Saturday, January 18, 2025
Homeಸುದ್ದಿಚೌಕಿಯಲ್ಲಿ ವೇಷ ಕಳಚುವಾಗಲೇ ಜೀವನ ನಾಟಕದ ವೇಷವನ್ನೂ ಕಳಚಿದ ಗಂಗಾಧರ ಪುತ್ತೂರು - ಇಲ್ಲಿದೆ ಅವರ...

ಚೌಕಿಯಲ್ಲಿ ವೇಷ ಕಳಚುವಾಗಲೇ ಜೀವನ ನಾಟಕದ ವೇಷವನ್ನೂ ಕಳಚಿದ ಗಂಗಾಧರ ಪುತ್ತೂರು – ಇಲ್ಲಿದೆ ಅವರ ಕುರಿತಾದ ಸಂಪೂರ್ಣ ಮಾಹಿತಿ

ಧರ್ಮಸ್ಥಳ ಮೇಳದ ಕಲಾವಿದ ಪುತ್ತೂರು ಗಂಗಾಧರ (60) ಅವ ದಿನಾಂಕ 01.05.2024)ರಂದು ಆಟ ಮುಗಿಸಿ ಚೌಕಿಯಲ್ಲಿ ಕುಕ್ಕಿತ್ತಾಯ ವೇಷ ಕಳಚುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು.

ತಮ್ಮ 18ನೇ ವರ್ಷದಲ್ಲಿ ಯಕ್ಷಗಾನ ತಿರುಗಾಟ ಆರಂಭಿಸಿದ ಅವರು ಸುದೀರ್ಘ 42 ವರ್ಷ ಧರ್ಮಸ್ಥಳ ಮೇಳದಲ್ಲೇ ಸೇವೆ ಸಲ್ಲಿಸಿದ್ದರು. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ಮಾಡುತ್ತಿದ್ದರು. ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಲ್ಲಿ ಯಕ್ಷಗಾನ ಅಭ್ಯಾಸ ಮಾಡಿದ ಗಂಗಾಧರರು ಹಾಸ್ಯದಿಂದ ಹಿಡಿದು ರಾಜನ ವರೆಗೆ ಎಲ್ಲಾ ತರದ ವೇಷವನ್ನು ಮಾಡಬಲ್ಲ ಸಮರ್ಥ ಕಲಾವಿದರಾಗಿದ್ದರು.

ಧರ್ಮಸ್ಥಳ ಮೇಳದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದ್ದರು. ಅವರು ಪತ್ನಿ, ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. .

ಆಪದ್ಬಾಂಧವ ಸವ್ಯಸಾಚಿ ಕಲಾವಿದ ಪುತ್ತೂರು ಗಂಗಾಧರ ಜೋಗಿ

ಶ್ರೀ ಗಂಗಾಧರ ಜೋಗಿಯವರು ಶ್ರೀ ಧರ್ಮಸ್ಥಳ ಮೇಳದ ದಣಿವರಿಯದ ಕಲಾವಿದ. ಭಾಗವತರು ತನಗೆ ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ಮಾಡುತ್ತಾ ಬಂದ ಕಲಾಮಾತೆಯ ಸುಪುತ್ರ. ಎಷ್ಟು ವೇಷಗಳನ್ನೂ ಮಾಡಬಲ್ಲವರಾಗಿದ್ದರು. ಯಾವ ವೇಷವನ್ನೂ ಮಾಡಬಲ್ಲರು. ಸ್ತ್ರೀವೇಷ, ಪುಂಡುವೇಷ, ಕಿರೀಟ ವೇಷ, ಹಾಸ್ಯ, ಅನಿವಾರ್ಯವಾದರೆ ಕೇಶಾವರೀ ಬಣ್ಣದ ವೇಷಕ್ಕೂ ಸೈ.

ಹೆಣ್ಣು ಬಣ್ಣಗಳನ್ನೂ ಅಂದವಾಗಿ ನಿರ್ವಹಿಸುತ್ತಿದ್ದರು. ಇಂತಹ ಕಲಾವಿದರು ಸಿದ್ಧರಾಗುವುದು ಬಹಳ ಅಪರೂಪ. ಮೇಳಕ್ಕೆ ಇವರಂತಹ ಕಲಾವಿದರು ಅನಿವಾರ್ಯ, ಹಿರಿಯ ಕಲಾವಿದನಾದರೂ ಅನಿವಾರ್ಯ ಸಂದರ್ಭದಲ್ಲಿ ಪ್ರಸಂಗದ ಸಣ್ಣಪುಟ್ಟ ಪಾತ್ರ ಗಳನ್ನು ನಿರ್ವಹಿಸಿ ವ್ಯಕ್ತಿತ್ವದಲ್ಲಿ ದೊಡ್ಡವರಾಗಿ ಮೆರೆದವರು ಗಂಗಾಧರರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ 40ಕ್ಕೂ ಹೆಚ್ಚಿನ ವರ್ಷಗಳಿಂದ ನಿರಂತರ ಕಲಾವಿದನಾಗಿ ವ್ಯವಸಾಯ ಮಾಡಿದ ಹಿರಿಮೆಗೆ ಪಾತ್ರರಾದವರು ಶ್ರೀ ಗಂಗಾಧರರು.

1964ನೇ ಇಸ್ವಿ ಆಗಸ್ಟ್ 12ರಂದು ಪುತ್ತೂರು ತಾಲೂಕು ಕೋಡಿಂಬಾಡಿ ಸಮೀಪ ಸೇಡಿಯಾಪು ಎಂಬಲ್ಲಿ ನಾರಾಯಣಯ್ಯ ಮತ್ತು ಲಕ್ಷ್ಮಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದ ಗಂಗಾಧರ ಜೋಗಿಯವರು ಕೋಡಿಂಬಾಡಿ ಶಾಲೆಯಲ್ಲಿ 7ನೇ ತರಗತಿಯ ವರೇಗೆ ಓದಿದರು. ಎಳವೆಯಲ್ಲೇ ಇವರಿಗೆ ಯಕ್ಷಗಾನಾಸಕ್ತಿ ಅತೀವವಾಗಿತ್ತು. ಪುತ್ತೂರು ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದ ಅಪ್ಪಟ ಯಕ್ಷಗಾನಾಭಿಮಾನಿ.

ಯಕ್ಷಗಾನ ಕಲೆಯ ಬಗೆಗೆ ಇವರಿಗಿರುವ ಆಸಕ್ತಿಯನ್ನು ಗಮನಿಸಿದವರು ಖ್ಯಾತ ಕಲಾವಿದ ಕುಂಬಳೆ ಶ್ರೀಧರ ರಾಯರು. ಬಾಲಕ ಗಂಗಾಧರನನ್ನು ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಕರೆದೊಯ್ದರು. ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಗಂಗಾಧರ ಅವರು ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು.

ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರ್ಪಡೆಯಾಗಿ ಪೂರ್ವರಂಗದಲ್ಲಿ ಬಾಲಗೋಪಾಲನಾಗಿ, ಮುಖ್ಯ ಸ್ತ್ರೀವೇಷಧಾರಿಯೂ, ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾ ಹಂತ ಹಂತವಾಗಿ ಬೆಳೆದು ಬಂದವರು ಪುತ್ತೂರು ಗಂಗಾಧರ ಜೋಗಿಯವರು.

ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಮಾಲತಿ ಪಾತ್ರ (ಕುಂಬಳೆ ಸುಂದರ ರಾಯರು ಮತ್ತು ಕೆ. ಗೋವಿಂದ ಭಟ್ಟರು ನಿರ್ವಹಿಸಿದ ಗೋವಿಂದ ದೀಕ್ಷಿತನ ಪಾತ್ರದ ಜತೆ) ಅಲ್ಲದೆ ಅನೇಕ ಸ್ತ್ರೀಪಾತ್ರಗಳಲ್ಲಿ ಇವರು ಮಿಂಚಿದರು. ಕಸೆ ಸ್ತ್ರೀವೇಷ, ಗರತಿ ವೇಷಗಳು ಅಲ್ಲದೆ ಶೃಂಗಾರ ವೇಷಗಳಲ್ಲಿ ಮಿಂಚಿದ ಇವರಿಗೆ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸುವ ಕಲೆಯು ಕರಗತ ವಾಗಿತ್ತು. ಆಡು ಮುಟ್ಟದ ಸೊಪ್ಪಿಲ್ಲ ಗಂಗಾಧರ ಅವರು ಮಾಡದ ಪಾತ್ರಗಳಿಲ್ಲ ಎನ್ನುವಷ್ಟರ ಮಟ್ಟಕ್ಕೆ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದರು.

ಕಡತೋಕಾ ಮಂಜುನಾಥ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳರು, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್ಟರು, ಕುಂಬಳೆ ಶ್ರೀಧರ ರಾಯರು, ಪುತ್ತೂರು ಶ್ರೀಧರ ಭಂಡಾರಿ, ನಿಡ್ಲೆ ಗೋವಿಂದ ಭಟ್ಟರು, ಉಬರಡ್ಕ ಉಮೇಶ ಶೆಟ್ಟಿ, ತಾರಾನಾಥ ಬಲ್ಯಾಯ, ವಸಂತ ಗೌಡರಂತಹ ಕಲಾವಿದರು ಮಾರ್ಗದರ್ಶನ ನೀಡಿದರು. ಎಂದು ಹೇಳುತ್ತಿದ್ದ ಗಂಗಾಧರ ಜೋಗಿಯವರು ಕಿರಿಯ ಕಲಾವಿದರ ಮತ್ತು ಕಲಾಭಿಮಾನಿಗಳ ಪ್ರೋತ್ಸಾಹವನ್ನೂ ಮರೆಯದೆ ನೆನಪಿಸುತ್ತಿದ್ದವರು.

ದೆಹಲಿ ರಾಷ್ಟ್ರಪತಿ ಭವನ, ದುಬೈ, ಬೆಹರಿನ್, ಅಬುದಾಭಿ ಮೊದಲಾದೆಡೆ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕರ್ಗಲ್ಲು ಯಕ್ಷರೂಪಕ ತಂಡದಲ್ಲಿ ಒಂದು ವರ್ಷ, ಮುಳಿಯಾಲ ಭೀಮ ಭಟ್ಟರ ತಂಡದಲ್ಲಿ 10 ವರ್ಷ, 25 ವರ್ಷಗಳಿಂದ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಕಾರ್ಯಕ್ರಮಗಳಲ್ಲಿ ಗಂಗಾಧರ ಅವರು ಭಾಗವಹಿಸಿರುತ್ತಾರೆ.

ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಇವರನ್ನು ಡಾ| ವೀರೇಂದ್ರ ಹೆಗಡೆಯವರು ಸನ್ಮಾನಿಸಿದ್ದಾರೆ. ಅಲ್ಲದೆ ಅನೇಕ ಸಂಘ-ಸಂಸ್ಥೆಗಳಿಂದ ಗಂಗಾಧರ ಅವರು ಗೌರವಿಸಲ್ಪಟ್ಟಿದ್ದಾರೆ.

ಯಕ್ಷಗಾನ ಕಲಾವಿದ ಪುತ್ತೂರು ಗಂಗಾಧರ ಅವರ ಆತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂದು ಯಕ್ಷಾಭಿಮಾನಿಗಳೆಲ್ಲರ ಪ್ರಾರ್ಥನೆ.

ಮಾಹಿತಿ; ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments