Saturday, January 18, 2025
Homeಸುದ್ದಿಈ ನಿರೋಧ, ತಡೆಗಳು ಇವರಿಗೆ ಮಾತ್ರವೇ? ಸರ್ಪಸಂಸ್ಕಾರ ಪೂಜೆ ಮಾಡುವವರಿಗೆ  ಬೇಕಾಗಿದೆ ಜೀವನಕ್ಕೊಂದು ಆರ್ಥಿಕ ಭದ್ರತೆ 

ಈ ನಿರೋಧ, ತಡೆಗಳು ಇವರಿಗೆ ಮಾತ್ರವೇ? ಸರ್ಪಸಂಸ್ಕಾರ ಪೂಜೆ ಮಾಡುವವರಿಗೆ  ಬೇಕಾಗಿದೆ ಜೀವನಕ್ಕೊಂದು ಆರ್ಥಿಕ ಭದ್ರತೆ 

ಈ ಪ್ರಪಂಚದಲ್ಲಿ ಎಂತೆಂತಹ ವೃತ್ತಿಗಳನ್ನು ಕೈಗೊಂಡು ಬದುಕನ್ನು ನಡೆಸುವವರಿದ್ದಾರೆ ಎಂದು ಯೋಚಿಸಿದಾಗ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಕೆಲವೊಂದು ದೇಶಗಳಲ್ಲಿ ಚಿತ್ರವಿಚಿತ್ರವಾದ ವೃತ್ತಿ, ಉದ್ಯೋಗಗಳನ್ನು ಮಾಡಿಕೊಂಡು ಜೀವನ ಸಾಗಿಸುವವರಿದ್ದಾರೆ. ಅದರಲ್ಲಿಯೂ ಆಫ್ರಿಕಾದ  ದೇಶಗಳಲ್ಲಿ, ದಕ್ಷಿಣ ಅಮೆರಿಕಾ ಖಂಡದ ದೇಶಗಳಲ್ಲಿ, ಚೀನಾ, ಅರಬಿಕ್ ರಾಷ್ಟ್ರಗಳಲ್ಲಿ ಕೆಲವೊಂದು ರೀತಿಯ ವಿಚಿತ್ರವಾದ ವೃತ್ತಿಗಳಿವೆ. ಅದೇ ರೀತಿ ನಮ್ಮ ದೇಶದಲ್ಲಿಯೂ ಕೂಡ ಅಂತಹಾ, ನಾವು ಊಹಿಸದೇ ಇರುವಂತಹಾ ವೃತ್ತಿಗಳಿವೆ. 

ಇದರಲ್ಲೇನು ವಿಶೇಷ? ‘ಉದರನಿಮಿತ್ತಂ ಬಹುಕೃತ ವೇಷಂ’ ಎಂದು ಕೆಲವರು ವಾದಿಸಬಹುದು. ಅದು ಕೂಡಾ ಒಪ್ಪುವ ಮಾತೇ ಸರಿ. ಎಲ್ಲಾ ಉದ್ಯೋಗಗಳಲ್ಲಿಯೂ ಅದರದ್ದೇ ಆದ ನಿಯಮಗಳು, ಪ್ರತಿಬಂಧಕಗಳು ಇದ್ದೆ ಇರುತ್ತವೆ. ಆದರೆ ಕೆಲವೊಂದು ಉದ್ಯೋಗದಲ್ಲಿರುವ ನಿರೋಧ, ಅಡೆತಡೆ, ನಿಯಮಗಳು ನಿಮ್ಮನ್ನು ಸಾಮಾಜಿಕ ಜೀವನದಿಂದ ಪರೋಕ್ಷವಾಗಿ ವಿಮುಖರಾಗುವಂತೆ ಮಾಡುತ್ತವೆ.

ಅಂತಹ ಸಂದರ್ಭದಲ್ಲಿ ನೀವು ಸಾರ್ವಜನಿಕವಾಗಿ ದೇವಸ್ಥಾನಗಳಲ್ಲಿ ಪ್ರವೇಶ ಮಾಡಲು ಸಾಧ್ಯವಿಲ್ಲ, ನಿಮಗೆ ಶುಭ ಸಮಾರಂಭಗಳಲ್ಲಿ ಮುಕ್ತವಾಗಿ ಎಲ್ಲರೊಡನೆ ಬೆರೆಯಲು ಅಸಾಧ್ಯ.  

ಇನ್ನು ವಿಷಯಕ್ಕೆ ಬರೋಣ. ಭಾರತದಲ್ಲಿಯೇ ಖ್ಯಾತಿಯನ್ನು ಪಡೆದಿರುವಂತಹ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಾಗದೇವರ ಸಾನ್ನಿಧ್ಯವಿರುವ ದೇವಸ್ಥಾನ. ಇಲ್ಲಿ ನಾಗದೇವರಿಗೆ ಸಂಬಂಧಿತ ಎಲ್ಲಾ ಸೇವೆಗಳು ನಡೆಯುತ್ತವೆ. ಅಂತಹ ಸೇವೆಗಳನ್ನು ನಡೆಸುವ ಬೆರಳೆಣಿಕೆಯ ಕ್ಷೇತ್ರಗಳಲ್ಲಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವೂ ಒಂದು.

ಆಶ್ಲೇಷ ಬಲಿ, ಸರ್ಪಸಂಸ್ಕಾರ ಪೂಜೆ, ನಾಗಪ್ರತಿಷ್ಠೆ, ನಾಗತಂಬಿಲ ಮೊದಲಾದ ಸೇವೆಗಳಿಗೆ ಇಲ್ಲಿ ಪ್ರತಿದಿನವೂ ಅತಿಯಾದ ಜನಜಂಗುಳಿಯಿರುತ್ತದೆ. ಅದರಲ್ಲಿಯೂ ಸರ್ಪಸಂಸ್ಕಾರ ಪೂಜೆ ಮತ್ತು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇವೆಗಳಿಗೆ ವಿಪರೀತ ರಷ್. ಸರ್ಪಸಂಸ್ಕಾರ ಪೂಜೆಯಂತೂ ಕೇಳುವುದೇ ಬೇಡ. ಸರ್ಪಸಂಸ್ಕಾರ ಪೂಜೆಗಾಗಿ ನೀವು ಆನ್ಲೈನ್ ನಲ್ಲಿ ಮುಂಗಡ ಕಾಯ್ದಿರಿಸಬೇಕಾದರೆ ಸುಮಾರು ಒಂದೂವರೆ ತಿಂಗಳಿನಿಂದ ಎರಡು ತಿಂಗಳುಗಳ ವರೆಗೆ ಕಾಯಬೇಕು. ಈ ಸೇವಾಕಾಂಕ್ಷಿ ಭಕ್ತರು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮಹಿಮೆ. 

ಇನ್ನು ಸರ್ಪಸಂಸ್ಕಾರ ಪೂಜೆಯ ಬಗ್ಗೆ ಹೇಳುವುದಾದರೆ ಪ್ರತಿಯೊಬ್ಬ ಸೇವಾಕರ್ತರ ಪೂಜೆಗೂ ಇಲ್ಲಿ ಪ್ರತ್ಯೇಕವಾದ ಅರ್ಚಕರು (ಈ ಅರ್ಚಕರನ್ನು ಇಲ್ಲಿ ಸರ್ಪಸಂಸ್ಕಾರ ಕ್ರಿಯಾಕರ್ತರು ಎಂದು ಕರೆಯಲಾಗುತ್ತದೆ) ಇರುತ್ತಾರೆ. ಈ ಸರ್ಪಸಂಸ್ಕಾರ ಕ್ರಿಯಾಕರ್ತರು ಅಥವಾ ಅರ್ಚಕರನ್ನು ತಾತ್ಕಾಲಿಕ ದಿನಗೂಲಿ ಆಧಾರದ ಮೇಲೆ ದೇವಸ್ಥಾನದ ಆಡಳಿತ ಮಂಡಳಿಯೇ ನೇಮಕ ಮಾಡುತ್ತಿದೆ. ಸಾಧಾರಣವಾಗಿ ಸುಮಾರು ಇನ್ನೂರರ ಆಸುಪಾಸಿನ ಸಂಖ್ಯೆಯಲ್ಲಿ ಅಂತಹ ಅರ್ಚಕರಿದ್ದಾರೆ. ಒಂದು ಸರ್ಪಸಂಸ್ಕಾರ ಪೂಜೆಯು ಎರಡು ದಿನಗಳ ಕಾಲ ನಡೆಯುವುದರಿಂದ ಪೂಜಾಕರ್ತರಿಗೆ ಅಥವಾ ಕ್ರಿಯಾಕರ್ತರಿಗೆ ಎರಡು ದಿನಗಳಲ್ಲಿ ಸಂಭಾವನೆಯಾಗಿ ರೂ. 850/- ನೀಡಲಾಗುತ್ತದೆ. 

 ಇವರಿಗೆ ಸರ್ಪಸಂಸ್ಕಾರ ಕ್ರಿಯಾಕರ್ತರು ಎಂಬ ಹೆಸರು ಹೇಗೆ ಬಂತು ಎಂಬುದು ಗೊತ್ತಿಲ್ಲ. ಹಾಗೆ ನೋಡಿದರೆ ಪ್ರತಿಯೊಬ್ಬರೂ ಕ್ರಿಯಾಕರ್ತರೇ ಆಗಿರುತ್ತಾರೆ. ಎಲ್ಲರೂ ಒಂದಲ್ಲ ಒಂದು ಕ್ರಿಯೆಯಲ್ಲಿ ತೊಡಗಿರುವವರಾದ್ದರಿಂದ ಎಲ್ಲರೂ ಕ್ರಿಯಾಕರ್ತರು. ಆದರೆ ಇವರು ಸರ್ಪಸಂಸ್ಕಾರದ ಪೂಜೆಯನ್ನು ಮಾಡುವವರಾದ್ದರಿಂದ ‘ಸಹಾಯಕ ಅರ್ಚಕ’ರೆಂದು ಕರೆಯುವುದು ಉಚಿತ ಮತ್ತು ಅಗತ್ಯವೂ ಕೂಡ. ಆದರೆ ಅದಕ್ಕೆ ಬೇಕಾದ ಮೇಲ್ಮಟ್ಟದ ನೈತಿಕತೆ ಮತ್ತು ಸ್ವಭಾವವನ್ನು ಕ್ರಿಯಾಕರ್ತರು ಮೈಗೂಡಿಸಿಕೊಳ್ಳುವ ಅಗತ್ಯ ಖಂಡಿತವಾಗಿಯೂ ಇದೆ. 

ಸರ್ಪಸಂಸ್ಕಾರ ಪೂಜಾ ಸೇವೆ ಎರಡು ದಿನಗಳಲ್ಲಿ ನಡೆಯುತ್ತದೆ. ಪೂಜೆ ಪ್ರಾರಂಭವಾಗುವುದು ಮೊದಲನೆಯ ದಿನ ಸುಮಾರು ಒಂಭತ್ತು ಘಂಟೆಗೆ. ಆದಿನ ಸುಮಾರು ಹನ್ನೊಂದು ಘಂಟೆಯ ಹೊತ್ತಿಗೆ ಮುಗಿಯುತ್ತದೆ. ದಯವಿಟ್ಟು ಗಮನಿಸಿ. ಇಲ್ಲಿಗೆ ಪೂಜೆಯ ಅರ್ಧ ಭಾಗ ಮಾತ್ರ ಆಗಿರುತ್ತದೆ. ಉಳಿದರ್ಧ ಮರುದಿನ ಪ್ರಾತಃಕಾಲ ಐದೂವರೆ ಘಂಟೆಯಿಂದೆ ಏಳು ಘಂಟೆಯವರೆಗೆ ನಡೆಯುತ್ತದೆ.

ಒಂದನೇ ದಿನದ ಪೂಜೆ ಮಾಡಿದ ನಂತರ ಸೇವಾಕರ್ತರು ಒಂದು ದಿನದ ಸೂತಕ, ಮೈಲಿಗೆಯನ್ನು ಆಚರಿಸಬೇಕಾಗುತ್ತದೆ. ಎರಡನೇ ದಿನದ ಪೂಜೆ ಮುಗಿಯುವವರೆಗೆ ಅವರು ದೇವಸ್ಥಾನದ ಒಳಗಿನ ಪ್ರಾಂಗಣವನ್ನು ಪ್ರವೇಶ ಮಾಡುವಂತಿಲ್ಲ.

ಸೇವಾಕರ್ತರಿಗೆ ಕೇವಲ ಒಂದು ದಿನ ದೇವಸ್ಥಾನದ ಪ್ರವೇಶ ನಿಷಿದ್ಧ, ಆದರೆ ಸರ್ಪಸಂಸ್ಕಾರ ಅರ್ಚಕರಿಗೆ ಪ್ರತಿದಿನವೂ ದೇವಸ್ಥಾನದ ಪ್ರವೇಶ ನಿಷಿದ್ಧ! ಯಾಕೆಂದರೆ ಪ್ರತಿದಿನವೂ ಸರ್ಪಸಂಸ್ಕಾರ ಪೂಜೆ ಮಾಡುತ್ತಾರಲ್ಲ! ಅಷ್ಟು ಮಾತ್ರವಲ್ಲ, ಶುಭ ಸಮಾರಂಭ ಮತ್ತು ಮಂಗಳ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಿಲ್ಲ. ಇನ್ನು ತನ್ನ ಮನೆಯ ಪೂಜೆಯನ್ನು ಮಾಡುವ ವಿಧಾನದ ಬಗ್ಗೆ ಸರಿಯಾದ ಮಾಹಿತಿಯನ್ನು ಬಲ್ಲವರೇ ತಿಳಿಸಬೇಕು. 

 ಸ್ವಲ್ಪ ಯೋಚಿಸಿ ನೋಡಿ, ಎರಡನೇ ದಿನ ಪೂಜೆ ಮುಗಿದ ನಂತರ ಅಂದರೆ ಬೆಳಗ್ಗೆ ಸುಮಾರು ಏಳು ಘಂಟೆಯ ಹೊತ್ತಿಗೆ ಮೈಲಿಗೆ ನಿವಾರಣೆಯಾಗುತ್ತದೆ. ಆದರೆ ಒಂಭತ್ತು ಘಂಟೆಯ ಹೊತ್ತಿಗೆ ಮತ್ತೆ ಇನ್ನೊಂದು ಪೂಜೆಗೆ ಕ್ರಿಯಾಕರ್ತರು ತಯಾರಾಗಿ ಇರಬೇಕಾಗಿರುವುದರಿಂದ ಅವರಿಗೆ ಕೇವಲ ಒಂದು ಘಂಟೆಯ ಹೊತ್ತು ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಆದುದರಿಂದ ಸುಬ್ರಹ್ಮಣ್ಯ ದೇವಸ್ಥಾನವನ್ನು ಆ ಹೊತ್ತಿನಲ್ಲಿ ಸಂದರ್ಶಿಸಬಹುದೇ ಹೊರತು ಬೇರೆ ಯಾವುದೇ ದೇವಸ್ಥಾನವನ್ನು ಪ್ರವೇಶ ಮಾಡುವ ಅವಕಾಶವೇ ಇರುವುದಿಲ್ಲ.

ಮುಂಜಾನೆ ಎದ್ದು ದೇವರ ದರ್ಶನಕ್ಕಾಗಿಯೋ ಅಥವಾ ಸಾಯಂಕಾಲದ ಹೊತ್ತಿನ ದೇವಸ್ಥಾನದ ಭೇಟಿಗೆ ಅವಕಾಶ ಇರುವುದಿಲ್ಲ. ಅದೂ ಅಲ್ಲದೇ ಇವರು ಬೇರೆ ಯಾವುದೇ ಪುಣ್ಯಕ್ಷೇತ್ರ ಸಂದರ್ಶನವನ್ನು ಮಾಡುವ ಹಾಗಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಈ ಅರ್ಚಕರು ಅಥವಾ ಕ್ರಿಯಾಕರ್ತರು ಎಲ್ಲವನ್ನೂ ತ್ಯಾಗ ಮನೋಭಾವದಿಂದ ಸ್ವೀಕರಿಸಿ ಈ ಸೇವೆಗೆ ಬರುವ ಮನಮಾಡಿದ್ದಾರೆ. ಅವರಿಗೆ ಸ್ವತಂತ್ರ ಜೀವನ ಇರುವುದಿಲ್ಲ. ಅಂದರೆ ಎಲ್ಲರ ಹಾಗೆ ಎಲ್ಲೆಂದರಲ್ಲಿ ಹೋಗುವ ಹಾಗಿಲ್ಲ. ಎಲ್ಲದಕ್ಕೂ ಕೆಲವೊಂದು ಕಟ್ಟುಪಾಡುಗಳು, ಕೆಲವು ರೀತಿರಿವಾಜುಗಳು ಇರುವ ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡಬೇಕಾಗುತ್ತದೆ. 

ಆದರೂ ದಿನವೊಂದಕ್ಕೆ ಇವರಿಗೆ ನೀಡುವ ಸಂಭಾವನೆ (ರೂ. 850/-) ಕಡಿಮೆ ಎಂದೇ ಹೇಳಬೇಕಾಗುತ್ತದೆ. ದಕ್ಷಿಣೆಯ ಹಣದಿಂದಲಾದರೂ ಆದಾಯವನ್ನು ಸರಿದೂಗಿಸಬಹುದು ಎಂದು ಕ್ರಿಯಾಕರ್ತರು ಭಾವಿಸಿದ್ದರು. ಆದರೆ ಈಗೀಗ ದಕ್ಷಿಣೆ ಕೊಡುವ ಅಗತ್ಯ ಇಲ್ಲ ಎಂದು ಪರೋಕ್ಷವಾಗಿ ದೇವಸ್ಥಾನದ ಆಡಳಿತವು ಸೂಚನಾ ಫಲಕದ ಮೂಲಕ ಸೇವಾಕರ್ತರಿಗೆ ಸೂಚಿಸಿದೆ. ಸೇವಾಕರ್ತರಿಗೆ, ಭಕ್ತರಿಗೆ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಆಡಳಿತ ಮಂಡಳಿಯು ಈ ತೀರ್ಮಾನ ತೆಗೆದುಕೊಂಡಿರಬಹುದು. ಆದರೆ ಇದರಿಂದ ಪ್ರಾಮಾಣಿಕ ಕ್ರಿಯಾಕರ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ‌. 

ದಕ್ಷಿಣೆ ಎನ್ನುವುದು ಪೂಜೆಯ ಅಥವಾ ಯಾವುದೇ ವೈದಿಕ ಕಾರ್ಯಕ್ರಮದ ಒಂದು ಭಾಗ. ಒಂದು ವೈದಿಕ ಕ್ರಿಯೆಯು ಪರಿಪೂರ್ಣತೆಯನ್ನು ಹೊಂದಬೇಕಾದರೆ ಕೇವಲ ಸಾಂಕೇತಿಕವಾಗಿ ಆದರೂ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆಯುವುದು ಸಂಪ್ರದಾಯ. ಇಲ್ಲಿ ಯಾವುದೇ ಕಾನೂನಾತ್ಮಕ ಅಂಶಗಳು ತಲೆಹಾಕಬಾರದು. ಆದರೆ ದಕ್ಷಣೆಯನ್ನು ತೆಗೆದುಕೊಳ್ಳುವ ವ್ಯಕ್ತಿ ದುರಾಸೆಯ ದಾಸನಾಗಬಾರದು ಎನ್ನುವುದು ಕೂಡ ಅಷ್ಟೇ ಮುಖ್ಯ.

ಕ್ಷೇತ್ರದ ಒಂದು ವಸತಿಗೃಹದ ಸಿಬ್ಬಂದಿಗಳೂ ಕ್ರಿಯಾಕರ್ತರ ದಕ್ಷಿಣೆ ಬಗ್ಗೆ ವ್ಯಾಪಕ ಋಣಾತ್ಮಕ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದು ಕ್ರಿಯಾಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ರೂಮ್ ಬಾಯ್ ಗಳು ಕೂಡ ದಕ್ಷಿಣೆ ಕೊಡಬೇಡಿ ಎಂದು ಹೇಳುತ್ತಾ ತಾವು ಮಾತ್ರ ವಸೂಲು ಮಾಡುತ್ತಿದ್ದಾರೆ ಎಂಬುದು ಗಾಳಿಸುದ್ದಿಯೋ ಎಂದು ಗೊತ್ತಿಲ್ಲ. 

ಪೂಜಾಕರ್ತರಿಗೆ ಅಥವಾ ಕ್ರಿಯಾಕರ್ತರಿಗೆ ಎರಡು ದಿನಗಳಲ್ಲಿ ಸಂಭಾವನೆಯಾಗಿ ರೂ. 850/- ನೀಡಲಾಗುತ್ತದೆ. ಅಂದರೆ ದಿನವೊಂದಕ್ಕೆ ರೂ. 850/- ಎಂದು ಅಂದುಕೊಂಡರೂ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಪೂಜೆ ಇರುವುದಿಲ್ಲ(ದಶಮಿ, ಏಕಾದಶಿ). ಉಳಿದಂತೆ ಒಂದೆರಡು ದಿನಗಳ ಅಗತ್ಯ ರಜೆಗಳನ್ನು ಸೇರಿಸಿದರೆ ಕೆಲಸದ ದಿನಗಳು ಕಡಿಮೆ ಆಗುತ್ತವೆ. ಸಂಭಾವನೆ ಕೂಡ ಕಡಿಮೆ ಆಗುತ್ತದೆ. ದಿನಸಂಬಳದ ಲೆಕ್ಕಾಚಾರ ಹಾಕುವಾಗ ಇದನ್ಮು ದಿನವೊಂದಕ್ಕೆ ರೂಪಾಯಿ 1500/- ಮಾಡಿ, ದಕ್ಷಣೆಯ ವಿಚಾರದಲ್ಲಿ ಬಿಗಿ ನಿಯಂತ್ರಣ ಕ್ರಮವನ್ನು ಕೈಗೊಂಡರೆ ಅದೊಂದು ಉತ್ತಮ ನಿರ್ಧಾರ ಆಗಬಹುದು.

ಈ ಲೇಖನದಲ್ಲಿ ಮೊದಲೇ ಹೇಳಿದಂತೆ ತ್ಯಾಗಿಗಳಾದ ಕ್ರಿಯಾಕರ್ತರಿಗೆ ಇದರಿಂದ ನ್ಯಾಯ ಸಲ್ಲಿಸಿದ ಹಾಗೆ ಆಗುತ್ತದೆ. ತನ್ನ ಅವಕಾಶ, ನಿದ್ರೆ ಮೊದಲಾದುವನ್ನು ತ್ಯಾಗ ಮಾಡಿದ ಕ್ರಿಯಾಕರ್ತರಿಗೆ ಒಂದು ಉಡುಗೊರೆಯೂ ಆಗಬಹುದು. ನಿವೃತ್ತಿ ವೇತನ, ಪಿಂಚಣಿಯ ಸೌಲಭ್ಯಗಳನ್ನು ಕೊಟ್ಟರೆ ವೃದ್ಧಾಪ್ಯದ ದಿನಗಳಲ್ಲಿ ಅದೊಂದು ಆಸರೆಯಾಗಿ ಪರಿಣಮಿಸುತ್ತದೆ.

ಬರಹ: ಕ್ಷೇತ್ರದ ಆರಾಧಕ ಮತ್ತು ಹಿತಚಿಂತಕ,  ದಕ್ಷಿಣ ಕನ್ನಡ ಜಿಲ್ಲೆ

ಪೂರಕ ಮಾಹಿತಿ;- ನಮ್ಮ ಸುಬ್ರಹ್ಮಣ್ಯ ಪ್ರತಿನಿಧಿ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯದಿಂದ ಕೊಡಮಾಡುವ ಸರ್ಪಸಂಸ್ಕಾರ ಮಾಹಿತಿ ಪತ್ರದ ಆಧಾರದಿಂದ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments