Saturday, January 18, 2025
Homeಯಕ್ಷಗಾನಅನುಭವೀ ಹಿರಿಯ ಕಲಾವಿದ - ಶ್ರೀ ದಿನಕರ ರಂಗನಾಥ ಗೋಖಲೆ 

ಅನುಭವೀ ಹಿರಿಯ ಕಲಾವಿದ – ಶ್ರೀ ದಿನಕರ ರಂಗನಾಥ ಗೋಖಲೆ 

ಶ್ರೀ ದಿನಕರ ರಂಗನಾಥ ಗೋಖಲೆ ಅವರು ಕಟೀಲು ಮೇಳದ ಹಿರಿಯ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಅನುಭವೀ ಕಲಾವಿದರಾಗಿ ವ್ಯವಸಾಯವನ್ನು ಮಾಡುತ್ತಿದ್ದಾರೆ. ಕಳೆದ ಇಪ್ಪತ್ತೇಳು ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಸಹೃದಯೀ ಕಲಾವಿದರಿವರು.

ಸಾತ್ವಿಕ ಪಾತ್ರಗಳಲ್ಲಿ ಇವರಿಗೆ ಆಸಕ್ತಿ ಹೆಚ್ಚು. ಕಥಾ ಜ್ಞಾನ, ಪ್ರಸಂಗ ನಡೆ, ಪಾತ್ರದ ಸ್ವಭಾವ, ಭಾಷಾಶುದ್ಧಿ ಮೊದಲಾದ ವಿಚಾರಗಳಲ್ಲಿ ಪಕ್ವರಾಗಿ ಪಾತ್ರಗಳನ್ನು ಚಿತ್ರಿಸುವ ಕಲೆಯು ಇವರಿಗೆ ಕರಗತವಾಗಿದೆ. ಎಲ್ಲಾ ಪಾತ್ರಗಳನ್ನೂ ನಿರ್ವಹಿಸಬಲ್ಲ ಕಲಾವಿದರೂ ಹೌದು. ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. ಕಿರಿಯ ಅಭ್ಯಾಸಿಗಳಿಗೆ ಮೇಳದಲ್ಲಿ ಇವರು ನಿರ್ದೇಶಕರೂ ಹೌದು. 

 ಶ್ರೀ ದಿನಕರ ರಂಗನಾಥ ಗೋಖಲೆ ಅವರು ಜನಿಸಿದ್ದು ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ತೆಪ್ಪದಗುಂಡಿ ಮನೆಯಲ್ಲಿ.   ಶ್ರೀ ರಂಗನಾಥ ಗೋಖಲೆ ಮತ್ತು ಶ್ರೀಮತಿ ಪಾರ್ವತೀ ಅಮ್ಮ ದಂಪತಿಗಳ ಪುತ್ರನಾಗಿ 1957ನೇ ಇಸವಿ ದಶಂಬರ 22ನೇ ತಾರೀಕಿನಂದು ಜನನ. ಇವರ ಮೂಲಮನೆ ಮುಂಡಾಜೆ ಗ್ರಾಮದ ಕುಡೆಂಞ ಎಂಬಲ್ಲಿ. ದಿನಕರ ಗೋಖಲೆ ಅವರ ತಂದೆ ಶ್ರೀ ರಂಗನಾಥ ಗೋಖಲೆ ಅವರು ಮನೆ ಅಳಿಯನಾಗಿ ಹತ್ಯಡ್ಕ ಗ್ರಾಮದ ತೆಪ್ಪದಗುಂಡಿ ಮನೆಗೆ ಬಂದಿದ್ದರು. ದಿನಕರ ಗೋಖಲೆ ಅವರು ಪದವೀಧರರು. (ಬಿ,ಕಾಂ )4ನೇ ತರಗತಿ ವರೆಗೆ ಓದಿದ್ದು ಕುಂಟಾಲುಪಲ್ಕೆ ಸರಕಾರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ.

7ನೇ ತರಗತಿ ವರೆಗೆ ಮೂಡಿಗೆರೆ ತಾಲೂಕಿನ ಜಾವಳೆ ಶಾಲೆಯಲ್ಲಿ. 10ನೇ ತರಗತಿ ವರೆಗೆ ನಿಡ್ಲೆ ಸರಕಾರೀ ಪ್ರಾಢಶಾಲೆಯಲ್ಲಿ. ಬಳಿಕ ಉದ್ಯೋಗವನ್ನರಸಿ ಬೆಂಗಳೂರಿಗೆ ತೆರಳಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಪ್ರದರ್ಶನಗಳನ್ನು ನೋಡುತ್ತಿದ್ದರು. 9ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಶಾಲಾ ತಾಳಮದ್ದಳೆಯಲ್ಲಿ ಪಂಚವಟಿ ಪ್ರಸಂಗದ ಶ್ರೀರಾಮನಾಗಿ ಅರ್ಥ ಹೇಳಿದ್ದರು. ಬಳಿಕ ಊರ ತಾಳಮದ್ದಳೆ ಶ್ರೀಕೃಷ್ಣ ಸಂಧಾನ ಪ್ರಸಂಗದಲ್ಲಿ ಸಂಜಯನಾಗಿ ಅರ್ಥ ಹೇಳಿದ್ದರು. ನೆಡ್ಲೆಯಲ್ಲಿ ವಾರಕ್ಕೊಂದು ದಿನ ನಡೆಯುವ ತಾಳಮದ್ದಲೆಗಳಲ್ಲೂ ಅರ್ಥಧಾರಿಯಾಗಿ ಭಾಗವಹಿಸಿದ್ದರು. 

ಎಸ್. ಎಸ್. ಎಲ್. ಸಿ ಓದಿನ ಬಳಿಕ ಶ್ರೀ ಗೋಖಲೆ ಅವರು ಬೆಂಗಳೂರಿನಲ್ಲಿ ಔಷಧಿ ಕಂಪೆನಿಗಳಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ಅಫಾರಿ ಸೌತ್ ಇಂಡಿಯಾ ಮತ್ತು ಗ್ಲೆಸೋ ಕಂಪೆನಿಗಳಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ನರಸಿಂಹರಾಜ್ ಕಾಲನಿಯ ಆಚಾರ್ಯ ಪಾಠಶಾಲೆಗೆ (ರಾತ್ರಿ ಕಾಲೇಜು) ತೆರಳಿ ಬಿ. ಕಾಂ ವರೆಗೆ ವಿದ್ಯಾರ್ಜನೆ ಮಾಡಿದ್ದರು. 1983ರಲ್ಲಿ ಊರಿಗೆ ಮರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಈ ಸಂದರ್ಭದಲ್ಲಿ ಯಕ್ಷಗಾನದತ್ತ ಮತ್ತೆ ಆಕರ್ಷಿತರಾದರು.

ನಾವಳೆ ಶ್ರೀ ವಿಠಲ ಹೆಬ್ಬಾರರಿಂದ ಯಕ್ಷಗಾನ ಹಿಮ್ಮೇಳ ಕಲಿತು ಊರವರ ಜತೆ ಸೇರಿ ದರ್ಬೆತಡ್ಕ ದೇವಸ್ಥಾನದಲ್ಲಿ ಶ್ರೀ ಪರಶುರಾಮ ಯಕ್ಷಗಾನ ಸಂಘವನ್ನು ಸ್ಥಾಪಿಸಿದರು. ಹಿರಿಯ ಕಲಾವಿದರನ್ನು ಕರೆಸಿ ವಾರಕ್ಕೊಂದು ಇಡೀ ರಾತ್ರಿಯ ತಾಳಮದ್ದಳೆ ನಡೆಸಿದರು. ಬಳಿಕ ರಾಮಾಯಣ, ಮಹಾಭಾರತ, ಭಾಗವತ ಪ್ರಸಂಗಗಳ ಸರಣಿ ತಾಳಮದ್ದಲೆಗಳನ್ನೂ ನಡೆಸಿದರು. ಊರವರ ಸಹಕಾರ ಪ್ರೋತ್ಸಾಹದಿಂದ ಪೂಜೆ, ಶ್ರಾದ್ಧ ಕಾರ್ಯಕ್ರಮಗಳ ನಂತರ ಮನೆ ಮನೆಗಳಲ್ಲೂ ತಾಳಮದ್ದಳೆ ನಡೆಸುವಂತಾಗಿತ್ತು. ಹೀಗೆ ದಿನಕರ ಗೋಖಲೆ ಅವರು ಯಕ್ಷಗಾನ ಸಂಘಟಕರಾಗಿಯೂ ಅನುಭವ ಗಳಿಸಿದರು.

ಈ ಸಮಯದಲ್ಲಿ ಬಂಡೀಹೊಳೆ ಯಕ್ಷಗಾನ ಮೇಳದವರು ಈ ಕೂಟಗಳಿಗೆ ಬಂದು ತರಬೇತಿಯನ್ನೂ ನೀಡುತ್ತಿದ್ದರು. ಶ್ರೀ ಪಡ್ರೆ ಚಂದು ಅವರ ಶಿಷ್ಯ ಶ್ರೀ ವಿಷ್ಣು ಭಟ್ ಶೆಂಡ್ಯೆ ಅವರಿಂದ ಗೋಖಲೆ ಅವರು ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ರಾಮಾಯಣ ಸಪ್ತಾಹ ಪ್ರದರ್ಶನ, ಪುತ್ರಕಾಮೇಷ್ಟಿ ಪ್ರಸಂಗದಲ್ಲಿ ಕೌಸಲ್ಯೆಯಾಗಿ ಗೋಖಲೆ ಅವರು ರಂಗಪ್ರವೇಶ ಮಾಡಿದರು. ಮುಂದಿನ ವರ್ಷ ಮಹಾಭಾರತ ಸಪ್ತಾಹ. ಈ ಪ್ರದರ್ಶನಗಳಲ್ಲಿ ಎಲ್ಲಾ ಪ್ರಸಂಗಗಳಲ್ಲೂ  ಅವಕಾಶವಾಗಿತ್ತು. ಇವರ ಅರ್ಥಗಾರಿಕೆ ವೇಷಗಳನ್ನು ನೋಡಿ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಅವರು ಮೆಚ್ಚಿಕೊಂಡಿದ್ದರು.

ಬಳಿಕ ಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಮತ್ತು ಶ್ರೀ ಸತ್ಯಶಂಕರ ಮಲೆಯಾಳ ಅವರ ಸಹಕಾರವೂ ದೊರಕಿತ್ತು. ಬಣ್ಣದ ವೇಷಧಾರಿಯಾಗಿ ಗೋಖಲೆಯವರು ಕಾಣಿಸಿಕೊಂಡರು. ಅನಿವಾರ್ಯ ಸಂದರ್ಭಗಳಲ್ಲಿ ಎಲ್ಲಾ ತರದ ವೇಷಗಳನ್ನೂ ನಿರ್ವಹಿಸುತ್ತಿದ್ದರು. ಒಮ್ಮೆ ಶಶಿಪ್ರಭಾ ಪರಿಣಯ ಪ್ರಸಂಗದಲ್ಲಿ ಕಮಲಗಂಧಿನಿ ಪಾತ್ರವನ್ನೂ ಮಾಡಿದ್ದರು. ಇವರಲ್ಲಿರುವ ಕಲಾಸಕ್ತಿಯನ್ನು ಗುರುತಿಸಿ ಇವರ ತಾಯಿ ಮೇಳಕ್ಕೆ ಕಳುಹಲು ತೀರ್ಮಾನಿಸಿದ್ದರು. ಶ್ರೀ ಉಮೇಶ ಹೆಬ್ಬಾರರನ್ನು ಕರೆಸಿ ಈ ವಿಚಾರವನ್ನು ಪ್ರಸ್ತಾಪಿಸಿದರು. ಉಮೇಶ ಹೆಬ್ಬಾರರು ದಿನಖರ ಗೋಖಲೆ ಅವರನ್ನು ಶ್ರೀ ಕಟೀಲು ಮೇಳಕ್ಕೆ ಕರೆದೊಯ್ದವರು. 

ಶ್ರೀ ದಿನಕರ ರಂಗನಾಥ ಗೋಖಲೆ ಅವರು ತಿರುಗಾಟ ಆರಂಭಿಸಿದ್ದು 1996ರಲ್ಲಿ. ಕಟೀಲು ನಾಲ್ಕನೇ ಮೇಳದಲ್ಲಿ. ಕುಬಣೂರು ಶ್ರೀಧರ ರಾಯರ  ಭಾಗವತಿಕೆ. ಆಗ ಸ್ಥಾನ ನಿರ್ಣಯವಿರಲಿಲ್ಲ. ಪುಂಡು ವೇಷ, ಕಿರೀಟ ವೇಷ ಮತ್ತು ಸ್ತ್ರೀವೇಷಗಳನ್ನು ನಿರ್ವಹಿಸಬೇಕಾಗಿತ್ತು. ಪುರಾಣ ಪ್ರಸಂಗಗಳ ಅನುಭವ ಮತ್ತು ಮಾತುಗಾರಿಕೆಯಲ್ಲಿ ಪಕ್ವರಾಗಲು ಇದರಿಂದ ಅನುಕೂಲವಾಗಿತ್ತು. ಬಳಿಕ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರು ಭಾಗವತರಾಗಿದ್ದ ಒಂದನೇ ಮೇಳದಲ್ಲಿ ಹದಿನೆಂಟು ವರ್ಷಗಳ ವ್ಯವಸಾಯ.

ಈ ಸಮಯದಲ್ಲಿ ಕೊಳ್ಯೂರು ರಾಮಚಂದ್ರ ರಾವ್, ಸುಣ್ಣಂಬಳ ವಿಶ್ವೇಶ್ವರ ಭಟ್, ಸುಬ್ರಾಯ ಹೊಳ್ಳ, ಶಂಭಯ್ಯ ಕಂಜರ್ಪಣೆ, ಮೊದಲಾದವರ ಒಡನಾಟವು ದೊರೆತಿತ್ತು. ಬಳಿಕ 3ನೇ ಮೇಳ, 1ನೇ ಮೇಳ, ಪುನಃ 3ನೇ ಮೇಳದಲ್ಲಿ ವ್ಯವಸಾಯ.  ಕಳೆದ ವರ್ಷ ಶ್ರೀ ಅಂಡಾಲ ದೇವಿಪ್ರಸಾದ ಶೆಟ್ಟರ ಭಾಗವತಿಕೆಯ 1ನೇ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಪುರಾಣ ಪ್ರಸಂಗಗಳಲ್ಲಿ ವೇಷಗಾರಿಕೆ ಮತ್ತು ಸಂಭಾಷಣೆಗೆ ಶ್ರೀ ವಾಟೆಪಡ್ಪು ವಿಷ್ಣು ಶರ್ಮರು ಒಡನಾಡಿಯಾಗಿ ಸಿಕ್ಕಿದ್ದರು.

ಜೀವನೋಪಾಯಕ್ಕೆ ಬೇಕಾಗುವಷ್ಟು ಕೃಷಿ ಭೂಮಿಯೂ ಇದೆ. ಕಲಾವಿನಾಗಿಯೂ ಸಾಂಸಾರಿಕವಾಗಿಯೂ ಸಂತೃಪ್ತ ಜೀವನ. ಇವರ ಪತ್ನಿ ಶ್ರೀಮತಿ ಪ್ರಶಾಂತಿ ಗೃಹಣಿ. ಗೋಖಲೆ ದಂಪತಿಗಳಿಗೆ ನಾಲ್ಕು ಮಂದಿ ಪುತ್ರಿಯರು. ಎಲ್ಲರೂ ವಿವಾಹಿತೆಯರು. ಪ್ರಥಮ ಪುತ್ರಿ ಪ್ರಕೃತಿ ಪತಿಯೊಂದಿಗೆ ಅಮೆರಿಕಾದಲ್ಲಿದ್ದಾರೆ. ದ್ವಿತೀಯ ಪುತ್ರಿ ಪೃಥ್ವಿ. ಇವರು ಯಕ್ಷಗಾನ ನಾಟ್ಯ ಕಲಿತು ಶಾಲಾ ವಿದ್ಯಾರ್ಥಿನಿಯಾಗಿದ್ದಾಗ ಕಲಾವಿದೆಯಾಗಿದ್ದರು. ಇವರು ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ತೃತೀಯ ಪುತ್ರಿ ಪರ್ಣಾಶ ಶಾಲಾ ವಿದ್ಯಾರ್ಥಿನಿಯಾಗಿದ್ದಾಗ ಕಲಾವಿದೆಯಾಗಿ ವೇಷಗಳನ್ನು ಮಾಡುತ್ತಿದ್ದರು. ಇವರ ಪತಿ ಶ್ರೀ ತಿರುಮಲೇಶ್ವರ ಭಟ್ ಯಕ್ಷಗಾನ ಭಾಗವತರಾಗಿ ಎಲ್ಲರಿಗೂ ಪರಿಚಿತರು. ಇವರು ಕೃಷಿಕರೂ ಹೌದು. ಕೊನೆಯ ಪುತ್ರಿ ಪರ್ಜನ್ಯ ವಿದ್ಯಾರ್ಥಿನಿಯಾಗಿದ್ದಾಗ ಯಕ್ಷಗಾನ ಕಲಾವಿದೆಯಾಗಿದ್ದರು. ಇವರು ಬೆಂಗಳೂರಲ್ಲಿ ಉದ್ಯೋಗಸ್ಥೆ. ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹಿರಿಯ ಅನುಭವೀ ಕಲಾವಿದ ಶ್ರೀ ದಿನಕರ ರಂಗನಾಥ ಗೋಖಲೆ ಅವರು ಇನ್ನಷ್ಟು ಕಲಾಸೇವೆಯನ್ನು ಮಾಡುವಂತಾಗಲಿ. ಭಗವಂತನು ಅವರಿಗೆ ಸಕಲ ಭಾಗ್ಯಗಳನ್ನೂ ಕರುಣಿಸಲಿ  ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments