ಅಸಾಧಾರಣ ಕೃತುಶಕ್ತಿ,
ಪಾರಂಪರಿಕ ಕಲೆಯ ಪೂರ್ಣರೂಪದ ಸಾಕ್ಷಾತ್ಕಾರ, ಇದನ್ನು ಪೂರೈಸುವಲ್ಲಿ ಇರಬಹುದಾದ ಇಚ್ಛಾಶಕ್ತಿ. ಹತ್ತಿರ ಹತ್ತಿರ ಒಂದು ಶತಮಾನದಷ್ಟು ಸುದೀರ್ಘ ಅವಧಿಯ ನಿರಂತರ ಕಲಾ ಸೇವೆ. ಪ್ರಾತಿನಿಧಿಕವಾಗಿ ಈಗಲೂ ಹೊಸ ಹುಮ್ಮಸ್ಸು, ಜೀವಂತಿಕೆಯ ದ್ಯೋತಕವಾಗಿ ಇರತಕ್ಕ ಒಂದು ವಿಶಾಲ ವಟವೃಕ್ಷ. ವಟವೃಕ್ಷ ಎನ್ನುವ ಪದ ಬಳಕೆ ಯಾಕೆಂದರೆ, ಕಲೆಯಲ್ಲಿ ವ್ಯಸ್ತರಾದ, ಆರಾಧನೆಯೇ ಪ್ರಧಾನ ಲಕ್ಷ್ಯವಾದ ಪ್ರಭುದ್ಧ ಕಲಾವಿದರಿಗೆ ಹಾಗೆಯೇ ಕುತೂಹಲ ಮತ್ತು ಆಕರ್ಷಣೆ ಎಂಬ ನೆಲೆಯಲ್ಲಿ ತೊಡಗಿಕೊಂಡ ಅಭ್ಯಾಸಿಗಳಿಗೆ ನಿತ್ಯ ನಿರಂತರ ಆಶ್ರಯ, ಮಾರ್ಗದರ್ಶಿ ವ್ಯವಸ್ಥೆ.
ಈ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಒಂದು ಅದ್ಭುತವಾದ, ಕಲೋಪಾಸನೆಯನ್ನೇ ಪ್ರಧಾನ ಲಕ್ಷ್ಯವಾಗಿ ಹೊಂದಿದ ಒಂದು ವಿಶಿಷ್ಟವಾದ ಯಕ್ಷಗಾನ ಕಲಾ ಕೇಂದ್ರವನ್ನು ಪರಿಚಯಿಸುವ ಹೊಣೆಗಾರಿಕೆ ನನ್ನದು. ಇದು ವಿದ್ವಜ್ಜನ ಮಾನ್ಯವಾದ, ಕಲೆಯ ಸಾಕ್ಷಾತ್ಕಾರಕ್ಕಾಗಿ ಹಪಹಪಿಸುವ ಇದೀಗ ಕೆಲವು ವರ್ಷಗಳಿಂದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಕಲಾ ಕೇಂದ್ರವನ್ನು ಕೂಡಿಕೊಂಡಿರುವವ ಆಶ್ರಯ ತಾಣವೂ, ಮಾರ್ಗದರ್ಶೀ ಕೇಂದ್ರವೂ ಆಗಿರುವ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ.
ಯಕ್ಷಗಾನ ರಂಗದ ಆಚಾರ್ಯ ಪುರುಷರೆಂದೇ ಖ್ಯಾತಿಯನ್ನು ಪಡೆದ ಅಸಾಧಾರಣ ಸಾಧಕರಾದ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ದೂರದರ್ಶಿತ್ವ ಈ ಕಲಾಸಂಘದ ಸ್ಥಾಪನೆಗೆ ಪ್ರೇರಣೆ. ಮಾಸ್ತರರು ಬನಾರಿಗೆ ಬಂದು ಇಲ್ಲಿ ವಾಸ್ತವ್ಯ ಹೊಂದುವ ಮೊದಲು ಕೀರಿಕ್ಕಾಡು ಅವರ ಊರಾಗಿತ್ತು. ಶಾಲಾ ಅಧ್ಯಾಪಕರಾಗಿದ್ದ ಅವರು ಯಕ್ಷಗಾನದ ಬಗ್ಗೆ ಅತ್ಯುಚ್ಚ ಅಭಿಮಾನ ಹೊಂದಿದವರಾಗಿದ್ದರು.
ಅರ್ಥಗಾರಿಕೆಯಲ್ಲಿ ಹಲವರನ್ನು ತಯಾರುಗೊಳಿಸಿದ್ದರು. ಬನಾರಿಗೆ ಕುಟುಂಬದೊಂದಿಗೆ ಬಂದು ನೆಲೆಸಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಒಂದು ಸಾಲಿಗ್ರಾಮ ಶಿಲೆ ಅವರಿಗೆ ಸಿಗುತ್ತದೆ .ಇದು ವಿಷ್ಣುವಿನ ಸಾನಿಧ್ಯವನ್ನು ಹೊಂದಿರುವಂತಹದು. ಇದನ್ನು ಭಕ್ತಿ ಪುರಸ್ಸರವಾಗಿ ಪೂಜಿಸಲು ತೊಡಗುತ್ತಾರೆ. ಈಗ ನಾವು ಕಾಣುತ್ತಿರುವ ಬನಾರಿ ಶ್ರೀ ಗೋಪಾಲಕೃಷ್ಣ ದೇವರ ಸಾನಿಧ್ಯವನ್ನು ಹೊಂದಿರುವ ಕಲಾಮಂದಿರ.
ಮಾಸ್ತರರು ಬನಾರಿಗೆ ಬಂದು ನೆಲೆಸಿದ ಮೇಲೆ ಅವರ ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತಾರವಾಗುತ್ತದೆ. ಯಕ್ಷಗಾನ ನಾಟ್ಯ ತರಗತಿ, ಅರ್ಥಗಾರಿಕೆಯಲ್ಲಿ ತರಬೇತಿ ಹೀಗೆ ಒಂದು ಕಲಾಸಂಬಂಧಿ ವಾತಾವರಣವನ್ನು ಉಂಟು ಮಾಡುತ್ತಾರೆ. ಶ್ರೀಯುತರು ಪುರಾಣಾಂತರ್ಗತ ಕಥಾನಕಗಳಿಗೆ ತಮ್ಮ ವಾಗ್ವೈಖರಿಯಿಂದ ಕೂಡಿದ ಅರ್ಥಗಾರಿಕೆಯ ಮೂಲಕ ಹೊಸ ದಿಸೆಯನ್ನು ಪರಿಚಯಿಸಿದವರು. ಹಲವು ಪ್ರಸಂಗಗಳಿಗೆ ಜೀವ ತುಂಬಿದವರು. ಅವರ “ಶಿವ ಪಂಚಾಕ್ಷರಿ ಮಹಿಮೆ “ಎಂಬ ಪ್ರಸಂಗ ದಾಖಲೆಯ ಪ್ರದರ್ಶನಗಳನ್ನು ಕಂಡಿದೆ ..ಒಂದು ಸಮೃದ್ಧ ಯಕ್ಷಗಾನ ಪರಿಸರಕ್ಕೆ ಅವರು ನಾಂದಿ ಹಾಡಿದರು.
ಮಾಸ್ತರರ ಶಿಷ್ಯ ವೃಂದವೂ ಯಕ್ಷಗಾನ ರಂಗಕ್ಕೆ ಒಂದು ಕೊಡುಗೆ ಆಗಿದ್ದಾರೆ .ಈ ಬಗ್ಗೆ ಹೇಳುವುದಿದ್ದರೆ ಯಕ್ಷರಂಗದ ಭೀಷ್ಮ ಎಂಬ ನೆಗಳ್ತೆಗೆ ಪಾತ್ರರಾದ ಶೇಣಿ ಗೋಪಾಲಕೃಷ್ಣ ಭಟ್ಟರು. ಇವರು ಮಾಸ್ತರರ ಶಿಷ್ಯರಾಗಿ ಪೌರಾಣಿಕ ಪಾತ್ರಗಳಿಗೆ ಹೊಸತೊಂದು ಆಯಾಮ ನೀಡಿದವರು. ಈಗಲೂ ಶೇಣಿ ಎನ್ನುವ ಎರಡಕ್ಷರದ ಪದ ಉಂಟು ಮಾಡುವ ಪ್ರಭಾವ ಕಲಾಪ್ರೇಮಿಗಳಿಗೆ ಒಂದು ಬೆರಗು, ವಿಸ್ಮಯ.
ಮಾಸ್ತರರ ಗರಡಿಯಲ್ಲಿ ಪಳಗಿದ ಮತ್ತೋರ್ವ ಪ್ರಸಿದ್ಧ ಕಲಾವಿದ ಕೇದಗಡಿ ಗುಡ್ಡಪ್ಪ ಗೌಡ. ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಹೊಸತೊಂದು ಶಕೆಯನ್ನು ತೆರೆದವರು.ಹಾಗೆಯೇ ಬಣ್ಣದ ವೇಷಧಾರಿ ಕೆ .ವಿ ನಾರಾಯಣ ರೈ, ಮುದಿಯಾರು ನಾರಾಯಣ ರೈ, ಹೀಗೆ ಹಲವು ಶಿಷ್ಯಂದಿರು ಮಾಸ್ತರರ ಗರಡಿಯಲ್ಲಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದವರು.
1943-1944ನೇ ಇಸವಿಯಲ್ಲಿ ಕೀರಿಕ್ಕಾಡು ಮಾಸ್ತರರ ದೂರದರ್ಶಿತ್ವದ ಫಲವಾಗಿ ಬನಾರಿ ಕಲಾಸಂಘದ ಆರಂಭ.ನಾಟ್ಯ, ಅರ್ಥಗಾರಿಕೆ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಶಿಸ್ತನ್ನು ಪಾಲಿಸಬೇಕು, ದುಶ್ಚಟಗಳಿಂದ ದೂರವಿರಬೇಕು ಎಂಬ ಆದೇಶ ಮಾಸ್ತರರದು. ಇಂತಹ ಕಲಾ ಕೇಂದ್ರದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಯಕ್ಷ ಲೋಕದಲ್ಲಿ ಹೊಸತೊಂದು ಸಾಧನೆಗೆ ಮುನ್ನುಡಿ ಬರೆದರು ಎಂಬುದು ಈಗ ಇತಿಹಾಸ.
ಮಾಸ್ತರರು ಕಲಾಮಂದಿರದ ಸಮಗ್ರ ಅಭಿವೃದ್ಧಿಯನ್ನು ಲಕ್ಷಿಸಿ ಕೈಗೊಂಡ ನಿರ್ಣಯಗಳು ಮಹತ್ವವಾದುದು ಎಂದರೆ ಉತ್ಪ್ರೇಕ್ಷೆಯಲ್ಲ. ಆಗ ಅವರು ಹಾಕಿಕೊಟ್ಟ ಭದ್ರ ತಳಹದಿ ಇಂದಿಗೂ ಕೂಡ ಬನಾರಿಯೆಂದಾಕ್ಷಣ ಅದ್ಬುತವಾದ ಒಂದು ಧನ್ಯತಾ ಭಾವ ನಮ್ಮಲ್ಲಿ ಮೂಡುತ್ತದೆ. ದೀರ್ಘಕಾಲ ಕಲಾಮಂದಿರವನ್ನು ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸಿದ ಮಾಸ್ತರರು ವಯೋ ಸಹಜವಾದ ಪ್ರತಿಕೂಲ ಪರಿಸ್ಥಿತಿಯಿಂದ ಕಾರ್ಯವೆಸಗಲು ಅಶಕ್ತರಾದಾಗ ಅವರ ಹಿರಿಯ ಮಗ ವನಮಾಲ ಕೇಶವ ಭಟ್ಟರು ಹೊಣೆಗಾರಿಕೆಯನ್ನು ತಮ್ಮ ಹೆಗಲಿಗೆ ತೆಗೆದುಕೊಳ್ಳುತ್ತಾರೆ. ಶ್ರೀಯುತರು ನೆಲ್ಲಿ ಕುಂಜೆ ಜತ್ತಪ್ಪ ರೈಗಳಿಂದ ಭಾಗವತಿಕೆಯನ್ನು ಅಭ್ಯಾಸ ಮಾಡಿದವರು. ಹಾಗಾಗಿ ಕಲಾಸಹಜವಾದ ಒಂದು ತುಡಿತ ಶ್ರೀಯುತರಲ್ಲಿ ಇದ್ದದ್ದು ವಿಶೇಷವಲ್ಲ.
ತಂದೆಯವರ ಸಕಾಲಿಕ ಮಾರ್ಗದರ್ಶನ ,ತನ್ನದೇ ಆದ ಒಳನೋಟ ಇವುಗಳಿಂದಾಗಿ ಕಲಾಮಂದಿರದಲ್ಲಿ ಮತ್ತದೇ ಹುರುಪು ,ಉತ್ಸಾಹಗಳಿಂದ ಕಲಾ ಚಟುವಟಿಕೆಗಳು ಗರಿಗೆದರಲು ತೊಡಗಿದವು. ಕೇಶವ ಭಟ್ಟರು ನಿಗರ್ವಿ, ಸರಳ ಸಜ್ಜನಿಕೆಯ ಎಲ್ಲರನ್ನು ವಿಶ್ವಾಸದಿಂದ ಕಾಣುವ ಅಂದರೆ “ವಸುದೈವ ಕುಟುಂಬಕಂ” ಎಂಬ ಮಾತಿಗೆ ನಿದರ್ಶನವಾಗಿ ಉಳ್ಳವರು. ಕಲಾಮಂದಿರದಲ್ಲಿ ಪ್ರತಿ ತಿಂಗಳು ತಾಳಮದ್ದಳೆ, ವರ್ಷಕೊಂದಾವರ್ತಿ ವಾರ್ಷಿಕೋತ್ಸವ ಇವು ಬಹಳ ಕಾಲದಿಂದ ನಡೆದುಕೊಂಡು ಬರುತ್ತಿರುವ ಒಂದು ಪರಿಪಾಠ.
ತಿಂಗಳ ತಾಳಮದ್ದಳೆ ಕೂಟದಲ್ಲಿ ಅಭ್ಯಾಸಿ ಕಲಾವಿದರು, ಜೊತೆಗೆ ನುರಿತ ಕಲಾವಿದರು ನಡೆಸಿಕೊಡುವ ಕಾರ್ಯಕ್ರಮ ಒಂದು ಮಾದರಿ ಎನ್ನಬಹುದು. ವಾರ್ಷಿಕೋತ್ಸವದ ಸಂದರ್ಭದಲ್ಲಿ ಖ್ಯಾತನಾಮ ಕಲಾವಿದರನ್ನು ಗೌರವಿಸುವ ಒಂದು ಪರಿಪಾಠ ಬಹಳ ಹಿಂದಿನಿಂದಲೇ ಇದೆ. ಕೀರಿಕ್ಕಾಡು ಮಾಸ್ತರರ ಕಾಲಾನಂತರ ಕೀರಿಕ್ಕಾಡು ಪ್ರಶಸ್ತಿಯನ್ನು ಅಗ್ರಮಾನ್ಯ ಕಲಾವಿದರಿಗೆ ನೀಡುವ ಒಂದು ಸತ್ ಪರಂಪರೆ ಕಲಾಮಂದಿರದಲ್ಲಿ ಆರಂಭವಾಯಿತು. ಅದು ಕೀರಿಕ್ಕಾಡು ಪ್ರಶಸ್ತಿ ಎಂಬ ಹೆಸರಿನಲ್ಲಿ ಕೊಡಲ್ಪಡುತ್ತದೆ. ಪ್ರಸಿದ್ಧ ಕಲಾವಿದರಾದ ಕುಂಬಳೆ, ಶೇಣಿ, ವೆಂಕಟರಾಜ ಪುಂಚತ್ತಾಯ, ಕೋಳ್ಯೂರು, ಬಣ್ಣದ ಮಾಲಿಂಗ , ಡಾ!ಎಂ. ಪ್ರಭಾಕರ ಜೋಶಿ ,ವಿದ್ವಾನ್ ಉಮಾ ಕಾಂತ ಭಟ್ ಮೇಲುಕೋಟೆ ಮುಂತಾದ ಪ್ರಸಿದ್ಧ ಯಕ್ಷಗಾನ ಕಲಾವಿದರಿಗೆ ನೀಡಲಾಗಿದೆ.
ಸುಧೀರ್ಘ ಸಮಯದವರೆಗೆ ಬನಾರಿ ಕಲಾಮಂದಿರವನ್ನು ಉಚ್ಛ್ರಾಯ ಸ್ಥಿತಿಗೆ ತಂದು ಬನಾರಿ , ದೇಲಂಪಾಡಿ ಈ ಪರಿಸರದಲ್ಲಿ ಒಂದು ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿದ ಶ್ರೀಯುತ ವನಮಾಲ ಕೇಶವ ಭಟ್ಟರು ಸ್ವಲ್ಪ ಸಮಯದ ಹಿಂದೆ ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ. ಆದರೆ ಅವರು ಹಾಕಿಕೊಟ್ಟ ಆದರ್ಶ, ಮಾನವೀಯ ಮೌಲ್ಯಗಳು ಸದಾ ಜೀವಂತಿಕೆಯಲ್ಲಿ ನಮ್ಮ ಅನುಭವಕ್ಕೆ ಬರುತ್ತಿದೆ.
ಪ್ರಸ್ತುತ ಕಲಾಸಂಘವನ್ನು ಎತ್ತರಿಸಿ ಬಿತ್ತರಿಸುವ ಹೊಣೆಯನ್ನು ಸ್ವೀಕರಿಸಿದವರು ಕೀರಿಕ್ಕಾಡು ಮಾಸ್ತರರ ಸುಪುತ್ರ , ಖ್ಯಾತ ವೈದ್ಯರು, ಪ್ರಸಿದ್ಧ ಅರ್ಥಧಾರಿಗಳು ಆದ ಡಾ! ರಮಾನಂದ ಬನಾರಿಯವರು. ಶ್ರೀಯುತರು ಸಾಹಿತ್ಯಕ, ಸಾಂಸ್ಕೃತಿಕ ಹೀಗೆ ವಿಭಿನ್ನ ಸ್ತರಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ತೋರಿಸಿದವರು. ಬನಾರಿ ಕಲಾಮಂದಿರ ಈಗ ಸುವ್ಯವಸ್ಥಿತವಾಗಿದೆ. ಯಕ್ಷಗಾನ ಕಾರ್ಯಕ್ರಮಕ್ಕೆ ಹೊಂದಿಕೆಯಾಗುವ ರಂಗಸ್ಥಳ, ಕಲಾಪ್ರೇಕ್ಷಕರಿಗೆ ಆಸೀನರಾಗಲು ವ್ಯವಸ್ಥೆ, ಯಕ್ಷಗಾನ ಪ್ರಸಂಗ ಸಾಹಿತ್ಯ ,ಪ್ರಸಿದ್ಧ ಲೇಖಕರಿಂದ ಬರೆಯಲ್ಪಟ್ಟ ವಿಶಿಷ್ಟ ಕೃತಿಗಳು, ಅಧ್ಯಯನ ಯೋಗ್ಯ ವಾತಾವರಣ. ಈ ವಿಭಾಗದ ವಿದ್ವಾಂಸರ ಮುಕ್ತ ಮನದ ಮಾರ್ಗದರ್ಶನ ಹೀಗೆ ಕಲಾಮಂದಿರದ ವ್ಯಾಪ್ತಿ ವಿಸ್ತರಿಸಲ್ಪಟ್ಟಿದೆ.
ಡಾ. ಬನಾರಿಯವರು ಸ್ವತಹ ಪ್ರಸಿದ್ಧ ಅರ್ಥದಾರಿಯಾದ್ದರಿಂದ ಅರ್ಥಗಾರಿಕೆಯ ಸೂಕ್ಷ್ಮತೆಗಳಿಗೆ ಅವರ ಮಾರ್ಗದರ್ಶನ ಇದೆ ಎಂದು ನಂಬಿದ್ದೇನೆ. ಇದು ಕೀರಿಕ್ಕಾಡು ಮಾಸ್ತರರ ಪರಂಪರೆ. ಇದನ್ನು ಯಥಾ ರೀತಿ ಮುನ್ನಡೆಸುತ್ತಿದ್ದಾರೆ ಎಂಬುದು ನಮಗೂ ಧನ್ಯತೆ.
ಕೀರಿಕ್ಕಾಡು ಮಾಸ್ತರರ ಮತ್ತೋರ್ವ ಸುಪುತ್ರ ಶ್ರೀ ವಿಶ್ವ ವಿನೋದ ಬನಾರಿಯವರ ಉಲ್ಲೇಖ ಮಾಡದೆ ಇರಲು ಸಾಧ್ಯವಿಲ್ಲ. ಓರ್ವ ಖ್ಯಾತನಾಮ ಭಾಗವತರು. ಮೇಲಾಗಿ ಯಕ್ಷ ಗುರುಗಳು. ಭಾಗವತಿಕೆಯಲ್ಲಿ ಹಲವಾರು ಅಭ್ಯಾಸಿಗಳಿಗೆ ಮನ ಮುಟ್ಟುವಂತೆ ಭಾಗವತಿಕೆಯನ್ನು ಕಲಿಸಿದ ಓರ್ವ ನಿಷ್ಣಾತ ಗುರುಗಳು.
ಈಗ ಕಲೆ ವ್ಯಾವಹಾರಿಕವಾಗಿ ಮಾನವೀಯ ಮೌಲ್ಯಗಳಿಗೆ ಪ್ರಾಧಾನ್ಯತೆ ಸಿಗದ ಒಂದು ಸಂಧಿಕಾಲ.ಹಾಗಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಕಲಿಸುವಿಕೆ ಎನ್ನುವುದು ದೊಡ್ಡ ಭ್ರಮೆ. ಇಂತಹ ಕಾಲಘಟ್ಟದಲ್ಲಿ ಶ್ರೀಯುತ ಬನಾರಿಯವರು ಪ್ರತಿಫಲದ ನಿರೀಕ್ಷೆಯಿಲ್ಲದೆ ವಿದ್ಯಾರ್ಥಿಗಳ ಹಸಿವು, ಬಾಯಾರಿಕೆಯನ್ನು ತಣಿಸಿ ಉಚಿತವಾಗಿ ಕಲಿಸಿದ, ಕಲಿಸುತ್ತಿರುವ ಒಂದು ನಿದರ್ಶನ . ಪ್ರಾಯಶಃ ಯಕ್ಷರಂಗದಲ್ಲಿ ನನಗೆ ತಿಳಿದಂತೆ ಇಲ್ಲ. ಭಾಗವತಿಕೆ ಮಾತ್ರವಲ್ಲ ಅಭ್ಯಾಸಿಗಳಿಗೆ ಅರ್ಥವನ್ನು ತಿಳಿಹೇಳುವುದು ಇವರ ವಿಶೇಷತೆ. ಭಾಗವತಿಕೆಯಲ್ಲಿ ಶ್ರೀಯುತರ ಶಿಷ್ಯ ನಾನೆನ್ನಲು ನನಗೆಷ್ಟೋ ಅಭಿಮಾನ. ಲೆಕ್ಕಕ್ಕೆ ಸಿಗದ ಅವರ ಶಿಷ್ಯಂದಿರು ಬೇರೆಬೇರೆ ಕಲಾ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಶ್ವವಿನೋದ ಬನಾರಿಯವರು ಪ್ರಸ್ತುತ ಕಲಾಮಂದಿರದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಮ್ಮ ಬನಾರಿ ಕಲಾಸಂಘಕ್ಕೆ ಈಗ 80ರ ಸಂಭ್ರಮ. ಒಂದು ಮಾಗಿದ, ಪಕ್ವಗೊಂಡ ಕಲೆಯ ಅಸೀಮ ಸಾಧ್ಯತೆಗಳನ್ನು ವಿಸ್ತರಿಸಿದ, ಸಾರ್ಥಕತೆಯ ಭಾವದಲ್ಲಿ ವಿಹರಿಸುವ, ಒಂದು ಮಧುರ ಅನುಭೂತಿಯ ಸಂಕಲ್ಪ ಹೊಂದಿದ ಕಲಾಮಂದಿರ. 80 ವರ್ಷ ಓರ್ವ ವ್ಯಕ್ತಿಯ ಜೀವಿತದ ಪರಮೋಚ್ಚ ಸ್ಥಿತಿ ಎನ್ನಬಹುದು. ಸಿಂಹಾವಲೋಕನ ಕ್ರಮದಿಂದ ವ್ಯಕ್ತಿ ತನ್ನ ಜೀವಿತದಲ್ಲಿ ಅರ್ಜಿಸಿರಬಹುದಾದ ಸಾಧನೆಯನ್ನೋ ತನಗೆ ದಕ್ಕಿದ ಪ್ರಾಪ್ತಿಯನ್ನೋ ಮನನ ಮಾಡುವ ಒಂದು ವಿಶಿಷ್ಟ ಸನ್ನಿವೇಶ. ಹಾಗೆಯೇ ನಮ್ಮ ಕಲಾಮಂದಿರದ 80ರ ಹರೆಯದ ಈ ಸಂದರ್ಭದಲ್ಲಿ ಕಲಾಮಂದಿರ ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ, ಕಲಾವಿದರಿಗೆ ಮಾರ್ಗದರ್ಶಿ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟ ಒಂದು ಅನನ್ಯತೆ, ಒಂದು ಸಮಗ್ರ ಯಕ್ಷರಂಗ ಭೂಮಿಯ ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ ಕಲಾಮಂದಿರದ ಪಾತ್ರ ಬಹಳ ಮುಖ್ಯವಾಗುತ್ತದೆ.
80ರ ಸಂಭ್ರಮದ ವಾರ್ಷಿಕೋತ್ಸವವನ್ನು ಕಲೋತ್ಸವವಾಗಿ ಒಂದು ಇಡೀ ದಿನದ ಕಾರ್ಯಕ್ರಮವಾಗಿ ದಿನಾಂಕ 31-08-2024ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಹಿರಿಯ ವಿದ್ವಾಂಸ, ತಾಳಮದ್ದಳೆ ಅರ್ಥಧಾರಿ ಕೆರೆಕೈ ಉಮಾಕಾಂತ ಭಟ್ಟರಿಗೆ ಕೀರಿಕ್ಕಾಡು ಪಶಸ್ತಿಯನ್ನು ಪ್ರದಾನಮಾಡಲಾಯಿತು. ಅಧ್ಯಕ್ಷತೆಯನ್ನು ಡಾ. ಶ್ರೀಪತಿ ಕಲ್ಲೂರಾಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸನ್ಮಾನ್ಯ ಶಾಸಕರು ಕುಮಾರಿ ಭಾಗೀರಥಿ ಮುರುಳ್ಯ ಆಗಮಿಸಿದ್ದರು. ಶ್ರೀ ಗಣರಾಜ ಕುಂಬ್ಳೆ ಅಭಿನಂದನೆ ಮಾಡಿ, ಶ್ರೀ ಉಜಂಪಾಡಿ ನಾರಾಯಣ ನಾಯಕ್ ಶುಭ ಹಾರೈಸಿದರು. ಹಾಗೂ ಆ ದಿನ ಯಕ್ಷಗಾನ ತಾಳಮದ್ದಳೆಗಳು, ಬಯಲಾಟ ಪ್ರಸಂಗಗಳು, ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಇದೀಗ 80ರ ಸಂಭ್ರಮದ ಶುಭವಸರದಲ್ಲಿ ನವಂಬರ್ ತಿಂಗಳ ದಿನಾಂಕ 30 ರಂದು ಶನಿವಾರ ಬನಾರಿ ಕಲಾಮಂದಿರದಲ್ಲಿ ವಿಶೇಷ ಕಾರ್ಯಕ್ರಮವು ನಡೆಯಲಿದ್ದು ಈ ಸಂದರ್ಭದಲ್ಲಿ ಕೀರಿಕ್ಕಾಡು ಪುರಸ್ಕಾರ ಪ್ರದಾನ ಮತ್ತು ಅರೋಗ್ಯ ವರ್ಧನೆಗೆ ಸುಲಭ ಸೂತ್ರಗಳು- ಸರಳ ವ್ಯಾಯಾಮ, ಧ್ಯಾನ, ಪ್ರಾಣಾಯಾಮ ಇತ್ಯಾದಿ ಉಚಿತ ತರಬೇತಿ ಪ್ರಾತಿಕ್ಷಿಕೆ ನಡೆಯಲಿರುವುದು.
ಈ ಕೀರಿಕ್ಕಾಡು ಪುರಸ್ಕಾರವನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಂತರಾಷ್ಟ್ರೀಯ ಯೋಗ ತೀರ್ಪುಗಾರರು, ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರಿಗೆ ನೀಡಲಾಗುವುದು. ಸಭಾಧ್ಯಕ್ಷತೆಯನ್ನು ಶ್ರೀ ಜಯಪ್ರಕಾಶ್ ತೊಟ್ಟೆತೋಡಿ, ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕ ಇವರು ವಹಿಸಲಿದ್ದಾರೆ. ಡಾ!ರಮಾನಂದ ಬನಾರಿಯವರ ಉಪಸ್ಥಿತಿ, ಗಣ್ಯರ ಸಮಕ್ಷಮದಲ್ಲಿ ಈ ಕಾರ್ಯಕ್ರಮದ ಜೊತೆಗೆ ತಾಳಮದ್ದಳೆ ಸಹಿತ ಮೂಡಿ ಬರಲಿದೆ.
ಬನಾರಿ ಕಲಾಮಂದಿರವು ಕಲಾ ಕ್ಷೇತ್ರಕ್ಕೆ ಅನುಪಮವಾದ ಅಸದೃಶವಾದ ಕೊಡುಗೆಯನ್ನು ನೀಡಿದೆ. ಕಲೆಯನ್ನು ಕಲೆಯಲ್ಲಿ ವ್ಯಸ್ತರಾಗುವ, ಕಲೆಯ ಆರಾಧನೆಯಲ್ಲಿ ತೊಡಗಿಕೊಂಡವರಿಗೆ ಇನ್ನಷ್ಟು ಸಮೃದ್ಧವಾದ ಆಶ್ರಯ ಒದಗಿ ಬರಲಿ, ಈ ಸಂಸ್ಥೆ ಶತಮಾನೋತ್ತರ ಕಾಲದಲ್ಲಿ ಬೆಳಗಲಿ ಎಂದು ನಮ್ಮೆಲ್ಲರ ಆಶಯ.
ಲೇಖಕರು—ನಾರಾಯಣ ತೋರಣಗಂಡಿ, ಸಪ್ತಸ್ವರ ಪೈಲೂರು ಸುಳ್ಯ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions