ಯಲ್ಲಾಪುರ ಇವರ ಯಕ್ಷಗಾನದ ಹಾಡುಗಾರಿಕೆಯನ್ನು ವರ್ಣಿಸಲು ನನ್ನ ಈ ಪುಟ್ಟ ಬರಹದಲ್ಲಿ ಖಂಡಿತಾ ಸಾಧ್ಯವಿಲ್ಲ. ಅವರ ಹಾಡುಗಾರಿಕೆಯ ಸೊಬಗನ್ನು ಅಕ್ಷರಗಳಿಂದ ವರ್ಣಿಸಲು ಅಸಾಧ್ಯ. ನೋಡಿ,ಕೇಳಿ, ಅನುಭವಿಸಿ ಸಂತೋಷಪಡುವುದಕ್ಕೆ ಇರುವ ವಿಚಾರವದು. 2003 ರಿಂದ ತೊಡಗಿ ಸಾಲಿಗ್ರಾಮದ ಸಮೀಪ ಪಾರಂಪಳ್ಳಿ ಎಂಬಲ್ಲಿ ವಾಸಿಸುತ್ತಿದ್ದಾರೆ. (ಸ್ವಂತ ಜಾಗ)
ವೃತ್ತಿ ಕಲಾವಿದನಾಗಿಯೂ ಸಂಸಾರಿಕವಾಗಿಯೂ ಇವರು ತೃಪ್ತರು. ಇವರ ಪತ್ನಿ ಶ್ರೀಮತಿ ಇಂದಿರಾ ಭಟ್ (1990ರಲ್ಲಿ ವಿವಾಹ) ವಿದ್ವಾನ್ ಶ್ರೀ ಗಣಪತಿ ಭಟ್ಟ ಯಲ್ಲಾಪುರ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ರಾಘವೇಂದ್ರ ಸಂಸ್ಕೃತ ಭಾಷೆ ಮತ್ತು ವೇದ ಅಭ್ಯಸಿಸಿದ್ದಾರೆ. ಪುರೋಹಿತರಾಗಿ ಎಲ್ಲರಿಗೂ ಪರಿಚಿತರು. ಕಿರಿಯ ಪುತ್ರ ಶ್ರೀಪ್ರದ ಪ್ರಥಮ ವರ್ಷ ಬಿ.ಕಾಮ್ ವಿದ್ಯಾರ್ಥಿ. ವಿದ್ವಾನ್ ಶ್ರೀ ಗಣಪತಿ ಭಟ್ಟ ಯಲ್ಲಾಪುರ ಅವರಿಗೆ ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ. ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ ಎಂಬ ಹಾರೈಕೆಗಳು.
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ