Sunday, November 24, 2024
Homeಯಕ್ಷಗಾನಪುಂಡುವೇಷಧಾರಿಯು ಹಾಸ್ಯಗಾರನಾದ ಅಚ್ಚರಿಯ ಬಗೆ : ಶ್ರೀ ಮಹೇಶ ಮಣಿಯಾಣಿ ದೊಡ್ಡತೋಟ 

ಪುಂಡುವೇಷಧಾರಿಯು ಹಾಸ್ಯಗಾರನಾದ ಅಚ್ಚರಿಯ ಬಗೆ : ಶ್ರೀ ಮಹೇಶ ಮಣಿಯಾಣಿ ದೊಡ್ಡತೋಟ 

ಶ್ರೀ ಮಹೇಶ ಮಣಿಯಾಣಿ ದೊಡ್ಡತೋಟ ಅವರು ಹಿರಿಯ, ಅನುಭವೀ ಹಾಸ್ಯಗಾರರು. ಇವರು ಶ್ರೀ ಧರ್ಮಸ್ಥಳ ಮೇಳದ ಕಲಾವಿದರು. ಇವರು ತಮ್ಮ ವೃತ್ತಿಯನ್ನು ಪುಂಡುವೇಷಧಾರಿಯಾಗಿ ಆರಂಭಿಸಿದ್ದರು. ಪರಿವರ್ತನಾಶೀಲವಾದ ಈ ಪ್ರಪಂಚದಲ್ಲಿ ಅಚ್ಚರಿಯ ಬೆಳವಣಿಗೆಗಳಾಗುವುದು ಒಂದು ಸಹಜ ಕ್ರಿಯೆ.

ಅಚ್ಚರಿಯ ಬೆಳವಣಿಗೆಯೊಂದರಲ್ಲೇ ಪುಂಡುವೇಷಧಾರಿಯಾಗಿದ್ದ ಇವರು ಹಾಸ್ಯಗಾರರಾಗಿ ಕಲಾಸೇವೆಯನ್ನು ಮಾಡುವಂತಾಗಿತ್ತು. ಇಂತಹಾ ಬೆಳವಣಿಗೆಗಳು ಇದೇ ಮೊದಲಲ್ಲ. ಅನೇಕ ಬಾರಿ ನಡೆದಿದೆ. ರವಿಚಂದ್ರ ಕನ್ನಡಿಕಟ್ಟೆ ಅವರು ವೇಷಧಾರಿಯಾಗಿ ಯಕ್ಷಗಾನವನ್ನು ಪ್ರವೇಶಿಸಿದವರು. ಅವರೀಗ ಯುವ ಭಾಗವತರಾಗಿ ಖ್ಯಾತರಾಗಿದ್ದಾರೆ. ವೇಷಧಾರಿಯಾಗಿ ರಂಗಪ್ರವೇಶ ಮಾಡಿದ ಕೊಂಕಣಾಜೆ ಚಂದ್ರಶೇಖರ ಭಟ್ ಅವರು ಈಗ ಯುವ ಮದ್ದಳೆಗಾರರಾಗಿ ಪ್ರಸಿದ್ಧರಾಗಿದ್ದಾರೆ. 

ಶ್ರೀ ಮಹೇಶ ಮಣಿಯಾಣಿ ಅವರ ಹುಟ್ಟೂರು ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ದೊಡ್ಡತೋಟ ಸಮೀಪದ ಕುದ್ಪಾಜೆ. 1974ನೇ ಇಸವಿ ಜೂನ್ 1ರಂದು ಶ್ರೀ ಅಪ್ಪಯ್ಯ ಮಣಿಯಾಣಿ ಮತ್ತು ಶ್ರೀಮತಿ ಲೀಲಾವತಿ ದಂಪತಿಗಳ ಪುತ್ರನಾಗಿ ಜನನ. ಮಹೇಶ ಅವರ ತಮ್ಮ ಶ್ರೀ ಉಮೇಶ್ ಅವರು ಭಾರತೀಯ ಭೂಸೇನೆಯಲ್ಲಿ ಉದ್ಯೋಗಿಯಾಗಿ ಈಗ ಸ್ವಯಂ ನಿವೃತ್ತಿಯನ್ನು ಹೊಂದಿ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಶಾಲಾ ವಿದ್ಯಾರ್ಥಿಯಾಗಿದ್ದಾಗ ಕೋಡ್ಲ ಗಣಪತಿ ಭಟ್ ಅವರಿಂದ ನಾಟ್ಯ ಕಲಿತು ವೇಷ ಮಾಡುತ್ತಿದ್ದರು.

ಶ್ರೀ ಮಹೇಶ್ ಮಣಿಯಾಣಿ ಅವರು ಓದಿದ್ದು ಬೊಳ್ಳಾಜೆ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 7ನೇ ತರಗತಿ ವರೆಗೆ. 5ನೇ ತರಗತಿಯಲ್ಲಿರುವಾಗಲೇ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ ಹುಟ್ಟಿಕೊಂಡಿತ್ತು. ಇದಕ್ಕೆ ಮನೆಯ ಹಿರಿಯರೇ ಕಾರಣರು. ಆಟ ನೋಡಲು ತೆರಳಿದಾಗ ಇವರನ್ನೂ ಕರೆದೊಯ್ಯುತ್ತಿದ್ದರು. ಬಾಲಗೋಪಾಲರು ಅಂದವಾಗಿ ಕುಣಿಯುವಾಗ ನೋಡು ಅವರೆಷ್ಟು ಅಂದವಾಗಿ ಕುಣಿಯುತ್ತಾರೆ! ನೀನು ಮಣ್ಣಿನಲ್ಲಿ ಆಡುವುದಕ್ಕಾಯಿತು ಎಂದು ಇವರ ಚಿಕ್ಕಮ್ಮ ಹಂಗಿಸುತ್ತಿದ್ದರಂತೆ. ಚಿಕ್ಕಮ್ಮನ ಈ ಮಾತಿನ ತಿವಿತವು ಮಹೇಶ್ ಅವರಿಗೆ ಕಲಾವಿದನಾಗಬೇಕೆಂಬ ಆಸೆ ಹುಟ್ಟಿಕೊಳ್ಳಲು ಕಾರಣ.

ಸುಳ್ಯದ ಜಾತ್ರಾ ಸಂದರ್ಭ, ಧರ್ಮಸ್ಥಳ ಮೇಳದ ಆಟಕ್ಕೆ ಹೋಗಿ ಹಿರಿಯ ಕಲಾವಿದ ಶ್ರೀ ಉಬರಡ್ಕ ಉಮೇಶ ಶೆಟ್ರಲ್ಲಿ ಮೇಳಕ್ಕೆ ಬರುತ್ತೇನೆಂದು ಕೇಳಿಕೊಂಡಿದ್ದರು. 7ನೇ ಕ್ಲಾಸ್ ವರೆಗೆ ಓದು ಮುಗಿದ ಮೇಲೆ ಮೇಳಕ್ಕೆ ಬರಬಹುದು ಎಂದು ಹೇಳಿ ಉಮೇಶ ಶೆಟ್ರು ಇವರನ್ನು ಮನೆಗೆ ಕಳುಹಿದ್ದರು. 6ನೇ ತರಗತಿಯಲ್ಲಿ ಓದುತ್ತಿರುವಾಗ ಮರ್ಕಂಜ ಐತಪ್ಪ ಗೌಡರಿಂದ ಹೆಜ್ಜೆಗಾರಿಕೆಯನ್ನು ಕಲಿತರು. ಐತಪ್ಪ ಗೌಡರು ಕಟೀಲು ಮೇಳದ ಕಲಾವಿದರಾಗಿದ್ದರು. 7ನೇ ಕ್ಲಾಸಿನ ಓದು ಮುಗಿದ ಕೂಡಲೇ ಮಹೇಶ್ ಅವರು ಧರ್ಮಸ್ಥಳದ ಸೇವೆಯಾಟಕ್ಕೆ ತೆರಳಿ ಉಮೇಶ ಶೆಟ್ಟರಲ್ಲಿ ಮೇಳಕ್ಕೆ ಬರುತ್ತೇನೆಂದು ಕೇಳಿಕೊಂಡರು. ಉಬರಡ್ಕ ಉಮೇಶ ಶೆಟ್ಟರ ಸೂಚನೆಯಂತೆ ನಾಟ್ಯ ಕಲಿಯಲು ನಿರ್ಧಾರ. 

1989ನೇ ಇಸವಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ನಾಟ್ಯ ಕಲಿಕೆ. ಆಗ ಗೋಪಾಲಕೃಷ್ಣ ಕುರುಪ್ ಅವರು ಕೇಂದ್ರದಲ್ಲಿ ಹಿಮ್ಮೇಳ ಗುರುಗಳಾಗಿದ್ದರು. ತರಬೇತಿ ಕೇಂದ್ರದಲ್ಲಿ ಶಂಭಯ್ಯ ಭಟ್, ವಾಮನ ಕುಮಾರ್, ಕಿರಣ್ ಕುಮಾರ್ ಪಂಜ, ಲಕ್ಷ್ಮೀನಾರಾಯಣ ನೆಲ್ಯಾಡಿ, ಸೀತಾರಾಮ ಭಟ್, ಬೇಗಾರು ಗೋಪಾಲ ಅವರು ಮಹೇಶ್ ಅವರ ಸಪಾಠಿಗಳಾಗಿದ್ದರು. ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಮೊದಲ ಪ್ರದರ್ಶನ, ಬಬ್ರುವಾಹನ ಕಾಳಗ ಪ್ರಸಂಗದಲ್ಲಿ ಪ್ರದ್ಯುಮ್ನನಾಗಿ ಮಹೇಶ್ ಅವರು ರಂಗಪ್ರವೇಶ ಮಾಡಿದ್ದರು.

ಇವರ ಮೊದಲ ತಿರುಗಾಟ 1989-90ರಲ್ಲಿ. ಕರ್ಗಲ್ಲು ವಿಶ್ವೇಶ್ವರ ಭಟ್ಟರ ಸೂಚನೆಯಂತೆ ಬಪ್ಪನಾಡು ಮೇಳದಲ್ಲಿ. ಮುಂದಿನ ವರ್ಷ ರೆಂಜಾಳ ರಾಮಕೃಷ್ಣ ರಾವ್ ಅವರ ಸೂಚನೆಯಂತೆ ಕಟೀಲು ಮೇಳಕ್ಕೆ. ಕಟೀಲು 2ನೇ ಮೇಳದಲ್ಲಿ. ಒಟ್ಟು 12 ವರ್ಷಗಳು ಕಟೀಲು ಮೇಳದಲ್ಲಿ ವ್ಯವಸಾಯ. ಪ್ರಥಮ ವರ್ಷ ಬಾಲಗೋಪಾಲರಾಗಿ, ಎರಡನೇ ವರ್ಷದಲ್ಲಿ ಮುಖ್ಯ ಸ್ತ್ರೀವೇಷ ಮತ್ತು ಪೀಠಿಕಾ ಸ್ತ್ರೀ ವರ್ಷಗಳ ನಿರ್ವಹಣೆ. ಮೂರನೇ ವೇಷಕ್ಕೆ ಪುಂಡುವೇಷಗಳನ್ನು ಮಾಡಲು ಆರಂಭಿಸಿದ್ದರು. ಕಲಾ ಕ್ಷೇತ್ರದಲ್ಲಿ ಇವರದ್ದು ಕ್ಷಿಪ್ರ ಬೆಳವಣಿಗೆ.

ಬಲಿಪರ ಭಾಗವತಿಕೆ, ಪೆರುವಾಯಿ ನಾರಾಯಣ ಭಟ್  ಮದ್ದಳೆಗಾರರು. ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕೊಳ್ಯೂರು ನಾರಾಯಣ ಭಟ್, ಗುರಿಕ್ಕಾರ ನಾರಾಯಣ ಭಟ್, ರೆಂಜಾಳ ರಾಮಕೃಷ್ಣ ರಾವ್, ಪುಂಡರೀಕಾಕ್ಷ ಉಪಾಧ್ಯಾಯ, ಬೆಳ್ಳಾರೆ ಸುಬ್ಬಯ್ಯ ಶೆಟ್ಟಿ, ಅಜೆಕಾರು ರಾಜೀವ ಶೆಟ್ಟಿ, ಗುಂಡಿಮಜಲು ಗೋಪಾಲ ಭಟ್, ಬಣ್ಣದ ಸುಬ್ರಾಯ, ಬಾಯಾರು ರಮೇಶ್ ಭಟ್, ಮೊದಲಾದವರ ಒಡನಾಟವು ದೊರೆತಿತ್ತು. ಮಹೇಶ್ ಅವರು ಅಜೆಕಾರು ರಾಜೀವ ಶೆಟ್ಟರ ಮಾರ್ಗದರ್ಶನದಲ್ಲಿ ಬೆಳೆದವರು. ಚೆನ್ನಾಗಿ ಹೇಳಿಕೊಡುತ್ತಿದ್ದರಂತೆ. ಎಲ್ಲಾ ಹಿರಿಯ ಕಲಾವಿದರಿಂದ ಮಾರ್ಗದರ್ಶನವೂ ದೊರೆತಿತ್ತು. ಇದು ಕಲಿಕೆಗೆ ಅವಕಾಶವಾಗಿತ್ತು.

ಮುಂದಿನ ವರ್ಷಗಳಲ್ಲಿ ಪೆರುವಾಯಿ ನಾರಾಯಣ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಬಾಬು ಕುಲಾಲ್, ಶ್ರೀಧರ ಪಂಜಾಜೆ, ಗಣೇಶ್ ಶೆಟ್ಟಿ ಮೂಡುಶೆಡ್ಯೆ ಮೊದಲಾದವರ ಒಡನಾಟವೂ ಸಿಕ್ಕಿತ್ತು. 5ನೇ ತಿರುಗಾಟದಲ್ಲಿ ಮಹೇಶ್ ಮಣಿಯಾಣಿ ಚಂಡಮುಂಡರಾಗಿ ಅಭಿನಯಿಸಿ ಯಶಸ್ವಿಯಾಗಿದ್ದರು. ಅಜೆಕಾರು ರಾಜೀವ ಶೆಟ್ಟಿ ಮತ್ತು ಶ್ರೀಧರ ಪಂಜಾಜೆ ಅವರೊಂದಿಗೆ ಜತೆವೇಷಗಳನ್ನು ಮಾಡಿದ್ದರು. ಭಾರ್ಗವ. ಲಕ್ಷ್ಮಣ, ಷಣ್ಮುಖ, ಮನ್ಮಥ, ಶ್ರೀಕೃಷ್ಣ, ವಿಷ್ಣು ಅಲ್ಲದೆ ಕಸೆ ಸ್ತ್ರೀವೇಷಗಳನ್ನೂ ಮಾಡಿ ಅನುಭವವನ್ನು ಗಳಿಸಿಕೊಂಡಿದ್ದರು. ಆರು ವರ್ಷಗಳ ಬಳಿಕ ಪುಂಡುವೇಷಧಾರಿಯಾಗಿದ್ದ ಇವರು ಹಾಸ್ಯಗಾರನಾದುದು. 

ಅನಿರೀಕ್ಷಿತ ಅಚ್ಚರಿಯ ಬೆಳವಣಿಗೆಯೊಂದು ಪುಂಡುವೇಷಧಾರಿ ಮಹೇಶ್ ಮಣಿಯಾಣಿ ಅವರು ಹಾಸ್ಯಗಾರರಾಗಿ ಕಾಣಿಸಿಕೊಳ್ಳಲು ಕಾರಣವಾಯಿತು. ಕಟೀಲು ಮೇಳ ತಿರುಗಾಟ, ಪಂಜ ಸಮೀಪದ ಕೇನ್ಯ ವಿಷ್ಣುನಗರದಲ್ಲಿ ವರ್ಷಾಂಪ್ರತಿ ನಡೆಯುವ ಆಟ. ಮೇಳದ ಹಾಸ್ಯಗಾರರು ಅಸೌಖ್ಯದ ಕಾರಣ ಬಂದಿರಲಿಲ್ಲ. ತ್ರಿಜನ್ಮ ಮೋಕ್ಷ ಪ್ರಸಂಗ. ಬಲಿಪ ಶ್ರೀ ನಾರಾಯಣ ಭಾಗವತರು ಹಾಸ್ಯಗಾರನು ಆ ಪ್ರಸಂಗದಲ್ಲಿ ಮಾಡಬೇಕಾದ ಪಾತ್ರಗಳನ್ನು ಮಹೇಶ್ ಅವರಿಗೆ ನೀಡಿದ್ದರು. ಎಲ್ಲಾ ಹಿರಿಯ ಕಲಾವಿದರ ಸಹಕಾರ ನಿರ್ದೇಶನವೂ ದೊರೆತಿತ್ತು.

ಎರಡು ದಿನ ಬಳಿಕ ಕಟೀಲಿನಲ್ಲಿ ಶ್ರೀಕೃಷ್ಣ ಲೀಲೆ ಪ್ರಸಂಗ. ಮಹೇಶ ಅವರ ವಿಜಯನ ಪಾತ್ರವನ್ನು ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರು ನೋಡಿ ಇವರಿಗೆ ಹಾಸ್ಯಗಾರನ ಸ್ಥಾನವನ್ನು ಖಾಯಂಗೊಳಿಸಿದ್ದರು. ಕಟೀಲು ಮೇಳದಲ್ಲಿ ಆರು ವರ್ಷಗಳ ಕಾಲ ಮುಖ್ಯ ಹಾಸ್ಯಗಾರನಾಗಿ ವ್ಯವಸಾಯ. ಬಳಿಕ ಶ್ರೀ ಧರ್ಮಸ್ಥಳ ಮೇಳಕ್ಕೆ  ಸೇರ್ಪಡೆ. ಅಲ್ಲಿ ಹಾಸ್ಯ ಪಾತ್ರಗಳನ್ನು ಮಾಡುವ ಕಲಾವಿದನ ಅವಶ್ಯಕತೆಯಿತ್ತು. ಮುಖ್ಯ ಹಾಸ್ಯಗಾರರಾಗಿದ್ದ ಶ್ರೀ ರಸಿಕರತ್ನ ನಯನಕುಮಾರರ ಅಸ್ವಸ್ಥತೆಯ ಕಾರಣದಿಂದ. ನಯನಕುಮಾರರ ಜತೆಯಲ್ಲಿ ಹಾಸ್ಯಪಾತ್ರಗಳನ್ನು ಮಾಡುತ್ತಾ, ಅವರಿಂದ ಕಲಿಯುತ್ತಾ ಮಹೇಶ್ ಅವರು ಬೆಳೆದವರು.

ಪುತ್ತಿಗೆ ರಘುರಾಮ ಹೊಳ್ಳ, ಕೆ. ಗೋವಿಂದ ಭಟ್, ವಸಂತ ಗೌಡ, ಕುಂಬಳೆ ಶ್ರೀಧರ ರಾವ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಅಡೂರು ಗಣೇಶ ರಾವ್, ಮೊದಲಾದವರ ನಿರ್ದೇಶನವೂ ಸಿಕ್ಕಿತ್ತು. ಉಬರಡ್ಕ ಉಮೇಶ್ ಶೆಟ್ಟಿ ಅವರ ನಿರ್ದೇಶನ ಸಹಕಾರವೂ ಇತ್ತು. ಶ್ರೀ ರಾಮಕೃಷ್ಣ ಮಯ್ಯ, ಸದಾಶಿವ ಶೆಟ್ಟಿಗಾರ್, ಬೇಗಾರು ಶಿವಕುಮಾರ್, ನಿಡ್ಲೆ ಗೋವಿಂದ ಭಟ್, ತಾರಾನಾಥ ವರ್ಕಾಡಿ, ಉದ್ಯಾವರ ಜಯಕುಮಾರ್, ಕೆದಿಲ ಜಯರಾಮ ಭಟ್, ಗಂಗಾಧರ ಪುತ್ತೂರು, ಈಶ್ವರ ಪ್ರಸಾದ್, ಚಂದ್ರಶೇಖರ ಧರ್ಮಸ್ಥಳ, ಪದ್ಮನಾಭ ಉಪಾಧ್ಯಾಯ, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಮುರಾರಿ ಕಡಂಬಳಿತ್ತಾಯ, ಅಡೂರು ಲಕ್ಷ್ಮೀನಾರಾಯಣ ರಾವ್, ಶಶಿಧರ ಕುಲಾಲ್, ಸುಬ್ರಾಯ ಹೊಳ್ಳ, ಶಂಭಯ್ಯ ಕಂಜರ್ಪಣೆ, ಹರೀಶ್ ಮಣ್ಣಾಪು, ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ, ಮೊದಲಾದವರ ಒಡನಾಟವೂ ಸಹಕಾರವೂ ತಿರುಗಾಟದುದ್ದಕ್ಕೂ ದೊರಕಿತ್ತು. 

ಶ್ರೀ ಮಹೇಶ್ ಮಣಿಯಾಣಿ ಅವರು ಮಳೆಗಾಲದಲ್ಲಿ 9 ವರ್ಷ ನಿಡ್ಲೆ ಗೋವಿಂದ ಭಟ್ ಸಾರಥ್ಯದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇದರ ಸದಸ್ಯನಾಗಿ  ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ರಾಜ್ಯಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು. ಶ್ರೀಮತಿ ವಿದ್ಯಾ ಕೊಳ್ಯೂರು ನೇತೃತ್ವದ ‘ಯಕ್ಷಮಂಜೂಷ’ ತಂಡದ ಸದಸ್ಯನಾಗಿ 1 ವರ್ಷ ಉತ್ತರ ಭಾರತ ಮತ್ತು 2 ವರ್ಷ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಶ್ರೀ ದೇವಾನಂದ ಭಟ್ ಬೆಳುವಾಯಿ ನೇತೃತ್ವದ ತಂಡದಲ್ಲಿ 1 ವರ್ಷ ಅಮೆರಿಕಾ ಪ್ರವಾಸ ಮತ್ತು ಯಕ್ಷಧ್ರುವ ಪಟ್ಲ ಸತೀಶ ಶೆಟ್ರ ತಂಡದ ಸದಸ್ಯನಾಗಿಯೂ ಅಮೇರಿಕಾದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಕಳೆದ ಮೂವತ್ತೆರಡು ವರ್ಷಗಳಿಂದ ಮಹೇಶ್ ಮಣಿಯಾಣಿ ಅವರು ಕಲಾವ್ಯವಸಾಯ ಮಾಡುತ್ತಿದ್ದಾರೆ. ಕಲಾಮಾತೆಯ ಅನುಗ್ರಹ, ಪೂಜ್ಯ ಖಾವಂದರ ಆಶೀರ್ವಾದ, ಮೇಳದ ಯಜಮಾನರಾದ ಶ್ರೀ ಹರ್ಷೇ೦ದ್ರ ಕುಮಾರರ ಪ್ರೋತ್ಸಾಹ, ಹಿಮ್ಮೇಳ ಮುಮ್ಮೇಳದ ಎಲ್ಲಾ ಕಲಾವಿದರ ಸಹಕಾರದಿಂದ ಇದು ಸಾಧ್ಯವಾಯಿತು ಎಂಬ ವಿಚಾರವನ್ನು ಹೇಳಿ ಮಹೇಶ್ ಅವರು ಇವರೆಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುತ್ತಾರೆ.

ಮಹೇಶ್ ಮಣಿಯಾಣಿ ಅವರ ಪತ್ನಿ ಶ್ರೀಮತಿ ಮೀನಾಕ್ಷಿ. ಇವರು ಗೃಹಣಿ. ಶ್ರೀ ಮಹೇಶ್, ಮೀನಾಕ್ಷಿ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಮಾ| ಮನೀಶ್ 8ನೇ ತರಗತಿಯ ವಿದ್ಯಾರ್ಥಿ. ಯಕ್ಷಗಾನದಲ್ಲಿ ವೇಷ ಮಾಡುತ್ತಾನೆ. ಕಿರಿಯ ಪುತ್ರ ಮಾ| ಚರಿತ್ 3ನೇ ತರಗತಿ ವಿದ್ಯಾರ್ಥಿ. ಇಬ್ಬರು ಮಕ್ಕಳೂ ಯೋಗ ಮತ್ತು ಭಜನಾ ಕಾರ್ಯಕ್ರಮಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಮಹೇಶ್ ಮಣಿಯಾಣಿ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು. 

ವಿಳಾಸ: ಶ್ರೀ ಮಹೇಶ್ ಮಣಿಯಾಣಿ ದೊಡ್ಡತೋಟ, ಯಕ್ಷಗಾನ ಕಲಾವಿದ, ನೆಲ್ಲೂರು ಕೆಮ್ರಾಜೆ ಗ್ರಾಮ, ಸುಳ್ಯ ತಾಲೂಕು, ಮೊಬೈಲ್: 9448868798

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments