Friday, September 20, 2024
Homeಯಕ್ಷಗಾನತೆಂಕಿನಲ್ಲಿ ಮಿಂಚುತ್ತಿರುವ ಕುಂದಾಪುರದ ಪ್ರತಿಭೆ - ಶ್ರೀ ಜನಾರ್ದನ ಉಪ್ಪುಂದ

ತೆಂಕಿನಲ್ಲಿ ಮಿಂಚುತ್ತಿರುವ ಕುಂದಾಪುರದ ಪ್ರತಿಭೆ – ಶ್ರೀ ಜನಾರ್ದನ ಉಪ್ಪುಂದ

ಲೋಕೋ ಭಿನ್ನರುಚಿಃ  ಎಂಬಂತೆ ಒಬ್ಬೊಬ್ಬರ ಅಭಿರುಚಿಯು ಒಂದೊಂದು ತೆರನಾಗಿರುತ್ತದೆ. ಯಕ್ಷಗಾನ ಪ್ರೇಕ್ಷಕರಲ್ಲೂ ಹಾಗೇ, ಕಲಾವಿದರಲ್ಲೂ ಹಾಗೇ. ಬಡಗಿನ ಪ್ರದರ್ಶನಗಳನ್ನೇ ಮೆಚ್ಚಿಕೊಳ್ಳುವ ಪ್ರೇಕ್ಷಕರು ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಹಳಷ್ಟು ಮಂದಿ ಇದ್ದಾರೆ. ಬಡಗಿನ ಅನೇಕ ಪ್ರೇಕ್ಷಕರಿಗೆ ತೆಂಕಿನ ಆಟಗಳೆಂದರೆ ಪಂಚಪ್ರಾಣ. ಅದೇ ರೀತಿ ‘ನಾವು ತೆಂಕುತಿಟ್ಟಿನ ಕಲಾವಿದರಾಗಬೇಕೆಂದು ಬಡಗಿನವರೂ’, ‘ನಾವು ಬಡಗಿನ ಕಲಾವಿದರಾಗಬೇಕೆಂದು ತೆಂಕಿನವರೂ’ ಬಯಸುವುದನ್ನು ನಾವು ಗಮನಿಸಬಹುದು.

ಅದು ಅವರವರ ಅಭಿರುಚಿಗೆ, ಆಯ್ಕೆಗೆ ಬಿಟ್ಟ ವಿಚಾರ. ತೆಂಕು- ಬಡಗು ಎಂಬ ಭೇದ ನಮಗೇಕೆ. ಇವುಗಳೆರಡೂ ಯಕ್ಷಮಾತೆಯ ಉಭಯ ನೇತ್ರಗಳು. ಕಲಾಮಾತೆಗೆ ಕೊರತೆಯಾಗದಂತೆ ಎಚ್ಚರವಿರಬೇಕಾದುದು ಕಲಾವಿದರಿಗೂ ಪ್ರೇಕ್ಷಕರಿಗೂ ಕರ್ತವ್ಯ ಅಷ್ಟೆ. ಯಾವ ತಿಟ್ಟಿನ ಕಲಾವಿದನಾದರೇನು? ತಾನು ಯಕ್ಷಗಾನ ಕಲಾವಿದ, ಗಂಡು ಕಲೆಯೆಂದೇ ಖ್ಯಾತವಾದ ಯಕ್ಷಗಾನದ ಒಂದು ಅಂಗವಾಗಿರುವೆ ಎಂದು ಸಂತೋಷದಿಂದ ಹೇಳಿಕೊಳ್ಳಬಹುದು.

ಕುಂದಾಪುರ ಸಮೀಪದ ಉಪ್ಪುಂದದಲ್ಲಿ ಜನಿಸಿದರೂ ತೆಂಕು ತಿಟ್ಟು ಪ್ರದರ್ಶನಗಳತ್ತ ಆಕರ್ಷಿತರಾದವರು ಶ್ರೀ ಜನಾರ್ದನ ಅವರು. ಈಗ ತೆಂಕುತಿಟ್ಟಿನ ಉತ್ತಮ ಪುಂಡುವೇಷಧಾರಿಯಾಗಿ  ಮಿಂಚುತ್ತಿದ್ದಾರೆ. ಇವರು ಕಿರೀಟ ವೇಷಗಳನ್ನೂ ಮಾಡುತ್ತಾರೆ. ಕಸೆ ಸ್ತ್ರೀ ವೇಷಗಳನ್ನೂ ನಿರ್ವಹಿಸುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಯಾವ ವೇಷವನ್ನಾದರೂ ಮಾಡಬಲ್ಲ ಕಲಾವಿದರು. ತಂಡಕ್ಕೆ ಇವರು ಒಬ್ಬ  ಆಪದ್ಬಾಂಧವರು. ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. 

ಕಟೀಲು ಮೇಳದ ಪುಂಡುವೇಷಧಾರಿ ಶ್ರೀ ಜನಾರ್ದನ ಅವರ ಹುಟ್ಟೂರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ. ಶ್ರೀ ನಾರಾಯಣ ಡಿ.ಖಾರ್ವಿ ಮತ್ತಿ ಶ್ರೀಮತಿ ಕಮಲಾವತಿ ಎನ್. ಖಾರ್ವಿ ದಂಪತಿಗಳ ಪುತ್ರನಾಗಿ 1979ನೇ ಇಸವಿ ಅಕ್ಟೋಬರ್ 27ರಂದು ಜನನ. ಶ್ರೀ ನಾರಾಯಣ ಡಿ.ಖಾರ್ವಿ ಅವರ ಆರು ಮಕ್ಕಳಲ್ಲಿ ಇವರು ಕೊನೆಯವರು. (ಐದು ಗಂಡು, ಒಂದು ಹೆಣ್ಣು) ಉಪ್ಪುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವರೆಗೆ ಓದಿದ್ದರು.

ಎಳವೆಯಲ್ಲಿಯೇ ಯಕ್ಷಗಾನಾಸಕ್ತಿಯು ಇತ್ತು. ತೆಂಕು ತಿಟ್ಟಿನ ಪ್ರದರ್ಶನಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಧರ್ಮಸ್ಥಳ ಮತ್ತು ಕಟೀಲು ಮೇಳಗಳ ಆಟಗಳನ್ನು ನೋಡುತ್ತಿದ್ದರು. ಜತೆಗೆ ಬಡಗು ತಿಟ್ಟಿನ ಪ್ರದರ್ಶನಗಳನ್ನೂ ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂಬ ಆಸೆಯೂ ಚಿಗುರೊಡೆದಿತ್ತು. ಕಲಾವಿದನಾಗುವುದಕ್ಕೆ ಜನಾರ್ದನ ಉಪ್ಪುಂದ ಅವರು ತೆಂಕುತಿಟ್ಟನ್ನು ಆಯ್ಕೆಮಾಡಿಕೊಂಡರು.

ಯಕ್ಷಗಾನ ಹೆಜ್ಜೆಗಾರಿಕೆ ಕಲಿಯಲು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಸೇರಿಕೊಂಡರು. ಯಕ್ಷಗಾನ ಕ್ಷೇತ್ರದ ಹಿರಿಯ, ಖ್ಯಾತ ಸ್ತ್ರೀ ಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾಯರಿಂದ ನಾಟ್ಯಾಭ್ಯಾಸ. ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಪ್ರದರ್ಶನ ವೀರಮಣಿ ಕಾಳಗ ಪ್ರಸಂಗದ ಹನೂಮಂತನಾಗಿ ರಂಗಪ್ರವೇಶ. ಬಳಿಕ ಇಂದ್ರಜಿತು ಕಾಳಗ ಪ್ರಸಂಗದಲ್ಲಿ ಹನೂಮಂತನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು. 

ಶ್ರೀ ಜನಾರ್ದನ ಉಪ್ಪುಂದ ಅವರು ತಿರುಗಾಟ ಆರಂಭಿಸಿದ್ದು ಕಟೀಲು ನಾಲ್ಕನೆಯ ಮೇಳದಲ್ಲಿ. ಕುಬಣೂರು ಶ್ರೀಧರ ರಾವ್ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಭಾಗವತರಾಗಿದ್ದರು. ಸದ್ರಿ ಮೇಳದಲ್ಲಿ 4 ವರ್ಷಗಳ ತಿರುಗಾಟ. ಮೊದಲ ಎರಡು ವರ್ಷ ಬಾಲಗೋಪಾಲನಾಗಿ. ಬಳಿಕ ಮುಖ್ಯ ಸ್ತ್ರೀ ವೇಷ, ಪೀಠಿಕಾ ಸ್ತ್ರೀ ವೇಷ ಮತ್ತು ಪ್ರಸಂಗದಲ್ಲಿ ತನಗೆ ಬಂದ ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸಿದರು.

ಬಳಿಕ ಕಟೀಲು 1ನೇ ಮೇಳದಲ್ಲಿ ಕಲಾಸೇವೆ. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಭಾಗವತಿಕೆಯಡಿ. ಈ ಸಂದರ್ಭದಲ್ಲಿ ಹೆಚ್ಚಿನ ಎಲ್ಲಾ ಪುಂಡುವೇಷಗಳನ್ನೂ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾದರು. ಪ್ರಸ್ತುತ ಮೂರು ವರ್ಷಗಳಿಂದ ಕಟೀಲು ನಾಲ್ಕನೆಯ ಮೇಳದಲ್ಲಿ ವ್ಯವಸಾಯವನ್ನು ಮಾಡುತ್ತಿದ್ದಾರೆ. ತನ್ನ ಪಾಲಿಗೆ ಬಂದ ಪಾತ್ರಕ್ಕೆ ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. ಬ್ರಹ್ಮ,ವಿಷ್ಣು,ಬಬ್ರುವಾಹನ, ಅಭಿಮನ್ಯು, ಚಂಡಮುಂಡರು, ಶ್ರೀಕೃಷ್ಣ, ಜಯಂತ, ಸುದರ್ಶನ,  ಪರಶುರಾಮ,ಭಂಡಾಸುರ, ದಂಭೋದ್ಭವ, ಹನೂಮಂತ, ಲಕ್ಷ್ಮಣ ಮೊದಲಾದುವು ಇವರಿಗೆ ಪ್ರಿಯವಾದ ಪಾತ್ರಗಳು. ಈ ಎಲ್ಲಾ ಪಾತ್ರಗಳಲ್ಲಿ ಅವರ ನಿರ್ವಹಣೆಯನ್ನು ಕಂಡಿರುವೆ.

ಪುಂಡುವೇಷಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳಲ್ಲೂ ಶ್ರೀ ಜನಾರ್ದನ ಉಪ್ಪುಂದ ಅವರಿಗೆ ಒಳ್ಳೆಯ ಹೆಸರಿದೆ. ಸಹಕಲಾವಿದನಾಗಿ ಅವರ ಜತೆ ಅಭಿನಯಿಸುವ ಅವಕಾಶವೂ ಆಗಿದೆ. ಕಿರೀಟ ವೇಷಗಳನ್ನೂ ಮೇಳದಲ್ಲಿ ನಿರ್ವಹಿಸುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಪಾತ್ರಗಳನ್ನೂ ಮಾಡಿದ್ದಿದೆ. ಒಂದನೇ ಮೇಳದಲ್ಲಿರುವಾಗ ಹೆಚ್ಚಿನ ದಿನವೂ ಎರಡೆರಡು ಪಾತ್ರಗಳನ್ನು ಮಾಡುತ್ತಿದ್ದರು. ಈಗಲೂ ಅನಿವಾರ್ಯವಾದರೆ ಎರಡೆರಡು ಪಾತ್ರಗಳನ್ನು ಮಾಡಿ ಸಹಕಾರಿಯಾಗುತ್ತಾರೆ. 

ಶ್ರೀ ಜನಾರ್ದನ ಉಪ್ಪುಂದ ಅವರು ಬಡಗು ತಿಟ್ಟಿನ ಪ್ರದರ್ಶನಗಳಲ್ಲೂ ವೇಷ ಮಾಡಿ ಅನುಭವ ಉಳ್ಳವರು. ಮಳೆಗಾಲದಲ್ಲಿ ಜೀವನ ನಿರ್ವಹಣೆಗಾಗಿ ಪೆಟ್ರೋಲ್ ಬಂಕ್ ಮತ್ತು ಹೊಟೇಲುಗಳಲ್ಲಿ ಕೆಲಸ ಮಾಡಿದ್ದರು. ಪ್ರಸ್ತುತ ಅನೇಕ ವರ್ಷಗಳಿಂದ  ಮಂಗಳೂರು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಾಯಲದ ವತಿಯಿಂದ ನಡೆಸಲ್ಪಡುವ ಚಿಕ್ಕ ಮೇಳದಲ್ಲೂ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2009ರಲ್ಲಿ ವೀಣಾ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶ್ರೀ ಜನಾರ್ದನ ಉಪ್ಪುಂದ, ವೀಣಾ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು. ಪ್ರಥಮ ಪುತ್ರ ಮಾಸ್ಟರ್ ಪ್ರಣವ್. 2ನೆಯ ತರಗತಿ. ದ್ವಿತೀಯ ಪುತ್ರ ಮಾಸ್ಟರ್ ಪವನನಿಗೆ ಐದು ವರ್ಷ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಜನಾರ್ದನ ಉಪ್ಪುಂದ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಸಕಲ ಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂಬ ಆಶಯಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments