Saturday, January 18, 2025
Homeಯಕ್ಷಗಾನ‘ದ್ವಿತೀಯ ಮಹಾಯುದ್ಧ’ : ಒಂದು ವಿಶಿಷ್ಟ ಯಕ್ಷಗಾನ ಪ್ರಸಂಗ

‘ದ್ವಿತೀಯ ಮಹಾಯುದ್ಧ’ : ಒಂದು ವಿಶಿಷ್ಟ ಯಕ್ಷಗಾನ ಪ್ರಸಂಗ

ವೀರರಸ ಪ್ರಧಾನ ಯಕ್ಷಗಾನ ಕಲೆಗೆ ನಮ್ಮ ಸುತ್ತಮುತ್ತ ನಡೆದ ಘಟನೆಯೊಂದು ವಸ್ತುವಾಗುವುದು ಹೊಸದೇನಲ್ಲ; ಆದರೂ ನಮ್ಮ ಪುರಾಣಗಳಿಂದ ಆಯ್ದ ಪ್ರಸಂಗಗಳ ನಡುವೆ ಸುಮಾರು ಏಳು ದಶಕಗಳ ಹಿಂದೆ ಮೂಡಿಬಂದ ಜಾಗತಿಕ ಮತ್ತು ದೇಶೀಯ ಘಟನೆಯ ತುಲನೆಯಿರುವ ‘ದ್ವಿತೀಯ ಮಹಾಯುದ್ಧ’ ಎಂಬ ಈ ಪ್ರಸಂಗ ವಿಶೇಷವಾದುದು.


‘ದ್ವಿತೀಯ ಮಹಾಯುದ್ಧ’ ಎಂಬ ಸ್ವಾಭಾವಿಕ ಸುಲಲಿತ ಕವಿತಾ ಬಂಧದಿ0ದ ಕೂಡಿರುವ ಈ ಐತಿಹಾಸಿಕ ಪ್ರಸಂಗವನ್ನು ರಚಿಸಿದವರು ಎ. ಆರ್.ಶಗ್ರಿತ್ತಾಯ ಅವರು. ಅದರಲ್ಲೂ 1949ರಲ್ಲಿ ಪ್ರಕಟಗೊಂಡಿದೆ ಅನ್ನುವುದು ಇದರ ವಿಶೇಷತೆ. ಈ ಪ್ರಸಂಗವನ್ನು ಬರೆದ ಇಸವಿಯ ಬಗ್ಗೆ ಶಗ್ರಿತ್ತಾಯರು ಹೇಳದಿದ್ದರೂ ಪ್ರಕಟವಾಗಲು ಎರಡು ವರುಷಗಳಾದರೂ ಸಂದಿವೆ ಅನ್ನುವುದು “ಈ ಪುಸ್ತಕವು ಇದರ ಹಿಂದೆಯೇ ಬರೆದು ಮುಗಿದಿದ್ದರೂ ಕಾಗದದ ಅಭಾವದ ಪರಿಣಾಮದಿಂದಾಗಿ ಇದುವರೆಗೂ ಅಚ್ಚಾಗಲು ಉಳಿದು ಹೋಗಿತ್ತು.” ಎಂಬ ಅವರ ಮಾತಿನಿಂದಲೇ ಖಚಿತವಾಗಿದೆ


ಇದರಲ್ಲಿ ‘ಹಿಟ್ಲರನ ಪತನ’ ಮತ್ತು ‘ಸ್ವಾತಂತ್ರ್ಯ ವಿಜಯ’ ಎಂಬ ಎರಡು ಪ್ರಸಂಗಗಳಿದ್ದು, ಮೂರು ಭಾಗಗಳಿವೆ: ಲಂಡನಿನ ದಂಡಯಾತ್ರೆ ಗದ್ದಲ, ಹಿಟ್ಲರನ ಮತ್ತು ಮುಸಲೋನಿಯ ಪತನ, ಜಪಾನ್ ಶರಣಾಗತಿ ಹಾಗೂ ಭಾರತದ ಸ್ವಾತಂತ್ರ್ಯ.


1914ರಲ್ಲಿ ಆರಂಭವಾದ ಪ್ರಪಂಚದ ಪ್ರಥಮ ಮಹಾಯುದ್ಧವು ಸುಮಾರು ನಾಲ್ಕು ವರ್ಷಗಳ ನಂತರ ಕೊನೆಗೊಂಡರೆ 1939ರಲ್ಲಿ ಆರಂಭವಾದ ದ್ವಿತೀಯ ಮಹಾಯುದ್ಧವು ಆರು ವರ್ಷಗಳ ನಂತರ ಹಿಟ್ಲರನ ಪತನದೊಂದಿಗೆ ಕೊನೆಗೊಂಡಿತು. ಇಲ್ಲಿ ಕೇವಲ ಯುದ್ಧ ವೀರೋಚಿತ ಸನ್ನಿವೇಶಗಳನ್ನು ಚಿತ್ರಿಸುವ ಉದ್ದೇಶ ಪ್ರಸಂಗಕರ್ತರದ್ದಲ್ಲ. ಜನರಿಗೆ ವಿಚಾರಗಳನ್ನು ಮುಟ್ಟಿಸುವ ಉದ್ದೇಶದಿಂದ ಹಾಡುಗಬ್ಬ ರೂಪದ ಯಕ್ಷಗಾನವನ್ನು ತಾವು ಆಯ್ದುಕೊಂಡಿರುವುದಾಗಿ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಅದುವರೆಗೂ ಯುದ್ಧ ಸಂದರ್ಭಗಳಲ್ಲಿ ಕೇಳದ ತಿಳಿಯದ ಪದಗಳನ್ನು ಕೇಳಿದಾಗ ಮೂಡಿದ ಕುತೂಹಲವೇ ಅವರಿಗೆ ಈ ಪ್ರಸಂಗ ರಚನೆಗೆ ಪ್ರೇರಣೆಯಂತೆ.


ಈ ಪ್ರಸಂಗದಲ್ಲಿ ಶಗ್ರಿತ್ತಾಯರು ಒಂದೇ ಕಾಲಘಟ್ಟದ ಸುಮಾರಿಗೆ ನಡೆದ ಎರಡು ವಿಚಾರಗಳನ್ನು ಜೊತೆಯಾಗಿಸುವ ಮೂಲಕ ಒಂದು ತುಲನಾತ್ಮಕ ನೋಟವನ್ನೂ ನೀಡಲು ಪ್ರಯತ್ನಿಸಿದ್ದಾರೆ. ಹಿಟ್ಲರ್, ಮುಸಲೋನಿಯರ ಅತಿ ಆಗ್ರಹದ ಕದನ ಆಟಂ ಬಲದಿಂದ ಪರಾಜಯದೊಂದಿಗೆ ಅ0ತ್ಯವಾದರೆ, ನಮ್ಮ ಪುಣ್ಯ ನೆಲದಲ್ಲಿನ ಆತ್ಮಬಲದ ಸಮರವು ಸ್ವಾತಂತ್ರ್ಯ ವಿಜಯದೊಂದಿಗೆ ಕೊನೆಗೊಂಡಿತು. ಒಂದೆಡೆ ವಿಜ್ಞಾನ ಬಲದ ಕದನಕ್ಕೆ ಸೋಲಾದರೆ, ಇನ್ನೊಂದೆಡೆ ಸುಜ್ಞಾನ ಬಲದ ಕದನಕ್ಕೆ ಗೆಲುವಾಯಿತು; ಹಿಂಸೆಗೆ ಸೋಲಾದರೆ ಅಹಿಂಸೆಗೆ ಗೆಲುವಾಯಿತು. ಇವೆರಡೂ ಸರಿ ಸುಮಾರು ಒಂದೇ ಸಮಯದಲ್ಲಿ ಕೊನೆಗೊಂಡ ಎರಡು ಪ್ರಮುಖ ಘಟನೆಗಳು.


ಯಂತ್ರ-ತ0ತ್ರ ಇವೆರಡೂ ಶತ್ರುಗಳನ್ನು ಎದುರಿಸುವ ಮಟ್ಟಹಾಕುವ ಉಪಾಯಗಳೇ ಆಗಿವೆ. ಕೇವಲ ಯಂತ್ರಶಕ್ತಿಯಿ0ದ ವಿಜ್ಞಾನದ ಬಲದಿಂದ ಮಾತ್ರ ಜಗತ್ತನ್ನು ಸುಟ್ಟು ನಾಶ ಮಾಡುವುದು ಸಾಧ್ಯವಾಗುವುದೇ?ಸಾಧ್ಯವಾಗುವುದಾದರೆ ಜಗತ್ತಿನ ಅದ್ವಿತೀಯ ಪರಾಕ್ರಮಿ ಎಂದೆನಿಸಿದ ಹಿಟ್ಲರನ ಪತನ ಸಾಧ್ಯವಿತ್ತೇ? ಯಂತ್ರಗಳು ಯುದ್ಧತಂತ್ರಗಳಿಗೆ ಬೆಂಬಲ ಮಾತ್ರವೇ?ಮೊದಲಾದ ಪ್ರಶ್ನೆಗಳಿಗೆ ಉತ್ತರವೆಂಬ0ತೆ ನಡೆದ ಘಟನೆ ಭಾರತದ ಸ್ವಾತಂತ್ರ್ಯ ವಿಜಯ. ಹೀಗೆ ಒಂದೇ ಕಾಲಘಟ್ಟದಲ್ಲಿ ನಡೆದ ಎರಡು ಘಟನೆಗಳನ್ನು ಪ್ರಸಂಗವಾಗಿಸುವ ಮೂಲಕ ಅವೆರಡರ ನಡುವಿನ ತೌಲನಿಕ ವಿಶ್ಲೇಷನೆಗೆ ಅನುವು ಮಾಡಿಕೊಟ್ಟವರು ಶಗ್ರಿತ್ತಾಯರೆನ್ನಬಹುದು.


ಜನಪದ ಸಾಹಿತ್ಯರೂಪದ ಈ ವಿನೂತನ ಯಕ್ಷಗಾನ ಪ್ರಸಂಗದಲ್ಲಿ ಮಹಾಯುದ್ಧದ ಘಟನಾವಳಿಗಳನ್ನು ವಿವರಿಸುವಾಗ ವೀರರ, ಶಸ್ತ್ರಾಸ್ತ್ರಗಳ ಹೆಸರುಗಳನ್ನು ನಮ್ಮ ಕರುನಾಡಿನ ಸಂಸ್ಕೃತಿಗೆ ತಕ್ಕ0ತೆ ಕೆಲವೆಡೆ ರೂಪಾಂತರಗೊಳಿಸಿದ್ದಾರೆ. ವಿದೇಶೀ ಅಪರಿಚಿತ ಹೆಸರುಗಳನ್ನು ಕನ್ನಡೀಕರಿಸಿದ್ದಾರೆ. ಕಾದಂಬರಿಯ0ತಹ ವಿಚಾರವನ್ನೂ, ಪುರಾಣ ಕಥೆಗಳಲ್ಲಿನ ಕಲೆಗಳನ್ನು ಹೊಂದಿರುವ ಇದು ಪುರಾಣಗಳಲ್ಲಿ ಬಳಕೆಯಾದ ತಂತ್ರಜ್ಞಾನ ಸಂಬ0ಧೀ ಕಲ್ಪನಾ ವಿಚಾರಗಳು ನಿಜವಾಗುವುದನ್ನು ಚಿತ್ರಿಸುತ್ತದೆ.


ಕಥಾನುಸಾರ, ಪಾತ್ರ ಪರಿಚಯ ಹಾಗೂ ಚಿತ್ರಗಳನ್ನು ಒಳಗೊಂಡಿರುವ ಇದರಲ್ಲಿ ಆರು ವರುಷಗಳ ಕಾಲ ನಡೆದ ಯುದ್ಧದ ಸಮಸ್ತ ವಿಚಾರಗಳನ್ನು ಸರಳಗೊಳಿಸಿ ಪಾತ್ರಗಳೊಂದಿಗೆ ಪ್ರತ್ಯೇಕ ಟಿಪ್ಪಣಿಗಳೊಂದಿಗೆ ನೀಡಿದ್ದಾರೆ. ಆಧುನಿಕ ಕಾಲಕ್ಕೆ ಅನುಗುಣವಾಗಿ ವಿನೋದ ರಸಗಳನ್ನೂ ಅಲ್ಲಲ್ಲಿ ಸೇರಿಸಿದ್ದಾರೆ.


ಯಕ್ಷಗಾನ ಪ್ರಸಂಗ ರಚನೆಯ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಪಾತ್ರಗಳನ್ನು ಪುರಾಣ ಪಾತ್ರಗಳಿಗೆ ಹೋಲಿಸುವ ಪ್ರಕ್ರಿಯೆ ಅನಿವಾರ್ಯ ಎಂಬ0ತೆ ಹಿಟ್ಲರನನ್ನು ಕೇತು, ಹಿರಣ್ಯಕಶಿಪು, ಕರ್ಣನಿಗೂ, ಮುಸಲೋನಿಯನ್ನು ನರಕಾಸುರ, ರಾಹುವಿಗೂ, ಸ್ಟಾಲಿನ್ ಅನ್ನು ಅರ್ಜುನನಿಗೂ, ಲಂಡನ್‌ ನಗರವನ್ನು ಲಂಕೆ, ಅಳಕಾವತಿಗೂ ಹೋಲಿಸಿರುವುದು ವಿಶೇಷವಾಗಿದೆ.


ಇಲ್ಲಿ ಆರನೇಜಾರ್ಜ್, ಚೇಂಬರ್ಲೇನ್, ಚಿಯಾಂಗ್, ವೇವಲ್, ಜಿನ್ನಾ ಮೊದಲಾದವರ ಫೋಟೋಗಳೂ ಇವೆ. ಕಾಂಗ್ರೆಸ್ ಸರಕಾರ, ಸಾರ್ವಭೌಮತ್ವ, ಹಿಟ್ಲರನ ಜೀವನಚರಿತ್ರೆ, ಬರ್ಲಿನ್‌ ಕೋಟೆಯ ವರ್ಣನೆ, ಶತ್ರು-ಮಿತ್ರರ ತುಲನೆ, ನಾರ್ವಯ ಪತನ, ತ್ರಿಕೂಟ ಸಂಧಿ, ಭಾರತದ ಕ್ಷಾಮ ಸ್ಥಿತಿ, ಆಜಾದ್ ಸೈನ್ಯ ನಿರ್ಮಾಣ, ಬರ್ಮಾ ಆಕ್ರಮಣ, ಸಿಂಗಾಪುರ, ರಂಗೂನ್ ಪತನ, ಮುಸಲೋನಿ ಪದಚ್ಯುತಿ, ಬೋರ್ಡೋಗ್ಲಿ ಸರಕಾರದ ಸ್ಥಾಪನೆ, ಬರ್ಲಿನ್‌ಯುದ್ಧ, ಮುಸ್ಲಿಂ ಲೀಗ್ ವಿವರ, ಯುದ್ಧತಂತ್ರಗಾರಿಕೆ, ಯುದ್ಧ ವರ್ಣನೆ, ಹಿಟ್ಲರನ ಬೇನೆ ಮೊದಲಾದ ಎಲ್ಲ ವಿವರಗಳನ್ನೊಳಗೊಂಡ ಇದೊಂದು ವಿಶಿಷ್ಟ ಯಕ್ಷಗಾನ ಪ್ರಸಂಗವೆನ್ನಬಹುದಾಗಿದೆ.

ಡಾ.ಮೈತ್ರಿ ಭಟ್

ಲೇಖಕಿಯ ವಿಳಾಸ:ಡಾ.ಮೈತ್ರಿ ಭಟ್,
ಉಪನ್ಯಾಸಕಿ, ಕನ್ನಡ ವಿಭಾಗ,
ವಿವೇಕಾನಂದಕಾಲೇಜು,
ನೆಹರೂ ನಗರ, ಪುತ್ತೂರು – 574203
ಮೊಬೈಲು ಸಂಖ್ಯೆ: 9449793584

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments