Saturday, January 18, 2025
Homeಸುದ್ದಿತೆಂಕಿನ ಪ್ರತಿಭಾವಂತ ಕಲಾವಿದ ಶ್ರೀ ರವಿಕುಮಾರ್ ಮುಂಡಾಜೆ

ತೆಂಕಿನ ಪ್ರತಿಭಾವಂತ ಕಲಾವಿದ ಶ್ರೀ ರವಿಕುಮಾರ್ ಮುಂಡಾಜೆ

ಶ್ರೀ ರವಿಕುಮಾರ್ ಮುಂಡಾಜೆ ಅವರು ತೆಂಕುತಿಟ್ಟು ಯಕ್ಷಗಾನದ ಪ್ರತಿಭಾವಂತ ಪುಂಡುವೇಷಧಾರಿಗಳು. ನಾಟ್ಯ ಮತ್ತು ಮಾತುಗಾರಿಕೆ ಎಂಬ ಎರಡೂ ವಿಭಾಗಗಳಲ್ಲಿ ಪಳಗಿದ ಕಲಾವಿದರಿವರು. ತೆಂಕುತಿಟ್ಟಿನ ಭರವಸೆಯ, ಭವಿಷ್ಯದ ಕಲಾವಿದರಾಗಿ ಇವರು ಈಗಾಗಲೇ ಕಾಣಿಸಿಕೊಂಡಿದ್ದಾರೆ. ಸತತ ಅಧ್ಯಯನದಿಂದ ಬಹುಬೇಗನೇ ಯಕ್ಷಗಾನ ಕಲಾವಿದರಾಗಿ ಕಾಣಿಸಿಕೊಂಡು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಳ, ಹರಿಶ್ಚಂದ್ರ, ರುಕ್ಮಾಂಗದ ಮೊದಲಾದ ಭಾವನಾತ್ಮಕ ಪಾತ್ರಗಳಲ್ಲೂ ಪ್ರೇಕ್ಷಕರು ಮೆಚ್ಚುವಂತೆ ಅಭಿನಯಿಸಿ ತಾವು ಪ್ರತಿಭಾವಂತರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶ್ರೀಯುತರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು.

ಶ್ರೀ ರವಿಕುಮಾರ್ ಅವರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಮುಂಡಾಜೆ. ‘ಶ್ರೀ ದುರ್ಗಾನಿಲಯ’ ಇವರ ನಿವಾಸದ ಹೆಸರು. ಇವರು1986ನೇ ಇಸವಿ ಮಾರ್ಚ್ 22ರಂದು ಶ್ರೀ ರಾಘವ ಪೂಜಾರಿ ಮತ್ತು ಶ್ರೀಮತಿ ಕಮಲ ದಂಪತಿಗಳಿಗೆ ಮಗನಾಗಿ ಈ ಲೋಕದ ಬೆಳಕನ್ನು ಕಂಡರು. ಶ್ರೀ ರಾಘವ ಪೂಜಾರಿ, ಕಮಲ ದಂಪತಿಗಳ ಮೂವರು ಮಕ್ಕಳಲ್ಲಿ ಇವರು ಹಿರಿಯರು. ರವಿಕುಮಾರ್ ಮುಂಡಾಜೆ ಅವರಿಗೆ ಇಬ್ಬರು ಸಹೋದರಿಯರು.

ಶ್ರೀ ರವಿಕುಮಾರ್ ಅವರು ಪದವೀಧರರು. 7ನೇ ತರಗತಿಯ ವರೆಗೆ ಮುಂಡಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಬಳಿಕ ಪಿಯುಸಿ ವರೆಗೆ ಮುಂಡಾಜೆ ಪದವಿಪೂರ್ವ ಕಾಲೇಜಿನಲ್ಲೂ ವಿದ್ಯಾರ್ಜನೆಯನ್ನು ಮಾಡಿದ್ದರು. ಖಾಸಗಿಯಾಗಿ ಅಭ್ಯಸಿಸಿ ಪದವಿಯನ್ನೂ ಪಡೆದ ಕಲಾವಿದರಿವರು. ಇವರ ತೀರ್ಥರೂಪರು ಶ್ರೀ ರಾಘವ ಪೂಜಾರಿಯವರು ದೈವಭಕ್ತರು. ಶ್ರೀ ದೇವಿಯ ಆರಾಧಕರಾಗಿ ಪ್ರಸಿದ್ಧರು.

ಶ್ರೀ ರವಿಕುಮಾರ್ ಅವರು ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ತಾನು ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯು ಬಾಲ್ಯದಲ್ಲಿಯೇ ಚಿಗುರೊಡೆದಿತ್ತು. 5ನೇ ತರಗತಿಯಲ್ಲಿ ಓದುತ್ತಿರುವಾಗಲೇ ಯಕ್ಷಗಾನ ಕಲಾವಿದನಾಗಿ ರಂಗವೇರುವ ಅವಕಾಶವು ಸಿಕ್ಕಿತ್ತು. ಮುಂಡಾಜೆ ಶಾಲಾ ಪ್ರದರ್ಶನದಲ್ಲಿ ಶ್ರೀ ರಾಮ ಭಂಡಾರಿ ಅವರಿಂದ ತರಬೇತಿಯನ್ನು ಪಡೆದು ಗಿರಿಜಾ ಕಲ್ಯಾಣ ಪ್ರಸಂಗದಲ್ಲಿ ಷಣ್ಮುಖನಾಗಿ ಅಭಿನಯಿಸಿದ್ದರು.

ಪಿಯುಸಿ ಶಿಕ್ಷಣವನ್ನು ಪೂರೈಸಿ ಬಳಿಕ ಉದ್ಯೋಗವನ್ನರಸಿ ಮುಂಬೈಗೆ ತೆರಳಿದರೂ ಯಕ್ಷಗಾನ ಕಲೆಯಿಂದ ದೂರವಾದವರಲ್ಲ. ಮನೆಯ ಹೊಣೆಗಾರಿಕೆ ಬಂದ ಕಾರಣ ಮತ್ತೆ ಊರಿಗೆ ಬರಬೇಕಾಗಿ ಬಂದಿತ್ತು. 2003ರಲ್ಲಿ ಯಕ್ಷಗಾನ ನಾಟ್ಯ ಪರಿಪೂರ್ಣವಾಗಿ ಕಲಿತು ಕಲಾವಿದನಾಗುವ ನಿರ್ಧಾರ. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ಸೇರ್ಪಡೆ. ದಿವಾಣ‌ ಶ್ರೀ ಶಿವಶಂಕರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯ ಅಭ್ಯಾಸ. ಅಲ್ಲಿ ತೆಂಕಬೈಲು ಶ್ರೀ ತಿರುಮಲೇಶ್ವರ ಶಾಸ್ತ್ರಿಗಳು ಹಿಮ್ಮೇಳ ಗುರುಗಳಾಗಿದ್ದರು.

ತರಬೇತಿ ಕೇಂದ್ರದ ನಾಲ್ಕು ಪ್ರದರ್ಶನಗಳಲ್ಲಿ ಬಭ್ರುವಾಹನ ಕಾಳಗ ಪ್ರಸಂಗದಲ್ಲಿ ಅರ್ಜುನನ ಪಾತ್ರವನ್ನೂ ದಕ್ಷಯಜ್ಞ ಪ್ರಸಂಗದಲ್ಲಿ ಈಶ್ವರನ ಪಾತ್ರವನ್ನೂ ಗಿರಿಜಾ ಕಲ್ಯಾಣದ ಮನ್ಮಥನಾಗಿಯೂ, ಪಂಚವಟಿ ಪ್ರಸಂಗದ ಶ್ರೀರಾಮನಾಗಿಯೂ ಅಭಿನಯಿಸುವ ಅವಕಾಶವು ದೊರಕಿತ್ತು.

ಶ್ರೀ ರವಿಕುಮಾರ್ ಮುಂಡಾಜೆ ಅವರು ತಿರುಗಾಟ ಆರಂಭಿಸಿದ್ದು ಕಟೀಲು ಮೇಳದಲ್ಲಿ. 2003ರಲ್ಲಿ ಮೇಳಕ್ಕೆ ಸೇರ್ಪಡೆ. ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯ ಮೂರನೇ ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ. ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ, ಪ್ರಸಂಗದಲ್ಲಿ ಸಿಕ್ಕಿದ ಪಾತ್ರಗಳನ್ನು ನಿರ್ವಹಿಸುತ್ತಾ ಅನುಭವವನ್ನು ಪಡೆದುಕೊಂಡರು. ತಿರುಗಾಟದ ಎರಡನೇ ವರ್ಷದಲ್ಲಿ ಪ್ರಹ್ಲಾದ, ಷಣ್ಮುಖ ಬಾಲಸರಸ್ವತಿ ಮೊದಲಾದ ಪಾತ್ರಗಳನ್ನು ನಿರ್ವಹಿಸಲು ಅವಕಾಶವು ಸಿಕ್ಕಿತ್ತು.

ಕಟೀಲು ಮೇಳದ ನಾಲ್ಕು ವರ್ಷಗಳ ತಿರುಗಾಟದ ಬಳಿಕ ಎಡನೀರು ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಬಳಿಕ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಪೌರೋಹಿತ್ಯ ಕಲಿಕೆ. ಮುಂಬೈಯ ಸಾಂತಾಕ್ರೂಜ್ ನಲ್ಲಿರುವ ಶ್ರೀ ಮಹಾಕಾಳಿ ದೇವಳದಲ್ಲಿ ಮೂರು ವರ್ಷ ಅರ್ಚಕನಾಗಿ ಸೇವೆ. ಊರಿಗೆ ಮರಳಿದ ರವಿಕುಮಾರ್ ಅವರು ಮತ್ತೆ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುವ ನಿರ್ಧಾರ ಮಾಡಿದರು.

ಎರಡನೇ ಪುಂಡುವೇಷಧಾರಿಯಾಗಿ ಕಟೀಲು ಎರಡನೇ ಮೇಳಕ್ಕೆ ಸೇರ್ಪಡೆ. ಶ್ರೀ ಬಲಿಪ ಪ್ರಸಾದ, ಪೆರುವಾಯಿ ನಾರಾಯಣ ಭಟ್, ದಿನೇಶ್ ಕಾವಳಕಟ್ಟೆ ಮೊದಲಾದವರ ಒಡನಾಟ, ಸಹಕಾರವು ಈ ಸಂದರ್ಭದಲ್ಲಿ ಸಿಕ್ಕಿತ್ತು. ಕಲಾವಿದನಾಗಿ ಬೆಳೆಯುವುದಕ್ಕೆ ಇದರಿಂದ ಅವಕಾಶವಾಯಿತು. ಬಲಿಪ ಪ್ರಸಾದ ಮತ್ತು ದಿನೇಶ್ ಶೆಟ್ಟಿಯವರ ಸಹಕಾರದಿಂದ 1ನೇ ಪುಂಡುವೇಷಗಳನ್ನೂ ನಿರ್ವಹಿಸುವ ಅವಕಾಶವು ಸಿಕ್ಕಿತ್ತು.

ಬಳಿಕ ಕಟೀಲಿನ 5ನೇ ಮೇಳದಲ್ಲಿ 1ನೇ ಪುಂಡುವೇಷಧಾರಿಯಾಗಿ ನಾಲ್ಕು ವರ್ಷಗಳ ವ್ಯವಸಾಯ. ಈ ಸಂದರ್ಭದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ರವಿರಾಜ ಪನೆಯಾಲ ಅವರ ಒಡನಾಟ ಮತ್ತು ಸಹಕಾರವು ಸಿಕ್ಕಿ ಕಲಾ ಕ್ಷೇತ್ರದಲ್ಲಿ ಅನುಭವವನ್ನು ಗಳಿಸಿದರು. ಕಳೆದ ಎರಡು ವರ್ಷಗಳಿಂದ ರವಿಕುಮಾರ್ ಮುಂಡಾಜೆಯವರು ಕಟೀಲು ನಾಲ್ಕನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಬಳ್ಳಮಂಜ ಶ್ರೀನಿವಾಸ ಭಾಗವತ, ರವಿಶಂಕರ್ ವಳಕ್ಕುಂಜ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಮೊದಲಾದವರ ಒಡನಾಟದಲ್ಲಿ ಪ್ರಸ್ತುತ ತಿರುಗಾಟ ನಡೆಸುತ್ತಿದ್ದಾರೆ. ಮೂರನೇ ಮೇಳದಲ್ಲಿರುವಾಗ ಪುಂಡರೀಕಾಕ್ಷ ಉಪಾಧ್ಯಾಯ, ಗೇರುಕಟ್ಟೆ ಗಂಗಯ್ಯ ಶೆಟ್ಟಿ ಮೊದಲಾದವರೊಂದಿಗೆ ಕಲಾ ಸೇವೆಯನ್ನು ಮಾಡುವ ಅವಕಾಶವೂ ಸಿಕ್ಕಿತ್ತು. ಕಟೀಲು ಎರಡನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿರುವಾಗ ಹೊಸ ಮನೆಯ ಪ್ರವೇಶೋತ್ಸವದಂದು ಕಟೀಲು ಮೇಳದ ಬಯಲಾಟವನ್ನು ಸೇವಾ ರೂಪದಲ್ಲಿ ನಡೆಸುವ ಅವಕಾಶವೂ ಸಿಕ್ಕಿತ್ತು.

2021ರಲ್ಲಿ ಗೃಹಸ್ಥಾಶ್ರಮಿಯಾದ ರವಿಕುಮಾರ್ ಮುಂಡಾಜೆ ಅವರ ಪತ್ನಿ ಶ್ರೀಮತಿ ನಮಿತಾ. ವೇಷಗಾರಿಕೆ, ಮಾತುಗಾರಿಕೆ ಬಗೆಗೆ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಟೆಪಡ್ಪು ವಿಷ್ಣು ಶರ್ಮ, ರವಿರಾಜ ಪನೆಯಾಲರಿಂದ ಮಾಹಿತಿ ಪಡೆದುದನ್ನು ಇವರು ಸದಾ ನೆನಪಿಸುತ್ತಾರೆ. ಶ್ರೀ ಗಣೇಶ್ ಕೊಲಕಾಡಿ ಅವರಿಂದ ಯಕ್ಷಗಾನ ಸಂಗೀತವನ್ನು ಅಭ್ಯಸಿಸಿದ ಇವರು ಹಲವಾರು ಕಡೆಗಳಲ್ಲಿ ಯಕ್ಷಗಾನ ನಾಟ್ಯ ತರಬೇತಿಯನ್ನು ನೀಡಿರುತ್ತಾರೆ.

ಎಡನೀರು, ಚೀರುಂಭ ಭಗವತಿ ಮೇಳಗಳಲ್ಲದೆ ಬಿಡುವಿನ ಸಮಯದಲ್ಲಿ ಬೇರೆ ಬೇರೆ ಮೇಳಗಳಲ್ಲಿ ವ್ಯವಸಾಯ ನಡೆಸಿರುತ್ತಾರೆ. ಈ ಸಂದರ್ಭಗಳಲ್ಲಿ ಪುರಾಣ ಮತ್ತು ತುಳು ಪ್ರಸಂಗಗಳಲ್ಲೂ ಪಾತ್ರಗಳನ್ನು ನಿರ್ವಹಿಸಿ ಜನರ ಮೆಚ್ಚುಗೆಯನ್ನು ಗಳಿಸಿದ ಕಲಾವಿದರಿವರು. ವಿಷ್ಣು, ಶ್ರೀಕೃಷ್ಣ, ಶ್ರೀರಾಮ, ಬಭ್ರುವಾಹನ, ಚಂಡಮುಂಡರು, ಹನುಮಂತ, ಅಭಿಮನ್ಯು, ಲಕ್ಷ್ಮಣ, ಮಾನಿಷಾದ ಪ್ರಸಂಗದ ರೂಕ್ಷ ಮೊದಲಾದ ಪಾತ್ರಗಳಲ್ಲಿ ರಂಜಿಸಿದ ಇವರು ಕಸೆ ಸ್ತ್ರೀ ವೇಷಗಳನ್ನೂ ಚೆನ್ನಾಗಿ ಮಾಡಬಲ್ಲರು.

ಮುಂಡಾಜೆ ಶಾಲೆ, ಬೋಳ ಕಾಂತಾವರ, ಬೊಂಡಾಲ ಶಾಲೆ, ಬಜಪೆ ವಿಜಯ ವಿಠಲ ಭಜನಾ ಮಂದಿರ, ಎಕ್ಕಾರು ಶಾಲೆ, ಮುಚ್ಚೂರು, ಎಕ್ಕಾರು ಶ್ರೀ ಭ್ರಾಮರೀ ಯಕ್ಷ ಕಲಾ ಸಂಘ ಮೊದಲಾದ ಕಡೆಗಳಲ್ಲಿ ಇವರು ನಾಟ್ಯ ತರಗತಿಗಳನ್ನು ನಡೆಸಿರುತ್ತಾರೆ.

ಕಿರೀಟ ವೇಷವನ್ನೂ ನಿರ್ವಹಿಸುವ ಇವರು ತೆಂಕುತಿಟ್ಟಿನ ಭರವಸೆಯ, ಭವಿಷ್ಯದ ಕಲಾವಿದರು. ಇವರಿಗೆ ಉತ್ತಮ ಭವಿಷ್ಯವು ಸಿದ್ಧಿಸಲಿ. ದೇವರು ಸಕಲ ಸೌಭಾಗ್ಯಗಳನ್ನೂ ಅನುಗ್ರಹಿಸಲಿ. ಮನದಾಸೆಗಳನ್ನು ಕಲಾ ಮಾತೆಯು ಅನುಗ್ರಹಿಸಲಿ ಎಂಬ ಹಾರೈಕಗಳೊಂದಿಗೆ,

ರವಿಶಂಕರ್ ವಳಕ್ಕುಂಜ (ಮೊಬೈಲ್: 91644 87083)

ಫೋಟೋಗಳು: ರವಿಕುಮಾರ್ ಮುಂಡಾಜೆ ಅವರ ಫೇಸ್‌ಬುಕ್‌ ಖಾತೆಯಿಂದ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments