Saturday, January 18, 2025
Homeಪುಸ್ತಕ ಮಳಿಗೆತೆಂಕಣ ಶೈಲಿಯ ಹವ್ಯಕ ಯಕ್ಷಗಾನ ಕಲಾವಿದರು

ತೆಂಕಣ ಶೈಲಿಯ ಹವ್ಯಕ ಯಕ್ಷಗಾನ ಕಲಾವಿದರು

ಶೀರ್ಷಿಕೆಯು ಸೂಚಿಸುವಂತೆ ತೆಂಕುತಿಟ್ಟು ಯಕ್ಷಗಾನದ ಕೀರ್ತಿಶೇಷ ಹವ್ಯಕ ಕಲಾವಿದರುಗಳ ಸಮಗ್ರ ಪರಿಚಯವು ಈ ಕೃತಿಯಲ್ಲಿದೆ. ಇದೊಂದು ಅಪೂರ್ವ ಸಂಗ್ರಹವು. ಇಷ್ಟು ಮಂದಿ ಕಲಾವಿದರ ವಿವರಗಳನ್ನು ಸಂಗ್ರಹಿಸುವುದು ಸುಲಭದ ಕಾರ್ಯವಲ್ಲ. ಇದೊಂದು ಮಹತ್ಸಾಧನೆಯೇ ಹೌದು. ನೋಡುವ ಕಣ್ಣುಗಳಿದ್ದರೆ ಸಾಧನೆಯು ಖಂಡಿತಾ ಕಾಣಿಸುತ್ತದೆ. ಮುಂದೆ ಮಾಹಿತಿ ಸಂಗ್ರಹ ಮಾಡುವವರಿಗೆ ಇದೊಂದು ಉಪಯೋಗೀ ಕೃತಿಯಾಗಿ ಪರಿಣಮಿಸುತ್ತದೆ. 

ಈ ಕೃತಿಯ ಲೇಖಕರು ಡಾ| ಶ್ರೀ ಉಪ್ಪಂಗಳ ಶಂಕರನಾರಾಯಣ ಭಟ್ಟರು. ಶ್ರೀಯುತರು ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರು. ಅಲ್ಲದೆ ಕೇರಳ ರಾಜ್ಯ ಕಾಲೇಜು ಮಟ್ಟದ ವಿದ್ಯಾಸಂಸ್ಥೆಗಳ ಉಪನಿರ್ದೇಶಕರಾಗಿಯೂ ನಿವೃತ್ತರು. ಸಾಹಿತ್ಯ ಕ್ಷೇತ್ರದಲ್ಲಿ ಇವರು ಅಪೂರ್ವ ಸಾಧಕರು. ಇವರು ರಚಿಸಿದ ಗ್ರಂಥಗಳು ಅನೇಕ.

ಕನ್ನಡ ಸಾಹಿತ್ಯ ಮತ್ತು ವ್ಯಾಕರಣದಲ್ಲಿ ಶ್ರೀಯುತರು ಘನ ವಿದ್ವಾಂಸರಾಗಿ ಓದುಗರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಪರಿಚಿತರು. ಅನೇಕರು ಈ ವಿಚಾರದಲ್ಲಿ ಉಪ್ಪಂಗಳ ಶಂಕರನಾರಾಯಣ ಭಟ್ಟರ ಸಲಹೆಯನ್ನು ಪಡೆಯುತ್ತಾರೆ. ಇವರ ನಿರ್ದೇಶನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದವರೂ ಇದ್ದಾರೆ. ಈ ಅಪೂರ್ವ ಪುಸ್ತಕವನ್ನು ಬರೆದು ಸಮಾಜಕ್ಕೆ ಕೊಡುಗೆಯಾಗಿ ನೀಡಿರುತ್ತಾರೆ. 

‘ತೆಂಕಣ ಶೈಲಿಯ ಹವ್ಯಕ ಯಕ್ಷಗಾನ ಕಲಾವಿದರು’ ಎಂಬ ಈ ಕೃತಿಯ ಪ್ರಕಾಶಕರು ಶ್ರೀರಾಮ ಪ್ರಕಾಶನ ಮಂಡ್ಯ. ಇದು 2019ರಲ್ಲಿ ಓದುಗರ ಕೈಸೇರಿತ್ತು. ನಾನ್ನೂರ ಎಂಟು ಪುಟಗಳ ಈ ಕೃತಿಯ ಬೆಲೆ ರೂಪಾಯಿ ನಾನ್ನೂರ ಐವತ್ತು ಮಾತ್ರ. ಈ ಕೃತಿಯಲ್ಲಿ ಮೊದಲಿಗೆ ಮಧೂರು ಶ್ರೀ ಮಹಾಗಣಪತಿ, ಕಣಿಪುರ ಶ್ರೀ ಗೋಪಾಲಕೃಷ್ಣ, ಕುಂಬಳೆ ಮೇಳದ ಮರದ ಗಣಪತಿ, ಕೂಡ್ಲು ಮೇಳದ ಶ್ರೀ ಗೋಪಾಲಕೃಷ್ಣ ದೇವರ ಚಿತ್ರಪಟಗಳಿವೆ. ಪ್ರೊ. ಎಂ.ಎ ಹೆಗಡೆ ಅವರು ಬರೆದ ‘ಉಪ್ಪಂಗಳರ ಮನೆಯಂಗಳದಲ್ಲಿ’ ಎಂಬ ಲೇಖನವಿದೆ. ಶ್ರೀ ಎಂ. ಸಿ ಅಚ್ಯುತಾನಂದ ಅವರ ‘ಪ್ರಕಾಶಕರ ಮಾತು’ ಎಂಬ ಬರಹವಿದೆ.

ಲೇಖಕರು ‘ವಕ್ತವ್ಯ’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಅಧ್ಯಾಯ ಒಂದರಲ್ಲಿ ದಶಾವತಾರ ಮೇಳಗಳ ವಿವರಗಳಿವೆ. ಅಧ್ಯಾಯ ಎರಡರಲ್ಲಿ ಹವ್ಯಕ ಹಿಮ್ಮೇಳ ಕಲಾವಿದರ ಪರಿಚಯವಿದೆ. ಅಧ್ಯಾಯ ಮೂರರಲ್ಲಿ ಮುಮ್ಮೇಳ ಕಲಾವಿದರ ವಿವರಗಳಿವೆ. ಇದರಲ್ಲಿ ಬಣ್ಣ, ಸ್ತ್ರೀ, ಪುಂಡು, ಪೀಠಿಕೆ, ಇದಿರು ವೇಷ, ಹಾಸ್ಯಗಾರರು ಎಂದು ಬೇರೆಬೇರೆಯಾಗಿ ಕಲಾವಿದರ ವಿವರಗಳಿವೆ.

ಅಧ್ಯಾಯ ನಾಲ್ಕರಲ್ಲಿ ತಾಳಮದ್ದಳೆ ಅರ್ಥಧಾರಿಗಳ ಮತ್ತು ಅಧ್ಯಾಯ ಐದರಲ್ಲಿ ಪ್ರಸಂಗಕರ್ತರ, ಲಿಪಿಕಾರರ ವಿವರಗಳಿವೆ. ಅಧ್ಯಾಯ ಆರರಲ್ಲಿ ಯಕ್ಷಗಾನ ಸಂಘ ಸಂಸ್ಥೆಗಳ ಪರಿಚಯವನ್ನು ನೀಡಿರುತ್ತಾರೆ. ಈ ಕೃತಿ ಬೇಕಾದವರು ಪ್ರಕಾಶಕರನ್ನು ಸಂಪರ್ಕಿಸಬಹುದು. 

ವಿಳಾಸ: ಶ್ರೀರಾಮ ಪ್ರಕಾಶನ, # 893/D, 3rd Cross, Eastern extension, Near Cheluvayya Park, Neharunagara, Mandya – 574401 Mobile: 9448930173

ಲೇಖಕರ (ಉಪ್ಪಂಗಳ ಶಂಕರನಾರಾಯಣ ಭಟ್ಟ) ಮೊಬೈಲ್ ಸಂಖ್ಯೆ : 9447469561

ಬರಹ : ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments