Friday, November 22, 2024
Homeಸುದ್ದಿಖ್ಯಾತ ಯಕ್ಷಗಾನ ವೇಷಧಾರಿ ಕುಂಬಳೆ ಶ್ರೀಧರ ರಾವ್ ಇನ್ನಿಲ್ಲ - ಕುಂಬಳೆ ಶ್ರೀಧರ ರಾಯರ ಕಲಾಜೀವನದ...

ಖ್ಯಾತ ಯಕ್ಷಗಾನ ವೇಷಧಾರಿ ಕುಂಬಳೆ ಶ್ರೀಧರ ರಾವ್ ಇನ್ನಿಲ್ಲ – ಕುಂಬಳೆ ಶ್ರೀಧರ ರಾಯರ ಕಲಾಜೀವನದ ಮೇಲೊಂದು ಇಣುಕು ನೋಟ

ಖ್ಯಾತ ಯಕ್ಷಗಾನ ವೇಷಧಾರಿ ಕುಂಬಳೆ ಶ್ರೀಧರ ರಾವ್ ನಿಧನರಾಗಿದ್ದಾರೆ. ಅವರು ಇಂದು ಹೃದಯಾಘಾತದಿಂದ ನಿಧನರಾದರು. ಅವರು ತನ್ನ ಕಲಾಜೀವನದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಕಲಾವಿದ ಮಾತ್ರವಲ್ಲದೆ ಅಪರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಪುತ್ತೂರು ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಶಾಂತಿನಗರದ ಬೇರಿಕೆ ಎಂಬಲ್ಲಿ ವಾಸವಾಗಿದ್ದ ಶ್ರೀಧರ ರಾಯರು ಇಂದು ಬೆಳಿಗ್ಗೆ ತೀವ್ರ ಎದೆನೋವಿನಿಂದ ಬಳಲುತ್ತಿದ್ದರು. ತಕ್ಷಣ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು. ಅವರು ಪತ್ನಿ, ಮೂವರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕುಂಬಳೆ ಶ್ರೀಧರ ರಾಯರ ಕಲಾಜೀವನದ ಮೇಲೊಂದು ಇಣುಕು ನೋಟ

ಶ್ರೀ ಧರ್ಮಸ್ಥಳ ಮೇಳದ ರಂಗಸ್ಥಳ. ಕಡತೋಕ ಮಂಜುನಾಥ ಭಾಗವತರ ಹಾಡುಗಾರಿಕೆ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆವಾದನ. ಕುಂಬಳೆ ಸುಂದರ ರಾವ್, ವಿಟ್ಲ ಜೋಷಿ, ಪುತ್ತೂರು ನಾರಾಯಣ ಹೆಗ್ಡೆ, ಪಾತಾಳ ವೆಂಕಟರಮಣ ಭಟ್, ಎಂಪೆಕಟ್ಟೆ ರಾಮಯ್ಯ ರೈ, ಕೆ. ಗೋವಿಂದ ಭಟ್, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾಯ್ಕ, ನಯನ ಕುಮಾರ್, ಕಡಬ ಸಾಂತಪ್ಪ, ಬೆಳಾಲು ಧರ್ಣಪ್ಪ ನಾಯ್ಕ, ಬೆಳಾಲು ಶೀನ ಆಚಾರಿ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟದಲ್ಲಿ ಕುಂಬಳೆ ಶ್ರೀಧರ ರಾಯರು ಸ್ತ್ರೀ ಪಾತ್ರಗಳನ್ನು ಮಾಡುತ್ತಾ ಬೆಳೆದು ಬಂದರು.

ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮಿ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ, ಮಹಾಕಲಿ ಮಗದೇಂದ್ರ ಪ್ರಸಂಗದ ವಜ್ರಲೇಖೆ ಮೊದಲಾದ ಕಸೆ ಸ್ತ್ರೀವೇಷಗಳನ್ನೂ ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಕುಂಬಳೆ ಶ್ರೀಧರ ರಾಯರು ಅದೇ ರಂಗಸ್ಥಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ, ಅಡೂರು ಗಣೇಶ ರಾಯರೇ ಮೊದಲಾದವರ ಹಿಮ್ಮೇಳದಲ್ಲಿ ಪುರುಷ ಪಾತ್ರಗಳಲ್ಲಿಯೂ ಮಿಂಚಿದ್ದಾರೆ.

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪು ಕುಂಬಳೆ ಶ್ರೀಧರ ರಾಯರ ಹುಟ್ಟೂರು. 1948ನೇ ಇಸವಿ ಜುಲೈ 23ರಂದು ಮಾಲಿಂಗ ಮುಕಾರಿ ಮತ್ತು ಕಾವೇರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಸೂರಂಬೈಲು ಸರಕಾರೀ ಶಾಲೆಯಲ್ಲಿ 4ನೇ ತರಗತಿಯ ವರೇಗೆ ವಿದ್ಯಾಭ್ಯಾಸ. ಎಳವೆಯಲ್ಲಿ ಬಡತನದ ಬೇಗೆ. ಹೊಟ್ಟೆಗೆ ಬಟ್ಟೆಗೆ ಇಲ್ಲದೆ ಕಷ್ಟವನ್ನನುಭವಿಸಿದ ದಿನಗಳು. ಶಾಲೆ ಅನಿವಾರ್ಯವಾಗಿ ಬಿಡಬೇಕಾಯಿತು.

ಪ್ರಸಿದ್ಧ ಕಲಾವಿದರಾದ ಶ್ರೀ ಕುಂಬಳೆ ಸುಂದರ ರಾಯರ ತೀರ್ಥರೂಪರು ಶ್ರೀ ಕುಂಞಕಣ್ಣ ಚೆಟ್ಟಿಯಾರರಿಂದ ಬಟ್ಟೆ ನೇಯುವ ಕೆಲಸವನ್ನು ಶ್ರೀಧರ ರಾಯರು ಕಲಿತರು. ಜತೆಗೆ ಕುಂಬಳೆ ಚಂದ್ರಶೇಖರರಿಂದ (ಕುಂಬಳೆ ಚಂದು) ಮತ್ತು ಕುಂಬಳೆ ಹಾಸ್ಯಗಾರ ಕಮಲಾಕ್ಷ ನಾಯಕ್ (ವಿಟ್ಲ ಜೋಯಿಸರ ಸಮಕಾಲೀನರು) ರಿಂದ ಯಕ್ಷಗಾನ ನಾಟ್ಯವನ್ನು ಅಭ್ಯಸಿಸಿದರು. ಅದೇ ಸಮಯದಲ್ಲಿ (1962) ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳ ಕುಂಬಳೆಗೆ ಬಂದಿದ್ದಾಗ ಕುಂಬಳೆ ಶ್ರೀಧರ ರಾಯರು ಬಾಲಕಲಾವಿದನಾಗಿ ಸೇರ್ಪಡೆಗೊಂಡರು.

ಯಕ್ಷಗಾನದ ಭೀಷ್ಮ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರ ಶಿಷ್ಯನಾಗಿ ಬೆಳೆದರು. ಮುಂದಿನ ವರ್ಷಗಳಲ್ಲಿ ನೂಜಿಪ್ಪಾಡಿ ಶಂಕರನಾರಾಯಣಪ್ಪಯ್ಯ ಯಜಮಾನಿಕೆಯ ಕುತ್ಯಾಳ ಗೋಪಾಲಕೃಷ್ಣ ಮೇಳದಲ್ಲಿ ಶೇಣಿಯವರ ಒಡನಾಟದಲ್ಲಿ ಕಲಾವಿದನಾಗಿ ಕಾಣಿಸಿಕೊಂಡರು.

ಎರಡು ವರ್ಷ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯವನ್ನು ಮಾಡಿ ನಂತರ ಪೆರುವೊಡಿ ನಾರಾಯಣ ಭಟ್ಟರ ಸಂಚಾಲಕತ್ವದ ಮುಲ್ಕಿ ಮೇಳ ಮತ್ತೆ ಕೂಡ್ಲು ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದರು. 1970ರಲ್ಲಿ ಮತ್ತೆ ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳಕ್ಕೆ.

ಮುಂದಿನ ಮೂರು ವರ್ಷಗಳ ಕಾಲ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ತಿರುಗಾಟ ನಡೆಸಿ ನಂತರ 42 ವರುಷಗಳಿಗೂ ಹೆಚ್ಚು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರರ ಆಶೀರ್ವಾದದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡಿದರು. ಹೀಗೆ ಕಲಾವಿದನಾಗಿ ಕುಂಬಳೆ ಶ್ರೀಧರ ರಾಯರದ್ದು 55 ವರುಷಗಳಿಗೂ ಮಿಕ್ಕಿದ ತಿರುಗಾಟ.


ಶೇಣಿ ಗೋಪಾಲಕೃಷ್ಣರಿಂದಲೇ ನಾನು ಮಾತುಗಾರಿಕೆ ಕಲಿತೆ. ಅವರು ಆಶೀರ್ವದಿಸಿದರು. ಅವರಿಂದಾಗಿಯೇ ನನಗೆ ಎಡನೀರು ಶ್ರೀಮಠ ಹತ್ತಿರವಾಯಿತು. ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ನನ್ನನ್ನು ಆಶೀರ್ವದಿಸಿದರು. ನಾನು ಶ್ರೀಮಠದ, ಶ್ರೀಗಳವರ ಭಕ್ತನೂ ಹೌದು ಶಿಷ್ಯನೂ ಹೌದು ಎಂದು ಹೇಳುತ್ತಿದ್ದ ಕುಂಬಳೆ ಶ್ರೀಧರ ರಾಯರು ಕಲಾವಿದನಾಗಿ ಶ್ರೀಮಠದ ಯಕ್ಷಗಾನ ಕಾರ್ಯ ಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದರು.

ಕಡತೋಕಾ, ಅಗರಿ, ಮಂಡೆಚ್ಚರು, ಹೊಳ್ಳರು, ಮಯ್ಯರ ಭಾಗವತಿಕೆಗೆ ವೇಷಗಳನ್ನು ಮಾಡಿ, ಶೇಣಿಯವರೊಂದಿಗೆ ಮಂಡೋದರಿ, ತಾರೆ ಮೊದಲಾದ ಪಾತ್ರಗಳನ್ನು ಮಾಡಿ, ಕುಂಬಳೆ ಸುಂದರ ರಾಯರ ಜತೆ ಲಕ್ಷ್ಮಿ, ಸತ್ಯಭಾಮೆ, ಕೆ. ಗೋವಿಂದ ಭಟ್ಟರ ಜತೆ ಹಲವು ವೇಷಗಳು, ನಯನ ಕುಮಾರರ ಬಾಹುಕ, ಬ್ರಾಹ್ಮಣ ಪಾತ್ರಗಳಿಗೆ ದಮಯಂತಿ, ದಾಕ್ಷಾಯಿಣಿ, ಅರುವ ಕೊರಗಪ್ಪ ಶೆಟ್ಟರ ಪುಷ್ಪಧ್ವಜ ಪಾತ್ರಕ್ಕೆ ಕನಕಮಾಲಿನಿಯಾಗಿ (ಪ್ರಸಂಗವೀರ ಪುಷ್ಪಧ್ವಜ) ಪುತ್ತೂರು ನಾರಾಯಣ ಹೆಗ್ಡೆಯವರ ಅಣ್ಣಪ್ಪ ಪಾತ್ರಕ್ಕೆ ಅಮ್ಮು ಬಲ್ಲಾಳ್ತಿಯಾಗಿ ಅಭಿನಯಿಸಿದ್ದ ಕುಂಬಳೆ ಶ್ರೀಧರ ರಾಯರು ತಮ್ಮ ಕಲಾಜೀವನವನ್ನು ಅವಿಸ್ಮರಣೀಯಗೊಳಿಸಿದ್ದರು.

ಕುಂಬಳೆ ಶ್ರೀಧರ ರಾಯರಿಗೆ ಯಕ್ಷದೀಪದ ಪರವಾಗಿ ಹಾಗೂ ಸಮಸ್ತ ಯಕ್ಷಾಭಿಮಾನಿಗಳ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments